ನೀವು ಸೇವಿಸುವ ಕಾಫಿ ತಲೆನೋವಿಗೆ ಕಾರಣವಾಗಬಹುದು, ಗೊತ್ತೇ?

Update: 2017-12-13 10:35 GMT

1,3,7-ಟ್ರೈಮಿಥೈಲ್‌ಪ್ಯುರಿನ್-2,6 ಡಯೋನ್ ಎಂದರೇನು ಎನ್ನುವುದು ಎಲ್ಲರಿಗೂ ಗೊತ್ತಿಲ್ಲ. ಹೆಚ್ಚು ತಲೆ ಕೆಡಿಸಿಕೊಳ್ಳಬೇಡಿ....ಅದು ಕೆಫೀನ್! ಕೆಫೀನ್ ಹೆಚ್ಚು ಸಾಮಾನ್ಯವಾಗಿ ಬಳಕೆಯಾಗುವ ಮಾದಕ ವಸ್ತು ಎಂದರೆ ಅಚ್ಚರಿ ಪಡಬೇಕಿಲ್ಲ. ಹೌದು, ಅದನ್ನು ಮಾದಕ ವಸ್ತು ಎಂದೇ ವರ್ಗೀಕರಿಸಲಾಗಿದೆ ಮತ್ತು ಕಾಫಿ, ಕೋಲಾ, ಚಹಾ ಮತ್ತು ಚಾಕ್ಲೇಟ್‌ನಂತಹ ಆಹಾರ ಮತ್ತು ಪಾನೀಯಗಳಲ್ಲಿ ಈ ಕೆಫೀನ್ ಇರುತ್ತದೆ. ವಿಶ್ವದ ಸುಮಾರು ಶೇ.90ರಷ್ಟು ಜನರು ಒಂದಲ್ಲ ಒಂದು ರೂಪದಲ್ಲಿ ಕೆಫೀನ್ ಸೇವಿಸುತ್ತಾರೆ. ಇವುಗಳಲ್ಲಿ ಚಹಾ ಮತ್ತು ಕಾಫಿಯ ರೂಪದಲ್ಲಿ ಕೆಫೀನ್ ನಮ್ಮ ಶರೀರವನ್ನು ಸೇರುವುದೇ ಹೆಚ್ಚು.

 ಕೆಫೀನ್‌ಗೂ ತಲೆನೋವಿಗೂ ಎಲ್ಲಿಯ ಸಂಬಂಧ ಎಂದು ಯೋಚಿಸುತ್ತಿದ್ದೀರಾ? ಕೆಫೀನ್ ತಲೆನೋವಿನ ಮೇಲೆ ಧನಾತ್ಮಕ ಮತ್ತು ನಕಾರಾತ್ಮಕ...ಹೀಗೆ ಎರಡೂ ಬಗೆಯ ಪರಿಣಾಮಗಳನ್ನು ಬೀರುತ್ತದೆ. ತಲೆನೋವಿನಂದ ಮುಕ್ತಿ ನೀಡುವ ತನ್ನ ಗುಣದಿಂದಾಗಿ ಕೆಫೀನ್ ತಲೆನೋವಿನ ಔಷಧಿಗಳಲ್ಲಿ ಸಾಮಾನ್ಯವಾಗಿ ಬಳಕೆಯಾಗುವ ರಾಸಾಯನಿಕ ವಾಗಿದೆ. ಇದೇ ವೇಳೆ ಕೆಫೀನ್ ಸೇವನೆಯ ಅಭ್ಯಾಸ...ಅದು ಯಾವುದೇ ರೂಪದಲ್ಲಿರಲಿ, ಅದರ ಮೇಲೆ ನಮ್ಮ ಶರೀರದ ಅವಲಂಬನೆಗೆ ಕಾರಣವಾಗುತ್ತದೆ. ಸರಳವಾಗಿ ಹೇಳಬೇಕೆಂದರೆ ಅದು ಚಟವಾಗಿ ಪರಿಣಮಿಸುತ್ತದೆ ಮತ್ತು ಕೆಫೀನ್ ಸೇವನೆಯನ್ನು ನಿಲ್ಲಿಸಿದಾಗ ಅಥವಾ ಕಡಿಮೆ ಮಾಡಿದಾಗ ತಲೆನೋವಿನಂತಹ ವಿಥ್‌ಡ್ರಾವಲ್ ಸಿಂಪ್ಟಮ್ಸ್ ಅಥವಾ ಹಿಂದೆಗೆತ ಲಕ್ಷಣಗಳು ಕಾಣಿಸಿಕೊಳ್ಳುತ್ತವೆ. ಇವು ಸಿಗರೇಟ್ ಸೇದುವವರು ಏಕಾಏಕಿ ನಿಲ್ಲಿಸಿದಾಗ ಕಂಡು ಬರುವ ನಿಕೋಟಿನ್ ಹಿಂದೆಗೆತ ಲಕ್ಷಣಗಳಂತೆಯೇ ಇರುತ್ತವೆ.

ಕೆಫೀನ್ ಸೇವನೆಯನ್ನು ನಿಲ್ಲಿಸಿದಾಗ ಕಾಣಿಸಿಕೊಳ್ಳುವ ತಲೆನೋವು ಸಾಮಾನ್ಯವಾಗಿ ಕಣ್ಣುಗಳ ಹಿಂದಿನಿಂದ ಆರಂಭವಾಗುತ್ತದೆ ಮತ್ತು ಕ್ರಮೇಣ ಹಣೆಯನ್ನು ಆವರಿಸಿಕೊಂಡು ವ್ಯಕ್ತಿಯನ್ನು ನಿತ್ರಾಣಗೊಳಿಸುತ್ತದೆ.

ಕೆಫೀನ್ ಹಿಂದೆಗೆತದ ತಲೆನೋವು ಸಾಮಾನ್ಯವಾಗಿ ಒಂದು ವಾರ ಅಥವಾ 10 ದಿನಗಳ ಕಾಲ ಕಾಡುತ್ತಿರುತ್ತದೆ. ಇದು ಕೆಫೀನ್ ಸೇವಿಸದಿರುವುದಕ್ಕೆ ಶರೀರವು ತನ್ನನ್ನು ಹೊಂದಿಸಿಕೊಳ್ಳಲು ತೆಗೆದುಕೊಳ್ಳುವ ಅವಧಿಯಾಗಿದೆ. ತೀರ ಹೆಚ್ಚಿನ ಪ್ರಮಾಣದಲ್ಲಿ ಕೆಫೀನ್ ಸೇವಿಸುವವರಿಗೆ ಮಾತ್ರ ಈ ತಲೆನೋವು ಕಾಡುತ್ತದೆ ಎಂದೇನಿಲ್ಲ. ಪ್ರತಿನಿತ್ಯ ಸ್ವಲ್ಪ ಪ್ರಮಾಣದಲ್ಲಿ ಕಾಫಿ ಸೇವಿಸುವ ಅಭ್ಯಾಸವಿರುವ ವ್ಯಕ್ತಿಯು ಕೂಡ ಅದನ್ನು ದಿಢೀರ್ ಆಗಿ ನಿಲ್ಲಿಸಿದಾಗ ತಲೆನೋವು ಕಾಡುತ್ತದೆ.

ತಲೆನೋವಿಗೂ ಕೆಫೀನ್‌ಗೂ ಇರುವ ಸಂಬಂಧ ಗೊತ್ತಾದ ಮೇಲೆ ಕೆಫೀನ್ ಸೇವಿಸಬೇಕೋ ಬೇಡವೋ ಎಂಬ ಪ್ರಶ್ನೆ ಕಾಡಬಹುದು. ಇದಕ್ಕೆ ಸರಳವಾದ ವಿವರಣೆ ಇಲ್ಲಿದೆ...

ಇತರ ಯಾವುದೇ ಮಾದಕ ದ್ರವ್ಯದಂತೆ ಕೆಫೀನ್ ಕೂಡ ಡೋಸೇಜ್ ಮಿತಿಯನ್ನು ಹೊಂದಿದೆ. ಪ್ರತಿದಿನ ಅಂದಾಜು 400 ಮಿ.ಗ್ರಾಂ ಅಂದರೆ ನಾಲ್ಕು ಕಪ್ ಕಾಫಿ ವಯಸ್ಕ ವ್ಯಕ್ತಿಗಳ ಸೇವನೆಗೆ ಸುರಕ್ಷಿತ ಎಂದು ಘೋಷಿಸಲಾಗಿದೆ. ಹೀಗಿದ್ದರೆ ಸಮಸ್ಯೆ ಎಲ್ಲಿದೆ? ಯಾವುದೇ ನಿರ್ದಿಷ್ಟ ದಿನ ಕಾಫಿಯ ಸೇವನೆಯ ಪ್ರಮಾಣ ಹೆಚ್ಚಾದರೆ ಅಲ್ಲಿ ಸಮಸ್ಯೆ ಹುಟ್ಟಿಕೊಳ್ಳುತ್ತದೆ. ಹೀಗಾಗಿ ಪ್ರತಿದಿನ ನಿಗದಿತ ಪ್ರಮಾಣದಲ್ಲಿ ಕೆಫೀನ್ ಸೇವನೆ ಸೂಕ್ತ. ಈ ಪ್ರಮಾಣದಲ್ಲಿ 50 ಮಿ.ಗ್ರಾ.ಗಿಂತ ಅಧಿಕ ಹೆಚ್ಚಳಕ್ಕೆ ಅವಕಾಶ ನೀಡಲೇಬೇಡಿ.

ಕೆಫೀನ್ ಸೇವನೆಗೆ ಕಾರಣವನ್ನು ತಿಳಿದುಕೊಳ್ಳುವುದು ತಂಬ ಮುಖ್ಯವಾಗುತ್ತದೆ ಮತ್ತು ಈ ಕಾರಣ ಗೊತ್ತಾದರೆ ನೀವು ಕೆಫೀನ್‌ನ ಮಾಯೆಯಿಂದ ಹೊರಬರಬಹುದಾಗಿದೆ. ಕಾಫಿಯ ರುಚಿ ಅಥವಾ ಕಚೇರಿ ಕೆಲಸದ ಒತ್ತಡ ಅಥವಾ ಬೇರಾವುದೇ ಕಾರಣ ನಿಮ್ಮನ್ನು ಅದರತ್ತ ಸೆಳೆಯುತ್ತಿದೆಯೇ ಎನ್ನುವುದನ್ನು ಕಂಡುಕೊಂಡರೆ ಕಾಫಿ ಸೇವನೆಯನ್ನು ಕಡಿಮೆ ಮಾಡಲು ಮುತ್ತು ಕ್ರಮೇಣ ಅದನ್ನು ಬಿಡಲು ಸಾಧ್ಯವಾಗುತ್ತದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News