ಜಾತ್ಯತೀತ ಭಾರತಕ್ಕೆ ಕವಿದ ಕತ್ತಲು
ಅಂಬೇಡ್ಕರ್ ಮತ್ತು ಭಗತ್ ಸಿಂಗ್ ಹಿಂದೂ ರಾಷ್ಟ್ರೀಯತೆಯನ್ನು ಸ್ಪಷ್ಟವಾಗಿ ವಿರೋಧಿಸಿದರು. ಭಗತ್ ಸಿಂಗ್‌ರಂಥವರು ಸಮಾಜವಾದಿ ತಳಹದಿಯ ರಾಷ್ಟ್ರ ನಿರ್ಮಾಣದ ಕನಸು ಕಂಡಿದ್ದರು. ಅಂಬೇಡ್ಕರ್ ಅವರಿಗೆ ಈ ಹುಚ್ಚು ರಾಷ್ಟ್ರೀಯತೆ ಕಂಡರೆ ಆಗುತ್ತಿರಲಿಲ್ಲ. ಮಹಾತ್ಮಾ ಗಾಂಧೀಜಿ ಅವರೊಂದಿಗೆ ಮಾತನಾಡುವಾಗ ಅಂಬೇಡ್ಕರ್, ನನ್ನ ಮಾತೃಭೂಮಿ ಎಲ್ಲಿದೆ ಎಂದು ಪ್ರಶ್ನಿಸಿದ್ದರು. ನಮ್ಮವರನ್ನು ಹೊರಗಿಟ್ಟು ನಾಯಿ, ನರಿಗಳಿಗಿಂತ ಕೀಳಾಗಿ ಕಾಣುವ ದೇಶವನ್ನು ನನ್ನ ದೇಶವೆಂದು ಹೇಗೆ ಪರಿಗಣಿಸಲಿ ಎಂದು ಕೇಳಿದ್ದರು.
ಜಾತ್ಯತೀತ ಭಾರತದ ಮುಂದಿನ ದಾರಿ ಯಾವುದು? ಇದು ಮತ ನಿರಪೇಕ್ಷ ರಾಷ್ಟ್ರವಾಗಿ ಉಳಿಯುವುದೇ? ಸರ್ವರಿಗೂ ಸಮಾನ ಅವಕಾಶ ಒದಗಿಸಿದ ಸಂವಿಧಾನ ಸುರಕ್ಷಿತವಾಗಿ ಇರುವುದೇ? ಸಂವಿಧಾನ ಒದಗಿಸಿದ ಸಾಮಾಜಿಕ ನ್ಯಾಯದ ಅವಕಾಶವನ್ನು ದಮನಿತ ಸಮುದಾಯ ಕಳೆದುಕೊಳ್ಳುವುದೇ ಎಂಬ ಪ್ರಶ್ನೆಗಳು ಇತ್ತೀಚೆಗೆ ನಮ್ಮೆದುರು ಪದೇ ಪದೇ ಬಂದು ನಿಲ್ಲುತ್ತಿವೆ.
ಜಾತ್ಯತೀತ ಭಾರತವನ್ನು ಮನುವಾದಿ ಹಿಂದೂ ರಾಷ್ಟ್ರವನ್ನಾಗಿ ಮಾಡುವ ಆರೆಸ್ಸೆಸ್ ಕಾರ್ಯಸೂಚಿ ಈಗ ರಹಸ್ಯವಾಗಿ ಉಳಿದಿಲ್ಲ. 1950ರಲ್ಲಿ ಅಸ್ತಿತ್ವಕ್ಕೆ ಬಂದಾಗಿನಿಂದ ಹಿಂದೂ ರಾಷ್ಟ್ರದ ಅಗತ್ಯವನ್ನು ಅದು ಪ್ರತಿಪಾದಿಸುತ್ತಲೇ ಇದೆ. ಆರೆಸ್ಸೆಸ್‌ನ ಎರಡನೇ ಸರಸಂಘ ಚಾಲಕ ಮಾಧವ ಸದಾಶಿವ ಗೋಳ್ವಾಲ್ಕರ್ ತಮ್ಮ ಬಂಚ್ ಆಫ್ ಥಾಟ್ಸ್ ಪುಸ್ತಕದಲ್ಲಿ ಹಿಂದೂ ರಾಷ್ಟ್ರದ ಸ್ವರೂಪದ ಬಗ್ಗೆ ವಿಶ್ಲೇಷಿಸಿದ್ದಾರೆ. ಆರೆಸ್ಸೆಸ್ ಕಲ್ಪನೆಯ ಹಿಂದೂ ರಾಷ್ಟ್ರದಲ್ಲಿ ಅಲ್ಪಸಂಖ್ಯಾತರು ಎರಡನೇ ದರ್ಜೆ ಪ್ರಜೆಗಳಾಗಿ ಹೇಳಿದಂತೆ ಕೇಳಿಕೊಂಡು ಇರಬೇಕು ಎಂದು ಅವರು ಹೇಳುತ್ತಾರೆ. ಈ ಹಿಂದೂ ರಾಷ್ಟ್ರದಲ್ಲಿ ದಲಿತರ ಸ್ಥಿತಿ ಇನ್ನೂ ಶೋಚನೀಯವಾಗಿದೆ.
ದೇಶಕ್ಕೆ ಸ್ವಾತಂತ್ರ ಬಂದಾಗ, ಭಾರತವನ್ನು ಹಿಂದೂ ರಾಷ್ಟ್ರವನ್ನಾಗಿ ಮಾಡಬೇಕು ಎಂದು ಸಾವರ್ಕರ್ ಮತ್ತು ಗೋಳ್ವಲ್ಕರ್ ಬಲವಾಗಿ ಪ್ರತಿಪಾದಿಸಿದ್ದರು. ಆದರೆ ಮಹಾತ್ಮಾ ಗಾಂಧೀಜಿ, ಡಾ. ಅಂಬೇಡ್ಕರ್ ಹಿಂದೂ ರಾಷ್ಟ್ರದ ಕಲ್ಪನೆಯನ್ನು ಬಲವಾಗಿ ವಿರೋಧಿಸಿದರು. ಭಾರತಕ್ಕೆ ಸಂವಿಧಾನ ನೀಡಿದ ಬಾಬಾ ಸಾಹೇಬರು ಹಿಂದೂ ರಾಷ್ಟ್ರವಾದರೆ, ಈ ದೇಶ ನಾಶವಾಗುತ್ತದೆ ಎಂದು ಹೇಳಿದರು. ಹಿಂದೂ ರಾಷ್ಟ್ರದ ಕಲ್ಪನೆಯನ್ನು ವಿರೋಧಿಸಿದ್ದಕ್ಕಾಗಿಯೇ ಮಹಾತ್ಮಾ ಗಾಂಧಿ ಗೋಡ್ಸೆಯ ಗುಂಡಿಗೆ ಬಲಿಯಾದರು.
ಗಾಂಧಿ ಹತ್ಯೆ ನಂತರ ಆರೆಸ್ಸೆಸ್ ತೀವ್ರ ಹಿನ್ನಡೆ ಅನುಭವಿಸಿತು. ಜನರು ಅದನ್ನು ತಿರಸ್ಕರಿಸಿದರು. ಅಂದಿನ ಗೃಹಮಂತ್ರಿ ವಲ್ಲಭಭಾಯ್ ಪಟೇಲ್ ಆರೆಸ್ಸೆಸ್ ಮೇಲೆ ನಿಷೇಧ ಹೇರಿದರು. ಕೊನೆಗೆ ಗೋಳ್ವಲ್ಕರ್ ಪಟೇಲರನ್ನು ಭೇಟಿ ಮಾಡಿ, ತಮ್ಮ ಸಂಘಟನೆ ರಾಜಕೀಯೇತರ ಸಂಘಟನೆಯಾಗಿ ಉಳಿಯುವುದಾಗಿ ಪ್ರಮಾಣಪತ್ರ ಸಲ್ಲಿಸಿದರು. ಆಗ ನಿರ್ಬಂಧ ರದ್ದಾಯಿತು.
ಸ್ವಾತಂತ್ರಾ ನಂತರದ ಎರಡು ದಶಕಗಳ ಕಾಲಾವಧಿಯಲ್ಲಿ ಆರೆಸ್ಸೆಸ್ ಮತ್ತು ಅದರ ರಾಜಕೀಯ ವೇದಿಕೆ ಜನಸಂಘ ಜನರಿಂದ ತಿರಸ್ಕರಿಸಲ್ಪಟ್ಟಿತು. ಆದರೆ 1974 ರಲ್ಲಿ ನಡೆದ ಜೆಪಿ ಚಳವಳಿಯಲ್ಲಿ ತೂರಿಕೊಂಡ ಆರೆಸ್ಸೆಸ್ ಸಾಮಾಜಿಕ ಮಾನ್ಯತೆ ಪಡೆಯುವಲ್ಲಿ ಯಶಸ್ವಿಯಾಯಿತು. ತುರ್ತು ಪರಿಸ್ಥಿತಿಯ ನಂತರ ಅಸ್ತಿತ್ವಕ್ಕೆ ಬಂದ ಕಾಂಗ್ರೆಸ್ಸೇತರ ಸರಕಾರದಲ್ಲಿ ವಾಜಪೇಯಿ, ಅಡ್ವಾಣಿ ಮತ್ತು ಮುರಳಿ ಮನೋಹರ ಜೋಷಿ ಸಚಿವರಾದರು.
ಮೊರಾರ್ಜಿ ದೇಸಾಯಿ ಸಂಪುಟದಲ್ಲಿದ್ದ ವಾಜಪೇಯಿ ಮತ್ತು ಅಡ್ವಾಣಿ ಅವರನ್ನು ಬಳಸಿಕೊಂಡು ತನ್ನ ಹಿಂದೂತ್ವದ ಕಾರ್ಯಸೂಚಿ ಜಾರಿಗೆ ತರಲು ಆರೆಸ್ಸೆಸ್‌ಯತ್ನಿಸಿತು. ಶೈಕ್ಷಣಿಕ ರಂಗದಲ್ಲಿ ಕಾಲೂರಲು ಪ್ರಯತ್ನಿಸಿತು. ನಂತರ ಸಂವಿಧಾನ ಪರಿಷ್ಕರಣೆ ಪ್ರಸ್ತಾವನೆ ಮುಂದಿಡಲಾಯಿತು. ಸಂವಿಧಾನ ಪರಿಷ್ಕರಣೆಗಾಗಿ ನ್ಯಾಯ ಮೂರ್ತಿಯೊಬ್ಬರ ನೇತೃತ್ವದಲ್ಲಿ ಸಮಿತಿ ರಚಿಸಲಾಯಿತು. ಆದರೆ ಮಿತ್ರಪಕ್ಷಗಳ ವಿರೋಧದಿಂದ ಇದು ಕಾರ್ಯಗತ ಆಗಲಿಲ್ಲ. ಆರೆಸ್ಸೆಸ್ ಹಿಂದೂ ರಾಷ್ಟ್ರದ ಪರಿಕಲ್ಪನೆಯಲ್ಲಿ ಈಗಿರುವ ಸಂವಿಧಾನ, ಮೀಸಲಾತಿಇರುವುದಿಲ್ಲ. ಈ ದೇಶಕ್ಕೆ ಹೊರಗಿನದಾದ ಸಮಾಜವಾದಕ್ಕೆ ಇಲ್ಲಿ ಅವಕಾಶ ಕೊಡುವುದಿಲ್ಲ ಎಂದು ಗೋಳ್ವಲ್ಕರ್ ಸ್ಪಷ್ಟವಾಗಿ ಹೇಳಿದ್ದಾರೆ. ಹಿಂದೂ ರಾಷ್ಟ್ರ ನಿರ್ಮಾಣವಾಗಬೇಕಿದ್ದರೆ, ಹಿಂದೂಗಳು ಒಂದಾಗಬೇಕು. ಮುಸ್ಲಿಮರು ಮತ್ತು ಕ್ರೈಸ್ತರನ್ನು ಪ್ರತ್ಯೇಕಿಸಬೇಕು. ಆ ಕಾರಣಕ್ಕಾಗಿ ಗೋ ಹತ್ಯೆ ನಿಷೇಧ, ಲವ್ ಜಿಹಾದ್, ಮತಾಂತರ, ರಾಮಮಂದಿರ ಮುಂತಾದ ವಿಷಯಗಳನ್ನು ಮುಂದಿಟ್ಟು ಸಮಾಜ ಒಡೆಯಲಾಯಿತು. ಕೋಮು ಗಲಭೆ ಮಾಡದೆ ಆರೆಸ್ಸೆಸ್ ಕಾರ್ಯಸೂಚಿ ಜಾರಿಗೆ ಬರುವುದಿಲ್ಲ.
ಇತ್ತೀಚೆಗೆ ಉತ್ತರ ಕನ್ನಡದಲ್ಲಿ ನಡೆದ ಹಿಂಸಾಚಾರ, ಅದಕ್ಕೆ ಕೇಂದ್ರ ಸಚಿವ ಅನಂತ ಕುಮಾರ್ ಹೆಗಡೆ ನೀಡಿದ ಪ್ರಚೋದನೆ ಎಲ್ಲರಿಗೂ ತಿಳಿದಿರುವ ಸಂಗತಿ. ಕಾಂಗ್ರೆಸ್‌ನ ಮೃದು ಹಿಂದುತ್ವ ನೀತಿ ಕೂಡ ಸಂಘ ಪರಿವಾರಕ್ಕೆ ಹಲವು ಬಾರಿ ನೆರವಾಗಿದೆ. ಕರ್ನಾಟಕವನ್ನೇ ಉದಾಹರಣೆಯಾಗಿ ತೆಗೆದುಕೊಂಡರೆ, ಸಿದ್ದರಾಮಯ್ಯ ಅವರೊಬ್ಬರೇ ಕೋಮುವಾದಿ ಶಕ್ತಿಗಳ ವಿರುದ್ಧ ಮಾತನಾಡುತ್ತಾರೆ. ಹಿರಿಯ ಸಚಿವ ಆರ್.ವಿ.ದೇಶಪಾಂಡೆ ಉತ್ತರ ಕನ್ನಡ ಜಿಲ್ಲೆಯವರು. ಆದರೆ ಅವರು ಕೋಮು ಗಲಭೆ ನಂತರ ಆ ಜಿಲ್ಲೆಗೆ ಹೋಗಿ ವಾತಾವರಣ ತಿಳಿಗೊಳಿಸುವ ಯಾವ ಯತ್ನವನ್ನೂ ಮಾಡಲಿಲ್ಲ. ಕೇಂದ್ರ ಸಚಿವ ಅನಂತಕುಮಾರ್ ಹೆಗಡೆ ಕೂಡ ಸಿದ್ದರಾಮಯ್ಯ ಒಬ್ಬರನ್ನೇ ನೇರವಾಗಿ ಟೀಕಿಸುತ್ತಾರೆ. ದೇಶಪಾಂಡೆಯವರ ಬಗ್ಗೆ ಅವರು ಎಂದಿಗೂ ಮಾತನಾಡುವುದಿಲ್ಲ. ಅವರಿಬ್ಬರ ನಡುವಿನ ಸಂಬಂಧದ ಗುಟ್ಟು ಬಯಲಾಗಬೇಕಿದೆ.
ಭಾರತ ಎಂಬುದು ಬಹುಧರ್ಮೀಯ, ಬಹುಸಂಸ್ಕೃತಿ, ಬಹುಭಾಷೆಯ ಮತ್ತು ಬಹುರಾಷ್ಟ್ರೀಯತೆಗಳ ಒಕ್ಕೂಟ ಆಗಿದೆ. ಸಂವಿಧಾನದಲ್ಲೂ ಕೂಡ ಇದನ್ನು ಪೆಡರಲ್ ಸ್ಟೇಟ್ ಎಂದು ಹೆಸರಿಸಲಾಗಿದೆ. ಇಂಥ ವೈವಿಧ್ಯಮಯ ರಾಷ್ಟ್ರವನ್ನು ಏಕಧರ್ಮ, ಏಕಭಾಷೆ, ಏಕಸಂಸ್ಕೃತಿಯ ಹಿಂದೂ ರಾಷ್ಟ್ರವನ್ನಾಗಿ ಮಾಡುವ ಹುನ್ನಾರ ಈಗ ತೀವ್ರವಾಗಿ ನಡೆದಿದೆ. ಜಗತ್ತಿನಲ್ಲೇ ಅಪರೂಪವಾದ ವೈವಿಧ್ಯಮಯ ತಾಣವನ್ನು ನಾಶ ಮಾಡುವ ಯತ್ನ ಕೇಂದ್ರದಲ್ಲಿ ನರೇಂದ್ರ ಮೋದಿ ಅಧಿಕಾರಕ್ಕೆ ಬಂದ ನಂತರ ತೀವ್ರಗೊಂಡಿದೆ. ಲವ್‌ಜಿಹಾದ್, ಮತಾಂತರ ಮುಂತಾದವುಗಳ ಹೆಸರಿನಲ್ಲಿ ಮನುಷ್ಯರ ಹತ್ಯೆ ನಡೆದಿದ್ದರೂ ಪ್ರಧಾನಿ ಮೋದಿ ಬಾಯಿ ಮುಚ್ಚಿಕೊಂಡು ತೆಪ್ಪಗಿದ್ದಾರೆ. ಭಾರತವು ಸ್ವತಂತ್ರಗೊಂಡ ನಂತರ ಹಿಂದೂ ರಾಷ್ಟ್ರವಾದ ಮತ್ತು ಭಾರತ ರಾಷ್ಟ್ರವಾದಕ್ಕೂ ಸಂಘರ್ಷ ನಡೆದಿದೆ. ಹಿಂದೂ ರಾಷ್ಟ್ರವಾದವೆಂದರೆ ಸಾವರ್ಕರ್ ಪ್ರತಿಪಾದಿಸಿದ ರಾಷ್ಟ್ರವಾದವಾಗಿದೆ. ಭಾರತವನ್ನು ಪುಣ್ಯಭೂಮಿ, ಪಿತೃಭೂಮಿ ಎಂದು ಪರಿಗಣಿಸಿದವರನ್ನು ಹಿಂದೂ ಎಂದು ಕರೆಯಬಹುದು ಎಂದು ಸಾವರ್ಕರ್ ವ್ಯಾಖ್ಯಾನಿಸುತ್ತಾರೆ. ಇದಕ್ಕೆ ಪ್ರತಿಯಾಗಿ ಭಾರತ ರಾಷ್ಟ್ರವಾದವೆಂದರೆ, ಗಾಂಧಿ, ನೆಹರೂ ಮತ್ತು ಅಂಬೇಡ್ಕರ್ ಪ್ರತಿಪಾದಿಸಿದ ಹಿಂದೂ, ಮುಸ್ಲಿಂ ಮತ್ತು ಕ್ರೈಸ್ತರನ್ನು ಒಳಗೊಂಡ ಸರ್ವಜನಾಂಗದ ರಾಷ್ಟ್ರವಾಗಿದೆ.
ಹಿಂದೂ ರಾಷ್ಟ್ರ ನಿರ್ಮಾಣಕ್ಕೆ, ಏಕ ಧರ್ಮ, ಏಕ ಸಂಸ್ಕೃತಿ ಎಂದು ಪ್ರತಿಪಾದಿಸಿದ ಜರ್ಮನಿಯ ಫ್ಯಾಶಿಸ್ಟ್ ಸರ್ವಾಧಿಕಾರಿ ಅಡಾಲ್ಫ್ ಹಿಟ್ಲರ್ ಸ್ಫೂರ್ತಿಯಾಗಿದ್ದಾನೆ. 1925ರಲ್ಲಿ ಆರೆಸ್ಸೆಸ್ ನಾಗಪುರದಲ್ಲಿ ಅಸ್ತಿತ್ವಕ್ಕೆ ಬರುವ ಮುನ್ನ ಆರೆಸ್ಸೆಸ್ ಸ್ಥಾಪಕರಲ್ಲಿ ಒಬ್ಬರಾದ ಡಾ. ಮುಂಜೆ ಇಟಲಿಗೆ ಹೋಗಿ ಫ್ಯಾಶಿಸ್ಟ್ ಸರ್ವಾಧಿಕಾರಿ ಮುಸಲೋನಿ ಅವರನ್ನು ಭೇಟಿಯಾಗಿ ಬಂದಿದ್ದರು. ವಿದೇಶದಿಂದ ಎರವಲು ತಂದ ಸಿದ್ಧಾಂತಕ್ಕೆ ಹಿಂದುತ್ವದ ಲೇಪನ ಮಾಡಿ, ನಾಗಪುರದ ಚಿತ್ಪಾವನ ಬ್ರಾಹ್ಮಣರ ಓಣಿಯಲ್ಲಿ ಆರೆಸ್ಸೆಸ್‌ನ ಮೊದಲ ಶಾಖೆ ಆರಂಭವಾಯಿತು. ಇಟಲಿ ಮತ್ತು ಜರ್ಮನಿ ದೇಶಗಳು ಭಾರತದಂತೆ ಬಹುಜನಾಂಗೀಯ ದೇಶಗಳಲ್ಲ. ಏಕ ಜನಾಂಗವನ್ನು ಹೊಂದಿದ ಪುಟ್ಟ ರಾಷ್ಟ್ರಗಳಿಗೆ ಅನುಕೂಲ ಆಗುವ ಫ್ಯಾಶಿಸ್ಟ್ ಸಿದ್ಧಾಂತ ಮುಸಲೋನಿ ರೂಪಿಸಿದ. ಆ ಸಿದ್ಧಾಂತವನ್ನು ಭಾರತಕ್ಕೆ ಎರವಲು ತಂದು, ಇವರು ಹಿಂದೂ ರಾಷ್ಟ್ರ ನಿರ್ಮಿಸಲು ಹೊರಟಿದ್ದಾರೆ.
ದೇಶದ ಸ್ವಾತಂತ್ರಕ್ಕಾಗಿ ಮಹಾತ್ಮಾ ಗಾಂಧೀಜಿಯವರ ಅಹಿಂಸಾತ್ಮಕ ಚಳವಳಿ, ನೇತಾಜಿ ಸುಭಾಶ್ಚಂದ್ರ ಬೋಸ್ ನಾಯಕತ್ವದಲ್ಲಿ ಉಗ್ರ ಸ್ವರೂಪದ ಹೋರಾಟ, ಎಡಪಂಥೀಯ ಶಹೀದ್ ಭಗತ್ ಸಿಂಗ್ ನೇತೃತ್ವದಲ್ಲಿ ಕ್ರಾಂತಿಕಾರಿ ಹೋರಾಟ ನಡೆ ಯಿತು. ಆದರೆ ಇದ್ಯಾವುದರಲ್ಲೂ ಪಾಲ್ಗೊಳ್ಳದ ಆರೆಸ್ಸೆಸ್ ಸ್ವಾತಂತ್ರ ಹೋರಾಟಕ್ಕೆ ದ್ರೋಹ ಬಗೆಯಿತು. ಸಾವರ್ಕರ್ ಬ್ರಿಟಿಷರಿಗೆ ಕ್ಷಮಾಪಣೆ ಪತ್ರ ಬರೆದು ಕೊಟ್ಟು, ಜೈಲಿನಿಂದ ಬಿಡುಗಡೆಯಾಗಿ ಬಂದರು. ಆರೆಸ್ಸೆಸ್ ಸ್ಥಾಪನೆಗೆ ಒಂದು ಚಾರಿತ್ರಿಕ ಹಿನ್ನೆಲೆಯಿದೆ. ಮಹಾರಾಷ್ಟ್ರದಲ್ಲಿ ದಲಿತ ಮತ್ತು ಹಿಂದುಳಿದ ಸಮುದಾಯದ ಜನರು ಪೇಶ್ವೆಯವರ ಕಾಲದಲ್ಲಿ ಅನುಭವಿಸಿದ ಹೀನಾಯ ಸ್ಥಿತಿ ಎಲ್ಲರಿಗೂ ಗೊತ್ತಿದೆ. ಪುಣೆಯಂತಹ ನಗರದಲ್ಲಿ ದಲಿತರು ರಸ್ತೆಯಲ್ಲಿ ಓಡಾಡಬೇಕಿದ್ದರೆ, ಅವರ ಹೆಜ್ಜೆ ಗುರುತುಗಳು ಮೂಡಬಾರದೆಂದು ಹಿಂಬದಿಯಲ್ಲಿ ಪೊರಕೆ ಕಟ್ಟಿಕೊಳ್ಳಬೇಕಿತ್ತು. ದಾರಿಯಲ್ಲಿ ಉಗುಳಬಾರದೆಂದು ಕತ್ತಿಗೆ ಗಡಿಗೆಯೊಂದನ್ನು ಕಟ್ಟಿಕೊಂಡು ಬರುತ್ತಿದ್ದರು.
ಆದರೆ ಕೋರೆಗಾಂವ್ ಯುದ್ಧದಲ್ಲಿ ದಲಿತ ಸೈನ್ಯದ ಎದುರು ಪೇಶ್ವೆಗಳು ಪರಾಭವ ಗೊಂಡರು. ಆ ನಂತರ ಬಂದ, ಜ್ಯೋತಿಬಾ ಫುಲೆ, ಶಾಹು ಮಹಾರಾಜ, ಆಗರ್ಕರ್, ಅಂಬೇಡ್ಕರ್ ಮುಂತಾದವರು ದಲಿತರಲ್ಲಿ ಜಾಗೃತಿ ಮೂಡಿಸಿ ಪುರೋಹಿತಶಾಹಿಯ ಅಡಿಪಾಯಕ್ಕೆ ಬಿಸಿ ಮುಟ್ಟಿಸಿದರು. ಆಗ ಬ್ರಾಹ್ಮಣ್ಯವನ್ನು ರಕ್ಷಿಸಿಕೊಳ್ಳಲು ಹುಟ್ಟಿದ ಸಂಘಟನೆ ಆರೆಸ್ಸೆಸ್.
ಅಂಬೇಡ್ಕರ್ ಮತ್ತು ಭಗತ್ ಸಿಂಗ್ ಹಿಂದೂ ರಾಷ್ಟ್ರೀಯತೆಯನ್ನು ಸ್ಪಷ್ಟವಾಗಿ ವಿರೋಧಿಸಿದರು. ಭಗತ್ ಸಿಂಗ್‌ರಂಥವರು ಸಮಾಜವಾದಿ ತಳಹದಿಯ ರಾಷ್ಟ್ರ ನಿರ್ಮಾಣದ ಕನಸು ಕಂಡಿದ್ದರು. ಅಂಬೇಡ್ಕರ್ ಅವರಿಗೆ ಈ ಹುಚ್ಚು ರಾಷ್ಟ್ರೀಯತೆ ಕಂಡರೆ ಆಗುತ್ತಿರಲಿಲ್ಲ. ಮಹಾತ್ಮಾ ಗಾಂಧೀಜಿ ಅವರೊಂದಿಗೆ ಮಾತನಾಡುವಾಗ ಅಂಬೇಡ್ಕರ್, ನನ್ನ ಮಾತೃಭೂಮಿ ಎಲ್ಲಿದೆ ಎಂದು ಪ್ರಶ್ನಿಸಿದ್ದರು. ನಮ್ಮವರನ್ನು ಹೊರಗಿಟ್ಟು ನಾಯಿ, ನರಿಗಳಿಗಿಂತ ಕೀಳಾಗಿ ಕಾಣುವ ದೇಶವನ್ನು ನನ್ನ ದೇಶವೆಂದು ಹೇಗೆ ಪರಿಗಣಿಸಲಿ ಎಂದು ಕೇಳಿದ್ದರು.
ಅಂತಲೇ ಅಂಬೇಡ್ಕರ್ ಸರ್ವರಿಗೂ ಸಮಾನ ಅವಕಾಶ ಇರುವ ಜಾತ್ಯತೀತ ಭಾರತದ ಸಂವಿಧಾನವನ್ನು ಈ ದೇಶಕ್ಕೆ ನೀಡಿದರು. ಈ ಸಂವಿಧಾನ ನಾಶ ಮಾಡಿ, ಮನುವಾದಿ ಹಿಂದೂ ರಾಷ್ಟ್ರ ನಿರ್ಮಿಸಲು ಸಂಘ ಪರಿವಾರ ಎಲ್ಲೆಡೆ ಅರಾಜಕತೆ ಸೃಷ್ಟಿಸುತ್ತಿದೆ. ಈ ಬಹುಮುಖಿ ರಾಷ್ಟ್ರ ಉಳಿಸಿಕೊಳ್ಳುವುದು ಪ್ರಜ್ಞಾವಂತರ ಕರ್ತವ್ಯವಾಗಿದೆ.