ನೀವೆಂದೂ ಕಡೆಗಣಿಸಬಾರದ ಮಿದುಳಿನ ಆಘಾತದ 13 ಮುನ್ನೆಚ್ಚರಿಕೆ ಸಂಕೇತಗಳು

Update: 2017-12-19 10:27 GMT

ಮಿದುಳಿನಲ್ಲಿಯ ರಕ್ತನಾಳದಲ್ಲಿ ರಕ್ತ ಹೆಪ್ಪುಗಟ್ಟುವಿಕೆಯಿಂದ ಅದರ ಒಂದು ಅಥವಾ ಹೆಚ್ಚಿನ ಭಾಗಗಳಿಗೆ ಬಹುಮುಖ್ಯವಾದ ಆಮ್ಲಜನಕದ ಪೂರೈಕೆಯು ಕಡಿತಗೊಳ್ಳುತ್ತದೆ. ಇಂತಹ ಸ್ಥಿತಿಯನ್ನು ಸ್ಟ್ರೋಕ್ ಅಥವಾ ಆಘಾತ ಎಂದು ಕರೆಯಲಾಗುತ್ತದೆ. ಇದು ಮಿದುಳಿಗೆ ಹಾನಿ, ಪಾರ್ಶ್ವವಾಯು ಮತ್ತು ಕೆಲವೊಮ್ಮೆ ಸಾವಿಗೂ ಕಾರಣವಾಗುತ್ತದೆ. ಹೀಗಾಗಿ ಸ್ಟ್ರೋಕ್ ಗಂಭೀರ ವೈದ್ಯಕೀಯ ತುರ್ತು ಸ್ಥಿತಿಯಾಗಿದ್ದು, ತಕ್ಷಣ ವೈದ್ಯಕೀಯ ಚಿಕಿತ್ಸೆ ಅಗತ್ಯವಾಗುತ್ತದೆ. ಇಲ್ಲಿವೆ ಸ್ಟ್ರೋಕ್‌ನ ಅಪಾಯವನ್ನು ಮೊದಲೇ ತಿಳಿಸುವ ಎಚ್ಚರಿಕೆಯ ಸಂಕೇತಗಳು, ಓದಿಕೊಳ್ಳಿ.....

ಜೋಲು ಬಿದ್ದ ಮುಖ

ನಿಮ್ಮ ಮುಖದ ಅರ್ಧಭಾಗದ ಚಲನೆ ಸಾಧ್ಯವಾಗದಿದ್ದಲ್ಲಿ ಅಥವಾ ಅದು ಸಂಪೂರ್ಣವಾಗಿ ಮರಗಟ್ಟಿದ್ದರೆ ಮತ್ತು ಜೋಲು ಬಿದ್ದು ನಿಮಗೆ ಪೂರ್ತಿಯಾಗಿ ನಗಲು ಸಾಧ್ಯವಾದಿದ್ದರೆ ಅದು ಆಘಾತದ ಸ್ಪಷ್ಟ ಸಂಕೇತವಾಗಿದೆ. ಆಮ್ಲಜನಕದ ಕೊರತೆಯಿಂದ ನಿಮ್ಮ ಮುಖದ ಸ್ನಾಯಿವಿಗೆ ಹಾನಿಯು ಈ ಸ್ಥಿತಿಗೆ ಕಾರಣವಾಗಿರುತ್ತದೆ.

ಒಂದು ತೋಳಿನಲ್ಲಿ ನಿಶ್ಶಕ್ತಿ

ನಿಮ್ಮ ಕನಿಷ್ಠ ಒಂದು ತೋಳು ತಲೆಯಿಂದ ಮೇಲಕ್ಕೆ ಎತ್ತದಷ್ಟು ನಿಶ್ಚೇಷ್ಟಿತಗೊಂಡಿದ್ದರೆ ಮತ್ತು ನಿಶ್ಶಕ್ತಗೊಂಡಿದ್ದರೆ ಅದು ಆಘಾತದ ಇನ್ನೊಂದು ಸ್ಪಷ್ಟ ಸಂಕೇತವಾಗಿರುತ್ತದೆ.

ತೊದಲುವಿಕೆ

  ಏಕಾಏಕಿಯಾಗಿ ಮಾತುಗಳು ತೊದಲಲಾರಂಭಿಸಿದರೆ ಮಾತು ಮತ್ತು ಸಂವಹನದ ಲ್ಲಿ ಪ್ರಮುಖವಾಗಿರುವ ಮಿದುಳಿನ ಭಾಗಕ್ಕೆ ರಕ್ತಪೂರೈಕೆಗೆ ಅಡ್ಡಿಯನ್ನುಂಟು ಮಾಡಿರುವ ಹೆಪ್ಪುಗಟ್ಟುವಿಕೆ ಇರುವ ಸಾಧ್ಯತೆಗಳಿವೆ. ಇಂತಹ ಪ್ರಕರಣಗಳಲ್ಲಿ ನಿಮ್ಮ ಹತ್ತಿರದ ಆಸ್ಪತ್ರೆಗೆ ಧಾವಿಸುವುದು ಅಗತ್ಯವಾಗುತ್ತದೆ. ತಕ್ಷಣ ವೈದ್ಯಕೀಯ ಚಿಕಿತ್ಸೆ ಪಡೆಯದಿದ್ದರೆ ನೀವು ನಿಮ್ಮ ಮಾತನಾಡುವ ಸಾಮರ್ಥ್ಯವನ್ನು ಕಳೆದುಕೊಳ್ಳಬಹುದು.

ಶರೀರದ ಒಂದು ಭಾಗದಲ್ಲಿ ಸಂಪೂರ್ಣ ನಿಶ್ಶಕ್ತಿ ಅಥವಾ ಪಾರ್ಶ್ವವಾಯು

ಆಘಾತ ಸಾಮಾನ್ಯವಾಗಿ ನಿಮ್ಮ ಶರೀರದ ಯಾವುದಾದರೂ ಭಾಗದಲ್ಲಿ ಅಥವಾ ಇಡೀ ಶರೀರದ ಅರ್ಧಭಾಗದಲ್ಲಿ ಪಾರ್ಶ್ವವಾಯುವಿನ ರೂಪದಲ್ಲಿ ಪ್ರಕಟಗೊಳ್ಳುತ್ತದೆ. ಇದರಲ್ಲಿ ಎರಡನೇ ಅಪಾಯವುಂಟಾಗಿದ್ದರೆ ತಕ್ಷಣ ವೈದ್ಯರನ್ನು ಕಾಣಬೇಕು, ಏಕೆಂದರೆ ಸಕಾಲದಲ್ಲಿ ವೈದ್ಯಕೀಯ ಚಿಕಿತ್ಸೆ ಪಡೆಯದ ಇಂತಹ ಶೇ.66ರಷ್ಟು ರೋಗಿಗಳು ಶಾಶ್ವತ ಅಂಗವೈಕಲ್ಯಕ್ಕೆ ಗುರಿಯಾಗಿರುವ ಪೂರ್ವ ನಿದರ್ಶನಗಳಿವೆ.

ಸೂಜಿ ಚುಚ್ಚಿದ ಅನುಭವ

 ನೀವು ಸುದೀರ್ಘ ಸಮಯದವರೆಗೆ ನೆಲದಲ್ಲಿ ಕುಳಿತಿದ್ದರೆ ಅಥವಾ ತೋಳಿನ ಮೇಲೆ ಮಲಗಿದ್ದರೆ ನಿಮ್ಮ ಕಾಲುಗಳು ಅಥವಾ ತೋಳಿನಲ್ಲಿ ಸೂಜಿಯಿಂದ ಅಥವಾ ಪಿನ್‌ನಿಂದ ಚುಚ್ಚಿದಂತೆ ಸಂವೇದನೆಯುಂಟಾದರೆ ಅದು ಆಘಾತದ ಲಕ್ಷಣವಾಗಿರುವ ಸಾಧ್ಯತೆ ತುಂಬ ಕಡಿಮೆ. ಆದರೆ ಸಾಮಾನ್ಯವಾಗಿ ಇಂತಹ ಸಮಸ್ಯೆಯನ್ನುಂಟು ಮಾಡದ ಚಟುವಟಿ ೆಯಲ್ಲಿ ತೊಡಗಿಕೊಂಡಿದ್ದಾಗ ದಿಢೀರ್‌ನೆ ಇಂತಹ ಸಂವೇದನೆಯುಂಟಾದರೆ ಅದು ಆಘಾತದ ಲಕ್ಷಣವಾಗಿರಬಹುದು.

ಮಂದ ದೃಷ್ಟಿ

ಕಣ್ಣಿನ ದೃಷ್ಟಿಯು ಮಂದಗೊಳ್ಳುವುದು ಅಥವಾ ಒಂದು ಕಣ್ಣಿನ ದೃಷ್ಟಿಗೆ ತೊಂದರೆ ಯಾಗುವುದು ಸ್ಟ್ರೋಕ್‌ನ ಇನ್ನೊಂದು ಲಕ್ಷಣವಾಗಿದೆ. ನಿಮ್ಮ ದೃಷ್ಟಿಯ ಹೊಣೆಯನ್ನು ಹೊತ್ತಿರುವ ಮಿದುಳಿನ ‘ಆಕ್ಸಿಪಿಟಲ್ ಲೋಬ್’ಗೆ ಆಮ್ಲಜನಕ ಪೂರೈಕೆಯ ಕೊರತೆ ಇದಕ್ಕೆ ಕಾರಣವಾಗುತ್ತದೆ.

ತಲೆ ತಿರುಗುವಿಕೆ

ತಲೆ ತಿರುಗುವಿಕೆಯು ಸ್ಟ್ರೋಕ್‌ನ ಸಾಮಾನ್ಯ ಲಕ್ಷಣವಾಗಿದ್ದು, ಮಿದುಳಿನ ಭಾಗವೊಂದಕ್ಕೆ ಆಮ್ಲಜನಕದ ಕೊರತೆಯಿಂದ ಇದು ಸಂಭವಿಸುತ್ತದೆ.

ನಡಿಗೆಯಲ್ಲಿ ತೊಂದರೆ

ನಿಮಗೆ ಹಿಂದೆಂದೂ ಅನುಭವಕ್ಕೆ ಬಂದಿರದ, ಒಂದು ಜಾಗದಿಂದ ಇನ್ನೊಂದು ಜಾಗಕ್ಕೆ ನಡೆಯುವುದು ಕಷ್ಟವಾದರೆ ನೀವು ಸ್ಟ್ರೋಕ್‌ನಿಂದ ಬಳಲುತ್ತಿರುವ ಸಾಧ್ಯತೆಗಳಿವೆ.

ತೀವ್ರ ತಲೆನೋವು

ನಾವೆಲ್ಲ ಒಂದಲ್ಲ ಒಂದು ಸಂದರ್ಭದಲ್ಲಿ ತಲೆನೋವು ಅನುಭವಿಸಿರುತ್ತೇವೆ, ಆದರೆ ಸ್ಟ್ರೋಕ್ ಉಂಟಾದಾಗಿನ ತಲೆನೋವು ತುಂಬ ಭಿನ್ನವಾಗಿರುತ್ತದೆ. ವಾಸ್ತವದಲ್ಲಿ ಅದು ನೀವು ಈ ಹಿಂದೆ ಅನುಭವಿಸಿದ್ದ ತಲೆನೋವಿಗಿಂತ ತೀವ್ರವಾಗಿರುತ್ತದೆ. ಮಿದುಳು ಸಾಯುವ ಮುನ್ನ ನೆರವಿಗಾಗಿ ಒದ್ದಾಡುವುದು ಇದಕ್ಕೆ ಕಾರಣವಾಗಿರಬಹುದು.

 ಮತ್ತೆ ಮತ್ತೆ ಮರೆಯುವುದು

ಫ್ರಂಟಲ್ ಅಥವಾ ಪ್ರಿ-ಫಂಟಲ್ ಕಾರ್ಟೆಕ್ಸ್‌ನಂತಹ ನೆನಪುಗಳನ್ನು ಸಂಗ್ರಹಿಸಿಡುವ ಮಿದುಳಿನಲ್ಲಿಯ ಭಾಗಕ್ಕೆ ಹಾನಿಯುಂಟಾದರೆ ಈ ಲಕ್ಷಣ ಕಾಣಿಸಿಕೊಳ್ಳುತ್ತದೆ.

ವರ್ತನೆಯಲ್ಲಿ ಬದಲಾವಣೆ

ನಮ್ಮ ವರ್ತನೆಗಳಿಗೆ ಮಿದುಳು ಹೊಣೆಗಾರನಾಗಿರುವುದರಿಂದ ಸ್ಟ್ರೋಕ್‌ನಿಂದ ಬಳಲುತ್ತಿರುವ ವ್ಯಕ್ತಿಯಲ್ಲಿ ಸಾಮಾನ್ಯವಾಗಿ ಕಾಣಿಸಿಕೊಳ್ಳದಿದ್ದ ಸಿಟ್ಟು,ಉದ್ವೇಗ ಮತ್ತು ಗೊಂದಲದಂತಹ ವರ್ತನೆಯಲ್ಲಿನ ಬದಲಾವಣೆಗಳು ಉಂಟಾಗುತ್ತವೆ. ವಾಸ್ತವದಲ್ಲಿ ಕೆಲವರು ಸ್ಟ್ರೋಕ್‌ನಿಂದ ಬದುಕುಳಿದರೂ ಈ ಸಮಸ್ಯೆಗಳನ್ನು ಶಾಶ್ವತವಾಗಿ ಎದುರಿಸು ತ್ತಿರುತ್ತಾರೆ.

ನುಂಗುವಿಕೆಯಲ್ಲಿ ತೊಂದರೆ

ನಿಮಗೆ ಇದು ಅರಿವಿಗೆ ಬರದಿರಬಹುದು, ಆದರೆ ಪ್ರತಿ 15-30 ಸೆಕೆಂಡ್‌ಗಳಿಗೊಮ್ಮೆ ನೀವು ಜೊಲ್ಲನ್ನು ನುಂಗುತ್ತಿರುತ್ತೀರಿ. ಸರಾಸರಿಯಾಗಿ ಓರ್ವ ವ್ಯಕ್ತಿ ಊಟದ ವೇಳೆ ನುಂಗುವ ಜೊಲ್ಲನ್ನು ಹೊರತುಪಡಿಸಿ ದಿನದ 24 ಗಂಟೆಗಳ ಅವಧಿಯಲ್ಲಿ ಸುಮಾರು 600-800 ಸಲ ಜೊಲ್ಲನ್ನು ನುಂಗುತ್ತಾನೆ. ಹೀಗಾಗಿ ಏಕಾಏಕಿಯಾಗಿ ನುಂಗಲು ಕಷ್ಟವಾದರೆ ಮತ್ತು ಜೊಲ್ಲು ಸುರಿಯತೊಡಗಿದರೆ ಅದು ಸ್ಟ್ರೋಕ್‌ನ ಸ್ಪಷ್ಟ ಲಕ್ಷಣ ವಾಗಿರುತ್ತದೆ.

ಸ್ನಾಯುಗಳು ಪೆಡಸಾಗುವುದು ಆಘಾತದಿಂದ ನಿಮ್ಮ ಸ್ನಾಯುಗಳಿಗೆ ಪೂರೈಕೆ ನರಗಳಿಗೆ ಹಾನಿಯುಂಟಾಗಿದ್ದರೆ ಶರೀರದ ಒಂದು ಅಥವಾ ಹೆಚ್ಚಿನ ಭಾಗಗಳಲ್ಲಿ ಸ್ನಾಯುಗಳು ಪೆಡಸಾಗಬಹುದು ಮತ್ತು ಇದು ಶರೀರದ ಅರ್ಧ ಭಾಗದಲ್ಲಿ ಮಾತ್ರ ಕಾಣಿಸಿಕೊಳ್ಳುತ್ತದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News