ಹೊಸ ವರ್ಷದ ಸಂಕಟ ಮತ್ತು ಸವಾಲುಗಳು
2017ರಲ್ಲಿ ಭಾರತ ಅನೇಕ ದುರಂತಗಳಿಗೆ ಸಾಕ್ಷಿಯಾಯಿತು. ನೋಟು ಅಮಾನ್ಯೀಕರಣದಿಂದ ಆರ್ಥಿಕ ಪಲ್ಲಟಗಳು, ಗೋರಕ್ಷಣೆ ಹೆಸರಿನಲ್ಲಿ ನಡೆದ ಕಗ್ಗೊಲೆಗಳು, ನಮ್ಮ ನಡುವೆ ಓಡಾಡುತ್ತಿದ್ದ ಗೌರಿ ಲಂಕೇಶ್ ಹತ್ಯೆ, ವರ್ಷದ ಕೊನೆಯಲ್ಲಿ ಬಿಜಾಪುರದಲ್ಲಿ ಬಾಲಕಿಯ ಅತ್ಯಾಚಾರ ಮತ್ತು ಕಗ್ಗೊಲೆ. ಇವೆಲ್ಲವುಗಳನ್ನು ಕಟ್ಟಿಕೊಂಡೇ ಮುಂದಿನ ವರ್ಷಕ್ಕೆ ಹೋಗುತ್ತಿದ್ದೇವೆ. ಹೊಸ ವರ್ಷದಲ್ಲೂ ಪರಿಸ್ಥಿತಿ ಸುಧಾರಿಸುವ ಭರವಸೆ ಇಲ್ಲ.
ತೀವ್ರ ಆತಂಕ ಮತ್ತು ದುಗುಡಗಳನ್ನು ಮಡಿಲಲ್ಲಿ ಇಟ್ಟುಕೊಂಡು ಹೊಸ ವರ್ಷ ಪ್ರವೇಶಿಸುತ್ತಿದ್ದೇವೆ. ಕಳೆದ ವರ್ಷದ ಕರಿ ನೆರಳನ್ನು ತಲೆಯ ಮೇಲೆ ಇಟ್ಟುಕೊಂಡು ಮುಂದೆ ಸಾಗುತ್ತಿದ್ದೇವೆ. ಭೂಮಂಡಲವನ್ನೇ ಅನ್ವೇಷಿಸುವಷ್ಟು ಮುಂದುರವರಿದ ಮನುಷ್ಯ ತನ್ನ ಸಹಜೀವಿಗಳೊಂದಿಗೆ ಬದುಕುವುದನ್ನು ಕಲಿಯಲಿಲ್ಲ. ಸೃಷ್ಟಿಯೊಂದಿಗೆ ಸಹಬಾಳ್ವೆ ಕೂಡ ನಡೆಸಲು ಆಗಲಿಲ್ಲ. ಹೀಗಾಗಿ ನಾನಾ ಸಮಸ್ಯೆ, ಸಂಕಟಗಳನ್ನು ಕಟ್ಟಿಕೊಂಡು ಹೆಣಗಾಡುತ್ತಿದ್ದೇವೆ. ನಮ್ಮಲ್ಲಿ ಆಗಾಗ ಕೇಳಿ ಬರುವ ಶಾಂತಿ, ಸಹನೆ ಮತ್ತು ಸಹಬಾಳ್ವೆ ಎಂಬ ಶಬ್ದಗಳು ಮಹಾತ್ಮರ ಉಪದೇಶಗಳಾಗಿ ಮಾತ್ರ ಉಳಿದಿವೆ.
ಸೋವಿಯತ್ ರಶ್ಯದ ಸಮಾಜವಾದಿ ವ್ಯವಸ್ಥೆ ಕುಸಿದು ಬಿದ್ದ ನಂತರ ಸಮಸುಖದ ಮತ್ತು ಸಮ ಬದುಕಿನ ಕನಸು ಕೂಡ ಭಗ್ನವಾಗಿದೆ. ಮನುಷ್ಯರೊಳಗಿನ ಅಸಮಾನತೆ, ಅಸಹನೆ ಹೆಚ್ಚುತ್ತಲೇ ಇದೆ. ಈ ಭೂಮಿಯು ಕೂಡ ಮನುಷ್ಯರ ಭಾರದಿಂದ ಬಸವಳಿದಿದೆ. ಈ ಪೃಥ್ವಿಯಲ್ಲಿ ಬದುಕು ಸುರಕ್ಷಿತವಲ್ಲ. ಮುಂದಿನ 100 ವರ್ಷದೊಳಗೆ ಅನ್ಯ ಗ್ರಹಕ್ಕೆ ವಲಸೆ ಹೋಗುವ ಪರಿಸ್ಥಿತಿ ಎದುರಾಗುವುದೆಂದು ಖ್ಯಾತ ಬೌತಶಾಸ್ತ್ರಜ್ಞ ಸ್ಟೀಪನ್ ಹಾಕಿಂಗ್ ಹೇಳಿದ್ದಾರೆ.
ಕಳೆದ ವರ್ಷದ ಗಾಯಗಳನ್ನು ಇಟ್ಟುಕೊಂಡು ಹೊಸ ವರ್ಷವನ್ನು ಸಂಭ್ರಮಿಸಲು ಮನಸ್ಸು ಆಗುತ್ತಿಲ್ಲ. 2017ರಲ್ಲಿ ಭಾರತ ಪಾಲಿಗಂತೂ ಅನೇಕ ದುರಂತಗಳಿಗೆ ಸಾಕ್ಷಿಯಾಯಿತು. ನೋಟು ಅಮಾನ್ಯೀಕರಣದಿಂದ ಆರ್ಥಿಕ ಪಲ್ಲಟಗಳು, ಗೋರಕ್ಷಣೆ ಹೆಸರಿನಲ್ಲಿ ನಡೆದ ಕಗ್ಗೊಲೆಗಳು, ನಮ್ಮ ನಡುವೆ ಓಡಾಡುತ್ತಿದ್ದ ಗೌರಿ ಲಂಕೇಶ್ ಹತ್ಯೆ, ವರ್ಷದ ಕೊನೆಯಲ್ಲಿ ಬಿಜಾಪುರದಲ್ಲಿ ಬಾಲಕಿಯ ಅತ್ಯಾಚಾರ ಮತ್ತು ಕಗ್ಗೊಲೆ. ಇವೆಲ್ಲವುಗಳನ್ನು ಕಟ್ಟಿಕೊಂಡೇ ಮುಂದಿನ ವರ್ಷಕ್ಕೆ ಹೋಗುತ್ತಿದ್ದೇವೆ. ಹೊಸ ವರ್ಷದಲ್ಲೂ ಪರಿಸ್ಥಿತಿ ಸುಧಾರಿಸುವ ಭರವಸೆ ಇಲ್ಲ. ಯಾಕೋ ರಾಜಕೀಯದ ಬಗ್ಗೆ ಬರೆಯಲು ಬೇಸರವಾಗುತ್ತದೆ. ನಮ್ಮೆಳಗೆ ನಾವು ಹೊಡೆದಾಡಿಕೊಳ್ಳುವುದು ಒತ್ತಟ್ಟಿಗಿರಲಿ, ನಮ್ಮನ್ನು ಸಲಹಿದ ಭೂಮಿಯನ್ನಾದರೂ ಸುರಕ್ಷಿತವಾಗಿ ಇಟ್ಟಿದ್ದೇವೆಯೇ ಎಂಬುದರ ಬಗ್ಗೆ ಆಲೋಚಿಸಬೇಕಿದೆ.
ಮತ್ತೆ ಸ್ಟೀಪನ್ ಹಾಕಿಂಗ್ ಮಾತು ನೆನಪಿಗೆ ಬರುತ್ತದೆ. ಹವಾಮಾನ ವೈಪರೀತ್ಯ, ಬಾಹ್ಯಾಕಾಶದಲ್ಲಿ ಚಲಿಸುತ್ತಿರುವ ಕ್ಷುದ್ರ ಗ್ರಹಗಳು ಭೂಮಿಗೆ ಅಪ್ಪಳಿಸುವ ಸಾಧ್ಯತೆ, ಸಾಂಕ್ರಾಮಿಕ ರೋಗಗಳು, ಹೆಚ್ಚುತ್ತಿರುವ ಜನಸಂಖ್ಯೆ, ಉಳ್ಳವರ ದುರಾಸೆ ಇವೆಲ್ಲದರ ಪರಿಣಾಮವಾಗಿ ಭೂಮಿಯ ಮೇಲಿನ ಮನುಷ್ಯರ ಬದುಕು ದಿನದಿಂದ ದಿನಕ್ಕೆ ಅತಂತ್ರ ಆಗುತ್ತಿದೆ. ಹಾಕಿಂಗ್ ಹೇಳುವ ಈ ಮಾತು ಕನ್ನಡದ ಟಿವಿ ಚಾನೆಲ್‌ಗಳಲ್ಲಿ ಬರುವ ಕಟ್ಟು ಕತೆಯಲ್ಲ. 75 ವರ್ಷದ ಸ್ಟೀಪನ್ ಹಾಕಿಂಗ್ ನಮ್ಮ ನಡುವಿನ ಬುದ್ಧಿವಂತ ವ್ಯಕ್ತಿ.
ಮನುಕುಲ ಎದುರಿಸುತ್ತಿರುವ ಗಂಡಾಂತರಗಳ ಬಗ್ಗೆ ಸ್ಟೀಪನ್ ಹಾಕಿಂಗ್ ಹಿಂದೆಯೂ ಅನೇಕ ಬಾರಿ ಮಾತನಾಡಿದ್ದಾರೆ. 2016ರ ನವೆಂಬರ್‌ನಲ್ಲಿ ಆಕ್ಸ್‌ಫರ್ಡ್ ವಿಶ್ವವಿದ್ಯಾನಿಲಯದಲ್ಲಿ ಅವರು ಉಪನ್ಯಾಸ ನೀಡುತ್ತ, ಮನುಕುಲಕ್ಕೆ ಈ ಭೂಮಿ ಸುರಕ್ಷಿತವಲ್ಲ. ಇನ್ನು ಸಾವಿರ ವರ್ಷಗಳಲ್ಲಿ ಹೊಸ ಗ್ರಹ ಹುಡುಕಿಕೊಂಡು ಮನುಷ್ಯ ಹೋಗಬೇಕಾಗುತ್ತದೆ ಎಂದು ಹೇಳಿದ್ದರು. ಕೇವಲ ಒಂದು ವರ್ಷದ ಹಿಂದೆ ಒಂದು ಸಾವಿರ ವರ್ಷದ ಸಮಯ ನಿಗದಿಪಡಿಸಿದ್ದ ಹಾಕಿಂಗ್ ಈಗ ನೂರು ವರ್ಷಗಳಲ್ಲಿ ಬೇರೆ ಗ್ರಹಕ್ಕೆ ಹೋಗಿ ಬದುಕು ಕಟ್ಟಿಕೊಳ್ಳಬೇಕು ಎಂದು ಹೇಳುತ್ತಿದ್ದಾರೆ.
ನಾವು ನೆಲೆಸಿದ ಭೂಮಿಯ ಸ್ಥಿತಿ ಹೀಗಿರುವಾಗ, ಆ ಬಗ್ಗೆ ಯೋಚಿಸದೆ ಜಾತಿ, ಧರ್ಮ, ಭಾಷೆಯೆಂದು ಕಿತ್ತಾಡುತ್ತಿದ್ದೇವೆ. ನಮ್ಮ ಜನಪ್ರತಿನಿಧಿಯೊಬ್ಬರು ಜಾತ್ಯತೀತರ ಅಪ್ಪ, ಅಮ್ಮ ಯಾರು ಎಂದು ಹಾಗೂ ನಿಮ್ಮ ಜಾತಿ ಯಾವುದೆಂದು ಕೇಳುವಷ್ಟು ಕೀಳು ಮಟ್ಟಕ್ಕೆ ಇಳಿದಿದ್ದಾರೆ. ಇಂಥ ಸವಾಲುಗಳು ಕ್ಷುದ್ರ ಜೀವಿಗಳಿಂದ ಆಗಾಗ ಎದುರಾಗುತ್ತಲೇ ಬಂದಿವೆೆ. ಕೇವಲ 900 ವರ್ಷಗಳ ಹಿಂದೆ ಇದೇ ಪ್ರಶ್ನೆ ಬಸವಣ್ಣನವರಿಗೆ ಎದುರಾದಾಗ, ತಾನು ಹುಟ್ಟಿದ ಜಾತಿಯನ್ನು ಧಿಕ್ಕರಿಸಿದ ಅವರು ತಮ್ಮನ್ನು ಮಾದಾರ ಚನ್ನಯ್ಯನ ಮಗ ಎಂದು ಕರೆದುಕೊಂಡಿದ್ದರು.
ನಿತ್ಯವೂ ಜಾತಿ, ಮತದ ಅಮೇಧ್ಯದಲ್ಲಿ ಉರುಳಾಡುವ ಕ್ಷುದ್ರ ಜಂತುಗಳಿಗೆ ಈ ಭೂಮಿಯ ಪಲ್ಲಟಗಳು ಅರ್ಥವಾಗುತ್ತಿಲ್ಲ. ಎಲ್ಲಾದರೂ ಭೂಕಂಪವಾದರೆ, ಸುನಾಮಿ ಬಂದರೆ ಯಜ್ಞ, ಹೋಮ ಮಾಡಿ ಹೊಗೆಯಬ್ಬಿಸುವ ಇಂಥವರಿಗೆ ನೈಸರ್ಗಿಕ ಪ್ರಕೋಪಗಳಿಗೆ ಮನುಷ್ಯನೇ ಕಾರಣ ಎಂಬುದು ಅರ್ಥವಾಗುತ್ತಿಲ್ಲ. ಅಭಿವೃದ್ಧಿಯ ಅಟ್ಟಹಾಸದಲ್ಲಿ ನಿಸರ್ಗದ ಮೇಲೆ ನಿತ್ಯವೂ ಅತ್ಯಾಚಾರ ನಡೆಯುತ್ತಿದೆ.
ಈ ಭೂಮಿಯ ಮೇಲೆ ಮನುಷ್ಯ ಸಹಸ್ರಾರು ವರ್ಷಗಳಿಂದ ಬದುಕಿದ್ದಾನೆ. ಆದರೆ ಕಳೆದ 300 ವರ್ಷಗಳಲ್ಲಿ ಕೈಗಾರಿಕಾ ಕ್ರಾಂತಿಯ ನಂತರ ಈ ನಿಸರ್ಗ ಘಾಸಿಗೆ ಒಳಗಾದಷ್ಟು ಹಿಂದೆಂದೂ ಆಗಿಲ್ಲ. ಲಂಗುಲಗಾಮಿಲ್ಲದ ಗಣಿಗಾರಿಕೆಯಿಂದ ಸಸ್ಯ, ಸಂಪತ್ತು ನಾಶವಾಗುತ್ತಿದೆ. ನೀರಿನ ಸೆಲೆಗಳು ಬತ್ತಿ ಹೋಗಿ, ಭೂಮಿ ಕಾವೇರುತ್ತಿದೆ. ಬಿಸಿಲಿನ ಪ್ರಮಾಣ ವರ್ಷದಿಂದ ವರ್ಷಕ್ಕೆ ಹೆಚ್ಚಾಗುತ್ತಿದೆ. ಹೀಗೆ ಆಗುವುದೆಂದು ವಿಜ್ಞಾನಿಗಳು ಎಚ್ಚರಿಸಿದರೂ ಬಂಡವಾಳಶಾಹಿಗಳ ಲಾಭಕೋರತನದ ಪ್ರತೀಕವಾದ ಟ್ರಂಪ್‌ನಂತಹವರು ಇದಕ್ಕೆ ಕಿವಿಗೊಡುತ್ತಿಲ್ಲ. ನಮ್ಮ ದೇಶವನ್ನೇ ಉದಾಹರಣೆಯಾಗಿ ತೆಗೆದುಕೊಂಡರೆ, ಶತಮಾನಗಳಿಂದ ನಮ್ಮ ಪೂರ್ವಜರ ಬಾಯಾರಿಕೆ ಇಂಗಿಸಿದ ನದಿಗಳು ಈಗ ಪರಿಶುದ್ಧವಾಗಿ ಉಳಿದಿಲ್ಲ. ಎಲ್ಲಾ ನದಿಗಳು ಕಲ್ಮಶವಾಗಿವೆ. ಈ ನದಿಗಳ ನೀರನ್ನು ಕುಡಿಯುವುದು ಅಪಾಯಕಾರಿ ಮಾತ್ರವಲ್ಲ, ಇಲ್ಲಿ ಸ್ನಾನ ಮಾಡವುದು ಕೂಡ ಆರೋಗ್ಯಕ್ಕೆ ಹಾನಿಕರ ಎಂದು ವೈದ್ಯಕೀಯ ವರದಿಗಳು ಹೇಳುತ್ತವೆ. ಮಲಿನಗೊಂಡ ನೀರಿನಲ್ಲಿ ಜಲಚರಗಳು ಸತ್ತು ಹೋಗುತ್ತಿರುವುದೇ ಇದಕ್ಕೆ ಉದಾಹರಣೆ.
ಗಂಗಾ ನದಿಯಿಂದ ಕಾವೇರಿಯವರೆಗೆ ಯಾವ ನೀರು ಕೂಡ ಪರಿಶುದ್ಧವಾಗಿ ಉಳಿದಿಲ್ಲ. ನದಿಗಳ ದಡದಲ್ಲಿ ವೇಗವಾಗಿ ಬೆಳೆಯುತ್ತಿರುವ ನಗರಗಳು ಮತ್ತು ಉದ್ಯಮಗಳಿಂದಾಗಿ ನದಿ ನೀರು ಮಲಿನವಾಗುತ್ತಿದೆ. ಅಭಿವೃದ್ಧಿಯ ಹುಚ್ಚು ಹಿಡಿದ ನಮ್ಮ ಪ್ರಭುತ್ವಕ್ಕೆ ನದಿ ನೀರನ್ನು ಮಲಿನಗೊಳಿಸುವ ಉದ್ಯಮಗಳಿಗೆ ಕಡಿವಾಣ ಹಾಕುವ ಮನಸ್ಸಿಲ್ಲ. ನಮ್ಮ ನಾಡಿನ ರಾಜಧಾನಿ ಬೆಂಗಳೂರಿನ ಜನ ಕುಡಿಯುವ ಕಾವೇರಿ ನದಿ ನೀರಿಗೂ ಕೊಳಚೆ ನೀರು ಸೇರ್ಪಡೆಯಾಗುತ್ತದೆ ಎಂದು ಕೊಳಚೆ ನಿರ್ಮೂಲನಾ ಮಂಡಳಿಯ ವರದಿಗಳು ತಿಳಿಸುತ್ತವೆ. ಇನ್ನು ನಮ್ಮ ನಾಡಿನ ಕೃಷ್ಣ, ಘಟಪ್ರಭ, ಕಾರಂಜಾ, ನೇತ್ರಾವತಿ, ಭೀಮಾ ಎಷ್ಟು ಸುರಕ್ಷಿತ ಎಂಬುದರ ಬಗ್ಗೆ ಸಂಶೋಧನೆಗಳು ನಡೆದಿಲ್ಲ.
ಇನ್ನು ನೂರಾರು ವರ್ಷಗಳಿಂದ ನಮ್ಮ ಹಳ್ಳಿಗಳನ್ನು, ಪಟ್ಟಣಗಳನ್ನು ಸಾಕಿ ಸಲಕಿದ ಕೆರೆ, ಬಾವಿಗಳನ್ನು ನಾಶ ಮಾಡಿದ್ದೇವೆ. ನಮ್ಮ ರಾಜಧಾನಿ ಬೆಂಗಳೂರನ್ನೇ ಉದಾಹರಣೆಯಾಗಿ ತೆಗೆದುಕೊಂಡರೆ, ಟಿಪ್ಪು ಸುಲ್ತಾನ್, ಕೆಂಪೇಗೌಡ ನಿರ್ಮಿಸಿದ ಕೆರೆಗಳ ಸಮಾಧಿ ಮೇಲೆ ಬಹುಅಂತಸ್ತಿನ ಕಟ್ಟಡಗಳು ತಲೆಯೆತ್ತಿವೆ.ಕೆಲ ಕಡೆ ಅತಿಕ್ರಮಣಗೊಂಡಿವೆ. ಹೂಳು ತುಂಬಿ ಕೆರೆಗಳು ಹಾಳಾಗುತ್ತಿವೆ. ಮರಳು ಗಣಿಗಾರಿಕೆಯಿಂದ ನಮ್ಮ ನದಿಗಳು ಏದುಸಿರು ಬಿಡುತ್ತಿವೆ. ಅಂತರ್ಜಲ ಮಟ್ಟ ಕುಸಿಯುತ್ತಿದೆ.
ನಾವೀಗ ಒಪ್ಪಿಕೊಂಡಿರುವ ಬಂಡವಾಳಶಾಹಿ ಮಾದರಿ ಅಭಿವೃದ್ಧಿಯಿಂದ ನೀರು, ಗಾಳಿ, ಆಹಾರ ಹೀಗೆ ಎಲ್ಲವೂ ಮಾಲಿನ್ಯಕ್ಕೆ ಒಳಗಾಗಿವೆ. ಉಸಿರಾಡುವ ಗಾಳಿ, ಕುಡಿಯುವ ನೀರು ಮಲಿನಗೊಂಡರೆ ನಾವು ಬದುಕುವುದಾದರೂ ಹೇಗೆ? ಅಧಿಕೃತ ಅಂಕಿ ಅಂಶಗಳ ಪ್ರಕಾರ, 2015ರಲ್ಲಿ ನಮ್ಮ ದೇಶದಲ್ಲಿ ಮಾಲಿನ್ಯದಿಂದ 26 ಲಕ್ಷ ಜನ ಸಾವಿಗೀಡಾಗಿದ್ದಾರೆ. ಈ ಪೈಕಿ 16 ಲಕ್ಷ ಜನರ ಸಾವಿಗೆ ವಾಯು ಮಾಲಿನ್ಯವೇ ಮುಖ್ಯ ಕಾರಣ.
ಇನ್ನೊಂದೆಡೆ ನಮ್ಮ ಸಾಮಾಜಿಕ ಜೀವನದಲ್ಲಿ ಅಸಮಾನತೆಯ ಕಂದಕ ಹೆಚ್ಚಾಗುತ್ತಿದೆ. ನಮ್ಮ ಭಾರತವನ್ನೇ ಉದಾಹರಣೆಯಾಗಿ ತೆಗೆದುಕೊಂಡರೆ, ಇಲ್ಲಿ ಎಲ್ಲರಿಗೂ ಸೇರಬೇಕಾದ ನಿಸರ್ಗ ಸಂಪತ್ತಿನ ಮೇಲೆ ಬೆರಳೆಣಿಕೆಯಷ್ಟು ಶ್ರೀಮಂತರು ಹಿಡಿತ ಸಾಧಿಸಿದ್ದಾರೆ. ಒಂದೆಡೆ ಶ್ರೀಮಂತರ ಅಟ್ಟಹಾಸ, ಇನ್ನೊಂದೆಡೆ ಹಸಿವಿನ ಹಾಹಾಕಾರ ಕೇಳಿ ಬರುತ್ತಿದೆ. ಹಸಿದು ಕಂಗಾಲಾದ 119 ದೇಶಗಳಲ್ಲಿ ಭಾರತ 100ನೇ ಸ್ಥಾನದಲ್ಲಿದೆ.
ನಾಶವಾಗುತ್ತಿರುವ ನೈಸರ್ಗಿಕ ಪರಿಸರ, ಭಯಾನಕ ಆಗುತ್ತಿರುವ ಅಸಮಾನತೆ, ಎಲ್ಲೆಡೆ ಕೇಳಿ ಬರುತ್ತಿರುವ ಹಸಿವಿನ ಆಕ್ರಂದನ, ವಾಯುಮಾಲಿನ್ಯದಿಂದ ಉಂಟಾಗುತ್ತಿರುವ ಸಾವುಗಳು, ಋತುಮಾನಗಳಲ್ಲಿ ಉಂಟಾಗುತ್ತಿರುವ ಏರುಪೇರು ಈಗ ನಮ್ಮ ನಡುವೆ ಚರ್ಚೆಯ ವಿಷಯವಾಗಿ ಉಳಿದಿಲ್ಲ. ಮಾಧ್ಯಮಗಳಿಗೂ ಇದು ಬೇಕಾಗಿಲ್ಲ.
ನಾವು ನಿಂತ ನೆಲೆಯೇ ಕುಸಿಯುತ್ತಿರುವಾಗ, ಕುಡಿಯುವ ನೀರು ವಿಷವಾಗುತ್ತಿರುವಾಗ, ಉಸಿರಾಡುವ ಗಾಳಿ ನಮ್ಮ ಪ್ರಾಣ ತೆಗೆಯುತ್ತಿರುವಾಗ ಆ ಬಗ್ಗೆ ಚರ್ಚಿಸದೆ ಕೆಲಸಕ್ಕೆ ಬಾರದ ಭಾವನಾತ್ಮಕ ವಿಷಯಗಳಲ್ಲಿ ಮುಳುಗುವಂತೆ ನಮ್ಮನ್ನು ವ್ಯವಸ್ಥಿತವಾಗಿ ದಾರಿ ತಪ್ಪಿಸಲಾಗಿದೆ.
ನಮ್ಮ ನದಿಗಳನ್ನು, ಕೆರೆಗಳನ್ನು, ಪರಿಸರವನ್ನು ಕಾಪಾಡಬೇಕಾದ ನಾವು ಮಂದಿರ ನಿರ್ಮಾಣ, ಗೋರಕ್ಷಣೆ, ಮತಾಂತರ ಮುಂತಾದ ಅರ್ಥವಿಲ್ಲದ ಭಾವನಾತ್ಮಕ ವಿಷಯಗಳಿಗಾಗಿ ಕಚ್ಚಾಡುತ್ತಿದ್ದೇವೆ. ಕಳೆದ ವರ್ಷ ಈ ದೇಶದಲ್ಲಿ ದನ ರಕ್ಷಣೆ ಹೆಸರಿನಲ್ಲಿ 11 ಜನರನ್ನು ಕೊಚ್ಚಿ ಕೊಂದು ಹಾಕಲಾಯಿತು. ಗೋರಕ್ಷಣೆ ಹೆಸರಿನಲ್ಲಿ ನಡೆಯುತ್ತಿರುವ ಕೊಲೆಗಳನ್ನು ನಿಲ್ಲಿಸಿಯೆಂದು ಪ್ರಧಾನಿಯವರು ಕರೆ ನೀಡಿದ ದಿನವೇ ರಾಂಚಿ ಸಮೀಪದ ರಾಮಘಡದಲ್ಲಿ ಅಲೀಮುದ್ದೀನ್ ಎಂಬ ವ್ಯಕ್ತಿಯನ್ನು ಉದ್ರಿಕ್ತ ಗುಂಪೊಂದು ಹತ್ಯೆ ಮಾಡಿತು. ಕೈಯಲ್ಲಿರುವ ಚೀಲದಲ್ಲಿ ಗೋಮಾಂಸ ಹೊಂದಿದ ನೆಪ ಮುಂದೆ ಮಾಡಿ, ಜುನೈದ್ ಎಂಬ 11 ವರ್ಷದ ಬಾಲಕನನ್ನು ಹರ್ಯಾಣದಲ್ಲಿ ಚಾಕುವಿನಿಂದ ಇರಿದು ಕೊಲ್ಲಲಾಯಿತು. ಹೊಸ ವರ್ಷದಲ್ಲಿ ಈ ಹತ್ಯೆಗಳು ನಿಲ್ಲುತ್ತವೆ ಎಂಬುದರ ಬಗ್ಗೆ ಭರವಸೆ ಇಲ್ಲ.
ಇಂಥ ಸ್ಥಿತಿಯಲ್ಲಿ ನಮ್ಮ ನೈಸರ್ಗಿಕ ಪರಿಸರ, ವಾಯು ಮಾಲಿನ್ಯ, ಜಲಮಾಲಿನ್ಯದ ಬಗ್ಗೆ ಎಲ್ಲಿಯೂ ಚರ್ಚೆ ನಡೆಯತ್ತಿಲ್ಲ. ಹಸಿವಿನಿಂದ ಮನುಷ್ಯರು ಸಾಯುತ್ತಿರುವ ಬಗ್ಗೆ, ನಮ್ಮ ಪುಟ್ಟ ಮಕ್ಕಳು ಅತ್ಯಾಚಾರ ಆಗುತ್ತಿರುವ ಬಗ್ಗೆ ಉಡುಪಿಯ ಧರ್ಮ ಸಂಸದ್‌ನಲ್ಲೂ ಚರ್ಚೆ ನಡೆಯಲಿಲ್ಲ. ಅದರ ಬದಲು ಧರ್ಮ ರಕ್ಷಣೆಗಾಗಿ ಧರ್ಮ ಸಂಸದ್‌ನಲ್ಲಿ ತಲವಾರು ಹಿಡಿಯಬೇಕು ಮತ್ತು ಒಬ್ಬೊಬ್ಬರು ಹತ್ತು ಮಕ್ಕಳನ್ನು ಹಡೆಯಬೇಕು ಎಂದು ಕರೆ ನೀಡಲಾಯಿತು.
ಈವರೆಗೆ ನಮ್ಮನ್ನೆಲ್ಲ ಕಾಯುತ್ತ ಬಂದ ಒರೆನ್ ಕವಚ ತೆಳುವಾಗುತ್ತಿದೆ. ಬಿಸಿಲಿನ ಪ್ರಖರತೆಯಿಂದ ವಾತಾವರಣ ಹದಗೆಡುತ್ತಿದೆ. ಇದನ್ನು ತಡೆಯುವ ವೈಜ್ಞಾನಿಕ ಉಪಕ್ರಮಗಳಿಗೆ ಅಮೆರಿಕದ ಅಧಿಕಾರ ಹಿಡಿದು ಕೂತ ಟ್ರಂಪ್‌ನಂತಹ ಉದ್ಯಮಿಗಳು ಅಡ್ಡ ಹಿಡಿದು ಕೂತಿದ್ದಾರೆ. ಅವರಿಗೆ ಇದ್ಯಾವುದರ ಬಗ್ಗೆಯೂ ಅರಿವಿಲ್ಲ. ನಮ್ಮ ಪ್ರಧಾನಿ ಉದ್ಯಮಿ ಅಲ್ಲವಾದರೂ ಉದ್ಯಮಪತಿಗಳ ಹಿತರಕ್ಷಣೆ ಅವರಿಗೆ ಮುಖ್ಯವಾಗಿದೆ.
ಜಗತ್ತಿನ ಇಂದಿನ ದುರವಸ್ಥೆಗೆ ಲಾಭಕೋರ ಬಂಡವಾಳಶಾಹಿ ಆರ್ಥಿಕತೆಯೇ ಕಾರಣ. ಆಸರೆ ನೀಡಿದ ನಿಸರ್ಗವನ್ನು ಮತ್ತು ಸಹಜೀವಿಗಳನ್ನು ಏಕಕಾಲದಲ್ಲಿ ದೋಚುವ ಈ ಕೆಟ್ಟ ವ್ಯವಸ್ಥೆ ಕೊನೆಗಾಣಿಸಿದಾಗಲೇ ಜಗತ್ತು ಇಂದಿನ ಸಂಕಟದಿಂದ ಪಾರಾಗಬಹುದು.
ಈ ವಿಶ್ವದ ಸಂಪತ್ತಿನ ಸಮಾನ ಹಂಚಿಕೆಯಾಗಬೇಕು. ಲಾಭಕ್ಕಾಗಿ ನಡೆದಿರುವ ನಿಸರ್ಗದ ಲೂಟಿಯನ್ನು ತಡೆಯಬೇಕು. ನಮ್ಮ ಜಲಮೂಲಗಳು ಮತ್ತು ಹವಾಾನದ ರಕ್ಷಣೆಗಾಗಿ ನಾವು ಆದ್ಯತೆ ನೀಡಬೇಕು. ಬಂಡವಾಳಶಾಹಿ ವ್ಯವಸ್ಥೆಗೆ ಪರ್ಯಾಯ ರೂಪಿಸಲು ಹೊರಟ ಎಡಪಕ್ಷಗಳಿಗೂ ಕೂಡ ಸ್ಪಷ್ಟವಾದ ನಿರ್ದಿಷ್ಟ ಪರಿಸರ ದೋರಣೆ ಇಲ್ಲ. 18ನೇ ಶತಮಾನದ ಕಾರ್ಲ್‌ಮಾಕ್ಸ್‌ರ್ ಗೆ ಪರಿಸರ ಹೀಗಾಗುವುದೆಂದು ಊಹಿಸಲೂ ಸಾಧ್ಯವಿರಲಿಲ್ಲ. ಅಂತಲೇ ಬದಲಾದ ಸನ್ನಿವೇಶಕ್ಕೆ ತಕ್ಕಂತೆ ಹೊಸ ಕಾರ್ಯಸೂಚಿಯನ್ನೂ ಪರ್ಯಾಯ ವ್ಯವಸ್ಥೆಯನ್ನು ಕಟ್ಟಲು ಹೊರಟವರು ರೂಪಿಸಬೇಕಿದೆ.