ಡಯಾಬಿಟಿಕ್ ರೆಟಿನೋಪಥಿ: ಕಾಲ ಮಿಂಚಿಹೋಗುವ ಮುನ್ನ ನಿಮ್ಮ ಕಣ್ಣುಗಳ ಕಾಳಜಿ ವಹಿಸಿ
ನಿಮಗೆ ಡಯಾಬಿಟಿಕ್ ರೆಟಿನೋಪಥಿ ಸಮಸ್ಯೆ ಇದೆಯೇ ಎಂದು ತಿಳಿಯಲು ಬೇಕಾಗುವುದು 10 ನಿಮಿಷದ ಅಕ್ಷಿಪಟಲ ಪರೀಕ್ಷೆ. ಹಾಗಿದ್ದಾಗ ಅದನ್ನು ಗುಣಪಡಿಸಲಾಗದ ಹಂತಕ್ಕೆ ಬೆಳೆಯುವವರೆಗೂ ನೀವು ಏಕೆ ಅವಕಾಶ ನೀಡಬೇಕು? ಕಣ್ಣಿನ ದೃಷ್ಟಿ ಇಲ್ಲವೆಂದಾದರೆ ಮಧುಮೇಹವನ್ನು ನಿಯಂತ್ರಿಸಿ ಕೂಡಾ ಏನು ಪ್ರಯೋಜನ ?
ರಾಕೇಶ್ (ಹೆಸರು ಬದಲಿಸಲಾಗಿದೆ) ಎಂಬ 46 ವರ್ಷದ ಉದ್ಯಮಿ ಆರು ವರ್ಷಗಳಿಂದ ಮಧುಮೇಹ ಚಿಕಿತ್ಸೆ ಪಡೆಯುತ್ತಿದ್ದರು. ಒಂದು ದಿನ ಅವರಿಗೆ ಬಲಗಣ್ಣಿನ ಮುಂಭಾಗದಲ್ಲಿ ಕಪ್ಪುಚುಕ್ಕೆ ಕಾಣಿಸಿಕೊಂಡಿತು. ಆ ಕ್ಷಣದಲ್ಲಿ ಅವರು ಅದನ್ನು ನಿರ್ಲಕ್ಷಿಸಿದರು. ಆದರೆ ನಿಧಾನವಾಗಿ ಈ ಕಪ್ಪುಚುಕ್ಕೆ ದೊಡ್ಡದಾಗುತ್ತಾ ಹೋಯಿತು. ದೃಷ್ಟಿ ಪರೀಕ್ಷೆ ಮಾಡಿಸಿದಾಗ, ಅವರಿಗೆ ಪ್ರಸರಣದ ಮಧುಮೇಹ ರೆಟಿನೋಪಥಿ ರೋಗ ಇರುವುದು ಪತ್ತೆಯಾಯಿತು. ಇದು ಮಧುಮೇಹ ಆರಂಭದ ಬಳಿಕ ಯಾವುದೇ ಹಂತದಲ್ಲಿ ಬರುವ ರೋಗ. ಅವರಿಗೆ ಲೇಸರ್ ಚಿಕಿತ್ಸೆ ನೀಡಲಾಯಿತು ಹಾಗೂ ಕೆಲ ತಿಂಗಳ ನಿರಂತರ ಚಿಕಿತ್ಸೆ ಬಳಿಕ ಅವರ ದೃಷ್ಟಿ ಸುಸ್ಥಿತಿಗೆ ಬಂತು.
ಇಲ್ಲಿ ಇನ್ನೊಂದು ನಿದರ್ಶನವಿದೆ. ಸುರೇಶ್ (ಹೆಸರು ಬದಲಿಸಿದೆ) ಅವರು 15 ವರ್ಷಗಳಿಂದ ಅಧಿಕ ರಕ್ತದೊತ್ತಡ (ಬಿಪಿ) ಹಾಗೂ ಮಧುಮೇಹಕ್ಕೆ ಚಿಕಿತ್ಸೆ ಪಡೆಯುತ್ತಿದ್ದರು. ದೀರ್ಘಕಾಲದಿಂದಲೂ ಅವರ ದೃಷ್ಟಿ ಮಂದವಾಗಿತ್ತು. ನೇತ್ರ ತಜ್ಞರು ಅವರಿಗೆ ಕಣ್ಣು ಪರೀಕ್ಷೆ ಮಾಡಿಸಿಕೊಳ್ಳುವಂತೆ ಸಲಹೆ ನೀಡಿದರು. ಆದರೆ ಅವರು ನಿರ್ಲಕ್ಷಿಸಿದರು. ಅವರಿಗೆ ಸ್ವಲ್ಪ ಸಮಯದ ನಂತರ ಏನನ್ನೂ ನೋಡಲಾಗದ ಸ್ಥಿತಿ ನಿರ್ಮಾಣವಾಯಿತು. ದೈನಂದಿನ ಕೆಲಸ ಕಾರ್ಯಗಳಿಗೆ ಕೂಡಾ ಇತರರನ್ನು ಅವಲಂಬಿಸುವಂತಾಯಿತು. ಮಧುಮೇಹದಿಂದಾಗುವ ಅಕ್ಷಿಪಟಲದ ಸಮಸ್ಯೆ ಎಷ್ಟು ತೀವ್ರವಾಗಿತ್ತು ಎಂದರೆ ಲೇಸರ್ ಚಿಕಿತ್ಸೆಯಿಂದಲೂ ಗುಣಪಡಿಸಲಾಗದ ಸ್ಥಿತಿಗೆ ಬಂದಿತ್ತು. ಶಸ್ತ್ರಚಿಕಿತ್ಸೆ ನಡೆಸುವುದು ಅನಿವಾರ್ಯವಾಯಿತು.
ಪ್ರತಿಯೊಬ್ಬರೂ ರಾಕೇಶ್ ಮತ್ತು ಸುರೇಶ್‌ನಂತೆ ರೋಗಮುಕ್ತರಾಗುವಷ್ಟು ಅದೃಷ್ಟಶಾಲಿಗಳಲ್ಲ. ಕೆಲವರಿಗೆ ಮಧುಮೇಹ ರೆಟಿನೋಪಥಿಯಿಂದಾಗಿ ಗುಣಪಡಿಸಲಾಗದ ಪ್ರಮಾಣಕ್ಕೆ ದೃಷ್ಟಿಮಾಂದ್ಯತೆ ಬೆಳೆದು ಬಿಡುತ್ತದೆ.
ಜೀವನಶೈಲಿ ಹಾಗೂ ಆಹಾರಪದ್ಧತಿಯಲ್ಲಿ ಬದಲಾವಣೆಯಿಂದಾಗಿ ರೆಟಿನೋಪಥಿ, ಕಣ್ಣಿನ ಆರೋಗ್ಯಕ್ಕೆ ಗಂಭೀರ ಬೆದರಿಕೆಯಾಗಿ ಕಾಡುತ್ತಿದೆ.
ಭಾರತದಲ್ಲಿ ಅಂದಾಜು 4 ಕೋಟಿ ಮಧುಮೇಹಿಗಳು (diabetes.co.uk) ಇದ್ದಾರೆ. ಅಂದರೆ ಇಡೀ ವಿಶ್ವದಲ್ಲೇ ಗರಿಷ್ಠ ಸಂಖ್ಯೆಯ ಮಧುಮೇಹಿಗಳನ್ನು ಹೊಂದಿರುವ ದೇಶ ಭಾರತ. ಇಷ್ಟು ಮಾತ್ರವಲ್ಲದೆ ಮಧುಮೇಹ ತೀರಾ ಎಳೆ ವಯಸ್ಸಿನವರ ಜೀವನದಲ್ಲಿ ಕಂಡು ಬರುತ್ತಿರುವುದರಿಂದ ದೀರ್ಘಾವಧಿಯಲ್ಲಿ ತೀವ್ರತರ ಸಂಕೀರ್ಣತೆಗಳಿಗೆ ಇದು ಕಾರಣವಾಗುತ್ತಿದೆ.
ಭಾರತದಲ್ಲಿ 2025ರ ವೇಳೆಗೆ 1. 2 ಕೋಟಿ ಮಂದಿ ಮಧುಮೇಹ ಅಕ್ಷಿಪಟಲ ರೋಗಿಗಳು ಇರುತ್ತಾರೆ ಎಂದು ಅಂದಾಜಿಸಲಾಗಿದೆ. 20-74ರ ವಯೋಮಿತಿಯ ಜನರ ಅಂಧತ್ವದ ಪ್ರಮುಖ ಕಾರಣವಾಗಿ ಡಯಾಬಿಟಿಕ್ ರೆಟಿನೋಪಥಿ ಕಾಡುತ್ತಿದೆ.
ಮಧುಮೇಹವು ನಿಧಾನವಾಗಿ ಕೊಲ್ಲುವ ರೋಗವಾಗಿದ್ದು, ಇದು ದೇಹದ ಯಾವುದೇ ಅಂಗಾಂಗವನ್ನು ಕೂಡಾ ಬಿಡುವುದಿಲ್ಲ. ಕೊನೆಯ ಹಂತದ ಡಯಾಬಿಟಿಕ್ ರೆಟಿನೋಪಥಿ ಪತ್ತೆಯಾಗುವ ವೇಳೆಗೆ, ಮೂತ್ರಪಿಂಡದಂಥ ಇತರ ಅಂಗಾಂಗಗಳಿಗೆ ಕೆಲಮಟ್ಟಿಗೆ ಹಾನಿಯಾಗಿರುತ್ತದೆ.
ಎಲ್ಲ ಮಧುಮೇಹಿಗಳು ಕೂಡಾ ಡಯಾಬಿಟಿಕ್ ರೆಟಿನೋಪಥಿಗೆ ಈಡಾಗುವ ಸಾಧ್ಯತೆ ಇದೆ. ಇದು ಆಹಾರಕ್ರಮ, ಗುಳಿಗೆ ಅಥವಾ ಇನ್ಸುಲಿನ್ ಸಹಾಯದಿಂದ ನಿಯಂತ್ರಿಸಲ್ಪಡುವ ಮಧುಮೇಹ ಎಲ್ಲದಕ್ಕೂ ಅನ್ವಯಿಸುತ್ತದೆ. ಈ ಕೆಳಗಿನ ಸಂದರ್ಭಗಳಲ್ಲಿ ರೆಟಿನೋಪಥಿ ಅಪಾಯ ಸಾಧ್ಯತೆ ಅಧಿಕ.
* ನೀವು ದೀರ್ಘಾವಧಿಯಿಂದ ಮಧುಮೇಹಿಗಳಾಗಿದ್ದರೆ, ನಿಮ್ಮ ಮಧುಮೇಹವನ್ನು ಸಮರ್ಪಕವಾಗಿ ನಿಯಂತ್ರಣದಲ್ಲಿ ಇಟ್ಟುಕೊಳ್ಳದಿದ್ದರೆ, ಅಧಿಕ ರಕ್ತದ ಒತ್ತಡ ಸಮಸ್ಯೆ ಇದ್ದರೆ, ಇನ್ಸುಲಿನ್ ಚಿಕಿತ್ಸೆ ಪಡೆಯುತ್ತಿದ್ದರೆ ಅಥವಾ ಮೂತ್ರಪಿಂಡದ ಕಾಯಿಲೆಗಳಿಂದ ಬಳಲುತ್ತಿದ್ದರೆ.
ನಿಮ್ಮ ಮಧುಮೇಹದ ಬಗ್ಗೆ ಹೆಚ್ಚಿನ ಗಮನ ಹರಿಸಿ ನಿಯಂತ್ರಣದಲ್ಲಿಟ್ಟುಕೊಂಡಷ್ಟೂ ಡಯಾಬಿಟಿಕ್ ರೆಟಿನೋಪಥಿ ಸಮಸ್ಯೆ ಸಾಧ್ಯತೆ ಕಡಿಮೆ ಹಾಗೂ ಅದು ಬೆಳೆಯುವ ವೇಗವೂ ನಿಧಾನವಾಗಲಿದೆ.
ಮಾನವನ ಅಕ್ಷಿಪಟಲವು ಕ್ಯಾಮರಾ ಫಿಲ್ಮ್‌ನಂತೆ ಇರುತ್ತದೆ. ಇದು ತೀರಾ ಸೂಕ್ಷ್ಮ ಹಾಗೂ ನರವ್ಯೆಹದ ಮೂಲಕ ಸಂಚಾರವಾಗುವ ರಕ್ತದಿಂದ ಪೋಷಿಸಲ್ಪಡುತ್ತದೆ. ಅಕ್ಷಿಪಟಲದ ಕೇಂದ್ರಭಾಗವನ್ನು ಕರಿಮಚ್ಚೆ ಎಂದು ಕರೆಯುತ್ತೇವೆ. ಇದು ಸ್ಪಷ್ಟ, ಕೇಂದ್ರ ದೃಷ್ಟಿಗೆ ಕಾರಣವಾಗಿದೆ. ನೀವೀಗ ಈ ಲೇಖನ ಓದುತ್ತಿರುವುದು ಅದರಿಂದಲೇ. ಡಯಾಬಿಟಿಕ್ ರೆಟಿನೋಪಥಿ ಕೊನೆಯ ಹಂತಕ್ಕೆ ಬರುವ ವರೆಗೂ ಸಾಮಾನ್ಯವಾಗಿ ದೃಷ್ಟಿನಷ್ಟಕ್ಕೆ ಕಾರಣವಾಗುವುದಿಲ್ಲ. ಆದರೆ ದೃಷ್ಟಿ ಮಂದವಾಗುವುದು, ಮಬ್ಬಾಗಿ ಕಾಣುವುದು, ಅದೃಶ್ಯ ಗೆರೆಗಳು ಗೋಚರಿಸುವುದು, ಕಲೆಗಳು ಕಾಣಿಸುವುದು ಮತ್ತಿತರ ಲಕ್ಷಣಗಳು ಕಾಣಿಸಿಕೊಳ್ಳುತ್ತವೆ.
ಡಯಾಬಿಟಿಕ್ ರೆಟಿನೋಪಥಿ ಹಲವು ವಿಧಗಳಲ್ಲಿ ಕಣ್ಣಿನ ಮೇಲೆ ಪರಿಣಾಮ ಬೀರಬಹುದು: ಪ್ರಸರಣದ ಹಂತದಲ್ಲಿ, ಹೊಸ ರಕ್ತನಾಳಗಳು ಸಾಮಾನ್ಯ ಅಕ್ಷಿಪಟಲದ ತುದಿಯಲ್ಲಿ ರೂಪುಗೊಳ್ಳುತ್ತವೆ. ಕಾಲಕ್ರಮೇಣ ರಕ್ತ ಸೋರಿಕೆಯಾಗಿ ಕಣ್ಣಿನ ಒಳಗೆ ರಕ್ತ ಸೇರಿಕೊಳ್ಳುತ್ತದೆ.
ಇದು ಮುಂದಿನ ಹಂತಕ್ಕೆ ಬೆಳೆದು ಅಕ್ಷಿಪಟಲದಲ್ಲಿ ಪೊರೆಗಳು ರೂಪುಗೊಳ್ಳುತ್ತವೆ. ಇದು ಅಕ್ಷಿಪಟಲವನ್ನು ಎಳೆಯುತ್ತದೆ (ಟ್ರ್ಯಾಕ್ಟಿಕಲ್ ರೆಟಿನಲ್ ಡಿಟ್ಯಾಚ್‌ಮೆಂಟ್) ಅಥವಾ ರಂಧ್ರಗಳನ್ನು ಸೃಷ್ಟಿಸುತ್ತದೆ (ರೆಗ್ಮೊಟಾಜೆನಿಯಸ್ ರೆಟಿನಲ್ ಡಿಟ್ಯಾಚ್‌ಮೆಂಟ್) ಅಥವಾ ಎರಡರ ಸಂಯೋಗ (ಕಂಬೈನ್ಡ್ ರೆಟಿನಲ್ ಡಿಟ್ಯಾಚ್‌ಮೆಂಟ್)ಗೆ ಕಾರಣವಾಗುತ್ತದೆ.
ಈ ಹಂತದಲ್ಲಿ ಫ್ಲೂಯಿಡ್ ಮತ್ತು ಲಿಪಿಡ್ ತೀರಾ ಸೂಕ್ಷ್ಮವಾದ ಕೇಂದ್ರ ಭಾಗದಲ್ಲಿ ಶೇಖರಗೊಳ್ಳುತ್ತದೆ. (ಮೆಕ್ಯುಲರ್ ಎಡಿಮಾ (ಊತ)
ರೆಟಿನಲ್ ಲೇಸರ್‌ಗಳು ಸಕಾಲದಲ್ಲಿ ಬಳಕೆ ಆದರೆ, ಇದು ಅಕ್ಷಿಪಟಲವನ್ನು ರಕ್ಷಿಸುತ್ತದೆ. ಸಮರ್ಪಕವಾದ ಹಂತದಲ್ಲಿ ಲೇಸರ್ ಚಿಕಿತ್ಸೆ ನೀಡಬೇಕಾಗುತ್ತದೆ ಅಂದರೆ ದೃಷ್ಟಿಗೆ ಧಕ್ಕೆಯಾಗುವ ಮುನ್ನ ಇದನ್ನು ಮಾಡಬೇಕಾಗುತ್ತದೆ.
ಪ್ರಸರಣ ಹಂತದ ಮಧುಮೇಹ ಅಕ್ಷಿಪಟಲ ರೋಗವನ್ನು ಲೇಸರ್‌ನಿಂದ ಗುಣಪಡಿಸಬಹುದು. ಆದರೆ ರಕ್ತ ಸೋರಿಕೆ ಹಂತದಲ್ಲಿ ಮತ್ತು ರೆಟಿನಲ್ ಡಿಟ್ಯಾಚ್‌ಮೆಂಟ್ ಹಂತದಲ್ಲಿ ಶಸ್ತ್ರಚಿಕಿತ್ಸೆ ಅನಿವಾರ್ಯವಾಗುತ್ತದೆ (ವಿಟ್ರೆಕ್ಟೊಮಿ).
ಕಣಗಳ ಎಡಿಮಾ (ಊತ) ಈ ಹಂತದಲ್ಲಿ ಲೇಸರ್‌ನಿಂದಷ್ಟೇ ಗುಣಪಡಿಸಲು ಸಾಧ್ಯ ಅಥವಾ ಇಂಟ್ರಾವಿಟ್ರಿಯಲ್ ಇಂಜೆಕ್ಷನ್ ನೀಡುವ ಮೂಲಕ ಗುಣಪಡಿಸಬಹುದು.
ಆದಾಗ್ಯೂ ಪ್ರತಿ ಚಿಕಿತ್ಸೆಯನ್ನು ಅಕ್ಷಿಪಟಲದ ಸ್ಥಿತಿಗತಿಗೆ ಅನುಗುಣವಾಗಿ ನಿರ್ಧರಿಸಬೇಕಾಗುತ್ತದೆ. ಆರಂಭಿಕ ಹಂತದಲ್ಲೇ ರೋಗ ಪತ್ತೆ ಮಾಡಿ ಸೂಕ್ತ ಚಿಕಿತ್ಸೆ ನೀಡಿದರೆ ಕನಿಷ್ಠ ಶೇ. 90ರಷ್ಟು ಡಯಾಬಿಟಿಕ್ ರೆಟಿನೋಪಥಿ ರೋಗವನ್ನು ಗುಣಪಡಿಸಬಹುದು.
ಇಷ್ಟಕ್ಕೂ ನಿಮಗೆ ಡಯಾಬಿಟಿಕ್ ರೆಟಿನೋಪಥಿ ಸಮಸ್ಯೆ ಇದೆಯೇ ಎಂದು ತಿಳಿಯಲು ಬೇಕಾಗುವುದು 10 ನಿಮಿಷದ ಅಕ್ಷಿಪಟಲ ಪರೀಕ್ಷೆ. ಹಾಗಿದ್ದಾಗ ಅದನ್ನು ಗುಣಪಡಿಸಲಾಗದ ಹಂತಕ್ಕೆ ಬೆಳೆಯುವವರೆಗೂ ನೀವು ಏಕೆ ಅವಕಾಶ ನೀಡಬೇಕು? ಕಣ್ಣಿನ ದೃಷ್ಟಿ ಇಲ್ಲವೆಂದಾದರೆ ಮಧುಮೇಹವನ್ನು ನಿಯಂತ್ರಿಸಿ ಕೂಡಾ ಏನು ಪ್ರಯೋಜನ ?
ಉತ್ತಮ ಆರೋಗ್ಯಕರ ಆಹಾರ ಕ್ರಮ, ದೈಹಿಕ ಚಟುವಟಿಕೆ ನಿಯಂತ್ರಣದಲ್ಲಿಟ್ಟ ಮಧುಮೇಹ ಹಾಗೂ ಹೈಪರ್ ಟೆನ್ಷನ್(ಅಧಿಕ ರಕ್ತದೊತ್ತಡ) ಮತ್ತು ಮೂತ್ರಪಿಂಡ ಆರೈಕೆ, ಧೂಮಪಾನ ಬಿಟ್ಟುಬಿಡುವುದು, ನಿಯಮಿತವಾಗಿ ವೈದ್ಯರಿಂದ ಮೌಲ್ಯಮಾಪನ ಹಾಗೂ ಅಕ್ಷಿಪಟಲದ ವಿಸ್ತೃತವಾದ ತಪಾಸಣೆಗಳು ಆರೋಗ್ಯಕರ ಜೀವನವನ್ನು ಖಾತ್ರಿಪಡಿಸುವ ಕೆಲ ಹೆಜ್ಜೆಗಳು.
ವಿಶ್ವವನ್ನು ನೋಡಲು ಮತ್ತು ಅನುಭವಿಸಲು ನಮಗೆ ಇರುವುದು ಕೇವಲ ಎರಡು ಅಮೂಲ್ಯ ಕಣ್ಣುಗಳು. ಅದನ್ನು ಕಾಪಾಡಿಕೊಳ್ಳುವುದು ನಮ್ಮ ಜವಾಬ್ದಾರಿ
!
ಡಾ. ನಮೀತ್ ಡಿಸೋಜ ಕಣ್ಣಿನ ನರದ ತಜ್ಞ ಸರ್ಜನ್ ಹಾಗೂ ಮಂಗಳೂರು ರೆಟಿನಾ ಕೇರ್‌ನ ಸಂಸ್ಥಾಪಕರು.
ಇವರು ಡಯಾಬಿಟಿಕ್ ರೆಟಿನೊಪಥಿ (ಮಧುಮೇಹ ಅಕ್ಷಿಪಟಲ ರೋಗ ) ರೋಗದ ತಜ್ಞರಾಗಿದ್ದು, ಕಣ್ಣಿನ ಅಕ್ಷಿಪಟ ರೋಗಗಳ ವೈದ್ಯಕೀಯ ಹಾಗೂ ಶಸ್ತ್ರಚಿಕಿತ್ಸಾ ಚಿಕಿತ್ಸೆಯಲ್ಲಿ ವಿಶೇಷತರಬೇತಿ ಪಡೆದಿದ್ದಾರೆ.
ರಾಜೀವ್‌ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾನಿಲಯದಲ್ಲಿ ಎಂಬಿಬಿಎಸ್ ಹಾಗೂ ದೃಷ್ಟಿಶಾಸ್ತ್ರ ವಿಷಯದಲ್ಲಿ ಎಂಎಸ್ ಪದವಿ ಪಡೆದರು. ಬಳಿಕ ಚೆನ್ನೈನ ಪ್ರತಿಷ್ಠಿತ ಶಂಕರ ನೇತ್ರಾಲಯದಿಂದ ಮೆಡಿಕಲ್ ರೆಟಿನಾ ಫೆಲೋಶಿಪ್ ಪಡೆದರು. ನಂತರ ಹುಬ್ಬಳ್ಳಿಯ ಎಂ.ಎಂ.ಜೋಶಿ ನೇತ್ರ ವಿಜ್ಞಾನ ಸಂಸ್ಥೆಯಲ್ಲಿ ವಿಟ್ರೊರೆಟಿನಲ್ ಸರ್ಜರಿ ಫೆಲೋಶಿಪ್ ಪೂರ್ಣಗೊಳಿಸಿದರು.
ಈ ಪ್ರದೇಶದಲ್ಲಿ ಅಕ್ಷಿಪಟ ರೋಗ ಸಮಸ್ಯೆ ವ್ಯಾಪಕವಾಗಿರುವುದರಿಂದ ಮತ್ತು ರೋಗಿಗಳು ಚಿಕಿತ್ಸೆಗಾಗಿ ದೊಡ್ಡ ನಗರಗಳಿಗೆ ಹೋಗುತ್ತಿದ್ದ ಹಿನ್ನೆಲೆಯಲ್ಲಿ 2012ರಲ್ಲಿ ಮಂಗಳೂರು ರೆಟಿನಾ ಕೇರ್ ಆರಂಭಿಸಿದರು. ಅಕ್ಷಿಪಟ ರೋಗಗಳ ಬಗ್ಗೆ ಜಾಗೃತಿ ಮೂಡಿಸುವುದು ಹಾಗೂ ರೋಗಿಗಳಿಗೆ ಗುಣಮಟ್ಟದ ಚಿಕಿತ್ಸೆ ನೀಡುವುದು ಇವರ ಉದ್ದೇಶವಾಗಿತ್ತು. ಮಂಗಳೂರಿನ ರೆಟಿನಾ ಕೇರ್ ಸಂಸ್ಥೆ ಫಳ್ನೀರ್ ಕ್ಲಿನಿಕ್, ಡಾನ್‌ಬಾಸ್ಕೊ ಹಾಲ್ ಕ್ರಾಸ್ ರೋಡ್, ಫಳ್ನೀರ್‌ನಲ್ಲಿ ಇದೆ.
-ಲೇಖಕರು ಕಣ್ಣಿನ ನರದ ತಜ್ಞ ಸರ್ಜನ್ ಹಾಗೂ ಮಂಗಳೂರು ರೆಟಿನಾ ಕೇರ್‌ನ ಸಂಸ್ಥಾಪಕರು.
ಸಂಪರ್ಕ: ಡಾ.ನಮೀತ್ ಡಿಸೋಜ, ಮಂಗಳೂರು ರೆಟಿನಾ ಕೇರ್, ಫಳ್ನೀರ್ ಕ್ಲಿನಿಕ್, ಡಾನ್‌ಬಾಸ್ಕೊ ಹಾಲ್ ಅಡ್ಡರಸ್ತೆ, ಫಳ್ನೀರ್, ಮಂಗಳೂರು- 575001.
ದೂರವಾಣಿ: 0824-2422166, 2422167. ಇ-ಮೇಲ್: nameethdsouza@yahoo.com