ಬೇಗ ದಣಿವಾಗುತ್ತಿದೆಯೇ...? ನಿಮ್ಮಲ್ಲಿ ಪೊಟ್ಯಾಷಿಯಂ ಕೊರತೆಯಿರಬಹುದು

Update: 2018-01-13 09:56 GMT

ಪೊಟ್ಯಾಷಿಯಂ ನಮ್ಮ ಶರೀರಕ್ಕೆ ಅಗತ್ಯವಾಗಿರುವ ಪ್ರಮುಖ ಎಲೆಕ್ಟ್ರೋಲೈಟ್ ಅಥವಾ ವಿದ್ಯುದ್ವಿಭಾಜಕಗಳಲ್ಲಿ ಒಂದಾಗಿದೆ. ಆದರೆ ಪೊಟ್ಯಾಷಿಯಂನ ಮಹತ್ವ ಮತ್ತು ಅದರ ಕೊರತೆಯಿಂದ ಏನಾಗುತ್ತದೆ ಎನ್ನುವುದು ಹೆಚ್ಚಿನವರಿಗೆ ತಿಳಿದಿಲ್ಲ. ಸುಮಾರು ಶೇ.98ರಷ್ಟು ಪೊಟ್ಯಾಷಿಯಂ ಶರೀರದ ಜೀವಕೋಶಗಳಲ್ಲಿದ್ದರೆ ಕೇವಲ ಶೇ.2ರಷ್ಟು ರಕ್ತದಲ್ಲಿರುತ್ತದೆ. ಶರೀರದಲ್ಲಿ ಪೊಟ್ಯಾಷಿಯಂ ಮಟ್ಟ 3.5ರಿಂದ 5 ಎಂಎಂಒಎಲ್/ಎಲ್(ಪ್ರತಿ ಲೀಟರ್‌ಗೆ ಮಿಲಿಮೋಲ್‌ಗಳು)ನಷ್ಟು ಇರಬೇಕು. ಅದು ಇದಕ್ಕಿಂತ ಕಡಿಮೆಯಾದರೆ ಅಂತಹ ಸ್ಥಿತಿಯನ್ನು ‘ಹೈಪೊಕಲೇಮಿಯಾ’ಎಂದು ಕರೆಯುತ್ತಾರೆ. ಪೊಟ್ಯಾಷಿಯಂ ಕೊರತೆ ಹಲವಾರು ಲಕ್ಷಣಗಳನ್ನು ತೋರಿಸುತ್ತದೆ. ಹೆಚ್ಚಿನ ಸಂದರ್ಭಗಳಲ್ಲಿ ಈ ಲಕ್ಷಣಗಳು ಸೌಮ್ಯ ಮತ್ತು ಅಸ್ಪಷ್ಟವಾಗಿರುತ್ತವೆ. ಕೆಲವು ಬಾರಿ ಇವು ಇತರ ಕಾಯಿಲೆಗಳ ಲಕ್ಷಣಗಳಂತೆ ಕಂಡುಬರುತ್ತವೆ. ಹೀಗಾಗಿ ಕೊರತೆ ತೀವ್ರವಾಗುವವರೆಗೆ ಸಾಮಾನ್ಯವಾಗಿ ಈ ಲಕ್ಷಣಗಳು ಕಡೆಗಣಿಸಲ್ಪಡುತ್ತವೆ ಅಥವಾ ರೋಗನಿಶ್ಚಯವನ್ನು ತಪ್ಪುದಾರಿಗೆಳೆಯುತ್ತವೆ.

ಪೊಟ್ಯಾಷಿಯಂ ಕೊರತೆಯ ಪ್ರಮುಖ ಲಕ್ಷಣಗಳಿಲ್ಲಿವೆ.

ಆಗಾಗ್ಗೆ ದಣಿವು

ಪೊಟ್ಯಾಷಿಯಂ ನಮ್ಮ ಶರೀರದ ಪ್ರತಿಯೊಂದು ಜೀವಕೋಶಕ್ಕೂ ಅಗತ್ಯವಾಗಿದೆ. ಅದರ ಕೊರತೆಯು ದಣಿವಿಗೆ ಕಾರಣವಾಗುತ್ತದೆ. ಯಾವುದೇ ಹೆಚ್ಚಿನ ಕೆಲಸ ಅಥವಾ ವ್ಯಾಯಾಮ ಮಾಡದೆ ನಿಮಗೆ ತೀರ ಬಳಲಿಕೆ ಅನ್ನಿಸುತ್ತಿದ್ದರೆ ನಿಮ್ಮ ಶರೀರದಲ್ಲಿ ಪೊಟ್ಯಾಷಿಯಂ ಮಟ್ಟ ಕುಸಿದಿರುವ ಸಾಧ್ಯತೆಯಿದೆ.

ಹೆಚ್ಚಿದ ಸ್ನಾಯುಸೆಳೆತ

ಶರೀರದಲ್ಲಿಯ ಸ್ನಾಯುಗಳನ್ನು ಬಲಗೊಳಿಸುವಲ್ಲಿ ಪೊಟ್ಯಾಷಿಯಂನ ಪಾತ್ರ ಪ್ರಮುಖವಾಗಿದೆ. ಪೊಟ್ಯಾಷಿಯಂ ಮಟ್ಟ ಕುಸಿದರೆ ಅದು ತೋಳುಗಳು, ಕಾಲುಗಳು ಅಥವಾ ಪಾದಗಳಲ್ಲಿ ನೋವು ಮತ್ತು ಸೆಳೆತಗಳನ್ನುಂಟು ಮಾಡಬಹುದು. ನೀವು ಆಗಾಗ್ಗೆ ಸ್ನಾಯುಸೆಳೆತದಿಂದ ಬಳಲುತ್ತಿರುವಿರಾದರೆ ಅದಕ್ಕೆ ಪೊಟ್ಯಾಷಿಯಂ ಕೊರತೆ ಕಾರಣವಾಗಿ ರಬಹುದು.

ಜುಮ್ಮೆನಿಸುವಿಕೆ ಮತ್ತು ಮರಗಟ್ಟುವಿಕೆ

ಶರೀರದಲ್ಲಿಯ ನರಗಳನ್ನು ಆರೋಗ್ಯಯುತವಾಗಿರಿಸಲು ಪೊಟ್ಯಾಷಿಯಂ ನೆರವಾಗುತ್ತದೆ. ಆಗಾಗ್ಗೆ ಸೂಜಿ ಅಥವಾ ಪಿನ್‌ನಿಂದ ಚುಚ್ಚಿದಂತೆ ಮತ್ತು ಮರಗಟ್ಟಿದ ಅನುಭವವಾಗುತ್ತಿದ್ದರೆ ನೀವು ಶರೀರದಲ್ಲಿಯ ಪೊಟ್ಯಾಷಿಯಂ ಮಟ್ಟವನ್ನು ತಪಾಸಣೆ ಮಾಡಿಸಿಕೊಳ್ಳಬೇಕಾಗುತ್ತದೆ.

ಅನಿಯಮಿತ ಹೃದಯ ಬಡಿತ

ಯಾವುದೇ ಕಾರಣವಿಲ್ಲದೆ ನಿಮ್ಮ ಹೃದಯ ಬಡಿತದಲ್ಲಿ ಏರುಪೇರುಗಳಾಗುತ್ತಿದ್ದರೆ ಅಥವಾ ಅದು ತೀವ್ರವಾಗಿ ಬಡಿದುಕೊಳ್ಳುತ್ತಿದ್ದರೆ ಅದಕ್ಕೆ ಪೊಟ್ಯಾಷಿಯಂ ಕೊರತೆ ಒಂದು ಕಾರಣವಾಗಿರಬಹುದು.

ರಕ್ತದೊತ್ತಡದಲ್ಲಿ ಏರಿಳಿತ

ಕಡಿಮೆ ಪೊಟ್ಯಾಷಿಯಂ ಕೊರತೆಯು ಸಾಮಾನ್ಯವಾಗಿ ಅಧಿಕ ರಕ್ತದೊತ್ತಡಕ್ಕೆ ಕಾರಣವಾಗುತ್ತದೆ. ಕೆಲವು ಬಾರಿ ಆಗಾಗ್ಗೆ ತಲೆಸುತ್ತುವಿಕೆ, ನಿತ್ರಾಣ ಅಥವಾ ಸದಾ ಕೈಗಳು ಮತ್ತು ಪಾದಗಳು ತಂಪಾಗಿರುವಂತಹ ಕಡಿಮೆ ರಕ್ತದೊತ್ತಡದ ಲಕ್ಷಣಗಳು ಕಂಡು ಬರುತ್ತವೆ. ಇವೆರಡೂ ಸ್ಥಿತಿಗಳಿಗೆ ಪೊಟ್ಯಾಷಿಯಂ ಕೊರತೆ ಕಾರಣವಾಗಿರುವ ಹೆಚ್ಚಿನ ಸಾಧ್ಯತೆಯಿರುತ್ತದೆ.

ಮಲಬದ್ಧತೆ/ವಾಕರಿಕೆ

ಶರೀರದಲ್ಲಿ ಪೊಟ್ಯಾಷಿಯಂ ಕೊರತೆಯು ಜೀರ್ಣ ವ್ಯವಸ್ಥೆಯ ಮೇಲೆ ಪರಿಣಾಮವನ್ನುಂಟು ಮಾಡಬಹುದು ಮತ್ತು ಮಲಬದ್ಧತೆಯನ್ನುಂಟು ಮಾಡಬಹುದು. ಇದರ ಜೊತೆಗೆ ಹೊಟ್ಟೆಯುಬ್ಬರ ಮತ್ತು ಹೊಟ್ಟೆಯಲ್ಲಿ ಸ್ನಾಯುಸೆಳೆತಗಳೂ ಕಾಣಿಸಿಕೊಳ್ಳಬಹುದು. ಹೊಟ್ಟೆಯುಬ್ಬರಕ್ಕೆ ಇತರ ಹಲವಾರು ಕಾರಣಗಳಿರಬಹುದಾದರೂ ಪೊಟ್ಯಾಷಿಯಂ ಕೊರತೆಯನ್ನು ಕಡೆಗಣಿಸುವಂತಿಲ್ಲ. ತೀವ್ರ ಪೊಟ್ಯಾಷಿಯಂ ಕೊರತೆಯು ವಾಕರಿಕೆ ಮತ್ತು ವಾಂತಿಗೂ ಕಾರಣವಾಗಬಹುದು.

ಬ್ರೇನ್ ಫಾಗಿಂಗ್

ಕೆಲವೊಮ್ಮೆ ಮಿದುಳಿನ ಕಾರ್ಯಾಚರಣೆಯಲ್ಲಿ ಏರುಪೇರಾಗುವ ಸ್ಥಿತಿಯನ್ನು ‘ಬ್ರೇನ್ ಫಾಗಿಂಗ್’ ಎಂದು ಕರೆಯುತ್ತಾರೆ. ಇದರಿಂದಾಗಿ ಗೊಂದಲ,ಮನಸ್ಸನ್ನು ಕೇಂದ್ರೀಕರಿಸು ವಲ್ಲಿ ತೊಂದರೆ ಅಥವಾ ಆಗಾಗೆ ಜ್ಞಾಪಕ ಶಕ್ತಿ ನಷ್ಟ ಇತ್ಯಾದಿಗಳು ಉಂಟಾಗಬಹುದು. ಕೆಲವೊಮ್ಮೆ ಪೊಟ್ಯಾಷಿಯಂ ಕೊರತೆಯು ಸಾಮಾನ್ಯಕ್ಕಿಂತ ಭಿನ್ನವಾದ ವರ್ತನೆಗೆ ಕಾರಣವಾಗುವ ಜೊತೆಗೆ ಖಿನ್ನತೆ ಮತ್ತು ಭ್ರಮೆಗಳಿಂದ ಬಳಲುವಂತೆ ಮಾಡಬಹುದು.

ಹೆಚ್ಚಿನ ಮೂತ್ರವಿಸರ್ಜನೆ

ಪೊಟ್ಯಾಷಿಯಂ ಕೊರತೆಯು ಸಾಮಾನ್ಯವಾಗಿ ಕಡಿಮೆ ಸೋಡಿಯಂ ಮಟ್ಟದೊಂದಿಗೆ ಗುರುತಿಸಿಕೊಂಡಿರುತ್ತದೆ. ಇದರಿಂದಾಗಿ ನೀರನ್ನು ಹಿಡಿದಿಟ್ಟುಕೊಳ್ಳುವ ಮೂತ್ರಪಿಂಡಗಳ ಕ್ಷಮತೆ ಕಡಿಮೆಯಾಗುತ್ತದೆ ಮತ್ತು ಆಗಾಗ್ಗೆ ಮೂತ್ರ ವಿಸರ್ಜನೆ ಮಾಡುವ ಪ್ರಮೇಯ ಒದಗಬಹುದು. ಪರಿಣಾಮವಾಗಿ ಬಾಯಾರಿಕೆಯು ಹೆಚ್ಚುತ್ತದೆ.

ಪೊಟ್ಯಾಷಿಯಂ ಕೊರತೆಯ ಲಕ್ಷಣಗಳು ಅಸ್ಪಷ್ಟವಾಗಿರಬಹುದು, ಆದರೆ ಅದು ಜೀವಕ್ಕೆ ಮಾರಕವಾಗಬಹುದಾದ್ದರಿಂದ ಅದನ್ನು ಕಡೆಗಣಿಸುವಂತಿಲ್ಲ. ಪೊಟ್ಯಾಷಿಯಂ ಸಮೃದ್ಧವಾಗಿರುವ ಆಹಾರ ಸೇವನೆಯು ಕೊರತೆಯನ್ನು ನೀಗಿಸಲು ನೆರವಾಗುತ್ತದೆ ಮತ್ತು ಅದರ ಲಕ್ಷಣಗಳನ್ನು ನಿವಾರಿಸುತ್ತದೆ. ಲಕ್ಷಣಗಳು ಮುಂದುವರಿದರೆ ವೈದ್ಯಕೀಯ ನೆರವು ಪಡೆಯುವುದು ಅಗತ್ಯವಾಗುತ್ತದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News