ಕರ್ನಾಟಕದಲ್ಲಿ ದೇಗುಲ ದರ್ಶನ ಫಲ ನೀಡುವುದಿಲ್ಲ
ಗುಜರಾತ್ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಹೆಚ್ಚು ಸ್ಥಾನ ಗೆದ್ದಿರುವ ಕಾರಣ ಉತ್ತೇಜಿತರಾದ ರಾಹುಲ್ ಗಾಂಧಿಯವರು ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲೂ ಗುಜರಾತ್‌ನ ತಂತ್ರವನ್ನೇ ಬಳಸಲು ಹೊರಟಿದ್ದಾರೆ. ಅಲ್ಲಿ ದೇವರ ದರ್ಶನ ಮಾಡಿದಂತೆ, ಇಲ್ಲೂ ಮಾಡುವ ಸೂಚನೆ ನೀಡಿದ್ದಾರೆ. ಚುನಾವಣಾ ಪ್ರಚಾರಕ್ಕೆ ರಾಜ್ಯಕ್ಕೆ ಭೇಟಿ ನೀಡುವ ಅವರು ಶೃಂಗೇರಿ ಮತ್ತು ಉಡುಪಿ ಸೇರಿದಂತೆ ರಾಜ್ಯದ ಹಿಂದೂ ದೇವಾಲಯಗಳಿಗೆ ಭೇಟಿ ನೀಡುವರು ಎಂದು ತಿಳಿದು ಬಂದಿದೆ.
ಗುಜರಾತ್ ವಿಧಾನಸಭಾ ಚುನಾವಣೆಯಲ್ಲಿ 27 ಹಿಂದೂ ದೇವಾಲಯಗಳಿಗೆ ರಾಹುಲ್ ಗಾಂಧಿ ಭೇಟಿ ನೀಡಿದ್ದರು. ಆ ಪ್ರದೇಶದಲ್ಲಿ ಕಾಂಗ್ರೆಸ್ 18 ಸ್ಥಾನ ಗೆದ್ದುಕೊಂಡಿತ್ತು. ಅತ್ಯುಗ್ರ ಹಿಂದುತ್ವದ ಪ್ರತಿಯಾಗಿ ಮೆದು ಹಿಂದುತ್ವ ನೀತಿ ಒಮ್ಮಾಮ್ಮೆ ಪ್ರಯೋಜನಕಾರಿಯಾಗುವುದೆಂದು ಸ್ಪಷ್ಟವಾಯಿತು ಎಂದು ವಿಶ್ಲೇಷಿಸಲಾಗುತ್ತದೆ.
ಆದರೆ ದೇವಾಲಯಗಳ ದರ್ಶನದ ಪರಿಣಾಮವಾಗಿ ಕಾಂಗ್ರೆಸ್ ಹೆಚ್ಚು ಸ್ಥಾನ ಗೆಲ್ಲಲು ಗುಜರಾತ್‌ನಲ್ಲಿ ಸಾಧ್ಯವಾಗಿರಬಹುದು. ಆದರೆ ಇದೇ ತಂತ್ರವನ್ನು ಎಲ್ಲಾ ರಾಜ್ಯಗಳಲ್ಲಿ ಅನುಸರಿಸಲು ಹೊರಟರೆ, ತಿರುಮಂತ್ರ ಆಗುವ ಅಪಾಯವೂ ಇದೆ. ವಿಭಿನ್ನ ಭಾಷೆ, ಸಂಸ್ಕೃತಿ, ಧರ್ಮ, ಜನಾಂಗ ಹಾಗೂ ಜಾತಿ ಒಳಗೊಂಡ ಈ ದೇಶದಲ್ಲಿ ಒಂದು ರಾಜ್ಯಕ್ಕೂ, ಇನ್ನೊಂದು ರಾಜ್ಯಕ್ಕೂ ಸಾಕಷ್ಟು ವ್ಯತ್ಯಾಸವಿದೆ. ಒಂದು ರಾಜ್ಯದಲ್ಲಿ ಅನುಸರಿಸಿದ ತಂತ್ರ ಇನ್ನೊಂದು ರಾಜ್ಯದಲ್ಲಿ ಯಶಸ್ವಿಯಾಗುವುದೆಂದು ಹೇಳಲು ಆಗುವುದಿಲ್ಲ.
ಗುಜರಾತ್ ಮುಂಚಿನಿಂದಲೂ ದೇವಾಲಯ ಸಂಸ್ಕೃತಿಗೆ ಪ್ರಾಮುಖ್ಯತೆ ನೀಡಿದ ರಾಜ್ಯ. ಪಾಕಿಸ್ತಾನದ ಗಡಿಗೆ ಹೊಂದಿಕೊಂಡಿರುವ ಈ ರಾಜ್ಯದಲ್ಲಿ ಹಿಂದುತ್ವದ ಪ್ರಭಾವ ಮುಂಚಿನಿಂದಲೂ ಇದೆ. ಸಂಘ ಪರಿವಾರದ ಕಾರ್ಯಕರ್ತರು ಐದಾರು ದಶಕಗಳ ಕಾಲ ಮಣ್ಣು ಹೊತ್ತ ಪರಿಣಾಮವಾಗಿ ನಗರಪ್ರದೇಶ ಮಾತ್ರವಲ್ಲ ಗ್ರಾಮೀಣ ಹಿಂದುಳಿದ ಪ್ರದೇಶದಲ್ಲೂ, ಆದಿವಾಸಿ ಪ್ರದೇಶದಲ್ಲೂ ಹಿಂದುತ್ವ ಬೇರು ಬಿಟ್ಟಿದೆ. ಅಂತಲೇ ಈ ರಾಜ್ಯವನ್ನು ಹಿಂದುತ್ವ ರಾಷ್ಟ್ರದ ಪ್ರಯೋಗಶಾಲೆಯೆಂದು ಕರೆಯಲಾಗುತ್ತದೆ. ಡಂಬಾಚಾರದ ಧಾರ್ಮಿಕ ಆಚರಣೆ ಮತ್ತು ವ್ಯಾಪಾರಿ ವರ್ಗದ ಅನೈತಿಕ ಮೈತ್ರಿಯಿಂದಾಗಿ ಹಿಂದುತ್ವ ಇಲ್ಲಿ ನೆಲೆ ಕಂಡುಕೊಂಡಿದೆ.
ಗುಜರಾತ್ ಯಾವ ಪರಿ ಹಿಂದೂ ರಾಷ್ಟ್ರದ ಪ್ರಯೋಗಶಾಲೆಯಾಗಿದೆ ಎಂದರೆ ಈ ರಾಜ್ಯದಲ್ಲಿ ಜಾತ್ಯತೀತ ಎಂಬ ಪದ ಬಳಸಿದರೆ, ಜನರು ನಗುತ್ತಾರೆ. ಅಹ್ಮದಾಬಾದ್‌ನಂತಹ ನಗರಗಳಲ್ಲಿ ಮಾತ್ರವಲ್ಲ ಗ್ರಾಮೀಣ ಪ್ರದೇಶದಲ್ಲೂ ಧರ್ಮದ ಆಧಾರದಲ್ಲಿ ಭಾರತೀಯರು ಇಲ್ಲಿ ವಿಭಜನೆಗೊಂಡಿದ್ದಾರೆ. ಹಿಂದೂಗಳು ವಾಸಿಸುವ ಪ್ರದೇಶದಲ್ಲಿ ಮುಸ್ಲಿಮರು ವಾಸಿಸುವುದಿಲ್ಲ. ಮುಸ್ಲಿಮರು ವಾಸಿಸುವ ಪ್ರದೇಶಗಳನ್ನು ಪಾಕಿಸ್ತಾನ ಎಂದು ಕರೆಯಲಾಗುತ್ತದೆ. 2002ರ ಕೋಮು ಹತ್ಯಾಕಾಂಡದ ಸಂದರ್ಭದಲ್ಲಿ ವಿಶ್ವ ಹಿಂದೂ ಪರಿಷತ್‌ನ ನಾಯಕ ಪ್ರವೀಣ ತೊಗಾಡಿಯಾ ರಾಜ್ಯದ ಹಳ್ಳಿಹಳ್ಳಿಗೆ, ಗಲ್ಲಿ, ಮೊಹಲ್ಲಾಗಳಿಗೆ ತೆರಳಿ ಬಿತ್ತಿದ ಜನಾಂಗ ದ್ವೇಷದ ವಿಷಬೀಜ ಮೊಳಕೆಯೊಡೆದು ಈಗ ಹೆಮ್ಮರವಾಗಿದೆ. ಇಂಥ ರಾಜ್ಯದಲ್ಲಿ ಜಾತ್ಯತೀತತೆ ಎಂದರೆ ಬಹುಸಂಖ್ಯಾತರು ಸಂದೇಹದಿಂದ ನೋಡುತ್ತಾರೆ.
ಗುಜರಾತ್‌ನಲ್ಲಿ ರಾಹುಲ್ ಗಾಂಧಿಯವರ ದೇಗುಲ ದರ್ಶನದಿಂದ ಮಾತ್ರ ಕಾಂಗ್ರೆಸ್ ಹೆಚ್ಚು ಸ್ಥಾನ ಗೆಲ್ಲಲಿಲ್ಲ. ಪಟೇಲ್ ಸಮುದಾಯದ ನಾಯಕ ಹಾರ್ದಿಕ ಪಟೇಲ್, ದಲಿತ ನಾಯಕ ಜಿಗ್ನೇಶ್ ಮೇವಾನಿ ಮತ್ತು ಹಿಂದುಳಿದ ವರ್ಗಗಳ ನಾಯಕ ಅಲ್ಪೇಶ ಠಾಕೂರ್ ಇವರೊಂದಿಗೆ ಮಾಡಿಕೊಂಡ ಹೊಂದಾಣಿಕೆ ಕಾಂಗ್ರೆಸ್ ನೆರವಿಗೆ ಬಂತು. ಆದರೆ ರಾಜ್ಯದ ಅಧಿಕಾರ ಸೂತ್ರ ಹಿಡಿಯಲು ಸಾಧ್ಯವಾಗಲಿಲ್ಲ.
ಆದರೆ ಕರ್ನಾಟಕದ ಪರಿಸ್ಥಿತಿ ಗುಜರಾತ್‌ಗಿಂತ ಸಂಪೂರ್ಣ ಭಿನ್ನವಾಗಿದೆ. ಇದು 12ನೇ ಶತಮಾನದಲ್ಲಿ ಸ್ಥಾವರ ಸಂಸ್ಕೃತಿಯನ್ನು ವಿರೋಧಿಸಿದ ಶರಣ ಚಳವಳಿಯ ನಾಡು. ಹೀಗಾಗಿ ಈ ರಾಜ್ಯದಲ್ಲಿ ಗುಜರಾತ್ ಮತ್ತು ತಮಿಳುನಾಡಿನಂತೆ ಭಾರೀ ದೇವಸ್ಥಾನಗಳಿಲ್ಲ. ದೇವಾಲಯಗಳಿಗೆ ಹೋಗಿ, ಪುರೋಹಿತಶಾಹಿಗಳಿಂದ ಸುಲಿಗೆಗೆ ಒಳಗಾಗಬೇಡಿ ಎಂದು ಸಂದೇಶ ನೀಡಿದ ಬಸವಣ್ಣನವರು, ಭಕ್ತರ ಅಂಗೈಯಲ್ಲೇ ಇಷ್ಟಲಿಂಗವನ್ನು ನೀಡಿ ದೇವಾಲಯ ಸಂಸ್ಕೃತಿಗೆ ಸವಾಲು ಹಾಕಿದರು. ಇಂದಿಗೂ ಉತ್ತರ ಕರ್ನಾಟಕದ ಬಹುತೇಕ ಲಿಂಗಾಯತರು ಇಷ್ಟಲಿಂಗವನ್ನೇ ಪೂಜಿಸುತ್ತಾರೆ.
ಉಳ್ಳವರು ಶಿವಾಲಯ ಮಾಡುವರು
ನಾನೇನು ಮಾಡಲಿ ಬಡವನಯ್ಯ
ಎನ್ನ ಕಾಲೇ ಕಂಬ, ದೇಹವೇ ದೇಗುಲ,
ಶಿರವೇ ನನ್ನ ಕಳಸವಯ್ಯ
ಕೂಡಲಸಂಗಮದೇವ
ಸ್ಥಾವರಕ್ಕಳಿವುಂಟು ಜಂಗಮಕ್ಕೆ ಅಳಿವಿಲ್ಲ
ಹೀಗೆ ಬಸವಣ್ಣನವರು ಸ್ಥಾವರ ಸಂಸ್ಕೃತಿಗೆ ಸವಾಲು ಹಾಕಿ ಲಿಂಗಾಯತ ಧರ್ಮ ಸ್ಥಾಪಿಸಿದರು. ಈ ಲಿಂಗಾಯತ ಧರ್ಮ ಈಗ ಪುನಶ್ಚೇತನ ಪಡೆದಿದೆ. ಪ್ರತ್ಯೇಕ ಲಿಂಗಾಯತ ಧರ್ಮದ ಮಾನ್ಯತೆಗಾಗಿ ಉತ್ತರ ಕರ್ನಾಟಕದ ಲಿಂಗಾಯತರು ಹೋರಾಟಕ್ಕೆ ಇಳಿದಿದ್ದಾರೆ. ಬೃಹತ್ ಸಮಾವೇಶ ನಡೆಸುತ್ತಿದ್ದಾರೆ. ಇಂತಹ ಸಮಾವೇಶಗಳಿಗೆ ಲಕ್ಷಾಂತರ ಜನರು ಸೇರುತ್ತಿದ್ದಾರೆ. ಹುಬ್ಬಳ್ಳಿ, ಕಲಬುರಗಿ ಮತ್ತು ಬಿಜಾಪುರಗಳಲ್ಲಿ ನಡೆದ ಈ ಸಮಾವೇಶಗಳನ್ನು ನಾನು ಕಣ್ಣಾರೆ ನೋಡಿದ್ದೇನೆ. ನಾವು ಹಿಂದೂಗಳಲ್ಲ, ಲಿಂಗಾಯತರು ಎಂದು ಲಕ್ಷಾಂತರ ಜನರು ಪ್ರತಿಜ್ಞೆ ಸ್ವೀಕರಿಸುತ್ತಿದ್ದಾರೆ.
ಗುಜರಾತ್‌ನಂತೆ ಇಲ್ಲಿ ಹಿಂದುತ್ವದ ಪ್ರಭಾವ ರಾಜ್ಯದೆಲ್ಲೆಡೆ ವಿಸ್ತರಿಸಿಲ್ಲ. ಅದು ಈಗ ಕರಾವಳಿಯ ಉತ್ತರ ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳಿಗೆ ಮಾತ್ರ ಸೀಮಿತವಾಗಿದೆ. ಉತ್ತರ ಕರ್ನಾಟಕದಲ್ಲಿ ಬಸವಣ್ಣನ ಪ್ರಭಾವದಿಂದಾಗಿ ಲಿಂಗಾಯತರು ತಾವು ಹಿಂದೂಗಳಲ್ಲ ಎಂದು ಹೇಳುತ್ತಿದ್ದಾರೆ. ಹಳೆಯ ಮೈಸೂರು ಭಾಗದಲ್ಲಿ ಕುವೆಂಪು ಪ್ರಭಾವದಿಂದ ಕೋಮುವಾದಿ ಪಕ್ಷಗಳೊಂದಿಗೆ ಗುರುತಿಸಿಕೊಳ್ಳಲು ಒಕ್ಕಲಿಗರು ಹಿಂಜರಿಯುತ್ತಿದ್ದಾರೆ. ಅವರಲ್ಲಿ ಬಹುತೇಕರ ಆಯ್ಕೆ ಜಾತ್ಯತೀತ ಜನತಾದಳವಾಗಿದೆ.
ವಾಸ್ತವಾಂಶ ಹೀಗಿದ್ದರೂ ಬಿಜೆಪಿ ಇಲ್ಲಿ ಹೇಗೆ ಅಧಿಕಾರಕ್ಕೆ ಬಂತು ಪ್ರಶ್ನೆ ಉದ್ಭ್ಭವಿಸುತ್ತದೆ. ಆದರೆ ಬಿಜೆಪಿ ಗೆಲುವಿಗೆ ಆಗ ಹಿಂದುತ್ವದ ಪ್ರಭಾವವೊಂದೇ ಕಾರಣವಾಗಿರಲಿಲ್ಲ. ಕಾಂಗ್ರೆಸ್ ಮತ್ತು ಜನತಾದಳದಲ್ಲಿ ತಮ್ಮ ಸಮುದಾಯದ ನಾಯಕರಿಲ್ಲ ಎಂದು ಅಸಮಾಧಾನಗೊಂಡಿದ್ದ ಲಿಂಗಾಯತರು ಯಡಿಯೂರಪ್ಪ ಮುಖ ನೋಡಿ, ಬಿಜೆಪಿಗೆ ಮತ ಹಾಕಿದರು. ಅದರೊಂದಿಗೆ ಕುಮಾರಸ್ವಾಮಿಯವರು ತಮ್ಮ ನಾಯಕನಿಗೆ ಮೋಸ ಮಾಡಿದರು ಎಂಬ ಅಸಮಾಧಾನ ಬಿಜೆಪಿ ನೆರವಿಗೆ ಬಂತು. ಆದರೂ ಕೂಡ ನಿಚ್ಚಳ ಬಹುಮತ ಪಡೆಯುವಷ್ಟು ಸ್ಥಾನ ಅದು ಗೆಲ್ಲಲಿಲ್ಲ. ಕೊನೆಗೆ ಆಪರೇಷನ್ ಕಮಲದ ಮೂಲಕ ಅಧಿಕಾರ ಹಿಡಿದುಕೊಂಡಿತು.
ಆದರೆ ಈಗ ಪರಿಸ್ಥಿತಿ ಬದಲಾಗಿದೆ. ಲಿಂಗಾಯತರು ಈಗ ಬಿಜೆಪಿ ಜೊತೆಗಿಲ್ಲ. ಹಿಂದುತ್ವದ ಹೆಸರಿನಲ್ಲಿ ವೈದಿಕಶಾಹಿ ತಮ್ಮ ಧರ್ಮವನ್ನು ನುಂಗಿ ನೀರು ಕುಡಿಯುತ್ತದೆ ಎಂಬ ಆತಂಕ ಲಿಂಗಾಯತರಲ್ಲಿ ಮನೆ ಮಾಡಿದೆ. ಅಂತಲೇ ಅವರು ಪ್ರತ್ಯೇಕ ಧರ್ಮಕ್ಕಾಗಿ ಉತ್ತರ ಕರ್ನಾಟಕದಲ್ಲಿ ಬೀದಿಗೆ ಇಳಿದಿದ್ದಾರೆ. ಈ ಭಾಗದಲ್ಲಿ ಯಡಿಯೂರಪ್ಪ ಅವರ ಸಭೆಗಳಿಗೆ ಈಗ ಜನ ಸೇರುತ್ತಿಲ್ಲ. ಇದರೊಂದಿಗೆ ಬಿಜೆಪಿಯ ಆಂತರಿಕ ಜಗಳ ತೀವ್ರಗೊಂಡಿದೆ. ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಯಡಿಯೂರಪ್ಪ ಅವರನ್ನು ಹೇರಿದ್ದರೂ ಕೂಡ ಕರ್ನಾಟಕದ ಬಿಜೆಪಿಯ ಬಹುತೇಕ ನಾಯಕರು ಅವರನ್ನು ಒಪ್ಪಿಕೊಳ್ಳಲು ಸಿದ್ಧರಿಲ್ಲ. ಆದರೂ ವಿಧಾನಸಭಾ ಚುನಾವಣೆ ಮುಗಿಯುವವರೆಗೆ ಯಡಿಯೂರಪ್ಪ ಅವರ ಪ್ರಭಾವ ಮತ್ತು ಅವರ ಆರ್ಥಿಕ ಸಂಪನ್ಮೂಲ ಬಳಸಿಕೊಂಡು ಅವರನ್ನು ಪಕ್ಕಕ್ಕೆ ಸರಿಸಿ, ಸಂಘ ಪರಿವಾರದ ಹಿನ್ನೆಲೆಯ ಹೊಸ ನಾಯಕನನ್ನು ತರಲು ಅಮಿತ್ ಶಾ ಷಡ್ಯಂತ್ರ ರೂಪಿಸಿದ್ದಾರೆ. ಹೀಗಾಗಿ ಬಿಜೆಪಿ ಎಷ್ಟೇ ಕಸರತ್ತು ಮಾಡಿದರೂ 60ಕ್ಕಿಂತ ಹೆಚ್ಚು ಸ್ಥಾನ ಗೆಲ್ಲುವುದಿಲ್ಲ ಎಂಬುದು ರಾಜಕೀಯ ವಿಶ್ಲೇಷಕರ ಅಭಿಪ್ರಾಯವಾಗಿದೆ. ಇದರೊಂದಿಗೆ ರಾಜ್ಯದಲ್ಲಿ ಬಿಜೆಪಿಗೆ ಪ್ರತಿಕೂಲವಾದ ಅನೇಕ ಅಂಶಗಳಿವೆ.
ಈ ಸರಕಾರದ ಅನ್ನಭಾಗ್ಯದಂತಹ ಯೋಜನೆಗಳು ತುಂಬಾ ಜನಪ್ರಿಯವಾಗಿವೆ. ಗ್ರಾಮೀಣ ಪ್ರದೇಶದಲ್ಲಿ ಎಂತಹ ಬರಗಾಲ ಬಂದರೂ ಉಪವಾಸದಿಂದ ಜನ ಸಾಯುವ ಸ್ಥಿತಿ ಬರಲಿಲ್ಲ್ಲ. ಇದು ಅನ್ನಭಾಗ್ಯ ಯೋಜನೆಯ ಕೊಡುಗೆ. ಅನ್ನಭಾಗ್ಯ ಯೋಜನೆ ಜೊತೆಗೆ ಹಲವು ಕಾರ್ಯಕ್ರಮಗಳನ್ನು ಈ ಸರಕಾರ ಜಾರಿಗೆ ತಂದಿದೆ. ಎಲ್ಲಕ್ಕಿಂತ ಮುಖ್ಯವಾಗಿ ಕಳೆದ ನಾಲ್ಕೂವರೆ ವರ್ಷ ಆಡಳಿತ ನಡೆಸಿದ ಸಿದ್ಧರಾಮಯ್ಯ ಅವರ ಮೇಲೆ ವೈಯಕ್ತಿಕವಾಗಿ ಅಥವಾ ಸರಕಾರದ ಮೇಲೆ ಯಾವುದೇ ಗುರುತವಾದ ಆರೋಪಗಳಿಲ್ಲ. ಅಂತಲೇ ಜೈಲಿಗೆ ಹೋಗಿ ಬಂದವರು ಎಂದು ಯಡಿಯೂರಪ್ಪರನ್ನು ಸಿದ್ಧರಾಮಯ್ಯ ಬಹಿರಂಗವಾಗಿ ಟೀಕಿಸಿದರೂ ಅದನ್ನು ಎದುರಿಸುವ ನೈತಿಕ ಶಕ್ತಿ ಬಿಜೆಪಿಗಿಲ್ಲ.
ಬಿಜೆಪಿ ರಾಜ್ಯದಲ್ಲಿ ಅಧಿಕಾರದಲ್ಲಿದ್ದಾಗ ನಡೆದ ಗಣಿ ಹಗರಣ, ರಿಯಲ್ ಎಸ್ಟೇಟ್ ಭ್ರಷ್ಟಾಚಾರ, ಅಂದಿನ ಮುಖ್ಯಮಂತ್ರಿಗಳೇ ಪರಪ್ಪನ ಅಗ್ರಹಾರ ಜೈಲಿಗೆ ಹೋಗಬೇಕಾದ ಸನ್ನಿವೇಶ ಹಾಗೂ ಸಂಪುಟದ ಕೆಲ ಸಚಿವರು ಜೈಲುವಾಸ ಅನುಭವಿಸಿದ್ದು ಮತ್ತು ಸದನಲ್ಲಿ ಮೂವರು ಸಚಿವರು ನೀಲಿಚಿತ್ರ ನೋಡಿ, ರಾಜೀನಾಮೆ ನೀಡಿದ್ದು ಇವೆಲ್ಲವನ್ನೂ ಜನರು ಮರೆತಿಲ್ಲ.
ಹೀಗಾಗಿ ರಾಜ್ಯ ಸರಕಾರವನ್ನು ಇಕ್ಕಟ್ಟಿಗೆ ಸಿಲುಕಿಸುವ ಸ್ಥಿತಿಯಲ್ಲಿ ಬಿಜೆಪಿ ನಾಯಕರಿಲ್ಲ. ಜನರ ಬಳಿ ಮತ್ತೆ ಹೋಗಿ, ಮುಖ ತೋರಿಸಿ, ಮತ ಕೇಳುವ ನೈತಿಕ ಬಲವೂ ಇವರಿಗಿಲ್ಲ. ತಾವು ಈ ಹಿಂದೆ ರಾಜ್ಯದಲ್ಲಿ ಅಧಿಕಾರದಲ್ಲಿದ್ದಾಗ ಮಾಡಿದಸಾಧನೆ ಬಗ್ಗೆ ಬಿಜೆಪಿ ನಾಯಕರು ಎಲ್ಲಿಯೂ ಹೇಳಿಕೊಳ್ಳುತ್ತಿಲ್ಲ. ಎಲ್ಲಾ ಪ್ರಚಾರ ಸಭೆಗಳಲ್ಲೂ ಪ್ರಧಾನಿ ನರೇಂದ್ರ ಮೋದಿಯವರ ಮುಖ ನೋಡಿ ಮತ ಹಾಕುವಂತೆ ಕೇಳುತ್ತಿದ್ದಾರೆ. ರಾಜ್ಯ ನಾಯಕರ ದುಸ್ಥಿತಿ ಕಂಡು ರೋಸಿ ಹೋದ ಅಮಿತ್‌ಶಾ ಅನ್ಯ ಮಾರ್ಗವಿಲ್ಲದೇ ಕೋಮು ಗಲಭೆ ತಂತ್ರ ಹೇಳಿಕೊಟ್ಟರು. ಲಾಠಿ ಚಾರ್ಜ್, ಗೋಲಿ ಬಾರ್ ಮಾಡಿಸಿಯೆಂದು ಹೇಳಿದರು. ಸಂಸದ ಪ್ರತಾಪ್‌ಸಿಂಹ ಅವರಿಗೆ ಹೇಳಿದ ಈ ಮಾತು ಗುಟ್ಟಾಗಿ ಉಳಿಯಲಿಲ್ಲ. ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿತು.
ತಮ್ಮ ನಾಯಕನ ಈ ಆದೇಶವನ್ನು ಕರಾವಳಿಯ ಎರಡೂ ಜಿಲ್ಲೆಗಳಲ್ಲಿ ಬಿಜೆಪಿ ನಾಯಕರುಜಾರಿಗೆ ತಂದರು. ದಕ್ಷಿಣ ಮತ್ತು ಉತ್ತರ ಕನ್ನಡ ಜಿಲ್ಲೆಯಲ್ಲಿ ಕೋಮು ಹಿಂಸಾಚಾರ ಮತ್ತು ಕೊಲೆಗಳು ನಡೆದವು. ಆದರೆ ಉತ್ತರ ಕರ್ನಾಟಕದ 13 ಜಿಲ್ಲೆಗಳಲ್ಲಿ ಕೋಮು ಧ್ರುವೀಕರಣದ ಈ ತಂತ್ರ ಫಲಿಸಲಿಲ್ಲ. ಇದಕ್ಕೆ ಕಾರಣ ಹಿಂದುತ್ವದ ಬಲೆಯಿಂದ ಹೊರ ಬಂದ ಲಿಂಗಾಯತರು. ಪ್ರತ್ಯೇಕ ಧರ್ಮಕ್ಕಾಗಿ ಹೋರಾಡುತ್ತಿರುವ ಅವರು ಕೋಮುವಾದಿಗಳನ್ನು ದೂರ ಇಟ್ಟಿದ್ದಾರೆ. ಅಂತಲೇ ಧಾರವಾಡ, ಗದಗ, ಬಿಜಾಪುರ, ಕಲಬುರಗಿ, ಬಳ್ಳಾರಿ, ಹಾವೇರಿ ಮತ್ತು ಮುಂತಾದ ಜಿಲ್ಲೆಗಳಲ್ಲಿ ಕೋಮು ದ್ವೇಷದ ಬೆಂಕಿ ಭುಗಿಲೇಳಲಿಲ್ಲ. ಇದು ಬಿಜೆಪಿ ನಾಯಕರನ್ನು ಚಿಂತೆಗೀಡು ಮಾಡಿದೆ.
ಇಂತಹ ರಾಜ್ಯಕ್ಕೆ ಚುನಾವಣಾ ಪ್ರಚಾರಕ್ಕೆ ಬರಲಿರುವ ರಾಹುಲ್ ಗಾಂಧಿಯವರು ದೇಗುಲ ದರ್ಶನ ಮಾಡುವ ಮೆದು ಹಿಂದುತ್ವ ನೀತಿಯನ್ನು ಅನುಸರಿಸುವುದರಲ್ಲಿ ಅರ್ಥವಿಲ್ಲ. ಗುಜರಾತ್‌ನಂತೆ ಜನಿವಾರ ಹಾಕಿಕೊಂಡು ಇಲ್ಲಿ ಓಡಾಡಿದರೆ ಜನರು ನಗುತ್ತಾರೆ. ಇಲ್ಲಿ ಈಗ 12ನೇ ಶತಮಾನದ ಬಸವಣ್ಣ ಎದ್ದು ಕೂತಿದ್ದಾನೆ. ಇನ್ನೊಂದು ಕಡೆ ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಬೆಳಕು ಎಲ್ಲೆಡೆ ವ್ಯಾಪಿಸುತ್ತಿದೆ. ಇಲ್ಲಿನ ಪರಿಸ್ಥಿತಿ ಬಗ್ಗೆ ಚೆನ್ನಾಗಿ ಗೊತ್ತಿರುವ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಈ ಚುನಾವಣೆ ಜಾತ್ಯತೀತ ಮತ್ತು ಕೋಮುವಾದಿ ಶಕ್ತಿಗಳ ಸಮರವೆಂದು ಸರಿಯಾಗಿ ವ್ಯಾಖ್ಯಾನಿಸಿದ್ದಾರೆ. ದೇವಾಲಯಕ್ಕೆ ಯಾರೂ ಹೋಗಬಾರದು ಎಂದಲ್ಲ. ಆದರೆ ಚುನಾವಣೆ ಲಾಭಕ್ಕಾಗಿ ದೇವಾಲಯಗಳಿಗೆ ಭೇಟಿ ನೀಡುವುದು, ಅರ್ಚಕರ ಎದುರು ಅಂಗಿ ಬಿಚ್ಚಿ ನಿಲ್ಲುವುದು, ತೀರ್ಥಕ್ಕಾಗಿ ಕೈಯೊಡ್ಡುವುದು ಭಕ್ತಿಯಾಗುವುದಿಲ್ಲ. ಅವಕಾಶವಾದ ಆಗುತ್ತದೆ. ಇಂತಹ ಅವಕಾಶವಾದಿ ಮಾರ್ಗ ಶತಮಾನದ ಇತಿಹಾಸ ಹೊಂದಿರುವ ಕಾಂಗ್ರೆಸ್‌ಗೆ ಶೋಭೆ ತರುವುದಿಲ್ಲ.
ರಾಹುಲ್ ಗಾಂಧಿಯವರ ಮುತ್ತಜ್ಜ ಮತ್ತು ಈ ದೇಶದ ಮೊದಲ ಪ್ರಧಾನಿ ಜವಾಹರಲಾಲ್ ನೆಹರೂ ಎಂದಿಗೂ ದೇವಾಲಯಕ್ಕೆ ಹೋಗುತ್ತಿರಲಿಲ್ಲ. ಆದರೂ ಅತ್ಯಂತ ಜನಪ್ರಿಯ ಪ್ರಧಾನಿಯೆಂದು ಹೆಸರು ಗಳಿಸಿದರು. ಕೇರಳದ ಕಮ್ಯುನಿಸ್ಟ್ ಮುಖ್ಯಮಂತ್ರಿಯಾಗಿದ್ದ ಇ.ಎಂ.ಎಸ್.ನಂಬೂದ್ರಿಪಾಡ್ ಮತ್ತು ಪಶ್ಚಿಮ ಬಂಗಾಳದ ಮುಖ್ಯಮಂತ್ರಿಯಾಗಿದ್ದ ಜ್ಯೋತಿಬಸು ಕೂಡ ದೇಗುಲ ದರ್ಶನ ಮಾಡುತ್ತಿರಲಿಲ್ಲ. ಆದರೂ ಜನರು ಅವರನ್ನು ಚುನಾಯಿಸಿ ಅಧಿಕಾರಕ್ಕೆ ತಂದರು. ಬಸು ಅವರಂತೂ ನಾಲ್ಕು ದಶಕಗಳಿಗೂ ಹೆಚ್ಚು ಕಾಲ ಪಶ್ಚಿಮ ಬಂಗಾಳ ಆಳಿದರು.
ದೇವರ ಮೇಲೆ ನಂಬಿಕೆಯಿದ್ದವರು ದೇವಾಲಯಕ್ಕೆ ಹೋಗಲು ಯಾವುದೇ ಅಭ್ಯಂತರವಿಲ್ಲ. ಆದರೆ ಸ್ವಾರ್ಥಕ್ಕಾಗಿ ದೇವರ ಮೊರೆ ಹೋಗುವುದು ಸರಿಯಲ್ಲ. ಬಸವಣ್ಣ, ಕನಕದಾಸ ಮತ್ತು ಕುವೆಂಪು ಅವರು ಜನಿಸಿದ ಕರ್ನಾಟಕದಲ್ಲಿ ಇಂತಹ ಆಷಾಢಭೂತಿತನಕ್ಕೆ ಅವಕಾಶ ಇಲ್ಲ. ಬಿಜೆಪಿಯ ಉಗ್ರ ಹಿಂದುತ್ವಕ್ಕೆ ಮೆದು ಹಿಂದುತ್ವ ಉತ್ತರ ಆಗುವುದಿಲ್ಲ.
ರಾಹುಲ್ ಗಾಂಧಿಯವರು ಕರ್ನಾಟಕಕ್ಕೆ ಬರಲಿ, ಜನಸಾಮಾನ್ಯರ ಮನೆಬಾಗಿಲಿಗೆ ಹೋಗಲಿ, ಕೇಂದ್ರದ ಮೋದಿ ಸರಕಾರದ ವೈಫಲ್ಯದ ಜೊತೆಗೆ ತಮ್ಮ ರಾಜ್ಯ ಸರಕಾರದ ಸಾಧನೆಯನ್ನು ಜನರಿಗೆ ವಿವರಿಸಲಿ. ದೇಶದ ಜಾತ್ಯತೀತ ವ್ಯವಸ್ಥೆಗೆ ಎದುರಾದ ಗಂಡಾಂತರವನ್ನು ತಿಳಿಸಿ ಹೇಳಲಿ. ಸಮಾನ ಮನಸ್ಕ ಪ್ರಗತಿಪರ ಶಕ್ತಿಗಳ ಬೆಂಬಲ ಪಡೆಯಲಿ. ಅದು ಬಿಟ್ಟು ಜನಿವಾರ ಧರಿಸಿ ದೇಗುಲಗಳಿಗೆ ಹೋಗುವುದು ಸರಿಯಲ್ಲ.
ಇಂತಹ ಮೆದು ಹಿಂದುತ್ವದ ನೀತಿ ಕಾಂಗ್ರೆಸ್‌ಗೆ ಅನೇಕ ಬಾರಿ ತಿರುಮಂತ್ರ ಆಗಿದೆ. ರಾಜೀವ್ ಗಾಂಧಿಯವರು ಅಯೋಧ್ಯೆಯ ಬಾಬರಿ ಮಸೀದಿಯ ಬಾಗಿಲು ತೆಗೆಯಲು ಅನುಮತಿ ನೀಡಿ, ಕೋಮುವಾದದ ಭೂತವನ್ನೇ ಸೃಷ್ಟಿಸಿದರು. ಆಗ ಆಘಾತಕ್ಕೆ ಒಳಗಾದ ದೇಶ ಇನ್ನೂ ಚೇತರಿಸಿಲ್ಲ. ಆಗ ಕಾಂಗ್ರೆಸ್‌ನಿಂದ ದೂರವಾದ ಅಲ್ಪಸಂಖ್ಯಾತರು ಇನ್ನೂ ಆ ಪಕ್ಷವನ್ನು ನಂಬುತ್ತಿಲ್ಲ. ದಲಿತರು ಮತ್ತು ಹಿಂದುಳಿದವರು ಕೂಡ ಈಗ ದೂರವಾಗಿದ್ದಾರೆ. ಅಸ್ಪಶ್ಯರಿಗೆ ಪ್ರವೇಶವಿಲ್ಲದ ದೇವಾಲಯಗಳಿಗೆ ಭೇಟಿ ನೀಡಿದರೆ, ಆ ಜನ ಕಾಂಗ್ರೆಸ್‌ನಿಂದ ಇನ್ನಷ್ಟು ದೂರವಾಗುತ್ತಾರೆ. ಈ ತಪ್ಪನ್ನು ರಾಹುಲ್ ಗಾಂಧಿ ಮಾಡದಿರಲಿ.