ಬಾಪೂಜಿ ಎಂಬ ಬೆಳಕು ಆರಿದ ದಿನ

Update: 2018-01-29 06:36 GMT

ಎಪ್ಪತ್ತು ವರ್ಷಗಳ ಹಿಂದೆ ಗಾಂಧಿ ಹತ್ಯೆಯಾದಾಗ ಗುಂಡು ಹಾರಿಸಿದ ನಾಥೂ ರಾಮ್ ಗೋಡ್ಸೆ ತಾನೇ ಕೊಂದಿರುವುದಾಗಿ ಹೇಳಿ ಪೊಲೀಸರಿಗೆ ಶರಣಾಗತನಾದ. ಆದರೆ, ದಾಭೋಲ್ಕರ್, ಪನ್ಸಾರೆ, ಕಲಬುರ್ಗಿ, ಗೌರಿ ಲಂಕೇಶ್‌ರನ್ನು ಗುಂಡಿಕ್ಕಿದ ಆಧುನಿಕ ಗೋಡ್ಸೆಗಳು ಯಾರೆಂಬುದು ಈವರೆಗೆ ಪತ್ತೆಯಾಗಿಲ್ಲ. ಬಾಪೂ ಹತ್ಯೆಯಾದಾಗ ಹಂತಕ ಸಿಕ್ಕರೂ ಸಂಚುಕೂಟ ಸಿಗಲಿಲ್ಲ. ಈಗ ಹಂತಕನೂ ಪತ್ತೆ ಇಲ್ಲ. ಸಂಚುಕೂಟವೂ ಪತ್ತೆಯಾಗಿಲ್ಲ.


ನಾಳೆ ಜನವರಿ 30, ನಾಥೂರಾಮ್ ಗೋಡ್ಸೆ ಗಾಂಧೀಜಿಯನ್ನು ಹತ್ಯೆ ಮಾಡಿದ ದಿನ. ಎಪ್ಪತ್ತು ವರ್ಷದ ಹಿಂದೆ ಇದೇ ದಿನ 30.1.1948 ಬಿರ್ಲಾ ಭವನದಲ್ಲಿ ಸಂಜೆ ಬಾಪು ಹತ್ಯೆ ನಡೆಯಿತು. ಧಾರ್ಮಿಕ ಸಹಿಷ್ಣುತೆಯ ಅತ್ಯಂತ ಪ್ರಭಾವಿ ದನಿಯಾಗಿದ್ದ ಈ ಮಹಾತ್ಮನ ಬಾಯಿ ಮುಚ್ಚಿಸಬೇಕೆಂದರೆ ಕೊಲ್ಲುವುದೊಂದೇ ಏಕೈಕ ದಾರಿ ಎಂದು ಈ ದನಿಯನ್ನು ಸಹಿಸದ ಶಕ್ತಿಗಳು ಭಾವಿಸಿದ್ದವು. ಅಂತಲೇ ಎದೆಗೆ ಗುಂಡಿಕ್ಕುವ ಮೂಲಕ ಆ ದನಿಯನ್ನು ಅಡಗಿಸಿದವು.

ಗಾಂಧೀಜಿ ಗುಂಡಿಗೆ ಬಲಿಯಾದ ಸುದ್ದಿ ಬರುತ್ತಿದ್ದಂತೆ ಬಿರ್ಲಾ ಭವನಕ್ಕೆ ಧಾವಿಸಿ ಬಂದ ಅಂದಿನ ಪ್ರಧಾನಿ ಜವಾಹರಲಾಲ್ ನೆಹರೂ ಬಿರ್ಲಾ ಭವನದ ಗೇಟಿನ ಕಟ್ಟೆಯ ಮೇಲೆ ಹತ್ತಿ ನಿಂತು ‘ಮಹಾತ್ಮಾಜಿ ತೀರಿಕೊಂಡರು, ಮಹಾ ಬೆಳಕೊಂದು ಆರಿ ಹೋಯಿತು’ ಎಂದು ಪ್ರಕಟಿಸಿದರು. ಈ ಮಾತು ಹೇಳುವಾಗ ದುಃಖ ತಡೆಯ ಲಾಗದೆ ಬಿಕ್ಕಿ ಬಿಕ್ಕಿ ಅಳತೊಡಗಿದರು. ನೆಹರೂ ಜೊತೆ ಬಿರ್ಲಾ ಭವನದ ಮುಂದೆ ನಿಂತಿದ್ದ ಸಾವಿರಾರು ಜನ ಅಳತೊಡಗಿದರು.

ಗಾಂಧೀಜಿ ಬಗ್ಗೆ ಎಷ್ಟೇ ಭಿನ್ನಾಭಿಪ್ರಾಯಗಳಿದ್ದರೂ ಅವರ ಸಾವಿನ ಸುದ್ದಿ ಕೇಳಿದಾಗ ಬಾಬಾ ಸಾಹೇಬರು ಆಘಾತ ವ್ಯಕ್ತಪಡಿಸಿದರು. ಬಿರ್ಲಾ ಭವನಕ್ಕೆ ಧಾವಿಸಿದರು. ಈ ಗಾಂಧಿ ಎಂಬ ಫಕೀರನ ವ್ಯಕ್ತಿತ್ವವೇ ಅಂಥದ್ದು. ದೇಶದ ಸ್ವಾತಂತ್ರಕ್ಕಾಗಿ ಜೀವನವಿಡೀಹೋರಾಡಿದರು. ದೇಶ ವಿಭಜನೆಯೊಂದಿಗೆ ಸ್ವಾತಂತ್ರ ಬಂದಾಗ ಸಂಭ್ರಮಿಸುವ ಸ್ಥಿತಿಯಲ್ಲಿ ಗಾಂಧೀಜಿ ಇರಲಿಲ್ಲ. ಎಲ್ಲೆಡೆ ಕೋಮು ದಳ್ಳುರಿ ಹಬ್ಬಿತ್ತು.

ಅಂತಲೆ ಕಲ್ಲು, ಮಣ್ಣು, ಒಡೆದ ಗಾಜಿನ ಚೂರುಗಳಿಂದ ತುಂಬಿದ್ದ ಕೋಲ್ಕತ್ತಾ ರಸ್ತೆಯ ಮೇಲೆ ಕೋಲೂರುತ್ತ್ತಾ ಶಾಂತಿಗಾಗಿ ಹಂಬಲಿಸುತ್ತಾ ಅಲೆದಾಡಿದರು. ದೇಶ ವಿಭಜನೆಗೆ ಗಾಂಧಿ ವಿರೋಧವಾಗಿದ್ದರು. ಆದರೂ ಭಾರತ ಇಬ್ಭಾಗವಾ ಯಿತು. ಪಾಕಿಸ್ತಾನದಂತೆ ಭಾರತ ಧರ್ಮಾಧಾರಿತ ದೇಶವಾಗ ಕೂಡದು ಎಂಬುದು ಗಾಂಧಿ ಬಯಕೆಯಾಗಿತ್ತು. ಅಂದಿನ ನಾಯಕರಾಗಿದ್ದ ನೆಹರೂ, ಅಂಬೇಡ್ಕರ್, ಪಟೇಲ್ ಕೂಡ ಅದೇ ನಿಲುವನ್ನು ಹೊಂದಿದ್ದರು. ಹೀಗಾಗಿ ಭಾರತ ಜಾತ್ಯತೀತ ಜನತಂತ್ರವಾಗಿ ಹೊರಹೊಮ್ಮಿತು.

ಇಂಥ ಗಾಂಧೀಜಿಯನ್ನು ಕೊಂದವರು ನಾಥೂರಾಮ್ ಗೋಡ್ಸೆ ಎಂಬುದು ಎಲ್ಲರಿಗೆ ಗೊತ್ತು. ಆದರೆ, ಈ ಸಂಚಿನ ಸೂತ್ರಧಾರ ಯಾರೆಂದು ಇಂದಿಗೂ ಬಯಲಿಗೆ ಬಂದಿಲ್ಲ. ಬಾಪುವನ್ನು ಕೊಂದ ಗೋಡ್ಸೆ ಬೇರಾರೂ ಅಲ್ಲ. ವಿನಾಯಕ ದಾಮೋದರ ಸಾವರ್ಕರ್ ಶಿಷ್ಯ. ಪುಣೆಯ ಆರೆಸ್ಸೆಸ್ ಹಿನ್ನೆಲೆಯ ಚಿತ್ಪಾವನ ಬ್ರಾಹ್ಮಣ ಯುವಕ ಎಂಬುದು ಎಲ್ಲರಿಗೂ ಗೊತ್ತಿರುವ ಸಂಗತಿ. ಆದರೂ ಈ ಹತ್ಯೆ ಪ್ರಕರಣದಲ್ಲಿ ಸಾವರ್ಕರ್ ದೋಷಮುಕ್ತರಾಗಿ ಹೊರಗೆ ಬಂದರು. ಆರೆಸ್ಸೆಸ್ ಇಂದಿಗೂ ಗೋಡ್ಸೆಗೂ ಸಂಘಕ್ಕೂ ಸಂಬಂಧವಿಲ್ಲ ಎಂದು ಹೇಳುತ್ತಲೇ ಇದೆ.

ಈಗಂತೂ ಪರಿಸ್ಥಿತಿ ಸಂಪೂರ್ಣ ಬದಲಾಗಿದೆ. ಗಾಂಧಿ ಹತ್ಯೆಯ ಆರೋಪವನ್ನು ಒಂದೆಡೆ ನಿರಾಕರಿಸುತ್ತಲೇ ಬಂದ ಆರೆಸ್ಸೆಸ್ ಇನ್ನೊಂದೆಡೆ ಗಾಂಧಿ ಹತ್ಯೆಯನ್ನು ಸಮರ್ಥಿ ಸುವ ಹಾಗೂ ಅನಿವಾರ್ಯವಾಗಿತ್ತೆಂದು ಹೊಸ ಪೀಳಿಗೆಗೆ ಮನ ಗಾಣಿಸುವ ರಹಸ್ಯ ಕಾರ್ಯಾಚರಣೆಯನ್ನು ನಡೆಸುತ್ತ ಬಂದಿದೆ. ಅಂತಲೇ ಮೂವತ್ತರೊಳಗಿನ ಯಾವುದೇ ಮೇಲ್ಜಾತಿ ಯುವಕನನ್ನು ಮಾತನಾಡಿಸಿದರೂ ದೇಶಕ್ಕಾಗಿ ಗೋಡ್ಸೆ ಗಾಂಧಿಯನ್ನು ಕೊಂದ ಎಂಬ ಮಾತು ಆತನ ಬಾಯಿಯಿಂದ ಬರುತ್ತದೆ.

ಗಾಂಧಿ ಹತ್ಯೆಗೂ ತಮಗೂ ಸಂಬಂಧವಿಲ್ಲ ಎಂದು ಹೇಳುತ್ತಿದ್ದವರೇ ಈಗ ಅಲ್ಲಲ್ಲಿ ಗೋಡ್ಸೆ ಜಯಂತಿ ಮಾಡುತ್ತಿದ್ದಾರೆ. ಇಂಥ ಜಯಂತಿಗಳ ಜೊತೆ ಆರೆಸ್ಸೆಸ್ ಜಾಣ ಅಂತರ ಕಾಯ್ದುಕೊಂಡರೂ ಇಂತಹ ಜಯಂತಿಗಳ ಹಿಂದೆ ಅವರ ಕೈವಾಡವಿರುವುದು ಸ್ಪಷ್ಟವಾಗಿದೆ. ಹೀಗೆ ಒಂದೆಡೆ ಗಾಂಧಿ ಹಂತಕನಿಗೂ ತಮಗೂ ಸಂಬಂಧವಿಲ್ಲವೆನ್ನುತ್ತಲೇ ಒಂದೆಡೆ ಅದನ್ನು ಸಮರ್ಥಿಸುವ ಯುವಕರ ತಂಡವನ್ನು ಸಂಘಪರಿವಾರ ಸಿದ್ಧಪಡಿಸುತ್ತಿದೆ. ಮಹಾತ್ಮಾ ಗಾಂಧೀಜಿಯೂ ಹಿಂದೂ ಧಾರ್ಮಿಕ ಶಕ್ತಿಯಾಗಿದ್ದರು. ಅವರ ಆಶ್ರಮದಲ್ಲಿ ನಿತ್ಯವೂ ಪ್ರಾರ್ಥನೆ ನಡೆಯುತ್ತಿತ್ತು. ಆದರೂ ಹಿಂದುತ್ವವಾದಿಗಳೇ ಯಾಕೆ ಗಾಂಧಿ ಹತ್ಯೆ ಸಮರ್ಥಿಸಿದರೆಂಬುದು ಸಹಜವಾಗಿ ಉದ್ಭವವಾಗುವ ಪ್ರಶ್ನೆ. ಗಾಂಧಿ ಹಿಂದೂ ಧಾರ್ಮಿಕ ವ್ಯಕ್ತಿಯಾಗಿದ್ದರೂ ಹಿಂದೂ ಕೋಮುವಾದಿ ಯಾಗಿರಲಿಲ್ಲ. ಭಾರತದಲ್ಲಿ ಹಿಂದೂಗಳು ಮಾತ್ರ ಇರಬೇಕೆಂಬ ಸಿದ್ಧಾಂತಕ್ಕೆ ವಿರೋಧಿಯಾಗಿದ್ದರು.

ಆದರೆ ಭಾರತ ಹಿಂದೂಗಳಿಗೆ ಸೇರಿದ್ದು, ಮುಸಲ್ಮಾನರು ಈ ದೇಶದಲ್ಲಿರ ಬೇಕೆಂದರೆ ಹಿಂದೂಗಳ ಅಂದರೆ ಪುರೋಹಿತಶಾಹಿಗಳ ಗುಲಾಮರಂತೆ ಎರಡನೆ ದರ್ಜೆಯ ಪ್ರಜೆಗಳಾಗಿ ಇರಬೇಕೆಂದು ಆರೆಸ್ಸೆಸ್ ಮೊದಲಿನಿಂದ ಪ್ರತಿಪಾದಿಸುತ್ತಿತ್ತು. ಗಾಂಧಿ ಇದನ್ನು ಒಪ್ಪುತ್ತಿರಲಿಲ್ಲ. ಅಂತಲೇ ಸಾರ್ವಕರ್ ಮಾತ್ರವಲ್ಲ ಆರೆಸ್ಸೆಸ್ ಸರ ಸಂಘಚಾಲಕ ಮಾಧವ ಸದಾಶಿವ ಗೊಳ್ವಾಲ್ಕಕರ್‌ಗೆ ಗಾಂಧಿಯನ್ನು ಕಂಡರೆ ಆಗುತ್ತಿರಲಿಲ್ಲ.

ಕರ್ತಾರ್ ಸಿಂಗ್ ಎಂಬ ಗುಪ್ತಚರದಳದ ಇನ್‌ಸ್ಪೆಕ್ಟರ್ ಒಬ್ಬರು ಸಂಗ್ರಹಿಸಿದ ಮಾಹಿತಿಯ ದಾಖಲೆ ಗಾಂಧಿ ಹತ್ಯೆ ಸಂಚಿನ ಮೇಲೆ ಹೊಸ ಬೆಳಕು ಚೆಲ್ಲಿದೆ. 1947 ರ ಡಿಸೆಂಬರ್ 8ರಂದು ದಿಲ್ಲಿಯ ರೊಹ್ಟಕ್ ರಸ್ತೆಯಲ್ಲಿ ನಡೆದ ಆರೆಸ್ಸೆಸ್ ಶಿಬಿರದಲ್ಲಿ ಮಾತನಾಡಿದ ಗೋಳ್ವ್ವಾಲ್ಕರ್ ಮುಸಲ್ಮಾನರ ಬಗ್ಗೆ ಪ್ರಸ್ತಾಪಿಸುತ್ತಾ ‘‘ಅವರನ್ನು ಭಾರತದಲ್ಲಿ ಸ್ಥಿರವಾಗಿ ನೆಲೆಗೊಳಿಸುವುದು ಸಾಧ್ಯವಿಲ್ಲ. ಜಗತ್ತಿನ ಯಾವ ಶಕ್ತಿಗೂ ಹಾಗೆ ಮಾಡುವುದು ಅಸಾಧ್ಯ. ಅವರು ಭಾರತ ಬಿಟ್ಟು ಹೋಗಬೇಕು’’ ಎಂದು ಹೇಳುತ್ತಾರೆ. ಗೋಳ್ವಾಲ್ಕರ್ ಮಾತು ಇಷ್ಟಕ್ಕೇ ನಿಲ್ಲುವುದಿಲ್ಲ. ಅವರು ಮುಂದುವರಿದು, ‘‘ಮಹಾತ್ಮಾ ಗಾಂಧೀಜಿ ಮುಸಲ್ಮಾನರನ್ನು ಭಾರತದಲ್ಲೇ ಉಳಿಸಿಕೊಳ್ಳಲು ಬಯಸು ತ್ತಿದ್ದಾರೆ. ಚುನಾವಣೆಯಲ್ಲಿ ಈ ಮುಸ್ಲಿಮರು ಕಾಂಗ್ರೆಸ್ ಓಟ್‌ಬ್ಯಾಂಕ್ ಆಗುತ್ತಾರೆ. ಅವರನ್ನು ಇಲ್ಲಿ ಉಳಿಸಿಕೊಳ್ಳುವುದಾದರೆ ಅವರ ಸುರಕ್ಷತೆ ಜವಾಬ್ದಾರಿಯನ್ನು ಸರಕಾರ ಹೊತ್ತು ಕೊಳ್ಳಬೇಕು. ಹಿಂದೂ ಸಮಾಜ ಹೊರುವುದಿಲ್ಲ’’ ಎಂದು ಗೋಳ್ವಾಲ್ಕರ್ ಹೇಳುತ್ತಾರೆ. ಗೋಳ್ವಾಲ್ಕರ್ ಮಾತು ಇಲ್ಲಿಗೇ ನಿಲ್ಲುವುದಿಲ್ಲ. ‘‘ಮುಸಲ್ಮಾನರ ಪರವಾಗಿ ಗಾಂಧೀಜಿ ಸಹಾನುಭೂತಿಯಿಂದ ಮಾತನಾಡುತ್ತಾರೆ. ಈ ಮನುಷ್ಯನ ಬಾಯಿ ಯನ್ನು ನಾವು ಮುಚ್ಚಿಸಬೇಕಾಗಿದೆ’’ ಎಂದು ಗೋಳ್ವಾಲ್ಕರ್ ಹೇಳುತ್ತಾರೆ. ಮುಂದೆ ಗಾಂಧಿ ಧ್ವನಿ ಯನ್ನು ಅಡಗಿಸುವ ಕೆಲಸವನ್ನು ಗೋಡ್ಸೆಯ ಪಿಸ್ತೂಲ್ ಮಾಡಿತು.

ಇಂದಿಗೂ ಸಂಘಪರಿವಾರದ ನಾಯಕರಿಂದ ಇಂಥ ಮಾತುಗಳನ್ನೇ ಕೇಳುತ್ತಿ ದ್ದೇವೆ. ಶೋಭಾ ಕರಂದ್ಲಾಜೆಯಿಂದ ಸಿ.ಟಿ.ರವಿವರೆಗೆ, ಕಲ್ಲಡ್ಕ ಪ್ರಭಾಕರ ಭಟ್ಟರಿಂದ ಜಗದೀಶ್ ಕಾರಂತರವರೆಗೆ ಇಂಥ ದ್ವೇಷದ ಮಾತುಗಳೇ ಬರುತ್ತಿವೆ. ಓಟ್ ಬ್ಯಾಂಕ್ ರಾಜಕಾರಣದ ವರಸೆ ಈಗಲೂ ಬದಲಾಗಿಲ್ಲ. ತಮ್ಮ ವಿರೋಧಿಗಳ ದನಿ ಅಡಗಿಸುವ ಕೆಲಸವೂ ನಡೆದಿದೆ. ಗಾಂಧಿ ಹತ್ಯೆಯ ನಂತರ ಆರು ದಶಕಗಳ ಕಾಲ ಒಳಗಿದ್ದ ಪಿಸ್ತೂಲುಗಳು ಮತ್ತೆ ಹೊರಗೆ ಬಂದಿವೆ. ಬಾಬರಿ ಮಸೀದಿ ಧ್ವಂಸ, ಗುಜರಾತ್ ಹತ್ಯಾಕಾಂಡದಿಂದ ಇವರಿಗೆ ಹೊಸ ಧೈರ್ಯ ಬಂದಿದೆ. ಅಂತಲೇ ಕೇಂದ್ರ ಸಚಿವ ಅನಂತಕುಮಾರ್ ಹೆಗಡೆ ಸಂವಿಧಾನದ ಬದಲಾವಣೆ ಬಗ್ಗೆ ಮಾತನಾಡುತ್ತಿದ್ದಾರೆ. ಈ ಮಾತುಗಳನ್ನು ಸಂಘಪರಿವಾರ ಇವರಿಂದ ಆಡಿಸುತ್ತಿದೆ. ನವ ಗೋಡ್ಸೆಗಳ ಪಿಸ್ತೂಲುಗಳು ಪಾಕಿಸ್ತಾನ ಗಡಿಯಲ್ಲಿ ಸದ್ದು ಮಾಡುವುದಿಲ್ಲ. ಯಾವುದೇ ಭಯೋತ್ಪಾದಕರನ್ನು ಕೊಂದಿಲ್ಲ. ಬದಲಾಗಿ ಈ ಪಿಸ್ತೂಲುಗಳು ವಿಚಾರ ವಾದಿ ನರೇಂದ್ರ ದಾಭೋಲ್ಕರ್‌ರನ್ನು ಕೊಂದವು. ಕೊಲ್ಲಾಪುರದಲ್ಲಿ ಕಮ್ಯೂನಿಸ್ಟ್ ನಾಯಕ ಗೋವಿಂದ ಪನ್ಸಾರೆ ಅವರನ್ನು ಬಲಿ ತೆಗೆದುಕೊಂಡವು. ನಂತರ ಮಹಾರಾಷ್ಟ್ರದ ಗಡಿದಾಟಿ ಧಾರವಾಡಕ್ಕೆ ಬಂದು ಕಲಬುರ್ಗಿ ಅವರ ದನಿಯನ್ನು ಅಡಗಿಸಿದವು. ಕಳೆದ ವರ್ಷ ಗೌರಿ ಲಂಕೇಶ್‌ರನ್ನು ಮುಗಿಸಿದವು.

ಎಪ್ಪತ್ತು ವರ್ಷಗಳ ಹಿಂದೆ ಗಾಂಧಿ ಹತ್ಯೆಯಾದಾಗ ಗುಂಡು ಹಾರಿಸಿದ ನಾಥೂ ರಾಮ್ ಗೋಡ್ಸೆ ತಾನೇ ಕೊಂದಿರುವುದಾಗಿ ಹೇಳಿ ಪೊಲೀಸರಿಗೆ ಶರಣಾಗತನಾದ. ಆದರೆ, ದಾಭೋಲ್ಕರ್, ಪನ್ಸಾರೆ, ಕಲಬುರ್ಗಿ, ಗೌರಿ ಲಂಕೇಶ್‌ರನ್ನು ಗುಂಡಿಕ್ಕಿದ ಆಧುನಿಕ ಗೋಡ್ಸೆಗಳು ಯಾರೆಂಬುದು ಈವರೆಗೆ ಪತ್ತೆಯಾಗಿಲ್ಲ. ಬಾಪೂ ಹತ್ಯೆಯಾ ದಾಗ ಹಂತಕ ಸಿಕ್ಕರೂ ಸಂಚುಕೂಟ ಸಿಗಲಿಲ್ಲ. ಈಗ ಹಂತಕನೂ ಪತ್ತೆ ಇಲ್ಲ. ಸಂಚುಕೂಟವೂ ಪತ್ತೆಯಾಗಿಲ್ಲ. ದಾಭೋಲ್ಕರ್ ಹತ್ಯೆಯಾದಾಗ ಒಂದಿಷ್ಟು ಪ್ರತಿಭಟನೆಗಳು ನಡೆದವು. ಆ ಘಟನೆಯನ್ನು ಜನರು ಮರೆಯುತ್ತಿದ್ದಂತೆ ಗೋವಿಂದ ಪನ್ಸಾರೆ ಹತ್ಯೆ ನಡೆಯಿತು. ಆಗಲೂ ಕೊಲ್ಹಾಪುರ ಸುತ್ತಮುತ್ತಾ ಒಂದಿಷ್ಟು ಪ್ರತಿಭಟನೆಗಳು ನಡೆದವು. ಆದರೆ ಯಾವ ಸಂಘಟಿತ ಕಾರ್ಮಿಕ ವರ್ಗದ ಪರವಾಗಿ ಪನ್ಸಾರೆ ತಮ್ಮ ಬದುಕನ್ನೇ ಸಮರ್ಪಿಸಿಕೊಂಡಿದ್ದರೋ ಆ ಸಂಘಟಿತ ನವ ಮಧ್ಯಮ ವರ್ಗ ಬೀದಿಗೆ ಬರಲಿಲ್ಲ. ರೋಷಾವೇಶದ ಪ್ರತಿಭಟನೆ ನಡೆಯಲಿಲ್ಲ.

ಗೋವಿಂದ ಪನ್ಸಾರೆ ಹತ್ಯೆಯನ್ನು ನಿಧಾನವಾಗಿ ಜನರು ಮರೆಯತೊಡಗಿದಂತೆ ಧಾರವಾಡದಲ್ಲಿ ಡಾ.ಕಲಬುರ್ಗಿ ಅವರ ಹತ್ಯೆ ನಡೆಯಿತು. ಆಗಲೂ ಧಾರವಾಡ, ಬೆಂಗಳೂರು ಮತ್ತಿತರ ಕಡೆ ಪ್ರತಿಭಟನೆಗಳು ನಡೆದವು. ಕ್ರಮೇಣ ಜನ ಈ ಘಟನೆಯನ್ನು ಮರೆಯುತ್ತಿದ್ದಂತೆ ಕಳೆದ ವರ್ಷ ಸೆಪ್ಟಂಬರ್ 5ರಂದು ಬೆಂಗಳೂರಿನಲ್ಲಿ ಗೌರಿ ಲಂಕೇಶ್ ಇವರ ಪಿಸ್ತೂಲಿಗೆ ಬಲಿಯಾದರು.
‘‘ಗೌರಿ ಲಂಕೇಶ್ ಹತ್ಯೆಯ ನಂತರ ನಾವು ಮತ್ತೆ ಪ್ರತಿಭಟನೆ ನಡೆಸಿದೆವು. ಬೀದಿಗೆ ಇಳಿದೆವು. ‘‘ನಾನು ಗೌರಿ’’ ಎಂದು ಘೋಷಣೆ ಹಾಕಿದೆವು. ಈಗಲೂ ಹಾಕುತ್ತಿದ್ದೇವೆ. ಆದರೆ, ಗೌರಿ ಹಂತಕರ ಪತ್ತೆ ಇಲ್ಲ. ಇನ್ನೇನು ಕಾದಿದೆಯೋ’’ ಎಂಬ ಆತಂಕ ಎಲ್ಲ ಪ್ರಗತಿಪರರ ಎದೆಯಲ್ಲಿ ಮಡುಗಟ್ಟಿದೆ.

ಗಾಂಧಿ ಹತ್ಯೆಯಾದಾಗ ಮತ್ತು ಈಗ ಚಿಂತಕರ ಹತ್ಯೆ ನಡೆದಾಗ ನಾವು ಕಂಡ ವ್ಯತ್ಯಾಸವೆಂದರೆ ಗಾಂಧಿ ಹತ್ಯೆಯಾದಾಗ ಜನರು ರೊಚ್ಚಿಗೆದ್ದು ಹಂತಕರ ಪರಿ ವಾರಕ್ಕೆ ಸೇರಿದವರ ಮನೆಗಳ ಮೇಲೆ ಹಲ್ಲೆ ನಡೆದ ಘಟನೆಗಳು ಜರುಗಿದ್ದವು. ಆಗಲೂ ಸಿಹಿ ಹಂಚಿದವರಿದ್ದರೂ ಅವರು ಜನರಿಂದ ಧರ್ಮದೇಟು ತಿಂದಿದ್ದರು. ಆದರೆ ಈಗ ದಾಭೋಳ್ಕರ್, ಪನ್ಸಾರೆ, ಕಲಬುರ್ಗಿ, ಗೌರಿ ಲಂಕೇಶ್ ಹತ್ಯೆ ನಡೆದಾಗ, ಡಾ. ಅನಂತಮೂರ್ತಿ ಅವರು ನಿಧನ ಹೊಂದಿದಾಗ ಬಹಿರಂಗ ವಾಗಿ ಪಟಾಕಿ ಸಿಡಿಸಿ ಸಂಭ್ರಮಿಸಿದವರನ್ನು ಕಂಡಿದ್ದೇವೆ. ಸಾಮಾಜಿಕ ಜಾಲ ತಾಣಗಳಲ್ಲಿ ಸಂತಸ ಹಂಚಿಕೊಳ್ಳುವ ಸೈಕೋಪಾತ್‌ಗಳನ್ನು ಕಾಣುತ್ತಿದ್ದೇವೆ. ಗಾಂಧಿ ಹತ್ಯೆಯಾದಾಗ ರಾಜ್ಯಾಧಿಕಾರ ಇವರ ಕೈಯಲ್ಲಿರಲಿಲ್ಲ. ಸ್ವಾತಂತ್ರದ ಆರಂಭದ ಆ ದಿನಗಳಲ್ಲಿ ನೆಹರೂ ನೇತೃತ್ವದಲ್ಲಿ ಕಾಂಗ್ರೆಸ್ ಸರಕಾರ ಭದ್ರವಾಗಿತ್ತು. ಆದರೆ, ಈಗ ಹಾಗಿಲ್ಲ. ಪ್ರಭುತ್ವದ ಸೂತ್ರಗಳೇ ಇವರ ಕೈಗೆ ಸಿಕ್ಕಿವೆ. ಬೇಕಾದದ್ದನ್ನು ಮಾಡಿ ದಕ್ಕಿಸಿಕೊಳ್ಳುವ ಸಾಮರ್ಥ್ಯವನ್ನು ಪಡೆದಿದ್ದಾರೆ. ಕಾರ್ಯಾಂಗ, ಶಾಸಕಾಂಗ, ನ್ಯಾಯಾಂಗ ಎಲ್ಲೆಡೆ ಹಸ್ತಕ್ಷೇಪ ನಡೆದಿದೆ.

ಇಂತಹ ಸನ್ನಿವೇಶದಲ್ಲಿ ಮುಂದೇನು ಮಾಡಬೇಕೆಂಬ ಪ್ರಶ್ನೆ ನಮ್ಮೆಲ್ಲರ ಮುಂದಿದೆ. ಈಗ ಬರೀ ಚಿಂತಕರ ಪ್ರಾಣಕ್ಕೆ ಮಾತ್ರ ಗಂಡಾಂತರ ಬಂದಿಲ್ಲ. ನಮ್ಮನ್ನೆಲ್ಲ ಸಲಹಿದ, ಮಾತನಾಡುವ ಖಾತರಿ ನೀಡಿದ ಪ್ರಜಾಪ್ರಭುತ್ವಕ್ಕೇ ಅಪಾಯ ಎದುರಾಗಿದೆ. ಈ ಮಾತನ್ನು ಸುಪ್ರೀಂ ಕೋರ್ಟ್‌ನ ನಾಲ್ವರು ನ್ಯಾಯಾಧೀಶರೇ ಸುದ್ದಿಗೋಷ್ಠಿ ಕರೆದು ಹೇಳಿದ್ದು. ಈ ಗಂಡಾಂತರದಿಂದ ಪ್ರಜಾಪ್ರಭುತ್ವವನ್ನು ಉಳಿಸಿಕೊಳ್ಳಬೇಕೆಂದರೆ ಪ್ರಭುತ್ವದ ಮೇಲಿನ ಸಂಘಪರಿವಾರದ ಹಿಡಿತ ತಪ್ಪಿಸಬೇಕು. ರಾಜ್ಯಾಧಿ ಕಾರದಿಂದ ಇವರನ್ನು ದೂರ ಇಡಬೇಕು. ಇದು ಸಾಧ್ಯವಾಗಬೇಕಾದರೆ ಬಿಜೆಪಿಯೇತರ ಪ್ರತಿಪಕ್ಷಗಳು ಒಂದಾಗಬೇಕು. ಆಗ ಮಾತ್ರ ಇವರನ್ನು ಹಿಮ್ಮೆಟ್ಟಿಸಲು ಸಾಧ್ಯ. ಬಿಜೆಪಿಯೇತರ ಪ್ರತಿಪಕ್ಷಗಳು ಒಂದಾಗುತ್ತವೆಯೇ ಫ್ಯಾಶಿಸ್ಟರನ್ನು ಪ್ರಭುತ್ವದಿಂದ ದೂರವಿಡಲು ಸಾಧ್ಯವಾಗುವುದೇ?, ಈ ದೇಶದಲ್ಲಿ ಪ್ರಜಾ ಪ್ರಭುತ್ವ ಸುರಕ್ಷಿತವಾಗಿ ಉಳಿಯುವುದೇ? ಈ ಪ್ರಶ್ನೆಗೆ ಉತ್ತರ ಗೋಚರಿಸುತ್ತಿಲ್ಲ. ಮನುವಾದಿಗಳು ಮಡಿವಂತಿಕೆ ಬಿಟ್ಟು ಎಲ್ಲರ ಜೊತೆ ಸೇರಿ ತಮ್ಮ ಗುರಿ ಸಾಧಿಸುತ್ತಿದ್ದಾರೆ. ನಾವು ಮಾನವತಾವಾದಿಗಳು ಒಂದಾಗುತ್ತಿಲ್ಲ. ಈ ದೇಶದ ಪ್ರಜಾಪ್ರಭುತ್ವದ ಭವಿಷ್ಯದ ದೃಷ್ಟಿಯಿಂದ 2019ರ ಲೋಕ ಸಭಾ ಚುನಾವಣೆ ಮಹತ್ವದ್ದಾಗಿದೆ. ಆಗಲಾದರೂ ಬಿಜೆಪಿಯೇತರ ಪ್ರತಿಪಕ್ಷ ಗಳು ಒಂದಾಗದಿದ್ದರೆ ಇದಕ್ಕಿಂತ ಕರಾಳ ದಿನಗಳು ಬರಲಿವೆ.

Writer - ಸನತ್ ಕುಮಾರ್ ಬೆಳಗಲಿ

contributor

Editor - ಸನತ್ ಕುಮಾರ್ ಬೆಳಗಲಿ

contributor

Similar News

ನಾಸ್ತಿಕ ಮದ