ನೀವು ಸರಿಯಾಗಿ ಹಲ್ಲುಜ್ಜುತ್ತಿಲ್ಲವೇ? ಅದು ಹೃದಯಾಘಾತಕ್ಕೆ ಕಾರಣವಾಗಬಹುದು

Update: 2018-01-29 11:02 GMT

ಸೋಂಕುಪೀಡಿತ ಒಸಡುಗಳಲ್ಲಿಯ ಬ್ಯಾಕ್ಟೀರಿಯಾಗಳು ನಿಮ್ಮ ಹೃದಯಕ್ಕೆ ಹರಡಬಲ್ಲವು ಮತ್ತು ಹೃದ್ರೋಗಗಳಿಗೆ ಕಾರಣವಾಗಬಲ್ಲವು. ವಸಡಿನ ರೋಗಗಳುಳ್ಳ ವ್ಯಕ್ತಿಗಳು ಹೃದ್ರೋಗಗಳಿಗೆ ಗುರಿಯಾಗುವ ಸಾಧ್ಯತೆ ಉತ್ತಮ ಬಾಯಿ ಆರೋಗ್ಯ ಹೊಂದಿರುವ ವ್ಯಕ್ತಿಗಳಿಗೆ ಹೋಲಿಸಿದರೆ ಎರಡು ಪಟ್ಟು ಹೆಚ್ಚು ಎನ್ನುವುದನ್ನು ಅಧ್ಯಯನಗಳು ಸಾಬೀತುಗೊಳಿಸಿವೆ. ಭಾರತದಲ್ಲಿ ಹೃದ್ರೋಗಿಗಳ ಸಂಖ್ಯೆಯು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಬಾಯಿ ಮತ್ತು ಹೃದಯದ ಆರೋಗ್ಯದ ನಡುವಿನ ನಂಟು ಹೆಚ್ಚಿನ ಪ್ರಾಮುಖ್ಯವನ್ನು ಪಡೆಯುತ್ತದೆ.

ಬಾಯಿಯ ಅನಾರೋಗ್ಯ ಹೃದ್ರೋಗಕ್ಕೆ ಹೇಗೆ ಕಾರಣವಾಗುತ್ತದೆ?

ಹಲ್ಲುಗಳ ಮೇಲೆ ಸಂಗ್ರಹಗೊಳ್ಳುವ ಪಾಚಿಯಲ್ಲಿರುವ ಮತ್ತು ಹೆಚ್ಚಿನ ಬಾಯಿ ರೋಗಗಳಿಗೆ ಕಾರಣವಾಗುವ ಬ್ಯಾಕ್ಟೀರಿಯಾಗಳು ನಿಮ್ಮ ವಸಡುಗಳಿಗೆ ಸೋಂಕನ್ನುಂಟು ಮಾಡಬಲ್ಲವು. ಈ ಸೋಂಕಿನಿಂದಾಗಿ ವಸಡುಗಳು ಬಾತುಕೊಳ್ಳುತ್ತವೆ ಮತ್ತು ಅವುಗಳಿಂದ ರಕ್ತ ಒಸರತೊಡಗುತ್ತದೆ. ಆಹಾರವನ್ನು ಅಗಿಯುವ ಅಥವಾ ಹಲ್ಲುಗಳನ್ನು ಬ್ರಷ್ ಮಾಡುವ ನಿಮ್ಮ ಸಾಮಾನ್ಯ ಚಟುವಟಿಕೆಗಳಿಂದಾಗಿ ರೋಗಕಾರಕ ಬ್ಯಾಕ್ಟೀರಿಯಾಗಳು ರಕ್ತದಲ್ಲಿ ಸೇರಿಕೊಳ್ಳುತ್ತವೆ. ಹೀಗೆ ರಕ್ತದಲ್ಲಿ ಸೇರಿಕೊಂಡು ಸಾಗುವ ಈ ಬ್ಯಾಕ್ಟೀರಿಯಾಗಳು ಹೃದಯ ಸೇರಿದಂತೆ ನಿಮ್ಮ ಶರೀರದ ವಿವಿಧ ಭಾಗಗಳಿಗೆ ತಲುಪುತ್ತವೆ.

ಬ್ಯಾಕ್ಟೀರಿಯಾಗಳು ಹೃದಯವನ್ನು ಪ್ರವೇಶಿಸಿದರೆ ಏನಾಗುತ್ತದೆ?

ಉರಿಯೂತ ಸೋಂಕಿಗೆ ಶರೀರದ ಮೊದಲ ಪ್ರತಿಕ್ರಿಯೆಯಾಗಿರುತ್ತದೆ. ಹಲ್ಲಿನ ಪಾಚಿಗಳಲ್ಲಿಯ ಬ್ಯಾಕ್ಟೀರಿಯಾಗಳು ಹೃದಯವನ್ನು ತಲುಪಿದಾಗ ಅದು ಇಂತಹುದೇ ಪ್ರತಿಕ್ರಿಯೆಯನ್ನು ತೋರಿಸುತ್ತದೆ. ಇದು ಅಪಧಮನಿಗಳ ಪಾಚಿ ರೂಪುಗೊಳ್ಳಲು ಕಾರಣವಾಗುತ್ತದೆ. ವಿವಿಧ ಅಧ್ಯಯನಗಳಲ್ಲಿ ಬಾಯಿಯಲ್ಲಿರುವ ಬ್ಯಾಕ್ಟೀರಿಯಾಗಳು ಅಪಧಮನಿಗಳಲ್ಲಿ ಸಂಗ್ರಹಗೊಳ್ಳುವ ಪಾಚಿಗಳಲ್ಲಿ ಕಂಡುಬಂದಿವೆ. ಅಪಧಮನಿಗಳಲ್ಲಿಯ ಪಾಚಿಯು ಅವುಗಳನ್ನು ಪೆಡಸಾಗಿಸುತ್ತದೆ ಮತ್ತು ಇದು ಹೃದಯಾಘಾತ ಅಥವಾ ಮಿದುಳಿನ ಆಘಾತವನ್ನುಂಟು ಮಾಡುತ್ತದೆ.

ಇದನ್ನು ತಡೆಯಲು ಏನು ಮಾಡಬೇಕು?

ಬಾಯಿಯ ಆರೋಗ್ಯ ಮತ್ತು ಹೃದ್ರೋಗಗಳಿಗೂ ನಂಟಿರುವ ಹಿನ್ನೆಲೆಯಲ್ಲಿ ವಸಡುಗಳ ಸೋಂಕಿನ ಲಕ್ಷಣಗಳನ್ನು ತಿಳಿದುಕೊಳ್ಳುವುದು ಮುಖ್ಯವಾಗಿದೆ. ವಸಡು ರೋಗದ ಕೆಲವು ಆರಂಭಿಕ ಲಕ್ಷಣಗಳು ಹೀಗಿವೆ:

► ಹಲ್ಲುಜ್ಜಿದಾಗ ರಕ್ತಸ್ರಾವ

ಹಲ್ಲುಜ್ಜುವಾಗಿ ಉಗುಳಿನಲ್ಲಿ ರಕ್ತವು ಕಂಡುಬಂದರೆ ನಿಮ್ಮ ವಸಡುಗಳು ಸೋಂಕಿಗೊಳಗಾಗಿರುವ ಸಾಧ್ಯತೆಯು ಹೆಚ್ಚಿರುತ್ತದೆ. ಒಂದು ಅಥವಾ ಎರಡು ಬಾರಿ ರಕ್ತ ಒಸರಿದರೆ ಚಿಂತಿಸಬೇಕಿಲ್ಲ. ಆದರೆ ನಿರಂತರ ರಕ್ತಸ್ರಾವವಾಗುತ್ತಿದ್ದರೆ ಅದು ಕಳವಳ ಪಡಬೇಕಾದ ವಿಷಯವಾಗುತ್ತದೆ.

► ಕೆಂಪುಬಣ್ಣಕ್ಕೆ ತಿರುಗಿದ ಅಥವಾ ಬಾತುಕೊಂಡ ವಸಡುಗಳು

ನಿಮ್ಮ ವಸಡುಗಳಲ್ಲಿ ಏನಾದರೂ ಬದಲಾವಣೆ ಅನುಭವವಾಗುತ್ತಿದೆಯೇ? ಆಹಾರವನ್ನು ಅಗಿಯುವಾಗ ಅವು ತೊಂದರೆಯನ್ನುಂಟು ಮಾಡುತ್ತಿವೆಯೇ? ನಿಮ್ಮ ವಸಡುಗಳು ಬಾತುಕೊಂಡಿದ್ದರೆ ಅಥವಾ ಕೆಂಪುಬಣ್ಣದಿಂದ ಕೂಡಿದ್ದರೆ ಅವು ಸೋಂಕಿಗೆ ಒಳಗಾಗಿರಬಹುದು.

► ಬಾಯಿಯಲ್ಲಿ ನೋವು

ವಸಡುಗಳು, ಕೆನ್ನೆಗಳು, ಹಲ್ಲುಗಳು ಅಥವಾ ನಾಲಿಗೆ....ಹೀಗೆ ಬಾಯಿಯ ಯಾವುದೇ ಭಾಗದಲ್ಲಿ ನೋವುಂಟಾಗುತ್ತಿದ್ದರೆ ಅದು ಸೋಂಕಿನ ಲಕ್ಷಣವಾಗಿರಬಹುದು. ಬಾಯಿಯಲ್ಲಿ ನೋವು ಕಾಣಿಸಿಕೊಂಡರೆ ವೈದ್ಯಕೀಯ ತಪಾಸಣೆ ಮಾಡಿಸಿಕೊಳ್ಳುವುದು ಒಳ್ಳೆಯದು.

► ವಸಡುಗಳಲ್ಲಿ ಕೀವು

ವಸಡುಗಳಲ್ಲಿ ಕೀವು ಸೋಂಕಿನ ಇನ್ನೊಂದು ಲಕ್ಷಣವಾಗಿದೆ. ವಸಡುಗಳಲ್ಲಿ ಕೀವು ಆಗಿದ್ದರೆ ಅದರಿಂದ ಏನೋ ಒಸರುತ್ತಿರುವ ಅನುಭವ ನಿಮಗಾಗುತ್ತಿರುತ್ತದೆ.

► ಬಾಯಿಯಲ್ಲಿ ಹುಣ್ಣುಗಳು

ಬಾಯಿಯಲ್ಲಿನ ಹುಣ್ಣುಗಳು ಸೋಂಕಿನ ಲಕ್ಷಣವಾಗಿರದಿರಬಹುದು, ಆದರೆ ಅವು ಬಾಯಿಯಲ್ಲಿನ ಬ್ಯಾಕ್ಟೀರಿಯಾಗಳು ರಕ್ತದಲ್ಲಿ ಸೇರಿಕೊಳ್ಳಲು ಹೆಬ್ಬಾಗಿಲು ಆಗಬಹುದು.

► ನಿರಂತರ ಬಾಯಿಯ ದುರ್ವಾಸನೆ

ಬಾಯಿಯ ದುರ್ವಾಸನೆಗೆ ಹಲವಾರು ಕಾರಣಗಳಿರಬಹುದು ಮತ್ತು ವಸಡುಗಳ ಸೋಂಕು ಅವುಗಳಲ್ಲೊಂದಾಗಿದೆ. ಒಂದು ವಾರಕ್ಕೂ ಹೆಚ್ಚು ಸಮಯದಿಂದ ಬಾಯಿ ದುರ್ನಾತ ಬೀರುತ್ತಿದ್ದರೆ ನೀವು ನಿಮ್ಮ ದಂತವೈದ್ಯರನ್ನು ಕಾಣಲೇಬೇಕು.

► ಸಡಿಲ ಹಲ್ಲು

ವಸಡುಗಳ ಸೋಂಕು ಬಾಯಿಯ ಅಂಗಾಂಶಗಳಿಗೆ ಹಾನಿಯನ್ನುಂಟು ಮಾಡುತ್ತದೆ ಮತ್ತು ಇದು ಹಲ್ಲುಗಳು ಸಡಿಲಗೊಳ್ಳಲು ಕಾರಣವಾಗುತ್ತದೆ.

ಇವುಗಳಲ್ಲಿ ಯಾವುದೇ ಲಕ್ಷಣವು ವಸಡಿನ ರೋಗವನ್ನು ಸೂಚಿಸುತ್ತದೆ. ಹೀಗಾಗಿ ಈ ಲಕ್ಷಣಗಳಿದ್ದಲ್ಲಿ ಆದಷ್ಟು ಶೀಘ್ರ ನಿಮ್ಮ ದಂತವೈದ್ಯರನ್ನು ಸಂಪರ್ಕಿಸುವುದು ಒಳ್ಳೆಯದು. ಹೃದ್ರೋಗಗಳಿಗೆ ಭಾರತದಲ್ಲಿ ಪ್ರತಿವರ್ಷ 17 ಲಕ್ಷ ಜನರು ಬಲಿಯಾಗುತ್ತಾರೆ. ಹೀಗಾಗಿ ಬಾಯಿಯ ಆರೋಗ್ಯವನ್ನು ಕಾಯ್ದುಕೊಂಡು ಹೃದ್ರೋಗಗಳಿಂದ ದೂರವಿರಿ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News