ಮಕ್ಕಳ ಹಲ್ಲುಗಳ ಆರೋಗ್ಯ: ಈ ವಿಷಯಗಳು ನಿಮಗೆ ತಿಳಿದಿರಲಿ

Update: 2018-02-01 09:56 GMT

 ನಿಮ್ಮ ಮಕ್ಕಳ ವಿಷಯದಲ್ಲಿ ನೀವೆಂದೂ ರಾಜಿ ಮಾಡಿಕೊಳ್ಳುವುದಿಲ್ಲ. ಅದು ಶಾಲೆಯಾಗಿರಲಿ,ತೊಡುವ ಬಟ್ಟೆಯಾಗಿರಲಿ ಅಥವಾ ಆಹಾರವಾಗಿರಲಿ, ಅವರಿಗೆ ಯಾವಾಗಲೂ ಅತ್ಯುತ್ತಮವಾಗಿರುವುದೇ ದೊರೆಯಬೇಕೆಂದು ನೀವು ಬಯಸುತ್ತೀರಿ. ಆದರೂ ಅವರ ಹಲ್ಲುಗಳ ಆರೋಗ್ಯದ ವಿಷಯ ಬಂದಾಗ ಮಾತ್ರ ಅವರು ನಾವು ಬಳಸುವ ಟೂಥ್‌ಪೇಸ್ಟ್‌ನಿಂದ ದಿನಕ್ಕೊಮ್ಮೆ ಹಲ್ಲುಜ್ಜಿಕೊಂಡರೆ ಸಾಕು ಎಂದು ಭಾವಿಸಿರುತ್ತೀರಿ. ಆದರೆ ಮಕ್ಕಳ ಹಲ್ಲುಗಳು ಬೆಳವಣಿಗೆಯ ಹಂತದಲ್ಲಿರುತ್ತವೆ ಮತ್ತು ಅವರಿಗೆ ಬೇರೆಯದೇ ಟೂಥ್‌ಪೇಸ್ಟ್ ಬೇಕು ಎನ್ನುವುದು ನಮಗೆ ಹೊಳೆಯುವುದೇ ಇಲ್ಲ.

ನಾವು ಬಳಸುವ ಟೂಥ್‌ಪೇಸ್ಟ್ ಸಾಮಾನ್ಯವಾಗಿ ಕ್ರಿಯಾಶೀಲ ಮತ್ತು ನಿಷ್ಕ್ರಿಯ ಘಟಕಗಳನ್ನು ಒಳಗೊಂಡಿರುತ್ತದೆ. ಫ್ಲೋರೈಡ್‌ನಂತಹ ದಂತಕ್ಷಯ ನಿವಾರಕಗಳು ಮತ್ತು ಸೂಕ್ಷ್ಮ ಜೀವಾಣು ನಿರೋಧಕಗಳು ಇಂತಹ ಸಾಮಾನ್ಯ ಕ್ರಿಯಾಶೀಲ ಘಟಕಗಳಾ ಗಿವೆ. ಇವು ಹಲ್ಲುಗಳನ್ನು ಸದೃಢಗೊಳಿಸುವ ಜೊತೆಗೆ ಹಲ್ಲುಗಳ ಮೇಲೆ ಪಾಚಿ ಸಂಗ್ರಹವಾಗುವುದನ್ನು ತಡೆಯಲು ನೆರವಾಗುತ್ತವೆ. ನಿಷ್ಕ್ರಿಯ ಘಟಕಗಳು ಅಪಘರ್ಷಕ, ಸ್ವಾದವನ್ನು ನೀಡುವ, ಸಿಹಿಕಾರಕಗಳಂತಹ ಅಂಶಗಳನ್ನು ಒಳಗೊಂಡಿರುತ್ತವೆ.

ಇವು ನಿಮ್ಮ ಮಕ್ಕಳ ಹಲ್ಲುಗಳಿಗೆ ಹೇಗೆ ಹಾನಿಯನ್ನುಂಟು ಮಾಡುತ್ತವೆ ಎನ್ನುವುದನ್ನು ನೋಡೋಣ......

► ಫ್ಲೋರೈಡ್

ವಯಸ್ಕರಿಗಾಗಿರುವ ಟೂಥ್‌ಪೇಸ್ಟ್‌ಗಳು ಮಕ್ಕಳ ಟೂಥ್‌ಪೇಸ್ಟ್‌ಳಿಗಿಂತ ಹೆಚ್ಚಿನ ಪ್ರಮಾಣದಲ್ಲಿ ಫ್ಲೋರೈಡ್‌ನ್ನು ಒಳಗೊಂಡಿರುತ್ತವೆ. ಸಾಮಾನ್ಯವಾಗಿ ಮಕ್ಕಳು ಹಲ್ಲುಜ್ಜುವಾಗ ಟೂಥ್‌ಪೇಸ್ಟ್‌ನ್ನು ನುಂಗುವುದೇ ಹೆಚ್ಚು. ಟೂಥ್‌ಪೇಸ್ಟ್‌ನಲ್ಲಿಯ ಹೆಚ್ಚಿನ ಪ್ರಮಾಣದ ಫ್ಲೋರೈಡ್ ಮಕ್ಕಳ ಹಲ್ಲುಗಳಿಗೆ ಫ್ಲೋರೋಸಿಸ್‌ನ್ನು ಉಂಟುಮಾಡುವ ಅಪಾಯ ಹೆಚ್ಚಾಗಿರುತ್ತದೆ.

ಹಲ್ಲುಗಳ ಮೇಲಿನ ಎನಾಮಲ್ ಅಥವಾ ದಂತಕವಚ ರೂಪುಗೊಳ್ಳುವ ಹಂತದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಫ್ಲೋರೈಡ್ ಸೇವನೆಯಿಂದಾಗಿ ಫ್ಲೋರೋಸಿಸ್ ಉಂಟಾಗುತ್ತದೆ. ಇದು ಭವಿಷ್ಯದಲ್ಲಿ ಮಕ್ಕಳಲ್ಲಿ ಸೌಂದರ್ಯದ ಸಮಸ್ಯೆಯನ್ನು ಹುಟ್ಟುಹಾಕಬಹುದು. ಕಡಿಮೆ ಫ್ಲೋರೈಡ್ ಒಳಗೊಂಡಿರುವ ಮಕ್ಕಳಿಗಾಗಿಯೇ ಇರುವ ಟೂಥ್‌ಪೇಸ್ಟ್ ಬಳಕೆಯಿಂದ ಈ ಸಂಭಾವ್ಯ ಅಪಾಯವನ್ನು ನಿವಾರಿಸಬಹುದು.

► ಅಪಘರ್ಷಕಗಳು

ಇವು ಹಲ್ಲುಗಳ ಮೇಲಿನ ಪಾಚಿಗಳನ್ನು ಮತ್ತು ಕಲೆಗಳನ್ನು ಹೋಗಲಾಡಿಸುತ್ತವೆ. ಇವು ಎನಾಮಲ್‌ಗೆ ಯಾವುದೇ ಹಾನಿಯನ್ನುಂಟು ಮಾಡದೇ ಈ ಕೆಲಸವನ್ನು ಮಾಡಲು ಸಾಕಷ್ಟು ಒರಟಾಗಿರಬೇಕು. ಹಲ್ಲುಗಳನ್ನು ಬಿಳಿಯಾಗಿಸಲು ವಯಸ್ಕರು ಬಳಸುವ ಕೆಲವು ಟೂಥ್‌ಪೇಸ್ಟ್‌ಗಳನ್ನು ಮಕ್ಕಳ ಬಳಕೆಗೆ ನೀಡಲೇಬಾರದು. ಏಕೆಂದರೆ ಅವುಗಳಲ್ಲಿ ಇರಬಹುದಾದ ಹೆಚ್ಚಿನ ಪ್ರಮಾಣದ ಅಪಘರ್ಷಕಗಳು ಮಕ್ಕಳ ಹಲ್ಲುಗಳ ಮೇಲಿನ ಎನಾಮಲ್‌ಗೆ ಹಾನಿಯನ್ನುಂಟು ಮಾಡಬಹುದು.

► ಕೃತಕ ಸಿಹಿಕಾರಕಗಳು

ಯಾವಾಗಲೂ ನಿಮ್ಮ ಮಕ್ಕಳಿಗೆ ಝೈಲಿಟಾಲ್‌ನಂತಹ ಸಿಹಿಕಾರಕಗಳಿರುವ ಟೂಥ್‌ಪೇಸ್ಟ್‌ನ್ನು ಆಯ್ದುಕೊಳ್ಳಿ. ಝೈಲಿಟಾಲ್ ಸಕ್ಕರೆಗೆ ಸಸ್ಯಮೂಲದ ಪರ್ಯಾಯವಾ ಗಿದ್ದು, ಅದು ಹಲ್ಲುಗಳಲ್ಲಿ ಕುಳಿಗಳಾಗುವುದನ್ನು ತಡೆಯುತ್ತದೆ ಎನ್ನುವುದು ಅಧ್ಯಯನ ಗಳಿಂದ ಸಿದ್ಧಗೊಂಡಿದೆ. ಅದು ಕುಳಿಗಳನ್ನು ಉಂಟುಮಾಡುವ ಬ್ಯಾಕ್ಟೀರಿಯಾಗಳ ಬೆಳವಣಿಗೆಯನ್ನು ಮತ್ತು ಹಲ್ಲುಗಳ ಮೇಲೆ ಪಾಚಿ ಸಂಗ್ರಹಗೊಳ್ಳುವುದನ್ನು ತಡೆಯುತ್ತದೆ. ಅದರ ಸಿಹಿರುಚಿಯನ್ನು ಮಕ್ಕಳು ಇಷ್ಟಪಡುತ್ತವೆ. ಹೀಗಾಗಿ ಮುಂದಿನ ಬಾರಿ ನಿಮ್ಮ ಮಗುವಿಗಾಗಿ ಟೂಥ್‌ಪೇಸ್ಟ್ ಖರೀದಿಸುವಾಗ ಅದರಲ್ಲಿ ಝೈಲಿಟಾಲ್ ಇದೆ ಎನ್ನುವುದನ್ನು ಖಚಿತಪಡಿಸಿಕೊಳ್ಳಿ.

► ಸ್ವಾದಗಳು

ವಯಸ್ಕರು ಬಳಸುವ ಟೂಥ್‌ಪೇಸ್ಟ್ ಸಾಮಾನ್ಯವಾಗಿ ಮಿಂಟ್ ಅಥವಾ ಪುದೀನಾದ ಸ್ವಾದವನ್ನು ಹೊಂದಿರುತ್ತದೆ. ಅದು ಮೆಂಥಾಲ್ ಪರಿಮಳವನ್ನು ನೀಡುವ ಜೊತೆಗೆ ತಣ್ಣನೆಯ ಸಂವೇದನೆಯನ್ನುಂಟು ಮಾಡುತ್ತದೆ. ಆದರೆ ಇದು ನಿಮ್ಮ ಮಗುವಿನ ಪಾಲಿಗೆ ಹಲ್ಲುಜ್ಜುವುದನ್ನು ಒಳ್ಳೆಯ ಅನುಭವವನ್ನಾಗಿಸುವ ಸಾಧ್ಯತೆಯು ಕಡಿಮೆ. ಅವರು ಹೆಚ್ಚು ಇಷ್ಟಪಡುವ ಬಬಲ್‌ಗಮ್, ಸೇಬು ಅಥವಾ ಸ್ಟ್ರಾಬೆರಿ ಸ್ವಾದಗಳಿರುವ ಟೂಥ್‌ಪೇಸ್ಟ್ ಗಳನ್ನು ಆಯ್ಕೆ ಮಾಡಿ.

ಮಕ್ಕಳ ಟೂಥ್‌ಪೇಸ್ಟ್‌ಗಳಲ್ಲಿರುವ ಘಟಕಗಳ ಕಡೆಗೆ ಗಮನ ನೀಡುವ ಜೊತೆಗೆ ಹಲ್ಲುಗಳನ್ನು ಸರಿಯಾಗಿ ಬ್ರಷ್ ಮಾಡುವ ಅಭ್ಯಾಸವನ್ನೂ ಅವರಲ್ಲಿ ಬೆಳೆಸಬೇಕು. ಮೂರು ವರ್ಷ ಪ್ರಾಯದ ಕೆಳಗಿನ ಮಕ್ಕಳಿಗೆ ಬ್ರಷ್ ಮೇಲೆ ಅಕ್ಕಿಕಾಳಿನ ಗಾತ್ರದ ಪೇಸ್ಟ್‌ನ್ನು ಸವರಿದರೆ ಸಾಕು. ಮೂರರಿಂದ ಆರು ವರ್ಷದೊಳಗಿನ ಮಕ್ಕಳಿಗೆ ಬಟಾಣಿ ಕಾಳಿನಷ್ಟು ಪೇಸ್ಟ್ ಸಾಕಾಗುತ್ತದೆ. ಇದರೊಂದಿಗೆ ಮಕ್ಕಳು ಹಲ್ಲುಜ್ಜುವಾಗ ಹೆತ್ತವರು ಗಮನವಿರಿಸ ಬೇಕು ಮತ್ತು ಟೂಥ್‌ಪೇಸ್ಟ್‌ನ್ನು ನುಂಗುವ ಬದಲು ಅದನ್ನು ಉಗುಳಲು ಕಲಿಸಬೇಕು.

ನಿಮ್ಮ ಮಕ್ಕಳು ಸಿಹಿತಿಂಡಿ, ಚಾಕ್ಲೇಟ್ ಇತ್ಯಾದಿಗಳನ್ನು ತಿನ್ನುವುದನ್ನು ನಿಲ್ಲಿಸಲು ನಿಮಗೆ ಸಾಧ್ಯವಿಲ್ಲ. ಆದರೆ ಅವರು ಹಲ್ಲುಗಳನ್ನು ಸರಿಯಾಗಿ ಬ್ರಷ್ ಮಾಡುವಂತೆ ನೋಡಿಕೊಳ್ಳುವ ಮೂಲಕ ಅವರ ಹಲ್ಲುಗಳ ಆರೋಗ್ಯವನ್ನು ಕಾಪಾಡಲು ಸಾಧ್ಯವಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News