ಜನರೇ ಜನತಂತ್ರದ ಕಾವಲುಗಾರರು

Update: 2018-02-04 18:52 GMT

ಭಾರತ ಎಂಬುದು ಜಗತ್ತಿನಲ್ಲೇ ತುಂಬ ವಿಶಿಷ್ಟವಾದ, ವಿಭಿನ್ನವಾದ ದೇಶ. ಈ ವಿಶಾಲ ದೇಶದಲ್ಲಿ ಒಂದೇ ಸಮುದಾಯದ, ಒಂದೇ ಧರ್ಮದ, ಒಂದೇ ಜನಾಂಗದ, ಒಂದೇ ಭಾಷೆಯ, ಒಂದೇ ಸಂಸ್ಕೃತಿಯ ಜನರಿಲ್ಲ. ಇದು ಎಲ್ಲ ಧರ್ಮ, ಸಂಸ್ಕೃತಿ, ಭಾಷೆಗಳ ಸಂಗಮ. ಇಲ್ಲಿ ಒಂದೇ ಧರ್ಮ, ಸಂಸ್ಕೃತಿ ಹೇರಲು ಹೊರಟರೆ ಆರಂಭದಲ್ಲಿ ಒಂದಿಷ್ಟು ಉತ್ತೇಜನಾಕಾರಿ ಫಲಿತಾಂಶ ಸಿಗಬಹುದು. ಆದರೆ ಕೊನೆಗೆ ಇಂತಹ ಯತ್ನ ವಿಫಲಗೊಳ್ಳುತ್ತದೆ.


ರಾಜಸ್ಥಾನ ವಿಧಾನಸಭೆಯ ಒಂದು ಮತ್ತು ಲೋಕಸಭೆಯ ಎರಡು ಕ್ಷೇತ್ರಗಳಿಗೆ ನಡೆದ ಉಪಚುನಾವಣೆಯ ಫಲಿತಾಂಶ ಆ ರಾಜ್ಯದ ಆಡಳಿತಾರೂಢ ಪಕ್ಷ ಬಿಜೆಪಿಗೆ ಚೇತರಿಸಲಾಗದ ಪೆಟ್ಟು ನೀಡಿದೆ. ಗುಜರಾತ್ ನಂತರ ಹಿಂದೂರಾಷ್ಟ್ರ ನಿರ್ಮಾಣದ ಎರಡನೇ ಪ್ರಯೋಗ ಶಾಲೆಯೆಂದು ಕರೆಯಲ್ಪಡುತ್ತಿರುವ ರಾಜಸ್ಥಾನದಲ್ಲಿ ಜನತೆ ನೀಡಿದ ತೀರ್ಪು ಗಮನಾರ್ಹವಾಗಿದೆ. ಸಂಘಪರಿವಾರದ ಕೋಮುಧ್ರುವೀಕರಣದ ಇತಿಮಿತಿಗಳನ್ನು ಎತ್ತಿ ತೋರಿಸಿದೆ. ಮುಂಬರುವ ವಿಧಾನಸಭಾ ಚುನಾವಣೆಗಳ ಸ್ವರೂಪದ ಮುನ್ಸೂಚನೆಯನ್ನು ಈ ಫಲಿತಾಂಶ ನೀಡಿದೆ.

ಗುಜರಾತ್‌ನಲ್ಲಿ ಬಿಜೆಪಿ ಅತ್ಯಂತ ಪ್ರಯಾಸಪಟ್ಟು ಬಹುಮತ ಗಳಿಸಿತು. ರಾಜಸ್ಥಾನದಲ್ಲಿ ಅದೂ ಕೂಡ ಸುಲಭವಲ್ಲ. ತನ್ನ ಆಡಳಿತ ವೈಫಲ್ಯಗಳನ್ನು ಮುಚ್ಚಿಕೊಳ್ಳಲು ಈ ರಾಜ್ಯದಲ್ಲಿ ಕೋಮು ಪ್ರಚೋದಕ ಚಟುವಟಿಕೆಗಳನ್ನು ಬಿಜೆಪಿ ಇತ್ತೀಚೆಗೆ ತೀವ್ರಗೊಳಿಸಿದೆ. 2017ರಲ್ಲಿ ಗೋ ರಕ್ಷಣೆ ಹೆಸರಿನಲ್ಲಿ ನಡೆದ ಅಮಾಯಕ ಪೆಹ್ಲೂಖಾನ್ ಹತ್ಯೆಯ ನಂತರ ಈ ರಾಜ್ಯದ ಪರಿಸ್ಥಿತಿ ಬಿಗಡಾಯಿಸಿತ್ತು. ಆದರೂ ಉಪ ಚುನಾವಣೆಯಲ್ಲಿ ಈ ಕೋಮು ಉನ್ಮಾದವನ್ನು ಮೀರಿ ಜನತೆ ಫಲಿತಾಂಶವನ್ನು ನೀಡಿದ್ದಾರೆ. ಮುಂಚಿನಿಂದಲೂ ರಾಜಸ್ಥಾನ, ಗುಜರಾತ್ ಮತ್ತು ಮಧ್ಯಪ್ರದೇಶಗಳು ಬಿಜೆಪಿ ಪ್ರಾಬಲ್ಯದ ರಾಜ್ಯಗಳು. ಈ ಬಾರಿ ಮೋದಿ ಪ್ರಧಾನಿಯಾಗಲೂ ಈ ರಾಜ್ಯಗಳು ನೀಡಿದ ಕೊಡುಗೆ ದೊಡ್ಡದು. ರಾಜಸ್ಥಾನದ 25, ಗುಜರಾತ್‌ನ 26 ಲೋಕಸಭಾ ಕ್ಷೇತ್ರಗಳ ಜೊತೆ ಉತ್ತರಪ್ರದೇಶದ 73 ಸ್ಥಾನಗಳನ್ನು ಗೆದ್ದುಕೊಂಡ ಪರಿಣಾಮವಾಗಿ ಕೇಂದ್ರದಲ್ಲಿ ಬಿಜೆಪಿ ಅಧಿಕಾರ ಸೂತ್ರ ಹಿಡಿಯಲು ಸುಲಭವಾಯಿತು. ಕಳೆದ ಲೋಕಸಭಾ ಚುನಾವಣೆಯಲ್ಲೂ ಬಿಜೆಪಿಗೆ ಭಾರೀ ಜನಾದೇಶವೇನೂ ದೊರಕಿರಲಿಲ್ಲ. ಅದು ಗೆಲುವು ಸಾಧಿಸಿದರೂ ಪಡೆದ ಶೇಕಡಾವಾರು ಮತಗಳ ಪ್ರಮಾಣ ಶೇ.31 ಮಾತ್ರ. ಪ್ರತಿಪಕ್ಷಗಳಲ್ಲಿ ಮತಗಳು ಹಂಚಿಹೋದ ಪರಿಣಾಮವಾಗಿ ಬಿಜೆಪಿ ಗೆಲುವು ಸಾಧಿಸಿತು. ಕಳೆದ ಮೂರೂವರೆ ವರ್ಷಗಳಲ್ಲಿ ಕೇಂದ್ರದ ಮೋದಿ ಸರಕಾರದ ವಿನಾಶಕಾರಿ ಆರ್ಥಿಕ ನೀತಿಗಳಿಂದಾಗಿ ಮುಂಬರುವ 2019ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಗೆಲ್ಲುವುದು ಸುಲಭವಲ್ಲ ಎಂಬ ಸಂದೇಶವನ್ನು ರಾಜಸ್ಥಾನ ಫಲಿತಾಂಶ ನೀಡಿದೆ.

ಉತ್ತರಪ್ರದೇಶದಲ್ಲಿ ಅಮಿತ್ ಶಾ ಹಚ್ಚಿದ ಕೋಮುಕಲಹದ ಬೆಂಕಿ ಬಿಜೆಪಿಗೆ ಕ್ಷಣಿಕ ಲಾಭ ತಂದು ಕೊಟ್ಟಿದೆ. ಅಲ್ಲಿ ಬಹುಮತ ಗಳಿಸಿದ ಬಿಜೆಪಿ ನಾಗಪುರದ ಆರೆಸ್ಸೆಸ್ ಗುರು ಮೋಹನ್ ಭಾಗವತ್‌ರ ಅಪ್ಪಣೆಯಂತೆ ಯೋಗಿ ಆದಿತ್ಯನಾಥ್ ಎಂಬ ಅವಿವೇಕಿಯನ್ನು ರಾಜ್ಯದ ಮುಖ್ಯಮಂತ್ರಿಯನ್ನಾಗಿ ಮಾಡಲಾಯಿತು. ರಾಜ್ಯಾಡಳಿತದ, ಸಂವಿಧಾನದ ಕನಿಷ್ಠ ಜ್ಞಾನವೂ ಇಲ್ಲದ ಈ ಸನ್ಯಾಸಿ ಅಧಿಕಾರಕ್ಕೆ ಬಂದಾಗಿನಿಂದ ಬೆಂಕಿ ಹಚ್ಚುವ ಅನಾಹುತಕಾರಿ ರಾಜಕಾರಣ ಮಾಡುತ್ತ ಬಂದಿದ್ದಾರೆ. ತಾಜ್‌ಮಹಲ್ ಬಗ್ಗೆ ಹುಚ್ಚುಚ್ಚಾಗಿ ಮಾತಾಡಿದ್ದು, ಮದ್ರಸಾ, ಸರಕಾರಿ ಶಾಲೆ, ಕಚೇರಿ ಸೇರಿ ಎಲ್ಲ ಕಟ್ಟಡಗಳಿಗೆ ಕೇಸರಿ ಬಣ್ಣ ಬಳೆಯಲು ಹೊರಟಿದ್ದು, ಇತ್ತೀಚೆಗೆ ಕಾಸಗಂಜ್‌ನಲ್ಲಿ ಕೋಮು ಹಿಂಸೆಗೆ ಪ್ರಚೋದಿಸಿದ್ದು ಇವೆಲ್ಲ ಇಡೀ ದೇಶಕ್ಕೆ ಕೆಟ್ಟ ಸಂದೇಶ ನೀಡುತ್ತಾ ಬಂದವು. ಇದರ ಪರಿಣಾಮ ರಾಜಸ್ಥಾನದ ಚುನಾವಣೆಯ ಮೇಲೆ ಆಗಿದೆ. ಜೊತೆಗೆ ಅಲ್ಲಿ ಸಚಿನ್ ಪೈಲೆಟ್ ನೇತೃತ್ವದಲ್ಲಿ ಕಾಂಗ್ರೆಸ್ ನಡೆಸಿದ ಪ್ರಚಾರ ತಂತ್ರ ಅದಕ್ಕೆ ನೆರವಾಗಿದೆ. ರಾಜಸ್ಥಾನಕ್ಕೆ ಭಿನ್ನವಾದ ಫಲಿತಾಂಶವನ್ನು ಪಶ್ಚಿಮಬಂಗಾಳ ನೀಡಿದೆ. ಅಲ್ಲಿನ ವಿಧಾನಸಭೆ ಹಾಗೂ ಲೋಕಸಭೆಯ ಒಂದೊಂದು ಕ್ಷೇತ್ರದಲ್ಲಿ ನಡೆದ ಉಪಚುನಾವಣೆಯಲ್ಲಿ ಅಧಿಕಾರಾರೂಢ ತೃಣಮೂಲ ಕಾಂಗ್ರೆಸ್ ಎರಡೂ ಕಡೆ ಜಯಭೇರಿ ಮೊಳಗಿಸಿದೆ. ಒಂದು ಕಾಲದಲ್ಲಿ ಎಡಪಂಥೀಯರ ಕೋಟೆ ಎಂದು ಹೆಸರಾಗಿದ್ದ ಈ ರಾಜ್ಯದಲ್ಲಿ ಬಿಜೆಪಿ ಎರಡನೇ ಸ್ಥಾನದಲ್ಲಿದೆ. ಸಿಪಿಎಂ ಮೂರನೇ ಸ್ಥಾನಕ್ಕೆ ಸಮಾಧಾನ ಪಟ್ಟುಕೊಳ್ಳಬೇಕಾಗಿದೆ. ಕಾಂಗ್ರೆಸ್ 4ನೇ ಸ್ಥಾನಕ್ಕೆ ಕುಸಿದಿದೆ. ಇವೆರಡು ರಾಜ್ಯಗಳ ವಿಧಾನಸಭೆ ಮತ್ತು ಲೋಕಸಭೆ ಚುನಾವಣೆ ಫಲಿತಾಂಶವನ್ನು ವಿಶ್ಲೇಷಿಸಿದರೆ ಕಾಂಗ್ರೆಸ್ ಮುಕ್ತ ಭಾರತ ಮಾಡಲು ಹೊರಟಿರುವ ಬಿಜೆಪಿ ಕಲಿಯಬೇಕಾದ ಪಾಠ ಸಾಕಷ್ಟಿದೆ.

ಅದೇ ರೀತಿ ಪ್ರತಿಪಕ್ಷಗಳು ಕೂಡಾ ತಮ್ಮನ್ನು ತಾವು ವಿಮರ್ಶಿಸಿಕೊಳ್ಳಬೇಕಾಗಿದೆ. ಭಾರತದ ಜನತೆ ಯಾವುದೇ ಒಂದು ಪಕ್ಷಕ್ಕೆ ಸಂಪೂರ್ಣ ನಿರಂಕುಶಾಧಿಕಾರ ನೀಡಲು ತಯಾರಿಲ್ಲ ಎಂಬುದು ಇದರಿಂದ ಸ್ಪಷ್ಟವಾಗುತ್ತದೆ. ಪ್ರಜಾಪ್ರಭುತ್ವದ ಮೂಲಕ ಅಧಿಕಾರಕ್ಕೆ ಬಂದು ಆ ಅಧಿಕಾರವನ್ನು ಬಳಸಿಕೊಂಡು ಪ್ರಜಾಪ್ರಭುತ್ವವನ್ನು ಬುಡಮೇಲು ಮಾಡಲು ಸಂಘಪರಿವಾರ ಮೊದಲಿನಿಂದಲೂ ಯತ್ನಿಸುತ್ತಾ ಬಂದಿದೆ. 2014ರಲ್ಲಿ ಕೇಂದ್ರದಲ್ಲಿ ಬಿಜೆಪಿ ಗೆದ್ದು ನರೇಂದ್ರ ಮೋದಿ ಪ್ರಧಾನಿಯಾದಾಗ ಆರೆಸ್ಸೆಸ್ ಸರಸಂಘಚಾಲಕ ಮೋಹನ್ ಭಾಗವತ್ ಎಷ್ಟು ರೋಮಾಂಚಿತಗೊಂಡಿದ್ದರೆಂದರೆ ‘‘ಇದು ಆರ್ಯ ಸಂಸ್ಕೃತಿ ಪ್ರಧಾನವಾಗಿರುವ ಹಿಂದೂ ರಾಷ್ಟ್ರ ನಿರ್ಮಾಣಕ್ಕೆ ರಹದಾರಿ’’ ಎಂದಿದ್ದರು. ಕೇಂದ್ರದಲ್ಲಿ ದೊರೆತ ಅಧಿಕಾರ ಬಿಜೆಪಿ ನಾಯಕರಿಗೆ ಹೆಂಡ ಕುಡಿಸಿದಂತಾಗಿತ್ತು. ‘‘ಗೋ ಮಾಂಸ ತಿನ್ನುವವರು ಪಾಕಿಸ್ತಾನಕ್ಕೆ ಹೋಗಬೇಕು, ಪ್ರಜಾಪ್ರಭುತ್ವ ಈ ದೇಶಕ್ಕೆ ಹೊರಗಿನಿಂದ ಬಂದುದು, ಈ ಸಂವಿಧಾನವನ್ನು ನಾವು ಬದಲಿಸುತ್ತೇವೆ ಅದಕ್ಕೇ ಬಂದಿದ್ದೇವೆ ಎಂದು ಮಾತಾಡುತ್ತ ಇತ್ತೀಚೆಗೆ ಮೀಸಲಾತಿ ವಿರುದ್ಧವೂ ಮಾತಾಡತೊಡಗಿದ್ದರು. ಸಂಘ ಪರಿವಾರ ಗುಜರಾತಿನಂಥ ಎಷ್ಟೇ ಪ್ರಯೋಗ ಶಾಲೆಗಳನ್ನು ಮಾಡಲಿ. ಆದರೆ ಭಾರತದಲ್ಲಿ ಪ್ರಜಾಪ್ರಭುತ್ವಕ್ಕೆ ಧಕ್ಕೆಯಾಗುವುದನ್ನು ಜನ ಸಹಿಸುವುದಿಲ್ಲ, ಏಕಪಕ್ಷ ಸರ್ವಾಧಿಕಾರವನ್ನು ಒಪ್ಪಿಕೊಳ್ಳುವುದಿಲ್ಲ. ಯಾವುದೇ ವ್ಯಕ್ತಿ ಅಪರಿಮಿತ ಅಧಿಕಾರ ಪಡೆಯುವುದನ್ನು ಒಪ್ಪುವುದಿಲ್ಲ ಎಂಬುದು ಉಪಚುನಾವಣೆಗಳ ಫಲಿತಾಂಶಗಳಲ್ಲಿ ಸ್ಪಷ್ಟವಾಗಿದೆ. ಯೋಗಿ ಆದಿತ್ಯನಾಥರೇ ಇರಲಿ, ಕಲ್ಲಡ್ಕ ಭಟ್ಟರೇ ಇರಲಿ, ಜಗದೀಶ ಶೆಣವರೇ ಇರಲಿ ಇವರು ಆಡುವ ಮಾತುಗಳನ್ನು ಜನರು ಗಮನಿಸುತ್ತಿದ್ದಾರೆ. ತಕ್ಷಣ ಅವರು ಪ್ರತಿಕ್ರಿಯೆ ವ್ಯಕ್ತಪಡಿಸುವುದಿಲ್ಲ. ಸಮಯ ಬರಲಿ ಎಂದು ಕಾಯುತ್ತಾರೆ. ಇಂಥವರಿಗೆ ಪಾಠ ಕಲಿಸಲು ಪ್ರಜಾಪ್ರಭುತ್ವದಲ್ಲಿ ಮಾತ್ರ ಸಾಧ್ಯವಿದೆ ಎಂದು ಜನರಿಗೆ ಗೊತ್ತಿದೆ. ಅಂತಲೇ ಚುನಾವಣೆ ಬಂದಾಗ ಪಾಠ ಕಲಿಸುತ್ತಾರೆ.

ಭಾರತ ಎಂಬುದು ಜಗತ್ತಿನಲ್ಲೇ ತುಂಬ ವಿಶಿಷ್ಟವಾದ, ವಿಭಿನ್ನವಾದ ದೇಶ. ಈ ವಿಶಾಲ ದೇಶದಲ್ಲಿ ಒಂದೇ ಸಮುದಾಯದ, ಒಂದೇ ಧರ್ಮದ, ಒಂದೇ ಜನಾಂಗದ, ಒಂದೇ ಭಾಷೆಯ, ಒಂದೇ ಸಂಸ್ಕೃತಿಯ ಜನರಿಲ್ಲ. ಇದು ಎಲ್ಲ ಧರ್ಮ, ಸಂಸ್ಕೃತಿ, ಭಾಷೆಗಳ ಸಂಗಮ. ಇಲ್ಲಿ ಒಂದೇ ಧರ್ಮ, ಸಂಸ್ಕೃತಿ ಹೇರಲು ಹೊರಟರೆ ಆರಂಭದಲ್ಲಿ ಒಂದಿಷ್ಟು ಉತ್ತೇಜನಾಕಾರಿ ಫಲಿತಾಂಶ ಸಿಗಬಹುದು. ಆದರೆ ಕೊನೆಗೆ ಇಂತಹ ಯತ್ನ ವಿಫಲಗೊಳ್ಳುತ್ತದೆ. ಪ್ರಜಾಪ್ರಭುತ್ವ ಸಮಾಜವಾದಿಗಳು ವಿದೇಶದಿಂದ ತಂದ ಸಿದ್ಧಾಂತಗಳೆಂದು ಆರೆಸ್ಸೆಸ್‌ನ ಗೋಳ್ವಾಲ್ಕರ್ ಹೇಳಿದ್ದನ್ನು ಜನ ಎಂದೂ ಒಪ್ಪಿಲ್ಲ. ಈಗ ಇದೇ ಮಾತನ್ನು ಅವಿವೇಕಿ ಅನಂತ ಹೆಗಡೆ ಹೇಳುತ್ತಿದ್ದಾನೆ. ಆದರೆ ಇವರಿಗೆ ಗೊತ್ತಿಲ್ಲ ಭಾರತ ಎಂಬ ದೇಶ ವಿದೇಶದಿಂದ ಸಾಕಷ್ಟು ಪಡೆದಿದೆ, ಕಲಿತಿದೆ. ಅದೇ ರೀತಿ ಬೇರೆ ದೇಶಗಳಿಗೆ ಸಾಕಷ್ಟು ಕೊಡುಗೆ ನೀಡಿದೆ, ಕಲಿಸಿದೆ. ಈ ದೇಶವನ್ನು ಹಿಟ್ಲರ್ ಮಾದರಿ ರಾಷ್ಟ್ರವಾಗಿ ಮಾಡಲು ಸಾಧ್ಯವಿಲ್ಲ. ಹೊರಗಿನಿಂದ ಏನನ್ನೂ ಪಡೆದಿಲ್ಲ ಎಂದು ಸಾಧಿಸಲು ಸಂಘಪರಿವಾರದ ಕೆಲ ದೀಡ ಪಂಡಿತರು ನಮ್ಮ ದೇಶದಲ್ಲಿ ಎಲ್ಲವೂ ಇತ್ತು. ವಿಮಾನವನ್ನು ನಮ್ಮ ದೇಶದಲ್ಲಿ ಮೊದಲೇ ಕಂಡು ಹಿಡಿಯಲಾಗಿತ್ತು. ನಮ್ಮ ಪೂರ್ವಜರು ಗಗನ ನೌಕೆಗಳಲ್ಲಿ ಗ್ರಹದಿಂದ ಗ್ರಹಕ್ಕೆ ಸಂಚರಿಸುತ್ತಿದ್ದರು ಎಂದೆಲ್ಲ ಕತೆ ಕಟ್ಟಿ ಅಪಹಾಸ್ಯಕ್ಕೆ ಈಡಾಗಿದ್ದಾರೆ. ಇವರೆಷ್ಟೇ ದಾರಿ ತಪ್ಪಿಸಲು ಯತ್ನಿಸಿದರೂ ಭಾರತದ ಜನತೆ ತುಂಬಾ ಪ್ರಜ್ಞಾವಂತರೆಂಬುದು ರಾಜಸ್ಥಾನ ಮತ್ತು ಪಶ್ಚಿಮ ಬಂಗಾಳ ಚುನಾವಣಾ ಫಲಿತಾಂಶ ತೋರಿಸಿಕೊಟ್ಟಿದೆ.

ಬರೀ ಬಿಜೆಪಿಗೆ ಮಾತ್ರವಲ್ಲ ಪಶ್ಚಿಮ ಬಂಗಾಳದಲ್ಲಿ ಎಡಪಕ್ಷಗಳಿಗೂ ಜನ ಪಾಠ ಕಲಿಸಿದ್ದಾರೆ. ಅಲ್ಲಿ ಬಿಜೆಪಿ ದ್ವಿತೀಯ ಸ್ಥಾನದಲ್ಲಿರುವುದು ಅಪಾಯಕಾರಿ ಬೆಳವಣಿಗೆ, ಆದರೆ ಎಡ ಪಕ್ಷಗಳನ್ನು ಮೂರನೇ ಸ್ಥಾನಕ್ಕೆ, ಕಾಂಗ್ರೆಸನ್ನು ನಾಲ್ಕನೇ ಸ್ಥಾನಕ್ಕೆ ಯಾಕೆ ತಳ್ಳಿದರೆಂಬುವುದನ್ನು ವಿಮರ್ಶಿಸಬೇಕಾಗಿದೆ. ಈ ಹಿನ್ನೆಲೆಯಲ್ಲಿ ಮುಂಬರುವ ಕರ್ನಾಟಕ ವಿಧಾನಸಭೆ ಚುನಾವಣೆಯ ಬಗ್ಗೆಯೂ ನಾವು ಪರಾಮರ್ಶಿಸಬೇಕಾಗಿದೆ. ರಾಜಸ್ಥಾನದಲ್ಲಿ ಆಡಳಿತವಿರೋಧಿ ಅಲೆಯಿಂದ ಕಾಂಗ್ರೆಸ್ ಗೆದ್ದಂತೆ ಕರ್ನಾಟಕದಲ್ಲಿ ನಾವು ಗೆಲ್ಲಬಹುದೆಂಬ ಭ್ರಮೆ ಬಿಜೆಪಿ ನಾಯಕರಿಗಿದ್ದರೆ ಅದು ಅವರ ಮೂರ್ಖತನ.ಇಲ್ಲಿ ಹಿಂದೆ ಬಿಜೆಪಿ ಅಧಿಕಾರದಲ್ಲಿದ್ದಾಗ ನಡೆದ ಹಗರಣಗಳನ್ನು ಜನ ಮರೆತಿಲ್ಲ.

ಸಿದ್ದರಾಮಯ್ಯನವರ ನೇತೃತ್ವದ ಕಾಂಗ್ರೆಸ್ ಸರಕಾರದ ಬಗ್ಗೆ ಜನರಲ್ಲಿ ಒಳ್ಳೆಯ ಅಭಿಪ್ರಾಯವಿದೆ. ಅನ್ನಭಾಗ್ಯ, ಆರೋಗ್ಯ ಭಾಗ್ಯದಂತಹ ಯೋಜನೆಗಳು ಬಡತನದ ನೆರವಿಗೆ ಬಂದಿವೆ. ಇಲ್ಲಿ ಕಾಂಗ್ರೆಸ್ ಬಿಜೆಪಿಗೆ ಪರ್ಯಾಯವಾಗಿ ಮೂರನೇ ರಂಗ ಕಟ್ಟುವ ಮಾತನ್ನು ಕೆಲವರು ಆಡುತ್ತಿದ್ದರೂ ಅದಕ್ಕೆ ಕರ್ನಾಟಕ ಇನ್ನೂ ಸಿದ್ಧವಾಗಿಲ್ಲ. ಯಾರು ಏನೇ ಹೇಳಲಿ ಇಲ್ಲಿ ಕಾಂಗ್ರೆಸ್ ಆಯ್ಕೆ ಅನಿವಾರ್ಯವಾಗಿದೆ. ಮಾರ್ಕ್ಸ್ ವಾದಿ ಕಮ್ಯುನಿಸ್ಟ್ ಪಕ್ಷದ ಪ್ರಧಾನ ಕಾರ್ಯದರ್ಶಿ ಸೀತಾರಾಮ್ ಯೆಚೂರಿ ಹೇಳಿದಂತೆ ‘ಮುಂಬರುವ ಚುನಾವಣೆಯಲ್ಲಿ ಯಾರನ್ನು ಗೆಲ್ಲಿಸಬೇಕೆಂಬುದಕ್ಕಿಂತ, ಯಾರನ್ನು ಸೋಲಿಸಬೇಕೆಂಬುದು ಮುಖ್ಯವಾಗಿದೆ’. ಇದು ವಾಸ್ತವಕ್ಕೆ ತುಂಬ ಹತ್ತಿರವಾದ ಮಾತು.

ಒಟ್ಟಾರೆ ಈ ಚುನಾವಣೆಗಳು ನೀಡುವ ಫಲಿತಾಂಶದ ಸಂದೇಶವೇನೆಂದರೆ ಭಾರತದಲ್ಲಿ ಪ್ರಜಾಪ್ರಭುತ್ವ ವ್ಯವಸ್ಥೆಯ ಕಾವಲುಗಾರರು ಜನರೇ ಆಗಿದ್ದಾರೆ. ಈ ಮೂಲಕ ದಲಿತರು, ದಮನಿತ ಹಿಂದುಳಿದ ಸಮುದಾಯಗಳ ಜನರು, ಅಲ್ಪಸಂಖ್ಯಾತರು, ಮಹಿಳೆಯರು, ಜನತಂತ್ರವನ್ನು ಸುರಕ್ಷಿತವಾಗಿ ಕಾಪಾಡಿಕೊಂಡು ಬಂದಿದ್ದಾರೆ. ಮುಂದೆಯೂ ಕಾಪಾಡಿಕೊಂಡು ಹೋಗುತ್ತಾರೆ.

Writer - ಸನತ್ ಕುಮಾರ್ ಬೆಳಗಲಿ

contributor

Editor - ಸನತ್ ಕುಮಾರ್ ಬೆಳಗಲಿ

contributor

Similar News