ರಕ್ತಹೀನತೆ ಕುರಿತು ನಿಮಗೆ ಗೊತ್ತಿಲ್ಲದ 10 ಸಂಗತಿಗಳು

Update: 2018-02-08 10:03 GMT

ನಮ್ಮ ಶರೀರದಲ್ಲಿ ಕಬ್ಬಿಣದ ಕೊರತೆಯು ಅನಿಮಿಯಾ ಅಥವಾ ರಕ್ತಹೀನತೆಗೆ ಕಾರಣವಾಗುತ್ತದೆ, ಅಂದರೆ ಕೆಂಪು ರಕ್ತಕಣಗಳಲ್ಲಿಯ ಹಿಮೊಗ್ಲೋಬಿನ್ ಮಟ್ಟವು ಕುಸಿಯುತ್ತದೆ. ಅನಿಮಿಯಾದಲ್ಲಿ ಹಲವಾರು ವಿಧಗಳು ಇವೆಯಾದರೂ ಕಬ್ಬಿಣದ ಕೊರತೆಯು ಅತ್ಯಂತ ಸಾಮಾನ್ಯ ಅನಿಮೀಯಾ ಆಗಿದೆ. ಹಿಮೊಗ್ಲೋಬಿನ್‌ನ್ನು ಉತ್ಪಾದಿಸಲು ನಮ್ಮ ಶರೀರಕ್ಕೆ ಕಬ್ಬಿಣ ಅಗತ್ಯವಾಗಿದೆ ಮತ್ತು ರಕ್ತದಲ್ಲಿ ಸಾಕಷ್ಟು ಕಬ್ಬಿಣಾಂಶವಿಲ್ಲದಿದ್ದರೆ ಶರೀರಕ್ಕೆ ಅಗತ್ಯ ಪ್ರಮಾಣದಲ್ಲಿ ಆಮ್ಲಜನಕ ದೊರೆಯುವುದಿಲ್ಲ.

 ಹಿಮೊಗ್ಲೋಬಿನ್ ಕೆಂಪು ರಕ್ತಕಣಗಳಲ್ಲಿರುವ ಪ್ರೋಟಿನ್ ಆಗಿದ್ದು, ಶರೀರದಲ್ಲಿಯ ಅಂಗಾಂಶಗಳಿಗೆ ಆಮ್ಲಜನಕವನ್ನು ಪೂರೈಸುವುದು ಅದರ ಕೆಲಸವಾಗಿದೆ. ಶರೀರದಲ್ಲಿ ಕಬ್ಬಿಣದ ಕೊರತೆಯುಂಟಾದಾಗ ನಿಶ್ಶಕ್ತಿ, ಪೇಲವ ಚರ್ಮ, ತಲೆ ಸುತ್ತುವಿಕೆ, ಜೋರು ಹೃದಯ ಬಡಿತ, ಒಡೆದ ಉಗುರುಗಳು, ತಲೆನೋವು, ಉಸಿರಾಟದ ತೊಂದರೆ ಇತ್ಯಾದಿ ಲಕ್ಷಣಗಳು ಕಂಡು ಬರುತ್ತವೆ. ಶೇ.50ರಷ್ಟು ಜನರು ಇಂದು ರಕ್ತಹೀನತೆಯಿಂದ ಬಳಲುತ್ತಿದ್ದಾರೆ, ಆದರೆ ಹೆಚ್ಚಿನವರಿಗೆ ಇದರ ಅರಿವಿರುವುದಿಲ್ಲ.

ಅನಿಮಿಯಾದ ಕುರಿತು ನೀವು ತಿಳಿದಿರಬೇಕಾದ 10 ಮಾಹಿತಿಗಳಿಲ್ಲಿವೆ.....

► ಕಬ್ಬಿಣ ಸಮೃದ್ಧ ಆಹಾರಗಳ ಕೊರತೆ

 ಹಲವರು ಪಾಲಕ್, ಬೇಳೆ, ಬೀನ್ಸ್ ಮತ್ತು ವಿವಿಧ ಮಾಂಸಗಳಂತಹ ಕಬ್ಬಿಣ ಸಮೃದ್ಧವಾಗಿರುವ ಆಹಾರಗಳನ್ನು ಸೇವಿಸುವುದಿಲ್ಲ. ಇದು ಅನಿಮಿಯಾದ ಅಪಾಯವನ್ನು ಹೆಚ್ಚಿಸುತ್ತದೆ. ಇನ್ನು ಕೆಲವರ ಶರೀರದಲ್ಲಿ ಅವರು ಸೇವಿಸಿದ ಆಹಾರದಲ್ಲಿಯ ಕಬ್ಬಿಣಾಂಶವನ್ನು ರಕ್ತವು ಹೀರಿಕೊಳ್ಳುವಲ್ಲಿ ಸಮಸ್ಯೆಯಿರುತ್ತದೆ.

► ರಕ್ತ ನಷ್ಟ

ಶಸ್ತ್ರಚಿಕಿತ್ಸೆಗೊಳಗಾದವರಲ್ಲಿ ಅಥವಾ ಹೆರಿಗೆಯಾದ ಮಹಿಳೆಯರಲ್ಲಿ ರಕ್ತದ ಪ್ರಮಾಣ ಕಡಿಮೆಯಾಗುತ್ತದೆ ಮತ್ತು ರಕ್ತ ನಷ್ಟಗೊಳ್ಳುವುದರಿಂದ ಕೆಲವೇ ಕೆಂಪು ರಕ್ತಕಣಗಳಿರ ಬಹುದು. ಇದು ಅನಿಮಿಯಾವನ್ನು ಉಂಟು ಮಾಡುತ್ತದೆ. ಆಂತರಿಕ ರಕ್ತಸ್ರಾವವನ್ನುಂಟು ಮಾಡುವ ಅಲ್ಸರ್ ಕೂಡ ಶರೀರದಲ್ಲಿ ಕಬ್ಬಿಣದ ಕೊರತೆಯುಂಟಾಗುವಲ್ಲಿ ಪ್ರಮುಖ ಪಾತ್ರವನ್ನು ವಹಿಸುತ್ತದೆ.

► ಮಕ್ಕಳು ಮತ್ತು ಮಹಿಳೆಯರಿಗೆ ಹೆಚ್ಚಿನ ಅಪಾಯ

ಸಣ್ಣಮಕ್ಕಳು ಮತ್ತು ಮಹಿಳೆಯರು ಅನಿಮಿಯಾಕ್ಕೆ ತುತ್ತಾಗುವ ಅಪಾಯ ಹೆಚ್ಚಿರುತ್ತದೆ. ಮಹಿಳೆಯರಲ್ಲಿ ಮಾಸಿಕ ಋತುಚಕ್ರದ ವೇಳೆ ಅತಿಯಾಗಿ ರಕ್ತಸ್ರಾವವಾಗುವುದರಿಂದ ಅವರು ರಕ್ತಹೀನತೆಯ ಹೆಚ್ಚಿನ ಅಪಾಯವನ್ನು ಎದುರಿಸುತ್ತಿರುತ್ತಾರೆ. ಗ್ಯಾಸ್ಟ್ರೋಇಂಟೆಸ್ಟೈನಲ್ ಕಾಯಿಲೆಗಳು ಮತ್ತು ಅಲ್ಸರ್‌ನಿಂದ ಬಳಲುತ್ತಿರುವ ಹಿರಿಯ ವ್ಯಕ್ತಿಗಳಲ್ಲಿ ಅನಿಮಿಯಾ ಉಂಟಾಗುವ ಅಪಾಯ ಹೆಚ್ಚು.

► ಗರ್ಭಾವಸ್ಥೆ

ಗರ್ಭಿಣಿಯರಲ್ಲಿ ಕಬ್ಬಿಣದ ಕೊರತೆಯುಂಟಾಗುವ ಸಾಧ್ಯತೆಗಳು ಹೆಚ್ಚಾಗಿರುತ್ತವೆ. ಗರ್ಭದಲ್ಲಿ ಮಗುವನ್ನು ಹೊತ್ತಿರುವಾಗ ಶರೀರದಲ್ಲಿಯ ರಕ್ತದ ಪ್ರಮಾಣ ಹೆಚ್ಚಾಗುತ್ತದೆ. ಅಂದರೆ ಶರೀರಕ್ಕೆ ಹೆಚ್ಚಿನ ಕಬ್ಬಿಣ ಅಗತ್ಯವಾಗುತ್ತದೆ.

► ದಣಿವು

ದಣಿವು ಶರೀರದಲ್ಲಿ ಕಬ್ಬಿಣದ ಕೊರತೆಯ ಅತ್ಯಂತ ಪ್ರಮುಖ ಲಕ್ಷಣಗಳಲ್ಲೊಂದಾಗಿದೆ. ಯಾವಾಗಲೂ ಬಳಲಿಕೆ ಕಾಣಿಸಿಕೊಳ್ಳುತ್ತಿದ್ದರೆ ನೀವು ಅನಿಮಿಯಾಕ್ಕೆ ತುತ್ತಾಗಿರಬಹುದು.

► ರಕ್ತ ಪರೀಕ್ಷೆ

ನಿಮಗೆ ಅನಿಮಯಾದ ಲಕ್ಷಣಗಳು ಅನುಭವವಾಗುತ್ತಿದ್ದರೆ ಹಿಮೋಗ್ಲೋಬಿನ್ ಮಟ್ಟವನ್ನು ತಿಳಿಯಲು ಅಗತ್ಯವಾಗಿ ರಕ್ತಪರೀಕ್ಷೆಯನ್ನು ಮಾಡಿಸಿಕೊಳ್ಳಬೇಕು. ಹಿಮೊಗ್ಲೋಬಿನ್ ಮಟ್ಟವನ್ನು ಅರಿತುಕೊಂಡ ಬಳಿಕವೇ ವೈದ್ಯರು ನಿಮಗೆ ಅನಿಮಿಯಾ ಇದೆಯೇ ಇಲ್ಲವೇ ಎನ್ನುವುದನ್ನು ನಿರ್ಧರಿಸುತ್ತಾರೆ. * ಕಬ್ಬಿಣದ ಪೂರಕಗಳು ಕಬ್ಬಿಣದ ಕೊರತೆಯಿಂದ ಬಳಲುತ್ತಿರುವವರು ಅದರ ಪೂರಕಗಳನ್ನು ತೆಗೆದುಕೊಳ್ಳ ಬೇಕಾಗುತ್ತದೆ. ಇದರಿಂದಾಗಿ ಕಬ್ಬಿಣದ ಮಟ್ಟ ಹೆಚ್ಚಲು ನೆರವಾಗುತ್ತದೆ. ಆದರೆ ಕೆಲವು ಪೂರಕಗಳು ಈಗಾಗಲೇ ನೀವು ಸೇವಿಸುತ್ತಿರಬಹುದಾದ ಔಷಧಿಗಳ ಮೇಲೆ ಪರಿಣಾಮವನ್ನುಂಟು ಮಾಡುವುದರಿಂದ ಅವುಗಳನ್ನು ತೆಗೆದುಕೊಳ್ಳುವ ಮುನ್ನ ವೈದ್ಯರ ಸಲಹೆಯನ್ನು ಅಗತ್ಯವಾಗಿ ಪಡೆದುಕೊಳ್ಳಬೇಕು.

► ವಿಟಾಮಿನ್ ಸಿ

ಶರೀರದಲ್ಲಿ ಕಬ್ಬಿಣದ ಕೊರತೆಯನ್ನು ನೀಗಿಸಲು ವಿಟಾಮಿನ್ ಸಿ ಸೇವನೆಯು ಕೂಡ ಉತ್ತಮ ಮಾರ್ಗವಾಗಿದೆ. ಅದು ನಿಮ್ಮ ಶರೀರವು ಹಣ್ಣುಗಳು, ಅಕ್ರೋಟ್‌ನಂತಹ ಪೌಷ್ಟಿಕ ಆಹಾರಗಳು ಮತ್ತು ತರಕಾರಿಗಳಲ್ಲಿರುವ ಕಬ್ಬಿಣವನ್ನು ಹೆಚ್ಚಿನ ಪ್ರಮಾಣದಲ್ಲಿ ಹೀರಿಕೊಳ್ಳಲು ನೆರವಾಗುತ್ತದೆ. ಶರೀರದಲ್ಲಿ ಕಬ್ಬಿಣದ ಅಂಶವನ್ನು ಹೆಚ್ಚಿಸಿಕೊಳ್ಳಲು ಪ್ರತಿದಿನ ಒಂದು ಗ್ಲಾಸ್ ಕಿತ್ತಳೆ ರಸದ ಸೇವನೆ ಸಹಕಾರಿಯಾಗುತ್ತದೆ.

► ಡೇರಿ ಉತ್ಪನ್ನಗಳಿಂದ ದೂರವಿರಿ

ಡೇರಿ ಉತ್ಪನ್ನಗಳ ಅತಿಯಾದ ಸೇವನೆಯಿಂಂದ ಅವುಗಳಲ್ಲಿ ಹೇರಳವಾಗಿರುವ ಕ್ಯಾಲ್ಸಿಯಂ ನಿಮ್ಮ ಶರೀರವು ಕಬ್ಬಿಣವನ್ನು ಹೀರಿಕೊಳ್ಳುವುದಕ್ಕೆ ವ್ಯತ್ಯಯವನ್ನುಂಟು ಮಾಡಬಹುದು. ಕ್ಯಾಲ್ಸಿಯಂ ಸಮೃದ್ಧ ಆಹಾರಗಳೊಂದಿಗೆ ಕಬ್ಬಿಣಾಂಶವಿರುವ ಆಹಾರಗಳನ್ನು ಸೇವಿಸಿದರೆ ಈ ಸಮಸ್ಯೆ ಉದ್ಭವವಾಗುತ್ತದೆ, ಹೀಗಾಗಿ ಅವೆರಡನ್ನೂ ಬೇರೆ ಬೇರೆ ಸಮಯಗಳಲ್ಲಿ ಸೇವಿಸುವುದು ಒಳ್ಳೆಯದು.

► ಗ್ಲುಟೆನ್ ಬಗ್ಗೆ ಎಚ್ಚರಿಕೆಯಿರಲಿ

 ಅನಿಮಿಯಾದಿಂದ ಬಳಲುತ್ತಿರುವವರು ಹೆಚ್ಚಿನ ಗ್ಲುಟೆನ್ ಒಳಗೊಂಡಿರುವ ಆಹಾರಗಳನ್ನು ಸೇವಿಸಬಾರದು. ಗೋದಿ, ಬಾರ್ಲಿಯಂತಹ ಗ್ಲುಟೆನ್ ಇರುವ ಆಹಾರಗಳ ಸೇವನೆಯು ಕರುಳಿನ ಭಿತ್ತಿಗಳಿಗೆ ಹಾನಿಯನ್ನುಂಟು ಮಾಡುತ್ತದೆ ಮತ್ತು ಶರೀರವು ಕಬ್ಬಿಣ ಮತ್ತು ಫೊಲೇಟ್‌ಗಳಂತಹ ಪೋಷಕಾಂಶಗಳನ್ನು ಹೀರಿಕೊಳ್ಳುವುದನ್ನು ತಡೆಯುತ್ತದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News