ಸಂಸದೀಯ ಪರಂಪರೆಗೆ ಅಪಚಾರ

Update: 2018-02-11 18:34 GMT

ಸಂಸತ್ತಿನ ಉಭಯ ಸದನಗಳ ಕಲಾಪವನ್ನು ನಾನು ಚಿಕ್ಕ ವಯಸ್ಸಿನಿಂದಲೇ ಗಮನಿಸುತ್ತಿರುವೆ. ಸ್ವಾತಂತ್ರ ಹೋರಾಟದ ಹಿನ್ನೆಲೆಯ ನಮ್ಮ ಮನೆಯಲ್ಲಿ ನಡೆಯುತ್ತಿದ್ದ ರಾಜಕೀಯ ಚರ್ಚೆಗಳನ್ನು ಕೇಳುತ್ತಾ ಬೆಳೆದೆ. ಹೀಗಾಗಿ ರಾಜಕೀಯ ವಿಚಾರಗಳ ಬಗ್ಗೆ ವಿಶೇಷ ಆಸಕ್ತಿ. ನಾನು ಎಪ್ಪತ್ತರ ದಶಕದಿಂದ ಲೋಕಸಭೆ ಮತ್ತು ರಾಜ್ಯಸಭೆಗಳ ಚರ್ಚೆಗಳನ್ನು ಆಸಕ್ತಿಯಿಂದ ನೋಡುತ್ತಿರುತ್ತೇನೆ. ಟಿವಿ ಇಲ್ಲದಾಗ ಪತ್ರಿಕೆಗಳಲ್ಲಿ ಬರುತ್ತಿದ್ದ ಸಂಸತ್ ಕಲಾಪಗಳನ್ನು ತಪ್ಪದೇ ಓದುತ್ತಿದ್ದೆ. ದೊಡ್ಡವನಾಗುತ್ತಿದ್ದಂತೆ ಬೆಂಗಳೂರಿಗೆ ಬಂದಾಗ ವಿಧಾನಸಭೆ ಕಲಾಪಗಳನ್ನು ಪ್ರೇಕ್ಷಕರ ಗ್ಯಾಲರಿಯಲ್ಲಿ ನೋಡುತ್ತ ಬಂದೆ.

ತುಂಬಾ ಚಿಕ್ಕ ವಯಸ್ಸಿಗೇ ಪತ್ರಿಕೋದ್ಯಮಕ್ಕೆ ಬಂದ ನನಗೆ ಅನೇಕಬಾರಿ ಸದನದ ಕಲಾಪಗಳನ್ನು ವರದಿ ಮಾಡುವ ಅವಕಾಶ ದೊರಕಿತು. ‘ಸಂಯುಕ್ತ ಕರ್ನಾಟಕ’ದಲ್ಲಿದ್ದಾಗ ವರ್ಷಗಟ್ಟಲೇ ಸದನದ ಕಲಾಪಗಳನ್ನು ವರದಿ ಮಾಡಿದ್ದೇನೆ. ಶಾಂತವೇರಿ ಗೋಪಾಲಗೌಡ, ಎಸ್.ಶಿವಪ್ಪ, ರಾಮಕೃಷ್ಣ ಹೆಗಡೆ, ಬಂಗಾರಪ್ಪ, ನಂಜುಂಡಸ್ವಾಮಿ, ಬಿ.ವಿ.ಕಕ್ಕಿಲ್ಲಾಯ, ಎಂ.ಎಸ್.ಕೃಷ್ಣನ್ ಮುಂತಾದವರ ಸೂರಿ ವಿದ್ವತ್‌ಪೂರ್ಣ ಭಾಷಣಗಳನ್ನು ಸದನದಲ್ಲಿ ಕೇಳಿದ್ದೇನೆ, ಮಾತಿನೊಂದಿಗೆ ಕಾವ್ಯಲಹರಿ ಹರಿಸುತ್ತಿದ್ದ ಕೋಣಂದೂರು ಲಿಂಗಪ್ಪ, ಬಿ.ಎಂ. ಇದಿನಬ್ಬರ ಮಾತುಗಳನ್ನೂ ಆಲಿಸಿದ್ದೇನೆ. ಸಂಸತ್ ಕಲಾಪಗಳನ್ನು ಕಣ್ಣಾರೆ ಕಂಡಿದ್ದು ಕಡಿಮೆ, ಆದರೆ ಪತ್ರಿಕೆಗಳಲ್ಲಿ ಬರುತ್ತಿದ್ದ ನೆಹರೂ, ಇಂದಿರಾ ಗಾಂಧಿ, ದೇವೇಗೌಡ, ಲೋಹಿಯಾ, ಎಸ್.ಎ.ಡಾಂಗೆ, ಎ.ಕೆ. ಗೋಪಾಲನ್, ಭೂಪೇಶ ಗುಪ್ತ, ಮಧುಲಿಮಯೆ, ಜಾರ್ಜ್ ಫೆರ್ನಾಂಡಿಸ್ ಮತ್ತು ಅಟಲ್ ಬಿಹಾರಿ ವಾಜಪೇಯಿ... ಅಂಥವರ ಭಾಷಣಗಳನ್ನು ಆಸಕ್ತಿಯಿಂದ ಓದುತ್ತ ಬಂದಿರುವೆ. ತೊಂಬತ್ತರ ದಶಕದ ನಂತರ ಟಿವಿಯಲ್ಲಿ ಸಂಸತ್ ಕಲಾಪ ಪ್ರಸಾರವಾಗತೊಡಗಿದ ನಂತರ ಅದನ್ನು ತಪ್ಪದೇ ನೋಡುತ್ತ ಬಂದಿದ್ದೇನೆ. ಇಷ್ಟು ವರ್ಷಗಳ ನನ್ನ ಅನುಭವದಲ್ಲಿ ನಾನು ಕೇಳಿದ ಅತ್ಯಂತ ಕೆಟ್ಟ, ಕಳಪೆ ಭಾಷಣ ಈಗಿನ ಪ್ರಧಾನಿ ನರೇಂದ್ರ ಮೋದಿ ಅವರದು.

ಫೆಬ್ರವರಿ 6ನೇ ತಾರೀಕು ಅವರು ಲೋಕಸಭೆ ಮತ್ತು ರಾಜ್ಯಸಭೆಯಲ್ಲಿ ಮಾಡಿದ ಭಾಷಣ ಅತ್ಯಂತ ಕೆಟ್ಟ ಅಭಿರುಚಿಯಿಂದ ಕೂಡಿತ್ತು. ಅವರ ಹಾವಭಾವ ಮೈಕುಣಿಸುವಿಕೆ ಸರ್ಕಸ್ ಜೋಕರ್‌ಗಳನ್ನು ನೆನಪಿಗೆ ತಂದಿತು. ಯಾವುದೇ ಅಧ್ಯಯನದ ಹಿನ್ನೆಲೆಯಿಲ್ಲದ, ಆರೆಸ್ಸೆಸ್ ಶಾಖೆಯಲ್ಲಿ ಲಾಠಿ ತಿರುವುದನ್ನು ಬಿಟ್ಟರೆ ಏನೂ ಗೊತ್ತಿಲ್ಲದ ನರೇಂದ್ರ ಮೋದಿ ಎಂಬಾತ ಜವಾಹರ ಲಾಲ್ ನೆಹರೂ ಮಟ್ಟದಲ್ಲಿ, ಎತ್ತರದಲ್ಲಿ ಯೋಚಿಸಿ ಮಾತಾಡಬೇಕೆಂದನ್ನು ನಾವು ನಿರೀಕ್ಷಿಸುವುದಿಲ್ಲ. ಆದರೆ, ಕನಿಷ್ಠ ಒಬ್ಬ ಸಾಮಾನ್ಯ ರಾಜಕಾರಣಿಯಾಗಿಯಾದರೂ ನಡೆದುಕೊಳ್ಳಬೇಕಲ್ಲವೇ? ಮೂರು ಬಾರಿ ಗುಜರಾತ್ ಮುಖ್ಯಮಂತ್ರಿಯಾಗಿದ್ದ ವ್ಯಕ್ತಿಗೆ ಸದನದ ವಿಧಿವಿಧಾನಗಳ ಸಾಮಾನ್ಯ ಜ್ಞಾನವಾದರೂ ಇರಬೇಕಲ್ಲವೇ, ದೇಶದ ಪ್ರಧಾನಿಯಾಗಿರುವ ಮೋದಿ ಓರ್ವ ಪಂಚಾಯತ್ ಅಧ್ಯಕ್ಷನಿಗಿಂತಲೂ ಕೆಳಮಟ್ಟಕ್ಕೆ ತಮ್ಮನ್ನು ತಾವು ಕುಗ್ಗಿಸಿಕೊಂಡರು. ಅವರ ಯೋಗ್ಯತೆ ಅಷ್ಟೇ.
ಸಂಸತ್ ಅಧಿವೇಶನದಲ್ಲಿ ಮೊದಲ ದಿನ ರಾಷ್ಟ್ರಪತಿಗಳು ಉಭಯ ಸದನಗಳನ್ನು ಉದ್ದೇಶಿಸಿ ಮಾತನಾಡಿ ಸರಕಾರದ ವಾರ್ಷಿಕ ಸಾಧನೆಗಳನ್ನು ಹೇಳಿಕೊಳ್ಳುತ್ತಾರೆ. ಪ್ರಸಕ್ತ ವರ್ಷದ ಉದ್ದೇಶಿತ ಕಾರ್ಯಕ್ರಮಗಳನ್ನು ವಿವರಿಸುತ್ತಾರೆ. ನಂತರ ರಾಷ್ಟ್ರಪತಿ ಭಾಷಣಕ್ಕೆ ವಂದನೆ ಸೂಚಿಸುವ ಗೊತ್ತುವಳಿಯ ಮೇಲೆ ಚರ್ಚೆ ನಡೆಯುತ್ತದೆ. ಈ ಚರ್ಚೆ ನಂತರ ಪ್ರಧಾನಿ ತಮ್ಮ ಭಾಷಣದಲ್ಲಿ ಚರ್ಚೆಯ ವೇಳೆ ಬಂದ ಪ್ರಶ್ನೆಗಳಿಗೆ ಉತ್ತರಿಸುತ್ತಾರೆ. ತಮ್ಮ ಸರಕಾರದ ಸಾಧನೆಗಳನ್ನು ಸಮರ್ಥಿಸಿಕೊಳ್ಳುತ್ತಾರೆ. ಇದು ಸಂಸದೀಯ ಪದ್ಧತಿ ಅನೂಚಾನವಾಗಿ ಪಾಲಿಸಿಕೊಂಡು ಬಂದ ಸಂಪ್ರದಾಯ.

ಆದರೆ, ಈ ಬಾರಿ ಪ್ರಧಾನಿ ಮೋದಿ ಭಾಷಣ ಹಳಿ ತಪ್ಪಿತು. ಚರ್ಚೆ ಸಂದರ್ಭದಲ್ಲಿ ಬಂದ ಪ್ರಶ್ನೆಗಳಿಗೆ ಉತ್ತರಿಸುವುದನ್ನು ಬಿಟ್ಟು ತಾಳ್ಮೆ ಕಳೆದುಕೊಂಡು ಕಾಂಗ್ರೆಸ್ ಮೇಲೆ ದಾಳಿ ಆರಂಭಿಸಿದರು. ಈ ದಾಳಿ ಇಂದಿನ ನಾಯಕರನ್ನು ಮಾತ್ರ ಗುರಿಯಾಗಿಸಿಕೊಂಡಿರಲಿಲ್ಲ. ದೇಶದ ಮೊದಲ ಪ್ರಧಾನಿ ಜವಾಹರಲಾಲ್ ನೆಹರೂರನ್ನು ಬಾಯಿಗೆ ಬಂದಂತೆ ಟೀಕಿಸಿದರು. ಮೋದಿ ಬರೀ ರಾಜಕೀಯ ಟೀಕೆಯನ್ನು ಮಾತ್ರ ಮಾಡಲಿಲ್ಲ. ವೈಯಕ್ತಿಕ ನಿಂದನೆಗೂ ಕೈ ಹಾಕಿದರು. ಚರಿತ್ರೆಗೂ ಕೈ ಹಾಕಿ ತಮ್ಮ ಮನಬಂದಂತೆ ಸತ್ಯಾಂಶಗಳನ್ನು ತಿರುಚಿದರು. ದೇಶದ ವಿಭಜನೆಗೆ ಕಾಂಗ್ರೆಸ್ ಕಾರಣ, ಕಾಶ್ಮೀರ ಸಮಸ್ಯೆಗೆ ನೆಹರೂ ಕಾರಣ, ವಲ್ಲಭಭಾಯ್ ಪಟೇಲ್ ಪ್ರಧಾನಿಯಾಗಿದ್ದರೆ ಕಾಶ್ಮೀರ ಸಂಪೂರ್ಣವಾಗಿ ಭಾರತದಲ್ಲಿ ಇರುತ್ತಿತ್ತು. ಹೀಗೆ.. ಸಂಘದ ಶಾಖೆಯಲ್ಲಿ ಹೇಳಿಕೊಟ್ಟ ಮಾತುಗಳನ್ನು ಸದನದಲ್ಲಿ ಪುನರುಚ್ಚರಿಸಿದರು. ರಾಷ್ಟ್ರಪತಿ ಭಾಷಣಕ್ಕೆ ವಂದನೆ ಸೂಚಿಸುವ ನಿರ್ಣಯಕ್ಕೂ ಮೋದಿ ಆಡಿದ ಮಾತಿಗೂ ಸಂಬಂಧವೇ ಇರಲಿಲ್ಲ. ಅಷ್ಟಕ್ಕೂ ಕಾಶ್ಮೀರ ವಿಷಯದಲ್ಲಿ ಮೋದಿ ಸುಳ್ಳು ಹೇಳಿದರು. ನೆಹರೂ, ಪಟೇಲ್ ಇಬ್ಬರೂ ಕಾಂಗ್ರೆಸ್ಸಿಗೆ ಸೇರಿದವರಾಗಿದ್ದರು. ಪಟೇಲ್ ಪರ ವಕಾಲತ್ತು ವಹಿಸಿದರು.

ಸಂಸತ್‌ನ ವೇದಿಕೆಯನ್ನು ಈ ರೀತಿ ಹಿಂದಿನ ಯಾವ ಪ್ರಧಾನಿಯೂ ದುರುಪಯೋಗ ಮಾಡಿಕೊಂಡಿರಲಿಲ್ಲ. ಸಂಸ್ಕೃತಿ, ಸಭ್ಯತೆ ಇಲ್ಲದ ವ್ಯಕ್ತಿ ಮಾತ್ರ ಈ ರೀತಿ ಮೈಮೇಲಿನ ಪ್ರಜ್ಞೆ ಕಳೆದುಕೊಂಡು ಅರಚಾಡುತ್ತಾನೆ. ಮುಂದಿನ ಕೆಲ ರಾಜ್ಯಗಳ ವಿಧಾನಸಭಾ ಚುನಾವಣಾ ಪ್ರಚಾರಕ್ಕೆ ಸದನವನ್ನು ವೇದಿಕೆ ಮಾಡಿಕೊಂಡಿದ್ದು ಸಂಸತ್‌ಗೆ ಮಾಡಿದ ಅಪಚಾರವಾಗಿದೆ.

ನರೇಂದ್ರ ಮೋದಿ ಬಿಜೆಪಿಗೆ ಸೇರಿದವರೆಂದು ನಾನು ಈ ರೀತಿ ಟೀಕಿಸುತ್ತಿಲ್ಲ. ಬಿಜೆಪಿಗೆ ಸೇರಿದ ಹಿಂದಿನ ಪ್ರಧಾನಿ ಅಟಲ್‌ಬಿಹಾರಿ ವಾಜಪೇಯಿ ಅವರು ಮಾಡುತ್ತಿದ್ದ ಕಾವ್ಯಾತ್ಮಕ ಭಾಷಣಗಳನ್ನು ನಾನು ಅತ್ಯಂತ ಇಷ್ಟಪಟ್ಟು ಕೇಳುತ್ತಿದ್ದೆ, ಪ್ರತಿಪಕ್ಷಗಳಿಗೆ ಉತ್ತರ ಕೊಡುವಾಗ ಅಟಲ್‌ಜಿ ಎಂದೂ ಸೌಜನ್ಯದ ಎಲ್ಲೆ ಮೀರಿ ಹೋಗುತ್ತಿರಲಿಲ್ಲ. ಯಾರಿಗೂ ನೋವಾಗುವಂತೆ ಮಾತನಾಡುತ್ತಿರಲಿಲ್ಲ. ಸದನದ ವೇದಿಕೆಯನ್ನು ಎಂದೂ ದುರುಪಯೋಗ ಮಾಡಿಕೊಳ್ಳಲಿಲ್ಲ. ಈ ದೇಶಕ್ಕೆ ಜವಾಹರಲಾಲ್ ನೆಹರೂ ನೀಡಿದ ಕೊಡುಗೆ ಅವಿವೇಕಿಗಳಿಗೆ ಅರ್ಥವಾಗುವುದಿಲ್ಲ. ಬಿಜೆಪಿ ನಾಯಕರಾಗಿದ್ದ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರು ನೆಹರೂ ಅವರನ್ನು ತುಂಬ ಇಷ್ಟು ಪಡುತ್ತಿದ್ದರು. ಭಾರತದಲ್ಲಿ ಪ್ರಜಾಪ್ರಭುತ್ವದ ಅಡಿಪಾಯ ಭದ್ರಗೊಳ್ಳಲು ನೆಹರೂ ನೀಡಿದ ಕೊಡುಗೆಯನ್ನು ವಾಜಪೇಯಿ ಸಂಸತ್‌ನ ಹೊರಗೆ ಮತ್ತು ಒಳಗೆ ಅನೇಕ ಬಾರಿ ಶ್ಲಾಘಿಸಿದ್ದಾರೆ. ನೆಹರೂರನ್ನು ಟೀಕಿಸಿ ಮಾತಾಡುವ ಮುನ್ನ ಅಟಲ್‌ಜಿ ಭಾಷಣದ ದಾಖಲೆಗಳನ್ನು ನೋಡಿ ಓದಿಕೊಳ್ಳಬೇಕಾಗಿತ್ತು.

ಇನ್ನು ಈ ದೇಶದ ಮೊದಲ ಪ್ರಧಾನಿ ಪಂಡಿತ ಜವಾಹರಲಾಲ್ ನೆಹರೂ ಅಸಾಮಾನ್ಯ ಬುದ್ಧಿವಂತ.ಇತಿಹಾಸ, ತತ್ವಶಾಸ್ತ್ರ, ಭಾಷಾಶಾಸ್ತ್ರ, ಸಾಹಿತ್ಯ ಹೀಗೆ.. ಎಲ್ಲ ವಿಷಯಗಳೂ ಅವರಿಗೆ ಕರತಲಾಮಲಕ. ನೆಹರೂ ಬರೆದ ಡಿಸ್ಕವರಿ ಆಫ್ ಇಂಡಿಯಾ ಹಾಗೂ ಜಗತ್ ಕಥಾ ವಲ್ಲರಿಗಳು ಜಾಗತಿಕ ಮನ್ನಣೆ ಪಡೆದಿವೆ. ಇಂಥ ನೆಹರೂ ಸದನದಲ್ಲಿ ಮಾತಾಡಲು ನಿಂತರೆ ಇಡೀ ದೇಶವೇ ಕಿವಿಯಾಗಿ ಆಲಿಸುತ್ತಿತ್ತು.

ಇದು ಆಗಿನ ಪ್ರತಿಪಕ್ಷಗಳಲ್ಲಿ ಕಮ್ಯುನಿಸ್ಟ್ ನಾಯಕರಾಗಿದ್ದ ಎಸ್.ಎ. ಡಾಂಗೆ, ಎಸ್.ಕೆ. ಗೋಪಾಲನ್, ಭೂಪೇಶ್ ಗುಪ್ತಾ, ಪ್ರೊ. ಹಿರೇನ್ ಮುಖರ್ಜಿ, ಮೊಹಿಲ್ಲಾನಾಥ್ ಪೈ, ಎಸ್,ಎಂ. ಜೋಶಿ, ಪೀಲೂ ಮೋದಿ, ಜ್ಯೋತಿರ್ಮಯಿ ಬಸು, ಪವನ್ ಮುಖರ್ಜಿ ಹೀಗೆ ಮಹಾ ಪ್ರತಿಭಾವಂತರಿದ್ದರು. ಹೀಗಾಗಿ ಸದನದ ಕಲಾಪಕ್ಕೆ ಕಳೆ ಕಟ್ಟುತ್ತಿತ್ತು. ನಮ್ಮ ಸಂಸತ್ತಿನ ಕಲಾಪ ಮುಂದುವರಿದ ರಾಷ್ಟ್ರಗಳಿಗೂ ಮಾದರಿಯಾಗಿತ್ತು.

ದೇಶಕ್ಕೆ ಸ್ವಾತಂತ್ರ ಬಂದಾಗ ಮೊದಲ ಸಂಸತ್ತಿನಲ್ಲಿ ಕಮ್ಯುನಿಸ್ಟ್ ಪಕ್ಷವೇ ಮುಖ್ಯ ವಿರೋಧಪಕ್ಷವಾಗಿತ್ತು. ಲೋಕಸಭೆಯಲ್ಲಿ ಕಾಮ್ರೆಡ್ ಎ.ಕೆ. ಗೋಪಾಲನ್, ರಾಜ್ಯ ಸಭೆಯಲ್ಲಿ ಭೂಪೇಶಗುಪ್ತಾ, ಪ್ರತಿಪಕ್ಷ ನಾಯಕರಾಗಿದ್ದರು. ಭೂಪೇಶಗುಪ್ತರು ಸದನದಲ್ಲಿ ಮತನಾಡುತ್ತಾರೆಂದರೆ ಪ್ರಧಾನಿ ನೆಹರೂ ಆ ದಿನ ತಪ್ಪದೇ ಸದನಕ್ಕೆ ಬಂದು ತಮ್ಮ ಡೈರಿಯಲ್ಲಿ ಗುಪ್ತಾ ಭಾಷಣದ ಅಂಶಗಳನ್ನು ಬರೆದುಕೊಳ್ಳುತ್ತಿದ್ದರು. ಎಂಬತ್ತರ ದಶಕದವರೆಗೆ ಸಂಸತ್ತಿನಲ್ಲಿ ಉಭಯ ಸದನದ ಕಲಾಪಗಳು ಅತ್ಯಂತ ಮಹತ್ವದ ವಿಷಯಗಳ ಚರ್ಚೆಗೆ ವೇದಿಕೆಗಳಾಗಿದ್ದವು. ಲೋಹಿಯಾ, ಜಾರ್ಜ್ ಫೆರ್ನಾಂಡಿಸ್, ವಾಜಪೇಯಿ, ರಬಿ ರಾಯ್, ಎನ್.ಜಿ. ಗೋರೆ, ಹಾಗೂ ಒಬ್ಬೊಬ್ಬರ ಭಾಷಣಗಳು ವಿದ್ವತ್‌ಪೂರ್ಣವಾಗಿರುತ್ತಿದ್ದವು.

ಇಂಥ ಪರಂಪರೆ ಇರುವ ಸಂಸತ್ತಿನಲ್ಲಿ ಮೋದಿ ಮಾಡಿದ ಭಾಷಣ ಕೇಳಿ ಥೂ ಎನಿಸಿತು. ರಾಷ್ಟ್ರಪತಿ ಭಾಷಣದ ಮೇಲಿನ ಚರ್ಚೆಗೆ ಉತ್ತರ ಕೊಡಬೇಕಾಗಿದ್ದ ಪ್ರಧಾನಿ ಚುನಾವಣಾ ಪ್ರಚಾರ ಭಾಷಣಕ್ಕೆ ಇಳಿದರು. ಕರ್ನಾಟಕ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಬಗ್ಗೆ ಅವರಿಗೆ ಎಷ್ಟು ಹೆದರಿಕೆ ಇದೆ ಅಂದರೆ ಭಾಷಣದುದ್ದಕ್ಕೂ ಸಿದ್ದರಾಮಯ್ಯ, ಖರ್ಗೆ ನಾಮಸ್ಮರಣೆ ಮಾಡಿದರು.

ಅಂದು ಸದನದಲ್ಲಿ ಪ್ರತಿಪಕ್ಷಗಳು ನೋಟು ಅಮಾನ್ಯೀಕರಣದ ಬಗ್ಗೆ, ಜಿಎಸ್‌ಟಿ ಬಗ್ಗೆ ರಾಫೆಲ್ ಹಗರಣದ ಬಗ್ಗೆ ಮಾಡಿದ ಆರೋಪಗಳಿಗೆ ಪ್ರಧಾನಿ ಉತ್ತರಿಸಬೇಕಾಗಿತ್ತು. ಆದರೆ ತನ್ನ ಮೂರು ವರ್ಷಗಳ ಆಡಳಿತದ ಲೋಪಗಳ ಬಗ್ಗೆ ಉತ್ತರಿಸದೆ ಕಾಂಗ್ರೆಸ್‌ನ ಎಪ್ಪತ್ತು ವರ್ಷ ಆಡಳಿತದ ಅದೇ ಹಳೆಯ ಪುರಾಣ ಆರಂಭಿಸಿದರು. ತಲೆಯಲ್ಲಿ ಮೆದುಳು ಇಲ್ಲದ ವ್ಯಕ್ತಿ ಮಾತ್ರ ಹೀಗೆ ಮಾಡುತ್ತಾರೆ. ಕಾಂಗ್ರೆಸ್ ಆಡಳಿತ ಮುಗಿದು ದೇಶದ ಆಡಳಿತ ತನ್ನ ಕೈಗೆ ಬಂದ ನಂತರ ಏನೇನೂ ಅನಾಹುತವಾಗಿದೆ, ಗೋರಕ್ಷಣೆಯ ಹೆಸರಿನಲ್ಲಿ ಎಷ್ಟು ಅನಾಹುತವಾಗಿದೆ, ಎಷ್ಟು ಕಡೆ ಕೋಮು ಹಿಂಸಾಚಾರ ನಡೆದಿದೆ, ನೋಟು ಅಮಾನ್ಯೀಕರಣದ ದುಷ್ಪರಿಣಾಮದಿಂದ ಎಷ್ಟು ಜನ ಸಾವನ್ನಪ್ಪಿದ್ದಾರೆ ಈ ಬಗ್ಗೆ ಉತ್ತರಿಸಲು ಮೋದಿ ಮುಂದಾಗಲಿಲ್ಲ. ನರೇಂದ್ರ ಮೋದಿ ಸೌಜನ್ಯದ ಎಲ್ಲೆ ಮೀರಿ ಗಾಂಧಿ, ನೆಹರೂ ಕುಟುಂಬದ ಹಿತಕ್ಕಾಗಿ ಕಾಂಗ್ರೆಸ್ ಶ್ರಮಿಸುತ್ತಿದೆ. ಎಂದರು. ಆದರೆ ಕಳೆದ 27 ವರ್ಷಗಳಿಂದ ಗಾಂಧಿ ನೆಹರೂ ಕುಟುಂಬದ ಒಬ್ಬ ವ್ಯಕ್ತಿಯೂ ಪ್ರಧಾನಿಯಾಗಿಲ್ಲ. ಆದರೂ ನೆಹರೂ ಕುಟುಂಬದ ಮೇಲೆ ಮೋದಿ ವಿಷಕಾರಿದರು. ಈ ಪ್ರಧಾನಿ ಎಷ್ಟು ಕೆಳ ಮಟ್ಟಕ್ಕೆ ಹೋದರೆಂದರೆ ರಾಜ್ಯಸಭೆಯಲ್ಲಿ ಕಾಂಗ್ರೆಸ್ ನಾಯಕಿ ರೇಣುಕಾ ಚೌಧರಿಯವರನ್ನು ‘ಶೂರ್ಪನಖಿ’ ಎಂದು ಕೀಳು ಲೇವಡಿ ಮಾಡಿದರು. ಭಾಷಣದುದ್ದಕ್ಕೂ ಖರ್ಗೆ, ಸಿದ್ದರಾಮಯ್ಯ ಅವರನ್ನು ಲೇವಡಿ ಮಾಡಿ ತಾವು ಅಪಹಾಸ್ಯಕ್ಕೆ ಈಡಾದರು.

ಭಾರತಕ್ಕೆ ಪ್ರಜಾಪ್ರಭುತ್ವವನ್ನು ಪರಿಚಯಿಸಿದ ಬಾಬಾ ಸಾಹೇಬ ಅಂಬೇಡ್ಕರ್ ಮತ್ತು ಜವಾಹರ್‌ಲಾಲ್ ನೆಹರೂರನ್ನು ನಿಂದಿಸಲು ಬಸವಣ್ಣನವರವನ್ನು ಬಳಸಿಕೊಂಡರು. ಆದರೆ ಬಸವಣ್ಣನವರ ಸಿದ್ಧಾಂತಕ್ಕೂ ಇವರ ಸಂಘಪರಿವಾರಕ್ಕೂ ಏನು ಸಂಬಂಧ ಎಂಬ ಪ್ರಶ್ನೆಗೆ ಇವರ ಬಳಿ ಉತ್ತರವಿಲ್ಲ. ದೇಶದ ತುಂಬ ಮಂದಿರಗಳನ್ನು ನಿರ್ಮಿಸಿ ಪುರೋಹಿತಶಾಹಿಯನ್ನು ಕೊಬ್ಬಿಸುವುದು ಆರೆಸ್ಸೆಸ್ ಸಿದ್ಧಾಂತ. ಆದರೆ ಬಸವಣ್ಣನವರು ಈ ಸ್ಥಾವರ ಸಂಸ್ಕೃತಿಯನ್ನು ವಿರೋಧಿಸಿದರು. ‘‘ಎನ್ನ ಕಾಲೇ ಕಂಬ ಎನ್ನ ದೇಹವೇ ದೇಗುಲ’’ ಶಿರವೇ ಹೊನ್ನ ಕಳಶ ಎಂದವರು. ಇಂಥಹ ಮಹಾನುಭಾವರ ಹೆಸರು ಹೇಳುವ ನೈತಿಕತೆ ಮೋದಿಗಿಲ್ಲ.

ಈಗಿನ ಸಂಸತ್ತಿನಲ್ಲಿ ಪ್ರಧಾನಿ ಮೋದಿ ಮಾತ್ರವಲ್ಲ ಬಹುತೇಕ ನಾಯಕರು ಹೀಗೇ ಇದ್ದಾರೆ. ಹಿಂದೆ ಬುದ್ಧಿ ಜೀವಿಗಳಿಂದ, ಚಿಂತನಶೀಲರಿಂದ ರಾಜನೀತಿಜ್ಞರಿಂದ ತುಂಬಿರುತ್ತಿದ್ದ ಉಭಯ ಸದನಗಳು ಈಗ ಉದ್ಯಮಪಟುಗಳು, ರಿಯಲ್ ಎಸ್ಟೇಟ್ ದಂಧೆಕೋರರು, ರಿಯಲ್ ಎಸ್ಟೇಟ್ ಮಾಫಿಯಾಗಳಿಂದ ತುಂಬಿವೆ. ತಮ್ಮ ವ್ಯಾಪಾರಿ ಹಿತಾಸಕ್ತಿಗಾಗಿ ಅವರು ಸದನವನ್ನು ದುರುಪಯೋಗ ಮಾಡಿಕೊಳ್ಳುತ್ತಿದ್ದಾರೆ. ಈ ದಿನಗಳಲ್ಲೂ ಕಮ್ಯುನಿಷ್ಟ್ ಪಕ್ಷದ ಸೀತಾರಾಮ ಯೆಚೂರಿ ಅವರಂತಹ ಮೇಧಾವಿಗಳು ಇತ್ತೀಚಿನವರೆಗೆ ರಾಜ್ಯಸಭೆಯಲ್ಲಿದ್ದರು. ಸಂವಿಧಾನದ ಮೇಲೆ ಯೆಚೂರಿ ಅವರು ಮಾಡಿದ ವಿದ್ವತ್‌ಪೂರ್ಣ ಭಾಷಣಕ್ಕೆ ಇಡೀ ಸದನವೇ ತಲೆದೂಗುತ್ತಿತ್ತು. ಹಲವಾರು ವಿಷಯಗಳ ಬಗ್ಗೆ ಪಾಂಡಿತ್ಯಪೂರ್ಣವಾಗಿ ಅವರು ಮಾತಾಡುತ್ತಿದ್ದರು. ಯೆಚೂರಿ ಸದನದಲ್ಲಿದ್ದರೆ ಒಳಗೆ ಕಾಲಿಡಲು ಪ್ರಧಾನಿ ಮೋದಿ ಕೂಡಾ ಹಿಂದೇಟು ಹಾಕುತ್ತಿದ್ದರು. ವಿಷಾದದ ಸಂಗತಿಯೆಂದರೆ ಇಂಥ ಯೆಚೂರಿ ಈಗ ಸದನದಲ್ಲಿಲ್ಲ.

ನಾನು ಡಾಂಗೆ, ಏ.ಕೆ.ಜಿ, ಪ್ರೊ ಹೀರೇನ್ ಮುಖರ್ಜಿ ಅವರ ಭಾಷಣಗಳನ್ನು ಕೇಳಿದ್ದೇನೆ. ಈಗ ನಮ್ಮ ನಡುವಿರುವ ಸೀತಾರಾಮ ಯೆಚೂರಿ ಈ ಮೂರು ವ್ಯಕ್ತಿತ್ವಗಳು ಮೇಳೈಸಿದ ಪ್ರತಿಭಾವಂತ, ಡಾಂಗೆಯವರ ವ್ಯಂಗ್ಯ, ಏ.ಕೆ. ಗೋಪಾಲನ್‌ರ ಬದ್ಧತೆ ಮತ್ತು ಪ್ರೊ ಹೀರೇನ್ ಮುಖರ್ಜಿ ಅವರ ಪಾಂಡಿತ್ಯಗಳು ಒಟ್ಟಾಗಿ ಸೀತಾರಾಮ ಯೆಚೂರಿ ಅವರಲ್ಲಿದ್ದವು. ಸದನದಲ್ಲಿ ಅವರ ಮಾತುಗಳನ್ನು ಕೇಳಲು ವಿಶ್ವವಿದ್ಯಾನಿಲಯಗಳ ಸಂಶೋಧನಾ ವಿದ್ಯಾರ್ಥಿಗಳು ಸದನಕ್ಕೆ ಬರುತ್ತಿದ್ದರು. ಇಂಥ ಸೀತಾರಾಮ ಯೆಚೂರಿ ಅವರನ್ನು ಮತ್ತೊಂದು ಅವಧಿಗೆ ಮುಂದುವರಿಸಲು ಅವರ ಪಕ್ಷದ ಪಾಲಿಟ್ ಬ್ಯುರೋ ಒಪ್ಪಿಗೆ ನೀಡಲಿಲ್ಲ. ಹಾಗಾಗಿ ಉಭಯ ಸದನದಲ್ಲಿ ಅಭ್ಯಾಸಪೂರ್ಣವಾಗಿ ಮಾತಾಡುವವರ ಸಂಖ್ಯೆ ಕಡಿಮೆ. ಮಲ್ಲಿಕಾರ್ಜುನ ಖರ್ಗೆ, ಗುಲಾಂನಬಿ ಆಝಾದ್, ಮುಹಮ್ಮದ್ ಇಸ್ಮಾಯೀಲ್ ಡಿ.ರಾಜಾ ಹೀಗೆ ಕೆಲವರು ಮಾತ್ರ ಇದ್ದಾರೆ. ಆದರೂ ಯೆಚೂರಿ ಕೊರತೆ ಎದ್ದು ಕಾಣುತ್ತದೆ.

ಭಾರತದ ಸಂಸತ್ತು ತನ್ನ ಮೊದಲಿನ ಘನತೆ, ಗೌರವ, ಪ್ರತಿಷ್ಠೆಗಳನ್ನು ಮತ್ತೆ ಪಡೆಯಬೇಕಾದರೆ ರಾಜೀವ್ ಚಂದ್ರಶೇಖರ್, ಮಲ್ಯರಂತಹ ಉದ್ಯಮಪತಿಗಳು, ಅಮಿತ್ ಶಾರಂತಹ ಕುಖ್ಯಾತರು ಸದನಕ್ಕೆ ಬರದಂತೆ ಜನ ನೋಡಿಕೊಳ್ಳಬೇಕು. ಕ್ರಿಮಿನಲ್‌ಗಳ, ಗೂಂಡಾಗಳ, ಮತಾಂಧರ ಆಶ್ರಯತಾಣಗಳಾದ ಪಕ್ಷಗಳನ್ನು ತಿರಸ್ಕರಿಸಬೇಕು. ಸದನದಲ್ಲಿ ಯೆಚೂರಿಯಂತಹವರು ಮತ್ತೆ ಪ್ರವೇಶಿಸಬೇಕು.

Writer - ಸನತ್ ಕುಮಾರ್ ಬೆಳಗಲಿ

contributor

Editor - ಸನತ್ ಕುಮಾರ್ ಬೆಳಗಲಿ

contributor

Similar News