ಆಹಾರದ ಅಲರ್ಜಿ ಕುರಿತ ತಪ್ಪುಗ್ರಹಿಕೆಗಳು

Update: 2018-02-26 11:02 GMT

ಆಹಾರದ ಅಲರ್ಜಿ ಅತ್ಯಂತ ಸಾಮಾನ್ಯವಾಗಿದ್ದು, ನಾವು ಸೇವಿಸಿದ ಆಹಾರವನ್ನು ಅವಲಂಬಿಸಿ ಅದು ಯಾರಲ್ಲಿಯೂ ಕಾಣಿಸಿಕೊಳ್ಳಬಹುದು. ನಮ್ಮ ದೇಹದ ರೋಗ ನಿರೋಧಕ ವ್ಯವಸ್ಥೆಯು ನಿರ್ದಿಷ್ಟ ಆಹಾರಕ್ಕೆ ಪ್ರತಿಕ್ರಿಯಿಸಿದಾಗ ಅಲರ್ಜಿ ಉಂಟಾಗುತ್ತದೆ. ಇದು ಶರೀರದಲ್ಲಿ ದದ್ದುಗಳು, ಚರ್ಮದಲ್ಲಿ ತುರಿಕೆ, ನಾಲಿಗೆ ಊದಿಕೊಳ್ಳುವಿಕೆ, ತಲೆ ತಿರುಗುವಿಕೆ, ಉಸಿರಾಟದಲ್ಲಿ ತೊಂದರೆ ಇತ್ಯಾದಿಗಳಿಗೆ ಕಾರಣವಾಗುತ್ತದೆ.ಆಹಾರ ಅಲರ್ಜಿಯ ದುಷ್ಪರಿಣಾಮಗಳು ಶೇ.4ರಿಂದ ಶೇ.6ರಷ್ಟು ಮಕ್ಕಳಲ್ಲಿ ಮತ್ತು ಶೇ.4ರಷ್ಟು ವಯಸ್ಕರಲ್ಲಿ ಕಾಣಿಸಿಕೊಳ್ಳುತ್ತವೆ. ಮಕ್ಕಳು ಮತ್ತು ಶಿಶುಗಳಲ್ಲಿ ಆಹಾರ ಅಲರ್ಜಿಗಳ ಲಕ್ಷಣಗಳು ಸಾಮಾನ್ಯವಾಗಿದ್ದು, ಅಲರ್ಜಿ ಯಾವುದೇ ವಯಸ್ಸಿನಲ್ಲಿಯೂ ಕಾಣಿಸಿಕೊಳ್ಳಬಹುದು.

ಮೊಟ್ಟೆ, ಹಾಲು, ನೆಲಗಡಲೆ ಬೀಜ, ಮೀನು, ಚಿಪ್ಪುಮೀನು, ಗೋದಿ ಮತ್ತು ಸೋಯಾದಂತಹ ಕೆಲವು ಆಹಾರಗಳು ಶೇ.90ರಷ್ಟು ಅಲರ್ಜಿ ಪ್ರಕರಣಗಳಿಗೆ ಕಾರಣವಾಗಿವೆ. ಎಳ್ಳು ಮತ್ತು ಸಾಸಿವೆಯಂತಹ ಎಣ್ಣೆಬೀಜಗಳು ಸಹ ಅಲರ್ಜಿ ಯನ್ನುಂಟು ಮಾಡಬಲ್ಲವು. ಅಂದ ಹಾಗೆ ಆಹಾರ ಅಲರ್ಜಿಗಳ ಬಗ್ಗೆ ಜನರಲ್ಲಿ ಹಲವಾರು ಮಿಥ್ಯೆಗಳಿವೆ.

ಇಂತಹ ಮಿಥ್ಯೆಗಳು ಮತ್ತು ತಥ್ಯಗಳ ಮಾಹಿತಿಯಿಲ್ಲಿದೆ...

► ಆಹಾರದ ಅಲರ್ಜಿಗಳನ್ನು ಗಂಭೀರವಾಗಿ ಪರಿಗಣಿಸಬೇಕಿಲ್ಲ

ಇದು ಅತ್ಯಂತ ಸಾಮಾನ್ಯವಾದ ತಪ್ಪುಗ್ರಹಿಕೆಯಾಗಿದೆ. ಆಹಾರದ ಅಲರ್ಜಿಯು ವಾಂತಿ, ಉಸಿರಾಟದಲ್ಲಿ ತೊಂದರೆ, ಪ್ರಜ್ಞೆ ತಪ್ಪುವಿಕೆ, ಕಟ್ಟಿದ ಮೂಗು ಮತ್ತು ದದ್ದುಗಳನ್ನುಂಟು ಮಾಡಬಹುದು. ಅಲರ್ಜಿ ತೀವ್ರವಾಗಿದ್ದರೆ ಅದು ಜೀವಕ್ಕೂ ಬೆದರಿಕೆಯನ್ನುಂಟು ಮಾಡಬಹುದು. ಹೀಗಾಗಿ ಕೆಲವು ಆಹಾರಗಳು ನಿಮಗೆ ಅಲರ್ಜಿಯನ್ನುಂಟು ಮಾಡುತ್ತಿದ್ದರೆ ಅವುಗಳಿಂದ ದೂರವೇ ಇರಿ.

► ಆಹಾರದಲ್ಲಿನ ಸಂಯೋಜಕಗಳು ಹೆಚ್ಚಿನ ಅಲರ್ಜಿಗಳಿಗೆ ಕಾರಣ

ಇದು ಮತ್ತೊಂದು ತಪ್ಪುಗ್ರಹಿಕೆ. ವಾಸ್ತವದಲ್ಲಿ ಅಲರ್ಜಿಗೆ ಕಾರಣವಾಗುವುದು ಆಹಾರ ದಲ್ಲಿನ ಪ್ರೋಟಿನ್‌ಗಳು. ಕೃತಕ ಬಣ್ಣಗಳು ಮತ್ತು ಸ್ವಾದಕಾರಕಗಳು ಕೆಲವರಲ್ಲಿ ಅಲರ್ಜಿ ಯನ್ನುಂಟು ಮಾಡಬಹುದಾದರೂ ಆಹಾರದಲ್ಲಿನ ರಚನಾತ್ಮಕ ಪ್ರೋಟಿನ್‌ಗಳು ಅಲರ್ಜಿಗೆ ಮೂಲಕಾರಣಗಳಾಗಿವೆ.

► ಅಲರ್ಜಿಕಾರಕ ಆಹಾರದ ಸ್ವಲ್ಪ ಸೇವನೆಯಿಂದ ತೊಂದರೆಯಿಲ್ಲ

ಸುರಕ್ಷಿತವಾಗಿರಬೇಕು ಮತ್ತು ಚೆನ್ನಾಗಿ ಬದುಕಬೇಕು ಎಂದಿದ್ದರೆ ಆಹಾರದ ಅಲರ್ಜಿ ಹೊಂದಿರುವವರು ಅಂತಹ ಆಹಾರಗಳನ್ನು ಸೇವಿಸಲೇಬಾರದು. ಇಂತಹ ಆಹಾರಗಳನ್ನು ಸ್ವಲ್ಪ ಪ್ರಮಾಣದಲ್ಲಿ ಸೇವಿಸಿದರೂ ಗಂಭೀರ ಪ್ರತಿಕ್ರಿಯೆಯನ್ನುಂಟು ಮಾಡಬಹುದು.

► ಕೆಲವು ಆಹಾರಗಳು ಮಾತ್ರ ಅಲರ್ಜಿಗೆ ಕಾರಣ

ಇದು ಸಂಪೂರ್ಣವಾಗಿ ಸರಿಯಲ್ಲ. ನೆಲಗಡಲೆ ಬೀಜ, ಸೋಯಾ, ಚಿಪ್ಪುಮೀನು, ಮೊಟ್ಟೆ, ಮೀನುಗಳಂತಹ ಕೆಲವು ನಿರ್ದಿಷ್ಟ ಆಹಾರಗಳು ಅಲರ್ಜಿಕಾರಕವಾಗಿವೆ ಯಾದರೂ, ನಾವು ಸೇವಿಸುವ ಔಷಧಿಗಳಲ್ಲಿನ ಕೆಲವು ರಾಸಾಯನಿಕಗಳೂ ಅಲರ್ಜಿ ಗಳನ್ನುಂಟು ಮಾಡುತ್ತವೆ.

► ಪ್ರತಿ ಅಲರ್ಜಿ ಪ್ರತಿಕ್ರಿಯೆಯೂ ಆರೋಗ್ಯವನ್ನು ಹದಗೆಡಿಸುತ್ತದೆ

ಆಹಾರದ ಅಲರ್ಜಿಗಳ ಪ್ರತಿಕ್ರಿಯೆಗಳ ಬಗ್ಗೆ ಮೊದಲೇ ನಿಖರವಾಗಿ ತಿಳಿಯಲು ಸಾಧ್ಯವಿಲ್ಲ. ಯಾವ ಆಹಾರ ಕಡಿಮೆ ಅಲರ್ಜಿ, ಯಾವ ಆಹಾರ ತೀವ್ರ ಅಲರ್ಜಿಯ ನ್ನುಂಟು ಮಾಡುತ್ತದೆ ಎನ್ನುವುದನ್ನು ನೀವು ಊಹಿಸಲಾಗುವುದಿಲ್ಲ. ಅದು ಅಲರ್ಜಿಕಾರಕ ಆಹಾರಕ್ಕೆ ನಿಮ್ಮ ಶರೀರವು ಹೇಗೆ ಸ್ಪಂದಿಸುತ್ತದೆ ಎನ್ನುವುದನ್ನು ಅವಲಂಬಿಸಿರುತ್ತದೆ. ಹೀಗಾಗಿ ಯಾವುದೇ ಗಂಭೀರ ಅಲರ್ಜಿ ದುಷ್ಪರಿಣಾಮಗಳಿಂದ ಪಾರಾಗಲು ಸೂಕ್ತ ಔಷಧಿಗಳನ್ನು ಕೈಗೆ ಸಿಗುವಂತೆ ಇಟ್ಟುಕೊಳ್ಳಿ.

► ಹೆಚ್ಚಿನ ಆಹಾರ ಅಲರ್ಜಿಗಳಿಗೆ ನೆಲಗಡಲೆ ಬೀಜ ಕಾರಣ

ಇದು ಇನ್ನೊಂದು ಸಾಮಾನ್ಯವಾದ ತಪ್ಪುಗ್ರಹಿಕೆಯಾಗಿದೆ. ಆಹಾರದ ಅಲರ್ಜಿಗಳ ನ್ನುಂಟು ಮಾಡಬಹುದಾದ ಇತರ ಹಣ್ಣುಗಳು ಮತ್ತು ತರಕಾರಿಗಳೂ ಇವೆ. ನೆಲಗಡಲೆ ಬೀಜ ಅಲರ್ಜಿಗೆ ಕಾರಣವಾಗುವ ಏಕೈಕ ಖಾದ್ಯವಲ್ಲ, ಕಿವಿ ಹಣ್ಣುಗಳು, ಮೊಟ್ಟೆ, ಗೋದಿ, ಚಿಪ್ಪುಮೀನು ಇತ್ಯಾದಿಗಳೂ ಅಲರ್ಜಿಗಳಿಗೆ ಕಾರಣವಾಗುವ ಸಾಮಾನ್ಯ ಆಹಾರಗಳಾ ಗಿದ್ದು, ಅವುಗಳ ಪ್ರತಿಕೂಲ ಪರಿಣಾಮಗಳು ಜೀವಕ್ಕೂ ಅಪಾಯವನ್ನುಂಟು ಮಾಡಬಹುದು.

► ಆಹಾರದ ಅಲರ್ಜಿ ಮತ್ತು ಆಹಾರ ಅಸಹಿಷ್ಣುತೆ ಒಂದೇ

ಆಹಾರದ ಅಲರ್ಜಿಯುಂಟಾದಾಗ ನಿರೋಧಕ ವ್ಯವಸ್ಥೆಯು ಅಲರ್ಜಿಕಾರಕವನ್ನು ಗುರುತಿಸಬಲ್ಲ ಇಮ್ಯುನೋಗ್ಲೋಬಿನ್ ಇ ಎಂಬ ಪ್ರತಿರೋಧಕವನ್ನು ಉತ್ಪಾದಿಸುತ್ತದೆ. ಇದು ಹಿಸ್ಟಾಮೈನ್ ಮತ್ತು ಇತರ ರಾಸಾಯನಿಕಗಳನ್ನು ಬಿಡುಗಡೆಗೊಳಿಸುವ ಮೂಲಕ ಆಹಾರ ಅಲರ್ಜಿಕಾರಕಗಳ ವಿರುದ್ಧ ಹೋರಾಡುತ್ತದೆ. ಆಹಾರ ಅಸಹಿಷ್ಣುತೆ ಅಥವಾ ಯಾವುದೇ ಆಹಾರದ ಒಗ್ಗದಿರುವಿಕೆಗೆ ಮತ್ತು ನಿರೋಧಕ ವ್ಯವಸ್ಥೆಗೆ ಸಂಬಂಧವಿಲ್ಲ. ಆಹಾರ ಅಸಹಿಷ್ಣುತೆಯು ಜೀವಕ್ಕೆ ಅಪಾಯವನ್ನುಂಟು ಮಾಡುವುದಿಲ್ಲವಾದ್ದರಿಂದ ನಮ್ಮ ಶರೀರದ ನಿರೋಧಕ ವ್ಯವಸ್ಥೆಯು ಮಧ್ಯಪ್ರವೇಶವನ್ನು ಮಾಡುವುದಿಲ್ಲ.

► ಆಹಾರದ ಅಲರ್ಜಿ ಸದಾ ಬಾಲ್ಯದಲ್ಲಿಯೇ ಕಾಣಿಸಿಕೊಳ್ಳುತ್ತದೆ

ಇದು ಇನ್ನೊಂದು ತಪ್ಪುಗ್ರಹಿಕೆ. ಆಹಾರದ ಅಲರ್ಜಿಯು ಯಾವುದೇ ವಯಸ್ಸಿ ನಲ್ಲಿಯೂ ಕಾಣಸಿಕೊಳ್ಳಬಹುದು. ನೀವು ಅಲರ್ಜಿಕಾರಕವಲ್ಲ ಎಂದು ನಂಬಿದ್ದ ಆಹಾರವು ಕೂಡ ಬದುಕಿನ ನಂತರದ ಹಂತದಲ್ಲಿ ಅಲರ್ಜಿಗೆ ಕಾರಣವಾಗಬಹುದು. ಹಾಲು, ಮೊಟ್ಟೆ, ಸೋಯಾ ಮತ್ತು ಗೋದಿಯಂತಹ ಕೆಲವು ಆಹಾರಗಳಿಗೆ ಅಲರ್ಜಿಗಳನ್ನು ಹೊಂದಿರುವ ಮಕ್ಕಳು 2-3 ವರ್ಷಗಳ ಕಾಲ ಅವುಗಳ ಸೇವನೆಯನ್ನು ಕೈಬಿಟ್ಟರೆ ಕಾಲಕ್ರಮೇಣ ಅದರಿಂದ ಪಾರಾಗುತ್ತಾರೆ.

► ಊಟದ ನಂತರ ಯಾವುದೇ ಅಡ್ಡಪರಿಣಾಮವೂ ಅಲರ್ಜಿ

ಇದು ಇನ್ನೊಂದು ಸಾಮಾನ್ಯ ಮಿಥ್ಯೆ. ಹಲವಾರು ಜನರು ಆಹಾರದ ಅಲರ್ಜಿಗಳನ್ನು ಹೊಂದಿರುತ್ತಾರೆ ಮತ್ತು ಕೆಲವು ಆಹಾರಗಳನ್ನು ಸೇವಿಸಿದ ಬಳಿಕ ಅವರಲ್ಲಿ ಪ್ರತಿಕೂಲ ಪರಿಣಾಮಗಳು ಕಂಡುಬರುತ್ತವೆ. ಇದನ್ನೇ ಆಹಾರದ ಅಲರ್ಜಿ ಎನ್ನಲು ಸಾಧ್ಯವಿಲ್ಲ. ಕೆಲವರ ಶರೀರಕ್ಕೆ ಹಾಲು ಒಗ್ಗದಿರಬಹುದು, ವಾಯುವಿನ ಉಪದ್ರವವಿರಬಹುದು. ಅದರಿಂದಾಗಿ ಇಂತಹ ಅಡ್ಡಪರಿಣಾಮಗಳು ಕಾಣಿಸಬಹುದು. ಈ ಅಡ್ಡಪರಿಣಾಮಗಳು ಯಾವಾಗಲೂ ಆಹಾರದ ಅಲರ್ಜಿಯೇ ಆಗಿರಬೇಕೆಂದಿಲ್ಲ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News