ಕುತ್ತಿಗೆ ನೋವೇ? ಯೋಚಿಸಬೇಡಿ, ಇಲ್ಲಿವೆ ಸುಲಭ ಮನೆಮದ್ದುಗಳು

Update: 2018-03-01 09:54 GMT

ನಿಮಗೆ ಆಗಾಗ್ಗೆ ಕುತ್ತಿಗೆ ನೋವು ಕಾಡುತ್ತಿದೆಯೇ? ಕುತ್ತಿಗೆ ನೋವಿಗೆ ಆ ಭಾಗದಲ್ಲಿ ಪೆಟ್ಟು ಅಥವಾ ಗಾಯ, ಕೆಲಸದ ವೇಳೆ ಅಥವಾ ಮಲಗಿದಾಗ ಸಮರ್ಪಕವಕವಲ್ಲದ ಭಂಗಿ, ಸ್ನಾಯುಗಳ ಬಿಗಿತ ಇತ್ಯಾದಿಗಳು ಪ್ರಮುಖ ಕಾರಣಗಳಾಗಿವೆ. ಈ ನೋವು ಭುಜಗಳಿಗೂ ಹರಡಬಹುದು. ಪೌಷ್ಟಿಕಾಂಶಗಳ ಕೊರತೆ, ಸರ್ವಿಕಲ್ ಸ್ಪಾಂಡಿಲೋಸಿಸ್, ನರಗಳ ಸಂಕುಚನ ಇತ್ಯಾದಿಗಳೂ ಕುತ್ತಿಗೆ ನೋವಿಗೆ ಕಾರಣವಾಗುತ್ತವೆ.

ಕುತ್ತಿಗೆಯು ಸಂಕೀರ್ಣ ರಚನೆಯಾಗಿದ್ದು, ಚರ್ಮ, ಸ್ನಾಯುಗಳು, ಥೈರಾಯ್ಡಾ ಗ್ರಂಥಿ, ದುಗ್ಧಗ್ರಂಥಿಗಳು ಮತ್ತು ರಕ್ತನಾಳ ಇತ್ಯಾದಿಗಳನ್ನು ಒಳಗೊಂಡಿರುತ್ತದೆ. ಈ ಯಾವುದೇ ಅಂಗದಲ್ಲಿ ಸಮಸ್ಯೆಯಿದ್ದರೆ ಕುತ್ತಿಗೆ ನೋವು ಕಾಣಿಸಿಕೊಳ್ಳುತ್ತದೆ.

ತೀವ್ರ ಕುತ್ತಿಗೆ ನೋವಿನಿಂದ ಪೀಡಿತರಾಗಿದ್ದರೆ ವೈದ್ಯರನ್ನು ಕಾಣುವುದು ಉತ್ತಮ. ಆದರೆ ಅಸಹಜ ಭಂಗಿ ಅಥವಾ ವ್ಯಾಯಾಮದಿಂದ ಕುತ್ತಿಗೆ ನೋವುಂಟಾಗಿದ್ದರೆ ಅದಕ್ಕೆ ಈ ಕೆಳಗಿನ ಸರಳ ಮನೆಮದ್ದುಗಳನ್ನು ಪ್ರಯತ್ನಿಸಬಹುದಾಗಿದೆ.

►ಕುತ್ತಿಗೆಗೆ ವ್ಯಾಯಾಮ

 ಕುತ್ತಿಗೆಗೆ ಕೆಲವೊಂದು ವ್ಯಾಯಾಮಗಳನ್ನು ನೀಡುವ ಮೂಲಕ ನೋವಿನಿಂದ ಉಪಶಮನ ಪಡೆಯಬಹುದಾಗಿದೆ. ಕೆಲವು ಸುಲಭದ ವ್ಯಾಯಾಮಗಳು ಕುತ್ತಿಗೆಯಲ್ಲಿನ ಬಿಗಿತವನ್ನು ಕಡಿಮೆ ಮಾಡುತ್ತವೆ. ತಲೆಯನ್ನು ನಿಧಾನವಾಗಿ ಮುಂದಕ್ಕೆ ಮತ್ತು ಹಿಂದಕ್ಕೆ ಹಾಗೂ ಒಂದು ಬದಿಯಿಂದ ಇನ್ನೊಂದು ಬದಿಗೆ ಚಲಿಸಿ. ಬಿಗಿತ ನಿವಾರಣೆಯಾಗುವವ ರೆಗೆ ಪ್ರತಿ ಕೆಲವು ಗಂಟೆಗಳಿಗೊಮ್ಮೆ 15 ನಿಮಿಷಗಳ ಕಾಲ ಈ ವ್ಯಾಯಾಮವನ್ನು ಮಾಡಿ.

► ಆ್ಯಪಲ್ ಸಿಡರ್ ವಿನೆಗರ್

ಆ್ಯಪಲ್ ಸಿಡರ್ ವಿನೆಗರ್ ಶಕ್ತಿಶಾಲಿ ಉರಿಯೂತ ನಿರೋಧಕ ಮತ್ತು ಉತ್ಕರ್ಷಣ ನಿರೋಧಕ ಗುಣಗಳನ್ನು ಹೊಂದಿದ್ದು, ಇವು ಕುತ್ತಿಗೆ ನೋವನ್ನು ಬಹುಬೇಗನೆ ಗುಣಪಡಿಸುತ್ತವೆ. ಟವೆಲ್ಲೊಂದನ್ನು ಆ್ಯಪಲ್ ಸಿಡರ್ ವಿನೆಗರ್‌ನಿಂದ ಒದ್ದೆ ಮಾಡಿ ಅದನ್ನು ಕುತ್ತಿಗೆಯ ಪೀಡಿತ ಭಾಗದ ಮೇಲೆ ಕೆಲವು ಗಂಟೆಗಳ ಕಾಲ ಇಟ್ಟುಕೊಳ್ಳಿ. ಇದನ್ನು ನೋವು ಪೂರ್ಣವಾಗಿ ಮಾಯವಾಗುವವರೆಗೆ ಪ್ರತಿದಿನ ಪುನರಾವರ್ತಿಸಿ.

► ಜಲಚಿಕಿತ್ಸೆ

ಜಲಚಿಕಿತ್ಸೆ ಕುತ್ತಿಗೆ ನೋವನ್ನು ಗುಣಪಡಿಸಲು ಇನ್ನೊಂದು ಪರಿಣಾಮಕಾರಿ ವಿಧಾನವಾಗಿದೆ. ಶವರ್‌ನಡಿ ನಿಂತುಕೊಳ್ಳುವುದರಿಂದ ನೀರು ರಭಸದಿಂದ ಪೀಡಿತ ಭಾಗದ ಮೇಲೆ ಬಿದ್ದು ನೋವನ್ನು ಕಡಿಮೆ ಮಾಡುತ್ತದೆ. ಶವರ್ ಮೂಲಕ ಬೆಚ್ಚನೆ ನೀರು ನೋವಿರುವ ಭಾಗದ ಮೇಲೆ ಸುಮಾರು ನಾಲ್ಕು ನಿಮಿಷಗಳ ಕಾಲ ಬೀಳುವಂತೆ ನೋಡಿಕೊಳ್ಳಿ. ಬಳಿಕ 60 ಸೆಕೆಂಡ್‌ಗಳ ಕಾಲ ತಣ್ಣೀರು ಬೀಳುವಂತೆ ಮಾಡಿ. ಈ ಕ್ರಮವನ್ನು ಐದು ಬಾರಿ ಪುನರಾವರ್ತಿಸಿ.

► ಎಸೆನ್ಶಿಯಲ್ ಆಯಿಲ್

 ಪೆಪ್ಪರ್‌ಮಿಂಟ್, ತುಳಸಿ ಮತ್ತು ಲ್ಯಾವೆಂಡರ್‌ನಂತಹ ಎಸೆನ್ಶಿಯಲ್ ಆಯಿಲ್‌ಗಳು ಕುತ್ತಿಗೆ ನೋವನ್ನು ನಿವಾರಿಸುವಲ್ಲಿ ಪರಿಣಾಮಕಾರಿಯಾಗಿ ಕಾರ್ಯ ನಿರ್ವಹಿಸುತ್ತವೆ. ಈ ತೈಲಗಳು ಉರಿಯೂತ ನಿರೋಧಕ ಗುಣಗಳನ್ನು ಹೊಂದಿದ್ದು, ಬಿಗಿದುಕೊಂಡ ಸ್ನಾಯುಗಳನ್ನು ಸಡಿಲಿಸುತ್ತವೆ. ಮೇಲೆ ತಿಳಿಸಿರುವ ಎಲ್ಲ ಎಸೆನ್ಶಿಯಲ್ ತೈಲಗಳನ್ನು ಮಿಶ್ರಗೊಳಿಸಿ ಅದಕ್ಕೆ ಕೆಲವು ಹನಿ ಬೆಚ್ಚಗಿನ ಆಲಿವ್ ಎಣ್ಣೆಯನ್ನು ಸೇರಿಸಿ. ಇದರಿಂದ ಕೆಲವು ನಿಮಿಷಗಳ ಕಾಲ ಕುತ್ತಿಗೆಗೆ ಮಸಾಜ್ ಮಾಡಿ.

► ಬಿಸಿಎಣ್ಣೆಯ ಮಸಾಜ್

ಇದು ಕುತ್ತಿಗೆ ನೋವಿನಿಂದ ಮುಕ್ತಿ ಪಡೆಯಲು ಇನ್ನೊಂದು ಪರಿಣಾಮಕಾರಿ ವಿಧಾನವಾಗಿದೆ. ಸೌಮ್ಯವಾಗಿ ಮಸಾಜ್ ಮಾಡುವುದರಿಂದ ರಕ್ತಸಂಚಾರವು ಉತ್ತಮ ಗೊಳ್ಳುತ್ತದೆ ಮತ್ತು ನೋವು ಕಡಿಮೆಯಾಗುತ್ತದೆ. ಒಂದು ಚಮಚ ಸಾಸಿವೆ ಎಣ್ಣೆ ಅಥವಾ ತೆಂಗಿನೆಣ್ಣೆಯನ್ನು ಬಿಸಿ ಮಾಡಿ ಅದರಿಂದ ಕುತ್ತಿಗೆಯ ಭಾಗಕ್ಕೆ ಎರಡು ನಿಮಿಷಗಳ ಕಾಲ ಮಸಾಜ್ ಮಾಡಿ.

► ಐಸ್ ಪ್ಯಾಕ್

ಇದು ಕುತ್ತಿಗೆ ನೋವಿಗೆ ಅತ್ಯಂತ ಸುಲಭದ ಮನೆಮದ್ದಾಗಿದೆ. ಇದರ ತಂಪು ಉರಿಯೂತವನ್ನು ತಗ್ಗಿಸಿ ನೋವನ್ನು ಶಮನಗೊಳಿಸುತ್ತದೆ. ಜಜ್ಜಿದ ಕೆಲವು ಮಂಜುಗಡ್ಡೆ ಗಳನ್ನು ಟವೆಲ್‌ನಲ್ಲಿ ಸುತ್ತಿ ಸುಮಾರು 15 ನಿಮಿಷಗಳ ಕಾಲ ಪೀಡಿತ ಭಾಗದ ಮೇಲೆ ಇಟ್ಟುಕೊಳ್ಳಿ. ಪ್ರತಿ ಮೂರು ಗಂಟೆಗಳಿಗೊಮ್ಮೆ ಇದನ್ನು ಪುನರಾವರ್ತಿಸಿ.

► ಅರಿಷಿಣ

 ಅರಿಷಿಣವು ಉರಿಯೂತ ನಿರೋಧಕ ಮತ್ತು ಬ್ಯಾಕ್ಟೀರಿಯಾ ನಿಗ್ರಹ ಗುಣಗಳನ್ನು ಹೊಂದಿದ್ದು, ಉರಿಯೂತದ ವಿರುದ್ಧ ಹೋರಾಡುತ್ತದೆ ಮತ್ತು ಊತವನ್ನು ತಗ್ಗಿಸುತ್ತದೆ. ಒಂದು ಚಮಚ ಅರಿಷಿಣ ಹುಡಿಯನ್ನು ಒಂದು ಗ್ಲಾಸ್ ಹಾಲಿನಲ್ಲಿ ಬೆರೆಸಿ, ಈ ಮಿಶ್ರಣವನ್ನು ಬಿಸಿ ಮಾಡಿದ ಬಳಿಕ ಕೆಲ ಕಾಲ ಹಾಗೆಯೇ ಬಿಡಿ. ತಣ್ಣಗಾದ ನಂತರ ಕೆಲವು ಹನಿಜೇನು ಸೇರಿಸಿ ಕುಡಿಯಿರಿ. ದಿನಕ್ಕೆ ಎರಡು ಬಾರಿ ಹೀಗೆ ಮಾಡಿದರೆ ಉತ್ತಮ ಫಲಿತಾಂಶವನ್ನು ಕಾಣಬಹುದು.

► ಎಪ್ಸ್‌ಮ್ ಸಾಲ್ಟ್

ಎಪ್ಸ್‌ಮ್ ಸಾಲ್ಟ್ ಮ್ಯಾಗ್ನೀಷಿಯಂ ಅನ್ನು ಒಳಗೊಂಡಿದ್ದು, ಇದು ಶರೀರದಲ್ಲಿನ ಹಲವಾರು ಕಿಣ್ವಗಳನ್ನು ನಿಯಂತ್ರಿಸುವಲ್ಲಿ ನೆರವಾಗುತ್ತದೆ. ಅದು ರಕ್ತಸಂಚಾರವನ್ನು ಉತ್ತಮಗೊಳಿಸುತ್ತದೆ ಮತ್ತು ಸ್ನಾಯುಗಳ ಬಿಗಿತ ಹಾಗೂ ಒತ್ತಡವನ್ನು ಕಡಿಮೆ ಮಾಡುತ್ತದೆ. ನಿಮ್ಮ ಬಾತ್‌ಟಬ್‌ನಲ್ಲಿ ಬಿಸಿನೀರು ತುಂಬಿ ಅದಕ್ಕೆ ಎಪ್ಸಮ್ ಸಾಲ್ಟ್ ಸೇರಿಸಿ. 10-15 ನಿಮಿಷಗಳ ಕಾಲ ಟಬ್‌ನಲ್ಲಿದ್ದು, ಕುತ್ತಿಗೆಯ ಭಾಗ ಈ ನೀರಿನಲ್ಲಿ ಮುಳುಗಿರು ವಂತೆ ನೋಡಿಕೊಳ್ಳಿ.

► ಕರಿಮೆಣಸು

ಕರಿಮೆಣಸಿನಲ್ಲಿರುವ ಕ್ಯಾಪ್‌ಸೈಸಿನ್ ಎಂಬ ಸಂಯುಕ್ತವು ಉರಿಯೂತ ನಿರೋಧಕ ಮತ್ತು ನೋವು ನಿವಾರಕ ಗುಣಗಳನ್ನು ಹೊಂದಿದ್ದು, ಕುತ್ತಿಗೆ ನೋವನ್ನು ಶಮನಗೊಳಿಸಲು ನೆರವಾಗುತ್ತದೆ. ಒಂದು ಚಮಚ ಕರಿಮೆಣಸಿನ ಹುಡಿಯನ್ನು ಎರಡು ಚಮಚ ಬಿಸಿ ಆಲಿವ್ ಎಣ್ಣೆಯೊಂದಿಗೆ ಚೆನ್ನಾಗಿ ಮಿಶ್ರ ಮಾಡಿ, ಅದನ್ನು ನೋವಿರುವ ಭಾಗಕ್ಕೆ ಲೇಪಿಸಿ.

► ಶುಂಠಿ

ಶುಂಠಿಯು ತನ್ನ ಉರಿಯೂತ ನಿವಾರಕ ಗುಣದಿಂದಾಗಿ ಕುತ್ತಿಗೆಯ ಭಾಗದಲ್ಲಿ ರಕ್ತಸಂಚಾರವನ್ನು ಹೆಚ್ಚಿಸುತ್ತದೆ. ಒಂದು ಕಪ್ ನೀರನ್ನು ಬಿಸಿ ಮಾಡಿ ಅದು ಕುದಿಯುತ್ತಿರುವಾಗ ಸಣ್ಣತುಂಡು ಶುಂಠಿಯನ್ನು ಸೇರಿಸಿ. ಅದನ್ನು ಸೋಸಿ ಕೆಲವು ಹನಿಗಳಷ್ಟು ಜೇನು ಸೇರಿಸಿ ಸೇವಿಸಿರಿ. ನೋವು ಸಂಪೂರ್ಣವಾಗಿ ಗುಣವಾಗುವವರೆಗೆ ಪ್ರತಿದಿನ ಈ ಪಾನೀಯವನ್ನು ಸೇವಿಸಿ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News