ಪ್ರತಿ ಬೆಳಿಗ್ಗೆ ಸೋರೆಕಾಯಿ ಮತ್ತು ಶುಂಠಿ ರಸ ಸೇವನೆಯ ಆರೋಗ್ಯಲಾಭಗಳು
ನಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳಲು ಹಲವಾರು ನೈಸರ್ಗಿಕ ಮಾರ್ಗಗಳಿವೆ. ನಮ್ಮ ಮನೆಯ ಅಡುಗೆಕೋಣೆ ಮತ್ತು ಕೈತೋಟಗಳಲ್ಲಿ ಲಭ್ಯವಿರುವ ಪೌಷ್ಟಿಕಾಂಶಭರಿತ ಹಲವಾರು ವಸ್ತುಗಳೇ ಸಾಕು. ಆದರೆ 'ಹಿತ್ತಲ ಗಿಡ ಮದ್ದಲ್ಲ' ಎಂಬಂತೆ ಇವುಗಳ ಮಹತ್ವ ಹೆಚ್ಚಿನವರಿಗೆ ಗೊತ್ತಿಲ್ಲ. ಸುಲಭವಾಗಿ ಲಭ್ಯವಿರುವ ತರಕಾರಿಗಳಲ್ಲೊಂದಾಗಿರುವ ಸೋರೆಕಾಯಿ ರಸ ಮತ್ತು ಶುಂಠಿಯ ಮಿಶ್ರಣವನ್ನು ಪ್ರತಿದಿನ ಬೆಳಿಗ್ಗೆ ಸೇವಿಸುವುದರಿಂದ ಹಲವಾರು ಆರೋಗ್ಯಲಾಭಗಳನ್ನು ಪಡೆಯಬಹುದಾಗಿದೆ.
ತಯಾರಿಕೆಯ ವಿಧಾನ: ಒಂದು ಕಪ್ ತಾಜಾ ಸೋರೆಕಾಯಿಯ ತುಂಡುಗಳನ್ನು ಜ್ಯೂಸರ್‌ನಲ್ಲಿ ಹಾಕಿ, ಸ್ವಲ್ಪ ನೀರನ್ನು ಸೇರಿಸಿ ರಸವನ್ನು ಸಿದ್ಧಪಡಿಸಿಕೊಳ್ಳಿ. ಈ ಜ್ಯೂಸ್‌ಗೆ ಒಂದು ಚಮಚ ಶುಂಠಿಯ ಪೇಸ್ಟ್‌ನ್ನು ಸೇರಿಸಿ. ಚೆನ್ನಾಗಿ ಮಿಶ್ರಗೊಳಿಸಿ ಬೆಳಗಿನ ತಿಂಡಿಗೆ ಮುನ್ನ ಸೇವಿಸಿ. ಪ್ರತಿ ದಿನ ಬೆಳಿಗ್ಗೆ ಈ ಪೇಯವನ್ನು ಸೇವಿಸಿದರೆ ಉತ್ತಮ ಆರೋಗ್ಯ ನಿಮ್ಮದಾಗುತ್ತದೆ.
► ದೇಹದ ಉಷ್ಣತೆಯನ್ನು ತಗ್ಗಿಸುತ್ತದೆ
ಹಲವು ಬಾರಿ ಹೊರಗಿನ ಬಿಸಿ ವಾತಾವರಣ, ಹಾರ್ಮೋನ್‌ಗಳಲ್ಲಿ ಏರುಪೇರು, ಚಯಾಪಚಯ ಚಟುವಟಿಕೆಗಳಲ್ಲಿ ತೀವ್ರ ಬದಲಾವಣೆಯಂತಹ ವಿವಿಧ ಕಾರಣಗಳಿಂದ ನಮ್ಮ ಶರೀರದ ಆಂತರಿಕ ಉಷ್ಣತೆ ಹೆಚ್ಚುತ್ತದೆ ಮತ್ತು ಕಿರಿಕಿರಿಯನ್ನುಂಟು ಮಾಡುತ್ತದೆ. ಇದು ಅಜೀರ್ಣ, ತಲೆನೋವು ಮತ್ತು ಮೂಗಿನಲ್ಲಿ ರಕ್ತಸ್ರಾವಕ್ಕೂ ಕಾರಣವಾಗಬಹುದು. ಸೋರೆಕಾಯಿ ಮತ್ತು ಶುಂಠಿಯಿಂದ ತಯಾರಿಸಿದ ಪೇಯವನ್ನು ಸೇವಿಸುವುದರಿಂದ ಶರೀರವು ತಂಪಾಗುತ್ತದೆ ಮತ್ತು ಈ ಲಕ್ಷಣಗಳು ಕಡಿಮೆಯಾಗುತ್ತವೆ.
► ಅಜೀರ್ಣಕ್ಕೆ ರಾಮಬಾಣ
ಇಂದು ವಿವಿಧ ಕಾರಣಗಳಿಂದಾಗಿ ಅಜೀರ್ಣವು ಸಾಮಾನ್ಯ ಸಮಸ್ಯೆಯಾಗಿ ಪರಿಣಮಿಸಿದೆ. ಅಜೀರ್ಣವು ಹೊಟ್ಟೆಯಲ್ಲಿ ವಾಯು, ಎದೆಉರಿ ಮತ್ತು ಅಂತಿಮವಾಗಿ ಕರುಳಿನ ಕ್ಯಾನ್ಸರ್‌ಗೂ ಕಾರಣವಾಗಬಹುದು. ಸೋರೆಕಾಯಿಯಲ್ಲಿನ ನಾರು ಮತ್ತು ನೀರಿನಂಶ ಹಾಗೂ ಶುಂಠಿಯಲ್ಲಿನ ಕಿಣ್ವಗಳು ಹೊಟ್ಟೆಯಲ್ಲಿನ ಆಮ್ಲವನ್ನು ತಟಸ್ಥಗೊಳಿಸುವ ಮೂಲಕ ಜೀರ್ಣಕ್ರಿಯೆಯನ್ನು ಸುಲಭವಾಗಿಸುತ್ತವೆ.
► ದೇಹತೂಕವನ್ನು ಇಳಿಸಲು ಸಹಕಾರಿ
ಈ ಪೇಯದಲ್ಲಿರುವ ಉತ್ಕರ್ಷಣ ನಿರೋಧಕಗಳು ಮತ್ತು ವಿಟಾಮಿನ್ ಕೆ ಚಯಾಪಚಯ ಕ್ರಿಯೆಯನ್ನು ಉತ್ತಮಗೊಳಿಸುತ್ತವೆ ಮತ್ತು ರಸದಲ್ಲಿ ಕಡಿಮೆ ಕ್ಯಾಲರಿ ಗಳಿರುವುದರಿಂದ ದೇಹದ ತೂಕವನ್ನು ಇಳಿಸಲು ನೆರವಾಗುತ್ತದೆ. ಆದರೆ ಉತ್ತಮ ಪರಿಣಾಮವನ್ನು ಪಡೆಯಲು ಈ ರಸದ ಸೇವನೆಯೊಂದಿಗೆ ಸಮತೋಲಿತ ಆಹಾರ ಮತ್ತು ನಿಯಮಿತವಾದ ವ್ಯಾಯಾಮವೂ ಅಗತ್ಯವಿದೆ.
► ಅಧಿಕ ರಕ್ತದೊತ್ತಡವನ್ನು ತಗ್ಗಿಸುತ್ತದೆ
ಇಂದಿನ ಜೀವನಶೈಲಿಯಿಂದಾಗಿ ಹೆಚ್ಚಿನ ಜನರಲ್ಲಿ ಅಧಿಕ ರಕ್ತದೊತ್ತಡ ಸಮಸ್ಯೆ ಸಾಮಾನ್ಯವಾಗಿದೆ. ಸೋರೆಕಾಯಿ ಮತ್ತು ಶುಂಠಿ ರಸದಲ್ಲಿರುವ ಪೊಟ್ಯಾಷಿಯಂ ಅಧಿಕ ರಕ್ತದೊತ್ತಡವನ್ನು ನೈಸರ್ಗಿಕವಾಗಿ ಕಡಿಮೆ ಮಾಡಲು ನೆರವಾಗುತ್ತದೆ.
► ಮೂತ್ರನಾಳದ ಸೋಂಕನ್ನು ಗುಣ ಮಾಡುತ್ತದೆ
ಕೆಲವು ಬ್ಯಾಕ್ಟೀರಿಯಾಗಳು ಮೂತ್ರನಾಳದ, ವಿಶೇಷವಾಗಿ ಮೂತ್ರಕೋಶದ ಸೋಂಕಿಗೆ ಕಾರಣವಾಗುತ್ತವೆ. ಸೋರೆಕಾಯಿಯು ನೈಸರ್ಗಿಕ ಮೂತ್ರವರ್ಧಕವಾಗಿರುವುದರಿಂದ ಅದು ಮೂತ್ರನಾಳದಲ್ಲಿನ ಬ್ಯಾಕ್ಟೀರಿಯಾಗಳನ್ನು ಹೊರಹಾಕುವ ಮೂಲಕ ಸೋಂಕನ್ನು ಗುಣಪಡಿಸುತ್ತದೆ.
► ಯಕೃತ್ತಿನ ಉರಿಯೂತವನ್ನು ಶಮನಗೊಳಿಸುತ್ತದೆ
ಯಕೃತ್ತು ನಮ್ಮ ಶರೀರದಲ್ಲಿನ ಪ್ರಮುಖ ಅಂಗಾಂಗಗಳಲ್ಲೊಂದಾಗಿದೆ. ಯಕೃತ್ತಿಗೆ ಹಾನಿಯುಂಟಾದರೆ ಅದು ಮಾರಣಾಂತಿಕವೂ ಆಗಬಲ್ಲುದು. ಅನಾರೋಗ್ಯಕರ ಆಹಾರ ಸೇವನೆ, ಅತಿಯಾದ ಮದ್ಯಪಾನ, ಕೆಲವು ಸೋಂಕುಗಳು, ಔಷಧಿಗಳ ಅಡ್ಡ ಪರಿಣಾಮಗಳು ಇತ್ಯಾದಿಗಳು ಯಕೃತ್ತಿನ ಉರಿಯೂತಕ್ಕೆ ಕಾರಣವಾಗುತ್ತವೆ. ಸೋರೆಕಾಯಿ ಮತ್ತು ಶುಂಠಿರಸದ ಸೇವನೆಯು ಯಕೃತ್ತಿನ ಉರಿಯೂತವನ್ನು ಕಡಿಮೆ ಮಾಡುತ್ತದೆ.
► ಸ್ನಾಯುಗಳ ಚೇತರಿಕೆ
ದಿನವಿಡೀ ದುಡಿತದ ಬಳಿಕ ಶರೀರದ ಮಾಂಸಖಂಡಗಳಲ್ಲಿ ನೋವು ಕಾಣಿಸಿಕೊಳ್ಳು ವುದು ಸಾಮಾನ್ಯ. ದುಡಿತದ ಬಳಿಕ ಮಾಂಸಖಂಡಗಳಿಗೆ ಪೌಷ್ಟಿಕಾಂಶದ ಜೊತೆಗೆ ವಿಶ್ರಾಂತಿಯ ಅಗತ್ಯವಿದೆ. ಸೋರೆಕಾಯಿ ಮತ್ತು ಶುಂಠಿ ರಸದಲ್ಲಿ ಸ್ನಾಯುಗಳಿಗೆ ಅಗತ್ಯವಾಗಿರುವ ಪೌಷ್ಟಿಕಾಂಶಗಳಿರುವುದರಿಂದ ಮತ್ತು ಅದು ಸ್ನಾಯುಗಳ ಬಿಗಿತವನ್ನು ಕಡಿಮೆ ಮಾಡುವ ಮೂಲಕ ಅವುಗಳು ಚೇತರಿಸಿಕೊಳ್ಳುವಂತೆ ಮಾಡುತ್ತದೆ.
► ಹೃದಯದ ಆರೋಗ್ಯವನ್ನು ಹೆಚ್ಚಿಸುತ್ತದೆ
ಇಂದಿನ ಜೀವನಶೈಲಿಗಳಿಂದಾಗಿ ಜನರಲ್ಲಿ ಹೃದ್ರೋಗಗಳು ಹೆಚ್ಚುತ್ತಿದ್ದು, ವರ್ಷಗಳು ಕಳೆದಂತೆ ಅವು ಮಾರಣಾಂತಿಕವಾಗಿ ಪರಿಣಮಿಸುತ್ತವೆ. ಸೋರೆಕಾಯಿ ಮತ್ತು ಶುಂಠಿಯ ರಸದಲ್ಲಿರುವ ವಿಟಾಮಿನ್ ಕೆ ಮತ್ತು ಉತ್ಕರ್ಷಣ ನಿರೋಧಕಗಳು ಹೃದಯಕ್ಕೆ ರಕ್ತಸಂಚಾರವನ್ನು ಹೆಚ್ಚಿಸುವ ಮೂಲಕ ಅದನ್ನು ಆರೋಗ್ಯಯುತವಾಗಿಡುತ್ತವೆ.
► ಬೆಳಗಿನ ನಿಶ್ಶಕ್ತಿಯನ್ನು ನಿವಾರಿಸುತ್ತದೆ
ಬೆಳಿಗ್ಗೆ ನಿಶ್ಶಕ್ತಿಯನ್ನು ಅನುಭವಿಸುವ ಗರ್ಭಿಣಿಯರಿಗೆ ಈ ರಸವು ಅತ್ಯುತ್ತಮ ಪೇಯವಾಗಿದೆ. ಅದು ಹೊಟ್ಟೆಯಲ್ಲಿನ ಆಮ್ಲವನ್ನು ತಟಸ್ಥಗೊಳಿಸುವ ಮತ್ತು ಹಾರ್ಮೋನ್‌ಗಳ ಅಸಮತೋಲನವನ್ನು ತಗ್ಗಿಸುವ ಮೂಲಕ ಅವರಲ್ಲಿನ ನಿಶ್ಶಕ್ತಿಯನ್ನು ನಿವಾರಿಸುತ್ತದೆ. ಆದರೆ ಗರ್ಭಿಣಿಯರು ಈ ರಸವನ್ನು ಸೇವಿಸುವ ಮುನ್ನ ವೈದ್ಯರ ಸಲಹೆಯನ್ನು ಪಡೆದುಕೊಳ್ಳುವುದು ಅಗತ್ಯ.