ಧೂಮಪಾನಿಗಳಲ್ಲದ ಭಾರತೀಯರಲ್ಲಿ ಹೆಚ್ಚುತ್ತಿರುವ ಶ್ವಾಸಕೋಶದ ಕ್ಯಾನ್ಸರ್
ಆಂತರಿಕ ಮತ್ತು ಬಾಹ್ಯ ವಾಯು ಮಾಲಿನ್ಯಗಳು ಸಮಾನವಾಗಿ ಶ್ವಾಸಕೋಶದ ಕ್ಯಾನ್ಸರ್‌ಗೆ ಕಾರಣವಾಗಿವೆ. ಯಾಕೆಂದರೆ ಇವೆರಡರಲ್ಲೂ ಒಂದೇ ರೀತಿಯ ಕ್ಯಾನ್ಸರ್‌ಕಾರಕಗಳಿವೆ
ಭಾರತಾದ್ಯಂತ ಶ್ವಾಸಕೋಶದ ಕ್ಯಾನ್ಸರ್‌ನ ಪ್ರಕರಣಗಳು ಹೆಚ್ಚುತ್ತಿವೆ. ಆಘಾತಕಾರಿ ವಿಷಯವೆಂದರೆ ಧೂಮಪಾನ ಮಾಡದವರಲ್ಲಿ ಶ್ವಾಸಕೋಶದ ಕ್ಯಾನ್ಸರ್ ಹೆಚ್ಚಾಗಿ ಪತ್ತೆಯಾಗುತ್ತಿದೆ. ಇದಕ್ಕೆ ಆಂತರಿಕ ಮತ್ತು ಬಾಹ್ಯ ವಾಯುಮಾಲಿನ್ಯವು ಕಾರಣವಾಗಿರಬಹುದು ಎಂದು ತಜ್ಞರು ಅಭಿಪ್ರಾಯಪಡುತ್ತಾರೆ.
ಧೂಮಪಾನಿಗಳಲ್ಲದವರಲ್ಲಿ ಶ್ವಾಸಕೋಶದ ಕ್ಯಾನ್ಸರ್‌ನಲ್ಲಿ ಶೇ. 30ರಿಂದ 40ರ ಏರಿಕೆ ಕಂಡಿದೆ. ಇದಕ್ಕೆ ದಡೂತಿ ದೇಹ ಮತ್ತು ಮದ್ಯಪಾನ ಕೂಡಾ ಕಾರಣವಾಗಿರಬಹುದು. ಆದರೆ ಪ್ರಮುಖ ಕಾರಣ ಮಾತ್ರ ವಾಯು ಮಾಲಿನ್ಯವಾಗಿದೆ ಎಂದು ದಿಲ್ಲಿಯ ಸರ್ ಗಂಗಾರಾಮ್ ಆಸ್ಪತ್ರೆಯ ವೈದ್ಯಕೀಯ ಗ್ರಂಥಿಶಾಸ್ತ್ರ ವಿಭಾಗದ ಮುಖ್ಯಸ್ಥರಾಗಿರುವ ಾ. ಶ್ಯಾಮ್ ಅಗರ್ವಾಲ್ ತಿಳಿಸುತ್ತಾರೆ.
ದೇಶಾದ್ಯಂತವಿರುವ ಕ್ಯಾನ್ಸರ್ ಚಿಕಿತ್ಸಾ ಕೇಂದ್ರಗಳು ಮತ್ತು ವಿಶೇಷಜ್ಞರಿಂದ ನಿಖರ ಸಾಕ್ಷಿಗಳಿಂದ ಪಡೆದ ಅಂಕಿಅಂಶಗಳು ವಾಯುಮಾಲಿನ್ಯ ಮತ್ತು ಶ್ವಾಸಕೋಶಕ್ಕೆ ಇರುವ ಸಂಬಂಧವನ್ನು ಸ್ಪಷ್ಟಪಡಿಸುತ್ತವೆ. ಆದರೆ ದೇಶಾದ್ಯಂತ ಪಡೆದಿರುವ ಅಂಕಿಅಂಶಗಳು ಇದನ್ನು ಇನ್ನಷ್ಟೇ ದೃಢೀಕರಿಸಬೇಕಿದೆ.
ಉದಾಹರಣೆಗೆ, ದಿಲ್ಲಿಯ ಅಖಿಲ ಭಾರತ ವೈದ್ಯಕೀಯ ವಿಜ್ಞಾನ ಸಂಸ್ಥೆ (ಎಐಐಎಂಎಸ್) ಯಲ್ಲಿ 2013-14ರಲ್ಲಿ 940ರಷ್ಟಿದ್ದ ಶ್ವಾಸಕೋಶದ ಕ್ಯಾನ್ಸರ್ ಪ್ರಕರಣಗಳು 2015-16ರ ವೇಳೆಗೆ ದುಪ್ಪಟ್ಟಾಗಿ 2,082ಕ್ಕೆ ಏರಿತ್ತು. ಕಾಕತಾಳೀಯವೆಂಬಂತೆ ಇದೇ ಸಮಯದಲ್ಲಿ ದಿಲ್ಲಿಯಲ್ಲಿ ವಾುುಮಾಲಿನ್ಯ ಕೂಡಾ ತೀವ್ರಗೊಂಡಿತ್ತು.
ಶ್ವಾಸಕೋಶ ಮತ್ತು ಆಂತರಿಕ ವಾಯುಮಾಲಿನ್ಯ ಮುಖ್ಯವಾಗಿ ಕಲ್ಲಿದ್ದಲು ಮತ್ತು ತ್ಯಾಜ್ಯಗಳ ಸುಡುವಿಕೆಗೂ ಸಂಬಂಧವಿರುವುದನ್ನು ಸಾಬೀತುಪಡಿಸಲು ಸಾಕಷ್ಟು ಅಂಕಿಅಂಶಗಳು ಲಭ್ಯವಿವೆ. ಇದೇ ರೀತಿ ಬಾಹ್ಯ ವಾಯುಮಾಲಿನ್ಯದ ಜೊತೆಗೂ ಶ್ವಾಸಕೋಶದ ಕ್ಯಾನ್ಸರ್‌ಗೆ ಸಂಬಂಧವಿರಬಹುದು. ಆದರೆ ಇದನ್ನು ರುಜುವಾತುಪಡಿಸಲು ಇನ್ನೂ ಹೆಚ್ಚಿನ ಅಂಕಿಅಂಶಗಳನ್ನು ಕಲೆ ಹಾಕುವ ಅಗತ್ಯವಿದೆ ಎಂದು ಎಐಐಎಂಎಸ್‌ನ ನಿರ್ದೇಶಕ ಮತ್ತು ದೇಶದ ಅಗ್ರಮಾನ್ಯ ಶ್ವಾಸಕೋಶತಜ್ಞರಲ್ಲಿ ಒಬ್ಬರಾಗಿರುವ ಡಾ. ರಣ್‌ದೀಪ್ ಗುಲೆರಿಯ ತಿಳಿಸುತ್ತಾರೆ.
ಇನ್ನು ಇತ್ತೀಚೆಗೆ ದಾಖಲಿಸಲಾಗುತ್ತಿರುವ ಶ್ವಾಸಕೋಶ ಕ್ಯಾನ್ಸರ್‌ನ ಪ್ರಕರಣಗಳ ಸ್ವಭಾವದಲ್ಲೂ ಬದಲಾವಣೆಗಳನ್ನು ಕಾಣಲಾಗುತ್ತಿದೆ. ಉದಾಹರಣೆಗೆ, ಪಾರಿಸಾರಿಕ ಮತ್ತು ಇತರ ಅಂಶಗಳಿಂದಾಗಿ ಆನುವಂಶಿಕ ಧಾತುಗಳಲ್ಲಿ ಉಂಟಾಗುವ ರೂಪಾಂತರದ ಜೊತೆ ಸಂಬಂಧವಿರುವ ಅಡೆನೊಕಾರ್ಸಿನೊಮ ಪ್ರಕರಣಗಳು ಹೆಚ್ಚಾಗಿ ವರದಿಯಾಗುತ್ತಿವೆ.
ಐತಿಹಾಸಿಕವಾಗಿ, ಧೂಮಪಾನಿಗಳು ಮತ್ತು ಧೂಮಪಾನಿಗಳಲ್ಲದವರಲ್ಲಿ ಪತ್ತೆಯಾಗುತ್ತಿದ್ದ ಶ್ವಾಸಕೋಶದ ಕ್ಯಾನ್ಸರ್‌ಗಳಲ್ಲಿ ವ್ಯತ್ಯಾಸಗಳಿದ್ದವು. ಧೂಮಪಾನಿಗಳಲ್ಲಿ ಸಣ್ಣ ಜೀವಕೋಶಗಳ ಶ್ವಾಸಕೋಶ ಕ್ಯಾನ್ಸರ್ ಪತ್ತೆಯಾದರೆ, ಸಣ್ಣ ಜೀವಕೋಶೇತರ ಶ್ವಾಸಕೋಶ ಕ್ಯಾನ್ಸರ್ ಧೂಮಪಾನಿಗಳು ಮತ್ತು ಧೂಮಪಾನಿಗಳಲ್ಲದವರಲ್ಲಿ ಸಮಾನವಾಗಿ ಪತ್ತೆಯಾಗುತ್ತಿತ್ತು. ಅಡೆನೊಕಾರ್ಸಿನೊಮ ಎರಡನೇ ರೀತಿಯ ಶ್ವಾಸಕೋಶದ ಕ್ಯಾನ್ಸರ್ ಆಗಿದೆ.
ಜಗತ್ತಿನ ಇತರ ದೇಶಗಳಲ್ಲೂ ಅಡೆನೊಕಾರ್ಸಿನೊಮ ಪ್ರಕರಣಗಳು ಪತ್ತೆಯಾಗುವುದು ಹೆಚ್ಚಾಗಿವೆ. ಆದರೆ ಭಾರತದಷ್ಟು ವೇಗದಲ್ಲಿ ಅಲ್ಲ. ಇದು ಭಾರತಾದ್ಯಂತವಿರುವ ಕ್ಯಾನ್ಸರ್ ಆಸ್ಪತ್ರೆಗಳಲ್ಲಿ ಅಧ್ಯಯನ ಮಾಡುತ್ತಿರುವ ಸಂಶೋಧಕರು ಜಾಗೃತರಾಗುವಂತೆ ಮಾಡಿದೆ.
ಭಾರತದ ಹಲವು ಭಾಗಗಳಲ್ಲಿ ಜನರು ಉಸಿರಾಡುವ ಮಾಲಿನ್ಯಯುಕ್ತ ಗಾಳಿಯು ಮುಖ್ಯವಾಗಿ ಯುವಜನತೆ ಮತ್ತು ಧೂಮಪಾನಿಗಳಲ್ಲದವರಲ್ಲಿ ಶ್ವಾಸಕೋಶದ ಕ್ಯಾನ್ಸರ್ ಹೆಚ್ಚಾಗಲು ಕಾರಣವಾಗಿದೆಯೇ ಎಂಬುದು ಅವರು ಕೇಳುವ ಪ್ರಮುಖ ಪ್ರಶ್ನೆಯಾಗಿದೆ.
ವಾಯು ಮಾಲಿನ್ಯ ಮತ್ತು ಶ್ವಾಸಕೋಶದ ಕ್ಯಾನ್ಸರ್ ಮಧ್ಯೆ ಇರುವ ಸಂಬಂಧವನ್ನು ದಶಕಗಳ ಹಿಂದೆಯೇ ಸಾಬೀತುಪಡಿಸಲಾಗಿದೆ. ವಿಶ್ವ ಆರೋಗ್ಯ ಸಂಸ್ಥೆಯ ವಿಶೇಷ ಕ್ಯಾನ್ಸರ್ ಸಂಸ್ಥೆಯಾಗಿರುವ ಕ್ಯಾನ್ಸರ್ ಸಂಶೋಧನಾ ಅಂತಾರಾಷ್ಟ್ರೀಯ ಸಂಸ್ಥೆ (ಐಎಆರ್‌ಸಿ) 2013ರಲ್ಲೇ ಬಾಹ್ಯ ವಾಯುಮಾಲಿನ್ಯ ಮಾನವನಲ್ಲಿ ಕ್ಯಾನ್ಸರ್‌ಕಾರಕವಾಗಿದೆ ಎಂದು ತಿಳಿಸಿತ್ತು.
ಜಗತ್ತಿನಾದ್ಯಂತ ಧೂಮಪಾನ ವಿರೋಧಿ ಪ್ರಚಾರಗಳು ನಡೆದು ಜನರಲ್ಲಿ ಜಾಗೃತಿ ಮೂಡಿರುವ ಕಾರಣ ಇಂದು ಬಹಳ ಕಡಿಮೆ ಜನರು ಧೂಮಪಾನ ಮಾಡುತ್ತಾರೆ. ಹಾಗಾಗಿ ಹೆಚ್ಚುತ್ತಿರುವ ಶ್ವಾಸಕೋಶದ ಕ್ಯಾನ್ಸರ್‌ಗೆ ಬೇರೆ ಕಾರಣ ಇರಲೇಬೇಕು ಎಂದು ದಿಲ್ಲಿಯ ಇಂದ್ರಪ್ರಸ್ಥ ಅಪೋಲೊ ಆಸ್ಪತ್ರೆಯಲ್ಲಿ ಶ್ವಾಸಕೋಶ ಔಷಧಿ ಹಿರಿಯ ವೈದ್ಯ ಮತ್ತು ಕ್ಯಾನ್ಸರ್‌ತಜ್ಞರಾಗಿರುವ ಡಾ. ಎಂ.ಎಸ್ ಕನ್ವರ್ ತಿಳಿಸುತ್ತಾರೆ. ವಾಯು ಮಾಲಿನ್ಯವು ಬಾಯಿ ಮತ್ತು ಗಂಟಲು ಕ್ಯಾನ್ಸರ್‌ಗೂ ಕಾರಣವಾಗಬಹುದು ಎಂದವರು ಅಭಿಪ್ರಾಯಪಡುತ್ತಾರೆ.
ವಾಯು ಗುಣಮಟ್ಟ ಮತ್ತು ಮಾಲಿನ್ಯದಿಂದಾಗಿ ಆನುವಂಶಿಕ ಧಾತುಗಳಲ್ಲಿ ಉಂಟಾಗುವ ರೂಪಾಂತರದಿಂದ ಅಡೆನೊಕಾರ್ಸಿನೊಮ ಉಂಟಾಗುತ್ತದೆ. ಇಂಥ ಪ್ರಕರಣಗಳು ಸ್ಪಷ್ಟವಾಗಿ ಏರಿಕೆಯಾಗುತ್ತಿವೆ. 30-40ರ ಹರೆಯದ ಒಳಗಿನ ಮುಖ್ಯವಾಗಿ ಮಹಿಳಾ ಮತ್ತು ಧೂಮಪಾನ ಮಾಡದ ರೋಗಿಗಳು ಇಂಥ ಶ್ವಾಸಕೋಶದ ಕ್ಯಾನ್ಸರ್ ಜೊತೆ ನಮ್ಮ ಬಳಿ ಬರುತ್ತಾರೆ ಎಂದು ಅಗರ್ವಾಲ್ ತಿಳಿಸುತ್ತಾರೆ. ಹೈಡ್ರೊಕಾರ್ಬನ್‌ಗಳು ಮತ್ತು ಕ್ಯಾನ್ಸರ್‌ಕಾರಕಗಳು ಮನುಷ್ಯನ ಶ್ವಾಸಕೋಶದಲ್ಲಿ ಅಲ್ಲೋಲಕಲ್ಲೋಲ ಸೃಷ್ಟಿಸುತ್ತವೆ. ಹಾಗಾಗಿ ಇಂಥ ಶ್ವಾಸಕೋಶದ ಕ್ಯಾನ್ಸರ್‌ಗಳಲ್ಲಿ ಬಾಹ್ಯ ಪರಿಸರದ ಅಂಶಗಳನ್ನು ತಳ್ಳಿಹಾಕುವಂತಿಲ್ಲ ಎಂದು ಇಂದ್ರಪ್ರಸ್ಥ ಅಪೋಲೊ ಆಸ್ಪತ್ರೆಯ ಕ್ಯಾನ್ಸರ್‌ತಜ್ಞ ಮತ್ತು ಶಸ್ತ್ರಚಿಕಿತ್ಸಕ ಡಾ. ಸಮೀರ್ ಕೌಲ್ ತಿಳಿಸುತ್ತಾರೆ.
ದಿಲ್ಲಿಯ ಪ್ರೈಮಸ್ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಶ್ವಾಸಕೋಶ ವಿಭಾಗದ ಮುಖ್ಯಸ್ಥರಾಗಿರುವ ಡಾ. ಎಸ್.ಕೆ ಚಾಬ್ರ 1998ರಿಂದ ಶ್ವಾಸಕೋಶದ ಕ್ಯಾನ್ಸರ್‌ನ ಸ್ವಭಾವದಲ್ಲಿ ಉಂಟಾಗಿರುವ ಬದಲಾವಣೆಯ ಬಗ್ಗೆ ಅಧ್ಯಯನ ಮಾಡುತ್ತಿದ್ದಾರೆ. ಅವರ ಪ್ರಕಾರ, ಹೆಚ್ಚು ವಾಯುಮಾಲಿನ್ಯ ಹೊಂದಿರುವ ಪ್ರದೇಶಗಳಲ್ಲಿ ಜೀವಿಸುವ ಜನರಲ್ಲಿ ಶ್ವಾಸಕೋಶದ ಸಾಮರ್ಥ್ಯ ಶೇ. ಐದು ಕಡಿಮೆಯಾಗಿತ್ತು. ಅವರು ಧೂಮಪಾನಿಗಳಾಗಿರಲಿಲ್ಲ ಮತ್ತು ವಾಯುಮಾಲಿನ್ಯದ ಹೊರತು ಇದಕ್ಕೆ ಇತರ ಯಾವುದೇ ಕಾಣಗಳು ಇರಲಿಲ್ಲ.
ಆಂತರಿಕ ಮತ್ತು ಬಾಹ್ಯ ವಾಯು ಮಾಲಿನ್ಯಗಳು ಸಮಾವಾಗಿ ಶ್ವಾಸ ಕೋಶದ ಕ್ಯಾನ್ಸರ್‌ಗೆ ಕಾರಣವಾಗಿವೆ. ಯಾಕೆಂದರೆ ಇವೆರಡರಲ್ಲೂ ಒಂದೇ ರೀತಿಯ ಕ್ಯಾನ್ಸರ್‌ಕಾರಕಗಳಿವೆ ಎಂದು ದಕ್ಷಿಣ ಏಶ್ಯಾ ಅಲರ್ಜಿ, ಅಸ್ತಮಾ ಮತ್ತು ಆನ್ವಯಿಕ ಪ್ರತಿರೋಧಶಾಸ್ತ್ರ ಸಂಸ್ಥೆ ಹಾಗೂ ಭಾರತೀಯ ಶ್ವಾಸಕೋಶ ಕ್ಯಾನ್ಸರ್ ಅಧ್ಯಯನ ಸಂಸ್ಥೆಯ ಸಂಸ್ಥಾಪಕ ಮತ್ತು ಉಪಾಧ್ಯಕ್ಷರಾದ ಾ. ರಜಿಂದರ್ ಪ್ರಸಾದ್ ತಿಳಿಸುತ್ತಾರೆ.
2012ರಲ್ಲಿ ಮುಂಬೈಯ ಟಾಟಾ ಸ್ಮಾರಕ ಆಸ್ಪತ್ರೆಯ ಅಂಕಿ ಅಂಶಗಳ ಪ್ರಕಾರ ಶ್ವಾಸಕೋಶದ ಕ್ಯಾನ್ಸರ್‌ನಿಂದ ಬಳಲುತ್ತಿದ್ದ ಶೇ. 52.1 ರೋಗಿಗಳು ಧೂಮಪಾನಿಗಳಾಗಿರಲಿಲ್ಲ. ಸಿಂಗಾಪುರದಲ್ಲಿ ಧೂಮಪಾನ ಮಾಡದ ಶ್ವಾಸಕೋಶದ ಕ್ಯಾನ್ಸರ್ ರೋಗಿಗಳ ಪ್ರಮಾಣ ಶೇ. 32.5 ಆಗಿದ್ದರೆ ಅವೆುರಿಕದಲ್ಲಿ ಕೇವಲ ಶೇ. 10 ಆಗಿತ್ತು.
ಟಾಟಾ ಸ್ಮಾರಕ ಆಸ್ಪತ್ರೆ ನಡೆಸಿದ ಅಧ್ಯಯನದಲ್ಲಿ ಶ್ವಾಸಕೋಶದ ಕ್ಯಾನ್ಸರ್‌ನಿಂದ ಬಳಲುವ ಧೂಮಪಾನಿಗಳಲ್ಲದ ಪುರುಷರ ಪ್ರಮಾಣ ಶೇ. 41.8ಕ್ಕೆ ಹೋಲಿಸಿದರೆ ಮಹಿಳಾ ರೋಗಿಗಳ ಪ್ರಮಾಣ ಶೇ. 88 ಆಗಿತ್ತು. ಇದರಿಂದ ಧೂಮಪಾನಿಗಳಲ್ಲದವರ ಪ್ರಕರಣಗಳಲ್ಲಿ ಪಾರಿಸಾರಿಕ ಮತ್ತು ಆನುವಂಶಿಕ ಧಾತುಗಳೂ (ಜೆನೆಟಿಕ್) ಕಾರಣವಾಗುತ್ತವೆ ಎಂಬುದು ಬೆಳಕಿಗೆ ಬಂತು.
2017ರ ಜನವರಿಯಲ್ಲಿ ಭುವನೇಶ್ವರದ ಎಐಐಎಂಎಸ್‌ನ ಸಂಶೋಧಕರು ಪೂರ್ವ ಭಾರತದಲ್ಲಿನ ಶ್ವಾಸಕೋಶದ ಕ್ಯಾನ್ಸರ್‌ನ ಲಿಂಗಾಧರಿತ ಪಟ್ಟಿ ರಚಿಸಿದ್ದರು. ಅದರಂತೆ, ಶೇ. 48 ರೋಗಿಗಳು ನೇರ ಅಥವಾ ಪರೋಕ್ಷ ಧೂಮಪಾನ ಮಾಡಿರಲಿಲ್ಲ. ಶೇ. 89 ಮಹಿಳಾ ರೋಗಿಗಳು ಎಂದೂ ಧೂಮಪಾನ ಮಾಡಿರಲಿಲ್ಲ ಮತ್ತು ಶೇ. 28 ಪುರುಷ ರೋಗಿಗಳು ಧೂಮಪಾನಿಗಳಾಗಿರಲಿಲ್ಲ.
2012ರಲ್ಲಿ ಟಾಟಾ ಸ್ಮಾರಕ ಆಸ್ಪತ್ರೆ ನಡೆಸಿದ ಅಧ್ಯಯನದಲ್ಲಿ ತಿಳಿಸಿದ ಪ್ರಕಾರ, ಗ್ರಾಮೀಣ ಭಾರತದಲ್ಲಿ ಅಡುಗೆ ತೈಲ ಮತ್ತು ಇದ್ದಿಲು ಬಳಸಿ ಉರಿಸುವ ಸ್ಟವ್‌ಗಳು ಶ್ವಾಸಕೋಶದ ಕ್ಯಾನ್ಸರ್‌ಗೆ ಹೆಚ್ಚಿನ ಕಾಣಿಕೆಯನ್ನು ನೀಡುತ್ತವೆ. ಇವುಗಳು ಮುಖ್ಯವಾಗಿ ಮಹಿಳೆಯರಲ್ಲಿ ಶ್ವಾಸಕೋಶದ ಕ್ಯಾನ್ಸರ್ ಹೆಚ್ಚಾಗಲೂ ಕಾರಣವಾಗಿರಬಹುದು ಎಂದು ಶಂಕೆ ವ್ಯಕ್ತಪಡಿಸಲಾಗಿದೆ. ಗ್ರಾಮೀಣ ಭಾಗಗಳಲ್ಲಿ ಪತ್ತೆಯಾಗುವ ಶೇ. 42.55 ಪ್ರಕರಣಗಳಲ್ಲಿ ರೋಗಿಗಳು ಧೂಮಪಾನಿಗಳಾಗಿರುವುದಿಲ್ಲ ಮತ್ತು ಗರಿಷ್ಟ ಪ್ರಮಾಣದಲ್ಲಿ ರೋಗವು ನಾಲ್ಕನೇ ಹಂತದಲ್ಲಿ ಪತ್ತೆಯಾುತ್ತದೆ ಎಂದು ವರದಿ ತಿಳಿಸುತ್ತದೆ.
ಲಭ್ಯವಿರುವ ಸಂಶೋಧನೆಗಳ ಆಧಾರದಲ್ಲಿ ಭಾರತದಲ್ಲಿ ಧೂಮಪಾನಿಗಳಲ್ಲದವರಲ್ಲಿ ಪತ್ತೆಯಾಗುವ ಶ್ವಾಸಕೋಶದ ಕ್ಯಾನ್ಸರ್ ಬಗ್ಗೆ ಅತ್ಯಂತ ಕಡಿಮೆ ತಿಳಿದುಕೊಳ್ಳಲು ಸಾಧ್ಯವಾಗಿದೆ. ಇವೆರಡರ ನಡುವಿನ ಸಂಬಂಧ ಎಷ್ಟು ಪ್ರಬಲವಾಗಿದೆ ಎಂಬುದನ್ನು ತಿಳಿಯಲು ಇನ್ನಷ್ಟು ಹೆಚ್ಚಿನ ಹೊಸ ಅಂಕಿಅಂಶಗಳನ್ನು ಕಲೆ ಹಾಕುವ ಅಗತ್ಯವಿದೆ ಎಂದು ಕೇಳುತ್ತಾರೆ ಎಐಐಎಂಎಸ್‌ನ ಗುಲೆರಿಯ.
2016ರ ಟಾಟಾ ಸ್ಮಾರಕ ಆಸ್ಪತ್ರೆಯ ಭಾರತೀಯ ಉಪಖಂಡದಲ್ಲಿ ಶ್ವಾಸಕೋಶದ ಕ್ಯಾನ್ಸರ್ ಅಧ್ಯಯನದಲ್ಲಿ ಧೂಮಪಾನಿಗಳಲ್ಲದವರಲ್ಲಿ ಅಪಾಯಕಾರಿ ಪ್ರಮಾಣದಲ್ಲಿ ಏರುತ್ತಿರುವ ಶ್ವಾಸಕೋಶದ ಕ್ಯಾನ್ಸರ್ ಬಗ್ಗೆ ಇನ್ನಷ್ಟೇ ಸಂಪೂರ್ಣವಾಗಿ ತಿಳಿದುಕೊಳ್ಳಬೇಕಿದೆ ಎಂದು ತಿಳಿಸಿತ್ತು. ಆಂತರಿಕ ವಾಯು ಮಾಲಿನ್ಯ, ಗೃಹ ಇಂಧನಗಳ ಬಳಕೆ, ಆಹಾರದಲ್ಲಿ ಪೌಷ್ಟಿಕಾಂಶಗಳ ಕೊರತೆ, ಔದ್ಯೋಗಿಕ ತೆರೆದುಕೊಳ್ಳುವಿಕೆ ಮತ್ತು ಸೋಂಕುಕಾರಕ ರೋಗಾಣುಗಳ ಸಂಭಾವ್ಯ ಕಾಣಿಕೆ ಮುಂತಾದ ಅಂಶಗಳಿಂದಾಗುವ ಪರಿಣಾಮಗಳ ಬಗ್ಗೆ ಅಪೂರ್ಣ ತಿಳುವಳಿಕೆಯಿರುವುದೇ ಧೂಮಪಾನಿಗಳಲ್ಲದವರಲ್ಲಿ ಹೆಚ್ಚುತ್ತಿರುವ ಶ್ವಾಸಕೋಶದ ಕ್ಯಾನ್ಸರ್ ಬಗ್ಗೆ ಸರಿಯಾಗಿ ತಿಳಿಯದಿರಲು ಕಾರಣವಾಗಿದೆ ಎಂದು ವರದಿ ತಿಳಿಸಿದೆ.
ವಿಸ್ತಾರವಾದ ಮತ್ತು ಆಳವಾದ ಸಂಶೋಧನೆಯ ಜೊತೆಗೆ ಶ್ವಾಸಕೋಶದ ಕ್ಯಾನ್ಸರ್‌ನ ಲಕ್ಷಣಗಳು ಕಂಡುಬಂದಲ್ಲಿ ಕೂಡಲೇ ವೈದ್ಯರನ್ನು ಭೇಟಿಯಾಗಬೇಕು ಎಂದು ರೋಗಿಗಳನ್ನು ಪ್ರೋತ್ಸಾಹಿಸುವ ಕಾರ್ಯಗಳೂ ಭಾರತದಲ್ಲಿ ನಡೆಯಬೇಕು ಎಂದು ತಜ್ಞರು ಅಭಿಪ್ರಾಯಪಡುತ್ತಾರೆ. ಶ್ವಾಸಕೋಶದ ಕ್ಯಾನ್ಸರ್‌ನ ಲಕ್ಷಣಗಳಲ್ಲಿ, ನಿರಂತರ ಕೆಮ್ಮು, ರಕ್ತಯುಕ್ತ ಕಫದಿಂದ ಕೂಡಿದ ಕೆಮ್ಮು, ಕೆಮ್ಮಿದಾಗ ಅಥವಾ ಆಳವಾಗಿ ಉಸಿರಾಡಿದಾಗ ಹೆಚ್ಚಾಗುವ ಎದೆನೋವು, ತೂಕ ನಷ್ಟ, ವೇಗದ ಉಸಿರಾಟ ಮುಂತಾದುವುಗಳು ಪ್ರಮುಖವಾಗಿವೆ.
ಶ್ವಾಸಕೋಶದ ಕ್ಯಾನ್ಸರನ್ನು ಆರಂಭದಲ್ಲೇ ಪತ್ತೆಹಚ್ಚುವುದು ಮುಖ್ಯವಾಗುತ್ತದೆ. ಯಾಕೆಂದರೆ, ಅಮೆರಿಕನ್ ಕ್ಯಾನ್ಸರ್ ಸೊಸೈಟಿಯ ಪ್ರಕಾರ, ಈ ರೋಗವು 1ಎ ಹಂತದಲ್ಲಿ ಪತ್ತೆಯಾದರೆ ಐದು ವರ್ಷಗಳ ಬಾಳುವ ಸಾಧ್ಯತೆ ಶೇ. 49 ಆಗಿದೆ. ಅದೇ 3ಬಿ ಹಂತದಲ್ಲಿ ಪತ್ತೆಯಾದರೆ ಈ ಸಾಧ್ಯತೆ ಕೇವಲ ಶೇ. 5.
(ಕೃಪೆ: ದಿ ಪ್ರಿಂಟ್)