ಕರ್ನಾಟಕ ಗೆಲ್ಲಲು ಬಿಜೆಪಿಯ ತಂತ್ರ ಕುತಂತ್ರ
ಸಿದ್ದರಾಮಯ್ಯನವರ ಆಡಳಿತದಲ್ಲಿ ರಾಜ್ಯದ ಜನ ನಂಬಿಕೆ ಕಳೆದುಕೊಳ್ಳಲಿಲ್ಲ. ಈ ಸರಕಾರದ ಮೇಲೆ ಯಾವುದೇ ಭ್ರಷ್ಟಾಚಾರದ ಆರೋಪಗಳಿಲ್ಲ. ಯಾವ ಮಂತ್ರಿಯೂ ಜೈಲಿಗೆ ಹೋಗಿ ಬಂದಿಲ್ಲ. ಹಳ್ಳಿಯ ಬಡವರಿಗೂ ಇದು ತಮ್ಮದೇ ಸರಕಾರವೆನಿಸಿದೆ.
ಕರ್ನಾಟಕವನ್ನು ಹೇಗಾದರೂ ಮಾಡಿ ಗೆಲ್ಲಲೇಬೇಕೆಂದು ಬಿಜೆಪಿ ಹರಸಾಹಸ ಪಡುತ್ತಿದೆ. ಅದರಲ್ಲೂ ಪ್ರಧಾನಿ ನರೇಂದ್ರ ಮೋದಿ ಮತ್ತು ಪಕ್ಷದ ಅಧ್ಯಕ್ಷ ಅಮಿತ್ ಶಾ ಅವರಿಗೆ ಇದು ಪ್ರತಿಷ್ಠೆಯ ಪ್ರಶ್ನೆಯಾಗಿದೆ. ಬರೀ ಒಣ ಪ್ರತಿಷ್ಠೆಯಲ್ಲ. ಈ ಚುನಾವಣೆ ಅತ್ಯಂತ ನಿರ್ಣಾಯಕವಾಗಿರುವುದರಿಂದ ಅವರು ಗೆಲ್ಲಲೇಬೇಕಾಗಿದೆ. ಮುಂದಿನ 2019ರ ಲೋಕಸಭಾ ಚುನಾವಣೆಯಲ್ಲಿ ಗೆದ್ದು ಮತ್ತೆ ಅಧಿಕಾರ ಸೂತ್ರ ಹಿಡಿಯಬೇಕೆಂದರೆ ದಕ್ಷಿಣ ರಾಜ್ಯಗಳಲ್ಲಿ ಕರ್ನಾಟಕವನ್ನು ಸ್ವಾಧೀನ ಪಡಿಸಿಕೊಳ್ಳಬೇಕಾಗಿದೆ. ಕರ್ನಾಟಕವನ್ನು ಗೆದ್ದರೆ ಮುಂದಿನ ಒಂದು ವರ್ಷದ ಕಾಲಾವಧಿಯಲ್ಲಿ ನಿಧಾನವಾಗಿ ಇಡೀ ದೇಶವನ್ನೇ ವಶಪಡಿಸಿಕೊಳ್ಳಲು ಕಾರ್ಯತಂತ್ರ ರೂಪಿಸಿಕೊಳ್ಳಬಹುದಾಗಿದೆ. ಅದಕ್ಕೆಂತಲೇ ಇಲ್ಲಿ ಬಿಜೆಪಿ ಹಣದ ಹೊಳೆ ಹರಿಸುತ್ತಿದೆ.
ತ್ರಿಪುರಾ ಚುನಾವಣೆ ಫಲಿತಾಂಶದ ನಂತರ ಸಂಘಪರಿವಾರದಲ್ಲಿ ಹೊಸ ಹುಮ್ಮಸ್ಸು ಮೂಡಿದೆ. ಕರ್ನಾಟಕದ ಬಿಜೆಪಿ ನಾಯಕರಿಗೆ ಸ್ವಂತ ತಾಕತ್ತಿನ ಮೇಲೆ ಗೆಲ್ಲಲು ಸಾಧ್ಯವಿಲ್ಲ. ಹೀಗಾಗಿ ಪ್ರಧಾನಿ ಮೋದಿ ಮತ್ತು ಅಮಿತ್ ಶಾ ಅವರನ್ನು ಮುಂದಿಟ್ಟುಕೊಂಡು ಹೊರಟಿದ್ದಾರೆ. ಆದರೂ ಗೆಲ್ಲಲು ಸಾಧ್ಯವಿಲ್ಲ. ಯಾಕೆಂದರೆ ರಾಜ್ಯ ಸರಕಾರದ ಮೇಲೆ ಅಂತಹ ಯಾವುದೇ ಗುರುತರ ಆರೋಪಗಳೂ ಇಲ್ಲ. ಇಂತಹ ಸನ್ನಿವೇಶದಲ್ಲಿ ಕೋಮು ಧ್ರುವೀಕರಣದ ಮೂಲಕ ಅಧಿಕಾರ ಸ್ವಾಧೀನ ಪಡಿಸಿಕೊಳ್ಳಲು ತಂತ್ರ ರೂಪಿಸಿಕೊಳ್ಳುತ್ತಿದ್ದಾರೆ. ಅದಕ್ಕಾಗಿ ಹಿಂದೂಗಳ ಹತ್ಯೆ ಅಂದೆಲ್ಲ ಜನಸುರಕ್ಷಾ ಯಾತ್ರೆಗಳನ್ನು ಮಾಡುತ್ತಿದ್ದಾರೆ.
ಕರ್ನಾಟಕವನ್ನು ಗೆಲ್ಲುವುದು ಬರೀ ಮೋದಿ, ಶಾ ಜೋಡಿಗೆ ಮಾತ್ರವಲ್ಲ ಆರೆಸ್ಸೆಸ್‌ಗೂ ಬೇಕಾಗಿದೆ. ಸಾವರ್ಕರ್ ಮತ್ತು ಗೋಳ್ವಾಲ್ಕರ್ ಕಲ್ಪನೆಯ ಹಿಂದೂ ರಾಷ್ಟ್ರ ನಿರ್ಮಾಣದ ಬಹು ದಿನದ ಕನಸು ನನಸಾಗಬೇಕಾದರೆ ಸಂಸತ್ತಿನಲ್ಲಿ ನಿಚ್ಚಳ ಬಹುಮತ ಪಡೆಯಬೇಕು. ಆ ಬಹುಮತವನ್ನು ಬಳಸಿಕೊಂಡು ಸಂವಿಧಾನವನ್ನು ಬುಡಮೇಲು ಮಾಡಬೇಕು. ನಂತರ ಮನುವಾದದ ಆಧಾರದಲ್ಲಿ ಹಿಂದೂ ರಾಷ್ಟ್ರ ನಿರ್ಮಿಸಬೇಕೆಂಬುದು ಸಂಘದ ಗುರಿಯಾಗಿದೆ. ಸಂವಿಧಾನ ಎಷ್ಟೇ ಒಳ್ಳೆಯದಾಗಿದ್ದರೂ ಕೂಡ ಅದನ್ನು ಜಾರಿಗೆ ತರುವ ಶಾಸಕಾಂಗ ಕೆಟ್ಟದಾಗಿದ್ದರೆ ಸಂವಿಧಾನದ ಆಶಯಗಳು ಸಾಕಾರಗೊಳ್ಳುವುದಿಲ್ಲ ಎಂದು ಬಾಬಾ ಸಾಹೇಬ ಅಂಬೇಡ್ಕರರು 70 ವರ್ಷಗಳ ಹಿಂದೆ ಹೇಳಿದ್ದರು. ಅಂತಲೇ ಶಾಸಕಾಂಗದ ಮೇಲೆ ಹಿಡಿತ ಸಾಧಿಸಲು ಸಂಘ ಪರಿವಾರ ಯತ್ನಿಸುತ್ತಿದೆ.
ಲೋಕಸಭೆಯಲ್ಲಿ ಬಿಜೆಪಿ ಈಗ ಬಹುಮತ ಪಡೆದಿದ್ದರೂ ಕೂಡ ರಾಜ್ಯಸಭೆಯಲ್ಲಿ ಅದಕ್ಕೆ ಬಹುಮತವಿಲ್ಲ. ಯಾವುದೇ ವಿಧೇಯಕ ಅಂಗೀಕಾರವಾಗಬೇಕಿದ್ದರೂ ಎರಡೂ ಸದನಗಳ ಒಪ್ಪಿಗೆ ಬೇಕಾಗುತ್ತದೆ. ಹೀಗಾಗಿ ಸಂಸತ್ತಿನ ಮೇಲೆ ಸಂಪೂರ್ಣ ಹಿಡಿತ ಸಾಧಿಸಲು ಅದು ಪ್ರತಿಪಕ್ಷ ಮುಕ್ತ ಭಾರತದ ಕಾರ್ಯಸೂಚಿ ರೂಪಿಸಿದೆ.
ಈ ದೇಶವನ್ನು ಆರೆಸ್ಸೆಸ್ ನಿಯಂತ್ರಿತ ಬಿಜೆಪಿ ಅದರಲ್ಲೂ ನರೇಂದ್ರ ಮೋದಿ, ಅಮಿತ್ ಶಾ ಜೋಡಿ ಇನ್ನಷ್ಟು ವರ್ಷ ಆಳಬೇಕೆಂದು ಕಾರ್ಪೊರೇಟ್ ಬಂಡವಾಳಶಾಹಿಗಳ ಬಯಕೆಯಾಗಿದೆ. ತನ್ನ ಹಿತಾಸಕ್ತಿಯನ್ನು ರಕ್ಷಿಸುವ ನವ ಉದಾರವಾದಿ ಆರ್ಥಿಕ ನೀತಿಯನ್ನು ಇನ್ನಷ್ಟು ಆಕ್ರಮಣಕಾರಿಯಾಗಿ ಮುಂದುವರಿಸಲು ಪ್ರಭುತ್ವದ ಮೇಲೆ ಬಿಗಿಹಿಡಿತ ಹೊಂದಿದ ಮತ್ತು ಜನಸಮೂಹವನ್ನು ಧರ್ಮದ ನಶೆಯಲ್ಲಿ ತೇಲಿಸುವ ಸಂಘಪರಿವಾರದ ಮೋದಿ, ಶಾ ಅವರಂಥ ನಾಯಕತ್ವ ಕಾರ್ಪೊರೇಟ್ ಶಕ್ತಿಗಳಿಗೆ ಬೇಕಾಗಿದೆ.
ಈ ಹಿನ್ನೆಲೆಯಲ್ಲಿ ಕರ್ನಾಟಕದ ಚುನಾವಣೆ ಅತ್ಯಂತ ನಿರ್ಣಾಯಕವಾಗಿದೆ. ಆದರೆ ಉಳಿದ ರಾಜ್ಯಗಳಿಗೂ ಕರ್ನಾಟಕಕ್ಕೂ ವ್ಯತ್ಯಾಸವಿದೆ. ಇಲ್ಲಿನ ಜನತೆ ಬಿಜೆಪಿಗೆ ಒಂದು ಬಾರಿ ಅಧಿಕಾರ ನೀಡಿದ್ದಾರೆ. ಜನತೆ ನೀಡಿದ ಅಧಿಕಾರವನ್ನು ಕರ್ನಾಟಕದ ಬಿಜೆಪಿ ನಾಯಕರು ದುರುಪಯೋಗ ಮಾಡಿಕೊಂಡು ಜೈಲಿಗೆ ಹೋಗಿಬಂದ ವಿಷಯ ಎಲ್ಲರಿಗೂ ಗೊತ್ತಿದೆ. ಜನತೆ ನಿಚ್ಚಳ ಬಹುಮತ ನೀಡದಿದ್ದರೂ ಆಪರೇಷನ್ ಕಮಲ ಮೂಲಕ ಬಹುಮತ ಸಾಧಿಸಿದರು. ಅದನ್ನು ಜನ ಒಪ್ಪಿಕೊಂಡರು. ಆದರೆ ಜನ ನಿರೀಕ್ಷಿಸಿದ ಆಡಳಿತವನ್ನು ಬಿಜೆಪಿ ನೀಡಲಿಲ್ಲ. ಬಿಜೆಪಿಯ ಅಧಿಕಾರಾವಧಿಯಲ್ಲಿ ನಡೆದ ಗಣಿ ಸಂಪತ್ತಿನ ಲೂಟಿ, ರಿಯಲ್ ಎಸ್ಟೇಟ್ ಹಗರಣಗಳು ಎಲ್ಲರಿಗೂ ಗೊತ್ತಿವೆ.
ಅಷ್ಟೇ ಅಲ್ಲ, ಅಂದಿನ ಮುಖ್ಯಮಂತ್ರಿ ಯಡಿಯೂರಪ್ಪನವರೇ ನಾನಾ ಹಗರಣಗಳಲ್ಲಿ ಚೆಕ್ ಮೂಲಕ ಲಂಚ ತೆಗೆದುಕೊಂಡ ಆರೋಪ ಸೇರಿದಂತೆ ಅನೇಕ ಹಗರಣಗಳಲ್ಲಿ ಪರಪ್ಪನ ಅಗ್ರಹಾರ ಜೈಲಿಗೆ ಹೋಗಿಬಂದರು. ಪ್ರತೀ ಪ್ರಕರಣದ ವಿಚಾರಣೆ ರದ್ದತಿಗಾಗಿ ಮನವಿ ಮಾಡಿಕೊಳ್ಳುತ್ತಿದ್ದರು. ಅನೇಕ ಪ್ರಕರಣಗಳಲ್ಲಿ ಜಾಮೀನು ಪಡೆದು ಓಡಾಡುವಂತಹ ಸ್ಥಿತಿ ಉಂಟಾಯಿತು. ಹೀಗಾಗಿ ಬಿಜೆಪಿ 5 ವರ್ಷದಲ್ಲಿ ಮೂರು ಮುಖ್ಯಮಂತ್ರಿಗಳನ್ನು ಬದಲಾವಣೆ ಮಾಡಬೇಕಾಯಿತು. ಬಿಜೆಪಿ ಸೋತು ಕಾಂಗ್ರೆಸ್ ಅಧಿಕಾರಕ್ಕೆ ಬಂದಾಗ ಸಮಾಜವಾದಿ ಹಿನ್ನೆಲೆಯ ಸಿದ್ದರಾಮಯ್ಯನವರು ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡರು. ಅಧಿಕಾರ ವಹಿಸಿಕೊಂಡ ದಿನವೇ ಅನ್ನಭಾಗ್ಯ ಯೋಜನೆ ಪ್ರಕಟಿಸಿದರು. ಈ ಯೋಜನೆಯಿಂದ ರಾಜ್ಯದ ಬಡಕುಟುಂಬದ ಪ್ರತೀ ವ್ಯಕ್ತಿಗೆ 7 ಕೆ.ಜಿ. ಅಕ್ಕಿ ಉಚಿತವಾಗಿ ದೊರಕುವಂತಾಯಿತು. ಇದರಿಂದಾಗಿ ಬರಗಾಲದಂತಹ ಸ್ಥಿತಿ ರಾಜ್ಯದ ಕೆಲವೆಡೆ ಆವರಿಸಿದಾಗಲೂ ಕೂಡ ಗ್ರಾಮೀಣ ಪ್ರದೇಶದ ಬಡವರಿಗೆ ಅಂತಹ ಬಿಸಿ ತಟ್ಟಲಿಲ್ಲ. ಉತ್ತರ ಕರ್ನಾಟಕದ ಬರಪೀಡಿತ ಜಿಲ್ಲೆಗಳ ಜನ ಹಿಂದಿನಂತೆ ಬೇರೆರಾಜ್ಯಗಳಿಗೆ ಕೆಲಸವನ್ನು ಹುಡುಕಿ ಗುಳೆ ಹೋಗಲಿಲ್ಲ.
ಯಾರು ಏನೇ ಹೇಳಲಿ ಸಿದ್ದರಾಮಯ್ಯನವರ ಆಡಳಿತದಲ್ಲಿ ರಾಜ್ಯದ ಜನ ನಂಬಿಕೆ ಕಳೆದುಕೊಳ್ಳಲಿಲ್ಲ. ಈ ಸರಕಾರದ ಮೇಲೆ ಯಾವುದೇ ಭ್ರಷ್ಟಾಚಾರದ ಆರೋಪಗಳಿಲ್ಲ. ಯಾವ ಮಂತ್ರಿಯೂ ಜೈಲಿಗೆ ಹೋಗಿ ಬಂದಿಲ್ಲ. ಹಳ್ಳಿಯ ಬಡವರಿಗೂ ಇದು ತಮ್ಮದೇ ಸರಕಾರವೆನಿಸಿದೆ. ಈ ರೀತಿ ಹೇಳಿದರೆ ಕಾಂಗ್ರೆಸ್ ಮತ್ತು ಬಿಜೆಪಿ ಒಂದೇ ನಾಣ್ಯದ ಎರಡು ಮುಖ ಎಂದು ವಾದಿಸುವವರಿಗೆ ಒಮ್ಮೆಮ್ಮೆ ಕೋಪ ಬರುತ್ತದೆ. ಆದರೆ ಇದು ವಾಸ್ತವ ಸಂಗತಿ. ಅದೇನಿದ್ದರೂ ಕರ್ನಾಟವನ್ನು ಬಿಜೆಪಿ ಗೆಲ್ಲಲೇಬೇಕಾಗಿದೆ. ಅದಕ್ಕಾಗಿ ಅಮಿತ್ ಶಾ ನಾನಾ ತಂತ್ರವನ್ನು ರೂಪಿಸಿದ್ದಾರೆ. ರಾಜ್ಯದಲ್ಲಿ ಹಿಂದೂ ಕಾರ್ಯಕರ್ತರ ಹತ್ಯೆಯಾಗುತ್ತಿದೆ. ಕಾನೂನು ಸುವ್ಯವಸ್ಥೆ ಕುಸಿದು ಬಿದ್ದಿದೆ ಎಂದು ವದಂತಿಗಳನ್ನು ಹಬ್ಬಿಸಿ ಕೋಲಾಹಲದ ವಾತಾವರಣ ನಿರ್ಮಾಣ ಮಾಡುವಂತೆ ತಮ್ಮ ಕಾರ್ಯಕರ್ತರಿಗೆ ಸೂಚಿಸಿದ ಅವರು ನಾನಾ ಹೆಸರಿನ ಯಾತ್ರೆಗಳನ್ನು ಸಂಘಟಿಸುತ್ತಿದ್ದಾರೆ. ಕರ್ನಾಟಕದಲ್ಲಿ ಉತ್ತರ ಪ್ರದೇಶದಂತೆ ಕೋಮು ಉನ್ಮಾದ ಕೆರಳಿಸಲು ಅಮಿತ್ ಶಾ ಮೊದಲು ತಂತ್ರ ರೂಪಿಸಿದರು. ಆದರೆ, ಕರಾವಳಿಯ ಎರಡು ಜಿಲ್ಲೆಗಳನ್ನು ಹೊರತುಪಡಿಸಿ ಉಳಿದ ಜಿಲ್ಲೆಗಳಲ್ಲಿ ಈ ತಂತ್ರ ಯಶಸ್ವಿಯಾಗಲಿಲ್ಲ. ಹಿಂದೆಲ್ಲ ಮುಂಬೈ ಕರ್ನಾಟಕದ ಧಾರವಾಡ, ಬೆಳಗಾವಿ, ಹಾವೇರಿ, ಗದಗ, ಬಾಗಲಕೋಟ್, ವಿಜಯಪುರ ಜಿಲ್ಲೆಗಳಲ್ಲಿ ಇಂಥ ಕೋಮುತಂತ್ರ ಯಶಸ್ವಿಯಾಗುತ್ತಿತ್ತು. ಆದರೆ, ಈ ಬಾರಿ ಲಿಂಗಾಯತರು ತಾವು ಹಿಂದೂಗಳಲ್ಲ ಎಂದು ಪ್ರತ್ಯೇಕ ಧರ್ಮದ ಮಾನ್ಯತೆಗಾಗಿ ಚಳವಳಿಗೆ ಇಳಿದ ಪರಿಣಾಮವಾಗಿ ಈ ಜಿಲ್ಲೆಗಳಲ್ಲಿ ಶಾ ತಂತ್ರ ಫಲಿಸುತ್ತಿಲ್ಲ.
ಕೇಂದ್ರ ಸಚಿವರಾದ ಅನಂತಕುಮಾರ್ ಹೆಗಡೆ, ಸಂಸದ ಪ್ರತಾಪ್ ಸಿಂಹರ ಮೂಲಕ ಅತ್ಯಂತ ಪ್ರಚೋದಕ ಭಾಷಣಗಳನ್ನು ಮಾಡಿಸಲಾಗುತ್ತಿದೆ. ಶೋಭಾ ಕರಂದ್ಲಾಜೆ ಮತ್ತು ನಳಿನ್ ಕುಮಾರ್ ಕಟೀಲು ಕೂಡ ಅನಂತಕುಮಾರ್ ಹೆಗಡೆ ಜೊತೆ ಪೈಪೋಟಿ ನಡೆಸಿದಂತೆ ಭಾಷಣ ಮಾಡುತ್ತಿದ್ದಾರೆ. ಇದರ ಜೊತೆಗೆ ಯಡಿಯೂರಪ್ಪನವರನ್ನು ಉತ್ಸವದ ಮೂರ್ತಿಯನ್ನಾಗಿ ಮಾಡಿ ಪಲ್ಲಕ್ಕಿಯಲ್ಲಿ ಹೊತ್ತು ಮೆರವಣಿಗೆ ಮಾಡುತ್ತಿದ್ದರೂ ಕೂಡ ಚುನಾವಣೆ ಎಂಬ 3 ತಿಂಗಳ ಜಾತ್ರೆ ಮುಗಿದ ನಂತರ ಈ ಮೂರ್ತಿಯನ್ನು ಮತ್ತೆ ಗುಡಿಯಲ್ಲಿ ಪ್ರತಿಷ್ಠಾಪಿಸಿ ಬಹುಮತ ಗಳಿಸಿದ ನಂತರ ಅನಂತಕುಮಾರ್ ಹೆಗಡೆಯನ್ನು ಮುಖ್ಯಮಂತ್ರಿಯಾಗಿ ಮಾಡುವ ಮಸಲತ್ತು ನಡೆದಿದೆ.
ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಯಲ್ಲಿ ಕೂಡ ಚುನಾವಣೆ ಪ್ರಚಾರದ ಸಂದರ್ಭದಲ್ಲಿ ಯೋಗಿ ಆದಿತ್ಯನಾಥ್ ಹೆಸರು ಎಲ್ಲೂ ಇರಲಿಲ್ಲ. ಆದರೆ, ಚುನಾವಣೆ ಫಲಿತಾಂಶ ಬಂದ ನಂತರ ಒಮ್ಮೆಲೆ ಅವರ ಹೆಸರನ್ನು ಮುಂಚೂಣೆಗೆ ತರಲಾಯಿತು. ಮುಂಚೆ ಅಲ್ಲಿ ಮುಖ್ಯಮಂತ್ರಿ ಎಂದು ಬಿಂಬಿಸಿದ್ದು ಬಿಎಸ್ಪಿಯಿಂದ ಬಿಜೆಪಿ ಸೇರಿದ್ದ ದಲಿತ ನಾಯಕನನ್ನು. ಯಾವಾಗ ಬಿಜೆಪಿ ಬಹುಮತ ಗಳಿಸಿತೋ ಆಗ ಚಿತ್ರಣ ಬದಲಾಯಿತು. ಫಲಿತಾಂಶ ಪ್ರಕಟವಾದ ದಿನ ರಾತ್ರಿ ಆರೆಸ್ಸೆಸ್ ಸರಸಂಘಚಾಲಕ ಮೋಹನ್ ಭಾಗವತ ಪ್ರಧಾನಿ ಮೋದಿಯವರಿಗೆ ಕರೆ ಮಾಡಿ ಮುಖ್ಯಮಂತ್ರಿ ಸ್ಥಾನಕ್ಕೆ ಯೋಗಿ ಆದಿತ್ಯನಾಥ್ ಹೆಸರನ್ನು ಸೂಚಿಸಿದರು. ಅದನ್ನು ಮೋದಿ ಒಪ್ಪಿಕೊಂಡರು. ಕರ್ನಾಟದಲ್ಲೂ ಹಾಗೆಯೇ ಆಗುವ ಸೂಚನೆಗಳಿವೆ.
ಕರ್ನಾಟಕದಲ್ಲಿ ಬಿಜೆಪಿ ಬಹುಮತ ಗಳಿಸಿದರೆ 224 ಕ್ಷೇತ್ರಗಳಲ್ಲಿ ಬೆವರು ಸುರಿಸುತ್ತ ಓಡಾಡಿದ ಯಡಿಯೂರಪ್ಪನವರು ಮುಖ್ಯಮಂತ್ರಿಯಾಗುವುದಿಲ್ಲ. ಈ ಸ್ಥಾನಕ್ಕೆ ಸಂಘಪರಿವಾರದ ಇನ್ನೊಂದು ಹೊಸಮುಖ ಸಿದ್ಧವಾಗಿದೆ. ಈಗ ಪ್ರಚೋದನಾಕಾರಿಯಾಗಿ ಮಾತನಾಡುತ್ತಿರುವ ಅನಂತಕುಮಾರ್ ಹೆಗಡೆ ಮತ್ತು ಪ್ರತಾಪ್ ಸಿಂಹ ಇವರಲ್ಲಿ ಯಾರಾದರೂ ಮುಖ್ಯಮಂತ್ರಿಯಾದರೂ ಅಚ್ಚರಿ ಪಡಬೇಕಿಲ್ಲ.
ಕರ್ನಾಟಕದಲ್ಲಿ ಬಿಜೆಪಿ ಗೆಲ್ಲುವುದು ಅಷ್ಟು ಸುಲಭವಲ್ಲ. ಸಿದ್ದರಾಮಯ್ಯನವರು ಕೂಡ ಹಟಕ್ಕೆ ಬಿದ್ದಂತೆ ಓಡಾಡುತ್ತಿದ್ದಾರೆ. ಅವರಿಗೆ ದಲಿತರ, ಹಿಂದುಳಿದ ವರ್ಗಗಳ, ಅಲ್ಪಸಂಖ್ಯಾತರ ಹಾಗೂ ಎಲ್ಲ ಜಾತಿಗಳ ಬಡವರ ಬೆಂಬಲವಿದೆ. ಅವರ ಜನಪರ ಇಮೇಜ್ ಮುಂದೆ ಮೋದಿಯವರ ಮಾತುಗಳು ಕಳಪೆಯಾಗುತ್ತಿವೆ. ಇನ್ನು ಮಂಡಿಪೇಟೆಯ ವ್ಯಾಪಾರಿಯಂತಿರುವ ಅಮಿತ್ ಶಾ ಅವರಿಗೆ ಕೂಡ ಕುತಂತ್ರದ ರಾಜಕಾರಣ ಬಿಟ್ಟರೆ ಬೇರೆ ಏನೂ ಗೊತ್ತಿಲ್ಲ. ಕರ್ನಾಟಕದ ಪರಂಪರೆ, ಸಂಸ್ಕೃತಿ ಇದ್ಯಾವುದರ ತಿಳುವಳಿಕೆಯೂ ಇಲ್ಲ. ಅಂತಲೇ ಕರ್ನಾಟಕವನ್ನು ವಶಪಡಿಸಿಕೊಳ್ಳುವುದು ಅಷ್ಟು ಸುಲಭವಲ್ಲ.
ಆದರೂ ಕರ್ನಾಟಕವನ್ನು ಇವರು ಗೆಲ್ಲಲೇಬೇಕಾಗಿದೆ. ಗೆಲ್ಲುವುದಿಲ್ಲ ಎಂದು ಗೊತ್ತಿದ್ದರೂ ಸಹ ಅಮಿತ್ ಶಾ ನಾನಾ ತಂತ್ರ ರೂಪಿಸುತ್ತಿದ್ದಾರೆ. ಇದರಲ್ಲಿ ಮೊದಲನೆಯದು ಕಾಂಗ್ರೆಸ್‌ನ ಓಟ್ ಬ್ಯಾಂಕ್ ಛಿದ್ರಗೊಳಿಸುವುದಾಗಿದೆ. ಕಾಂಗ್ರೆಸ್‌ಗೆಹೋಗುವ ದಲಿತ ಮತ್ತು ಮುಸಲ್ಮಾನರ ಓಟುಗಳನ್ನು ವಿಭಜಿಸಿದರೆ ಮಾತ್ರ ಕರ್ನಾಟಕವನ್ನು ವಶಪಡಿಸಿಕೊಳ್ಳಲು ಸಾಧ್ಯವಾಗುತ್ತದೆ ಎಂಬುದು ಅಮಿತ್ ಶಾಗೆ ಗೊತ್ತಿದೆ. ಅಂತಲೇ ಅವರು ನಾನಾ ತಂತ್ರ ರೂಪಿಸುತ್ತಿದ್ದಾರೆ. ಕಾಂಗ್ರೆಸ್‌ಗೆ ಬೀಳುವ ಅಲ್ಪಸಂಖ್ಯಾತರ ಮತಗಳನ್ನು ವಿಭಜಿಸಲು ಅಮಿತ್ ಶಾ ಹೊರಟಿದ್ದಾರೆ. ಚುನಾವಣೆಗೆ 3 ತಿಂಗಳು ಇರುವಾಗಲೇ ಆಲ್ ಇಂಡಿಯಾ ಮಹಿಳಾ ಎಂಪವರ್‌ಮೆಂಟ್ ಎಂಬ ಹೊಸ ಪಾರ್ಟಿಯನ್ನು ಅವರು ಸೃಷ್ಟಿಸಿದ್ದಾರೆ. ಹೈದರಾಬಾದ್‌ನ ವಜ್ರದ ವ್ಯಾಪಾರಿ ಡಾ. ನೌಹಾರಾ ಶೇಖ್ ಈ ಪಕ್ಷದ ನಾಯಕಿ. ಇವರ ಹೆಸರಿನಲ್ಲಿ ಎಲ್ಲ ಪತ್ರಿಕೆಗಳ ಮುಖಪುಟದಲ್ಲಿ, ಟಿವಿಗಳಲ್ಲಿ ಜಾಹೀರಾತು ಬರುತ್ತಿದೆ. ಈ ಜಾಹೀರಾತಿನಲ್ಲಿ ಗಾಂಧಿ, ಅಂಬೇಡ್ಕರ್, ಅಬ್ದುಲ್ ಕಲಾಂ, ಟಪ್ಪುಸುಲ್ತಾನ್ ಮತ್ತು ಝಾನ್ಸಿರಾಣಿ ಲಕ್ಷ್ಮೀಬಾಯಿ ಅವರ ಭಾವಚಿತ್ರಗಳನ್ನು ಬಳಸಿಕೊಳ್ಳಲಾಗಿದೆ. ಇವರ ಮೂಲಕ ಮುಸ್ಲಿಂ ಮಹಿಳೆಯರ ಮತಗಳನ್ನು ವಿಭಜಿಸುವ ಯತ್ನ ನಡೆದಿದೆ. ಇನ್ನೊಂದೆಡೆ ಜೆಡಿಎಸ್-ಬಿಎಸ್ಪಿ ಮೈತ್ರಿ ಹಿಂದೆಯೂ ಕೂಡ ಮುಸ್ಲಿಂ ಮತ್ತು ದಲಿತರ ಮತ ವಿಭಜಿಸುವ ತಂತ್ರ ಇದೆಯೆಂದು ಹೇಳಲಾಗುತ್ತಿದೆ. ಚುನಾವಣೆ ಸಮೀಪಿಸುತ್ತಿರುವಂತೆ ಅಲ್ಪಸಂಖ್ಯಾತ ಸಮುದಾಯದ ಹೆಸರಿನಲ್ಲಿ ಇನ್ನಷ್ಟು ಹೊಸ ಪಕ್ಷಗಳು ಹುಟ್ಟಿಕೊಳ್ಳುವ ಸಂಭವವಿದೆ. ಇದೆಲ್ಲದರ ಏಕೈಕ ಗುರಿ ಬಿಜೆಪಿ ವಿರೋಧಿ ಜಾತ್ಯತೀತ ಮತಗಳನ್ನು ವಿಭಜಿಸುವುದಾಗಿದೆ.
ಇದರ ಜೊತೆಗೆ ಕಾಂಗ್ರೆಸ್ ನಾಯಕರು ಮತ್ತು ಅವರ ಬೆಂಬಲಿಗರ ಮನೆಗಳ ಮೇಲೆ ಐಟಿ ಮತ್ತು ಸಿಬಿಐ ದಾಳಿ ಮಾಡಿ ಹೆದರಿಸಲಾಗುತ್ತಿದೆ. ಚುನಾವಣೆ ಸಂದರ್ಭದಲ್ಲಿ ಪ್ರತಿಪಕ್ಷಗಳಿಗೆ ಖರ್ಚಿಗೆ ಹಣವಿಲ್ಲದಂತೆ ಸ್ಥಿತಿ ನಿರ್ಮಿಸುವ ಹುನ್ನಾರ ನಡೆದಿದೆ. ಹನ್ನೆರಡನೇ ಶತಮಾನದಿಂದ ಮನುವಾದಿಗಳು ಈ ಹುನ್ನಾರಗಳನ್ನು ಮಾಡುತ್ತಲೇ ಬಂದಿದ್ದಾರೆ. ಕಲ್ಯಾಣ ಕ್ರಾಂತಿ ವಿಫಲವಾದರೂ ಕೂಡ ಬಸವಣ್ಣ ನಮ್ಮ ನಡುವೆ ಇನ್ನೂ ಜೀವಂತವಿದ್ದಾರೆ. ಈ ನಾಡು ಗುಜರಾತಿನಂತೆ ಕೋಮುವಾದಿ ವಿಷಸರ್ಪಗಳ ಹುತ್ತವಾಗುವುದನ್ನು ತಡೆಯುವುದು ಪ್ರಜ್ಞಾವಂತರ ಜವಾಬ್ದಾರಿಯಾಗಿದೆ.ಕರ್ನಾಟಕದಲ್ಲಿ ಬಿಜೆಪಿಯನ್ನು ಸೋಲಿಸುವುದರ ಮೂಲಕ ಭಾರತದ ಪ್ರಜಾಪ್ರಭುತ್ವವನ್ನು ಬಲಪಡಿಸುವ ಸಂಕಲ್ಪ ತೊಡಬೇಕಾಗಿದೆ.