ನಿರ್ಜಲೀಕರಣದ ಈ 10 ಲಕ್ಷಣಗಳ ಅರಿವು ನಿಮ್ಮ ಪ್ರಾಣ ಉಳಿಸಬಲ್ಲುದು

Update: 2018-03-19 10:44 GMT

ಮಾನವ ಶರೀರದ ಶೇ.70ರಷ್ಟು ಭಾಗವು ನೀರಿನಿಂದ ರಚಿಸಲ್ಪಟ್ಟಿದೆ. ಆಹಾರವಿಲ್ಲದೆ ನೀವು ಮೂರು ವಾರಗಳ ಕಾಲ ಬದುಕಿರಬಹುದು, ಅದರಲ್ಲೇನೂ ಅಚ್ಚರಿಯಿಲ್ಲ. ಆದರೆ ನೀರು ಸೇವಿಸದೆ ಹೆಚ್ಚೆಂದರೆ ಒಂದು ವಾರ ಬದುಕಿರಬಹುದು. ಮರಳುಗಾಡಿನಲ್ಲಿ ಸಿಕ್ಕಿಬಿದ್ದಿದ್ದರೆ ಈ ಅವಧಿ ಇನ್ನೂ ಕಡಿಮೆಯಾಗುತ್ತದೆ. ಹೀಗಾಗಿ ದಿನವಿಡೀ ಕನಿಷ್ಠ 2ರಿಂದ 4 ಲೀಟರ್ ನೀರು ಕುಡಿಯುವ ಮೂಲಕ ಶರೀರದ ಜಲೀಕರಣವನ್ನು ಕಾಯ್ದುಕೊಳ್ಳುವುದು ಮುಖ್ಯವಾಗಿದೆ.

ದುರದೃಷ್ಟವಶಾತ್ ಕೆಲವರು ಪ್ರತಿದಿನ ಸಾಕಷ್ಟು ನೀರನ್ನು ಕುಡಿಯು ವುದಿಲ್ಲ. ಇಂತಹವರಲ್ಲಿ ನೀವೂ ಸೇರಿದ್ದರೆ ನಿರ್ಜಲೀಕರಣದ 10 ಲಕ್ಷಣಗಳು ಇಲ್ಲಿವೆ. ಇವುಗಳ ಅರಿವು ನಿಮಗಿದ್ದರೆ ನಿಮ್ಮ ಜೀವವನ್ನು ಉಳಿಸಲು ನೆರವಾಗುತ್ತದೆ.

►ಅತಿಯಾದ ಬಾಯಾರಿಕೆ ಮತ್ತು ಏನಾದರೂ ತಿನ್ನಬೇಕೆಂಬ ತುಡಿತ

 ನಿಮ್ಮ ಮಿದುಳು ಸೂಚಿಸಿದಾಗೆಲ್ಲ ಸ್ವಲ್ಪ ಸ್ವಲ್ಪ ನೀರನ್ನು ಸೇವಿಸುತ್ತಲೇ ಇರಿ. ಬಾಯಾರಿಕೆಯಾಗುವುದು ನಿಮ್ಮ ಶರೀರದ ನಿರ್ಜಲೀಕರಣದ ಮೊದಲ ಸಂಕೇತವಾಗಿರುವುದರಿಂದ ಇದು ನಿಮ್ಮ ಜೀವನಮಂತ್ರ ವಾಗಿರಲಿ. ಬಾಯಾರಿಕೆಯಾದಾಗಲೂ ನೀವು ನೀರು ಕುಡಿಯದಿದ್ದರೆ ಶೀಘ್ರವೇ ಏನನ್ನಾದರೂ ತಿನ್ನಬೇಕೆಂಂಬ ಅತೀವ ತುಡಿತ ನಿಮ್ಮಲ್ಲುಂಟಾ ಗುತ್ತದೆ. ಆಹಾರದ ರೂಪದಲ್ಲಾದರೂ ಸ್ವಲ್ಪ ನೀರು ಸಿಗಬಹುದು ಎಂದು ನಿಮ್ಮ ಶರೀರವು ಬಯಸುವುದು ಇದಕ್ಕೆ ಕಾರಣವಾಗಿದೆ.

► ಒಣಗಿದ ಬಾಯಿ

ನಿಮ್ಮ ಬಾಯಿಯ ಒಳಭಾಗವು ಒಣಗಿದ್ದರೆ ಮತ್ತು ನಾಲಿಗೆಯು ದೊರಗುದೊರಗಾಗಿದ್ದರೆ ತೀವ್ರ ನಿರ್ಜಲೀಕರಣಕ್ಕೆ ತುತ್ತಾಗುವ ಹಾದಿಯಲ್ಲಿದ್ದೀರಿ ಎಂದು ಅರ್ಥ. ತಕ್ಷಣಕ್ಕೆ ಸ್ವಲ್ಪ ಹೆಚ್ಚೇ ನೀರು ಸೇವಿಸಿ.

► ಏಕಾಏಕಿ ನಿದ್ರೆ ಬಂದಂತಾಗುವುದು

ನಿರ್ಜಲೀಕರಣವು ನಿಮ್ಮ ಮಿದುಳಿನ ಮೇಲೆ ಪ್ರತಿಕೂಲ ಪರಿಣಾಮ ವನ್ನು ಬೀರುತ್ತದೆ. ಅದು ಅತೀವ ದಣಿವನ್ನು ಸೃಷ್ಟಿಸಿ ನೀವು ದಿಢೀರ್ ನಿದ್ರೆಗೆ ಶರಣಾಗುವಂತೆ ಮಾಡುತ್ತದೆ. ಇಂತಹ ಸಂದರ್ಭದಲ್ಲಿ ನಿದ್ರಿಸುವ ಬದಲಾಗಿ ಸ್ವಲ್ಪ ನೀರನ್ನು ಕುಡಿಯಿರಿ.

► ಭ್ರಮೆಗೊಳಗಾಗುವುದು

ಚಿತ್ತವಿಭ್ರಮೆ ಸಾಮಾನ್ಯದಿಂದ ತೀವ್ರ ನಿರ್ಜಲೀಕರಣದ ಲಕ್ಷಣವಾ ಗಿದ್ದು, ಹಾಡಹಗಲಿನಲ್ಲಿಯೇ ಭ್ರಮೆಗಳು ನಿಮ್ಮನ್ನು ಕಾಡತೊಡಗುತ್ತವೆ. ಸನ್ನಿಗೊಳಗಾದವರಂತೆ ನಿಮ್ಮಷ್ಟಕ್ಕೆ ಗೊಣಗಲು ಪ್ರಾರಂಭಿಸುತ್ತೀರಿ. ನಿಮ್ಮ ಸುತ್ತಲಿದ್ದವರು ಪ್ರಶ್ನಿಸಿದರೂ ಗೊಣಗಿದ್ದು ನಿಮ್ಮ ನೆನಪಿನಲ್ಲಿರುವುದಿಲ್ಲ. ಹೀಗಾದಾಗ ತಕ್ಷಣವೇ ನೀರನ್ನು ಸೇವಿಸಿ.

► ತಲೆನೋವು

ಇನ್ನೇನು ತಲೆ ಸಿಡಿದುಹೋಗುತ್ತದೆ ಎನ್ನುವಂತೆ ನೋವು ಕಾಣಿಸಿ ಕೊಂಡರೆ ಅದು ನಿರ್ಜಲೀಕರಣದ ಸಾಮಾನ್ಯ ಲಕ್ಷಣವಾಗಿದೆ. ಆದರೆ ಅದು ಅತಿಯಾದ ಜಲೀಕರಣದ ಸಂಕೇತವೂ ಆಗಿರುವುದರಿಂದ ಹಿಂದಿನ ಕೆಲವು ಗಂಟೆಗಳಲ್ಲಿ ನೀವು ಎಷ್ಟು ನೀರು ಕುಡಿದಿದ್ದೀರಿ ಎನ್ನುವುದು ನಿಮ್ಮ ಗಮನದಲ್ಲಿರಲಿ.

► ಸ್ನಾಯು ಸೆಳೆತ

ಸ್ನಾಯು ಸೆಳೆತ ನಿರ್ಜಲೀಕರಣದ ಇನ್ನೊಂದು ಸಂಕೇತವಾಗಿದೆ. ನಿರ್ಜಲೀಕರಣವು ಶರೀರದಲ್ಲಿ ಇಲೆಕ್ಟ್ರೋಲೈಟ್ ಅಸಮತೋಲನ ವನ್ನುಂಟು ಮಾಡುವುದು ಇದಕ್ಕೆ ಕಾರಣವಾಗಿದೆ. ಇದನ್ನು ತೀವ್ರ ಶ್ರಮದ ಕೆಲಸದ ನಂತರ ಉಂಟಾಗುವ ಸ್ನಾಯು ಸೆಳೆತದೊಂದಿಗೆ ಗೊಂದಲ ಮಾಡಿಕೊಳ್ಳಬೇಡಿ. ಏಕೆಂದರೆ ಇಂತಹ ಸೆಳೆತವು ನೀವು ಅಂದು ಯಾವ ಸ್ನಾಯುವಿಗೆ ಹೆಚ್ಚಿನ ಶ್ರಮ ನೀಡಿದ್ದೀರೋ ಆ ಸ್ನಾಯುವಿನಲ್ಲಿ ಕಾಣಿಸಿಕೊಳ್ಳುತ್ತದೆ.

► ಬೆವರುವಿಕೆ ಸ್ಥಗಿತ

ದೈಹಿಕ ಶ್ರಮದ ನಡುವೆ ಬೆವರುವಿಕೆ ನಿಂತುಹೋದರೆ ಅದು ತೀವ್ರ ನಿರ್ಜಲೀಕರಣದ ಸಂಕೇತವಾಗಿದೆ. ಇಂತಹ ಸಂದರ್ಭದಲ್ಲಿ ಸಾಧ್ಯವಾ ದಷ್ಟು ಶೀಘ್ರ ನೀರನ್ನು ಸೇವಿಸಿ.

► ಕಡುಹಳದಿ ಬಣ್ಣದ ಉರಿಮೂತ್ರ

ನೀವು ಮೂತ್ರ ವಿಸರ್ಜಿಸುವಾಗ ನೋವಿನ ಅನುಭವವಾಗುತ್ತಿದ್ದರೆ ಮತ್ತು ಮೂತ್ರದ ಬಣ್ಣವು ಕಡುಹಳದಿಯಾಗಿದ್ದರೆ ಇದು ತೀವ್ರ ನಿರ್ಜಲೀಕರಣದ ಸಂಕೇತವಾಗಿರುವುದರಿಂದ ತಕ್ಷಣವೇ ನೀರನ್ನು ಸೇವಿಸುವುದು ಅಗತ್ಯವಾಗುತ್ತದೆ. ಅತಿಯಾದ ನಿರ್ಜಲೀಕರಣಕ್ಕೆ ಶರೀರವು ತುತ್ತಾದಾಗ ಮೂತ್ರ ವಿಸರ್ಜನೆಗೆ ಹೋಗುವುದು ಕಡಿಮೆಯಾಗುತ್ತದೆ ಅಥವಾ ಮೂತ್ರ ವಿಸರ್ಜನೆಯೇ ಆಗದಿರಬಹುದು.

► ಒಣಗಿದ ಚರ್ಮ

ನಿಮ್ಮ ಚರ್ಮವು ಸಹಜ ಮೃದುತನ ಮತ್ತು ಹೊಳಪನ್ನು ಕಳೆದು ಕೊಂಡು ಸುಕ್ಕುಗಟ್ಟಿದ್ದರೆ ನೀವು ಖಂಡಿತವಾಗಿಯೂ ನಿರ್ಜಲೀಕರಣಕ್ಕೆ ತುತ್ತಾಗಿದ್ದೀರಿ ಎಂದು ಅರ್ಥ.

► ಮಸುಕು ದೃಷ್ಟಿ

ದಿಢೀರ್ ಆಗಿ ಹತ್ತಿರದ ಅಥವಾ ದೂರಲ್ಲಿರುವ ವಸ್ತುಗಳ ಮೇಲೆ ದೃಷ್ಟಿಯನ್ನು ಕೇಂದ್ರೀಕರಿಸಲು ಸಾಧ್ಯವಾಗದಿದ್ದರೆ ಮತ್ತು ನೋಟವು ಮಸುಕಾಗಿದ್ದರೆ ಅದು ನಿರ್ಜಲೀಕರಣದ ಲಕ್ಷಣವಾಗಿದೆ. ಆದರೆ ಮಸುಕು ದೃಷ್ಟಿಯು ನೀವು ಸಮಯಕ್ಕೆ ಸರಿಯಾಗಿ ಊಟ ಮಾಡಿರದಿದ್ದರೆ ಮತ್ತು ಚಳಿಯ ಅನುಭವವಾಗುತ್ತಿದ್ದರೆ ರಕ್ತದಲ್ಲಿ ಸಕ್ಕರೆಯ ಮಟ್ಟದ ಕುಸಿತದ ಲಕ್ಷಣವೂ ಆಗಿದೆ ಎನ್ನುವುದು ನಿಮ್ಮ ನೆನಪಿನಲ್ಲಿರಲಿ. ಇಂತಹ ಸಂದರ್ಭದಲ್ಲಿ ತಕ್ಷಣವೇ ಗ್ಲುಕೋಸ್‌ಮಿಶ್ರಿತ ನೀರನ್ನು ಕುಡಿಯಿರಿ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News