ಪ್ರತ್ಯೇಕ ಲಿಂಗಾಯತ ಧರ್ಮ: ಮುಂದೇನು?

Update: 2018-03-26 09:05 GMT

ಬಸವ ತತ್ವವನ್ನು ಒಪ್ಪುವ ವೀರಶೈವ ಲಿಂಗಾಯತ ಪ್ರತ್ಯೇಕ ಧರ್ಮದ ಕುರಿತು ನ್ಯಾಯಮೂರ್ತಿ ನಾಗಮೋಹನದಾಸ್ ನೇತೃತ್ವದ ಸಮಿತಿ ಸಲ್ಲಿಸಿರುವ ಶಿಫಾರಸನ್ನು ರಾಜ್ಯ ಸಚಿವ ಸಂಪುಟ ಒಪ್ಪಿಕೊಂಡಿರುವುದು ಐತಿಹಾಸಿಕ ಹೆಜ್ಜೆಯಾಗಿದೆ. ಲಿಂಗಾಯತರು ತಾವು ಹಿಂದೂಗಳಲ್ಲ, ವೀರಶೈವರೂ ಅಲ್ಲ ಎಂದು ಹಲವಾರು ವರ್ಷಗಳಿಂದ ಹೇಳುತ್ತಲೇ ಬಂದಿದ್ದಾರೆ. ಕಳೆದ ಒಂದು ವರ್ಷದಿಂದ ಲಿಂಗಾಯತ ಧರ್ಮಕ್ಕೆ ಪ್ರತ್ಯೇಕ ಧರ್ಮದ ಸ್ಥಾನಮಾನ ನೀಡಬೇಕೆಂದು ಅವರು ಬೀದಿಗಿಳಿದರು. ಈ ಹೋರಾಟದಲ್ಲಿ ಬಸವ ಸಿದ್ಧಾಂತದಲ್ಲಿ ನಂಬಿಕೆ ಹೊಂದಿರುವ ಕೆಲ ಮಠಾಧೀಶರು ಮಾತ್ರವಲ್ಲ ರಾಜ್ಯದ ಕೆಲ ಸಚಿವರೂ ಪಾಲ್ಗೊಂಡಿದ್ದರು. ಕೊನೆಗೂ ಸರಕಾರ ಇವರ ಬೇಡಿಕೆಗೆ ಮಣಿದಿದೆ. ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿರದೆ ಬೇರೆ ಯಾರೇ ಮುಖ್ಯಮಂತ್ರಿಯಾಗಿದ್ದರೂ ಈ ಬೇಡಿಕೆ ಈಡೇರಿಸುವುದು ಸುಲಭದ ಸಂಗತಿಯಾಗಿರಲಿಲ್ಲ.

ಲಿಂಗಾಯತ ಪ್ರತ್ಯೇಕ ಧರ್ಮದ ಬೇಡಿಕೆಯನ್ನು ಒಪ್ಪಿಕೊಳ್ಳಬಾರದು ಎಂದು ಮನುಷ್ಯರು ಹೊತ್ತುಕೊಳ್ಳುವ ಅಡ್ಡಪಲ್ಲಕ್ಕಿ ಮೇಲೆ ಕೂತು ಮೆರವಣಿಗೆ ಮಾಡಿಸಿಕೊಳ್ಳುವ ವೀರಶೈವ ಪಂಚಪೀಠಗಳ ಜಗದ್ಗುರುಗಳು ಸರಕಾರವನ್ನು ಬೆದರಿಸುತ್ತಲೇ ಬಂದಿದ್ದರು. ಲಿಂಗಾಯತ ಪ್ರತ್ಯೇಕ ಧರ್ಮಕ್ಕೆ ಶಿಫಾರಸು ಮಾಡಿದರೆ, ಧರ್ಮ ಯುದ್ಧ ಮಾಡುವುದಾಗಿ ಈ ಮಠಾಧೀಶರು ಆರ್ಭಟಿಸುತ್ತಿದ್ದರು. ಇವರ ಆರ್ಭಟದ ಹಿಂದೆ ಪೇಜಾವರ ಸ್ವಾಮೀಜಿಗಳು ಮತ್ತು ಸಂಘ ಪರಿವಾರ ಇತ್ತು. ಈ ದೇಶದಲ್ಲಿರುವ ಎಲ್ಲರೂ ಹಿಂದೂಗಳು. ಮುಸ್ಲಿಮರು ಮತ್ತು ಕ್ರೈಸ್ತರು ಹೊರಗಿನವರು ಎಂಬ ಸಿದ್ಧಾಂತ ಪ್ರತಿಪಾದಿಸುತ್ತ ಬಂದ ಆರೆಸ್ಸೆಸ್‌ಗೆ ಲಿಂಗಾಯತ ಪ್ರತ್ಯೇಕ ಧರ್ಮದ ಚಳವಳಿ ನುಂಗಲಾರದ ತುತ್ತಾಗಿದೆ. ಲಿಂಗಾಯತ ಪ್ರತ್ಯೇಕ ಧರ್ಮದ ಚಳವಳಿಯನ್ನು ಪಂಚ ಪೀಠಗಳ ಮಠಾಧೀಶರು ವಿರೋಧಿಸುವುದು ಸಹಜವಾಗಿದೆ. ಲಿಂಗಾಯತರು ಪ್ರತ್ಯೇಕಗೊಂಡರೆ, ಅವರ ಅಡ್ಡಪಲ್ಲಕ್ಕಿ ಹೊರುವ ಜನರು ಇರಲ್ಲ ಎಂಬ ಆತಂಕ ಅವರಿಗಿದೆ. ಆದರೆ ಲಿಂಗಾಯತ ಧರ್ಮಕ್ಕೆ ಸಂಬಂಧಪಡದ ಉಡುಪಿಯ ಪೇಜಾವರ ಮಠಾಧೀಶರು ಇದನ್ನೇಕೆ ವಿರೋಧಿಸಿದರು? ಆರೆಸ್ಸೆಸ್ ಸರ ಸಂಘಚಾಲಕ ಮೋಹನ್ ಭಾಗವತ್, ಭಯ್ಯೆಜಿ ಜೋಷಿ ಮತ್ತು ಸು.ರಾಮಣ್ಣ ಅವರು ಈ ಬಗ್ಗೆ ಯಾಕೆ ಆಕ್ಷೇಪ ವ್ಯಕ್ತಪಡಿಸಿದರು? ಎಂಬ ಪ್ರಶ್ನೆಗಳಿಗೆ ಉತ್ತರ ಹುಡುಕಲು ತಡಕಾಡಬೇಕಿಲ್ಲ. ಹಿಂದುತ್ವದ ಮುಸುಕಿನಲ್ಲಿ ತಮ್ಮ ಯಜಮಾನಿಕೆಯ ಮನುವಾದಿ ಹಿಂದೂ ರಾಷ್ಟ್ರ ಕಟ್ಟಲು ಹೊರಟವರಿಗೆ ಲಿಂಗಾಯತರು ಪ್ರತ್ಯೇಕಗೊಳ್ಳುವುದು ಸಹಿಸಲು ಆಗುತ್ತಿಲ್ಲ.

ಸಿದ್ದರಾಮಯ್ಯನವರ ಸರಕಾರ ಪ್ರತ್ಯೇಕ ಧರ್ಮಕ್ಕೆ ಮಾನ್ಯತೆ ನೀಡಿ, ಕೇಂದ್ರಕ್ಕೆ ಶಿಫಾರಸು ಮಾಡಿರುವುದರಿಂದ ಸಮಾಜವನ್ನು ಒಡೆದಂತಾಗಿದೆ ಎಂದು ದೇವರು, ಧರ್ಮದ ಹೆಸರಿನಲ್ಲಿ ದೇಶವನ್ನು ಒಡೆಯುತ್ತ ಬಂದವರು ಆರೋಪ ಮಾಡುತ್ತಿದ್ದಾರೆ. ಅಯೋಧ್ಯೆ ರಾಮ ಮಂದಿರದ ಹೆಸರಿನಲ್ಲಿ ರಥಯಾತ್ರೆ ನಡೆಸಿ, ಬಾಬರಿ ಮಸೀದಿಯನ್ನು ಕೆಡವಿ ನೆತ್ತರಿನ ಹೊಳೆ ಹರಿಸಿದವರು, ಗುಜರಾತ್‌ನಲ್ಲಿ ಹತ್ಯಾಕಾಂಡ ಮಾಡಿ ಗರ್ಭಿಣಿಯ ಹೊಟ್ಟೆ ಸೀಳಿದವರು, ಬಾಬಾ ಬುಡಾನ್‌ಗಿರಿಯಲ್ಲಿ ದತ್ತಪೀಠದ ವಿವಾದ ಸೃಷ್ಟಿಸಿ ಮಲೆನಾಡಿಗೆ ಬೆಂಕಿ ಹಚ್ಚಿದವರು ಈಗ ಲಿಂಗಾಯತರು ಪ್ರತ್ಯೇಕ ಧರ್ಮ ಕೇಳಿದರೆ, ಸಮಾಜ ಒಡೆಯುತ್ತದೆ ಎಂದು ಹುಯಿಲೆಬ್ಬಿಸಿದ್ದಾರೆ. ಲಿಂಗಾಯತ ಪ್ರತ್ಯೇಕ ಧರ್ಮದ ಮಾನ್ಯತೆಗೆ ಇರುವ ಎಲ್ಲಾ ಅಡ್ಡಿ ಆತಂಕ ನಿವಾರಿಸಿ, ರಾಜ್ಯ ಸರಕಾರ ಕೇಂದ್ರಕ್ಕೆ ಶಿಫಾರಸು ಮಾಡಿರುವುದರಿಂದ ಮನುವಾದಿ ಶಕ್ತಿಗಳಿಗೆ ಸಹಜವಾಗಿ ಕೋಪ ಬಂದಿದೆ. ಅವರು ದಶಕಗಳ ಕಾಲ ಲಿಂಗಾಯತರನ್ನು ಓಲೈಸಿ ತಮ್ಮ ಬುಟ್ಟಿಗೆ ಹಾಕಿಕೊಂಡಿದ್ದರು. ಅಯೋಧ್ಯೆ ರಾಮಮಂದಿರದ ಹೆಸರಿನಲ್ಲಿ ರಾಮ ಪಾದುಕೆಗಳು, ರಾಮ ಮಂದಿರದ ಇಟ್ಟಿಗೆಗಳು ದೇಶದ ತುಂಬ ಮೆರವಣಿಗೆ ಹೊರಟಾಗ ಇಟ್ಟಿಗೆ-ಪಾದುಕೆ ಹೊತ್ತುಕೊಂಡ ವಾಹನಗಳು ಕರ್ನಾಟಕಕ್ಕೂ ಬಂದಿದ್ದವು. ಈ ವಾಹನಗಳನ್ನು ಉದ್ದೇಶಪೂರ್ವಕವಾಗಿ ಲಿಂಗಾಯತ ಮಠಗಳ ಮುಂದೆ ನಿಲ್ಲಿಸಿ, ಲಿಂಗಾಯತ ಮಠಾಧೀಶರಿಂದ ರಾಮ ಪಾದುಕೆ ಮತ್ತು ಇಟ್ಟಿಗೆಗಳನ್ನು ಪೂಜೆ ಮಾಡಿಸಿದ್ದರು. ಆಗ ಇದರಿಂದ ಕೆರಳಿ ಕೆಂಡವಾದ ಪಿ.ಲಂಕೇಶ್, ಇಟ್ಟಿಗೆ ಪವಿತ್ರವಲ್ಲ, ಜೀವ ಪವಿತ್ರ ಎಂದು ತಮ್ಮ ಅಂಕಣದಲ್ಲಿ ಬರೆದು ಪ್ರತಿ ಆಂದೋಲನವನ್ನೇ ನಡೆಸಿದ್ದರು.

ಆದರೆ, ಏನೆಲ್ಲ ಹರಸಾಹಸ ಮಾಡಿದರೂ ಲಿಂಗಾಯತರನ್ನು ಜೀರ್ಣಿಸಿಕೊಳ್ಳಲು ಸಂಘ ಪರಿವಾರಕ್ಕೆ ಆಗುತ್ತಿಲ್ಲ. ವೇದಕ್ಕೆ ಒರೆಯ ಕಟ್ಟುವೆ,

ಶಾಸ್ತ್ರಕ್ಕೆ ನಿಗಳನ್ನಿಕ್ಕುವೆ,

ತರ್ಕದ ಬೆನ್ನ ಬಾರನೆತ್ತುವೆ,

ಆಗಮದ ಮೂಗು ಕೊಯ್ಯುವೆ,

ಮಹಾದಾನಿ ಕೂಡಲಸಂಗಮದೇವ,

ಮಾದಾರ ಚೆನ್ನಯ್ಯನ ಮನೆಯ ಮಗ ನಾನಯ್ಯ

ಎಂದು ಹೇಳಿದ ಬಸವಣ್ಣನವರ ಅನುಯಾಯಿಗಳನ್ನು ನುಂಗಿ ದಕ್ಕಿಸಿಕೊಳ್ಳುವುದು ಸುಲಭವಲ್ಲ. ಕೊನೆಗೂ ಅವರು ಸಿಡಿದೆದ್ದರು. 900 ವರ್ಷಗಳ ನಂತರ ತಮ್ಮ ಪ್ರತ್ಯೇಕ ಧರ್ಮದ ಬೇಡಿಕೆಗಾಗಿ ಬೀದಿಗೆ ಬಂದರು. ಕರ್ನಾಟಕ, ಮಹಾರಾಷ್ಟ್ರ ಮತ್ತು ಆಂಧ್ರಪ್ರದೇಶದ ಕೆಲ ಮಹಾನಗರಗಳಲ್ಲಿ ಸಮಾವೇಶಗಳನ್ನು ನಡೆಸಿದರು. ಕೊನೆಗೆ ಸರಕಾರಕ್ಕೆ ಇವರ ಬೇಡಿಕೆ ಒಪ್ಪಿಕೊಳ್ಳುವುದು ಅನಿವಾರ್ಯವಾಯಿತು.

ವೀರಶೈವ ಮತ್ತು ಲಿಂಗಾಯತ ಒಂದೇ ಎಂದು ಹೇಳುವ ಪಂಚಾಚಾರ್ಯರು ಬಸವಣ್ಣನವರನ್ನು ಒಪ್ಪಿಕೊಳ್ಳುವುದಿಲ್ಲ. ಬಸವಣ್ಣನವರಿಗಿಂತ ಮುಂಚೆ ವೀರಶೈವ ಧರ್ಮ ಅಸ್ತಿತ್ವದಲ್ಲಿ ಇತ್ತು ಎಂದು ಅವರು ಪ್ರತಿಪಾದಿಸುತ್ತಾರೆ. ಆದರೆ, ವೇದ-ಹೋಮ-ಹವನಗಳನ್ನು ಪರಿಪಾಲಿಸುವ ಇವರಿಗೆ ಅದನ್ನು ವಿರೋಧಿಸುವ ಬಸವಣ್ಣನವರನ್ನು ಕಂಡರೆ ಆಗುವುದಿಲ್ಲ. 21ನೇ ಶತಮಾನದಲ್ಲೂ ಮನುಷ್ಯರ ಹೆಗಲ ಮೇಲೆ ಕೂತು ಮೆರವಣಿಗೆ ಮಾಡಿಸಿಕೊಳ್ಳುವ ಇವರು ಸಮಾನತೆ ಒಪ್ಪಿಕೊಳ್ಳುವುದಿಲ್ಲ. ಈ ಪಂಚ ಮಠಾಧೀಶರಲ್ಲಿ ಒಬ್ಬರಾದ ರಂಭಾಪುರಿ ಪೀಠದ ಹಿಂದಿನ ಪೀಠಾಧಿಪತಿಗಳನ್ನು ನಾನು ನೋಡಿದ್ದೇನೆ. ಅವರು ಎಪ್ಪತ್ತರ ದಶಕದ ಆರಂಭದಲ್ಲಿ ಬಸವನಬಾಗೇವಾಡಿಗೆ ಬಂದಿದ್ದರು. ಆಗ ಅಲ್ಲಿ ನಿರ್ಮಿಸಿದ ವೇದಿಕೆಯಲ್ಲಿ ಅವರು ಪ್ರವಚನ ನೀಡಬೇಕಿತ್ತು. ಆದರೆ ವೇದಿಕೆಯಲ್ಲಿ ಬಸವಣ್ಣನವರ ಭಾವಚಿತ್ರ ಇರುವುದು ಕಂಡು ಕೆಂಡಾಮಂಡಲರಾದರು. ಬಸವಣ್ಣನವರ ಭಾವಚಿತ್ರ ಕೆಳಗಿಳಿಸುವವರೆಗೆ ಅವರು ವೇದಿಕೆ ಹತ್ತುವುದಿಲ್ಲ ಎಂದು ಹಠ ಹಿಡಿದು ಕೂತರು. ಕೊನೆಗೆ ಆ ಭಾವಚಿತ್ರವನ್ನು ತೆಗೆಯಲಾಯಿತು.

ಹೀಗೆ ಬಸವಣ್ಣನವರನ್ನು ಒಪ್ಪಿಕೊಳ್ಳದ ವೀರಶೈವ ಮಠಾಧೀಶರಿಗೆ ಹಾಗೂ ಬಸವಣ್ಣನವರೇ ಪ್ರಾಣ ಜೀವಾಳವಾದ ಲಿಂಗಾಯತರಿಗೆ ಹೊಂದಾಣಿಕೆ ಆಗಲು ಸಾಧ್ಯವೇ ಇಲ್ಲ. ಹೀಗಾಗಿ ಸರಕಾರ ಅನಿವಾರ್ಯವಾಗಿ ಈ ಶಿಫಾರಸು ಮಾಡಬೇಕಾಯಿತು. ಈ ಶಿಫಾರಸು ಮಾಡಿದ ನಂತರ ಸಿದ್ದರಾಮಯ್ಯ ವಿರುದ್ಧ ಒಂದೆಡೆ ಸಂಘ ಪರಿವಾರದ ಕೋಮುವಾದಿಗಳು, ಇನ್ನೊಂದೆಡೆ ಪಂಚಾಚಾರ್ಯ ಮಠಾಧೀಶರು ದಾಳಿ ಆರಂಭಿಸಿದ್ದಾರೆ. ಎಪ್ಪತ್ತರ ದಶಕದಲ್ಲಿ ದೇವರಾಜ ಅರಸು ಮುಖ್ಯಮಂತ್ರಿಯಾಗಿದ್ದಾಗ, ಹಿಂದುಳಿದವರಿಗೆ ಮೀಸಲಾತಿ ನೀಡುವ ಎಲ್.ಜಿ.ಹಾವನೂರು ಆಯೋಗದ ವರದಿಯನ್ನು ಜಾರಿಗೆ ತಂದಾಗ, ಅವರ ಮೇಲೆ ಇದೇ ರೀತಿ ದಾಳಿ ಆರಂಭವಾಗಿತ್ತು. ಇದು ವೀರಶೈವ ಲಿಂಗಾಯತರನ್ನು ಒಡೆಯುವ ತಂತ್ರವೆಂದು ಪಟ್ಟಭದ್ರ ಹಿತಾಸಕ್ತಿಗಳು ಆಕ್ರೋಶ ವ್ಯಕ್ತಪಡಿಸಿದ್ದವು. ಲಿಂಗಾಯತ ಪ್ರತ್ಯೇಕ ಧರ್ಮಕ್ಕೆ ಮಾನ್ಯತೆ ನೀಡುವ ಸಂಬಂಧದಲ್ಲಿ ಆರಂಭದಲ್ಲಿ ರಾಜ್ಯ ಸಚಿವ ಸಂಪುಟದಲ್ಲಿ ಒಮ್ಮತವಿರಲಿಲ್ಲ. ಕಾಂಗ್ರೆಸ್ ಪಕ್ಷದಲ್ಲೂ ವಿರೋಧವಿತ್ತು. ಕೆಲ ಸಚಿವರು ವಿರೋಧಿಸಿದರು. ಆದರೂ ಅದನ್ನೆಲ್ಲ ನಿಭಾಯಿಸಿ, ಮುಖ್ಯಮಂತ್ರಿಗಳು ಕೊನೆಗೆ ಮಾನ್ಯತೆಗೆ ಶಿಫಾರಸು ನೀಡಿದರು. ಈ ಶಿಫಾರಸು ಈಗ ಕೇಂದ್ರ ಸರಕಾರದ ಅಂಗಳದಲ್ಲಿದೆ. ಕೇಂದ್ರ ಸರಕಾರ ಈ ಶಿಫಾರಸು ಒಪ್ಪಿಕೊಂಡರೆ, ಲಿಂಗಾಯತರು ಧಾರ್ಮಿಕ ಅಲ್ಪಸಂಖ್ಯಾತ ಸ್ಥಾನಮಾನ ಪಡೆಯುತ್ತಾರೆ. ಇದರಿಂದ ಲಿಂಗಾಯತರು ನಡೆಸುವ ಶಿಕ್ಷಣ ಸಂಸ್ಥೆಗಳಿಗೆ ಕೊಂಚ ಅನುಕೂಲವಾಗಲಿದೆ. ಲಿಂಗಾಯತರು ಹಿಂದೂಗಳು ಅಲ್ಲವಾಗಿರುವುದರಿಂದ ಅಲ್ಪಸಂಖ್ಯಾತರ ಸ್ಥಾನಮಾನ ಪಡೆಯುವುದರಿಂದ ಸಂವಿಧಾನದ 30ನೇ ವಿಧಿ ಮೇರೆಗೆ ಅವರ ಶಿಕ್ಷಣ ಸಂಸ್ಥೆಗಳಿಗೆ ರಕ್ಷಣೆ ದೊರೆಯುತ್ತದೆ. ಆದರೆ ಅತ್ಯಂತ ಮುಖ್ಯ ಪ್ರಶ್ನೆಯೆಂದರೆ, ಬಸವಣ್ಣನವರ ಹೆಸರು ಹೇಳಿ ಪ್ರತ್ಯೇಕ ಧರ್ಮಕ್ಕಾಗಿ ಹೋರಾಡುತ್ತ ಬಂದ ಲಿಂಗಾಯತರಿಗೆ ಮತ್ತು ಅವರ ಶಿಕ್ಷಣ ಸಂಸ್ಥೆಗಳಿಗೆ ಕೆಲ ಅನುಕೂಲ ದೊರೆತರೆ, ಅವರು ತಮ್ಮ ಗುರಿ ಸಾಧಿಸಿದಂತೆ ಆಗುವುದೇ ಎಂಬ ಪ್ರಶ್ನೆಗೆ ಉತ್ತರ ಬೇಕಾಗಿದೆ. ಲಿಂಗಾಯತ ಪ್ರತ್ಯೇಕ ಧರ್ಮ ಮಾನ್ಯತೆ ದೊರೆತ ನಂತರ, ಲಿಂಗಾಯತರು ವಚನಕಾರರ ಸಮಾನತೆಯ ವೌಲ್ಯಗಳನ್ನು ಒಪ್ಪಿಕೊಳ್ಳುವರೇ? ವಚನ ಚಳವಳಿಗೆ ಸಂಪೂರ್ಣ ವಿರುದ್ಧವಾದ ಹಿಂದುತ್ವ ಸಿದ್ಧಾಂತ ದೂರ ಇಡುವರೇ? ಇಲ್ಲವೇ, ಬರೀ ಅಲ್ಪಸಂಖ್ಯಾತ ಪ್ರತ್ಯೇಕ ಧರ್ಮದ ಸೌಲಭ್ಯಕ್ಕಾಗಿ ಇದು ಸೀಮಿತಗೊಳ್ಳುವುದೇ? ಎಂಬ ಪ್ರಶ್ನೆಗಳಿಗೆ ಇನ್ನೂ ಉತ್ತರ ಹುಡುಕಬೇಕಿದೆ. ಬಸವಣ್ಣನವರು ಪ್ರತಿಪಾದಿಸಿದ ಸಮಾನತೆ ವೌಲ್ಯಗಳನ್ನು ಒಪ್ಪಿಕೊಳ್ಳುವುದು ಎಂದರೆ, ತಮಾಷೆಯಲ್ಲ. ಅಪ್ಪನು ನಮ್ಮ ಮಾದಾರ ಚೆನ್ನಯ್ಯ,

ಬೊಪ್ಪನು ನಮ್ಮ ಡೋಹರ ಕಕ್ಕಯ್ಯ

ಚಿಕ್ಕಯ್ಯ ನಮ್ಮಯ್ಯ ಕಾಣಯ್ಯ

ಅಣ್ಣನು ಕಿನ್ನರಿ ಬೊಮ್ಮಯ್ಯ

ಎಂದು ಬಸವಣ್ಣನವರು ಶ್ರೇಣೀಕೃತ ಜಾತಿ ವ್ಯವಸ್ಥೆಯ ಅತ್ಯಂತ ಕೆಳ ಹಂತಕ್ಕೆ ಹೋಗಿ, ನಾನು ನಿಮ್ಮವರೊಳಗೆ ಒಬ್ಬ ಎಂದು ಹೇಳಿಕೊಂಡರು. ಆದರೆ, ಮಾದಾರ ಚೆನ್ನಯ್ಯ, ಡೋಹರ ಕಕ್ಕಯ್ಯ ಅವರ ಹೆಸರು ಕೇಳಿದರೆ, ಮೈಲಿಗೆಯಾಯಿತೆಂದು ಸ್ನಾನ ಮಾಡಿ ಬರುವವರು ನಿಜವಾಗಿ ಬಸವಣ್ಣ ಕಟ್ಟ ಬಯಸಿದ ಜಾತಿ ರಹಿತ ಸಮಾಜವನ್ನು ಒಪ್ಪಿಕೊಳ್ಳುವರೇ?

ಧರ್ಮವಿಲ್ಲದವರಿಗಾಗಿ ಹೊಸ ಧರ್ಮ ಕಟ್ಟಿಕೊಟ್ಟ ಬಸವಣ್ಣನವರ ಸಾಮಾಜಿಕ ಪರಿಕಲ್ಪನೆ ಅತ್ಯಂತ ಅದ್ಭುತವಾಗಿದೆ. ಬ್ರಾಹ್ಮಣನಾಗಿ ಜನಿಸಿ, ಕೊರಳಲ್ಲಿದ್ದ ಜನಿವಾರವನ್ನೇ ಹರಿದು ಬಿಸಾಡಿದ ಬಸವಣ್ಣ ತನ್ನ ಜಾತಿಯ ಅಸ್ಮಿತೆಯನ್ನು ಇಲ್ಲಿ ಹೇಳಿಕೊಳ್ಳದೆ ಮಾದಾರ ಚೆನ್ನಯ್ಯನ ಮಗ ಎಂದು ಹೇಳಿಕೊಂಡರು. ಆದರೆ ಈಗ ಲಿಂಗಾಯತ ಪ್ರತ್ಯೇಕ ಧರ್ಮಕ್ಕಾಗಿ ಹೋರಾಟ ಮಾಡುವ ಎಷ್ಟು ಜನರಿಗೆ ಆ ಬದ್ಧತೆಯಿದೆ ಎಂಬ ಪ್ರಶ್ನೆ ನಮ್ಮ ಮುಂದಿದೆ. ಪ್ರತ್ಯೇಕ ಲಿಂಗಾಯತ ಧರ್ಮಕ್ಕಾಗಿ ಹೋರಾಡಿ, ಹಿಂದುತ್ವದ ಬಂಧನವನ್ನು ಬಿಡಿಸಿಕೊಳ್ಳುವುದರಲ್ಲಿ ತೋರಿದ ಆಸಕ್ತಿಯನ್ನೇ ಜಾತಿ ರಹಿತ ಸಮಾಜದಲ್ಲೂ ತೋರಿಸಬೇಕಿದೆ. ಲಿಂಗಾಯತರಲ್ಲಿ ಜಾತಿ-ಉಪಜಾತಿಗಳಿವೆ. ಪಂಚಮಸಾಲಿ ಸಂಘ, ಬಣಜಿಗರ ಸಂಘ, ಗಾಣಿಗರ ಸಂಘ, ಶಿವಸಿಂಪಿಗಳ ಸಂಘ ಹೀಗೆ ನಾನಾ ಹೆಸರಿನ ಉಪಜಾತಿಗಳ ಸಂಘಗಳಿವೆ. ಈ ಉಪಜಾತಿಗಳಲ್ಲಿ ವೈವಾಹಿಕ ಸಂಬಂಧವಿಲ್ಲ. ಪ್ರತ್ಯೇಕ ಲಿಂಗಾಯತ ಧರ್ಮದ ಚಳವಳಿಯ ನೇತೃತ್ವ ವಹಿಸಿದ ಸಚಿವ ಎಂ.ಬಿ.ಪಾಟೀಲರೇನೋ ರೆಡ್ಡಿ ಸಮುದಾಯದ ಡಾ. ಸಿ.ಆರ್.ಬಿದರಿ ಅವರ ಮಗಳನ್ನು ಮದುವೆಯಾಗಿ ಜಾತಿ ಕಟ್ಟಳೆಯನ್ನು ಮುರಿದಿರಬಹುದು. ಆದರೆ, ಎಷ್ಟು ಜನ ಆ ದಿಕ್ಕಿನತ್ತ ಹೆಜ್ಜೆಯಿಡುತ್ತಾರೆ ಎಂಬುದನ್ನು ಕಾದು ನೋಡಬೇಕು. ಸರಕಾರಿ ಸವಲತ್ತುಗಳಿಗೆ ಪ್ರತ್ಯೇಕ ಧರ್ಮದ ಬೇಡಿಕೆ ಮುಂದಿಟ್ಟರೆ ಸಾಲದು. ಬಸವಣ್ಣನವರು ಪ್ರತಿಪಾದಿಸಿದ ವಚನ ಚಳವಳಿಯ ವೌಲ್ಯಗಳನ್ನು ಒಪ್ಪಿಕೊಂಡು ಇಡೀ ದೇಶಕ್ಕೆ ಅದರ ಸಂದೇಶ ಸಾರಬೇಕಿದೆ. ಈ ನಿಟ್ಟಿನಲ್ಲಿ ಪ್ರಗತಿಪರ ಮಠಾಧೀಶರಾದ ಗದುಗಿನ ತೋಂಟದಾರ್ಯ ಸ್ವಾಮೀಜಿ, ಮುಂಡರಗಿಯ ನಿಜಗುಣಾನಂದ ಸ್ವಾಮೀಜಿ, ಜಯಮೃತ್ಯುಂಜಯ ಸ್ವಾಮೀಜಿ, ಮಾತೆ ಮಹಾದೇವಿ ಹಾಗೂ ಇವರೆಲ್ಲರಿಗಿಂತ ಮುಂಚೆಯೇ ಜಾತಿಯನ್ನು ಧಿಕ್ಕರಿಸಿ ನಿಂತ ವೀರಭದ್ರ ಚನ್ನಮಲ್ಲಸ್ವಾಮೀಜಿಯವರ ಪಾತ್ರ ತುಂಬಾ ಮುಖ್ಯವಾಗಿದೆ.

ಬಸವಣ್ಣನವರ ಹೆಸರು ಹೇಳಿ, ಪ್ರತ್ಯೇಕ ಧರ್ಮದ ಸ್ಥಾನಮಾನ ಪಡೆದ ನಂತರ ಬಸವಣ್ಣನವರು ಮಾಡಿದಂತೆ ಜಾತಿ ರಹಿತ ಮದುವೆಗಳನ್ನು ನೂತನ ಲಿಂಗಾಯತ ಧರ್ಮ ಪ್ರೋತ್ಸಾಹಿಸಬೇಕಿದೆ. ಜಾತಿ ರಹಿತ ಮದುವೆ ಮಾತ್ರವಲ್ಲ, ಅಂತರಧರ್ಮೀಯ ಮದುವೆಗಳಿಗೂ ಬೆಂಬಲ ನೀಡಬೇಕಿದೆ. ಮಾದಾರ ಚೆನ್ನಯ್ಯ ಹೆಸರಿಟ್ಟುಕೊಂಡು ಸಂಘ ಪರಿವಾರದ ಕಾರ್ಯಕ್ರಮಗಳಲ್ಲಿ ಭಾಗವಹಿಸುವ ಮಠಾಧೀಶರನ್ನು ಲಿಂಗಾಯತರು ದೂರವಿಡಬೇಕು. ಆಗ ಮಾತ್ರ ಪ್ರತ್ಯೇಕ ಧರ್ಮಕ್ಕಾಗಿ ಮಾಡಿದ ಹೋರಾಟ ಸಾರ್ಥಕವಾಗುತ್ತದೆ. ಲಿಂಗಾಯತ ಪ್ರತ್ಯೇಕ ಧರ್ಮಕ್ಕೆ ಬಸವ ಮಾರ್ಗವೇ ಅಂತಿಮವಾಗಬೇಕು. ಬಸವಣ್ಣನವರು ಧಿಕ್ಕರಿಸಿದ ವೈದಿಕಶಾಹಿ ಹಿಂದುತ್ವವನ್ನು ದೂರವಿಡಬೇಕು. ಬಸವಣ್ಣನವರು ಬದುಕಿನುದ್ದಕ್ಕೂ ವಿರೋಧಿಸಿದ ಅಸಮಾನತೆ, ಕಂದಾಚಾರ ಮತ್ತು ಮೂಢನಂಬಿಕೆಗಳನ್ನು ರಾಹುಕಾಲ, ಗುಳಿಕಕಾಲಗಳನ್ನು ದೂರವಿಡುವ ಮೂಲಕ ನೂತನ ಲಿಂಗಾಯತ ಧರ್ಮಕ್ಕೆ ಹೊಸ ಚೈತನ್ಯವನ್ನು ನೀಡಬೇಕಿದೆ. ಅದು ಸಾಧ್ಯವಾಗುವುದೇ ಎಂಬುದು ನಮ್ಮ ಮುಂದಿರುವ ಪ್ರಶ್ನೆ. ಈ ಪ್ರಶ್ನೆಗೆ ಉತ್ತರ ದೊರಕಲು ಇನ್ನಷ್ಟು ಕಾಲ ಕಾಯಬೇಕು.

Writer - ಸನತ್ ಕುಮಾರ್ ಬೆಳಗಲಿ

contributor

Editor - ಸನತ್ ಕುಮಾರ್ ಬೆಳಗಲಿ

contributor

Similar News