ನೆನಪಿರಲಿ... ಇವು ವಿಟಾಮಿನ್ ಡಿ ಕೊರತೆಯ ಲಕ್ಷಣಗಳು

Update: 2018-03-31 11:37 GMT

ವಿಟಾಮಿನ್ ಡಿ ಶರೀರದ ವಿಭಿನ್ನ ಕಾರ್ಯ ನಿರ್ವಹಣೆಗಳ ಮೇಲೆ ಪ್ರಭಾವವನ್ನು ಬೀರುವ ಮಹತ್ವದ ವಿಟಾಮಿನ್ ಆಗಿದೆ. ಇತರ ಅಗತ್ಯ ವಿಟಾಮಿನ್‌ಗಳಿಗೆ ಹೋಲಿಸಿದರೆ ಅದು ಒಂದು ಹಾರ್ಮೋನ್‌ನಂತೆ ಕಾರ್ಯಾಚರಿಸುತ್ತದೆ ಮತ್ತು ನಮ್ಮ ಶರೀರದ ಪ್ರತಿಯೊಂದು ಜೀವಕೋಶವು ಅದನ್ನು ಪಡೆದುಕೊಳ್ಳುತ್ತದೆ.

ಸನ್‌ಶೈನ್ ವಿಟಾಮಿನ್ ಎಂದೂ ಹೆಸರಾಗಿರುವ ವಿಟಾಮಿನ್ ಡಿ ಚರ್ಮವು ಸೂರ್ಯನ ಬಿಸಿಲಿಗೆ ತೆರೆದುಕೊಂಡಾಗ ಶರೀರದಲ್ಲಿ ಉತ್ಪತ್ತಿಯಾಗುತ್ತದೆ. ನಮ್ಮ ಶರೀರವು ನಾವು ಸೇವಿಸಿದ ಆಹಾರದಲ್ಲಿಯ ಕ್ಯಾಲ್ಸಿಯಂ ಅನ್ನು ಹೀರಿಕೊಳ್ಳಲು ವಿಟಾಮಿನ್ ಡಿ ನೆರವಾ ಗುವುದರಿಂದ ಮೂಳೆಗಳ ಸದೃಢತೆಯನ್ನು ಕಾಯ್ದುಕೊಳ್ಳಲು ಅದು ಅಗತ್ಯವಾಗಿದೆ.

ತೈಲದ ಅಂಶವಿರುವ ಮೀನುಗಳು, ಮೀನಿನ ಯಕೃತ್ತು, ಮೊಟ್ಟೆಯ ಹಳದಿ ಭಾಗ, ಧಾನ್ಯಗಳಂತಹ ಆಹಾರಗಳೂ ವಿಟಾಮಿನ್ ಡಿ ಅನ್ನು ಒದಗಿಸುತ್ತವೆ. ಪ್ರತಿದಿನ 400-800 ಐಯುಗಳಷ್ಟು ವಿಟಾಮಿನ್ ಡಿ ಸೇವನೆ ಅಗತ್ಯವಾಗಿದೆ. ಈ ವಿಟಾಮಿನ್‌ನ ಕೊರತೆ ರಿಕೆಟ್ಸ್ ರೋಗಕ್ಕೆ ಕಾರಣವಾಗುತ್ತದೆ. ವಿಶ್ವದಲ್ಲಿ ಸುಮಾರು ಒಂದು ಶತಕೋಟಿ ಜನರು ವಿಟಾಮಿನ್ ಡಿ ಕೊರತೆಯಿಂದ ಬಳಲುತ್ತಿದ್ದಾರೆ ಎಂದು ಅಂದಾಜಿಸಲಾಗಿದೆ.

ನಮ್ಮ ಶರೀರದಲ್ಲಿ ವಿಟಾಮಿನ್ ಡಿ ಕೊರತೆಯನ್ನು ಸೂಚಿಸುವ ಲಕ್ಷಣಗಳು ಹೀಗಿವೆ.......

► ಅತಿಯಾಗಿ ಬೆವರುವಿಕೆ

ಹಣೆಯಲ್ಲಿ ಅಥವಾ ಕೈಗಳಲ್ಲಿ ಅತಿಯಾದ ಬೆವರು ಕಾಣಿಸಿಕೊಳ್ಳುವುದು ವಿಟಾಮಿನ್ ಡಿ ಕೊರತೆಯ ಮೊದಲ ಲಕ್ಷಣವಾಗಿದೆ. ಅದರಲ್ಲೂ ಕೈಗಳು ಅತಿಯಾಗಿ ಬೆವರುವುದು ಈ ಕೊರತೆಯ ಖಚಿತ ಲಕ್ಷಣವಾಗಿದೆ. ಬೆವರುವಿಕೆಯ ರೀತಿಯಲ್ಲಿ ಅಥವಾ ಬೆವರಿನ ಪ್ರಮಾಣದಲ್ಲಿ ಬದಲಾವಣೆ ಕಂಡು ಬರುತ್ತಿದೆಯೇ ಎನ್ನುವುದು ಗಮನಿಸಬೇಕಾದ ಅಂಶವಾಗಿದೆ. ಸಿರೊಟೋನಿನ್ ಮಟ್ಟವನ್ನು ಕಾಯ್ದುಕೊಳ್ಳುವಲ್ಲಿ ಈ ವಿಟಾಮಿನ್ ಪ್ರಮುಖ ಪಾತ್ರವನ್ನು ವಹಿಸುತ್ತದೆ ಮತ್ತು ಸಿರೊಟೋನಿನ್ ಮಟ್ಟದಲ್ಲಿ ಕುಸಿತವುಂಟಾದರೆ ಅದು ಖಿನ್ನತೆಯಂತಹ ಭಾವನೆಗಳಿಗೆ ಕಾರಣವಾಗುತ್ತದೆ.

► ಅನಿರೀಕ್ಷಿತ ನಿಶ್ಶಕ್ತಿ

ವಿಟಾಮಿನ್ ಡಿ ಕೊರತೆಯುಂಟಾದಾಗ ಚೆನ್ನಾಗಿ ನಿದ್ರೆ ಮಾಡಿದ್ದರೂ ಅತಿಯಾದ ಬಳಲಿಕೆಯ ಅನುಭವವಾಗುತ್ತದೆ. ಯುವಕರಾಗಲಿ ವಯಸ್ಸಾದವರಾಗಲಿ, ಆಹಾರದಲ್ಲಿ ಸೂಕ್ತ ಪ್ರಮಾಣದಲ್ಲಿ ವಿಟಾಮಿನ್ ಡಿ ಸೇವಿಸಿದರೆ ಶರೀರದ ಪ್ರತಿಯೊಂದು ಜೀವಕೋಶ ಮತ್ತು ಅಂಗಾಂಶ ಶಕ್ತಿಯುತವಾಗಿರುತ್ತವೆ. ವಿಟಾಮಿನ್ ಡಿ ಪೂರಕಗಳನ್ನು ಸೇವಿಸು ವುದರಿಂದ ಸ್ನಾಯುಗಳ ಮೇಲಿನ ನಿಯಂತ್ರಣವು ಹೆಚ್ಚುತ್ತದೆ ಮತ್ತು ನಿಶ್ಶಕ್ತಿಯು ನಿವಾರಣೆಯಾಗುತ್ತದೆ.

► ಮೂಳೆ ಮುರಿತ

ವ್ಯಕ್ತಿಯು 30 ವರ್ಷ ಪ್ರಾಯವನ್ನು ದಾಟಿದ ನಂತರ ಅಸ್ಥಿಮಜ್ಜೆಯ ನಿರ್ಮಾಣವು ಸ್ಥಗಿತಗೊಳ್ಳುತ್ತದೆ. ವಿಟಾಮಿನ್ ಡಿ ಕೊರತೆಯಿಂದಾಗಿ ಅಸ್ಥಿರಂಧ್ರತೆಯ ಲಕ್ಷಣಗಳು ಬೇಗನೆ ಕಾಣಿಸಿಕೊಳ್ಳುತ್ತವೆ. ಕಡಿಮೆ ಮೂಳೆ ಖನಿಜಾಂಶ ಸಾಂದ್ರತೆಯು ಮೂಳೆಗಳಲ್ಲಿಯ ಕ್ಯಾಲ್ಸಿಯಂ ಮತ್ತು ಇತರ ಖನಿಜಾಂಶಗಳು ನಷ್ಟಗೊಂಡಿವೆ ಎನ್ನುವುದನ್ನು ಸೂಚಿಸುತ್ತದೆ. ಕ್ಯಾಲ್ಸಿಯಂ ಹೀರುವಿಕೆಯಲ್ಲಿ ಮತ್ತು ಮೂಳೆಗಳ ಚಯಾಪಚಯ ಪ್ರಕ್ರಿಯೆಯಲ್ಲಿ ವಿಟಾಮಿನ್ ಡಿ ಪ್ರಮುಖ ಪಾತ್ರವನ್ನು ನಿರ್ವಹಿಸುತ್ತದೆ.

► ಗಾಯಗಳ ನಿಧಾನ ಮಾಯುವಿಕೆ

ನಿಮ್ಮ ಶರೀರಕ್ಕೆ ಆಗಿರುವ ಗಾಯವು ಮಾಯುವುದು ವಿಳಂಬವಾಗುತ್ತಿದ್ದರೆ ಅದು ವಿಟಾಮಿನ್ ಡಿ ಕೊರತೆಯ ಲಕ್ಷಣವಾಗಿರಬಹುದು. ಉರಿಯೂತವನ್ನು ನಿಯಂತ್ರಿಸು ವಲ್ಲಿ ಮತ್ತು ಸೋಂಕಿನ ವಿರುದ್ಧ ಹೋರಾಡುವಲ್ಲಿ ವಿಟಾಮಿನ್ ಡಿ ಪಾತ್ರವು ಗಾಯಗಳ ಮಾಯುವಿಕೆಗೆ ಅಗತ್ಯವಾಗಿದೆ.

► ಖಿನ್ನತೆ

ಖಿನ್ನತೆಯು ವಿಟಾಮಿನ್ ಡಿ ಕೊರತೆಯನ್ನು ಸೂಚಿಸುತ್ತದೆ. ವಿಶೇಷವಾಗಿ ವಯಸ್ಸಾ ದವರಲ್ಲಿ ಕಾಣಿಸಿಕೊಳ್ಳುವ ಖನ್ನತೆಗೂ ವಿಟಾಮಿನ್ ಡಿ ಕೊರತೆಗೂ ನಿಕಟ ನಂಟಿದೆ ಎನ್ನುವುದು ಸಂಶೋಧಕರ ಅಭಿಪ್ರಾಯವಾಗಿದೆ. ಮಿದುಳಿನ ಕಾರ್ಯ ನಿರ್ವಹಣೆಗೆ ಈ ವಿಟಾಮಿನ್ ಮಹತ್ವದ್ದಾಗಿದೆ. ಪೌಷ್ಟಿಕಾಂಶಗಳ ಮಟ್ಟದಲ್ಲಿ ವ್ಯತ್ಯಯವು ಖಿನ್ನತೆ ಮತ್ತು ಇತರ ಮಾನಸಿಕ ಅಸ್ವಸ್ಥತೆಗಳನ್ನು ಉಂಟು ಮಾಡುವಲ್ಲಿ ಪ್ರಮುಖ ಪಾತ್ರವನ್ನು ಹೊಂದಿರಬಹುದು. ಹೀಗಾಗಿ ಖಿನ್ನತೆಯುಂಟಾದಾಗ ವಿಟಾಮಿನ್ ಡಿ ಸಮೃದ್ಧವಾಗಿರುವ ಆಹಾರಗಳ ಸೇವನೆ ಅದನ್ನು ನಿವಾರಿಸುವಲ್ಲಿ ಪರಿಣಾಮಕಾರಿಯಾಗಿರುತ್ತದೆ.

► ಮೂಳೆ ಮತ್ತು ಬೆನ್ನುನೋವು

ಮೂಳೆಗಳ ಆರೋಗ್ಯವನ್ನು ಕಾಪಾಡಿಕೊಳ್ಳುವಲ್ಲಿ ಪಾತ್ರವನ್ನು ವಹಿಸುವ ವಿಟಾಮಿನ್ ಡಿ ಸೂಕ್ತ ಕ್ಯಾಲ್ಸಿಯಂ ಹೀರಿಕೊಳ್ಳುವಿಕೆಗೆ ನೆರವಾಗುತ್ತದೆ. ಮೂಳೆಗಳಲ್ಲಿ ಮತ್ತು ಕೆಳಬೆನ್ನಿನಲ್ಲಿ ಕಾಣಿಸಿಕೊಳ್ಳುವ ನೋವು ರಕ್ತದಲ್ಲಿ ವಿಟಾಮಿನ್ ಡಿ ಮಟ್ಟವು ಕುಸಿದಿದೆ ಎನ್ನುವದಕ್ಕೆ ಸೂಚನೆಯಾಗಿದೆ. ವಿಟಾಮಿನ್ ಡಿ ಕೊರತೆಯಿರುವವರಲ್ಲಿ ತೀವ್ರ ಬೆನ್ನುನೋವು ಕಾಣಿಸಿಕೊಳ್ಳುವ ಸಾಧ್ಯತೆಗಳು ಹೆಚ್ಚಾಗಿವೆ ಎನ್ನುತ್ತಾರೆ ತಜ್ಞರು. ಕಾಲುಗಳು, ಪಕ್ಕೆಲಬುಗಳು ಮತ್ತು ಸಂದುಗಳಲ್ಲಿಯೂ ಮೂಳೆಗಳ ನೋವು ಕಾಣಿಸಿಕೊಳ್ಳಬಹುದು.

► ದಣಿವು

ತೀವ್ರವಾದ ದಣಿವು ಕಾಣಿಸಿಕೊಳ್ಳುವುದು ವಿಟಾಮಿನ್ ಡಿ ಕೊರತೆಯ ಲಕ್ಷಣ ಗಳಲ್ಲೊಂದಾಗಿದೆ. ಈ ವಿಟಾಮಿನ್ ಕೊರತೆಯು ಆಸ್ಟಿಯೊಮಲಾಸಿಯಾ ಎಂಬ ಕಾಯಿಲೆಗೆ ಕಾರಣವಾಗುತ್ತದೆ. ಮಾಂಸಖಂಡಗಳಲ್ಲಿ ನಿಶ್ಶಕ್ತಿಯು ಈ ಕಾಯಿಲೆಯ ಸಾಮಾನ್ಯ ಲಕ್ಷಣವಾಗಿದ್ದು, ದಣಿವು ಮತ್ತು ಬಳಲಿಕೆಯನ್ನುಂಟು ಮಾಡುತ್ತದೆ.

► ಆಗಾಗ್ಗೆ ಕಾಯಿಲೆ

ನಮ್ಮ ಶರೀರದ ರೋಗ ನಿರೋಧಕ ಶಕ್ತಿಯನ್ನು ಬಲಗೊಳಿಸುವುದು ವಿಟಾಮಿನ್ ಡಿ ಮಾಡುವ ಅತ್ಯಂತ ಮುಖ್ಯ ಕೆಲಸವಾಗಿದೆ. ಅದು ಸೋಂಕುಗಳ ವಿರುದ್ಧ ಹೋರಾಡುವ ಜೀವಕೋಶಗಳೊಂದಿಗೆ ನೇರವಾಗಿ ಪ್ರತಿವರ್ತಿಸುತ್ತದೆ. ವಿಟಾಮಿನ್ ಡಿ ಕೊರತೆ ಯುಂಟಾದರೆ ಆಗಾಗ್ಗೆ ಅನಾರೋಗ್ಯ, ವಿಶೇಷವಾಗಿ ಶೀತ ಮತ್ತು ಜ್ವರ ಕಾಡುತ್ತವೆ.

► ತಲೆಗೂದಲು ಉದುರುವಿಕೆ

ಕೆಲವೊಮ್ಮೆ ಮಾನಸಿಕ ಒತ್ತಡ ತಲೆಗೂದಲು ಉದುರಲು ಕಾರಣವಾಗಿದೆಯಾದರೂ ಈ ಸಮಸ್ಯೆ ತೀವ್ರವಾಗಿದ್ದರೆ ಅದಕ್ಕೆ ವಿಟಾಮಿನ್ ಡಿ ಕೊರತೆಯು ಕಾರಣವಾಗಿರಬಹುದು. ಮಹಿಖೆಯರಲ್ಲಿ ತಲೆಗೂದಲು ಉದುರುವಿಕೆಗೂ ವಿಟಾಮಿನ್ ಡಿ ಮಟ್ಟ ಕುಸಿತಕ್ಕೂ ನೇರ ಸಂಬಂಧವಿದೆ. ವಿಟಾಮಿನ್ ಡಿ ಹೊಸಕೂದಲು ಹುಟ್ಟುವುದನ್ನು ಪ್ರಚೋದಿಸುವ ಜೊತೆಗೆ ಇರುವ ಕೂದಲನ್ನು ಬಲಗೊಳಿಸುತ್ತದೆ.

► ಮಾಂಸಖಂಡಗಳಲ್ಲಿ ನೋವು

ಮಕ್ಕಳು ಮತ್ತು ವಯಸ್ಕರಲ್ಲಿ ಮಾಂಸಖಂಡಗಳ ನೋವಿಗೆ ವಿಟಾಮಿನ್ ಡಿ ಕೊರತೆಯು ಸಂಭಾವ್ಯ ಕಾರಣವಾಗಿದೆ ಎನ್ನುವುದನ್ನು ಕೆಲವು ಅಧ್ಯಯನಗಳು ತೋರಿಸಿವೆ. ತೀವ್ರ ಮಾಂಸಖಂಡಗಳ ನೋವಿನಿಂದ ಬಳಲುತ್ತಿರುವ ಶೇ.71ರಷ್ಟು ಜನರಲ್ಲಿ ವಿಟಾಮಿನ್ ಡಿ ಕೊರತೆಯಿರುವುದು ಕಂಡು ಬಂದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News