ಚುನಾವಣೆಯೂ ಕನ್ನಡಿಗರ ಅಸ್ಮಿತೆಯೂ...

Update: 2018-04-07 18:44 GMT
ಚುನಾವಣೆಯೂ ಕನ್ನಡಿಗರ ಅಸ್ಮಿತೆಯೂ...
  • whatsapp icon

ಸಿದ್ದರಾಮಯ್ಯನವರು ಮಂಡಿಸಿರುವ ಪ್ರಸ್ತಾಪಗಳು ಬಿಜೆಪಿಯನ್ನು ‘ಬಿಸಿತುಪ್ಪನುಂಗಲೂ ಆಗದು, ಉಗುಳಲೂ ಆಗದು’ ಎನ್ನುವಂಥ ಸ್ಥಿತಿಗೆ ನೂಕಿವೆ. ಕನ್ನಡ ಬಾವುಟ, ಕನ್ನಡ ಭಾಷೆ, ಕನ್ನಡ ಸಂಸ್ಕೃತಿಗಳ ಅಸ್ಮಿತೆ, ಕಲ್ಯಾಣ ಕ್ರಾಂತಿಯ ಆಶಯಗಳು, ಹಣಕಾಸು ಆಯೋಗದ ಮಾನದಂಡಗಳು ಇವುಗಳ ಬಗ್ಗೆ ಬಿಜೆಪಿ ರಾಜ್ಯ ಶಾಖೆಯ ಆಕ್ಷೇಪಣೆ ಏನಿರಲಾರದು. ಇವನ್ನು ವಿರೋಧಿಸಿ ಚುನಾವಣೆ ಗೆಲ್ಲುವುದು ಕಷ್ಟವೆಂಬುದು ಅದಕ್ಕೆ ಗೊತ್ತಿದೆ. ಆದರೆ ಬಿಜೆಪಿಯ ರಾಷ್ಟ್ರೀಯ ನೀತಿ ಇದನ್ನು ಒಪ್ಪುವುದಿಲ್ಲ.


ಕರ್ನಾಟಕ ವಿಧಾನ ಸಭೆಗೆ ಮತ್ತೊಂದು ಚುನಾವಣೆ ಸನ್ನಿಹಿತವಾಗಿದೆ. ಬಣ್ಣದ ವೇಷಗಳು-ಹುಲಿವೇಷ, ನರಿ ವೇಷ, ಕಿರಾತ ವೇಷ ಇತ್ಯಾದಿಗಳು-ವಿಜೃಂಭಿಸುತ್ತಿವೆ. ಈ ಚುನಾವಣೆಯ ಮಹತ್ವ ಮತ್ತು ಅದರ ರಾಷ್ಟ್ರವ್ಯಾಪಿ ಪರಿಣಾಮ ಕುರಿತು ಗಂಭೀರ ಚರ್ಚೆಗಳು ಸಾಗಿವೆ. ದೂರದರ್ಶನ ವಾಹಿನಿಗಳು, ಕನ್ನಡ ಭಾಷೆ-ಸಾಹಿತ್ಯ, ಕರ್ನಾಟಕದ ಚರಿತ್ರೆ-ಭೂಗೋಳ ಗೊತ್ತಿಲ್ಲದ ‘ತಜ್ಞ’ರುಗಳನ್ನು ಕೂರಿಸಿಕೊಂಡು, ಬಿಜೆಪಿ ಪ್ರಶ್ನಾವಳಿಗಳನ್ನು ಅವರ ಮುಂದಿಟ್ಟು ಸಿದ್ದರಾಮಯ್ಯ ಅವರ ಸರಕಾರದ ಬಗ್ಗೆ ತೀರ್ಪುಗಳನ್ನು ಕೊಡುವ ಕಸರತ್ತು ನಡೆಸಿವೆ. ಕರ್ನಾಟಕದ ಈ ಚುನಾವಣೆ ಫಲಿತಾಂಶ ಈ ವರ್ಷಾಂತ್ಯದಲ್ಲಿ ನಡೆಯಲಿರುವ ರಾಜಸ್ಥಾನ ಮತ್ತು ಮಧ್ಯಪ್ರದೇಶ ರಾಜ್ಯಗಳ ವಿಧಾನ ಸಭೆ ಚುನಾವಣೆ ಮತ್ತು 2019ರ ಸಾರ್ವತ್ರಿಕ ಚುನಾವಣೆಯ ಮೇಲೆ ಪ್ರಭಾವ ಬೀರಲಿದೆ ಎಂಬುದೆಲ್ಲ ಈಗ ಚರ್ವಿತಚರ್ವಣ. ಆದರೆ ಈ ಚುನಾವಣೆ ಎರಡು ವಿಶೇಷ ಕಾರಣಗಳಿಂದ ನಮಗೆ ಮುಖ್ಯ ವಾಗುತ್ತದೆ. 1.ರಾಷ್ಟ್ರೀಯತೆ ಹೆಸರಿನಲ್ಲಿ ಎಲ್ಲವನ್ನೂ ಏಕತ್ರಗೊಳಿಸುವ ಕೇಂದ್ರ ಸರಕಾರದ ಧೋರಣೆಯಿಂದಾಗಿ ರಾಜ್ಯಗಳ ಅಸ್ಮಿತೆಗೆ ಒದಗಿ ರುವ ಅಪಾಯ. 2. ಒಕ್ಕೂಟ ವ್ಯವಸ್ಥೆಯೊಳಗೆ ರಾಜ್ಯಗಳ ಸ್ವಾಯತ್ತತೆ.

 ಕರ್ನಾಟಕಕ್ಕೆ ತನ್ನದೇ ಆದ ಧ್ವಜ ಅಗತ್ಯವೆಂದು ಸಮರ್ಥಿಸಿಕೊಳ್ಳುವ ಮೂಲಕ ಹಾಗೂ ರಾಜ್ಯಗಳ ಒಕ್ಕೂಟದ ಪ್ರಶ್ನೆಯನ್ನು ಎತ್ತುವ ಮೂಲಕ ಮುಖ್ಯ ಮಂತ್ರಿ ಸಿದ್ದರಾಮಯ್ಯನವರು ರಾಜ್ಯಗಳ ಅಸ್ಮಿತೆ ಮತ್ತು ಸ್ವಾಯತ್ತತೆ ಬಗ್ಗೆ ರಾಷ್ಟ್ರವ್ಯಾಪಿ ಚರ್ಚೆಯನ್ನು ಹುಟ್ಟುಹಾಕಿದ್ದಾರೆ. ಕರ್ನಾಟಕ ಸರಕಾರ ತನ್ನ ಅಸ್ಮಿತೆಯ ಕುರುಹಾಗಿ ನಾಡ ಧ್ವಜವೊಂದನ್ನು ಅಂಗೀಕರಿಸಿ ಅದನ್ನು ಕೇಂದ್ರದ ಅನುಮೋದನೆಗೆ ಕಳುಹಿಸಿದೆ. ಲಿಂಗಾಯತ ಧರ್ಮಕ್ಕೆ ಪ್ರತ್ಯೇಕ ಧರ್ಮದ ಸ್ಥಾನಮಾನ ನೀಡುವ ನಿರ್ಣಯವನ್ನು ಅಂಗೀಕರಿಸಿರುವ ಕರ್ನಾಟಕ ಸರಕಾರ ಅದನ್ನೂ ಕೇಂದ್ರದ ಒಪ್ಪಿಗೆಗೆ ಕಳುಹಿಸಿದೆ. ಹನ್ನೆರಡನೆಯ ಶತಮಾನದಲ್ಲಿ ಪುರೋಹಿತ ಶಾಹಿ ವಿರುದ್ಧ ಬಂಡಾಯವೆದ್ದು ಬಸವೇಶ್ವರರು ಸಾಧಿಸಿದ ಸಮಾನತೆಯ ‘ಕಲ್ಯಾಣ’ ಕ್ರಾಂತಿಯೂ ಕನ್ನಡಿಗರ ಅಸ್ಮಿತೆಯೇ. ಕೇಂದ್ರ ಸರಕಾರ ರಾಜ್ಯದ ಈ ಎರಡು ಮಹತ್ವದ ನಿರ್ಣಯಗಳಿಗೆ ಒಪ್ಪಿಗೆ ನೀಡುವುದೋ ತಿರಸ್ಕರಿಸು ವುದೋ, ಅದು ಕಾದು ನೋಡಬೇಕಾದ ಸಂಗತಿ. ಆದರೆ ಇವೆರಡರ ಸಾಂಕೇತಿಕ ಮಹತ್ವವನ್ನು ಯಾರೂ ಅಲ್ಲಗಳೆಯಲಾರರು. ಪ್ರತ್ಯೇಕ ಧ್ವಜದ ಬೇಡಿಕೆಗೆ ಕೇಂದ್ರ ಸರಕಾರ ಒಪ್ಪಿಗೆ ನೀಡಿದರೆ ಕರ್ನಾಟಕ ರಾಷ್ಟ್ರದಲ್ಲಿ ಪ್ರತ್ಯೇಕ ನಾಡ ಧ್ವಜ ಹೊಂದಿರುವ ಎರಡನೆಯ ರಾಜ್ಯವಾಗಲಿದೆ. ಪ್ರಸ್ತುತ ಜಮ್ಮು-ಕಾಶ್ಮೀರ ಪ್ರತ್ಯೇಕ ಧ್ವಜ ಹೊಂದಿರುವ ಏಕೈಕ ರಾಜ್ಯವಾಗಿದೆ.

ರಾಷ್ಟ್ರ ಧ್ವಜ ಇರುವಾಗ ರಾಜ್ಯಗಳಿಗೆ ಪ್ರತ್ಯೇಕ ಧ್ವಜದ ಅಗತ್ಯವಿಲ್ಲ ಎನ್ನುವ ವಾದವೂ ಇದೆ. ನಮ್ಮ ಸಂವಿಧಾನದಲ್ಲಿ ರಾಜ್ಯಗಳು ತಮ್ಮ ಅಸ್ಮಿತೆಯಾಗಿ ಪ್ರತ್ಯೇಕ ಧ್ವಜ ಹೊಂದಿರಬಾರದು ಎಂದೇನೂ ಇಲ್ಲ. ನಮ್ಮಲ್ಲಿ ಉಪರಾಷ್ಟ್ರೀಯತೆ, ಉಪಸಂಸ್ಕೃತಿ, ಸಾಂಸ್ಕೃತಿಕ ಸ್ವಾಯತ್ತತೆ, ಭಾಷಾ ಪ್ರೀತಿ, ವಿಶಿಷ್ಟ ಜೀವನ ಶೈಲಿ-ಈ ಪ್ರಸ್ತಾಪಗಳು ಬಂದಾಗ ಅನುಮಾನದ ದೃಷ್ಟಿಯಿಂದಲೇ ನೋಡುವುದರಿಂದಾಗಿ ಬಹುಸಂಸ್ಕೃತಿಯ ಅನನ್ಯತೆಗಳು ಹೆಚ್ಚು ಪ್ರಕಾಶಕ್ಕೆ ಬರದೇ ನಲುಗಿ ಹೋಗುತ್ತಿವೆ. ಹಾಗೆ ನೋಡಿದರೆ ಭಾರತ ಒಕ್ಕೂಟದೊಳಗಿನ ಒಂದೊಂದು ರಾಜ್ಯದ್ದೂ ಒಂದೊಂದು ವಿಶಿಷ್ಟ ಅಸ್ಮಿತೆ ಕಾಣುತ್ತದೆ. ದಕ್ಷಿಣದ ತಮಿಳುನಾಡಂತೂ ಮೊದಲಿನಿಂದಲೂ ದ್ರಾವಿಡ ಸಂಸ್ಕೃತಿ ತನ್ನ ಅಸ್ಮಿತೆಯೆಂದು ಹೆಮ್ಮೆಯಿಂದ ಗುರುತಿಸಿಕೊಂಡಿದೆ. ಆಂಧ್ರದಲ್ಲಿ ತೆಲುಗು ದೇಶಂ ಪಕ್ಷ ಹುಟ್ಟ್ಟಿದ್ದೇ ತೆಲುಗು ಅಸ್ಮಿತೆಯನ್ನು ಮುಂದಿಟ್ಟುಕೊಂಡು.

ಅಸ್ಮಿತೆಯ ಮಾತು ಬಂದಾಗ ಮುಖ್ಯ ಮಂತ್ರಿ ಸಿದ್ದರಾಮಯ್ಯನವರು ಕನ್ನಡಿಗರ ಅಂತರಂಗದ ದನಿಯಾಗಿಯೇ ಮಾತನಾಡಿದ್ದಾರೆ ಎಂದರೆ ಅದು ಕಟು ವಾಸ್ತವ. ತಮ್ಮ ರಾಜ್ಯ ಪ್ರತ್ಯೇಕ ಧ್ವಜ ಹೊಂದಿರಬೇಕು, ರಾಜ್ಯದ ಆಡಳಿತ, ಶಿಕ್ಷಣ ಸೇರಿದಂತೆ ಎಲ್ಲ ರಂಗಗಳಲ್ಲೂ ಕನ್ನಡ ಭಾಷೆಗೆ ಮಣೆ ಹಾಕಬೇಕು ಹಾಗೂ ತಮ್ಮ ಬದುಕು-ಭವಿಷ್ಯಗಳನ್ನು ರೂಪಿಸಿಕೊಳ್ಳುವು ದರಲ್ಲಿ ಕನ್ನಡಿಗರ ಅಪೇಕ್ಷೆ-ಅಭಿಲಾಷೆ-ನಿರ್ಣಯಗಳೇ ಆಖೈರಾಗಿರಬೇಕು ಎಂದು ಕನ್ನಡಿಗರು ಆಸೆಪಡುತ್ತಿರುವುದರಲ್ಲಿ ತಪ್ಪೇನೂ ಇಲ್ಲ ಎಂದಿರುವ ಸಿದ್ದರಾಮಯ್ಯನವರು, ಸಾಂಸ್ಕೃತಿಕ ಸ್ವಾಯತ್ತತೆ ಬೇಕೆಂಬ ಕನ್ನಡಿಗರ ಬೇಡಿಕೆಯನ್ನು ಪ್ರಬಲವಾಗಿ ಸಮರ್ಥಿಸಿಕೊಂಡಿರುವುದು ಸಹಜವೇ ಆಗಿದೆ. ‘‘ನಾನು ಹೆಮ್ಮೆಯ ಕನ್ನಡಿಗ-ನಾನು ಹೆಮ್ಮೆಯ ಭಾರತೀಯ’’ ಎಂದು ಘಂಟಾಘೋಷವಾಗಿ ಹೇಳಿರುವ ಅವರು ಭಾರತ ರಾಜ್ಯಗಳ ಒಕ್ಕೂಟವಾಗ ಬೇಕೆಂದು ಗಾಢ ಅನುರಕ್ತಿಯಿಂದ ಮನವಿ ಮಾಡಿಕೊಂಡಿದ್ದಾರೆ.

ಪ್ರತ್ಯೇಕ ಅಸ್ಮಿತೆಯ ದನಿ ಕೇಳಿಬಂದಿರುವುದು ಕರ್ನಾಟಕದಿಂದ ಮಾತ್ರವಲ್ಲ. ಕೇಂದ್ರದಲ್ಲಿ ಬಿಜೆಪಿ ಸರಕಾರ ಅಧಿಕಾರಕ್ಕೆ ಬಂದ ನಂತರ ಒಂದು ರಾಷ್ಟ್ರಕ್ಕೆ ಒಂದೇ ಸಂಸ್ಕೃತಿ-ಹಿಂದಿಯೊಂದೇ ಅಧಿಕೃತ ಭಾಷೆ ಎಂಬ ಪರಿಕಲ್ಪನೆಗೆ ಪ್ರಾಶಸ್ತ್ಯ ದೊರೆತು ಇಡೀ ರಾಷ್ಟ್ರವನ್ನು ಭಾಷೆ-ಸಂಸ್ಕೃತಿಗಳ ಒಂದೇ ಹೋಲ್ಡಾಲಿನಲ್ಲಿ ‘ಏಕ’ಗೊಳಿಸುವ ಪ್ರಯತ್ನಗಳು ಹೆಚ್ಚಾದವು. ಇಡೀ ರಾಷ್ಟ್ರವನ್ನು ಒಂದೇ ಹೋಲ್ಡಾಲ್ ಆಗಿಸುವ ಅಸಂಗತ ಯೋಜನೆಗಳು ಸದ್ದುಗದ್ದಲವಿಲ್ಲದೆ ದಾಳಿ ಇಡಲಾರಂಭಿಸಿದಾಗ ಅಸ್ಮಿತೆಯ ರಾಜಕಾರಣ ಮೊಳಕೆಯೊಡೆಯಿತು. ಕರ್ನಾಟಕದಲ್ಲಿ ಇದು ಚುನಾವಣೆ ಕಾಲವಾದ್ದರಿಂದ ಇದನ್ನು ಸಿದ್ದರಾಮಯ್ಯನವರ ಚುನಾವಣಾ ತಂತ್ರ, ಚುನಾವಣಾ ಆವುಟ ಎಂದೂ ವಿರೋಧಿ ರಾಜಕೀಯ ವಲಯದಲ್ಲಿ ಹೇಳಲಾಗುತ್ತದೆ. ಆದರೆ ಈ ಅಸ್ಮಿತೆಯ ಬಯಕೆ ಕರ್ನಾಟಕ ರಾಜ್ಯದ್ದೊಂದೇ ಆಗಿಲ್ಲ. ಪಶ್ಚಿಮ ಬಂಗಾಳ, ತೆಲಂಗಾಣ ಮೊದಲಾದ ಹಿಂದಿಯೇತರ ರಾಜ್ಯಗಳಲ್ಲೂ ಇಂಥ ಅಪೇಕ್ಷೆ ಸ್ಫುಟವಾಗಿ ಕಾಣಿಸಿಕೊಂಡಿದೆ. ಸಾಂಸ್ಕೃತಿಕ ಸ್ವಾಯತ್ತತೆಯ ಕೂಗು ಜೋರಾಗಿಯೇ ಕೇಳಿ ಬರುತ್ತಿದೆ.

ತಮ್ಮ ಸಾಂಸ್ಕೃತಿಕ ಅಸ್ಮಿತೆಯನ್ನು ರಾಷ್ಟ್ರೀಯತೆ ಹಾಗೂ ಒಕ್ಕೂಟದ ನೆವಗಳಿಂದ ಮಸುಕುಗೊಳಿಸಲಾಗುತ್ತಿದೆ ಎಂಬ ರಾಜ್ಯಗಳ ಕೊರಗು ಇಂದು ನಿನ್ನೆಯದಲ್ಲ. ಹಿಂದಿ ಹೇರಿಕೆಯ ದಿನಗಳಿಂದ ಇದು ತೀವ್ರಗೊಂಡಿತು. ಕೇಂದ್ರದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದ ನಂತರ ಅದು ಹೆಚ್ಚಾಗಲು ಬಿಜೆಪಿಯ ‘ಹೋಲ್ಡಾಲ್’ ಸಂಸ್ಕೃತಿ ಮತ್ತು ‘ಹೋಲ್ಡಾಲ್’ ರಾಷ್ಟ್ರೀಯತೆ ಪರಿಕಲ್ಪನೆಯ ಅಸಂಗತ ನೀತಿಯೇ ಕಾರಣ. ಇದಕ್ಕೆ ನಿದರ್ಶನವಾಗಿ ಇತ್ತೀಚೆಗೆ ಮೇಘಾಲಯ ವಿಧಾನಸಭೆಯ ಕಲಾಪವನ್ನು ಗಮನಿಸಬಹುದು. ಅಲ್ಲಿನ ರಾಜ್ಯಪಾಲ ಗಂಗಾಪ್ರಸಾದರ ಹಿಂದಿ ಉತ್ಸಾಹ ವಿಧಾನ ಮಂಡಲದ ಸಭೆಯಲ್ಲಿ ಗಲಭೆಗೊಂದಲಗಳಿಗೆ ಕಾರಣವಾಯಿತು. ಹಿಂದಿ ಬಾರದ ಸದಸ್ಯರಿಗೆ ರಾಜ್ಯಪಾಲರ ಹಿಂದಿ ಪಾಂಡಿತ್ಯಪೂರ್ಣ ಭಾಷಣ ಅರ್ಥವಾಗಲೇ ಇಲ್ಲ. ನಮ್ಮ ರಾಜ್ಯಪಾಲ ವಜೂಭಾಯಿ ವಾಲ ಅವರು ಕರ್ನಾಟಕಕ್ಕೆ ಬಂದು ನಾಲ್ಕು ವರ್ಷಗಳ ಮೇಲಾಯಿತು. ಆದರೂ ಅವರಲ್ಲಿ ಇನ್ನೂ ಕನ್ನಡ ‘ಪ್ರೀತಿ’ ಹುಟ್ಟಿಲ್ಲ. ಪ್ರತೀ ವರ್ಷ ವಿಧಾನ ಮಂಡಲದ ಜಂಟಿ ಅಧಿವೇಶನವನ್ನು ಉದ್ದೇಶಿಸಿ ಹಿಂದಿಯಲ್ಲೇ ಮಾತನಾಡುತ್ತಾರೆ. ಕನ್ನಡದ ಸಭೆ ಸಮಾರಂಭಗಳಲ್ಲೂ ಹಿಂದಿಯಲ್ಲೇ ಮಾತನಾಡುತ್ತಾರೆ. ಬಂದ ಸ್ವಲ್ಪ ದಿನಗಳಲ್ಲೇ ರಾಜಭವನದಲ್ಲಿದ್ದ ಕನ್ನಡ ಶಾಲೆಯನ್ನು ತೆಗಿಸಿದ ‘ಖ್ಯಾತಿಯ’ ವಾಲ ಅವರಲ್ಲಿ ಕನ್ನಡ ಪ್ರೀತಿ ಹುಟ್ಟುವುದು ಹೇಗೆ ಸಾಧ್ಯವಾದೀತು?

ಪ್ರತ್ಯೇಕ ಸಾಂಸ್ಕೃತಿಕ ಅಸ್ಮಿತೆಯ ರಾಜಕಾರಣ ಪ್ರಬಲವಾಗುತ್ತಿರುವುದಕ್ಕೆ ತೆಲಂಗಾಣ ಮತ್ತು ಪಶ್ಚಿಮ ಬಂಗಾಳದ ಉದಾಹರಣೆಯನ್ನೇ ನೋಡ ಬಹುದು. ಈ ಎರಡೂ ರಾಜ್ಯಗಳ ಸರಕಾರದ ಲಾಂಛನಗಳಲ್ಲಿ ‘ಸತ್ಯಮೇವ ಜಯತೆ’ ಪ್ರದೇಶ ಭಾಷೆಗಳಲ್ಲಿ ಮತ್ತು ಇಂಗ್ಲಿಷಿನಲ್ಲಿದೆ. ಹಿಂದಿಯಲ್ಲಿಲ್ಲ. ಪಶ್ಚಿಮ ಬಂಗಾಳದ ಸರಕಾರದ ಲಾಂಛನದಲ್ಲಿ ‘ಸತ್ಯಮೇವ ಜಯತೆ’ ಒಕ್ಕಣೆ ಬಂಗಾಳಿ ಮತ್ತು ಇಂಗ್ಲಿಷ್ ಭಾಷೆಗಳಲ್ಲಿ ಮಾತ್ರ ಇದೆ. ತೆಲಂಗಾಣ ಸರಕಾರದ ಲಾಂಛನದ ಒಕ್ಕಣೆ ತೆಲುಗು, ಉರ್ದು ಮತ್ತು ಇಂಗ್ಲಿಷ್ ಭಾಷೆಗಳಲ್ಲಿವೆ. ಕರ್ನಾಟಕ ಸರಕಾರದ ಉದ್ದೇಶಿತ ನಾಡ ಧ್ವಜ ಹಳದಿ, ಬಿಳಿ ಮತ್ತು ಹಸಿರು ಬಣ್ಣಗಳಿಂದ ಕೂಡಿದ್ದು ಶ್ವೇತ ವರ್ಣದ ಮಧ್ಯೆ ಸರಕಾರದ ಲಾಂಛನವಿದೆ.

ಒಳಗೊಳಗೇ ಹೊಗೆಯಾಡುತ್ತಿರುವ ಈ ಅಸಮಾಧಾನಗಳು ಚುನಾವಣೆ ಸಮಯದಲ್ಲಿ ಭಾಷಾ ಅಸ್ಮಿತೆ, ಸಾಂಸ್ಕೃತಿಕ ಅಸ್ಮಿತೆ ಮೊದಲಾದ ರೂಪಗಳಲ್ಲಿ ಪ್ರಕಾಶಕ್ಕೆ ಬರುತ್ತಿವೆ. ಇದರಿಂದ, ಅಸ್ಮಿತೆ ರಾಜಕಾರಣ ತೀವ್ರಗೊಂಡು ರಾಷ್ಟ್ರದ ಜನತೆ ಮತ್ತು ಪ್ರದೇಶಗಳ ನಡುವೆ ಅಂತರ, ವೈಮನಸ್ಯಗಳನ್ನು ಹುಟ್ಟುಹಾಕುವ ಅಪಾಯವಿದೆ. ಭಾರತದ ಶಕ್ತಿ ಇರುವುದು ಅದರ ಬಹುಸಂಸ್ಕೃತಿ ಲಕ್ಷಣದಲ್ಲಿ, ವೈವಿಧ್ಯತೆಯಲ್ಲಿ ಎಂಬುದನ್ನು ಸಮ ಚಿತ್ತದಿಂದ ಅರ್ಥಮಾಡಿಕೊಂಡಲ್ಲಿ ಪ್ರದೇಶಿಕ ಅಂತರ/ವೈಮನಸ್ಯಗಳಂಥ ಗಂಡಾಂತರಕಾರಿಯಾಗಬಹುದಾದ ಸಮಸ್ಯೆಗಳನ್ನು ತಪ್ಪಿಸಬಹುದು.

ಕನ್ನಡಿಗರ ಸಾಂಸ್ಕೃತಿಕ ಅಸ್ಮಿತೆ ಮಾತ್ರವಲ್ಲದೆ ಸಿದ್ದರಾಮಯ್ಯನವರು ಎತ್ತಿರುವ ಒಕ್ಕೂಟ ರಾಜ್ಯ ವ್ಯವಸ್ಥೆಯ ಸಲಹೆ ಕೂಡ ಇಂದಿನ ಸಂದರ್ಭದಲ್ಲಿ ತುಂಬ ಗಹನವಾದುದು. ಸಿದ್ದರಾಮಯ್ಯನವರು ಪ್ರಸ್ತಾಪಿಸಿರುವ ವಿಷಯಗಳನ್ನು ಸ್ಥೂಲವಾಗಿ ಎರಡು ಭಾಗಗಳನ್ನಾಗಿ ವಿಂಗಡಿಸಬಹುದು. ಮೊದಲನೆಯದು ಬಹಳ ಕಾಲದಿಂದ ನನೆಗುದಿಗೆ ಬಿದ್ದಿರುವ ಕೇಂದ್ರ ಮತ್ತು ರಾಜ್ಯಗಳ ಬಾಂಧವ್ಯಕ್ಕೆ ಸಂಬಂಧಿಸಿದ್ದು. ಮುಖ್ಯವಾಗಿ ಕೇಂದ್ರ ಸರಕಾರ ರಾಜ್ಯಗಳ ಸ್ವಾಯತ್ತತೆಗೆ ಬೆಲೆ ಕೊಡದಂಥ ಪ್ರವೃತ್ತಿ. ಇದಕ್ಕೆ ಉದಾರಣೆಯಾಗಿ ಕೇಂದ್ರದ ಅನುದಾನ ಮತ್ತು ಹಣಕಾಸು ನೆರವುಗಳನ್ನು, ಕೇಂದ್ರ ಸರಕಾರ ಪ್ರಾಯೋಜಿತ ಯೋಜನೆಗಳ ಅನುಷ್ಠಾನದ ಬಗ್ಗೆ ಕಿರಿಕಿರಿಯುಂಟುಮಾಡುವಂಥ ಆಜ್ಞಾರೂಪ ತಿಳಿವಳಿಕೆಗಳನ್ನು ನೀಡುವ ಉಸಾಬರಿ-ಇವುಗಳನ್ನು ಗಮನಿಸಬಹುದು. ಎರಡನೆಯದು ಕೇಂದ್ರ ಸರಕಾರದಿಂದ ಬರುವ ತಮ್ಮ ಪಾಲಿನ ತೆರಿಗೆ ಹಣವನ್ನು ಹೇಗೆ ಖರ್ಚುಮಾಡಬೇಕು ಎನ್ನುವ ಬಗ್ಗೆ ಅನಗತ್ಯವಾಗಿ ಮೂಗು ತೂರಿಸುತ್ತಿರುವುದು.

ಇಂಥ ಉಸಾಬರಿಯಿಂದ ತಮ್ಮ ಪಾಲಿನ ಹಣವನ್ನು ಹೇಗೆ ವ್ಯಯಮಾಡಬೇಕು ಎನ್ನುವ ರಾಜ್ಯಗಳ ಹಕ್ಕನ್ನು ಕೇಂದ್ರ ಕಸಿದುಕೊಳ್ಳುತ್ತಿದೆ ಹಾಗೂ ತಮ್ಮ ಪಾಲಿನ ಹಣದಲ್ಲಿ ಆಗಿರುವ ಅಭಿವೃದ್ಧಿಯ ಯಶಸ್ಸಿನ ಕೀರ್ತಿ ತನ್ನದೆಂದು ಹೇಳಿಕೊಳ್ಳುತ್ತಿರುವ ಕೇಂದ್ರ ಸರಕಾರದ ‘ರಾಜಕೀಯ ಆಸೆಬುರುಕುತನ’ ರಾಜ್ಯ ಸರಕಾರಗಳಲ್ಲಿ ಹೆಚ್ಚಿನ ಮುಜುಗರ ಉಂಟುಮಾಡಿದೆ. ರಾಜಕೀಯವಾಗಿಯಂತೂ ಇದು ಘರ್ಷಣೆಗೆ ನೆಲವನ್ನು ಹದಗೊಳಿಸಿದೆ. ಕೇಂದ್ರ ಸರಕಾರ ತನ್ನ ಆರ್ಥಿಕ ಮತ್ತು ವಾಣಿಜ್ಯ ನೀತಿನಿರೂಪಣೆ ಯಲ್ಲಿ ರಾಜ್ಯ ಸರಕಾರಗಳನ್ನು ವಿಶ್ವಾಸಕ್ಕೆ ತೆಗದುಕೊಳ್ಳಬೇಕೆಂಬುದು ರಾಜ್ಯಗಳ ಮತ್ತೊಂದು ಬೇಡಿಕೆ. ತಮ್ಮನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದೆ ಇಂಥ ನೀತಿಗಳನ್ನು ರೂಪಿಸುವುದರಿಂದ ರಾಜ್ಯಗಳ ಮೇಲೆ ದುಷ್ಪರಿಣಾಮ ಉಂಟಾಗುತ್ತಿದೆ ಎಂಬುದು ಬಹುತೇಕ ರಾಜ್ಯಗಳ ತಕರಾರು.

ಭಾರತ ಒಕ್ಕೂಟಗಳ ರಾಷ್ಟ್ರವಾಗಬೇಕೆಂಬ ಸಿದ್ದರಾಮಯ್ಯನವರ ಬೇಡಿಕೆ ಸಂವಿಧಾನಕ್ಕನುಗುಣವಾಗಿಯೇ ಇದೆ. ಸಂವಿಧಾನ ರಚನಾ ಸಭೆಯಲ್ಲಿ 356ನೇ ವಿಧಿಯ ಬಗ್ಗೆ ಮಾತನಾಡುತ್ತಾ ಬಿ.ಅರ್.ಅಂಬೇಡ್ಕರ್ ಅವರು ಮೂರು ಅಂಶಗಳನ್ನು ಸಂಶಯಾತೀತವಾಗಿ ಸ್ಪಷ್ಟಪಡಿಸಿದ್ದಾರೆ.
1.ಭಾರತವು ಒಕ್ಕೂಟ ರಚನೆಯ ರಾಷ್ಟ್ರ. 2.ರಾಜ್ಯ ಸರಕಾರಗಳ ಆಡಳಿತದಲ್ಲಿ ಕೇಂದ್ರ ಸರಕಾರ ಹಸ್ತಕ್ಷೇಪ ಮಾಡುವಂತಿಲ್ಲ. 3.ರಾಜ್ಯಗಳು ತಮ್ಮ ತಮ್ಮ ಕ್ಷೇತ್ರಗಳಲ್ಲಿ ಸಾರ್ವಭೌಮ ಅಧಿಕಾರ ಹೊಂದಿವೆ, ಕೇಂದ್ರ ಸರಕಾರ ತನ್ನ ಕ್ಷೇತ್ರಗಳಲ್ಲಿ ಸಾರ್ವಭೌಮ ಅಧಿಕಾರ ಹೊಂದಿರುವಂತೆಯೇ.

ಇಪ್ಪತ್ತೊಂದನೆ ಶತಮಾನದ ಅಗತ್ಯಗಳು ಮತ್ತು ಬೇಡಿಕೆಗಳಿಗನುಗುಣ ವಾಗಿ ಕೇಂದ್ರ ಮತ್ತು ರಾಜ್ಯಗಳ ಬಾಂಧವ್ಯವನ್ನು ಪುನರ್‌ವಿಮರ್ಶಿಸಿ ಪುನರ್ ಸಮತೋಲನ ಸಾಧಿಸಬೇಕಾಗಿದೆ. ಇಂಥ ಒಂದು ಪ್ರಯತ್ನ ಸಂವಿಧಾನದ ಮೂಲ ಆಶಯಕ್ಕನುಗುಣವಾಗಿಯೇ ಇರಬೇಕು. ಸಿದ್ದರಾಮಯ್ಯನವರು ಹದಿನೈದನೇ ಹಣಕಾಸು ಆಯೋಗದ ಕಾರ್ಯಸೂಚಿ ಮತ್ತು ವಿವೇಚನಾಯುತ ಅಧಿಕಾರಗಳ ಬಗ್ಗೆಯೂ ಕೆಲವೊಂದು ಆಕ್ಷೇಪಣೆಗಳನ್ನು ಎತ್ತಿದ್ದಾರೆ. ತೆರಿಗೆ ರೂಪದಲ್ಲಿ ಕೇಂದ್ರ ಸರಕಾರಕ್ಕೆ ಹೆಚ್ಚು ಹಣ ಸಂದಾಯವಾಗುವುದು ದಕ್ಷಿಣ ಭಾರತದ ರಾಜ್ಯಗಳಿಂದ. ಆದರೆ ಕೇಂದ್ರದಿಂದ ಅವು ಮರಳಿ ಪಡೆಯುವುದು ಅದೇ ಅನುಪಾತದಲ್ಲಿಲ್ಲ.ಇಲ್ಲಿಯವರೆಗೆ 1971ರ ಜನಗಣತಿಯನ್ನು ಆಧಾರವಾಗಿಟ್ಟುಕೊಂಡು ರಾಜ್ಯಗಳ ಪಾಲಿನ ಹಣವನ್ನು ನಿರ್ಧರಿಸಲಾಗುತ್ತಿತ್ತು. ಈಗ 2011ರ ಜನಸಂಖ್ಯೆ ಆಧಾರದ ಮೇಲೆ ಹಣ ಹಂಚಿಕೆಯಾಗಬೇಕೆಂಬುದು ಬಿಜೆಪಿ ಸರಕಾರದ ನೀತಿಯಾಗಿದೆ.

ಇದರಿಂದಾಗಿ ಜನಸಂಖ್ಯೆ ನಿಯಂತ್ರಣದಲ್ಲಿ ಪ್ರಗತಿ ಸಾಧಿಸಿರುವ ರಾಜ್ಯಗಳ ಪಾಲಿನಲ್ಲಿ ಖೋತಾ ಆಗಲಿದೆ. ಜನಸಂಖ್ಯೆ ನಿಯಂತ್ರಿಸುವ ರಾಷ್ಟ್ರೀಯ ಕರ್ತವ್ಯವನ್ನು ಪಾಲಿಸಿದ ಪ್ರಗತಿಶೀಲ ರಾಜ್ಯಗಳಿಗೆ ಇದು ಕೇಂದ್ರ ವಿಧಿಸುತ್ತಿರುವ ಶಿಕ್ಷೆ ಎಂದು ಈಗಾಗಲೇ ಹದಿನೈದನೇ ಹಣಕಾಸು ಆಯೋಗದ ಈ ಮಾನದಂಡದ ವಿರುದ್ಧ ದನಿ ಎತ್ತಲಾಗಿದೆ. ಇದಲ್ಲದೆ ಆಯೋಗ ಪ್ರೋತ್ಸಾಹ ರೂಪದಲ್ಲಿ ಹಂಚಿಕೆ ಮಾಡುವ ಧನ ಸಹಾಯದಲ್ಲೂ, ತಮ್ಮ ಸಂಪನ್ಮೂಲದಿಂದ ಗ್ರಾಮೀಣ ವಿದ್ಯುದೀಕರಣ, ಗ್ರಾಮೀಣ ರಸ್ತೆ ನಿರ್ಮಾಣ ಮೊದಲಾದ ಕ್ಷೇತ್ರಗಳಲ್ಲಿ ಪ್ರಗತಿ ಸಾಧಿಸಿರುವ ರಾಜ್ಯಗಳಿಗೆ ಅನ್ಯಾಯವಾಗಲಿದೆ. ಇವೆಲ್ಲವೂ ಈಗ ಚುನಾವಣಾ ಸಂದರ್ಭದಲ್ಲಿ ಸಹಜವಾಗಿಯೇ ಹೆಚ್ಚಿನ ಮಹತ್ವ ಪಡೆದಿವೆ. ಸಿದ್ದರಾಮಯ್ಯನವರು ಮಂಡಿಸಿರುವ ಪ್ರಸ್ತಾಪಗಳು ಬಿಜೆಪಿಯನ್ನು ‘ಬಿಸಿತುಪ್ಪನುಂಗಲೂ ಆಗದು, ಉಗುಳಲೂ ಆಗದು’ ಎನ್ನುವಂಥ ಸ್ಥಿತಿಗೆ ನೂಕಿವೆ. ಕನ್ನಡ ಬಾವುಟ, ಕನ್ನಡ ಭಾಷೆ, ಕನ್ನಡ ಸಂಸ್ಕೃತಿಗಳ ಅಸ್ಮಿತೆ, ಕಲ್ಯಾಣ ಕ್ರಾಂತಿಯ ಆಶಯಗಳು, ಹಣಕಾಸು ಆಯೋಗದ ಮಾನದಂಡಗಳು ಇವುಗಳ ಬಗ್ಗೆ ಬಿಜೆಪಿ ರಾಜ್ಯ ಶಾಖೆಯ ಆಕ್ಷೇಪಣೆ ಏನಿರಲಾರದು. ಇವನ್ನು ವಿರೋಧಿಸಿ ಚುನಾವಣೆ ಗೆಲ್ಲುವುದು ಕಷ್ಟವೆಂಬುದು ಅದಕ್ಕೆ ಗೊತ್ತಿದೆ. ಆದರೆ ಬಿಜೆಪಿಯ ರಾಷ್ಟ್ರೀಯ ನೀತಿ ಇದನ್ನು ಒಪ್ಪುವುದಿಲ್ಲ. ಕನ್ನಡ ಭಾಷೆ ಸಂಸ್ಕೃತಿಗಳ ಅಸ್ಮಿತೆ ಹಾಗೂ ಸ್ವಾಯತ್ತ್ತತೆ ದೃಷ್ಟಿಯಿಂದ ಈ ಚುನಾವಣೆ ಕರ್ನಾಟಕದ ಮತದಾರರ ನೈತಿಕ ಹೊಣೆಯನ್ನು ಹೆಚ್ಚಿಸಿದೆ ಎಂದು ಈ ಚುನಾವಣೆಯ ಮಹತ್ವ ಕುರಿತು ಆಖೈರಾಗಿ ಹೇಳಬಹುದು.

Writer - ಜಿ.ಎನ್.ರಂಗನಾಥ ರಾವ್

contributor

Editor - ಜಿ.ಎನ್.ರಂಗನಾಥ ರಾವ್

contributor

Similar News