ಮುಖ್ಯಮಂತ್ರಿ ಸ್ಥಾನಕ್ಕೆ ಕಣ್ಣಿಟ್ಟಿರುವ ಡಿ.ಕೆ. ಶಿವಕುಮಾರ್ ಎಡವುತ್ತಿರುವುದೆಲ್ಲಿ?

Update: 2025-01-21 09:41 IST
Editor : Ismail | Byline : ಆರ್. ಜೀವಿ
ಮುಖ್ಯಮಂತ್ರಿ ಸ್ಥಾನಕ್ಕೆ ಕಣ್ಣಿಟ್ಟಿರುವ ಡಿ.ಕೆ. ಶಿವಕುಮಾರ್ ಎಡವುತ್ತಿರುವುದೆಲ್ಲಿ?

ಡಿ.ಕೆ. ಶಿವಕುಮಾರ್ | PTI 

  • whatsapp icon

ರಾಜ್ಯ ರಾಜಕೀಯದಲ್ಲಿ ಮತ್ತೊಮ್ಮೆ ಸಿಎಂ ಹುದ್ದೆ ಬದಲಾವಣೆಯ ವಿಚಾರ ಸಾಕಷ್ಟು ಗದ್ದಲವೆಬ್ಬಿಸುತ್ತಿದೆ. ಸಿದ್ದರಾಮಯ್ಯ ಅವರನ್ನೊಳಗೊಂಡ ಔತಣಕೂಟದ ಬಳಿಕ ಹುದ್ದೆಗಾಗಿ ಪೈಪೋಟಿ ಮತ್ತಷ್ಟು ಮುನ್ನೆಲೆಗೆ ಬಂದಿತ್ತು. ಈ ನಡುವೆ ಕೆಪಿಸಿಸಿ ಅಧ್ಯಕ್ಷರ ಬದಲಾವಣೆ ವದಂತಿ ಹಬ್ಬಿದ್ದು, ಬಹಿರಂಗವಾಗಿಯೇ ಡಿ.ಕೆ. ಶಿವಕುಮಾರ್ ಹಲವರ ವಿರುದ್ಧ ಹರಿಹಾಯ್ದಿದ್ದಾರೆ. ಸಿದ್ದರಾಮಯ್ಯ ಮನವೊಲಿಸದ ಹೊರತು ಏನೇನೂ ಸಾಧ್ಯವಿಲ್ಲ ಎಂಬುದಂತೂ ಸ್ಪಷ್ಟ. ಇದು ಹೈಕಮಾಂಡ್‌ಗೂ ಗೊತ್ತೇ ಇರುವ ವಿಚಾರ. ಹೈಕಮಾಂಡ್ ಅನ್ನು ನೆಚ್ಚಿ ಸಿಎಂ ಆಗುತ್ತೇನೆ ಎಂದುಕೊಂಡಿರುವ ಡಿ.ಕೆ. ಶಿವಕುಮಾರ್ ಅವರು ಪಕ್ಷದೊಳಗಿನ ಬಹಳ ದೊಡ್ಡ ಸಂಖ್ಯಾ ಬಲವೇ ತಮ್ಮ ವಿರುದ್ಧ ನಿಲ್ಲಬಹುದಾದ ಸಂದರ್ಭವನ್ನು ತಾವೇ ಆಹ್ವಾನಿಸಿಕೊಳ್ಳುವ ಸಂದರ್ಭವೂ ಮುಂದೊಂದು ದಿನ ಬಂದರೆ ಅಚ್ಚರಿಯಿಲ್ಲ. ಆಗ ಹೈಕಮಾಂಡ್ ಕೂಡ ಅಸಹಾಯಕವಾಗಬಹುದು.

ಅಧಿಕಾರ ಹಂಚಿಕೆ ಒಪ್ಪಂದದ ವಿಚಾರವಾಗಿ ಮತ್ತೊಮ್ಮೆ ಸಿದ್ದರಾಮಯ್ಯ ಮತ್ತು ಡಿ.ಕೆ. ಶಿವಕುಮಾರ್ ನಡುವೆ ಮುಸುಕಿನ ಗುದ್ದಾಟ ಜೋರಾಗಿದೆ. ಎರಡೂ ಬಣಗಳು ಬಲಾಬಲ ತೋರಿಸುವ ಹಂತಕ್ಕೆ ಮುಟ್ಟಿವೆ. ಸಿದ್ದರಾಮಯ್ಯ ನೇತೃತ್ವದ ಸರಕಾರ ಅಸ್ತಿತ್ವಕ್ಕೆ ಬರುವ ಮುನ್ನ ಅಧಿಕಾರ ಹಂಚಿಕೆ ಸೂತ್ರ ಏರ್ಪಟ್ಟಿತ್ತು ಎಂದು ಡಿ.ಕೆ. ಶಿವಕುಮಾರ್ ಹೇಳಿದಾಗಿನಿಂದ ಉಭಯ ನಾಯಕರ ನಡುವಿನ ಸಂಘರ್ಷ ತೆರೆಮರೆಯಲ್ಲೆ ತಾರಕಕ್ಕೇರಿದೆ. ಸಿಎಂ ಹುದ್ದೆ ವಿಚಾರವಾಗಿ ಈಗಾಗಲೇ ಒಪ್ಪಂದವಾಗಿದೆ ಎಂಬ ಡಿ.ಕೆ. ಶಿವಕುಮಾರ್ ಹೇಳಿಕೆ ಹಲವು ಪ್ರಶ್ನೆಗಳು ಹುಟ್ಟುವುದಕ್ಕೆ ಕಾರಣವಾದಾಗ, ಅಂಥ ಯಾವುದೇ ಒಪ್ಪಂದವಾಗಿಲ್ಲ ಎಂದು ಸಿದ್ದರಾಮಯ್ಯ ಹೇಳಿದ್ದರು. ಮುಖ್ಯಮಂತ್ರಿಗಳು ಹೇಳಿದ ಮೇಲೆ ಅದೇ ಅಂತಿಮ. ಅದರ ಬಗ್ಗೆ ಮರುಪ್ರಶ್ನೆಯೇ ಇಲ್ಲ. ಯಾವುದೇ ತಕರಾರು ಇಲ್ಲ ಎಂದು ಆನಂತರ ಡಿ.ಕೆ. ಶಿವಕುಮಾರ್ ಕೂಡ ಸ್ಪಷ್ಟಪಡಿಸಿದ್ದರು.

ಅದಾದ ಬಳಿಕ ಏನೇನಾಯಿತು ಎಂಬುದನ್ನು ಗುರುತು ಮಾಡುವುದಾದರೆ, ಮೊದಲನೆಯದು, ಔತಣಕೂಟ ರಾಜಕೀಯ; ಎರಡನೆಯದು, ದಲಿತ ನಾಯಕತ್ವದ ಪ್ರಶ್ನೆ; ಮೂರನೆಯದು, ಕೆಪಿಸಿಸಿ ಅಧ್ಯಕ್ಷ ಹುದ್ದೆ ವಿಚಾರ;

ನಾಲ್ಕನೆಯದು, ಡಿ.ಕೆ. ಶಿವಕುಮಾರ್ ಮತ್ತು ಸತೀಶ್ ಜಾರಕಿಹೊಳಿ ಜಟಾಪಟಿ.

ಒಳಗೊಳಗೇ ನಡೆಯುತ್ತಿದ್ದ ಸಮರ ಉಲ್ಬಣಗೊಳ್ಳಲು ಔತಣಕೂಟ ರಾಜಕೀಯ ಎಡೆ ಮಾಡಿಕೊಟ್ಟಿತ್ತು. ಲೋಕೋಪಯೋಗಿ ಇಲಾಖೆಯ ಸಚಿವ ಸತೀಶ್ ಜಾರಕಿಹೊಳಿ ಅವರ ನಿವಾಸ, ಎರಡನೇ ಪವರ್ ಸೆಂಟರ್ ರೀತಿಯಲ್ಲಿ ಬದಲಾಗಲು ಆರಂಭವಾಯಿತು. ಜನವರಿ 2ರಂದು ರಾತ್ರಿ ಸತೀಶ್ ಜಾರಕಿಹೊಳಿ ಅವರ ಅಧಿಕೃತ ನಿವಾಸದಲ್ಲಿ ನಡೆದ ಔತಣಕೂಟದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಗೃಹ ಸಚಿವ ಡಾ.ಜಿ. ಪರಮೇಶ್ವರ್, ಕೆ.ಎನ್. ರಾಜಣ್ಣ, ಡಾ. ಎಚ್.ಸಿ. ಮಹದೇವಪ್ಪ ಸೇರಿ 7 ಮಂದಿ ಸಚಿವರು ಹಾಜರಿದ್ದರು. ಜತೆಗೆ ಒಟ್ಟು 35 ಮಂದಿ ಶಾಸಕರೂ ಭಾಗವಹಿಸಿದ್ದರು. ಕೆಪಿಸಿಸಿ ಅಧ್ಯಕ್ಷರ ಸ್ಥಾನದ ಬದಲಾವಣೆ ಹಾಗೂ ಹೆಚ್ಚುವರಿ ಡಿಸಿಎಂ ಹುದ್ದೆ ಸೃಷ್ಟಿ ಚರ್ಚೆ ನಡುವೆಯೇ, ಡಿ.ಕೆ. ಶಿವಕುಮಾರ್ ವಿದೇಶ ಪ್ರವಾಸದಲ್ಲಿರುವಾಗ ಈ ಔತಣಕೂಟ ನಡೆದಿರುವುದು ಕುತೂಹಲ ಮೂಡಿಸಿತ್ತು. ಕಡೆಗೆ, ಔತಣಕೂಟದಲ್ಲಿ ಯಾವುದೇ ರಾಜಕೀಯ ವಿಷಯಗಳ ಬಗ್ಗೆ ಚರ್ಚಿಸಲಾಗಿಲ್ಲ ಎಂದು ಸಿದ್ದರಾಮಯ್ಯ ಸ್ಪಷ್ಟಪಡಿಸಿದ್ದರು. ಆನಂತರ ವಿದೇಶದಿಂದ ದಿಲ್ಲಿಗೆ ಬಂದಿಳಿದಿದ್ದ ಡಿ.ಕೆ. ಶಿವಕುಮಾರ್ ಕೂಡ, ಊಟದಲ್ಲಿ ರಾಜಕೀಯ ಬೆರೆಸಬೇಡಿ ಎಂದು ಹೇಳುವ ಮೂಲಕ, ತಮ್ಮೊಳಗಿನ ಬೇಗುದಿಯನ್ನು ತೋರಿಸಿಕೊಳ್ಳದೆ ಇರುವ ಯತ್ನ ಮಾಡಿದ್ದರು.

ಸರಕಾರ ಬಂದಾಗಿನಿಂದಲೂ ಕಾಂಗ್ರೆಸ್‌ನಲ್ಲಿ ಬಣ ರಾಜಕೀಯ ಮುಗಿದದ್ದೇ ಇಲ್ಲ. ಹಾಸನದಲ್ಲಿ ಸಿದ್ದರಾಮೋತ್ಸವದ ತಯಾರಿ ನಡೆದಾಗ, ಡಿ.ಕೆ. ಶಿವಕುಮಾರ್ ಹೈಕಮಾಂಡ್ ಮನವೊಲಿಸಿ ಅದನ್ನು ಪಕ್ಷದ ಕಾರ್ಯಕ್ರಮವಾಗಿ ಬದಲಾಯಿಸಿದ್ದರು. ಜಾರಕಿಹೊಳಿ ನಿವಾಸದ ಔತಣಕೂಟ ಸಭೆ ಬಳಿಕ ಪರಿಶಿಷ್ಟ ಜಾತಿ ಮತ್ತು ಪಂಗಡಕ್ಕೆ ಮೀಸಲಾಗಿ ಡಾ. ಪರಮೇಶ್ವರ್ ಡಿನ್ನರ್ ಪಾರ್ಟಿ ಆಯೋಜಿಸಲು ಮುಂದಾಗಿದ್ದರು. ಅದಕ್ಕೆ ಹೈಕಮಾಂಡ್ ಮೂಲಕ ಡಿ.ಕೆ. ಶಿವಕುಮಾರ್ ಬ್ರೇಕ್ ಹಾಕಿದ್ದಾರೆ ಎನ್ನಲಾಯಿತು. ಈ ಎಲ್ಲಾ ಬೆಳವಣಿಗೆಗಳು ತಮಗೆ ಸೆಡ್ಡು ಹೊಡೆಯುವುದಕ್ಕಾಗಿ ಎಂದು ತಿಳಿದ ಡಿ.ಕೆ. ಶಿವಕುಮಾರ್, ತಮ್ಮ ನಿವಾಸದಲ್ಲಿ ನಡೆಯಬೇಕಾಗಿದ್ದ ಒಕ್ಕಲಿಗರ ಪದಾಧಿಕಾರಿಗಳ ಸಭೆಯನ್ನು ಒಕ್ಕಲಿಗ ಸಂಘದ ವಿಚಾರಕ್ಕೆ ಮಾತ್ರ ಸೀಮಿತವಾಗಿರುವಂತೆ ನೋಡಿಕೊಂಡರು. ಇದರ ಮಧ್ಯೆ, ಪಕ್ಷದ ಹಲವು ಮುಖಂಡರು ಅವರನ್ನು ಭೇಟಿಯಾಗಿ, ಬಣ ರಾಜಕೀಯದ ಬಗ್ಗೆ ಆತಂಕ ವ್ಯಕ್ತಪಡಿಸಿದರು. ಕೆಪಿಸಿಸಿ ಅಧ್ಯಕ್ಷನಾಗಿ ತಾನೇ ರಾಜ್ಯ ಕಾಂಗ್ರೆಸ್‌ನಲ್ಲಿ ಬಣಗಳಿವೆ ಎನ್ನುವುದನ್ನು ಹೇಗೆ ಹೇಳಿಕೊಳ್ಳಲಿ? ಎಂಬ ಅಸಹಾಯಕತೆಯನ್ನು ಡಿ.ಕೆ. ಶಿವಕುಮಾರ್ ತೋಡಿಕೊಂಡರು ಎನ್ನಲಾಗಿದೆ. ಈಗ ನಡೆಯುತ್ತಿರುವ ಯಾವುದರ ಬಗ್ಗೆಯೂ ಮಾತಾಡದೆ, ಹೈಕಮಾಂಡ್ ಏನು ಮಾಡುತ್ತದೆಯೋ ಅದಕ್ಕೆ ಬದ್ಧನಾಗಿರುತ್ತೇನೆ ಎಂದು ಹೇಳಿಕೊಂಡಿರುವುದಾಗಿಯೂ ಸುದ್ದಿಗಳಿವೆ.

ಇನ್ನು ದಲಿತ ನಾಯಕತ್ವದ ವಿಚಾರ. ಡಾ. ಪರಮೇಶ್ವರ್ ಮನೆಯಲ್ಲಿ ಭೋಜನಕೂಟ ಸಭೆ ನಡೆಯಬೇಕಿತ್ತು. ಅದು ಏರ್ಪಾಟಾಗಿದ್ದು ಸಿದ್ದರಾಮಯ್ಯ ಸೂಚನೆ ಮೇರೆಗೆ ಎಂಬ ಮಾತುಗಳಿವೆ. ಆ ಸಭೆ ರದ್ದಾಗುತ್ತದೆ ಎಂಬ ಸುಳಿವುಗಳೂ ಇದ್ದವು ಎನ್ನಲಾಗುತ್ತದೆ. ಸಭೆ ರದ್ದಾಗಿರುವುದಕ್ಕೆ ಪರಿಶಿಷ್ಟ ಸಚಿವರು, ಶಾಸಕರು ಅಸಮಾಧಾನಗೊಂಡು ಪ್ರತಿಕ್ರಿಯಿಸಿದ್ದಾರೆ. ಸಚಿವ ರಾಜಣ್ಣ ಅವರು ಶಿವಕುಮಾರ್ ವಿರುದ್ಧ ವೈಯಕ್ತಿಕವಾಗಿಯೂ ದಾಳಿ ಮಾಡಿರುವುದು ವರದಿಯಾಗಿದೆ. ಮತ್ತೊಬ್ಬ ಸಚಿವ ಡಾ.ಮಹದೇವಪ್ಪ ಕೂಡ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಅಂತೂ ದಲಿತ ಸಚಿವರ ಬಂಡಾಯ ತೀವ್ರಗೊಳ್ಳುವ ಎಲ್ಲಾ ಸಾಧ್ಯತೆಗಳು ಗೋಚರಿಸುತ್ತಿವೆ.

ಈಗ ದೊಡ್ಡ ಗದ್ದಲ ಎಬ್ಬಿಸಿರುವುದು ಕೆಪಿಸಿಸಿ ಅಧ್ಯಕ್ಷರ ಹುದ್ದೆ ವಿಚಾರ. ಮುಖ್ಯಮಂತ್ರಿ ಬದಲಾವಣೆ ವಿಚಾರ ಹಿನ್ನೆಲೆಗೆ ಹೋಗಿ, ಈಗ ಕೆಪಿಸಿಸಿ ಅಧ್ಯಕ್ಷರ ಬದಲಾವಣೆ ವಿಚಾರ ಮುನ್ನೆಲೆಗೆ ಬಂದಿದೆ. ಕೆಪಿಸಿಸಿ ಅಧ್ಯಕ್ಷರ ಬದಲಾವಣೆ ಕುರಿತ ಕೂಗು ತೀವ್ರಗೊಳ್ಳುತ್ತಿದ್ದು, ಇದು ಡಿ.ಕೆ. ಶಿವಕುಮಾರ್ ವಿರುದ್ಧದ ಚಕ್ರವ್ಯೆಹವೇ ಎಂಬ ಪ್ರಶ್ನೆ ಎದ್ದಿದೆ. ಸತೀಶ್ ಜಾರಕಿಹೊಳಿ, ಕೆ.ಎನ್. ರಾಜಣ್ಣ ಹಾಗೂ ಡಾ.ಜಿ. ಪರಮೇಶ್ವರ್ ಕೆಪಿಸಿಸಿ ಅಧ್ಯಕ್ಷರ ಬದಲಾವಣೆಗೆ ಪಟ್ಟು ತೀವ್ರಗೊಳಿಸಿರುವುದು ಕುತೂಹಲ ಕೆರಳಿಸಿದೆ. ಔತಣಕೂಟ ಸಭೆ ರದ್ದು ಮಾಡಿಸಿದ್ದ ಡಿ.ಕೆ. ಶಿವಕುಮಾರ್‌ಗೆ ಪಕ್ಷದೊಳಗೆ ಭಾರೀ ವಿರೋಧ ವ್ಯಕ್ತವಾಗುತ್ತಿದೆ. ಒಂದು ಹಂತದಲ್ಲಿ ಸಹನೆ ಕಳೆದುಕೊಂಡಂತಿರುವ ಡಿ.ಕೆ. ಶಿವಕುಮಾರ್ ಅವರು, ‘‘ಕೆಪಿಸಿಸಿ ಅಧ್ಯಕ್ಷರ ಹುದ್ದೆ ಅಂಗಡಿಗಳಲ್ಲಿ, ಮಾಧ್ಯಮದವರ ಬಳಿ ಸಿಗುವುದಿಲ್ಲ’’ ಎಂದು ಹೇಳಿದ್ದಾರೆ.

ಇದರ ನಡುವೆಯೆ ಡಿ.ಕೆ. ಶಿವಕುಮಾರ್ ಮತ್ತು ಸತೀಶ್ ಜಾರಕಿಹೊಳಿ ನಡುವಿನ ಸಂಘರ್ಷ ಕೂಡ ತೀವ್ರಗೊಂಡಿದೆ.

ಅದು ಸರಿಪಡಿಸಲಾರದ ಹಂತಕ್ಕೆ ಹೋಗಿರುವಂತೆ ಕಾಣಿಸುತ್ತಿದೆ. ಬೆಳಗಾವಿಯಲ್ಲಿ ಜಾರಕಿಹೊಳಿ ಕುಟುಂಬದ ಪ್ರಾಬಲ್ಯ ಕಡಿಮೆ ಮಾಡಿ ಲಕ್ಷ್ಮೀ ಹೆಬ್ಬಾಳ್ಕರ್ ಅವರನ್ನು ಮುನ್ನೆಲೆಗೆ ತರುವ ಪ್ರಯತ್ನಗಳಾಗುತ್ತಿವೆ ಎಂಬ ಆರೋಪ ಜಾರಕಿಹೊಳಿ ಕುಟುಂಬದ್ದು. ಈ ಕಾರಣಕ್ಕಾಗಿ ಡಿ.ಕೆ. ಶಿವಕುಮಾರ್ ವಿರುದ್ಧ ಜಾರಕಿಹೊಳಿ ಕುಟುಂಬದ ಅಸಮಾಧಾನ ವ್ಯಕ್ತವಾಗುತ್ತಲೇ ಇದೆ. ತಮ್ಮನ್ನು ತುಳಿಯಲಾಗುತ್ತಿದೆ ಎಂಬ ಆತಂಕ ಸತೀಶ್ ಜಾರಕಿಹೊಳಿಯವರಿಗಿದೆ. ಹೀಗಾಗಿಯೇ ಅವರು ಕಳೆದ ಕೆಲವು ಸಮಯಗಳಿಂದ ಎಲ್ಲೆಡೆ ಪ್ರವಾಸ ಮಾಡಿ ಹಿಂದುಳಿದ ನಾಯಕರನ್ನು ಭೇಟಿಯಾಗಿ ಮಾತುಕತೆ ನಡೆಸುತ್ತಿದ್ಧಾರೆ.

ಅಲ್ಲದೆ ಕೆಪಿಸಿಸಿ ಅಧ್ಯಕ್ಷರ ಬದಲಾವಣೆ ಬಗ್ಗೆಯೂ ಧ್ವನಿ ಎತ್ತಿದ್ದಾರೆ. ಇದರ ಬಗ್ಗೆ ಸಿಟ್ಟಾದ ಡಿ.ಕೆ. ಶಿವಕುಮಾರ್, ಮಧ್ಯಪ್ರವೇಶಿಸುವಂತೆ ಹೈಕಮಾಂಡ್‌ಗೆ ದೂರಿದ್ದಾರೆ ಎಂದೂ ವರದಿಗಳಿದ್ದವು. ಸತೀಶ್ ಜಾರಕಿಹೊಳಿ ಅವರಿಗೆ ನೋಟಿಸ್ ನೀಡಲಾಗಿದೆ ಎಂದೂ ಹೇಳಲಾಗಿತ್ತು. ಆದರೆ ನೋಟಿಸ್ ಕೊಟ್ಟಿದ್ದು ಗೊತ್ತಿಲ್ಲ, ಬಿಜೆಪಿಯವರು ವದಂತಿ ಹಬ್ಬಿಸುತ್ತಿದ್ಧಾರೆ ಎಂದು ಶುಕ್ರವಾರ ಬೆಳಗಾವಿಗೆ ಬಂದಿದ್ದ ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೆವಾಲಾ ಹೇಳಿದ್ದಾರೆ.

ಇದೆಲ್ಲದರ ನಡುವೆ ಡಿ.ಕೆ. ಶಿವಕುಮಾರ್ ಸಿಎಂ ಆಗುವುದು ಪಕ್ಕಾ ಎಂದೆಲ್ಲಾ ಅವರ ಬೆಂಬಲಿಗರಲ್ಲಿ ಕೆಲವರು ಹೇಳುತ್ತಿದ್ದಾರೆ. ಸಿಎಂ ಆಗಲೇಬೇಕೆಂದು ಸರಕಾರ ಬಂದಾಗಿನಿಂದಲೂ ಡಿ.ಕೆ.ಶಿವಕುಮಾರ್ ಯತ್ನಿಸುತ್ತಿದ್ದರೂ ಸಿದ್ದರಾಮಯ್ಯ ಎದುರು ಅವರ ಆಟ ಸಾಗಿಲ್ಲ. ಬಹಳ ಸಲ ಸಿದ್ದರಾಮಯ್ಯ ಜೊತೆ ನಿಂತಿದ್ದೇನೆ ಎನ್ನುತ್ತಿರುತ್ತಾರೆ. ಮತ್ತೆ ಇದ್ದಕ್ಕಿದ್ದಂತೆ, ‘‘ನಾನು ಪಕ್ಷಕ್ಕಾಗಿ ಏನೆಲ್ಲ ಮಾಡಿದ್ದೇನೆ ಎನ್ನುವುದು ಹೈಕಮಾಂಡ್‌ಗೆ ಗೊತ್ತಿದೆ. ಸೂಕ್ತ ಸಮಯದಲ್ಲಿ ಅವರು ತೀರ್ಮಾನ ತೆಗೆದುಕೊಳ್ಳುತ್ತಾರೆ’’ ಎಂದು ಹೇಳುತ್ತಾರೆ. ಮತ್ತೆ ಇದ್ದಕ್ಕಿದ್ದಂತೆ ಹತಾಶ ಭಾವನೆಯಿಂದೆಂಬಂತೆ ಸಿಡಿಮಿಡಿಗೊಳ್ಳುತ್ತಲೂ ಇರುತ್ತಾರೆ.

ಡಿ.ಕೆ. ಶಿವಕುಮಾರ್ ರಾಜಕೀಯ ಬದುಕಿನಲ್ಲಿ ಮೊದಲು ಗಮನ ಸೆಳೆಯುವುದೇ ಅವರ ಕಾಂಗ್ರೆಸ್ ನಿಷ್ಠೆ. ಕಾಂಗ್ರೆಸ್ ಜೊತೆಗಿನ ಅವರ ನಂಟು ಶುರುವಾದದ್ದು 18ನೇ ವಯಸ್ಸಿನಿಂದಲೇ. 1994ರಲ್ಲೊಮ್ಮೆ ರಾಜಕೀಯ ಕಾರಣಗಳಿಂದಾಗಿ ಪಕ್ಷೇತರರಾಗಿ ಸ್ಪರ್ಧಿಸಬೇಕಾಯಿತು ಎನ್ನುವುದು ಬಿಟ್ಟರೆ ಅವರ ಕಾಂಗ್ರೆಸ್ ನಿಷ್ಠೆ ಮತ್ತೆ ಮುಕ್ಕಾಗದೆ ಮುಂದುವರಿದುಕೊಂಡು ಬಂದಿದೆ. ಅವರಿಗೀಗ 62 ವರ್ಷ.

ಕಾಂಗ್ರೆಸ್ ಬಿಕ್ಕಟ್ಟಿನ ಹೊತ್ತಿನಲ್ಲೆಲ್ಲ ತಮ್ಮ ರಾಜಕೀಯ ಚಾಕಚಕ್ಯತೆ ಮತ್ತು ಧಾಡಸೀತನದಿಂದ ಪರಿಸ್ಥಿತಿ ನಿಭಾಯಿಸಿದವರು ಡಿ.ಕೆ.ಶಿವಕುಮಾರ್. ಆ ಕಾರಣದಿಂದಾಗಿಯೇ ದಿಲ್ಲಿ ನಾಯಕರಿಗೂ ಹತ್ತಿರ. ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿಯವರ ವಿಶ್ವಸನೀಯ ವಲಯದಲ್ಲಿ ಸ್ಥಾನ. ದೇಶದ ಅತಿ ಶ್ರೀಮಂತ ರಾಜಕಾರಣಿಗಳಲ್ಲಿ ಒಬ್ಬರೆಂಬ ಹೆಗ್ಗಳಿಕೆ. ಪಕ್ಷಕ್ಕೆ, ಸಂಘಟನೆಗೆ ತಾವು ಅನಿವಾರ್ಯ ಎಂಬ ಭಾವನೆಯನ್ನೂ ಮೊದಲಿನಿಂದಲೇ ಸೃಷ್ಟಿಸಿದವರು.

ಕನಕಪುರ ತಾಲೂಕು ದೊಡ್ಡಆಲಹಳ್ಳಿ ಗ್ರಾಮದ ಕೆಂಪೇಗೌಡ ಹಾಗೂ ಗೌರಮ್ಮ ದಂಪತಿಯ ಪುತ್ರ ಡಿ.ಕೆ. ಶಿವಕುಮಾರ್.

ಜನಿಸಿದ್ದು 1962ರ ಮೇ 15. ಸಹೋದರ ಡಿ.ಕೆ. ಸುರೇಶ್ ಸಹ ರಾಜಕೀಯದಲ್ಲಿ ಸಕ್ರಿಯರಾಗಿದ್ದು, ಕನಕಪುರ ರಾಜಕಾರಣವಂತೂ ಇವರಿಬ್ಬರ ಕೈಯಲ್ಲಿಯೇ ಇದೆ. 18ನೇ ವಯಸ್ಸಿನಲ್ಲಿಯೇ ಕಾಂಗ್ರೆಸ್ ಪಕ್ಷದ ವಿದ್ಯಾರ್ಥಿ ವಿಭಾಗವಾದ ಎನ್‌ಎಸ್‌ಯುಐ ಸೇರಿದ ಡಿ.ಕೆ. ಶಿವಕುಮಾರ್, 1981-83ರ ಅವಧಿಯಲ್ಲಿ ಬೆಂಗಳೂರು ಜಿಲ್ಲಾ ಘಟಕದ ಅಧ್ಯಕ್ಷರಾಗಿದ್ದರು. ಬೆಂಗಳೂರಿನ ಆರ್.ಸಿ. ಕಾಲೇಜಿನಲ್ಲಿ ಓದುವಾಗ ಯುವ ಕಾಂಗ್ರೆಸ್ ರಾಜ್ಯ ಘಟಕದ ಕಾರ್ಯದರ್ಶಿಯಾದರು.

1985ರಲ್ಲಿ ಮೊದಲ ಬಾರಿಗೆ ಸಾತನೂರು ಕ್ಷೇತ್ರದಲ್ಲಿ ಜೆಡಿಎಸ್‌ನ ಎಚ್.ಡಿ. ದೇವೇಗೌಡರ ವಿರುದ್ಧ ಕಾಂಗ್ರೆಸ್ ಅಭ್ಯರ್ಥಿಯಾಗಿ ಕಣಕ್ಕಿಳಿದರು. ಪ್ರಬಲ ಪೈಪೋಟಿಯೊಡ್ಡಿದ್ದರು. ದೇವೇಗೌಡರು ಪ್ರಯಾಸದಿಂದ ಗೆಲ್ಲಬೇಕಾಯಿತು. ತಮ್ಮ ತಾಕತ್ತೇನೆಂಬುದನ್ನು ತೋರಿಸಿದ್ದ ಶಿವಕುಮಾರ್, 1987ರಲ್ಲಿ ಸಾತನೂರು ಕ್ಷೇತ್ರದಿಂದ ಬೆಂಗಳೂರು ಗ್ರಾಮಾಂತರ ಜಿಲ್ಲಾ ಪಂಚಾಯತ್ ಸದಸ್ಯರಾಗಿ ಆಯ್ಕೆಯಾದರು. 1989ರಲ್ಲಿ ಸಾತನೂರು ಕ್ಷೇತ್ರದಿಂದ ವಿಧಾನಸಭೆ ಚುನಾವಣೆ ಗೆದ್ದು, ಕ್ಷೇತ್ರದಲ್ಲಿದ್ದ ಜೆಡಿಎಸ್ ಪ್ರಭಾವ ಇಲ್ಲವಾಗಿಸಿದರು. 1991ರಲ್ಲಿ ಎಸ್. ಬಂಗಾರಪ್ಪ ಮುಖ್ಯಮಂತ್ರಿಯಾಗಿ ಆಯ್ಕೆಯಾಗುವಲ್ಲಿಯೂ ಡಿ.ಕೆ. ಶಿವಕುಮಾರ್ ಪಾತ್ರ ದೊಡ್ಡದಿತ್ತು. ಅದರ ಫಲವಾಗಿ ಬಂಗಾರಪ್ಪ ಸಂಪುಟದಲ್ಲಿ ಬಂದಿಖಾನೆ ಖಾತೆ ಸಿಕ್ಕಿತು. 1994ರ ಚುನಾವಣೆಯಲ್ಲಿ ಕೆಲವು ನಾಯಕರ ಪಿತೂರಿಯ ಪರಿಣಾಮವಾಗಿ ಕಾಂಗ್ರೆಸ್ ಟಿಕೆಟ್ ಕೈತಪ್ಪಿದರೂ, ಪಕ್ಷೇತರರಾಗಿ ಕಣಕ್ಕಿಳಿದು ಗೆದ್ದು ತೋರಿಸಿದರು.

1999ರ ಚುನಾವಣೆಯಲ್ಲಿ ಸಾತನೂರು ಕ್ಷೇತ್ರದಿಂದ ಮತ್ತೆ ಆಯ್ಕೆಗೊಂಡು, ಎಸ್.ಎಂ. ಕೃಷ್ಣ ಸಂಪುಟದಲ್ಲಿ ಸಹಕಾರ ಸಚಿವರಾದರು. 2002ರಲ್ಲಿ ನಗರಾ ಭಿವೃದ್ಧಿ ಖಾತೆ ಸಚಿವರಾದರು. 2008ರಲ್ಲಿ ಕ್ಷೇತ್ರ ಪುನರ್ ವಿಂಗಡಣೆ ಬಳಿಕ ಸಾತನೂರು ಕ್ಷೇತ್ರ ಇಲ್ಲವಾಯಿತು. ಆಗ ಅವರು ಎಂಟ್ರಿ ಕೊಟ್ಟಿದ್ದೇ ಈಗ ಅವರ ರಾಜಕೀಯ ಅಖಾಡವಾಗಿರುವ ಕನಕಪುರಕ್ಕೆ. 2008, 2013 ಮತ್ತು 2018, 2023ರ ಚುನಾವಣೆಯಲ್ಲಿ ಕನಕಪುರದಿಂದ ಗೆಲುವು ಸಾಧಿಸಿದ್ದಾರೆ.

ಈ ನಡುವೆ ದೇವೇಗೌಡರ ರಾಜಕೀಯ ಆಟಕ್ಕೆ, 2006ರ ಲೋಕಸಭಾ ಚುನಾವಣೆಯಲ್ಲಿ ಅಂದು ಅಷ್ಟೇನೂ ಪರಿಚಿತರಾಗಿರದ ತೇಜಸ್ವಿನಿ ಗೌಡ ಅವರನ್ನು ದೇವೇಗೌಡರ ವಿರುದ್ಧ ಕಣಕ್ಕಿಳಿಸಿ ಗೆಲ್ಲಿಸಿ, ತಮ್ಮದೇ ಆದ ರೀತಿಯಲ್ಲಿ ಪ್ರತ್ಯುತ್ತರ ಕೊಟ್ಟಿದ್ದು ದೊಡ್ಡ ವಿಚಾರವಾಗಿತ್ತು. ದೇವೇಗೌಡರ ಕಾರಣದಿಂದಲೇ 2004ರಲ್ಲಿ ಎಸ್.ಎಂ. ಕೃಷ್ಣರಿಗೆ ಮುಖ್ಯಮಂತ್ರಿಯಾಗುವ ಅವಕಾಶ ತಪ್ಪಿದಾಗ ಅವರ ಬೆನ್ನಿಗೆ ನಿಂತಿದ್ದವರು ಇದೇ ಡಿ.ಕೆ.ಶಿವಕುಮಾರ್. ಮಹಾರಾಷ್ಟ್ರ ರಾಜ್ಯಪಾಲ ಹುದ್ದೆ ಕೃಷ್ಣ ಅವರಿಗೆ ಸಿಗುವಲ್ಲಿ, ಬಳಿಕ ಅವರು ಸಕ್ರಿಯ ರಾಜಕಾರಣಕ್ಕೆ 2008ರಲ್ಲಿ ಮರಳಬಯಸಿದಾಗ ಅವರನ್ನು ಕರ್ನಾಟಕದಿಂದ ರಾಜ್ಯಸಭೆಗೆ ಆರಿಸುವಲ್ಲಿ ಶಿವಕುಮಾರ್ ಪಾತ್ರ ಮಹತ್ವದ್ದಾಗಿತ್ತು.

ಡಿ.ಕೆ. ಶಿವಕುಮಾರ್ ಅವರ ತಾಕತ್ತೇ ಇಂಥ ರಾಜಕೀಯ ಚತುರತೆ ಮತ್ತು ಸಂಘಟನಾ ಶಕ್ತಿ. ಇಷ್ಟು ದೀರ್ಘ ಕಾಲದಿಂದ ಕಾಂಗ್ರೆಸ್‌ಗೆ ನಿಷ್ಠರಾಗಿರುವ ಅವರು, ಪಕ್ಷ ವಹಿಸಿದ ಕೆಲಸಗಳನ್ನೆಲ್ಲ ಶ್ರದ್ಧೆಯಿಂದ ಮಾಡಿದ್ದಾರೆ. ಮಹಾರಾಷ್ಟ್ರದಲ್ಲಿ ವಿಲಾಸ್ ರಾವ್ ದೇಶ್‌ಮುಖ್ ಸರಕಾರ ಅಲ್ಪಮೊತ್ತಕ್ಕೆ ಕುಸಿಯುವ ಭೀತಿ ಎದುರಾದಾಗ ಶಾಸಕರನ್ನು ರಕ್ಷಣೆ ಮಾಡಿ ಬೆಂಗಳೂರಿಗೆ ಕರೆದುಕೊಂಡು ಬಂದು ಕುದುರೆ ವ್ಯಾಪಾರ ನಡೆಯದಂತೆ ನೋಡಿಕೊಂಡವರು, 2017ರಲ್ಲಿ ಗುಜರಾತ್ ವಿಧಾನಸಭೆಯಿಂದ ರಾಜ್ಯಸಭೆ ಚುನಾವಣೆ ನಡೆಯುವಾಗ ಪಕ್ಷದ ಸೂಚನೆಯಂತೆ ಅಲ್ಲಿನ ಶಾಸಕರನ್ನು ಬೆಂಗಳೂರಿಗೆ ಕರೆದುಕೊಂಡು ಬಂದು ಕುದುರೆ ವ್ಯಾಪಾರ ತಪ್ಪಿಸಿದವರು ಡಿ.ಕೆ. ಶಿವಕುಮಾರ್. ಅದರ ಪರಿಣಾಮವನ್ನೂ ರಾಜಕೀಯ ಪ್ರತೀಕಾರವಾಗಿ ಅವರು ಅನುಭವಿಸಬೇಕಾಗಿ ಬಂದಿರುವುದು ಗೊತ್ತಿರುವ ವಿಚಾರ. ಜಾರಿ ನಿರ್ದೇಶನಾಲಯದ ದಾಳಿ ಬಳಿಕ ಡಿ.ಕೆ. ಶಿವಕುಮಾರ್ ಬಂಧನವಾಯಿತು. ದಿಲ್ಲಿಯ ತಿಹಾರ್ ಜೈಲಿನಲ್ಲಿದ್ದ ಅವರನ್ನು ನೋಡಲು ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಹೋಗಿದ್ದರು. ಬಿಡುಗಡೆ ಬಳಿಕ 2020 ಮಾರ್ಚ್ 11ರಂದು ಅವರನ್ನು ಕೆಪಿಸಿಸಿ ಅಧ್ಯಕ್ಷರಾಗಿ ನೇಮಕ ಮಾಡಲಾಯಿತು. ಅವರ ನಿಷ್ಠೆಗೆ ಅದು ಕಾಂಗ್ರೆಸ್ ಹೈಕಮಾಂಡ್ ನೀಡಿದ ಉಡುಗೊರೆ. ಮುಖ್ಯಮಂತ್ರಿಯಾಗಬೇಕೆಂಬುದು ಈಗ ಅವರೆದುರು ಇರುವ ಏಕೈಕ ಗುರಿ ಮತ್ತು ಅದಕ್ಕಾಗಿ ಸತತ ಯತ್ನ ನಡೆಸಿಯೇ ಇದ್ದಾರೆ.

ಆದರೆ ಡಿ.ಕೆ. ಶಿವಕುಮಾರ್ ಎಡವುತ್ತಿರುವುದು ಎಲ್ಲಿ? ಅವರ ಯಾವ ಗುಣಗಳು ಅವರಿಗೆ ತೊಡಕಾಗುತ್ತಿವೆ? ಅವರ ಪ್ಲಸ್ ಪಾಯಿಂಟ್‌ಗಳೆಲ್ಲವನ್ನೂ ವ್ಯರ್ಥವಾಗಿಸುವ ಹಾಗೆ ಅವರ ನಡೆಯಲ್ಲಿ ಕಾಣಿಸುವ ಮೈನಸ್ ಪಾಯಿಂಟ್‌ಗಳೇನು? ಅಧಿಕಾರ ಉಳಿಸಿಕೊಳ್ಳಲು ಸಿದ್ದರಾಮಯ್ಯ ಮತ್ತು ಪಡೆದುಕೊಳ್ಳಲು ಡಿ.ಕೆ.ಶಿವಕುಮಾರ್ ಪಟ್ಟು ಹಾಕುತ್ತಿರುವ ಹೊತ್ತಲ್ಲಿ ಬಹುಶಃ ಎಲ್ಲಿಯೋ ಶಿವಕುಮಾರ್ ತಾಳ್ಮೆ ಕಳೆದುಕೊಳ್ಳುತ್ತಿದ್ದಾರೆಯೇ ಎಂದೆನ್ನಿಸದೇ ಇರುವುದಿಲ್ಲ.

1. ಡಿ.ಕೆ. ಶಿವಕುಮಾರ್ ಆತುರಪಟ್ಟು ಅವಾಂತರ ಮಾಡಿಕೊಳ್ಳುತ್ತಿದ್ದಾರೆ ಎಂಬ ಆಕ್ಷೇಪಗಳಿವೆ.

2. ಸಿದ್ದರಾಮಯ್ಯ ಬಣದ ಔತಣಕೂಟದ ವಿಚಾರಕ್ಕೆ ಒಳಗೊಳಗೇ ಅಂಜಿದ್ದ ಡಿ.ಕೆ. ಶಿವಕುಮಾರ್, ಪರಿಶಿಷ್ಟ ಜಾತಿ-ಪಂಗಡದ ಸಚಿವರು ಮತ್ತು ಶಾಸಕರ ಔತಣಕೂಟ ನಡೆಯದಂತೆ ತಡೆಯಲು ಹೋಗಿ ಆಕ್ರೋಶಕ್ಕೆ ತುತ್ತಾಗಿದ್ದಾರೆ. ಅದನ್ನು ನಡೆಯಲು ಬಿಟ್ಟಿದ್ದರೆ ದೊಡ್ಡ ವಿರೋಧವನ್ನು ತಪ್ಪಿಸಿಕೊಳ್ಳುವ ಅವಕಾಶ ಇತ್ತು.

3. ಈಗ ಆಕ್ರೋಶಗೊಂಡಿರುವ ಪರಿಶಿಷ್ಟ ಜಾತಿ-ಪಂಗಡದ ಸಚಿವರು, ಶಾಸಕರು ಸಭೆ ಮಾಡಿಯೇ ತಿರುತ್ತೇವೆ ಎಂದು ತಿರುಗೇಟು ನೀಡುತ್ತಿದ್ದಾರೆ.

4. ಸಿದ್ದರಾಮಯ್ಯ ಅವರಂತೆ ಶಾಸಕರ ವಿಶ್ವಾಸ ಗಳಿಸುವುದಕ್ಕೆ ಶಿವಕುಮಾರ್ ಆದ್ಯತೆ ನೀಡುವುದಿಲ್ಲ ಎಂಬುದು ಅವರ ಬಹಳ ದೊಡ್ಡ ಮೈನಸ್ ಪಾಯಿಂಟ್.

5. ಹೈಕಮಾಂಡ್ ಅನ್ನು ನೆಚ್ಚಿಕೊಂಡಿರುವ ಅವರು, ಹೈಕಮಾಂಡ್ ಮೂಲಕವೇ ಸಿಎಂ ಆಗಿಬಿಡುತ್ತೇನೆ ಎಂಬ ಭಾವನೆಯಲ್ಲಿರುವುದರಿಂದ, ಯಾರನ್ನೂ ವಿಶ್ವಾಸಕ್ಕೆ ತೆಗೆದುಕೊಳ್ಳುವ ಯತ್ನ ಮಾಡುತ್ತಿಲ್ಲ.

6. ಆರಂಭದಿಂದಲೂ ಸಿದ್ದರಾಮಯ್ಯ ಅವರಿಗೆ ಸೆಡ್ಡು ಹೊಡೆದು ನಿಂತರು ಮತ್ತದರಿಂದ ಅವರಿಗೆ ಆಮೇಲೆ ಮುಖಭಂಗವೂ ಆಯಿತು. ಹೀಗಿರುವಾಗ, ಸಿದ್ದರಾಮಯ್ಯ ಬೆನ್ನಿಗೆ ನಿಲ್ಲುತ್ತೇನೆ, ಅವರ ಮಾತಿಗೆ ಬದ್ಧ ಎಂದೆಲ್ಲ ಅವರು ಆಗಾಗ ಹೇಳುವುದರಲ್ಲಿ ರಾಜಕೀಯ ಮಾತ್ರ ಕಾಣಿಸುತ್ತದೆಯೇ ಹೊರತು, ಅದನ್ನು ಯಾರೂ ನಂಬುವುದಿಲ್ಲ.

7. ಮಂತ್ರಿಗಳನ್ನು, ಶಾಸಕರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಬೇಕೆಂಬುದನ್ನೇ ಮರೆತಿದ್ದಾರೆ. ಡಾ. ಜಿ. ಪರಮೇಶ್ವರ್, ಸತೀಶ್ ಜಾರಕಿಹೊಳಿ, ಎಂ.ಬಿ. ಪಾಟೀಲ್ ಅವರಂತಹ ಹಿರಿಯರನ್ನು ವೈರಿಗಳಂತೆ ಕಾಣುತ್ತಿದ್ದಾರೆ. ಅದರ ಪರಿಣಾಮವಾಗಿಯೇ ಅವರು ಪಕ್ಷದಲ್ಲಿ ಬಹಳ ಸಲ ಒಬ್ಬಂಟಿಯ ಹಾಗೆ ಕಾಣಿಸುತ್ತಾರೆ.

ಅಧಿಕಾರ ಹಂಚಿಕೆ ವಿಚಾರದ ಸಂಘರ್ಷ ಈಗ ಮತ್ತೊಮ್ಮೆ ಬಹಳ ನಿರ್ಣಾಯಕ ಎನ್ನುವ ಘಟ್ಟಕ್ಕೆ ಬಂದಿರುವ ಹಾಗಿದೆ. ಈ ಹಂತದಲ್ಲಿಯೇ ಕೆಪಿಸಿಸಿ ಅಧ್ಯಕ್ಷ ಹುದ್ದೆ ವಿಚಾರವಾಗಿ ಎದ್ದ ವಿವಾದಕ್ಕೆ ಪ್ರತಿಕ್ರಿಯಿಸುವಾಗ ಡಿ.ಕೆ. ಶಿವಕುಮಾರ್ ತಾಳ್ಮೆ ಕಳೆದುಕೊಂಡು ಪಕ್ಷದ ಪ್ರಮುಖ ನಾಯಕರ ವಿರುದ್ಧವೇ ಹರಿಹಾಯ್ದಿರುವುದು ಅವರ ಮಹತ್ವಾಕಾಂಕ್ಷೆಯ ದೃಷ್ಟಿಯಿಂದ ಒಳ್ಳೆಯ ಬೆಳವಣಿಗೆಯಂತೂ ಅಲ್ಲ. ಹೀಗಾಗಿ, ಯಾವ ಸಿಎಂ ಹುದ್ದೆಯನ್ನು ಸಿದ್ದರಾಮಯ್ಯ ಅವರಿಂದ ಪಡೆದುಕೊಳ್ಳ ಬೇಕೆಂದು ಅವರು ಯತ್ನಿಸುತ್ತಿದ್ದಾರೋ ಅದರಿಂದ ತಾವಾಗಿಯೇ ದೂರವಾಗುತ್ತಿದ್ದಾರೆಯೇ ಎಂಬ ಅನುಮಾನಗಳು ಮೂಡುತ್ತವೆ.

ಒಂದು ಮಾತನ್ನು ಯಾಕೆ ಅವರು ಅರ್ಥ ಮಾಡಿಕೊಂಡಿಲ್ಲವೊ ಗೊತ್ತಿಲ್ಲ. ಅವರು ಕಾಂಗ್ರೆಸ್‌ಗೆ ನಿಷ್ಠರಾಗಿರಬಹುದು. ಹಾಗೆಂದು ಇತರರೂ ಹೈಕಮಾಂಡ್ ಹೇಳಿದ್ದನ್ನೆಲ್ಲ ಕೇಳಿಕೊಂಡು ಉಳಿದುಬಿಡುತ್ತಾರೆ ಎಂದು ಅವರು ಅಂದುಕೊಂಡಿದ್ದರೆ ಅದು ಭ್ರಮೆ ಮಾತ್ರ. ಹಾಗಾಗಿ ಹೈಕಮಾಂಡ್ ಅನ್ನು ನೆಚ್ಚಿ ಸಿಎಂ ಆಗುತ್ತೇನೆ ಎಂದುಕೊಂಡಿರುವ ಅವರು ಪಕ್ಷದೊಳಗಿನ ಬಹಳ ದೊಡ್ಡ ಶಾಸಕ ಬಲವೇ ತಮ್ಮ ವಿರುದ್ಧ ನಿಲ್ಲಬಹುದಾದ ಸಂದರ್ಭವನ್ನು ತಾವೇ ಆಹ್ವಾನಿಸಿಕೊಳ್ಳುವ ಸಂದರ್ಭವೂ ಮುಂದೊಂದು ದಿನ ಬಂದರೆ ಅಚ್ಚರಿಯಿಲ್ಲ. ಆಗ ಹೈಕಮಾಂಡ್ ಕೂಡ ಅಸಹಾಯಕವಾಗುತ್ತದೆ.

ಮುಂದಿನದನ್ನು ಊಹಿಸಿ ಉಪಯೋಗವಿಲ್ಲ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ಆರ್. ಜೀವಿ

contributor

Similar News