ಕ್ಷೇತ್ರ ಮರುವಿಂಗಡಣೆ ದಕ್ಷಿಣ ಭಾರತೀಯರ ಆತಂಕಕ್ಕೆ ಕಾರಣವೇನು?
ದಕ್ಷಿಣಕ್ಕೆ ಪ್ರಾತಿನಿಧ್ಯ ಕಡಿಮೆಯಾದರೆ ರಾಜಕೀಯ ಪ್ರಭಾವವನ್ನು ಕಳೆದುಕೊಳ್ಳಬಹುದು. ಆದರೆ ಬಿಜೆಪಿ ಪ್ರಾಬಲ್ಯವಿರುವ ಹಿಂದಿ ಭಾಷಿಕ ರಾಜ್ಯಗಳು ಲಾಭ ಪಡೆಯುತ್ತವೆ. ಹಾಗಾದಾಗ, ರಾಷ್ಟ್ರೀಯ ನೀತಿ ನಿರೂಪಣೆಯ ಮೇಲೆ ತೀವ್ರ ಪರಿಣಾಮ ಉಂಟಾಗಲಿದೆ. ಇದು ಆರ್ಥಿಕ ಕೊಡುಗೆ ಮತ್ತು ಆದಾಯ ಕುರಿತಾದ ಇತರ ವಿವಾದಗಳನ್ನು ಸಹ ಮುನ್ನೆಲೆಗೆ ತರುತ್ತದೆ.;

ಭಾಗ- 2
ದಕ್ಷಿಣ ರಾಜ್ಯಗಳು ಇದನ್ನು ಏಕೆ ವಿರೋಧಿಸುತ್ತಿವೆ?
ಜನಸಂಖ್ಯೆಯ ಆಧಾರದ ಮೇಲೆ ಮಾತ್ರ ಕ್ಷೇತ್ರ ಮರುವಿಂಗಡಣೆ ನಡೆದರೆ, ದಕ್ಷಿಣದ ಲೋಕಸಭಾ ಸ್ಥಾನಗಳ ಪಾಲು ಶೇ. 19ಕ್ಕೆ ಇಳಿಯಬಹುದು. ಆದರೆ ಹಿಂದಿ ಭಾಷಿಕ ರಾಜ್ಯಗಳ ಪಾಲು ಸುಮಾರು ಶೇ. 60ಕ್ಕೆ ಏರಬಹುದು. ದಕ್ಷಿಣಕ್ಕೆ ಪ್ರಾತಿನಿಧ್ಯ ಕಡಿಮೆಯಾದರೆ ರಾಜಕೀಯ ಪ್ರಭಾವವನ್ನು ಕಳೆದುಕೊಳ್ಳಬಹುದು. ಆದರೆ ಬಿಜೆಪಿ ಪ್ರಾಬಲ್ಯವಿರುವ ಹಿಂದಿ ಭಾಷಿಕ ರಾಜ್ಯಗಳು ಲಾಭ ಪಡೆಯುತ್ತವೆ. ಹಾಗಾದಾಗ, ರಾಷ್ಟ್ರೀಯ ನೀತಿ ನಿರೂಪಣೆಯ ಮೇಲೆ ತೀವ್ರ ಪರಿಣಾಮ ಉಂಟಾಗಲಿದೆ. ಇದು ಆರ್ಥಿಕ ಕೊಡುಗೆ ಮತ್ತು ಆದಾಯ ಕುರಿತಾದ ಇತರ ವಿವಾದಗಳನ್ನು ಸಹ ಮುನ್ನೆಲೆಗೆ ತರುತ್ತದೆ. ತಮಿಳುನಾಡು ಮತ್ತು ಕರ್ನಾಟಕ, ನೇರ ತೆರಿಗೆಗಳಿಗೆ ಮಹಾರಾಷ್ಟ್ರದಂತೆಯೇ ಗಮನಾರ್ಹ ಪಾಲು ನೀಡುತ್ತವೆ. ಆದರೆ ಅದಕ್ಕೆ ಈ ಎರಡೂ ರಾಜ್ಯಗಳು ತಮ್ಮ ಕೊಡುಗೆಗಳಲ್ಲಿ ಶೇ. 30 ರಷ್ಟನ್ನು ಮಾತ್ರ ಪಡೆಯುತ್ತವೆ.
ಇನ್ನೊಂದೆಡೆ ಬಿಹಾರ ಮತ್ತು ಉತ್ತರ ಪ್ರದೇಶಗಳು ತಾವು ನೀಡುವ ಕೊಡುಗೆಯ ಶೇ. 250-350ರಷ್ಟನ್ನು ಪಡೆಯುತ್ತವೆ.
ಕ್ಷೇತ್ರ ಮರುವಿಂಗಡಣೆ ವಿಚಾರ ಮೊದಲ ಬಾರಿಗೆ 2023ರ ಮಾರ್ಚ್‌ನಲ್ಲಿ ಸುದ್ದಿಯಾಗಿತ್ತು. ಅದೇ ವರ್ಷ ಮೇ ತಿಂಗಳಲ್ಲಿ ಮೋದಿ ಹೊಸ ಸಂಸತ್ತಿನ ಕಟ್ಟಡ ಉದ್ಘಾಟಿಸಿದಾಗ ಇದು ಮತ್ತೆ ಗಮನ ಸೆಳೆಯಿತು. ಲೋಕಸಭೆ 888 ಆಸನಗಳ ಸಾಮರ್ಥ್ಯವನ್ನು ಹೊಂದಿರುವುದರ ವಿಚಾರ ಸುದ್ದಿಯಾದಾಗ, ಡಿಲಿಮಿಟೇಷನ್ ವಿಚಾರವು ಚರ್ಚೆಗೆ ಬಂದಿತ್ತು. ಆನಂತರ ಅದೇ ಸೆಪ್ಟಂಬರ್‌ನಲ್ಲಿ ಮಹಿಳಾ ಮೀಸಲಾತಿ ಮಸೂದೆ ಅಂಗೀಕಾರವಾದಾಗ, ಮತ್ತೊಮ್ಮೆ ಕ್ಷೇತ್ರ ಮರುವಿಂಗಡಣೆ ವಿಚಾರ ಚರ್ಚೆಗೆ ಬಂದಿತ್ತು.
ಸೀಟುಗಳ ಸಂಖ್ಯೆಯನ್ನು ಹೇಗೆ ನಿರ್ಧರಿಸಲಾಗುತ್ತದೆ?
ತೃಣಮೂಲ ಕಾಂಗ್ರೆಸ್ ಸಂಸದೆ ಮಹುವಾ ಮೊಯಿತ್ರಾ ಹೇಳಿಕೆ ಹೀಗಿದೆ: ಅಂಕಿ ಅಂಶಗಳ ಪ್ರಕಾರ, ಕೇರಳಕ್ಕೆ ಯಾವುದೇ ಸ್ಥಾನ ಹೆಚ್ಚಳ ಆಗುವುದಿಲ್ಲ. ತಮಿಳುನಾಡಿಗೆ ಕೇವಲ ಶೇ.26ರಷ್ಟು ಹೆಚ್ಚಳವಾಗುವಾಗ, ಮಧ್ಯಪ್ರದೇಶ ಮತ್ತು ಉತ್ತರ ಪ್ರದೇಶ ಎರಡಕ್ಕೂ ಶೇ. 79ರಷ್ಟು ಹೆಚ್ಚಿನ ಸ್ಥಾನಗಳು ಸಿಗಲಿವೆ.
ಕ್ಷೇತ್ರ ಮರುವಿಂಗಡಣೆ ನಂತರ ಯಾವ ರಾಜ್ಯಕ್ಕೆ ಎಷ್ಟು ಸ್ಥಾನಗಳು ಸಿಗುತ್ತವೆ ಎಂಬುದು, ಕ್ಷೇತ್ರಗಳನ್ನು ವಿಂಗಡಿಸಲು ಆಧಾರವಾಗಿಸಿಕೊಳ್ಳುವ ಸರಾಸರಿ ಜನಸಂಖ್ಯೆಯನ್ನು ಅವಲಂಬಿಸಿರುತ್ತದೆ. 1977ರ ಲೋಕಸಭೆ ಚುನಾವಣೆಯಲ್ಲಿ ಸೀಟುಗಳ ಸಂಖ್ಯೆಯನ್ನು ಸ್ಥಗಿತಗೊಳಿಸಿದ ನಂತರ ಮೊದಲ ಬಾರಿಗೆ ಪ್ರತಿಯೊಬ್ಬ ಸಂಸದರು ಸರಾಸರಿ 10.11 ಲಕ್ಷ ಜನರನ್ನು ಪ್ರತಿನಿಧಿಸಿದರು. ಒಂದು ಲೋಕಸಭೆ ಸ್ಥಾನ ಎಷ್ಟು ಜನರನ್ನು ಪ್ರತಿನಿಧಿಸಬೇಕು ಎಂಬುದರ ಮೇಲೆ ಯಾವುದೇ ನಿರ್ಬಂಧವಿಲ್ಲ. ಉದಾಹರಣೆಗೆ, 1977ರ ಪ್ರಕಾರವೇ ಒಂದು ಕ್ಷೇತ್ರದ 10.11 ಲಕ್ಷ ಜನರ ಪ್ರಾತಿನಿಧ್ಯ ಹಾಗೆಯೇ ಉಳಿದುಕೊಂಡರೆ, ಜನಸಂಖ್ಯೆಯಲ್ಲಿನ ಹೆಚ್ಚಳದಿಂದಾಗಿ ಲೋಕಸಭೆಯ ಬಲವನ್ನು ಸುಮಾರು 1,400ಕ್ಕೆ ವಿಸ್ತರಿಸಬೇಕಾಗುತ್ತದೆ. ಉತ್ತರಾಖಂಡ ಸೇರಿದಂತೆ ಉತ್ತರಪ್ರದೇಶಕ್ಕೆ ಈ ಸಂಖ್ಯೆ ಲೋಕಸಭೆಯಲ್ಲಿ ಪ್ರಸ್ತುತ ಇರುವ 85 ಸ್ಥಾನಗಳಿಗೆ ಹೋಲಿಸಿದರೆ 250 ಸ್ಥಾನಗಳಿಗೆ ಹೆಚ್ಚಾಗುತ್ತದೆ. ಇದರ ಪರಿಣಾಮವಾಗಿ ಅದರ ಸ್ಥಾನಗಳು ಮೂರು ಪಟ್ಟು ಹೆಚ್ಚಾಗುತ್ತವೆ. ಬಿಹಾರ ಮತ್ತು ಜಾರ್ಖಂಡ್‌ನ ಒಟ್ಟು ಸ್ಥಾನಗಳು 54 ರಿಂದ 169ಕ್ಕೆ ಹೆಚ್ಚಾಗುತ್ತವೆ. ಅಂದರೆ ಅಲ್ಲಿಯೂ ಮೂರು ಪಟ್ಟು ಹೆಚ್ಚಳ. ಅದೇ ರೀತಿ, ರಾಜಸ್ಥಾನದ ಸ್ಥಾನಗಳು 25ರಿಂದ 82ಕ್ಕೆ ಹೆಚ್ಚಾಗುತ್ತವೆ. ಆದರೆ ತಮಿಳುನಾಡಿನ ಪಾಲು 39ರಿಂದ ಕೇವಲ 76ಕ್ಕೆ ಹೆಚ್ಚಾಗುತ್ತದೆ. ಅಂದರೆ ಎರಡರಷ್ಟು ಕೂಡ ಅಲ್ಲ. ಇನ್ನು, ಕೇರಳದ ಸ್ಥಾನಗಳು 20ರಿಂದ 36ಕ್ಕೆ ಏರುತ್ತವೆ. ಆದರೂ, 10.11 ಲಕ್ಷ ಜನರ ಪ್ರಾತಿನಿಧ್ಯವನ್ನು ಮೂಲವಾಗಿ ಉಳಿಸಿಕೊಳ್ಳುವ ಸಾಧ್ಯತೆಯಿಲ್ಲ. ಯಾಕೆಂದರೆ, ಹೊಸ ಸಂಸತ್ ಭವನದಲ್ಲಿ ಲೋಕಸಭೆಯಲ್ಲಿ ಕೇವಲ 888 ಸ್ಥಾನ ಗಳಿಗೆ ಅವಕಾಶವಿದೆ. ಈಗ ಇರುವ ದಾರಿಯೆಂದರೆ, ಪ್ರತೀ ಕ್ಷೇತ್ರದ ಸರಾಸರಿ ಜನಸಂಖ್ಯೆಯಲ್ಲಿ ಹೆಚ್ಚಳ ಮಾಡುವುದು.
ಕ್ಷೇತ್ರ ಮರುವಿಂಗಡಣೆಗಾಗಿ ಪ್ರತೀ ಕ್ಷೇತ್ರದ ಸರಾಸರಿ ಜನಸಂಖ್ಯೆಯನ್ನು 20 ಲಕ್ಷಕ್ಕೆ ಏರಿಸಿದರೆ, ಲೋಕಸಭೆಗೆ ಈಗಿರುವ 543 ಸ್ಥಾನಗಳನ್ನು ಹೆಚ್ಚಿಸಿ 707 ಸ್ಥಾನಗಳನ್ನು ನೀಡಿದರೆ ದೊಡ್ಡ ಹೊಡೆತ ಬೀಳುವುದು ದಕ್ಷಿಣ ರಾಜ್ಯಗಳಿಗೆ. ಈ ಸೂತ್ರದ ಪ್ರಕಾರ, ತಮಿಳುನಾಡಿನ ಸ್ಥಾನಗಳು ಹಾಗೆಯೇ ಉಳಿಯುತ್ತವೆ. ಅಂದರೆ 39 ಸೀಟುಗಳಲ್ಲಿ ವ್ಯತ್ಯಾಸವಾಗುವುದಿಲ್ಲ. ಆದರೆ ಕೇರಳ ಎರಡು ಸ್ಥಾನಗಳನ್ನು ಕಳೆದುಕೊಂಡು 18 ಸ್ಥಾನಗಳನ್ನು ಪಡೆಯುತ್ತದೆ. ಇದಕ್ಕೆ ವಿರುದ್ಧವಾಗಿ, ಯುಪಿ ಉತ್ತರಾಖಂಡವೂ ಸೇರಿದಂತೆ 126 ಸ್ಥಾನಗಳನ್ನು ಪಡೆಯುತ್ತದೆ. ಬಿಹಾರ ಮತ್ತು ಜಾರ್ಖಂಡ್ ಒಟ್ಟಾಗಿ 85 ಸ್ಥಾನಗಳಿಗೆ ಏರಿಕೆಯಾಗುತ್ತದೆ. ಪ್ರತೀ ಕ್ಷೇತ್ರಕ್ಕೆ ಸರಾಸರಿ 15 ಲಕ್ಷ ಜನಸಂಖ್ಯೆಯಿದ್ದರೂ, ಒಟ್ಟು ಲೋಕಸಭಾ ಸ್ಥಾನಗಳ ಸಂಖ್ಯೆ 942ಕ್ಕೆ ಮುಟ್ಟುತ್ತದೆ. ಆಗಲೂ ದಕ್ಷಿಣ ರಾಜ್ಯಗಳೇ ಏಟು ತಿನ್ನುತ್ತವೆ. ಈ ಸೂತ್ರದಂತೆ, ತಮಿಳುನಾಡಿಗೆ 52 ಸ್ಥಾನಗಳು ಸಿಗುತ್ತವೆ. ಕೇರಳಕ್ಕೆ 24 ಸ್ಥಾನಗಳು ಸಿಗುತ್ತವೆ. ಆದರೆ ಯುಪಿ ಉತ್ತರಾಖಂಡ ಸೇರಿದಂತೆ 168 ಸ್ಥಾನಗಳನ್ನು ಪಡೆಯುತ್ತದೆ. ಬಿಹಾರ ಮತ್ತು ಜಾರ್ಖಂಡ್ 114 ಸ್ಥಾನಗಳನ್ನು ಪಡೆಯುತ್ತವೆ.
2024ರ ಲೋಕಸಭಾ ಚುನಾವಣೆಯಲ್ಲಿ, ಪ್ರತೀ ಸ್ಥಾನ ಸರಾಸರಿ 17.84 ಲಕ್ಷ ಮತದಾರರನ್ನು ಹೊಂದಿತ್ತು. ಜನಗಣತಿ ಮುನ್ಸೂಚನೆಗಳ ಆಧಾರದ ಮೇಲೆ ಪ್ರತಿಯೊಂದು ಸ್ಥಾನ ಒಟ್ಟು 25.8 ಲಕ್ಷ ಜನಸಂಖ್ಯೆಯನ್ನು ಹೊಂದಿತ್ತು. ಪಶ್ಚಿಮ ಮತ್ತು ದಕ್ಷಿಣ ಭಾರತದಲ್ಲಿ ಕಡಿಮೆ ಜನನ ಪ್ರಮಾಣ ಡಿಲಿಮಿಟೇಷನ್ ವೇಳೆ ಈ ಪ್ರದೇಶಗಳಿಗೆ ಅನನುಕೂಲವಾಗಲಿದೆ ಎಂದು ಆರೆಸ್ಸೆಸ್ ಮುಖವಾಣಿ ‘ದಿ ಆರ್ಗನೈಸರ್’ ಕಳೆದ ವರ್ಷ ಜುಲೈನಲ್ಲಿ ತನ್ನ ಸಂಪಾದಕೀಯದಲ್ಲಿ ಪ್ರಸ್ತಾಪಿಸಿದ್ದನ್ನು ಗಮನಿಸಬೇಕು. ಪ್ರಾದೇಶಿಕ ಅಸಮತೋಲನ ಮುಂದೆ ಲೋಕಸಭಾ ಕ್ಷೇತ್ರಗಳ ಡಿಲಿಮಿಟೇಶನ್ ಪ್ರಕ್ರಿಯೆಯ ಮೇಲೆ ನಿರ್ಣಾಯಕ ಪರಿಣಾಮ ಬೀರಲಿದೆ. ಜನಗಣತಿಯ ನಂತರ ಮೂಲ ಜನಸಂಖ್ಯೆಯನ್ನು ಬದಲಾಯಿಸಿದರೆ ಸಂಸತ್ತಿನಲ್ಲಿ ಪಶ್ಚಿಮ ಮತ್ತು ದಕ್ಷಿಣದ ರಾಜ್ಯಗಳು ಕೆಲ ಸ್ಥಾನಗಳನ್ನು ಕಳೆದುಕೊಳ್ಳಬಹುದು ಎಂದು ಅದು ಹೇಳಿತ್ತು.
ಡಿಲಿಮಿಟೇಷನ್ ವಿಚಾರ ಚರ್ಚೆಯಾಗುತ್ತಿರುವಾಗ ವ್ಯಕ್ತವಾಗುತ್ತಿರುವ ಮತ್ತೊಂದು ಬಹು ದೊಡ್ಡ ಆತಂಕವಿದೆ. ಏನೆಂದರೆ, ಡಿಲಿಮಿಟೇಷನ್ ಪ್ರಕ್ರಿಯೆಯ ನೆಪದಲ್ಲಿ ಮುಸ್ಲಿಮ್ ಮತದಾರರ ಪ್ರಾಬಲ್ಯವನ್ನು ಛಿದ್ರವಾಗಿಸುವ ಮತ್ತು ಚುನಾವಣಾ ರಾಜಕೀಯದಲ್ಲಿ ಅವರ ಪ್ರಭಾವ ನಗಣ್ಯವಾಗುವಂತೆ ಮಾಡುವ ಹುನ್ನಾರ ನಡೆಯಲಿದೆಯೇ ಎಂಬುದು. ದೇಶದಲ್ಲಿ ಕ್ಷೇತ್ರ ಮರುವಿಂಗಡಣೆ ಪ್ರಕ್ರಿಯೆಯ ತೀವ್ರ ಸಂಕಷ್ಟವನ್ನು ಮುಸ್ಲಿಮರು ಎದುರಿಸಿರುವುದನ್ನು ತಜ್ಞರು ಈಗಾಗಲೇ ಗುರುತಿಸಿದ್ದಾರೆ. 2006 ರ ಸಾಚಾರ್ ಸಮಿತಿ ವರದಿಯಲ್ಲಿ ಗಮನಿಸಿದಂತೆ, ಮುಸ್ಲಿಮರು ತಮ್ಮ ಮೂಲಭೂತ ಹಕ್ಕನ್ನು ಚಲಾಯಿಸುವುದನ್ನು ತಡೆಯಲು ಇದನ್ನು ಬಳಸಲಾಗಿದೆ.
ಅಸ್ಸಾಮಿನಲ್ಲಿ 2023ರಲ್ಲಿ ಅಂತಿಮಗೊಳಿಸ ಲಾಗಿದ್ದ ಕ್ಷೇತ್ರ ಮರುವಿಂಗಡಣೆ ಕರಡನ್ನು ಗಮನಿಸಿರುವ ಪರಿಣಿತರು, ಮುಸ್ಲಿಮರು ಹೆಚ್ಚಾಗಿ ಕಂಡುಬರುವ ಪ್ರದೇಶಗಳನ್ನು ವಿಭಜಿಸಲು ಅಥವಾ ಉದ್ದೇಶಪೂರ್ವಕವಾಗಿ ಮೀಸಲು ಕ್ಷೇತ್ರಗಳಾಗಿ ಘೋಷಿಸಲು ನಿರ್ಧಾರವಾಗಿರುವುದರ ಕಡೆಗೆ ಗಮನ ಸೆಳೆದಿದ್ದರು. ಬಿಜೆಪಿ ಆಡಳಿತದಲ್ಲಿ ಅಸ್ಸಾಮಿನಲ್ಲಿ ಕ್ಷೇತ್ರ ಮರುವಿಂಗಡಣೆಯ ಸಂದರ್ಭದಲ್ಲಿ, ಮುಸ್ಲಿಮರ ಹಕ್ಕುಗಳು ಮತ್ತು ಪ್ರಾತಿನಿಧ್ಯದ ಮೇಲೆ ಸಂಭಾವ್ಯ ಪರಿಣಾಮಗಳು ಉಂಟಾಗಲಿರುವುದರ ಬಗ್ಗೆ ಕಳವಳಗಳು ಹುಟ್ಟಿಕೊಂಡಿದ್ದವು. ಕ್ಷೇತ್ರಗಳ ಒಟ್ಟು ಸಂಖ್ಯೆಯನ್ನು ಬದಲಿಸದೆ ಹಲವು ಕ್ಷೇತ್ರಗಳ ವ್ಯಾಪ್ತಿಯನ್ನು ಮರುರೂಪಿಸಲು ಅದರಲ್ಲಿ ಶಿಫಾರಸು ಮಾಡಲಾಗಿತ್ತು. ರಾಜ್ಯದಲ್ಲಿ ಮುಸ್ಲಿಮರು ಹೆಚ್ಚಿರುವ ವಿಧಾನಸಭಾ ಕ್ಷೇತ್ರಗಳ ಸಂಖ್ಯೆಯನ್ನು ಇಳಿಸುವ ಪ್ರಸ್ತಾವ ತೀವ್ರ ಕಳವಳಕ್ಕೆ ಕಾರಣವಾಗಿತ್ತು.
ಮುಸ್ಲಿಮ್ ಮತದಾರರ ಪ್ರಾಬಲ್ಯ ಹೊಂದಿರುವ ನಿರ್ದಿಷ್ಟ ವಿಧಾನಸಭಾ ಸ್ಥಾನಗಳನ್ನು ಉದ್ದೇಶಪೂರ್ವಕವಾಗಿ ತೆಗೆಯಲಾಗಿರುವುದರಿಂದ ಕರಡು ಪ್ರಸ್ತಾವನೆ ಬಗ್ಗೆ ಟೀಕೆಗಳು ಬಂದಿದ್ದವು. ಬಂಗಾಳಿ ಮೂಲದ ಮುಸ್ಲಿಮ್ ಸಮುದಾಯದವರಿರುವ ಕ್ಷೇತ್ರಗಳಲ್ಲಿ, ಅವರನ್ನು ಸಾಮಾನ್ಯವಾಗಿ ಅಕ್ರಮ ವಲಸಿಗರು ಎಂಬ ಹಣೆಪಟ್ಟಿ ಅಂಟಿಸಿ ತಾರತಮ್ಯದಿಂದ ನೋಡಲಾಗುತ್ತಿದೆ. ಕರಡಿನ ಪ್ರಕಾರ, ಆ ಸ್ಥಾನಗಳನ್ನು ವಿಲೀನಗೊಳಿಸಲಾಗುತ್ತದೆ ಅಥವಾ ಹೊಸದಾಗಿ ರಚಿಸಲಾದ ಕ್ಷೇತ್ರಗಳೊಂದಿಗೆ ಸೇರಿಸಲಾಗುತ್ತದೆ ಮತ್ತು ಅಂತಹ ಕ್ಷೇತ್ರಗಳು ಗಮನಾರ್ಹ ಪ್ರಮಾಣದ ಹಿಂದೂ ಜನಸಂಖ್ಯೆಯನ್ನು ಹೊಂದಿರುವ ಕ್ಷೇತ್ರಗಳಾಗಿವೆ. ಇದಲ್ಲದೆ, ಮುಸ್ಲಿಮರು ಗಮನಾರ್ಹ ಪ್ರಮಾಣದಲ್ಲಿರುವ ಕೆಲ ವಿಧಾನಸಭಾ ಕ್ಷೇತ್ರಗಳನ್ನು ಪರಿಶಿಷ್ಟ ಜಾತಿ ಮತ್ತು ಪಂಗಡಗಳಿಗೆ ಮೀಸಲು ಕ್ಷೇತ್ರವೆಂದು ಮಾಡುವ ತಂತ್ರಗಾರಿಕೆಯನ್ನೂ ಅನುಸರಿಸಲಾಗಿತ್ತು. ಇದು ಮುಸ್ಲಿಮರು ಮತ್ತು ಕ್ರಿಶ್ಚಿಯನ್ನರಂತಹ ಅಲ್ಪಸಂಖ್ಯಾತರು ಚುನಾವಣೆಯಲ್ಲಿ ಸ್ಪರ್ಧಿಸುವುದನ್ನು ತಡೆಯುವ ವ್ಯವಸ್ಥಿತ ತಂತ್ರವಾಗಿದೆ. 2011ರಲ್ಲಿ ನಡೆದ ಭಾರತದ ಕೊನೆಯ ಜನಗಣತಿಯಲ್ಲಿ ಅಸ್ಸಾಮಿನ ಮುಸ್ಲಿಮ್ ಜನಸಂಖ್ಯೆ ಶೇ. 34 ಎಂದು ದಾಖಲಾಗಿದೆ. ಅಸ್ಸಾಮಿನ ಸುಮಾರು ಮುಕ್ಕಾಲು ಪಾಲು ಮುಸ್ಲಿಮರು ಬಂಗಾಳಿ ಮುಸ್ಲಿಮರಾಗಿದ್ದು, ಅವರನ್ನು ಬಾಂಗ್ಲಾದೇಶಿ ವಲಸಿಗರು ಎಂದು ನೋಡಲಾಗುವ ಸ್ಥಿತಿಯಿದೆ. ಅಂತಹ ಅವಮಾನದ ಜೊತೆಗೇ ಅವರ ರಾಜಕೀಯ ಪ್ರಾತಿನಿಧ್ಯಕ್ಕೇ ಪೆಟ್ಟು ಕೊಡುವ ಇಂತಹ ತಂತ್ರಗಳೂ ನಡೆದಿವೆ.
ಕ್ಷೇತ್ರ ಮರುವಿಂಗಡಣೆ ಕಾನೂನಿಗೆ ಅನುಸಾರವಾಗಿ ಡಿಲಿಮಿಟೇಶನ್ ನಡೆಯುತ್ತದೆ. ಈ ಕಾಯ್ದೆ ಕ್ಷೇತ್ರ ಮರುವಿಂಗಡಣೆ ಆಯೋಗವನ್ನು ಸ್ಥಾಪಿಸುತ್ತದೆ. ಇದು ಜನಗಣತಿಯ ಆಧಾರದ ಮೇಲೆ ಲೋಕಸಭೆ ಮತ್ತು ಶಾಸಕಾಂಗ ಸಭೆಗಳ ಕ್ಷೇತ್ರಗಳ ಗಡಿಗಳ ಮರುವಿನ್ಯಾಸ ಮಾಡುತ್ತದೆ. 10 ವರ್ಷಕ್ಕೊಮ್ಮೆ ನಡೆಯುವ ಜನಗಣತಿಯ ನಂತರ ಜನಸಂಖ್ಯೆಯಲ್ಲಿ ಬದಲಾವಣೆಗಳ ಅನುಸಾರ ಚುನಾವಣಾ ಕ್ಷೇತ್ರಗಳ ಮರುವಿಂಗಡಣೆ ಆಗಬೇಕು. ಆ ಪ್ರಕಾರ, ಲೋಕಸಭೆಯಲ್ಲಿ ಸ್ಥಾನಗಳನ್ನು ಹೆಚ್ಚಿಸಬೇಕು. ಆದರೆ, 1970ರ ನಂತರ ಲೋಕಸಭೆ ಸ್ಥಾನಗಳ ಸಂಖ್ಯೆಯಲ್ಲಿ ಯಾವುದೇ ಹೆಚ್ಚಳವಾಗಿಲ್ಲ. ಏಕೆಂದರೆ 1976ರಲ್ಲಿ, ಸಂವಿಧಾನದ 42ನೇ ತಿದ್ದುಪಡಿ 1971ರ ಜನಗಣತಿಯ ಪ್ರಕಾರ ಲೋಕಸಭಾ ಸ್ಥಾನಗಳ ಸಂಖ್ಯೆಯನ್ನು 2001ರ ಜನಗಣತಿಯವರೆಗೆ ಮುಂದುವರಿಸಬೇಕು ಎಂದು ಹೇಳಿತ್ತು. ದಕ್ಷಿಣ ಭಾರತದಲ್ಲಿ ಜನಸಂಖ್ಯೆ ನಿಯಂತ್ರಣದಲ್ಲಿರುವ ಕಾರಣ, ಕ್ಷೇತ್ರಗಳ ಹೆಚ್ಚಳದ ಬಗ್ಗೆ ಈ ಭಾಗದ ರಾಜ್ಯಗಳು ಕಳವಳ ವ್ಯಕ್ತಪಡಿಸಿದ್ದವು. ಇದರ ನಿವಾರಣೆಗಾಗಿ ಸ್ಥಾನಗಳ ಹೆಚ್ಚಳವನ್ನು ತಡೆಹಿಡಿಯಲಾಗಿತ್ತು. 2001ರಲ್ಲಿಯೂ ಇದೇ ತೆರನಾದ ಆಕ್ಷೇಪ ಬಂದ ಹಿನ್ನೆಲೆಯಲ್ಲಿ ಕ್ಷೇತ್ರ ಮರುವಿಂಗಡಣೆ ಕಾರ್ಯವನ್ನು 2026ಕ್ಕೆ ಮುಂದೂಡಲಾಗಿತ್ತು. ಈಗ ಆ ಗಡುವು ಸಮೀಪಿಸಿದೆ. ಅಸ್ಸಾಂ, ಜಮ್ಮು ಮತ್ತು ಕಾಶ್ಮೀರದಂತಹ ಕೆಲ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಕ್ಷೇತ್ರ ಮರುವಿಂಗಡಣೆ ಕೈಗೊಳ್ಳಲಾಗಿದ್ದರೂ, 2002ರಿಂದ ದೇಶದಲ್ಲಿ ಡಿಲಿಮಿಟೇಶನ್ ನಡೆದಿಲ್ಲ.
ಡಿಲಿಮಿಟೇಶನ್‌ಗೆ ಇರುವ ತೊಡಕೇನು?
ಡಿಲಿಮಿಟೇಶನ್‌ಗೆ ಎರಡು ಸಾಂವಿಧಾನಿಕ ತೊಡಕುಗಳಿವೆ. ಮೊದಲನೆಯದು, ಒಕ್ಕೂಟ ವ್ಯವಸ್ಥೆ. ಎರಡನೆಯದಾಗಿ, ಒಬ್ಬ ವ್ಯಕ್ತಿ ಒಂದು ಮತ ಒಂದು ಮೌಲ್ಯ ಎಂಬ ತತ್ವ ಇದಕ್ಕೆ ವಿರುದ್ಧವಾಗಿದೆ. ಅಂದರೆ, ದಕ್ಷಿಣ ಭಾರತಕ್ಕೆ ಹೋಲಿಸಿದರೆ ಉತ್ತರ ಭಾರತದಲ್ಲಿ ಜನಸಂಖ್ಯೆ ಬೆಳವಣಿಗೆ ವೇಗವಾಗಿದೆ. 2011ರ ಜನಗಣತಿಯ ಜನಸಂಖ್ಯೆಯ ಅಂಕಿಅಂಶಗಳನ್ನು ಪರಿಗಣಿಸಿ ಮತ್ತು ಸೀಟು ಹಂಚಿಕೆಯ ಆಧಾರವಾಗಿ ಮಾಡಿದರೆ ತಮಿಳುನಾಡು, ಅವಿಭಜಿತ ಆಂಧ್ರಪ್ರದೇಶ, ಕೇರಳ, ಪಶ್ಚಿಮ ಬಂಗಾಳ ಮತ್ತು ಒಡಿಶಾ ಒಟ್ಟು 31 ಸ್ಥಾನಗಳನ್ನು ಕಳೆದುಕೊಳ್ಳಲಿವೆ. ಉತ್ತರ ಪ್ರದೇಶ, ಬಿಹಾರ, ರಾಜಸ್ಥಾನ, ಮಧ್ಯಪ್ರದೇಶ 31 ಸ್ಥಾನಗಳನ್ನು ಹೆಚ್ಚುವರಿಯಾಗಿ ಪಡೆಯಲಿವೆ. ಇದರಿಂದ ಉತ್ತರದ ರಾಜ್ಯಗಳಲ್ಲಿನ ಕ್ಷೇತ್ರಗಳ ಸಂಖ್ಯೆಯಲ್ಲಿ ಗಮನಾರ್ಹ ಹೆಚ್ಚಳವಾಗಲಿವೆ. ಆಗ ಸಂಸತ್ತಿನಲ್ಲಿ ರಾಜ್ಯಗಳ ಪ್ರಾತಿನಿಧ್ಯದಲ್ಲಿ ಅಸಮತೋಲನ ಉಂಟಾಗಲಿದೆ. ಜನಸಂಖ್ಯೆಯ ಅಸಮ ಬೆಳವಣಿಗೆಯಿಂದ ಉತ್ತರ ಭಾರತದ ಜನಪ್ರತಿನಿಧಿಗಳ ಮತದ ಮೌಲ್ಯ ದಕ್ಷಿಣ ಭಾರತದ ಪ್ರತಿನಿಧಿಗಳಿಗಿಂತ ತುಂಬಾ ಕಡಿಮೆ ಇದೆ. ಅಂದರೆ, ಉತ್ತರ ಭಾರತದ ರಾಜ್ಯಗಳಲ್ಲಿನ ಸಂಸದರು ದಕ್ಷಿಣ ಭಾರತದ ರಾಜ್ಯಗಳ ಸಂಸದರಿಗಿಂತ ಹೆಚ್ಚಿನ ಮತದಾರರನ್ನು ಪ್ರತಿನಿಧಿಸುತ್ತಾರೆ. ಸಂಖ್ಯೆಯಲ್ಲಿ ಹೇಳುವುದಾದರೆ, ಉತ್ತರ ಪ್ರದೇಶದ ಒಬ್ಬ ಲೋಕಸಭಾ ಸಂಸದ 25 ಲಕ್ಷ ಮತದಾರರನ್ನು ಪ್ರತಿನಿಧಿಸಿದರೆ, ತಮಿಳುನಾಡು ಮತ್ತು ಕೇರಳದಲ್ಲಿ ಈ ಸಂಖ್ಯೆ ಕ್ರಮವಾಗಿ 18 ಲಕ್ಷ ಮತ್ತು 17 ಲಕ್ಷದಷ್ಟಿದೆ.
ಚುನಾವಣಾ ಕ್ಷೇತ್ರಗಳ ಮರುವಿಂಗಡಣೆ ದೇಶದ ಪ್ರಜಾಪ್ರಭುತ್ವ ಮತ್ತು ಸಂಸತ್ತಿನಲ್ಲಿ ರಾಜ್ಯಗಳ ಪ್ರಾತಿನಿಧ್ಯವನ್ನು ಬಲಪಡಿಸುತ್ತದೆ. 1976ರಲ್ಲಿ ರಾಜ್ಯಗಳ ಜನಸಂಖ್ಯೆಯಲ್ಲಿನ ಅಸಮಾನತೆ ಕಾರಣಕ್ಕಾಗಿ ತಡೆಹಿಡಿಯಲಾಗಿದ್ದ ಡಿಲಿಮಿಟೇಶನ್ ಈಗಿನ ಅಗತ್ಯ ಎನಿಸುತ್ತಿಲ್ಲ. ಈಗಲೂ ಉತ್ತರ ಮತ್ತು ದಕ್ಷಿಣ ಭಾರತದಲ್ಲಿ ಜನಸಂಖ್ಯೆ ಏರುಪೇರಾಗಿದೆ.
ಆದರೂ, ಕ್ಷೇತ್ರ ಮರುವಿಂಗಡಣೆ ನಡೆಯಬೇಕಿದೆ. ಈ ಪ್ರಕ್ರಿಯೆಯನ್ನು ಅತಿ ನಾಜೂಕಾಗಿ ನಡೆಸುವುದು ಆಡಳಿತ ಪಕ್ಷದ ಹೊಣೆಯಾಗಿದೆ.