ಜನಪ್ರತಿನಿಧಿಗಳ ವೇತನದ ದುಪ್ಪಟ್ಟು ಏರಿಕೆ ಸಮರ್ಥನೀಯವೇ?

ರಾಜ್ಯದ ಮಂತ್ರಿಗಳು ಮತ್ತು ಶಾಸಕರಿಗೆ ಯುಗಾದಿ ಉಡುಗೊರೆ ಸಿಕ್ಕಿದೆ. ವೇತನ ಎರಡು ಪಟ್ಟಾಗಿದೆ. ಭತ್ತೆಯಲ್ಲೂ ಭಾರೀ ಏರಿಕೆಯಾಗಿದೆ. ಗ್ಯಾರಂಟಿ ಯೋಜನೆಗಳ ಹೊರೆ, ಸಾಲದ ಸುಳಿಯಿಂದ ಸಂಕಷ್ಟದಲ್ಲಿದ್ದರೂ, ಸಚಿವರು ಮತ್ತು ಶಾಸಕರ ವೇತನ ಹೆಚ್ಚಳಕ್ಕೆ ಅದಾವುದೂ ಅಡ್ಡಿಯಾಗಿಲ್ಲ. ಸಿಎಂ, ಸಚಿವರು, ವಿಧಾನಮಂಡಲ ಅಧ್ಯಕ್ಷರು, ಶಾಸಕರು ಹಾಗೂ ಮಾಜಿ ಶಾಸಕರ ಈಗಿರುವ ವೇತನ ದುಪ್ಪಟ್ಟುಗೊಳಿಸುವ ಕರ್ನಾಟಕ ಶಾಸಕಾಂಗದ ವೇತನ, ಪಿಂಚಣಿ ಮತ್ತು ಭತ್ತೆ ತಿದ್ದುಪಡಿ ವಿಧೇಯಕ 2025 ಅನ್ನು ಮಾರ್ಚ್ 21ರಂದು ವಿಧಾನಸಭೆ ಅಂಗೀಕರಿಸಿದೆ.;

Update: 2025-03-25 13:58 IST
Editor : Thouheed | Byline : ಆರ್.ಜೀವಿ
ಜನಪ್ರತಿನಿಧಿಗಳ ವೇತನದ ದುಪ್ಪಟ್ಟು ಏರಿಕೆ ಸಮರ್ಥನೀಯವೇ?
  • whatsapp icon

ಮುಖ್ಯಮಂತ್ರಿ, ಸಚಿವರು, ಶಾಸಕರ ವೇತನ ಮತ್ತು ಭತ್ತೆಯಲ್ಲಿ ಭಾರೀ ಪ್ರಮಾಣದಲ್ಲಿ ಹೆಚ್ಚಳವಾಗಿದೆ. ಇದು ಶೇ. 100ರಷ್ಟು ಹೆಚ್ಚಳ, ಅಂದರೆ ದುಪ್ಪಟ್ಟು. ವೇತನ ಮತ್ತು ವಿವಿಧ ಭತ್ತೆಗಳನ್ನು ಹೆಚ್ಚಿಸುವ ಕರ್ನಾಟಕ ಮಂತ್ರಿಗಳ ಸಂಬಳಗಳು ಮತ್ತು ಭತ್ತೆಗಳ ತಿದ್ದುಪಡಿ ಮಸೂದೆ 2025 ಹಾಗೂ ಕರ್ನಾಟಕ ವಿಧಾನ ಮಂಡಲದವರ ಸಂಬಳಗಳು, ಪಿಂಚಣಿಗಳು ಮತ್ತು ಭತ್ತೆಗಳ ತಿದ್ದುಪಡಿ ಮಸೂದೆ 2025 ಇವೆರಡನ್ನೂ ಅಧಿವೇಶನದ ಕೊನೆಯ ದಿನವಾದ ಶುಕ್ರವಾರ ಅಂಗೀಕರಿಸಲಾಯಿತು.

ಇದಕ್ಕೂ ಮೊದಲು ಈ ಎರಡೂ ತಿದ್ದುಪಡಿಗಳಿಗೆ ಸಿಎಂ ಸಿದ್ದರಾಮಯ್ಯ ಅನುಮೋದನೆ ನೀಡಿದ್ದರು. ವಿಧಾನಮಂಡಲದಲ್ಲಿ ಮಂಡಿಸುವ ಮೊದಲು ರಾಜ್ಯಪಾಲರ ಒಪ್ಪಿಗೆ ಪಡೆಯಬೇಕಾಗುತ್ತದೆ. ಹಾಗಾಗಿ ತಿದ್ದುಪಡಿ ವಿಧೇಯಕವನ್ನು ಬುಧವಾರ ರಾಜ್ಯಪಾಲರ ಅನುಮೋದನೆಗಾಗಿ ಸಲ್ಲಿಸಲಾಗಿತ್ತು. ಗುರುವಾರ ಅವರು ವಿಧೇಯಕಕ್ಕೆ ಒಪ್ಪಿಗೆ ಸೂಚಿಸಿದ್ದರು. ಇದರೊಂದಿಗೆ, ಇದೇ ಅಧಿವೇಶನದಲ್ಲಿ ಮಂಡಿಸಿ ಅನುಮೋದನೆ ಪಡೆಯುವುದು ಸಾಧ್ಯವಾಯಿತು.

ಈ ಹಿಂದೆ ಬಿಜೆಪಿ ಸರಕಾರವಿದ್ದಾಗ 2022ರಲ್ಲಿ ಶಾಸಕರ ವೇತನ ಮತ್ತು ಭತ್ತೆಗಳನ್ನು ಪರಿಷ್ಕರಿಸಲಾಗಿತ್ತು. ಆಗ ಮಸೂದೆ ಮಂಡಿಸಿದ್ದ ಸಚಿವ ಜೆ.ಸಿ. ಮಾಧುಸ್ವಾಮಿ, 2023ರ ಎಪ್ರಿಲ್ 1 ರಿಂದ ಪ್ರತೀ 5 ವರ್ಷಗಳಿಗೊಮ್ಮೆ ವೇತನ, ಭತ್ತೆ ಹೆಚ್ಚಿಸುವ ಬಗ್ಗೆ ಮಸೂದೆಯಲ್ಲಿಯೇ ಪ್ರಸ್ತಾಪಿಸಿದ್ದರು. ಆದರೆ ಈಗ ಎರಡು ವರ್ಷ ತುಂಬುವ ಮೊದಲೇ ಸರಕಾರ ಮತ್ತೆ ವೇತನ, ಭತ್ತೆಗಳನ್ನು ಪರಿಷ್ಕರಿಸಿದೆ.

ಪ್ರಸ್ತುತ, ಶಾಸಕರ ವೇತನ ಎಲ್ಲ ಭತ್ತೆಗಳನ್ನು ಒಳಗೊಂಡು ತಿಂಗಳಿಗೆ 2.05 ಲಕ್ಷ ರೂ. ಇತ್ತು. ಇನ್ನು ಸಿಎಂ, ಸ್ಪೀಕರ್, ಸಭಾಪತಿಯವರ ವೇತನ ಮತ್ತು ಭತ್ತೆ ಸೇರಿ 10 ಲಕ್ಷ ರೂ. ವರೆಗೂ ಆಗುತ್ತದೆ. ಸಚಿವರು ಹಾಗೂ ವಿರೋಧ ಪಕ್ಷದ ನಾಯಕರ ವೇತನ ಮತ್ತು ಭತ್ತೆಗಳು ಕೂಡ ಹೆಚ್ಚು ಕಡಿಮೆ ಇಷ್ಟೇ ಇದೆ.

ಶಾಸಕರ ವೇತನ ಮತ್ತು ಭತ್ತೆ ಈಗಿರುವಂತೆ

ಮೂಲ ವೇತನ - 40 ಸಾವಿರ ರೂ.

ದೂರವಾಣಿ ವೆಚ್ಚ - 20 ಸಾವಿರ ರೂ.

ವೈಯಕ್ತಿಕ ಭತ್ತೆ - 20 ಸಾವಿರ ರೂ.

ಕ್ಷೇತ್ರ ಭತ್ತೆ - 60 ಸಾವಿರ ರೂ.

ಕ್ಷೇತ್ರ ಪ್ರಯಾಣ ಭತ್ತೆ - 60 ಸಾವಿರ ರೂ.

ಅಂಚೆ ವೆಚ್ಚ - 5 ಸಾವಿರ ರೂ.

ಒಟ್ಟು - 2 ಲಕ್ಷದ 5 ಸಾವಿರ ರೂ.

ಅಂದರೆ, ಶಾಸಕರು ವಾರ್ಷಿಕ 24 ಲಕ್ಷ 60 ಸಾವಿರ ರೂ. ಗಳನ್ನು ಪಡೆಯುತ್ತಿದ್ದಾರೆ.

ಇನ್ನು ಕರ್ನಾಟಕ ಮುಖ್ಯಮಂತ್ರಿಗಳ ವೇತನ ಮತ್ತು ಭತ್ತೆ ಈಗಿರುವಂತೆ,

ಮೂಲ ವೇತನ - 75 ಸಾವಿರ ರೂ.

ಮನೆ ಬಾಡಿಗೆ ಭತ್ತೆ - 1.20 ಲಕ್ಷ ರೂ.

ಮನೆ ನಿರ್ವಹಣೆ ಭತ್ತೆ - 30 ಸಾವಿರ ರೂ.

ವೈಯಕ್ತಿಕ ಆಹಾರ, ವಸ್ತುಗಳ ಖರೀದಿ, ಇತರ ಭತ್ತೆ - 4.5 ಲಕ್ಷ ರೂ.

ಪ್ರತಿದಿನ ಪ್ರಯಾಣ ಭತ್ತೆ - 2,500 ರೂ.

ರೋಡ್ ಮೈಲೇಜ್ ಭತ್ತೆ - ಕಿ.ಮೀ.ಗೆ 30 ರೂ.

ಉಚಿತ ಇಂಧನ - 1,500 ಲೀ. ಪೆಟ್ರೋಲ್

ಒಟ್ಟು-ಸುಮಾರು 10 ಲಕ್ಷ ರೂ. ಪಡೆಯುತ್ತಿದ್ದಾರೆ.

ವಿಧಾನಸಭೆ ಸ್ಪೀಕರ್ ಹಾಗೂ ಪರಿಷತ್ ಸಭಾಪತಿಗಳಿಗೂ ಇದೇ ವೇತನ ಮತ್ತು ಭತ್ತೆ ಸಿಗುತ್ತಿತ್ತು. ಸಚಿವರು, ವಿಪಕ್ಷ ನಾಯಕರಿಗೆ ಮೂಲ ವೇತನ 60 ಸಾವಿರ ರೂ. ಇದ್ದು, ಉಳಿದೆಲ್ಲಾ ಭತ್ತೆಗಳು ಮುಖ್ಯಮಂತ್ರಿಗಳಿಗೆ ಇದ್ದಂತೆಯೇ ಇವೆ. ಈಗ ಮುಖ್ಯಮಂತ್ರಿ, ಸಚಿವರು ಮತ್ತು ಶಾಸಕರ ವೇತನ ಶೇ.100ರಷ್ಟು ಹೆಚ್ಚಳವಾದಂತಾಗಿದೆ.

ದೇಶದಲ್ಲಿ ಮೂರು ರಾಜ್ಯಗಳ ಮುಖ್ಯಮಂತ್ರಿಗಳು ಅತಿ ಹೆಚ್ಚು ವೇತನ ಪಡೆಯುತ್ತಾರೆ.

ತೆಲಂಗಾಣ ಸಿಎಂ 4.10 ಲಕ್ಷ ರೂ.

ದಿಹಲಿ ಸಿಎಂ 3.90 ಲಕ್ಷ ರೂ.

ಉತ್ತರ ಪ್ರದೇಶ ಸಿಎಂ 3.65 ಲಕ್ಷ ರೂ.

ದೇಶದಲ್ಲಿ ಅತಿ ಕಡಿಮೆ ವೇತನ ಪಡೆಯುವ ಮುಖ್ಯಮಂತ್ರಿಯೆಂದರೆ ತ್ರಿಪುರಾ ಮುಖ್ಯಮಂತ್ರಿ. ಅವರ ವೇತನ 1.05 ಲಕ್ಷ ರೂ. ಇದೆ.

ಇನ್ನು, ಇತರ ಕೆಲವು ರಾಜ್ಯಗಳಲ್ಲಿನ ಶಾಸಕರ ವೇತನ ವಿವರ ಹೀಗಿದೆ:

ಜಾರ್ಖಂಡ್ - 2.9 ಲಕ್ಷ ರೂ.

ಮಹಾರಾಷ್ಟ್ರ - 2.6 ಲಕ್ಷ ರೂ.

ತೆಲಂಗಾಣ - 2.5 ಲಕ್ಷ ರೂ.

ಮಣಿಪುರ - 2.5 ಲಕ್ಷ ರೂ.

ಹಿಮಾಚಲ ಪ್ರದೇಶ - 2.1 ಲಕ್ಷ ರೂ.

ಉತ್ತರಾಖಂಡ - 2.04 ಲಕ್ಷ ರೂ.

ಮೇಘಾಲಯ - 2.02 ಲಕ್ಷ ರೂ.

ಮುಖ್ಯಮಂತ್ರಿ ಮತ್ತು ಸಚಿವರುಗಳ ವೇತನ, ಭತ್ತೆ ಹೆಚ್ಚಳದಿಂದ 10 ಕೋಟಿ ರೂ. ಹೆಚ್ಚಿನ ವೆಚ್ಚವಾಗಲಿದೆ. ಶಾಸಕರು, ವಿಧಾನ ಪರಿಷತ್ ಸದಸ್ಯರು, ವಿಧಾನ ಸಭಾಧ್ಯಕ್ಷರು, ಸಭಾಪತಿ, ವಿಪಕ್ಷ ನಾಯಕರು ಮತ್ತು ಮುಖ್ಯ ಸಚೇತಕರ ವೇತನ, ಭತ್ತೆ ಹೆಚ್ಚಳದಿಂದ 50 ಕೋಟಿ ರೂ. ಹೆಚ್ಚಿನ ಹೊರೆ ಬೀಳಲಿದೆ. ವಾರ್ಷಿಕವಾಗಿ 62 ಕೋಟಿ ರೂ. ಹೆಚ್ಚುವರಿ ಹೊರೆಯಾಗಲಿದೆ ಎಂದು ಅಂದಾಜಿಸಲಾಗಿದೆ.

ಶಾಸಕರ ವೇತನ ಹೆಚ್ಚಳ ಪ್ರಕ್ರಿಯೆ ಹೇಗೆ?

ಕರ್ನಾಟಕ ಸೇರಿದಂತೆ ಭಾರತದಲ್ಲಿನ ಶಾಸಕರ ವೇತನವನ್ನು ಭಾರತದ ಸಂವಿಧಾನದ 164 (1) ವಿಧಿ ಪ್ರಕಾರ ಆಯಾ ರಾಜ್ಯ ಶಾಸಕಾಂಗವೇ ಕಾನೂನು ಅಥವಾ ಸುಗ್ರೀವಾಜ್ಞೆ ಅಂಗೀಕಾರದ ಮೂಲಕ ಹೆಚ್ಚಿಸುತ್ತದೆ. ಬೆಲೆಯೇರಿಕೆ ಮತ್ತು ಜೀವನ ವೆಚ್ಚದಂತಹ ವಿವಿಧ ಅಂಶಗಳ ಆಧಾರದ ಮೇಲೆ ಪರಿಷ್ಕರಣೆಗಳನ್ನು ಶಿಫಾರಸು ಮಾಡಲು ತಜ್ಞರ ಸಮಿತಿ ನೇಮಿಸಲಾಗುತ್ತದೆ. ಅಂತಿಮವಾಗಿ, ಸಂವಿಧಾನದ 164 (1) ವಿಧಿಯ ನಿಬಂಧನೆಗಳ ಪ್ರಕಾರ, ಶಾಸಕರ ವೇತನವನ್ನು ನಿರ್ಧರಿಸುವ ಅಧಿಕಾರವು ರಾಜ್ಯ ಶಾಸಕಾಂಗಕ್ಕೆ ಇರುತ್ತದೆ. ರಾಜ್ಯ ಶಾಸಕಾಂಗ ಕಾನೂನು ಅಥವಾ ಸುಗ್ರೀವಾಜ್ಞೆಯ ಅಂಗೀಕಾರದ ಮೂಲಕ ವೇತನದಲ್ಲಿ ಕಡಿತವನ್ನು ಮಾಡಬಹುದು. ಈ ಹಿಂದೆ ಕರ್ನಾಟಕದಲ್ಲಿ ಶಾಸಕರ ವೇತನ ಕಡಿತಗೊಳಿಸಿದ ನಿದರ್ಶನಗಳಿವೆ. 2020ರಲ್ಲಿ ಕೋವಿಡ್ ಕಾರಣದಿಂದ ಉಂಟಾದ ಆರ್ಥಿಕ ಒತ್ತಡದ ಹಿನ್ನೆಲೆಯಲ್ಲಿ ರಾಜ್ಯ ಸರಕಾರ ಒಂದು ವರ್ಷದ ಅವಧಿಗೆ ಶಾಸಕರು, ಸಚಿವರು ಮತ್ತು ಮುಖ್ಯಮಂತ್ರಿಗಳ ಸಂಬಳ ಮತ್ತು ಭತ್ತೆಗಳಲ್ಲಿ ಶೇ. 30ರಷ್ಟು ಕಡಿತ ಘೋಷಿಸಿತ್ತು.

ಲೋಕಸಭಾ ಸಂಸದರು ಪಡೆಯುವ ಸಂಬಳ, ಸವಲತ್ತುಗಳು ಮತ್ತು ಪಿಂಚಣಿಗಳ ಬಗ್ಗೆ ಗಮನ ಹರಿಸುವುದಾದರೆ,

ಸಂಸದರ ಮೂಲ ವೇತನ ತಿಂಗಳಿಗೆ 1 ಲಕ್ಷ ರೂ.

ಕ್ಷೇತ್ರ ಭತ್ತೆ 70,000 ರೂ.

ಸಂಸತ್ತಿನ ಅಧಿವೇಶನಗಳ ಸಮಯದಲ್ಲಿ ಕಚೇರಿ ಭತ್ತೆ 60,000 ರೂ.

ಅಲ್ಲದೆ ಅಧಿವೇಶನ ಸಮಯದ ದೈನಂದಿನ ಭತ್ತೆ 2,000 ರೂ.

ಫೋನ್ ಮತ್ತು ಇಂಟರ್ನೆಟ್ ಬಳಕೆಗಾಗಿ ವಾರ್ಷಿಕ ಭತ್ತೆ 1.5 ಲಕ್ಷ ರೂ.

ಸಂಸದರು ಮತ್ತು ಅವರ ಕುಟುಂಬದವರು ದೇಶೀಯ ವಿಮಾನಗಳಲ್ಲಿ ವರ್ಷಕ್ಕೆ 34 ಉಚಿತ ಪ್ರಯಾಣ ಮಾಡಲು ಅವಕಾಶವಿದೆ.

ಅಲ್ಲದೆ ವೃತ್ತಿಪರ ಮತ್ತು ವೈಯಕ್ತಿಕ ಕಾರಣಕ್ಕೆ ಯಾವುದೇ ಸಮಯದಲ್ಲಿ ಪ್ರಥಮ ದರ್ಜೆ ರೈಲು ಪ್ರಯಾಣ ಮಾಡಬಹುದಾಗಿದೆ.

ರಸ್ತೆಗಳನ್ನು ಬಳಸುವಾಗ ಮೈಲೇಜ್ ಭತ್ತೆಯನ್ನು ಸಹ ಪಡೆಯಬಹುದು.

ಸಂಸದರು ವಾರ್ಷಿಕವಾಗಿ 50,000 ವಿದ್ಯುತ್ ಯೂನಿಟ್ ಮತ್ತು 4,000 ಕಿಲೋಲೀಟರ್ ವರೆಗಿನ ನೀರನ್ನು ಉಚಿತವಾಗಿ ಪಡೆಯುತ್ತಾರೆ.

ಸರಕಾರ ಅವರ ವಸತಿಯನ್ನು ಸಹ ನೋಡಿಕೊಳ್ಳುತ್ತದೆ.

ಐದು ವರ್ಷಗಳ ಅವಧಿಯಲ್ಲಿ ಸಂಸದರಿಗೆ ಪ್ರಮುಖ ಪ್ರದೇಶಗಳಲ್ಲಿ ಬಾಡಿಗೆ ರಹಿತ ವಸತಿ ಒದಗಿಸಲಾಗುತ್ತದೆ.

ಅವರು ತಮ್ಮ ಹಿರಿತನದ ಆಧಾರದ ಮೇಲೆ ಅಪಾರ್ಟ್‌ಮೆಂಟ್‌ಗಳು ಅಥವಾ ಬಂಗಲೆಗಳನ್ನು ಪಡೆಯಬಹುದು.

ಅಧಿಕೃತ ವಸತಿಗಳನ್ನು ಬಳಸದಿರಲು ಆಯ್ಕೆ ಮಾಡುವ ವ್ಯಕ್ತಿಗಳು ಮಾಸಿಕ 2 ಲಕ್ಷ ರೂ.ಗಳ ವಸತಿ ಭತ್ತೆ ಪಡೆಯಲು ಅರ್ಹರಾಗಿರುತ್ತಾರೆ.

ಕೇಂದ್ರ ಸರಕಾರಿ ಆರೋಗ್ಯ ಯೋಜನೆ (ಸಿಜಿಎಚ್‌ಎಸ್) ಅಡಿಯಲ್ಲಿ, ಸಂಸದರು ಮತ್ತು ಅವರ ಕುಟುಂಬದವರಿಗೆ ಉಚಿತ ವೈದ್ಯಕೀಯ ಸೌಲಭ್ಯವಿದೆ.

ಸಂಸತ್ತಿನಲ್ಲಿ ಒಂದು ಅವಧಿಗೆ ಸೇವೆ ಸಲ್ಲಿಸಿದ ನಂತರ, ಮಾಜಿ ಸಂಸದರು ತಿಂಗಳಿಗೆ 25,000 ರೂ.ಗಳ ಪಿಂಚಣಿಗೆ ಅರ್ಹರಾಗಿರುತ್ತಾರೆ.

ಅವರು ಪ್ರತೀ ಹೆಚ್ಚುವರಿ ವರ್ಷದ ಸೇವೆಗೆ 2,000 ರೂ.ನಂತೆ ಈ ಮಾಸಿಕ ಪಿಂಚಣಿಯಲ್ಲಿ ಹೆಚ್ಚಳ ಇರುತ್ತದೆ.

ಇನ್ನು ರಾಷ್ಟ್ರಪತಿ, ಉಪರಾಷ್ಟ್ರಪತಿ, ದೇಶದ ಪ್ರಧಾನಿ ಪಡೆಯುವ ವೇತನದ ವಿವರಗಳನ್ನು ನೋಡುವುದಾದರೆ,

ರಾಷ್ಟ್ರಪತಿ ವೇತನ 5 ಲಕ್ಷ ರೂ.

ಉಪ ರಾಷ್ಟ್ರಪತಿ ವೇತನ 4 ಲಕ್ಷ ರೂ.

ಪ್ರಧಾನಿ ವೇತನ 2.80 ಲಕ್ಷ ರೂ.

ರಾಜ್ಯಪಾಲರ ವೇತನ 3.50 ಲಕ್ಷ ರೂ.

ಜನಸಾಮಾನ್ಯರು ಬೆಲೆ ಏರಿಕೆಯಿಂದ ಕಂಗೆಟ್ಟು ಹೋಗಿದ್ದರೆ, ಇತ್ತ ಶಾಸಕರು ಮತ್ತೆ ತಮ್ಮ ವೇತನ ಪರಿಷ್ಕರಣೆಗಾಗಿ ಒತ್ತಾಯಿಸುತ್ತಲೇ ಇದ್ದರು. ಶಾಸಕರ ವೇತನ ಪರಿಷ್ಕರಣೆಯಾಗಿ ಮೂರು ವರ್ಷಗಳೂ ಕಳೆದಿರಲಿಲ್ಲ, ಆಗಲೇ ಮತ್ತೆ ವೇತನ ಪರಿಷ್ಕರಣೆಯ ಕೋರಿಕೆ ಮುಂದಿಟ್ಟಿದ್ದರು. ವಿಧಾನಮಂಡಲ ಸದನ ಕಾರ್ಯಕಲಾಪ ಸಲಹಾ ಸಮಿತಿ (ಬಿಎಸಿ) ಸಭೆಯಲ್ಲಿ ವಿಧಾನಸಭೆ ವಿಪಕ್ಷ ಉಪನಾಯಕ ಅರವಿಂದ ಬೆಲ್ಲದ್ ವೇತನ ಪರಿಷ್ಕರಣೆಯ ಪ್ರಸ್ತಾವವನ್ನು ಮುಂದಿಟ್ಟಿದ್ದರು. ಬೆಲೆ ಏರಿಕೆ ಹೆಚ್ಚಾಗಿದ್ದು, ಈ ಹಿನ್ನೆಲೆ ಶಾಸಕರ ವೇತನವನ್ನು ಹೆಚ್ಚಿಸುವಂತೆ ಕೋರಿದ್ದರು. ಸಭೆಯಲ್ಲಿದ್ದ ಜೆಡಿಎಸ್, ಕಾಂಗ್ರೆಸ್ ಶಾಸಕರೂ ಇದಕ್ಕೆ ಸಹಮತ ವ್ಯಕ್ತಪಡಿಸಿದ್ದರು. ಈ ವೇಳೆ ಸಿಎಂ ಸಿದ್ದರಾಮಯ್ಯ ಶಾಸಕರ ವೇತನ ಪರಿಷ್ಕರಣೆಯ ಪ್ರಸ್ತಾವನೆಯನ್ನು ಪರಿಶೀಲಿಸುವ ಭರವಸೆ ನೀಡಿದ್ದರು. ಈಗ ಶಾಸಕರ ಬೇಡಿಕೆ ಈಡೇರಿದಂತಾಗಿದೆ.

2022ರಲ್ಲಿ ಬಿಜೆಪಿ ಸರಕಾರ ಇದ್ದಾಗ ವೇತನ ಪರಿಷ್ಕರಣೆ ಮಾಡಲಾಗಿತ್ತು. 2022ರ ಎಪ್ರಿಲ್ 1ರಿಂದ ಆ ವೇತನ ಹೆಚ್ಚಳ ಅನ್ವಯವಾಗಿತ್ತು. ಅದರಂತೆ ಶಾಸಕರು ಮತ್ತು ವಿಧಾನಪರಿಷತ್ ಸದಸ್ಯರ ವೇತನದಲ್ಲಿ ಶೇ. 60ರಷ್ಟು ಹೆಚ್ಚಳವಾಗಿತ್ತು. ಮುಖ್ಯಮಂತ್ರಿ ಮತ್ತು ಸಚಿವರ ವೇತನದಲ್ಲಿ ಶೇ. 50ರಷ್ಟು ಹೆಚ್ಚಳವಾಗಿತ್ತು. ಸಭಾಧ್ಯಕ್ಷರು, ಸಭಾಪತಿ ಮತ್ತು ವಿರೋಧ ಪಕ್ಷಗಳ ನಾಯಕರ ವೇತನದಲ್ಲಿಯೂ ಶೇ. 50ರಷ್ಟು ಹೆಚ್ಚಳವಾಗಿತ್ತು.

ಈಗ ಸಚಿವರು, ಶಾಸಕರ ವೇತನ ಹೆಚ್ಚಳವನ್ನು ಗೃಹ ಸಚಿವ ಡಾ. ಜಿ. ಪರಮೇಶ್ವರ, ಎಂ.ಬಿ. ಪಾಟೀಲ್ ಸೇರಿದಂತೆ ಹಲವು ನಾಯಕರು ಸಮರ್ಥಿಸಿಕೊಂಡಿರುವುದು ವರದಿಯಾಗಿದೆ.

ಈಗಿನ ಪರಿಷ್ಕರಣೆಯಿಂದ ವೇತನ ಮತ್ತು ಭತ್ತೆಗಳಲ್ಲಿ ಆಗುವ ಏರಿಕೆ ಹೀಗಿದೆ

ಸಭಾಧ್ಯಕ್ಷ, ಸಭಾಪತಿ ವೇತನ 75 ಸಾವಿರದಿಂದ 1.25 ಲಕ್ಷ ರೂ.

ಸಭಾಧ್ಯಕ್ಷ, ಸಭಾಪತಿ ಆತಿಥ್ಯ ಭತ್ತೆ 4 ಲಕ್ಷದಿಂದ 5 ಲಕ್ಷ ರೂ.

ಉಪ ಸಭಾಧ್ಯಕ್ಷ, ಉಪ ಸಭಾಪತಿ, ವಿಪಕ್ಷ ನಾಯಕರ ವೇತನ 60 ಸಾವಿರದಿಂದ 80 ಸಾವಿರ ರೂ.

ಉಪ ಸಭಾಧ್ಯಕ್ಷ, ಉಪ ಸಭಾಪತಿ ವಿಪಕ್ಷ ನಾಯಕರ ಆತಿಥ್ಯ ಭತ್ತೆ 2.50 ಲಕ್ಷದಿಂದ 3 ಲಕ್ಷ ರೂ.

ಮುಖ್ಯಮಂತ್ರಿ ವೇತನ 75 ಸಾವಿರದಿಂದ 1.50 ಲಕ್ಷ ರೂ.

ಸಚಿವರ ವೇತನ 60 ಸಾವಿರದಿಂದ 1.25 ಲಕ್ಷ ರೂ.

ಮುಖ್ಯಮಂತ್ರಿ ಮತ್ತು ಸಚಿವರ ಆತಿಥ್ಯ ಭತ್ತೆ 4.50 ಲಕ್ಷದಿಂದ 5 ಲಕ್ಷ ರೂ.

ಸಚಿವರಿಗೆ ಮನೆ ಬಾಡಿಗೆ ಭತ್ತೆ 1.20 ಲಕ್ಷದಿಂದ 2.50 ಲಕ್ಷ ರೂ.

ರಾಜ್ಯ ಸಚಿವರ ವೇತನ 50 ಸಾವಿರದಿಂದ 75 ಸಾವಿರ ರೂ.

ರಾಜ್ಯ ಸಚಿವರಿಗೆ ಮನೆ ಬಾಡಿಗೆ ಭತ್ತೆ 1.20 ಲಕ್ಷದಿಂದ 2 ಲಕ್ಷ ರೂ.

ಶಾಸಕರ ವೇತನ 40 ಸಾವಿರದಿಂದ 80 ಸಾವಿರ ರೂ.

ಶಾಸಕರ ಪಿಂಚಣಿ 50 ಸಾವಿರದಿಂದ 75 ಸಾವಿರ ರೂ.

ಹೆಚ್ಚುವರಿ ಪಿಂಚಣಿ 5 ಸಾವಿರದಿಂದ 20 ಸಾವಿರ ರೂ.

ಕ್ಷೇತ್ರ ಪ್ರವಾಸ ಭತ್ತೆ 60 ಸಾವಿರದಿಂದ 80 ಸಾವಿರ ರೂ.

ಮುಖ್ಯ ಸಚೇತಕರ ವೇತನ 50 ಸಾವಿರದಿಂದ 70 ಸಾವಿರ ರೂ.

ಮುಖ್ಯ ಸಚೇತಕರ ಆತಿಥ್ಯ ಭತ್ತೆ 2.50 ಲಕ್ಷದಿಂದ 3 ಲಕ್ಷ ರೂ.

ಸಭಾಧ್ಯಕ್ಷ, ಸಭಾಪತಿ, ಉಪ ಸಭಾಧ್ಯಕ್ಷ, ಉಪ ಸಭಾಪತಿ, ವಿಪಕ್ಷ ನಾಯಕ, ಸರಕಾರದ ಮುಖ್ಯ ಸಚೇತಕ, ವಿಪಕ್ಷ ಮುಖ್ಯ ಸಚೇತಕರ ಮನೆ ಬಾಡಿಗೆ 1.60 ಲಕ್ಷದಿಂದ 2.50 ಲಕ್ಷ ರೂ.

Tags:    

Writer - ವಾರ್ತಾಭಾರತಿ

contributor

Editor - Thouheed

contributor

Byline - ಆರ್.ಜೀವಿ

contributor

Similar News