ಕ್ಷೇತ್ರ ಮರುವಿಂಗಡಣೆ ದಕ್ಷಿಣ ಭಾರತೀಯರ ಆತಂಕಕ್ಕೆ ಕಾರಣವೇನು?

2026ರ ಕ್ಷೇತ್ರ ಮರುವಿಂಗಡಣೆಯ ಗುಮ್ಮ ದಕ್ಷಿಣದ ರಾಜ್ಯಗಳನ್ನು ಕಾಡಲು ಶುರುವಾಗಿ ಬಹಳ ಸಮಯವಾಗಿದೆ. ಕೇಂದ್ರ ಗೃಹಸಚಿವ ಅಮಿತ್ ಶಾ, ಹೆದರಬೇಡಿ ಗುಮ್ಮ ಏನೂ ಮಾಡುವುದಿಲ್ಲ ಎನ್ನುವ ಹಾಗೆ ಹೊಸ ಕಥೆ ಹೇಳತೊಡಗಿದ್ದಾರೆ. ಅದು ಅವರ ಭರವಸೆ. ಆದರೆ ಅವರು ಹೇಳುತ್ತಿರುವುದರಲ್ಲಿ ಎಷ್ಟು ಸತ್ಯವಿದೆ? ಜನಸಂಖ್ಯೆ ಆಧಾರದಲ್ಲಿ ಕ್ಷೇತ್ರ ಮರುವಿಂಗಡಣೆ ನಡೆಯಲಿದ್ದು, ಉತ್ತರದ ರಾಜ್ಯಗಳ ಸೀಟುಗಳಲ್ಲಿ ಅಸಾಧಾರಣ ಏರಿಕೆಯಾಗಲಿರುವಾಗ ದಕ್ಷಿಣದ ರಾಜ್ಯಗಳಲ್ಲಿ ಮೂಗಿಗೆ ತುಪ್ಪ ಸವರಿದ ಹಾಗೆ ಮಾತ್ರ ಏರಿಕೆಯಾಗಲಿದೆ ಎನ್ನಲಾಗುತ್ತಿದೆ. ಇನ್ನೊಂದೆಡೆ, ಹೆಚ್ಚುವುದು ಹಾಗಿರಲಿ, ಇರುವ ಸೀಟುಗಳನ್ನೂ ಕಳೆದುಕೊಳ್ಳುವ ಸಾಧ್ಯತೆ ಬಗ್ಗೆಯೂ ಮಾತುಗಳಿವೆ.;

Update: 2025-03-04 15:33 IST
Editor : Thouheed | Byline : ಆರ್.ಜೀವಿ
ಕ್ಷೇತ್ರ ಮರುವಿಂಗಡಣೆ ದಕ್ಷಿಣ ಭಾರತೀಯರ ಆತಂಕಕ್ಕೆ ಕಾರಣವೇನು?
  • whatsapp icon

ಭಾಗ- 1

ಇತ್ತೀಚೆಗೆ ಕೇಂದ್ರ ಗೃಹಸಚಿವ ಅಮಿತ್ ಶಾ ಒಂದು ಮಾತು ಹೇಳಿದ್ದಾರೆ. ಜನಗಣತಿ ಆಧಾರದ ಮೇಲೆ ಮುಂದಿನ ವರ್ಷ ನಡೆಯಲಿರುವ ಕ್ಷೇತ್ರ ಮರುವಿಂಗಡಣೆಯಿಂದ ದಕ್ಷಿಣ ಭಾರತದಲ್ಲಿ ಒಂದೇ ಒಂದು ಲೋಕಸಭೆ ಸೀಟೂ ಕಡಿಮೆಯಾಗುವುದಿಲ್ಲ ಎಂಬ ಸ್ಪಷ್ಟನೆಯನ್ನು ಅವರು ಕೊಟ್ಟಿದ್ದಾರೆ. ‘‘ಪ್ರಧಾನಿ ನರೇಂದ್ರ ಮೋದಿ ಅವರು ದಕ್ಷಿಣ ಭಾರತದ ಜನರ ಹಿತಾಸಕ್ತಿಯನ್ನು ಗಮನದಲ್ಲಿಟ್ಟುಕೊಂಡಿದ್ದಾರೆ. ಕ್ಷೇತ್ರ ಮರುವಿಂಗಡಣೆ ಬಳಿಕ ದಕ್ಷಿಣದಲ್ಲಿ ಒಂದೇ ಒಂದು ಲೋಕಸಭಾ ಸೀಟೂ ಕಡಿಮೆಯಾಗುವುದಿಲ್ಲ’’ ಎಂದಿದ್ದಾರೆ. ಕ್ಷೇತ್ರ ಮರುವಿಂಗಡಣೆ ಪ್ರಕ್ರಿಯೆ ಒಕ್ಕೂಟ ವ್ಯವಸ್ಥೆಯನ್ನು ಎತ್ತಿ ಹಿಡಿಯಲು ಪಾರದರ್ಶಕತೆ ಹಾಗೂ ನ್ಯಾಯೋಚಿತವಾಗಿ ನಡೆಯಲಿದೆ ಎಂದೆಲ್ಲ ದೊಡ್ಡ ದೊಡ್ಡ ಪದಗಳನ್ನು ಬಳಸಿ ಭರವಸೆ ಕೊಟ್ಟಿದ್ದಾರೆ. ತಮಿಳುನಾಡು ಸಿಎಂ ಎಂ.ಕೆ. ಸ್ಟಾಲಿನ್ ಕ್ಷೇತ್ರ ಮರುವಿಂಗಡಣೆ ಬಗ್ಗೆ ತೀವ್ರ ವಿರೋಧ ವ್ಯಕ್ತಪಡಿಸಿ ಮಾತಾಡಿದ ಬೆನ್ನಲ್ಲೇ ಅಮಿತ್ ಶಾ ಸ್ಪಷ್ಟನೆ ಬಂದಿದೆ.

ಜನಸಂಖ್ಯೆ ಆಧಾರದಲ್ಲಿ ಕ್ಷೇತ್ರ ಮರುವಿಂಗಡಣೆ ನಡೆಸಿದರೆ 39 ಲೋಕಸಭಾ ಕ್ಷೇತ್ರಗಳನ್ನು ಹೊಂದಿರುವ ತಮಿಳುನಾಡು 8 ಕ್ಷೇತ್ರಗಳನ್ನು ಕಳೆದುಕೊಳ್ಳಲಿದೆ ಎಂದು ಸ್ಟಾಲಿನ್ ಆತಂಕ ವ್ಯಕ್ತಪಡಿಸಿದ್ದರು. ಈ ಹಿನ್ನೆಲೆಯಲ್ಲಿ ಅಮಿತ್ ಶಾ ಈ ಸ್ಪಷ್ಟನೆ ನೀಡಿದ್ದಾರೆ. ಆದರೆ, ತಮಿಳುನಾಡು ಇದನ್ನೆಲ್ಲ ನಂಬಿಕೊಂಡು ಕೂರುವ ಪೈಕಿಯಲ್ಲ. ಕ್ಷೇತ್ರ ಮರುವಿಂಗಡಣೆಯ ಪರಿಣಾಮಗಳ ಕುರಿತು ಚರ್ಚಿಸಲು ಸ್ಟಾಲಿನ್ ಅವರು ಮಾರ್ಚ್ 5ರಂದು ಸರ್ವಪಕ್ಷ ಸಭೆ ಕರೆದಿದ್ದಾರೆ. ಚುನಾವಣಾ ಆಯೋಗದಲ್ಲಿ ನೋಂದಾಯಿಸಲಾದ 40 ರಾಜಕೀಯ ಪಕ್ಷಗಳನ್ನು ಸಭೆಗೆ ಅವರು ಆಹ್ವಾನಿಸಿದ್ದು, ಅಲ್ಲಿ ಕೈಗೊಳ್ಳುವ ನಿರ್ಧಾರ ಏನಿರಲಿದೆ ಎಂಬುದು ಕುತೂಹಲ ಮೂಡಿಸಿದೆ.

ಏನಿದು ಕ್ಷೇತ್ರ ಮರುವಿಂಗಡಣೆ?

ಜನಸಂಖ್ಯೆಯಲ್ಲಿನ ಬದಲಾವಣೆಗಳನ್ನು ಬಿಂಬಿಸಲು ಲೋಕಸಭೆ ಮತ್ತು ರಾಜ್ಯ ವಿಧಾನಸಭಾ ಕ್ಷೇತ್ರಗಳ ಗಡಿಗಳನ್ನು ಮರು ರೂಪಿಸುವ ಪ್ರಕ್ರಿಯೆಯೇ ಡಿಲಿಮಿಟೇಶನ್ ಅಥವಾ ಕ್ಷೇತ್ರ ಮರುವಿಂಗಡಣೆ. ಜನಸಂಖ್ಯಾ ಬದಲಾವಣೆಗಳ ಆಧಾರದ ಮೇಲೆ ನ್ಯಾಯಯುತ ರಾಜಕೀಯ ಪ್ರಾತಿನಿಧ್ಯ ಖಾತ್ರಿಪಡಿಸಿಕೊಳ್ಳುವುದು ಇದರ ಆಶಯ. ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳಿಗೆ ಎಷ್ಟು ಸ್ಥಾನಗಳನ್ನು ಕಾಯ್ದಿರಿಸಬೇಕು ಎಂಬುದನ್ನು ಸಹ ಇದು ನಿರ್ಧರಿಸುತ್ತದೆ. ನ್ಯಾಯಯುತ ಪ್ರಾತಿನಿಧ್ಯ ಖಚಿತಪಡಿಸಿಕೊಳ್ಳಲು, ಜನಸಂಖ್ಯೆಯ ಬೆಳವಣಿಗೆಯನ್ನು ಸಂಸತ್ತಿನ ಬಲದೊಂದಿಗೆ ಸಮತೋಲನ ಮಾಡಲೆಂದೇ ಸಜ್ಜುಗೊಳಿಸಲು ಈ ವ್ಯವಸ್ಥೆಯನ್ನು ಜಾರಿಗೆ ತರಲಾಯಿತು. ಸಂವಿಧಾನದ 82 ಮತ್ತು 170ನೇ ವಿಧಿಗಳ ಪ್ರಕಾರ, ಪ್ರತಿ ಜನಗಣತಿಯ ನಂತರ ಸ್ಥಾನಗಳ ಸಂಖ್ಯೆ ಮತ್ತು ಅವುಗಳ ಗಡಿಗಳನ್ನು ಮರು ಹೊಂದಿಸಲಾಗುತ್ತದೆ. ಕಡೆಯದಾಗಿ ನಡೆದಿರುವ ಜನಗಣತಿ ದತ್ತಾಂಶ ಆಧರಿಸಿ, ಸಂಸತ್ತು ಅಂಗೀಕರಿಸಿದ ಕಾನೂನಿನ ಮೂಲಕ ರಚಿಸಲಾಗಿರುವ ಡಿಲಿಮಿಟೇಶನ್ ಆಯೋಗ ಈ ಪ್ರಕ್ರಿಯೆಯನ್ನು ನಿರ್ವಹಿಸುತ್ತದೆ.

ಕ್ಷೇತ್ರ ಮರುವಿಂಗಡಣೆಯ ಇತಿಹಾಸವನ್ನು ಗಮನಿಸುವುದಾದರೆ,

ಈವರೆಗೆ ಮೂರು ಬಾರಿ ಕ್ಷೇತ್ರ ಮರುವಿಂಗಡಣೆ ನಡೆಸಲಾಗಿದೆ. 1951, 1961 ಮತ್ತು 1971ರಲ್ಲಿ ದೇಶದ ಜನಸಂಖ್ಯೆ ಹೆಚ್ಚಾದಂತೆ ಲೋಕಸಭಾ ಸ್ಥಾನಗಳ ಸಂಖ್ಯೆಯನ್ನೂ ಹೆಚ್ಚಿಸಲಾಯಿತು.

1951ರ ಜನಗಣತಿಯಂತೆ 494 ಸ್ಥಾನಗಳು - ಜನಸಂಖ್ಯೆ: 36.1 ಕೋಟಿ (ಪ್ರತೀ ಸ್ಥಾನಕ್ಕೆ 7.3 ಲಕ್ಷ ಜನರು)

1961ರ ಜನಗಣತಿಯಂತೆ 522 ಸ್ಥಾನಗಳು - ಜನಸಂಖ್ಯೆ: 43.9 ಕೋಟಿ (ಪ್ರತೀ ಸ್ಥಾನಕ್ಕೆ 8.4 ಲಕ್ಷ ಜನರು)

1971ರ ಜನಗಣತಿಯಂತೆ 543 ಸ್ಥಾನಗಳು - ಜನಸಂಖ್ಯೆ: 54.8 ಕೋಟಿ (ಪ್ರತೀ ಸ್ಥಾನಕ್ಕೆ 10.1 ಲಕ್ಷ ಜನರು)

1971ರ ಜನಗಣತಿಯಿಂದ ಲೋಕಸಭಾ ಸ್ಥಾನಗಳ ಸಂಖ್ಯೆ ಸ್ಥಗಿತಗೊಂಡಿದೆ. 1976ರಲ್ಲಿ ಕುಟುಂಬ ಯೋಜನೆ ಅಭಿಯಾನ ಉತ್ತುಂಗದಲ್ಲಿದ್ದಾಗ, ಹೆಚ್ಚು ಸಮತೋಲಿತವಾಗಿ ರೂಪಿಸಲು ಅದನ್ನು 25 ವರ್ಷಗಳ ಕಾಲ ಮುಂದೂಡಲು ನಿರ್ಧರಿಸಲಾಯಿತು. ಜನಸಂಖ್ಯಾ ನಿಯಂತ್ರಣ ಉತ್ತೇಜಿಸಲು ಮತ್ತು ಹೆಚ್ಚಿನ ಜನಸಂಖ್ಯೆ ಬೆಳವಣಿಗೆ ಇರುವ ರಾಜ್ಯಗಳು ಹೆಚ್ಚಿನ ಸ್ಥಾನಗಳನ್ನು ಪಡೆಯುವುದನ್ನು ತಡೆಯಲು ಹಾಗೆ ಮಾಡಲಾಯಿತು. 2000ದವರೆಗೂ ಜಾರಿಯಲ್ಲಿದ್ದ ಈ ಸ್ಥಗಿತ ಸ್ಥಿತಿಯನ್ನು 42ನೇ ತಿದ್ದುಪಡಿ ಕಾಯ್ದೆಯ ಮೂಲಕ ತರಲಾಗಿತ್ತು. 2001ರಲ್ಲಿ ಮತ್ತೆ 84ನೇ ತಿದ್ದುಪಡಿ ಕಾಯ್ದೆಯೊಂದಿಗೆ ಇದನ್ನು 2026ರವರೆಗೆ ಜಾರಿಯಲ್ಲಿಡಲು ಇನ್ನೂ 25 ವರ್ಷಗಳ ಕಾಲ ಮುಂದೂಡಲಾಯಿತು.

ಪ್ರಸಕ್ತ, ಲೋಕಸಭೆ ಮತ್ತು ರಾಜ್ಯಸಭೆಯಲ್ಲಿ ನಾವು ಹೊಂದಿರುವ ಸ್ಥಾನಗಳ ಸಂಖ್ಯೆ 1971ರ ಜನಗಣತಿಯ ಸಂಖ್ಯೆಗಳನ್ನು ಆಧರಿಸಿದ್ದು, ಕ್ರಮವಾಗಿ 543 ಮತ್ತು 250 ಇವೆ. ಆದರೆ, ಸ್ಥಾನಗಳ ಸಂಖ್ಯೆ ಬದಲಾಗದೆ ಉಳಿದಿದ್ದರೂ, ಕ್ಷೇತ್ರಗಳ ಗಡಿಗಳು ಮತ್ತು ಎಸ್‌ಸಿ, ಎಸ್‌ಟಿ ಮೀಸಲಾತಿಗಳನ್ನು 2001ರ ಜನಗಣತಿಯ ನಂತರ ಸರಿಹೊಂದಿಸಲಾಯಿತು.

2026ರ ನಂತರ ಮತ್ತೆ ಇದು ಪರಿಶೀಲನೆಗೆ ಒಳಪಡಲಿದೆ. ಈಗ, 2026ರ ನಂತರದ ಮೊದಲ ಜನಗಣತಿಯ ನಂತರವೇ ಮುಂದಿನ ಪ್ರಕ್ರಿಯೆ ಜರುಗಬಹುದು.

2026ರ ಕ್ಷೇತ್ರ ಮರುವಿಂಗಡಣೆಯ ಪರಿಣಾಮವೇನು?

ಸಾಮಾನ್ಯ ಸಂದರ್ಭದಂತೆ, 2031ರ ಜನಗಣತಿಯೊಂದಿಗೆ ಮುಂದಿನ ಡಿಲಿಮಿಟೇಶನ್ ಪ್ರಕ್ರಿಯೆ ನಡೆಯಬೇಕಿತ್ತು. ಆದರೆ, 2021ರ ಜನಗಣತಿ ವಿಳಂಬವಾಗುತ್ತಿದ್ದು, 2026 ಸಮೀಪಿಸುತ್ತಿರುವುದರಿಂದ, ಮುಂಬರುವ ಗಡಿ ನಿರ್ಣಯ ಪ್ರಕ್ರಿಯೆಯ ಕುರಿತು ಚರ್ಚೆಗಳು ಈಗಾಗಲೇ ಪ್ರಾರಂಭವಾಗಿವೆ. ಸರಳವಾಗಿ ಹೇಳುವುದಾದರೆ, ಒಟ್ಟು ಸಂಸದೀಯ ಸ್ಥಾನಗಳನ್ನು ಬದಲಾಯಿಸದೆ ಕ್ಷೇತ್ರ ವ್ಯಾಪ್ತಿಯನ್ನು ವಿಸ್ತರಿಸುವುದು, ಕಿರಿದುಗೊಳಿಸುವುದು, ಬದಲಾಯಿಸುವುದು ಡಿಲಿಮಿಟೇಷನ್‌ನಲ್ಲಿ ಸಾಧ್ಯವಿದೆ. ಆದರೆ ಇದು ಅದಕ್ಕಿಂತ ಸ್ವಲ್ಪ ಹೆಚ್ಚು ಸಂಕೀರ್ಣವಾಗಿದೆ. ಪರಿಗಣನೆಗೆ ತೆಗೆದುಕೊಳ್ಳಬೇಕಾದ ಹಲವಾರು ವಿಷಯಗಳಿವೆ. ಮತ್ತು ಇಂತಹ ಕಾರಣಗಳಿಂದಾಗಿಯೇ ತಮಿಳುನಾಡು ಮತ್ತು ಇತರ ದಕ್ಷಿಣ ರಾಜ್ಯಗಳಲ್ಲಿ ಆತಂಕ ಮೂಡಿದೆ. ಉತ್ತರ ರಾಜ್ಯಗಳಿಗೆ ಹೋಲಿಸಿದರೆ ನಿಧಾನಗತಿಯ ಜನಸಂಖ್ಯಾ ಬೆಳವಣಿಗೆಯಿಂದಾಗಿ ದಕ್ಷಿಣ ರಾಜ್ಯಗಳು ಪ್ರಾತಿನಿಧ್ಯ ಕಳೆದುಕೊಳ್ಳುವ ಭಯದಲ್ಲಿವೆ.

ತಮಿಳುನಾಡಿನ ಸ್ಥಿತಿ ಏನು?

ಫೆಬ್ರವರಿ 25ರಂದು ತಮ್ಮ ಟ್ವೀಟ್‌ನಲ್ಲಿ ಮುಖ್ಯಮಂತ್ರಿ ಸ್ಟಾಲಿನ್ ಅವರು ಕ್ಷೇತ್ರ ಮರುವಿಂಗಡಣೆ ತಮಿಳುನಾಡಿಗೆ ಮಾತ್ರ ಸೀಮಿತವಲ್ಲ. ಅದು ಇಡೀ ದಕ್ಷಿಣ ಭಾರತದ ಮೇಲೆ ಪರಿಣಾಮ ಬೀರಲಿದೆ ಎಂದರು. ಜನಸಂಖ್ಯಾ ನಿಯಂತ್ರಣವನ್ನು ಯಶಸ್ವಿಯಾಗಿ ನಿರ್ವಹಿಸಿದ, ಅಭಿವೃದ್ಧಿಯಲ್ಲಿ ಮುಂದಾಳತ್ವ ವಹಿಸಿದ ಮತ್ತು ರಾಷ್ಟ್ರೀಯ ಪ್ರಗತಿಗೆ ಗಮನಾರ್ಹ ಕೊಡುಗೆ ನೀಡಿದ ರಾಜ್ಯಗಳಿಗೆ ಪ್ರಜಾಪ್ರಭುತ್ವ ಪ್ರಕ್ರಿಯೆ ದಂಡನೆಯಾಗಬಾರದು ಎಂದರು.

ಮತ್ತು ಅವರ ಅನುಮಾನಗಳು ಸಮರ್ಥನೀಯ ವಾದವುಗಳೇ ಆಗಿವೆ. 1951, 1961 ಮತ್ತು 1971ರ ಮಾದರಿಗಳನ್ನು ಅನುಸರಿಸಿದರೆ, ಅಂದಾಜು ಜನಸಂಖ್ಯೆಯ ಆಧಾರದ ಮೇಲೆ, ಲೋಕಸಭಾ ಸ್ಥಾನಗಳ ಸಂಖ್ಯೆ 543ರಿಂದ 753ಕ್ಕೆ ಹೆಚ್ಚಾಗಬಹುದು.

ಪ್ರಸಕ್ತ, ದಕ್ಷಿಣ ರಾಜ್ಯಗಳು ಒಟ್ಟಾಗಿ 543 ಲೋಕಸಭಾ ಸ್ಥಾನಗಳಲ್ಲಿ 129 ಸ್ಥಾನಗಳನ್ನು ಹೊಂದಿವೆ:

ಅವುಗಳಲ್ಲಿ ತಮಿಳುನಾಡು 39, ಕರ್ನಾಟಕ 28, ಆಂಧ್ರಪ್ರದೇಶ 25, ಕೇರಳ 20 ಮತ್ತು ತೆಲಂಗಾಣ 17 ಸ್ಥಾನಗಳಿವೆ.

ಕೆಳಮನೆಯಲ್ಲಿ, 543 ಸ್ಥಾನಗಳಲ್ಲಿ 129 ಸ್ಥಾನಗಳನ್ನು ಹೊಂದಿರುವುದೆಂದರೆ, ದಕ್ಷಿಣ ರಾಜ್ಯಗಳಿಗೆ ಇರುವ ಪ್ರಾತಿನಿಧ್ಯ ಸರಿಸುಮಾರು ಶೇ. 24ರಷ್ಟು. ಆದರೂ, ಪ್ರಮಾಣಕ್ಕೆ ಅನುಗುಣವಾದ ಹೆಚ್ಚಳದೊಂದಿಗೆ ಈ ಶೇಕಡಾವಾರು ಪ್ರಾತಿನಿಧ್ಯ ಮತ್ತಷ್ಟು ಕಡಿಮೆಯಾಗುತ್ತದೆ. ಈ ರಾಜ್ಯಗಳಿಗೆ ಅಂದಾಜು ಸ್ಥಾನಗಳನ್ನು ನೋಡಿದರೆ, ಪ್ರತೀ ಕ್ಷೇತ್ರಕ್ಕೆ 20 ಲಕ್ಷ ಜನಸಂಖ್ಯಾ ಅನುಪಾತವನ್ನು ಮಾತ್ರ ಆಧರಿಸಿ, ಒಟ್ಟು ಲೋಕಸಭಾ ಸ್ಥಾನಗಳು 753 ಆಗುತ್ತವೆ. ಆ ಸಂದರ್ಭದಲ್ಲಿ, ಲೋಕಸಭೆಯಲ್ಲಿ ರಾಜ್ಯಗಳ ಪ್ರಾತಿನಿಧ್ಯ ಹೇಗಿರಬಹುದು ಎಂಬುದನ್ನು ಇಂಡಿಯಾ ಟುಡೇ ಅಂದಾಜಿಸಿದೆ. ಅದರ ಪ್ರಕಾರ,

ತಮಿಳುನಾಡು 41, ಕರ್ನಾಟಕ 36, ಆಂಧ್ರಪ್ರದೇಶ 28, ತೆಲಂಗಾಣ 20, ಕೇರಳ 19. ಅದನ್ನು ಒಟ್ಟುಗೂಡಿಸಿದರೆ 753ರಲ್ಲಿ 144 ಆಗುತ್ತದೆ. ಅಂದರೆ ಒಟ್ಟು ಪ್ರಾತಿನಿಧ್ಯ ಶೇ. 19ರಷ್ಟಾಗುತ್ತದೆ.

ಈಗಿರುವುದರಲ್ಲಿ ಶೇ. 5ರಷ್ಟು ಕುಸಿತ

ಇದಕ್ಕೆ ವ್ಯತಿರಿಕ್ತವಾಗಿ, ಈಗಾಗಲೇ ಅತಿ ಹೆಚ್ಚು ಸಂಸದರನ್ನು ಹೊಂದಿರುವ ರಾಜ್ಯವಾಗಿರುವ ಉತ್ತರ ಪ್ರದೇಶದಲ್ಲಿ ಅತಿ ದೊಡ್ಡ ಏರಿಕೆ ಕಾಣಲಿದೆ. ಅಲ್ಲಿ 80ರಿಂದ 128ಕ್ಕೆ ಲೋಕಸಭೆ ಸ್ಥಾನಗಳು ಏರಬಹುದು. ಅದೇ ರೀತಿ, ವೇಗವಾಗಿ ಬೆಳೆಯುತ್ತಿರುವ ಜನಸಂಖ್ಯೆಯನ್ನು ಹೊಂದಿರುವ ಬಿಹಾರದಲ್ಲಿ ಸ್ಥಾನಗಳು 40ರಿಂದ 70ಕ್ಕೆ ಏರಲಿವೆ. ಮಧ್ಯಪ್ರದೇಶದ ಪ್ರಾತಿನಿಧ್ಯ 29ರಿಂದ 47ಕ್ಕೆ ಹೆಚ್ಚಾಗಲಿದೆ. ಮಹಾರಾಷ್ಟ್ರದಲ್ಲಿ ಇನ್ನೂ 20 ಸ್ಥಾನಗಳು ಹೆಚ್ಚುವ ನಿರೀಕ್ಷೆಯಿದ್ದು, 48ರಿಂದ 68ಕ್ಕೆ ಏರಲಿದೆ. ರಾಜಸ್ಥಾನದಲ್ಲಿ 25 ರಿಂದ 44 ಸ್ಥಾನಗಳಿಗೆ ಏರಿಕೆಯಾಗಲಿದೆ.

ಉತ್ತರ ರಾಜ್ಯಗಳಿಗೆ ಹೋಲಿಸಿದರೆ ದಕ್ಷಿಣ ರಾಜ್ಯಗಳ ಪ್ರಾತಿನಿಧ್ಯದಲ್ಲಿನ ಇಳಿಕೆ ಕ್ಷೇತ್ರ ಮರುವಿಂಗಡಣೆಯಲ್ಲಿ ದೊಡ್ಡ ಸಮಸ್ಯೆಗೆ ಎಡೆ ಮಾಡಿಕೊಡಲಿದೆ. ಕ್ಷೇತ್ರ ಮರುವಿಂಗಡಣೆ ಬಗ್ಗೆ ಕಳವಳ ವ್ಯಕ್ತಪಡಿಸುತ್ತಿರುವ ದಕ್ಷಿಣ ರಾಜ್ಯ ತಮಿಳುನಾಡು ಮಾತ್ರವೇ ಅಲ್ಲ. ಬಿಆರ್‌ಎಸ್ ಕಾರ್ಯಾಧ್ಯಕ್ಷ ಕೆ.ಟಿ. ರಾಮರಾವ್ ಅವರು ಸ್ಟಾಲಿನ್ ವಾದವನ್ನು ಬೆಂಬಲಿಸಿದ್ದಾರೆ. ಅವರ ಪ್ರಕಾರ, ಜನಸಂಖ್ಯೆಯ ಆಧಾರದ ಮೇಲೆ ಮಾತ್ರ ಕ್ಷೇತ್ರಗಳನ್ನು ಮರುವಿಂಗಡಿಸುವುದು ದಕ್ಷಿಣ ರಾಜ್ಯಗಳಿಗೆ ಶಾಪವಾಗಲಿದೆ. ಕೇರಳದ ಭಾರತೀಯ ಕಮ್ಯುನಿಸ್ಟ್ ಪಕ್ಷದ ನಾಯಕಿ ಎಂ.ಎ. ಬೇಬಿ ಕೂಡ ಇದೇ ರೀತಿಯ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಜನಗಣತಿಯ ನಂತರ ಉತ್ತರ ಭಾರತದಲ್ಲಿನ ಸ್ಥಾನಗಳಲ್ಲಿ ಭಾರೀ ಹೆಚ್ಚಳವಾಗಲಿದೆ.

ಏನೂ ಆಗುವುದಿಲ್ಲ ಎಂದು ಅಮಿತ್ ಶಾ ಅವರಿಗೆ ಅಷ್ಟು ವಿಶ್ವಾಸವಿದ್ದರೆ, ಕೇಂದ್ರ ರಾಷ್ಟ್ರೀಯ ಪಕ್ಷಗಳ ಸಭೆ ಕರೆದು, ಸರಕಾರ ಏನು ಮಾಡಬಯಸಿದೆ ಎಂಬುದನ್ನು ಏಕೆ ವಿವರಿಸುವುದಿಲ್ಲ? ಎಂಬ ಪ್ರಶ್ನೆಯನ್ನು ಅವರು ಎತ್ತಿದ್ದಾರೆ. ದಕ್ಷಿಣ ರಾಜ್ಯಗಳ ಕಳವಳಗಳನ್ನು ಪರಿಹರಿಸಲು ತೆಗೆದುಕೊಳ್ಳಲಾಗುವ ಕ್ರಮಗಳೇನು ಎಂದೂ ಅವರು ಕೇಳಿದ್ದಾರೆ. ಸೀಟುಗಳ ಸಂಖ್ಯೆಗಳನ್ನು ಪ್ರಮಾಣಕ್ಕೆ ಅನುಗುಣವಾಗಿ ಕಡಿಮೆ ಮಾಡಲಾಗುವುದಿಲ್ಲ ಎಂದು ಗೃಹ ಸಚಿವರು ಸುಳ್ಳು ಭರವಸೆ ನೀಡುತ್ತಾರೆ. ನಮಗೆ ಸ್ಪಷ್ಟತೆ ಬೇಕು. ಹೊಸ ಜನಗಣತಿಯ ನಂತರ ಸೀಟು ವಿಂಗಡಣೆ ಆಗುತ್ತದೆಯೇ ಅಥವಾ ಅಸ್ತಿತ್ವದಲ್ಲಿರುವ ಕ್ಷೇತ್ರಗಳನ್ನು ಅನುಸರಿಸಿ ಈ ಪ್ರಕ್ರಿಯೆ ಜರುಗಿಸಲಾಗುತ್ತದೆಯೇ ಎಂದು ಡಿಎಂಕೆ ಸಂಸದ ಎ. ರಾಜಾ ಕೇಳಿದ್ದಾರೆ.

Full View

Tags:    

Writer - ವಾರ್ತಾಭಾರತಿ

contributor

Editor - Thouheed

contributor

Byline - ಆರ್.ಜೀವಿ

contributor

Similar News