ಟ್ರಂಪ್ ಸುಂಕ: ಭಾರತಕ್ಕಿರುವ ಸವಾಲುಗಳು ಮತ್ತು ಅವಕಾಶಗಳು

ಭಾಗ- 2
ಟ್ರಂಪ್ ಸುಂಕಗಳಿಂದ ಔಷಧಿಗಳಿಗೆ ವಿನಾಯಿತಿ
ಅಮೆರಿಕಕ್ಕೆ ಭಾರತದ ಪ್ರಮುಖ ರಫ್ತುಗಳಲ್ಲಿ ಒಂದಾದ ಔಷಧಿಗಳ ಮೇಲೆ ಟ್ರಂಪ್ ಪ್ರತಿಸುಂಕ ಹೇರಿಲ್ಲ. ಭಾರತದ ಔಷಧಿ ಉದ್ಯಮದ ದೃಷ್ಟಿಯಿಂದ ಇದು ಮಹತ್ವದ ಅಂಶವಾಗಿದೆ. ಭಾರತದ ಔಷಧಿ ಉದ್ಯಮಕ್ಕೆ ಯುಎಸ್ ಮಾರುಕಟ್ಟೆ ನಿರ್ಣಾಯಕವಾಗಿದೆ. ಇದು ಅದರ ಒಟ್ಟಾರೆ ರಫ್ತಿನ ಶೇ. 30ರಷ್ಟಿದೆ. ಔಷಧಿಗಳಿಗೆ ನೀಡಲಾಗಿರುವ ವಿನಾಯಿತಿಯನ್ನು ಉದ್ಯಮ ಮುಖಂಡರು ಸ್ವಾಗತಿಸಿದ್ದಾರೆ. ಸಾರ್ವಜನಿಕ ಆರೋಗ್ಯ, ಆರ್ಥಿಕ ಸ್ಥಿರತೆ ಮತ್ತು ರಾಷ್ಟ್ರೀಯ ಭದ್ರತೆಯಲ್ಲಿ ಕೈಗೆಟುಕುವ ಜೆನೆರಿಕ್ ಔಷಧಿಗಳ ಅಗತ್ಯ ಪಾತ್ರವನ್ನು ಇದು ಎತ್ತಿ ತೋರಿಸುತ್ತದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
ಟ್ರಂಪ್ ಸುಂಕಗಳ ಹೊರತಾಗಿಯೂ ಕೃಷಿ ರಫ್ತುಗಳು ಹೆಚ್ಚುವ ಸಾಧ್ಯತೆ
ಭಾರತೀಯ ಸರಕುಗಳ ಮೇಲೆ ಹೊಸದಾಗಿ ಘೋಷಿಸಲಾದ ಶೇ. 26 ಸುಂಕದ ಹೊರತಾಗಿಯೂ, ಕೃಷಿ ರಫ್ತು ತಗ್ಗಲಾರದು ಎನ್ನಲಾಗುತ್ತಿದೆ. ಸ್ಪರ್ಧಾತ್ಮಕ ರಾಷ್ಟ್ರಗಳು ಇದಕ್ಕೂ ಹೆಚ್ಚಿನ ಸುಂಕಗಳನ್ನು ಎದುರಿಸುತ್ತಿರುವುದರಿಂದ ಅಮೆರಿಕಕ್ಕೆ ಭಾರತದ ಕೃಷಿ ರಫ್ತು ಸ್ಥಿರವಾಗಿರುತ್ತದೆ ಅಥವಾ ಇನ್ನೂ ಹೆಚ್ಚಬಹುದು ಎಂದು ನಿರೀಕ್ಷಿಸಲಾಗಿದೆ. ಇತರ ಪ್ರತಿಸ್ಪರ್ಧಿಗಳಿಗೆ ಹೋಲಿಸಿದರೆ ಟ್ರಂಪ್ ಸುಂಕ ಭಾರತದ ಕೃಷಿ ರಫ್ತಿನ ಮೇಲೆ ಅಷ್ಟೇನೂ ಪರಿಣಾಮ ಬೀರಲಾರದು ಎಂದು ಕೃಷಿ ಅರ್ಥಶಾಸ್ತ್ರಜ್ಞ ಅಶೋಕ್ ಗುಲಾಟಿ ಹೇಳಿರುವುದನ್ನು ಪಿಟಿಐ ವರದಿ ಉಲ್ಲೇಖಿಸಿದೆ. ಭಾರತೀಯ ಸರಕುಗಳ ಮೇಲಿನ ಟ್ರಂಪ್ ಅವರ ಶೇ. 26 ಸುಂಕ ಸಮುದ್ರಾಹಾರ ಮತ್ತು ಅಕ್ಕಿಯಂತಹ ಪ್ರಮುಖ ಕೃಷಿ ರಫ್ತಿನ ಮೇಲೆ ಸೀಮಿತ ಪರಿಣಾಮ ಬೀರಬಹುದು ಎನ್ನಲಾಗಿದೆ. ಏಕೆಂದರೆ ಇತರ ರಾಷ್ಟ್ರಗಳ ಮೇಲೆ ವಿಧಿಸಲಾದ ಸುಂಕಗಳು ಗಮನಾರ್ಹವಾಗಿ ಹೆಚ್ಚಿವೆ. ಭಾರತೀಯ ಸಮುದ್ರಾಹಾರ ರಫ್ತುದಾರರು ಯುಎಸ್ ಜೊತೆಗಿನ ತಮ್ಮ ವ್ಯಾಪಾರದಲ್ಲಿ ದೊಡ್ಡ ಸಮಸ್ಯೆಯನ್ನೇನೂ ಎದುರಿಸುವ ಸಾಧ್ಯತೆಯಿಲ್ಲ ಎನ್ನಲಾಗಿದೆ.
ಭಾರತದ ಇಲೆಕ್ಟ್ರಾನಿಕ್ಸ್ ಉದ್ಯಮಕ್ಕೆ ಲಾಭ?
ಭಾರತದ ಮೇಲೆ ಹೊಸದಾಗಿ ಹೇರಲಾದ ಸುಂಕಗಳು ಭಾರತದ ಪ್ರತಿಸ್ಪರ್ಧಿಗಳಿಗಿಂತ ತೀರಾ ಕಡಿಮೆಯಿರುವುದರಿಂದ, ಇಲೆಕ್ಟ್ರಾನಿಕ್ಸ್ ರಫ್ತು ವಲಯದಲ್ಲಿ ಭಾರತ ನೆರೆಯ ಚೀನಾ ಮತ್ತು ವಿಯೆಟ್ನಾಂಗಿಂತ ಉತ್ತಮ ಸ್ಥಾನದಲ್ಲಿದೆ ಎಂದು ಹೇಳಲಾಗುತ್ತಿದೆ. ಇದು ಭಾರತಕ್ಕೆ ಅನುಕೂಲಕರ ಎಂದು ಇಂಡಿಯಾ ಸೆಲ್ಯುಲರ್ ಮತ್ತು ಇಲೆಕ್ಟ್ರಾನಿಕ್ಸ್ ಅಸೋಸಿಯೇಷನ್ (ಐಸಿಇಎ) ಹೇಳಿದೆ. ಚೀನಾ, ವಿಯೆಟ್ನಾಂ, ಥಾಯ್ಲೆಂಡ್ ಮತ್ತು ಇಂಡೋನೇಶ್ಯದಂತಹ ಪ್ರಮುಖ ಇಲೆಕ್ಟ್ರಾನಿಕ್ಸ್ ರಫ್ತು ಸ್ಪರ್ಧಿಗಳಿಗೆ ಹೋಲಿಸಿದರೆ, ಭಾರತಕ್ಕೆ ವಿಧಿಸಲಾಗಿರುವ ಸುಂಕ ಕಡಿಮೆ ಎಂದು ಐಸಿಇಎ ಹೇಳಿದೆ. ಬ್ರೆಝಿಲ್ ಮತ್ತು ಈಜಿಪ್ಟ್‌ನಂತಹ ಕೆಲ ದೇಶಗಳು ಮಾತ್ರವೇ ಪ್ರತಿಸುಂಕ ವಿಷಯದಲ್ಲಿ ಭಾರತಕ್ಕಿಂತಲೂ ಸ್ವಲ್ಪ ಉತ್ತಮ ಸ್ಥಿತಿಯಲ್ಲಿವೆ. ಆದರೆ ಚೀನಾ ಮತ್ತು ವಿಯೆಟ್ನಾಂಗೆ ಹೋಲಿಸಿದರೆ ಭಾರತದ ಸ್ಥಾನ ಪ್ರಬಲವಾಗಿದೆ. ಚೀನಾ ಈಗ ಶೇ. 54 ಸುಂಕಗಳನ್ನು ಎದುರಿಸುತ್ತಿದೆ. ವಿಯೆಟ್ನಾಂ ಮೇಲೆ ಶೇ. 46 ಸುಂಕ ಹೇರಲಾಗಿದೆ. ಹಾಗಾಗಿ ಭಾರತಕ್ಕೆ ರಫ್ತು ವಿಷಯದಲ್ಲಿ ತೀರಾ ಪೈಪೋಟಿ ಇರುವುದಿಲ್ಲ ಎಂದು ಐಸಿಇಎ ಹೇಳಿದೆ.
ಭಾರತದ ಜವಳಿ ವಲಯಕ್ಕೆ ಅನುಕೂಲಕರ ಸನ್ನಿವೇಶ?
ಭಾರತದ ಉಡುಪು ಮತ್ತು ಜವಳಿ ವಲಯಕ್ಕೂ ಈಗಿನ ಸುಂಕ ದರ ಅನುಕೂಲಕರವಾಗಲಿದೆ ಎಂಬ ಮಾತುಗಳಿವೆ. ಯುಎಸ್ ಖರೀದಿದಾರರು ಭಾರತದ ಕಡೆ ಹೆಚ್ಚು ಆಕರ್ಷಿತರಾಗಲು ಇದು ನೆರವಾಗಲಿದೆ ಎನ್ನಲಾಗುತ್ತಿದೆ. ವಿಯೆಟ್ನಾಂ, ಬಾಂಗ್ಲಾದೇಶ, ಕಾಂಬೋಡಿಯಾ, ಪಾಕಿಸ್ತಾನ ಮತ್ತು ಚೀನಾದಂತಹ ಜವಳಿ ರಫ್ತು ಮಾಡುವ ರಾಷ್ಟ್ರಗಳು ಹೆಚ್ಚಿನ ಸುಂಕದ ಭಾರಕ್ಕೆ ನಲುಗಿರುವುದರಿಂದ, ಇದು ಭಾರತಕ್ಕೆ ಅನುಕೂಲವಾಗಬಹುದು. ಭಾರತದ ಜವಳಿ ಉತ್ಪನ್ನಗಳನ್ನು ಖರೀದಿಸುವ ಅತಿ ದೊಡ್ಡ ಖರೀದಿದಾರ ದೇಶ ಅಮೆರಿಕ. 2023-24ರಲ್ಲಿ ಭಾರತದ ಜವಳಿ ರಫ್ತು ಸರಿಸುಮಾರು 36 ಶತಕೋಟಿ ಡಾಲರ್ ಇತ್ತು. ಅದರಲ್ಲಿ ಅಮೆರಿಕವೊಂದಕ್ಕೆ ರಫ್ತಾದದ್ದೇ ಸುಮಾರು ಶೇ. 28 ಅಥವಾ 10 ಶತಕೋಟಿ ಡಾಲರ್ ಆಗಿತ್ತು. ಭಾರತದ ಜವಳಿ ರಫ್ತಿನಲ್ಲಿ ಅಮೆರಿಕದ ಪಾಲು ಸತತವಾಗಿ ಏರುತ್ತಿದೆ. 2016-17 ಮತ್ತು 2017-18ರಲ್ಲಿ ಈ ಪ್ರಮಾಣ ಶೇ. 21 ಇತ್ತು. 2019-20ರಲ್ಲಿ ಶೇ. 25ಕ್ಕೆ ಏರಿತು. 2022-23ರಲ್ಲಿ ಶೇ. 29ಕ್ಕೆ ಏರಿದೆ.
ಟ್ರಂಪ್ ಸುಂಕ ಭಾರತೀಯ ಉಕ್ಕಿಗೂ ಸಮಸ್ಯೆಯಾಗಲಾರದೆ?
ಉಕ್ಕು ಮತ್ತು ಅಲ್ಯುಮಿನಿಯಂ ವಸ್ತುಗಳಿಗೆ ಹೆಚ್ಚುವರಿ ಪ್ರತಿಸುಂಕಗಳಿಂದ ಟ್ರಂಪ್ ವಿನಾಯಿತಿ ನೀಡಿದ್ದಾರೆ. ಹೀಗಾಗಿ ಭಾರತದ ದೇಶೀಯ ಉಕ್ಕು ಉದ್ಯಮಕ್ಕೆ ಇದು ಸ್ವಲ್ಪ ಮಟ್ಟಿಗೆ ಅನುಕೂಲಕರ. ಕಳೆದ ತಿಂಗಳು ಉಕ್ಕು ಮತ್ತು ಅಲ್ಯುಮಿನಿಯಂ ರಫ್ತಿನ ಮೇಲೆ ಅಮೆರಿಕ ಶೇ. 25 ಸುಂಕ ವಿಧಿಸಿತ್ತು. ಈಗ, ಇವೆರಡರ ಮೇಲೆ ಹೆಚ್ಚುವರಿ ಸುಂಕ ಹೇರಲಾಗುವುದಿಲ್ಲ ಎಂದು ಸ್ಪಷ್ಟಪಡಿಸಿದೆ. ಇದು ಭಾರತೀಯ ಉಕ್ಕು ಮತ್ತು ಅಲ್ಯುಮಿನಿಯಂ ರಫ್ತು ವಿಷಯದಲ್ಲಿ ಸಮಾಧಾನಕರವೇ ಆದರೂ, ಜಾಗತಿಕ ವ್ಯಾಪಾರ ಸವಾಲಿನದ್ದಾಗಿಯೇ ಉಳಿದಿದೆ ಎಂದು ಉದ್ಯಮಿಗಳು ಎಚ್ಚರಿಸಿದ್ದಾರೆ. ಉಕ್ಕು ಉತ್ಪಾದಿಸುವ ಏಶ್ಯದ ಕೆಲ ದೇಶಗಳಿಗೆ ಯುಎಸ್ ಮತ್ತು ಇಯು ಮಾರುಕಟ್ಟೆಗಳಿಗೆ ಪ್ರವೇಶ ಹೆಚ್ಚು ನಿರ್ಬಂಧಿತವಾಗುತ್ತಿದೆ. ಹೀಗಾಗಿ, ಭಾರತದಲ್ಲಿ ಡಂಪಿಂಗ್ ಹೆಚ್ಚಾಗುವ ಅಪಾಯವಿದೆ ಎಂದು ಅವರು ಹೇಳುತ್ತಿದ್ದಾರೆ. ದೇಶೀಯ ಮಾರುಕಟ್ಟೆಗೆ ಹೆಚ್ಚುವರಿ ಉಕ್ಕು ಬರುವುದನ್ನು ತಡೆಯಲು ಕ್ರಮ ಕೈಗೊಳ್ಳಬೇಕೆಂಬುದು ಕೈಗಾರಿಕಾ ಮುಖಂಡರ ಒತ್ತಾಯ. ಸುರಕ್ಷತಾ ಕ್ರಮಗಳಿಲ್ಲದೆ, ಭಾರತೀಯ ಉತ್ಪಾದಕರು ಕಡಿಮೆ ವೆಚ್ಚದ ಆಮದುಗಳಿಂದ ಬೆಲೆ ಒತ್ತಡ ಎದುರಿಸಬೇಕಾಗುತ್ತದೆ ಎಂಬುದು ಅವರು ನೀಡುತ್ತಿರುವ ಎಚ್ಚರಿಕೆ.
ಭಾರತೀಯ ಷೇರು ಮಾರುಕಟ್ಟೆಯ ಮೇಲೆ ಟ್ರಂಪ್ ಸುಂಕದ ಪರಿಣಾಮವೇನು?
ಟ್ರಂಪ್ ಸುಂಕಗಳು ಭಾರತೀಯ ಮಾರುಕಟ್ಟೆಯಲ್ಲಿ ತಕ್ಷಣದ ನಕಾರಾತ್ಮಕ ಪ್ರತಿಕ್ರಿಯೆಗೆ ಕಾರಣವಾಗಲಿದೆ ಎಂಬುದು ಸದ್ಯದ ಕುಸಿತದಲ್ಲಿ ಕಾಣಿಸುತ್ತಿದೆ. ಐಟಿ ಮತ್ತು ಆಟೋಮೊಬೈಲ್‌ಗಳಂತಹ ವಲಯಗಳು ಮಾರಾಟದ ಒತ್ತಡ ಎದುರಿಸಬಹುದು. ಆದರೆ ದೀರ್ಘಾವಧಿಯಲ್ಲಿ ಮಾರುಕಟ್ಟೆಯ ಚೇತರಿಕೆ ಕಾಣಲಿದೆ ಎನ್ನಲಾಗುತ್ತಿದೆ.
ಅಮೆರಿಕದ ಉತ್ಪನ್ನಗಳ ಮೇಲೆ ಇತರ ದೇಶಗಳು ವಿಧಿಸುವ ಅರ್ಧದಷ್ಟು ದರದಲ್ಲಿ ಟ್ರಂಪ್ ಪ್ರತಿಸುಂಕಗಳನ್ನು ಘೋಷಿಸಿದ್ದಾರೆ ಎಂದು ಕೆಲ ತಜ್ಞರು ಹೇಳುತ್ತಿದ್ದಾರೆ. ಅಂದರೆ, ಇದು ಪ್ರತೀಕಾರಕ್ಕಿಂತ ಹೆಚ್ಚಾಗಿ ಮಾತುಕತೆಗೆ ಅವಕಾಶ ಮಾಡಿಕೊಟ್ಟಿರುವ ಕ್ರಮ ಎಂಬುದು ಅವರ ಅಭಿಪ್ರಾಯ. ಚೀನಾ, ತೈವಾನ್, ಶ್ರೀಲಂಕಾ ಮತ್ತು ಬಾಂಗ್ಲಾದೇಶದಂತಹ ಇತರ ದೇಶಗಳ ಮೇಲಿನ ಸುಂಕಗಳಿಗೆ ಹೋಲಿಸಿದರೆ ಭಾರತದ ಮೇಲಿನ ಶೇ. 26ರ ಸುಂಕ ಹೆಚ್ಚಲ್ಲ.
ವಿಶ್ಲೇಷಣೆಗಳ ಪ್ರಕಾರ,
ಅಮೆರಿಕದ ಪ್ರತಿಸುಂಕ ಭಾರತದ ಮೇಲೆ ಗಮನಾರ್ಹವಾಗಿ ಹೆಚ್ಚಿದ್ದರೂ, ಅದು ಸದ್ಯಕ್ಕೆ ಕಾಣಿಸುತ್ತಿರುವಂತೆ ಅಷ್ಟು ಕೆಟ್ಟ ಸುದ್ದಿಯಲ್ಲ.
1. ಸೆಮಿ ಕಂಡಕ್ಟರ್‌ಗಳು, ಪ್ರಮುಖ ಖನಿಜಗಳು, ಔಷಧಿ ವಲಯವನ್ನು ಪ್ರತಿಸುಂಕಗಳಿಂದ ಹೊರಗಿಡಲಾಗಿದೆ.
2. ಇದು ಅಲ್ಪಾವಧಿಯ ವ್ಯವಸ್ಥೆಯೇ ಅಥವಾ ಮಧ್ಯಮ ಅವಧಿಯ ವ್ಯವಸ್ಥೆಯೇ ಎಂಬುದರ ಕುರಿತು ಇನ್ನೂ ಸ್ಪಷ್ಟತೆ ಇಲ್ಲದಿದ್ದರೂ, ಅದನ್ನು ಸಕಾರಾತ್ಮಕವೆಂದು ಭಾವಿಸಬಹುದು.
3. ಯುಎಸ್‌ಗೆ ಭಾರತೀಯ ಔಷಧಿ ರಫ್ತಿನ ಮೇಲಿನ ಪ್ರತಿಸುಂಕ ವಿನಾಯಿತಿ ಸಕಾರಾತ್ಮಕವಾಗಿದೆ.
4. ಚೀನಾ, ವಿಯೆಟ್ನಾಂ, ಬಾಂಗ್ಲಾದೇಶ ಮತ್ತು ಇಂಡೋನೇಶ್ಯ ಮೇಲಿನ ಹೆಚ್ಚಿನ ಪ್ರತಿಸುಂಕಗಳು ಭಾರತಕ್ಕೆ ಸ್ಪರ್ಧಾತ್ಮಕ ಅವಕಾಶ ಹೆಚ್ಚಿಸಬಹುದು. ಏಶ್ಯದ ಸಮಾನಸ್ಥ ದೇಶಗಳಿಗೆ ಹೋಲಿಸಿದರೆ ಭಾರತೀಯ ರಫ್ತುದಾರರಿಗೆ ಲಾಭವಾಗಬಹುದು.
5. ಭಾರತದ ಒಟ್ಟು ರಫ್ತಿನ ಶೇ. 18ರಷ್ಟು ಯುಎಸ್‌ಗೆ ಎಂದುಕೊಂಡಿದ್ದರೂ, ಪೂರೈಕೆ ಸರಪಳಿ ಬದಲಾವಣೆಗಳು ಹೊಸ ರಫ್ತು ಅವಕಾಶಗಳನ್ನು ತೆರೆಯುವ ನಿರೀಕ್ಷೆಯಿದೆ.
6. ಅಲ್ಪಾವಧಿಯ ರಫ್ತು ಏರಿಳಿತಗಳು ಸಂಭವಿಸಬಹುದಾದರೂ, ಮಧ್ಯದಿಂದ ದೀರ್ಘಾವಧಿಗೆ ಭಾರತದ ಪಾಲಿಗೆ ಸಂಭವನೀಯ ರಫ್ತು ಏರಿಕೆ ಅವಕಾಶಗಳಿವೆ.
7. ಈ ಅವಕಾಶವನ್ನು ಸಂಪೂರ್ಣವಾಗಿ ಬಳಸಿಕೊಳ್ಳಲು ಭಾರತ ಸರಕಾರ ಈ ವಲಯಗಳಲ್ಲಿನ ಉತ್ಪಾದನೆ ಸಂಬಂಧಿತ ಪ್ರೋತ್ಸಾಹಕ (ಪಿಎಲ್‌ಐ) ಯೋಜನೆಗಳನ್ನು ವಿಸ್ತರಿಸಬೇಕು ಮತ್ತು ಅವುಗಳ ಅವಧಿಯನ್ನು ಎರಡು ವರ್ಷಗಳವರೆಗೆ ವಿಸ್ತರಿಸಬೇಕು. ಈ ಮೂಲಕ ದೇಶೀಯ ಕೈಗಾರಿಕೆಗಳ ಹೂಡಿಕೆ ಮತ್ತು ಜಾಗತಿಕ ಸ್ಪರ್ಧಾತ್ಮಕತೆಯನ್ನು ಬಲಪಡಿಸಬೇಕು.
8. ಇತರ ದೇಶಗಳಿಂದ ಪ್ರತೀಕಾರದ ಸಾಧ್ಯತೆ ಜಾಗತಿಕ ಬೆಳವಣಿಗೆಯ ಮೇಲೆ ನಕಾರಾತ್ಮಕ ಪರಿಣಾಮ ಬೀರುವ ಸಾಧ್ಯತೆಯಿದೆ. ಒಟ್ಟಾರೆ ಜಾಗತಿಕ ಬೆಳವಣಿಗೆಯ ಕುಸಿತ ಮತ್ತು ಹೆಚ್ಚಿದ ಜಾಗತಿಕ ಆರ್ಥಿಕ ಚಂಚಲತೆಯ ಪರಿಣಾಮ ಭಾರತದ ಮೇಲೆ ಆಗಲೂ ಬಹುದು.
9. ಸದ್ಯಕ್ಕೆ ಕಾಣುವಂತೆ, ಭಾರತಕ್ಕೆ ಕೆಲವು ಕಡೆ ಗೆಲ್ಲುವ ಅವಕಾಶಗಳಿವೆ ಮತ್ತು ಕೆಲವು ಕಡೆ ಕಳೆದುಕೊಳ್ಳುವ ಸಾಧ್ಯತೆಯಿದೆ.
ಹೊಸ ಸುಂಕಗಳು ಜಾರಿಯಾಗಿರುವಾಗ, ಯುಎಸ್ ಜೊತೆಗಿನ ವ್ಯಾಪಾರ ಸಂಬಂಧದಲ್ಲಿ ಭಾರತಕ್ಕೆ ಸವಾಲುಗಳೂ ಇವೆ ಮತ್ತು ಅವಕಾಶಗಳೂ ಇವೆ. ಜಾಗತಿಕ ವ್ಯಾಪಾರ ವಲಯದಲ್ಲಿ ಉದ್ವಿಗ್ನತೆ ಹೆಚ್ಚಾಗುತ್ತಿರುವಾಗ, ಭಾರತ ಈ ಬದಲಾಗುತ್ತಿರುವ ಸನ್ನಿವೇಶವನ್ನು ಹೇಗೆ ನಿಭಾಯಿಸುತ್ತದೆ ಎಂಬುದನ್ನು ಕಾದು ನೋಡಬೇಕಾಗಿದೆ.