ದಿಲ್ಲಿಯಲ್ಲಿ ಸೋತ ಆಪ್‌ಗೆ ಪಂಜಾಬ್‌ನಲ್ಲೂ ಬಿಕ್ಕಟ್ಟು ಕಾದಿದೆಯೇ?

ಎಎಪಿ ದಿಲ್ಲಿಯನ್ನು ಕಳೆದುಕೊಂಡಿದೆ. ನಾಲ್ಕನೇ ಬಾರಿ ದಿಲ್ಲಿ ವಿಧಾನಸಭಾ ಚುನಾವಣೆ ಗೆಲ್ಲುವ ಕೇಜ್ರಿವಾಲ್ ಕನಸು ನುಚ್ಚು ನೂರಾಗಿದೆ. ಸೋಲಿನ ನಂತರ ಈಗ ಏನೇ ಕಥೆ ಹೇಳಿದರೂ, ಎಎಪಿಯ ಕಥೆ ಅಲ್ಲಿ ಸದ್ಯಕ್ಕೆ ಮುಗಿದುಹೋಗಿದೆ. ವಿಪಕ್ಷ ಸ್ಥಾನದಲ್ಲಿ ಕೂರಬೇಕಾಗಿದೆ. ಈ ಸೋಲಿಗೂ ಮೊದಲೇ ಆಂತರಿಕ ಭಿನ್ನಮತ ಎದುರಿಸಿದ್ದ ಎಎಪಿಗೆ ಮುಂದಿನ ದಿನಗಳು ಸವಾಲಿನದ್ದಾಗಿವೆ.;

Update: 2025-02-11 12:50 IST
Editor : Thouheed | Byline : ಆರ್.ಜೀವಿ
ದಿಲ್ಲಿಯಲ್ಲಿ ಸೋತ ಆಪ್‌ಗೆ ಪಂಜಾಬ್‌ನಲ್ಲೂ ಬಿಕ್ಕಟ್ಟು ಕಾದಿದೆಯೇ?
  • whatsapp icon

ದಿಲ್ಲಿಯಲ್ಲಿ ಎಎಪಿ ಸೋತಿದೆ. ಯಾವ ಪಕ್ಷ ಭ್ರಷ್ಟಾಚಾರ ವಿರೋಧಿ ಚಳವಳಿಯಿಂದ ಹೊರಹೊಮ್ಮಿ, 2013ರಲ್ಲಿ ಕಾಂಗ್ರೆಸ್ ಅನ್ನು ಅಧಿಕಾರದಿಂದ ಕಿತ್ತೆಸೆದಿತ್ತೊ ಅದೇ ಪಕ್ಷ ಮತ್ತದೇ ಭ್ರಷ್ಟಾಚಾರ ಆರೋಪಗಳಿಗೆ ತುತ್ತಾಗುವುದರೊಂದಿಗೆ ಈಗ 2025ರಲ್ಲಿ ಬಿಜೆಪಿಯೆದುರು ಮಣ್ಣು ಮುಕ್ಕಿದೆ. ಬಿಜೆಪಿ 48 ಕ್ಷೇತ್ರಗಳಲ್ಲಿ ಗೆಲುವು, ಎಎಪಿ 22 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿದ್ದರೆ ಕಾಂಗ್ರೆಸ್ ಶೂನ್ಯ ಸಂಪಾದನೆಯೊಂದಿಗೆ ದಿಲ್ಲಿಯಲ್ಲಿ ಸತತ ನಾಲ್ಕನೇ ಹೀನಾಯ ಸೋಲನ್ನು ಕಂಡಿದೆ.

ಸೋಲಿಗೆ ಪ್ರತಿಕ್ರಿಯಿಸಿರುವ ಕೇಜ್ರಿವಾಲ್ ‘‘ಜನರ ನಿರ್ಧಾರವನ್ನು ಗೌರವದಿಂದ ಸ್ವೀಕರಿಸುತ್ತೇನೆ ’’ ಎಂದಿದ್ದಾರೆ.

ಎಎಪಿ ಸೋಲಿನ ಬಗ್ಗೆ ಮುಖ್ಯವಾಗಿ ಎರಡು ಪ್ರತಿಕ್ರಿಯೆಗಳನ್ನು ಗಮನಿಸಬೇಕು. ಒಂದು, ಕಾಂಗ್ರೆಸ್ ನೀಡಿರುವ ಪ್ರತಿಕ್ರಿಯೆ; ಇನ್ನೊಂದು, ಅಣ್ಣಾ ಹಝಾರೆ ಹೇಳಿಕೆ.

‘‘ದಿಲ್ಲಿ ಫಲಿತಾಂಶ ಮೋದಿ ನೀತಿಯ ಸಮರ್ಥನೆಯಲ್ಲ. ಬದಲಿಗೆ ಅರವಿಂದ ಕೇಜ್ರಿವಾಲ್ ಮತ್ತು ಎಎಪಿ ವಿರುದ್ಧದ ಮತದಾರರ ತೀರ್ಪು’’ ಎಂದು ಕಾಂಗ್ರೆಸ್ ಸಂವಹನ ವಿಭಾಗದ ಮುಖ್ಯಸ್ಥ ಜೈರಾಮ್ ರಮೇಶ್ ಹೇಳಿದ್ದಾರೆ. ‘‘ಈ ಜನಾದೇಶ ಅರವಿಂದ ಕೇಜ್ರಿವಾಲ್ ಅವರ ಮೋಸ, ವಂಚನೆ, ಉತ್ಪ್ರೇಕ್ಷಿತ ಸಾಧನೆಗಳ ಕುರಿತ ತಿರಸ್ಕಾರವಾಗಿದೆ’’ಎಂದು ಅವರು ಹೇಳಿದ್ದಾರೆ.

ಕಾಂಗ್ರೆಸ್ ದಿಲ್ಲಿಯಲ್ಲಿ ಖಾತೆ ತೆರೆಯದೆ ಇರಬಹುದು. ಆದರೆ ಬಿಜೆಪಿಯ ಗೆಲುವಿನಿಂದ ಕಾಂಗ್ರೆಸ್‌ಗೆ ಖುಷಿಯಾಗಿರುವುದು ಇದೇ ಮೊದಲ ಬಾರಿಯಾಗಿರಬಹುದು. ಯಾವುದೇ ಸಿದ್ಧಾಂತವಿಲ್ಲದೆ ಕಾಂಗ್ರೆಸ್‌ನ ಮತದಾರರನ್ನು ಸೆಳೆಯುವಲ್ಲಿ ಆಮ್ ಆದ್ಮಿ ಪಕ್ಷ ಸಫಲತೆ ಕಂಡಿತ್ತು. ದಿಲ್ಲಿಯಲ್ಲಿ ಮಾತ್ರವಲ್ಲದೆ ಪಂಜಾಬ್‌ನಲ್ಲೂ ಕಾಂಗ್ರೆಸನ್ನು ಸೋಲಿಸುವುದರಲ್ಲಿ ಆಮ್ ಆದ್ಮಿ ಪಕ್ಷಕ್ಕೆ ಸಾಧ್ಯವಾಗಿತ್ತು. ಅಷ್ಟು ಮಾತ್ರವಲ್ಲ ಗುಜರಾತ್ ಸಹಿತ ಬೇರೆ ಕಡೆಗಳಿಗೂ ಆಮ್ ಆದ್ಮಿ ಪಕ್ಷ ವಿಸ್ತರಿಸುವ ಸಾಧ್ಯತೆ ಇತ್ತು. ಆದರೆ ಆಮ್ ಆದ್ಮಿ ಪಕ್ಷದ ಈ ದಿಲ್ಲಿ ಸೋಲಿನಿಂದಾಗಿ ಆ ಸಾಧ್ಯತೆಗೆ ದೊಡ್ಡ ತಡೆ ಉಂಟಾಗಿದೆ.

ಆಮ್ ಆದ್ಮಿ ಪಕ್ಷ ಶೇ. 40ಕ್ಕಿಂತಲೂ ಹೆಚ್ಚು ಮತ ಪಡೆದಿರಬಹುದು, ಆದರೆ ಅಧಿಕಾರದಲ್ಲಿರದೆ ಯಾವುದೇ ಸಿದ್ಧಾಂತವಿಲ್ಲದೇ ಬರುವ ಐದು ವರ್ಷಗಳ ವರೆಗೆ ಈ ಮತದಾರರನ್ನು ತಮ್ಮ ಜೊತೆ ಇಟ್ಟುಕೊಳ್ಳುವುದು ಕಷ್ಟ. ಹೀಗಿರುವಾಗ ಈ ಮತದಾರರನ್ನು ಮತ್ತೆ ತಮ್ಮ ಮತದಾರರಾಗಿಸುವ ಸುವರ್ಣ ಅವಕಾಶ ಕಾಂಗ್ರೆಸ್ ಬಳಿ ಇದೆ. ದೇಶದ ರಾಜಧಾನಿಯಲ್ಲಿ ಮಾತ್ರವಲ್ಲದೆ ಇತರ ಕಡೆಗಳಲ್ಲೂ ಆಮ್ ಆದ್ಮಿ ಪಕ್ಷ ಮತ್ತು ಇದೇ ತರದ ಇತರ ಪಕ್ಷಗಳ ಕಡೆಗೆ ತಿರುಗಿರುವಂತಹ ತಮ್ಮ ಪರಂಪರಾಗತ ಮತದಾರರನ್ನು ಮತ್ತೆ ಗೆದ್ದುಕೊಳ್ಳುವಂತಹ ಅವಕಾಶ ಕಾಂಗ್ರೆಸ್‌ಗೆ ಮತ್ತೆ ಸಿಕ್ಕಿದೆ.

ಇನ್ನು ಅಣ್ಣಾ ಹಝಾರೆ, ‘‘ಮದ್ಯ ನೀತಿ ಮತ್ತು ಹಣದ ಬಗ್ಗೆ ಎಎಪಿಗಿದ್ದ ಗಮನವೇ ಪಕ್ಷದ ಹಿನ್ನಡೆಗೆ ಕಾರಣ’’ ಎಂದಿದ್ದಾರೆ. ‘‘ಕೇಜ್ರಿವಾಲ್ ಒಂದೆಡೆ ಒಳ್ಳೆಯ ಗುಣದ ಬಗ್ಗೆ ಮಾತನಾಡುತ್ತಾ, ಮತ್ತೊಂದು ಕಡೆ ಮದ್ಯವನ್ನು ಉತ್ತೇಜಿಸಿದರು’’ ಎಂದು ಟೀಕಿಸಿದ್ದಾರೆ. ‘‘ಜನರಿಗೆ ನಿಸ್ವಾರ್ಥವಾಗಿ ಸೇವೆ ಸಲ್ಲಿಸಬೇಕು ಎಂಬುದನ್ನು ಅರ್ಥ ಮಾಡಿಕೊಳ್ಳುವಲ್ಲಿ ಎಎಪಿ ಸೋಲು ಕಂಡಿದೆ. ಅದು ತಪ್ಪು ಮಾರ್ಗದಲ್ಲಿ ಸಾಗಿತ್ತು. ಹಣವನ್ನು ಅವರು ಪ್ರಮುಖವಾಗಿ ಪರಿಗಣಿಸಿದ ಹಿನ್ನೆಲೆ ಅವರಿಗೆ ಈ ನಿರಾಸೆ ಆಗಿದೆ’’ ಎಂದು ಹಝಾರೆ ಹೇಳಿದ್ದಾರೆ.

ಕೇಜ್ರಿವಾಲ್, ಮನೀಶ್ ಸಿಸೋಡಿಯ, ಸೌರಭ್ ಭಾರದ್ವಾಜ್, ಸತ್ಯೇಂದ್ರ ಜೈನ್ ಸೋಲು ಕಂಡ ಎಎಪಿಯ ಪ್ರಮುಖರು. ದಿಲ್ಲಿ ಸಿಎಂ ಆತಿಶಿ, ಗೋಪಾಲ್ ರಾಯ್ ಎಎಪಿಯಿಂದ ಗೆದ್ದವರಲ್ಲಿ ಪ್ರಮುಖರು.

ಎಎಪಿ ಸೋಲಿಗೆ ಕಾರಣಗಳೇನು ಎನ್ನುವುದನ್ನೊಮ್ಮೆ ಗಮನಿಸಬೇಕು.

1. ಆಡಳಿತ ವಿರೋಧಿ ಅಲೆ

ಸಹಜವಾಗಿಯೇ ಒಂದು ಪಕ್ಷ 12 ವರ್ಷಗಳ ಕಾಲ ನಿರಂತರವಾಗಿ ಆಡಳಿತದಲ್ಲಿದ್ದರೆ ಆಡಳಿತ ವಿರೋಧಿ ಅಲೆ ಏಳುತ್ತದೆ. ಜನರು ಹೊಸತನ ಬಯಸುವುದು ಇದಕ್ಕೆ ಕಾರಣ. ಅದರಲ್ಲೂ ಎಎಪಿ ಭ್ರಷ್ಟಾಚಾರ ಆರೋಪಗಳಿಗೆ ತುತ್ತಾಯಿತು. ಮುಖ್ಯಮಂತ್ರಿಯಾಗಿದ್ದ ಕೇಜ್ರಿವಾಲ್ ಸೇರಿದಂತೆ ಅದರ ಪ್ರಮುಖ ನಾಯಕರೆಲ್ಲ ಜೈಲಿಗೆ ಹೋಗಿ ಬಂದರು. ಎಎಪಿ ಹಲವು ಭರವಸೆಗಳನ್ನು ಈಡೇರಿಸದೇ ಇದ್ದ ಸನ್ನಿವೇಶವನ್ನು ಬಿಜೆಪಿ ಸರಿಯಾಗಿಯೇ ಬಳಸಿಕೊಂಡು, ಆಡಳಿತ ವಿರೋಧಿ ಅಲೆ ಇನ್ನಷ್ಟಾಗುವಂತೆ ಮಾಡುವಲ್ಲಿ ಯಶಸ್ವಿಯಾಯಿತು. ವಾಯು ಮತ್ತು ಜಲ ಮಾಲಿನ್ಯ ಮತ್ತು ಮೂಲಸೌಕರ್ಯ ಅಭಿವೃದ್ಧಿಯಂತಹ ವಿಷಯಗಳ ಎಎಪಿ ನಿಷ್ಕ್ರಿಯತೆ ಕುರಿತ ಜನರ ಅಸಮಾಧಾನವೂ ಬಿಜೆಪಿಗೆ ಲಾಭದಾಯಕವಾಯಿತು.

2. ಭ್ರಷ್ಟಾಚಾರ ಆರೋಪಗಳು

ಭ್ರಷ್ಟಾಚಾರ ವಿರೋಧಿ ಹೋರಾಟದ ಮೂಲಕ ಅಧಿಕಾರಕ್ಕೆ ಬಂದಿದ್ದ ಕೇಜ್ರಿವಾಲ್ ಸ್ವತಃ ಭ್ರಷ್ಟಾಚಾರ ಆರೋಪಗಳಿಗೆ ತುತ್ತಾದರು. ಕೇಜ್ರಿವಾಲ್, ಮನೀಶ್ ಸಿಸೋಡಿಯ, ಸತ್ಯೇಂದ್ರ ಜೈನ್ ಮೇಲೆ ಭ್ರಷ್ಟಾಚಾರ ಆರೋಪಗಳು ಬಂದವು. ಕೇಜ್ರಿವಾಲ್ ಬಂಧನವಂತೂ ಪಕ್ಷಕ್ಕೆ ದೊಡ್ಡ ಹೊಡೆತ ಕೊಟ್ಟಿತು. ಕೇಜ್ರಿವಾಲ್ ವಿಶ್ವಾಸಾರ್ಹತೆ ಕಡಿಮೆಯಾಯಿತು.

3. ಮಧ್ಯಮ ವರ್ಗವನ್ನು ಸೆಳೆಯುವಲ್ಲಿ ಗೆದ್ದ ಬಿಜೆಪಿ

ಈ ಸಲದ ಬಜೆಟ್ ಅನ್ನು ಮಧ್ಯಮ ವರ್ಗದವರ ಬಜೆಟ್ ಎಂದು ಬಿಂಬಿಸಿದ ಬಿಜೆಪಿ ಮತದಾರರನ್ನು ತನ್ನತ್ತ ಸೆಳೆದದ್ದು ಎಎಪಿಗೆ ದೊಡ್ಡ ಏಟಾಯಿತು. ಮಧ್ಯಮ ವರ್ಗದವರಿಗೆ ನೀಡಿದ್ದ ಬಜೆಟ್ ಪರಿಹಾರ, 12 ಲಕ್ಷ ರೂ.ಗಳವರೆಗಿನ ಆದಾಯವನ್ನು ತೆರಿಗೆ ಮುಕ್ತಗೊಳಿಸಿರುವುದು ಇವೆಲ್ಲವೂ ಬಿಜೆಪಿಗೆ ಲಾಭ ತಂದಿತು. ದಿಲ್ಲಿ ಚುನಾವಣೆಗೆ ಸ್ವಲ್ಪ ಮೊದಲು 8ನೇ ವೇತನ ಆಯೋಗದ ಘೋಷಣೆ ಕೂಡ, ಬಿಜೆಪಿಗೆ ಮತ್ತೊಂದು ಸಕಾರಾತ್ಮಕ ಅಂಶವಾಯಿತು.

4. ಮತಗಳನ್ನು ಒಡೆದ ಕಾಂಗ್ರೆಸ್

ಒಂದು ರೀತಿಯಲ್ಲಿ ಎಎಪಿ ಸೋಲಿಗೆ ಕಾಂಗ್ರೆಸ್ ಕೂಡ ಕಾರಣ. ‘ಇಂಡಿಯಾ’ ಮೈತ್ರಿಕೂಟ ಲೋಕಸಭೆ ಚುನಾವಣೆಯಲ್ಲಿ ಒಟ್ಟಾಗಿ ಸ್ಪರ್ಧಿಸುವುದು, ವಿಧಾನಸಭೆ ಚುನಾವಣೆಯಲ್ಲಿ ಪ್ರತ್ಯೇಕವಾಗಿ ಸ್ಪರ್ಧಿಸುವುದು ಎಂಬ ನಿಲುವೇ ವಿಚಿತ್ರವಾಗಿದೆ. ಕಾಂಗ್ರೆಸ್ ಮತಗಳನ್ನು ಒಡೆದದ್ದರಿಂದ ಎಎಪಿಗೆ ಏಟು ಬಿದ್ದಿದೆ.

5. ಹೊಡೆತ ನೀಡಿದ ಆಂತರಿಕ ಕಲಹ

ಭ್ರಷ್ಟಾಚಾರ ಆರೋಪಗಳಿಂದ ನಲುಗಿರುವಾಗಲೇ ಪಕ್ಷದಲ್ಲಿ ಆಂತರಿಕ ಕಲಹವೆದ್ದದ್ದು ಕೂಡ ಎಎಪಿ ಸೋಲಿಗೆ ಕಾರಣವಾಯಿತು. ಕೈಲಾಶ್ ಗೆಹ್ಲೋಟ್, ರಾಜ್ ಕುಮಾರ್ ಆನಂದ್ ಮುಂತಾದ ಪ್ರಮುಖ ನಾಯಕರ ರಾಜೀನಾಮೆ ಪಕ್ಷಕ್ಕೆ ಹೊಡೆತ ನೀಡಿತು.

6. ಭರವಸೆಗಳ ಕಡೆಗಣನೆ

ತಾನು ನೀಡಿದ್ದ ಕೆಲ ಭರವಸೆಗಳನ್ನು ಎಎಪಿ ಈಡೇರಿಸಲಿಲ್ಲ ಎಂಬ ಆರೋಪಗಳಿವೆ. ಮುಖ್ಯವಾಗಿ, ಯಮುನಾ ನದಿಯನ್ನು ಸ್ವಚ್ಛಗೊಳಿಸುವುದು, ನೀರು ಪೂರೈಸುವುದು ಮುಂತಾದ ಭರವಸೆಗಳು ಹಾಗೆಯೇ ಉಳಿದವು. ಎಎಪಿ ವಿರುದ್ಧ ಜನರ ಆಕ್ರೋಶಕ್ಕೆ ದಿಲ್ಲಿಯ ರಸ್ತೆಗಳು ಮತ್ತು ಒಳಚರಂಡಿಗಳ ಕಳಪೆ ಸ್ಥಿತಿ ಕೂಡ ಕಾರಣವಾಯಿತು. ತುಂಬಿ ಹರಿಯುವ ಚರಂಡಿಗಳು, ಗುಂಡಿ ಬಿದ್ದ ರಸ್ತೆಗಳು ಮತ್ತು ಅನಿಯಮಿತ ಕಸ ಸಂಗ್ರಹಣೆ ದಿಲ್ಲಿಯ ಮತದಾರರನ್ನು ಕೆರಳಿಸಿತ್ತು. ಕಳೆದ ಎರಡು ವರ್ಷಗಳಿಂದ ಇವೆಲ್ಲವೂ ದಿಲ್ಲಿಯ ದೊಡ್ಡ ಸಮಸ್ಯೆಗಳಾಗಿದ್ದವು.

7. ಬಿಜೆಪಿಯ ವ್ಯವಸ್ಥಿತ ಪ್ರಚಾರ

ಬಿಜೆಪಿಯ ಪ್ರಚಾರ ಒಂದು ಸಂದೇಶದ ಮೇಲೆ ಸಾಗಿತ್ತು. ಅದೆಂದರೆ, ಎಎಪಿ ಯೋಜನೆಗಳ ಮುಂದುವರಿಕೆ ಮತ್ತು ಎಎಪಿ ಭ್ರಷ್ಟಾಚಾರದ ವಿರುದ್ಧ ಕಠಿಣ ಕ್ರಮದ ಭರವಸೆ. ಎಎಪಿಯ ಯಾವುದೇ ಯೋಜನೆಗಳನ್ನು ನಿಲ್ಲಿಸುವುದಿಲ್ಲ ಎಂದು ಬಿಜೆಪಿ ಘೋಷಿಸಿದ್ದು ಡಬಲ್ ಲಾಭ ತಂದಿತು. ಅಧಿಕಾರಕ್ಕೆ ಬಂದರೆ ಎಎಪಿ ಸರಕಾರದ ಯಾವುದೇ ಯೋಜನೆಗಳನ್ನು ನಿಲ್ಲಿಸುವುದಿಲ್ಲ ಎಂದು ಬಿಜೆಪಿ ಹೇಳಿದ್ದು ಮಹತ್ವದ ತಿರುವಾಗಿತ್ತು. ಬಿಜೆಪಿಗೆ ಮತ ಹಾಕಿದರೆ ಬಡವರು ಪ್ರಯೋಜನ ಕಳೆದುಕೊಳ್ಳುತ್ತಾರೆ ಎಂಬ ಎಎಪಿ ಹೇಳಿಕೆಯನ್ನು ಜನರು ಗಂಭೀರವಾಗಿ ತೆಗೆದುಕೊಳ್ಳದೆ ಇರಲು ಬಿಜೆಪಿಯ ಈ ಭರವಸೆ ಕಾರಣವಾಯಿತು.

ಈಗಿರುವ ದೊಡ್ಡ ಪ್ರಶ್ನೆಯೆಂದರೆ ಎಎಪಿಯ ಭವಿಷ್ಯವೇನು ಎಂಬುದು.

ಮುಖ್ಯವಾಗಿ, ಗಮನಿಸುವುದಾದರೆ,

ಪ್ರಧಾನಿ ಪಟ್ಟಕ್ಕೆ ಪೈಪೋಟಿ ನಡೆಸಬೇಕೆಂದಿದ್ದ ಕೇಜ್ರಿವಾಲ್ ಕನಸು ಮುರಿದಂತಾಗಿದೆ; ವಿಪಕ್ಷವಾಗಿ ಎಎಪಿ ಅನನುಭವಿ; ಪಂಜಾಬ್, ಗುಜರಾತ್ ಅಂಥ ರಾಜ್ಯಗಳಲ್ಲಿ ಪ್ರಬಲವಾಗಿ ಗುರುತಿಸಿಕೊಂಡಿದ್ದ ಎಎಪಿ ಈಗ ಆ ರಾಜ್ಯಗಳಲ್ಲೂ ಈ ಸೋಲಿನ ನೆರಳು ಬೀಳುವ ಆತಂಕ ಎದುರಿಸಬೇಕಾಗಿದೆ; ಎಎಪಿ ರಾಷ್ಟ್ರೀಯ ಪಕ್ಷ ಸ್ಥಾನಮಾನ ಕಳೆದುಕೊಳ್ಳುವುದೇ ಎಂಬ ಪ್ರಶ್ನೆಯೂ ಎದ್ದಿದೆ.

ಕೇಜ್ರಿವಾಲ್ ಮಹತ್ವಾಕಾಂಕ್ಷಿ ಎಂಬುದು ಸುಳ್ಳಲ್ಲ. ತಾನೊಬ್ಬ ರಾಜಕೀಯ ತಂತ್ರಗಾರ ಎಂಬುದನ್ನೂ ಅವರು ಸಾಕಷ್ಟು ಸಂದರ್ಭಗಳಲ್ಲಿ ಸಾಬೀತು ಮಾಡಿದ್ದಾರೆ. ಪ್ರಧಾನಿ ಪಟ್ಟದ ಕನಸು ಕಂಡವರು ಅವರೆಂಬುದು ಕೂಡ ನಿಜ. ಈಗ ಮೂರನೇ ಅವಧಿಗೆ ಗೆದ್ದಿದ್ದರೆ ಆ ನಿಟ್ಟಿನಲ್ಲಿನ ಓಟಕ್ಕೆ ಅವರು ಸಜ್ಜಾಗಲಿದ್ದರು. ಆ ಕನಸು ಈಗ ಭಗ್ನವಾಗಿದೆ.

ರಚನಾತ್ಮಕ ವಿರೋಧಪಕ್ಷವಾಗಿ ಕೆಲಸ ಮಾಡುವುದಾಗಿ ಕೇಜ್ರಿವಾಲ್ ಹೇಳಿರುವುದೇನೋ ನಿಜ. ಆದರೆ ಇದೇ ಮೊದಲ ಸಲ ಎಎಪಿ ವಿರೋಧ ಪಕ್ಷದ ಸ್ಥಾನದಲ್ಲಿ ಕೂರುತ್ತಿದೆ. ಅಧಿಕಾರದ ರುಚಿಯನ್ನೇ ನೋಡಿಕೊಂಡು ಬಂದಿದ್ದ ಪಕ್ಷವೊಂದು ವಿಪಕ್ಷವಾಗಿ ಕೂರುವಾಗಿನ ತಳಮಳಗಳು ಎಎಪಿಯನ್ನೂ ಕಾಡಲಿವೆ.

ತನ್ನದೇ ಸಿದ್ಧಾಂತದೊಂದಿಗೆ ಪೂರ್ಣ ಸಮಯದ ರಾಜಕೀಯ ಪಕ್ಷವಾಗಲು ಸಾಧ್ಯವಿಲ್ಲ ಎಂಬ ಪಾಠವನ್ನು ಎಎಪಿ ಕಲಿಯಬೇಕಾಗಿದೆ. ಈಗ ಸೋಲಿನ ನಂತರ ಅದು, ಇತರ ಚುನಾವಣೆಗಳಲ್ಲಿ ಹಲವಾರು ವಿರೋಧ ಪಕ್ಷಗಳಂತೆ, ದಿಲ್ಲಿಯಲ್ಲಿ ಯಾವುದೇ ಲೆವೆಲ್ ಪ್ಲೇಯಿಂಗ್ ಫೀಲ್ಡ್ ಇರಲಿಲ್ಲ ಎಂದು ಸಮರ್ಥಿಸಿಕೊಳ್ಳಲು ನೋಡಬಹುದು. ಲೆಫ್ಟಿನೆಂಟ್ ಗವರ್ನರ್ ಕಚೇರಿ ತನ್ನ ಆಡಳಿತಕ್ಕೆ ಅಡಚಣೆಯಾಯಿತು ಎಂದು ತಕರಾರು ತೆಗೆಯಬಹುದು. ಆದರೆ ತನ್ನದೇ ವೈಫಲ್ಯಗಳನ್ನೂ ಅದು ಒಪ್ಪಿಕೊಳ್ಳಬೇಕಾಗುತ್ತದೆ. ಮತದಾರರಿಗೆ ತಾನೆಷ್ಟು ಬದ್ಧವಾಗಿ, ನ್ಯಾಯಯುತವಾಗಿ ನಡೆದುಕೊಂಡೆ ಎಂಬುದನ್ನೂ ಆತ್ಮಾವಲೋಕನ ಮಾಡಿಕೊಳ್ಳಬೇಕಾಗುತ್ತದೆ. ಎಲ್ಲಕ್ಕಿಂತ ಹೆಚ್ಚಾಗಿ, ಬಿಜೆಪಿಯ ಪ್ರಾಬಲ್ಯ ದೂರವಿಡಲಾಗದ ವಾಸ್ತವವಾಗಿದೆ. ಈ ವಾಸ್ತವವನ್ನು ಮನಸ್ಸಿನಲ್ಲಿಟ್ಟುಕೊಂಡು ಎಎಪಿ ತನ್ನ ರಾಜಕೀಯವನ್ನು ರೂಪಿಸಬೇಕಾಗಿದೆ.

ಕೆಲ ವರ್ಷಗಳಿಂದ ಎಎಪಿಯನ್ನು ಕೇಳಲಾಗುತ್ತಿರುವ ಪ್ರಶ್ನೆಯೆಂದರೆ: ಅದರ ನಿಲುವು ಏನು ಎಂಬುದು. ವಿದ್ಯುತ್ ಬಿಲ್ ಕಡಿತವೊಂದೇ ಒಂದು ಸಿದ್ಧಾಂತಕ್ಕೆ ಸಾಕೆ? ಅಲ್ಪಸಂಖ್ಯಾತರ ಹಕ್ಕುಗಳಿಗಾಗಿ ನಿಲ್ಲಲು ಎಎಪಿ ಏಕೆ ನಿರಾಕರಿಸುತ್ತಿತ್ತು? 2020ರಲ್ಲಿ ಗಲಭೆ ಪೀಡಿತ ಈಶಾನ್ಯ ದಿಲ್ಲಿಗೆ ಭೇಟಿ ನೀಡಲು ಕೇಜ್ರಿವಾಲ್ ನಿರಾಕರಿಸಿದ್ದೇಕೆ? ಮಣಿಪುರಕ್ಕೆ ಹೋಗದ ಮೋದಿಗೂ ಈ ಕೇಜ್ರಿವಾಲ್‌ಗೂ ಏನು ವ್ಯತ್ಯಾಸ? ರೊಹಿಂಗ್ಯಾ ನಿರಾಶ್ರಿತರನ್ನು ರಾಕ್ಷಸೀಕರಿಸುವುದು, ಬುಲ್ಡೋಜರ್ ರಾಜ್ ಬಗ್ಗೆ ಹೆಚ್ಚಾಗಿ ಮೌನವಾಗಿರುವುದು, ಬಾಬರಿ ಮಸೀದಿ ಧ್ವಂಸ ವಾರ್ಷಿಕೋತ್ಸವದೊಂದಿಗೆ ಅಯೋಧ್ಯೆಗೆ ಯಾತ್ರಿಕರನ್ನು ಕಳುಹಿಸುವುದು ಮತ್ತು ಕೇಜ್ರಿವಾಲ್‌ಗಾಗಿ ಸಿಎಂ ಕುರ್ಚಿಯನ್ನು ಖಾಲಿ ಇಡುವ ಮೂಲಕ ಮುಖ್ಯಮಂತ್ರಿ ಆತಿಶಿ ಕೂಡ ಪ್ರಜಾಪ್ರಭುತ್ವವನ್ನು ಅಣಕಿಸುವುದು ಇವೆಲ್ಲವೂ ಎಎಪಿಯಲ್ಲಿ ನಡೆದವು.

ಅದು ಬಿಜೆಪಿಯ ಲೈಟ್ ವರ್ಷನ್ ಆಗಲು ಮಾಡಿದ ಪ್ರಯತ್ನಗಳ ಪಟ್ಟಿ ದೊಡ್ಡದಿದೆ. ಕಾಂಗ್ರೆಸ್‌ನ ಮೃದು ಹಿಂದುತ್ವದ ಪ್ರಯತ್ನಗಳಿಂದಲೂ ಅದು ಯಾವುದೇ ಪಾಠಗಳನ್ನು ಕಲಿತಿಲ್ಲ ಮತ್ತು ಯಾವಾಗಲೂ ವಿಫಲವಾಗಿದೆ. ಎಎಪಿ ಈ ಮಾರ್ಗದಲ್ಲಿ ಇನ್ನೂ ಮುಂದೆ ಹೋಗಿ, ದಿಲ್ಲಿ ಸರಕಾರಿ ಶಾಲೆಗಳಲ್ಲಿ ಬಾಂಗ್ಲಾದೇಶಿ ವಲಸಿಗರನ್ನು ಹುಡುಕುವ ನಿರ್ಧಾರ ಮಾಡಿದ್ದು ಅದರ ನೈತಿಕ ಅಧಃಪತನವಾಗಿತ್ತು, ‘ಕಾಮ್ ಕಿ ರಾಜನೀತಿ’ ಎಂಬ ಪ್ರತಿಪಾದನೆ ಕೂಡ ಒಂದು ಶೋಕಿಯಂತೆ ಕಾಣತೊಡಗಿತ್ತು.

ಐದು ವರ್ಷಗಳ ಹಿಂದೆ ತರಲಾದ ಶಾಲೆಗಳು ಮತ್ತು ಮೊಹಲ್ಲಾ ಕ್ಲಿನಿಕ್ ಸುಧಾರಣೆಯನ್ನು ಮತದಾರರು ಶ್ಲಾಘಿಸಿದ್ದರು ಮತ್ತು ಪುರಸ್ಕರಿಸಿದ್ದರು. ಪುರಸಭೆಯ ಶಾಲೆಗಳಲ್ಲಿ ಪೋಷಕರು-ಶಿಕ್ಷಕರ ಸಭೆಗಳಂತಹ ಸರಳ ಕ್ರಮಗಳು ಪಿರಮಿಡ್‌ನ ಕೆಳಭಾಗದಲ್ಲಿರುವವರಿಗೆ ಘನತೆ ತಂದುಕೊಟ್ಟಿದ್ದವು. ಶಿಕ್ಷಕರ ತರಬೇತಿ ಮತ್ತು ಪಠ್ಯಕ್ರಮ ಸುಧಾರಣೆಯ ಕಾರ್ಯಕ್ರಮಗಳನ್ನು ಸಹ ಸ್ವಾಗತಿಸಲಾಯಿತು. ಭಾರತದ ಶ್ರೀಮಂತ ನಗರಗಳಲ್ಲಿ ಒಂದಾದ ದಿಲ್ಲಿಯಲ್ಲಿ ಬಡವರಿಗೆ ಮೂಲಭೂತ ಆರೋಗ್ಯ ರಕ್ಷಣೆ ಎಷ್ಟು ಬೇಕು ಎಂದು ಮೊಹಲ್ಲಾ ಚಿಕಿತ್ಸಾಲಯಗಳು ತೋರಿಸಿದವು. ಆದರೆ, 10 ವರ್ಷಗಳಿಗೂ ಹೆಚ್ಚು ಕಾಲ ಅಧಿಕಾರದಲ್ಲಿದ್ದ ನಂತರ, ಅದು ಆಡಳಿತದ ಇತರ ಅಂಶಗಳಲ್ಲೂ ಇದೇ ರೀತಿಯ ನಾವೀನ್ಯತೆ ಮತ್ತು ಬದ್ಧತೆ ತೋರಿಸುವುದು ಅವಶ್ಯವಾಗಿತ್ತು.

ಲೆಫ್ಟಿನೆಂಟ್ ಗವರ್ನರ್ ಮತ್ತು ಕೇಂದ್ರದೊಂದಿಗಿನ ಜಗಳ ಈ ವಿಷಯದಲ್ಲಿ ಎಎಪಿಯನ್ನು ಕುಗ್ಗಿಸಿತು ಎಂಬುದು ನಿಜವಾದರೂ, ಹೊಸ ವಿಚಾರಗಳನ್ನು ಪ್ರಸ್ತುತಪಡಿಸಲು ಅದು ಇನ್ನೂ ಹೆಚ್ಚಿನದನ್ನು ಮಾಡಬಹುದಿತ್ತು. ಉದಾಹರಣೆಗೆ, ಉನ್ನತ ಶಿಕ್ಷಣದಲ್ಲಿ, ಅಂಬೇಡ್ಕರ್ ವಿಶ್ವವಿದ್ಯಾನಿಲಯದ ಅವನತಿಗೆ ಎಎಪಿ ಸರಕಾರವೇ ಕಾರಣವಾಗಿತ್ತು ಮತ್ತು ದಿಲ್ಲಿ ವಿಶ್ವವಿದ್ಯಾನಿಲಯದಲ್ಲಿ ಸ್ಥಳೀಯರಿಗೆ ಮೀಸಲಾತಿಯಂಥ ಅದರ ವಿಚಾರಗಳು ಭಯದಿಂದ ಬಂದವಾಗಿದ್ದವು.

ಎಎಪಿಯ ಬಲಿಪಶು ರಾಜಕಾರಣದ ಮತ್ತೊಂದು ಅಂಶವೆಂದರೆ ತನ್ನ ಸೋಲಿಗೆ ಕಾಂಗ್ರೆಸ್ ಕಾರಣ ಎಂದು ದೂಷಿಸುವುದು. ಅದು ಖಂಡಿತ ಸಮರ್ಥನೀಯವಲ್ಲ. ಸೋಲಿನ ಹೊರತಾಗಿಯೂ ಎಎಪಿ ದಿಲ್ಲಿಯಿಂದ ಅಳಿಸಿಹೋಗಿಲ್ಲ. 70 ಸದಸ್ಯರ ವಿಧಾನಸಭೆಯಲ್ಲಿ ಅದು ಶೇ.40ಕ್ಕಿಂತ ಹೆಚ್ಚು ಮತಗಳನ್ನು ಮತ್ತು 22 ಸ್ಥಾನಗಳನ್ನು ಪಡೆದಿದೆ.

ಸೋಲನ್ನು ಒಪ್ಪಿಕೊಂಡ ಕೇಜ್ರಿವಾಲ್, ತಮ್ಮ ಪಕ್ಷ ರಚನಾತ್ಮಕ ವಿರೋಧ ಪಕ್ಷದ ಪಾತ್ರವನ್ನು ನಿರ್ವಹಿಸುತ್ತದೆ ಮತ್ತು ದಿಲ್ಲಿಯ ಜನರ ಪರವಾಗಿ ವಕಾಲತ್ತು ವಹಿಸುವುದನ್ನು ಮುಂದುವರಿಸುತ್ತದೆ ಎಂದು ಹೇಳಿದ್ದಾರೆ. ಸೋಲಿನ ನಂತರದ ಮಾತುಗಳಲ್ಲಿ ಇದಕ್ಕಿಂತ ಹೆಚ್ಚಿನದೇನೂ ಇಲ್ಲವಾಗಿದೆ. ಪಕ್ಷ ಬಿಜೆಪಿಯ ಸರ್ವಾಧಿಕಾರದ ವಿರುದ್ಧ ಹೋರಾಡುತ್ತದೆ ಎಂದು ಸಿಎಂ ಆತಿಶಿ ಹೇಳಿದ್ದಾರೆ. ಅಲ್ಪಸಂಖ್ಯಾತರನ್ನು ರಾಕ್ಷಸೀಕರಿಸುವ ಮೂಲಕ ಪಕ್ಷ ಬಿಜೆಪಿಯ ವಿರುದ್ಧ ಹೋರಾಡಲು ಸಾಧ್ಯವಿಲ್ಲ.

ದಿಲ್ಲಿ ವಿಧಾನಸಭಾ ಚುನಾವಣೆಯಲ್ಲಿ ಎಎಪಿ ಸೋಲು ಪಂಜಾಬ್‌ನಲ್ಲಿ ಅದರ ಪರಿಣಾಮದ ಬಗ್ಗೆ ಪ್ರಶ್ನೆಗಳನ್ನು ಹುಟ್ಟುಹಾಕಿದೆ. ಅರವಿಂದ ಕೇಜ್ರಿವಾಲ್ ನೇತೃತ್ವದ ಪಕ್ಷ ಅಧಿಕಾರದಲ್ಲಿರುವ ಏಕೈಕ ರಾಜ್ಯ ಪಂಜಾಬ್‌ನಲ್ಲೂ ಈ ಸೋಲಿನ ಪರಿಣಾಮಗಳು ಉಂಟಾಗುತ್ತವೆ ಎಂದು ಪಕ್ಷದ ನಾಯಕರು ಒಪ್ಪಿಕೊಂಡಿದ್ದಾರೆ. ದಿಲ್ಲಿ ಮತ್ತು ಪಂಜಾಬ್‌ನಲ್ಲಿ ಉಚಿತ ವಿದ್ಯುತ್ ಮತ್ತು ಮೊಹಲ್ಲಾ ಕ್ಲಿನಿಕ್‌ನಂಥ ದೊಡ್ಡ ಯೋಜನೆಗಳನ್ನು ಎಎಪಿ ತಂದಿತ್ತು. ದಿಲ್ಲಿಯಲ್ಲಿನ ಕೇಜ್ರಿವಾಲ್ ಜನಪ್ರಿಯತೆಯೇ ಪಂಜಾಬ್‌ನಲ್ಲಿಯೂ ಎಎಪಿಗೆ ಗೆಲುವನ್ನು ತಂದುಕೊಟ್ಟಿತ್ತು. ದಿಲ್ಲಿಯಲ್ಲಿ ಗೆಲುವಿನ ನಂತರವೇ ಪಂಜಾಬ್‌ನ ಮತದಾರರು 2022ರ ವಿಧಾನಸಭಾ ಚುನಾವಣೆಯಲ್ಲಿ ಎಎಪಿಗೆ ಮತ ಹಾಕಿದ್ದರು.

ದಿಲ್ಲಿಯಲ್ಲಿ ನಾವೇನು ಎಂಬುದು ಖಂಡಿತವಾಗಿಯೂ ಪಂಜಾಬ್‌ನಲ್ಲಿ ಪರಿಣಾಮ ಬೀರುತ್ತದೆ ಎಂದು ಪಕ್ಷದ ಪಂಜಾಬ್ ನಾಯಕರೊಬ್ಬರು ಹೇಳಿರುವುದಾಗಿ ಇಂಡಿಯನ್ ಎಕ್ಸ್‌ಪ್ರೆಸ್ ವರದಿ ಮಾಡಿದೆ. ಪಂಜಾಬ್‌ನಲ್ಲಿ ಎಎಪಿ ವಿರುದ್ಧ ಸೋತು ಅಧಿಕಾರ ಕಳೆದುಕೊಂಡಿದ್ದ ಕಾಂಗ್ರೆಸ್ ಈಗ ಮತ್ತೆ ಅಧಿಕಾರ ಪಡೆಯಲು ಎಎಪಿಯ ಈ ದೌರ್ಬಲ್ಯದ ಹೊತ್ತನ್ನು ಬಳಸಿಕೊಳ್ಳದೆ ಬಿಡುವುದಿಲ್ಲ. ಅಲ್ಲದೆ, ಪಂಜಾಬ್ ಎಎಪಿಯಲ್ಲಿ ಆಂತರಿಕ ಅಧಿಕಾರ ಹೋರಾಟದ ಸಾಧ್ಯತೆಗಳ ಬಗ್ಗೆಯೂ ಹೇಳಲಾಗುತ್ತಿದೆ. ಮುಖ್ಯಮಂತ್ರಿ ಭಗವಂತ್ ಮಾನ್ ಮತ್ತು ಅವರ ಬೆಂಬಲಿಗರು ಎಎಪಿ ದಿಲ್ಲಿ ನಾಯಕತ್ವದ ವಿರುದ್ಧ ನಿಲ್ಲುವ ಸೂಚನೆಗಳಿವೆ ಎನ್ನಲಾಗಿದೆ. ಪಂಜಾಬ್ ಎಎಪಿ ಶಾಸಕರ ವ್ಯಾಪಕ ಪಕ್ಷಾಂತರ ಸಾಧ್ಯತೆಗಳ ಬಗ್ಗೆಯೂ ಕಾಂಗ್ರೆಸ್ ನಾಯಕರು ಮಾತಾಡತೊಡಗಿದ್ದಾರೆ. ಪಂಜಾಬ್‌ನಲ್ಲಿ ಮಧ್ಯಾವಧಿ ಚುನಾವಣೆಗೆ ಸಿದ್ಧರಾಗಬೇಕು. ಏಕೆಂದರೆ ಎಎಪಿ ದಿಲ್ಲಿಯಲ್ಲಿನ ತನ್ನ ಹೀನಾಯ ಸೋಲಿನ ನಂತರ ಒಡೆದುಹೋಗಲಿದೆ ಎಂದು ಕಾಂಗ್ರೆಸ್ ಸಂಸದ ಸುಖಜಿಂದರ್ ಸಿಂಗ್ ರಾಂಧವಾ ಹೇಳಿರುವುದಾಗಿ ವರದಿಯಾಗಿದೆ. 2027ರಲ್ಲಿ ಪಂಜಾಬ್‌ನಲ್ಲಿಯೂ ಎಎಪಿ ಆಡಳಿತ ವಿರೋಧಿ ಅಲೆಯನ್ನು ಎದುರಿಸಬೇಕಾಗುತ್ತದೆ ಎಂಬುದರಲ್ಲಿ ಸಂದೇಹವಿಲ್ಲ. ಪಂಜಾಬ್ ಜನರು ಎಎಪಿಯ ಆಡಳಿತದಿಂದ ಬೇಸತ್ತಿದ್ದಾರೆ ಎಂದು ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿ ಅನಿಲ್ ಸರಿನ್ ಹೇಳಿದ್ದಾರೆ.

ದಿಲ್ಲಿಯಲ್ಲಿ ಎಎಪಿ ಸೋತಿರುವುದರಿಂದ ಅದು ಈಗ ತನ್ನ ರಾಷ್ಟ್ರೀಯ ಪಕ್ಷದ ಸ್ಥಾನಮಾನವನ್ನು ಕಳೆದುಕೊಳ್ಳಬಹುದೇ ಎಂಬ ಪ್ರಮುಖ ಪ್ರಶ್ನೆ ಉದ್ಭವಿಸಿದೆ. 2023ರ ಗುಜರಾತ್ ವಿಧಾನಸಭಾ ಚುನಾವಣೆಯಲ್ಲಿ ಸುಮಾರು ಶೇ.13 ಮತ ಪಾಲನ್ನು ಮತ್ತು ಐದು ಸ್ಥಾನಗಳನ್ನು ಗಳಿಸಿದ ನಂತರ ಎಎಪಿಗೆ ಚುನಾವಣಾ ಆಯೋಗ 2023ರ ಸೆಪ್ಟಂಬರ್ 30ರಂದು ರಾಷ್ಟ್ರೀಯ ಪಕ್ಷದ ಸ್ಥಾನಮಾನವನ್ನು ನೀಡಿತು. ದಿಲ್ಲಿ, ಪಂಜಾಬ್ ಮತ್ತು ಗೋವಾ ಜೊತೆಗೆ ಗುಜರಾತ್‌ನಲ್ಲಿ ಎಎಪಿ ರಾಜ್ಯ ಪಕ್ಷವಾಗುವುದರೊಂದಿಗೆ ಎಎಪಿ ರಾಷ್ಟ್ರೀಯ ಮಾನ್ಯತೆಯ ಅವಶ್ಯಕತೆಯನ್ನು ಪೂರೈಸಿತ್ತು. ಅದೇ ಸಮಯದಲ್ಲಿ, ಟಿಎಂಸಿ, ಸಿಪಿಐ ಮತ್ತು ಎನ್‌ಸಿಪಿ ಗಳಿಂದ ರಾಷ್ಟ್ರೀಯ ಪಕ್ಷದ ಸ್ಥಾನಮಾನವನ್ನು ಆಯೋಗ ಹಿಂದೆಗೆದುಕೊಂಡಿತ್ತು. ಇದರಿಂದಾಗಿ ದೇಶದಲ್ಲಿ ಕೇವಲ ಆರು ರಾಷ್ಟ್ರೀಯ ಪಕ್ಷಗಳು ಉಳಿದಿವೆ. ಅವೆಂದರೆ, ಬಿಜೆಪಿ, ಕಾಂಗ್ರೆಸ್, ಎಎಪಿ, ಸಿಪಿಎಂ, ಬಿಎಸ್‌ಪಿ, ಎನ್‌ಪಿಪಿ.

ಈಗ ಎಎಪಿ ರಾಷ್ಟ್ರೀಯ ಸ್ಥಾನಮಾನದ ಪ್ರಶ್ನೆ. ಎಎಪಿಯ ರಾಷ್ಟ್ರೀಯ ಪಕ್ಷದ ಸ್ಥಾನಮಾನ ದಿಲ್ಲಿಯನ್ನು ಮಾತ್ರ ಅವಲಂಬಿಸಿಲ್ಲ. ದಿಲ್ಲಿಯಲ್ಲಿ ಅಧಿಕಾರ ಕಳೆದುಕೊಂಡರೂ, ಪಂಜಾಬ್, ಗೋವಾ ಮತ್ತು ಗುಜರಾತ್ ಜೊತೆಗೆ ದಿಲ್ಲಿಯಲ್ಲೂ ತನ್ನ ರಾಜ್ಯ ಪಕ್ಷದ ಸ್ಥಾನಮಾನವನ್ನು ಉಳಿಸಿಕೊಳ್ಳಬಹುದು. ಆದರೆ ಈ ರಾಜ್ಯಗಳಲ್ಲಿ ಅದರ ಕಾರ್ಯಕ್ಷಮತೆ ಕುಸಿದರೆ, ಅಂದರೆ ಈ ನಾಲ್ಕು ರಾಜ್ಯಗಳಲ್ಲಿ ಯಾವುದಾದರೂ ಒಂದರಲ್ಲಿ ಶೇ.6ರಷ್ಟು ಮತಗಳನ್ನು ಅಥವಾ ಎರಡು ಸ್ಥಾನಗಳನ್ನು ಪಡೆಯಲು ವಿಫಲವಾದರೆ ಆಗ ಅದು ರಾಷ್ಟ್ರೀಯ ಸ್ಥಾನಮಾನವನ್ನು ಕಳೆದುಕೊಳ್ಳುವ ಅಪಾಯವಿದೆ. ಆದ್ದರಿಂದ, ಎಎಪಿ ದಿಲ್ಲಿಯನ್ನು ಕಳೆದುಕೊಂಡರೆ, ತಕ್ಷಣವೇ ಅದರ ರಾಷ್ಟ್ರೀಯ ಪಕ್ಷದ ಸ್ಥಾನಮಾನ ಹೋಗುವುದಿಲ್ಲ. ಆದರೂ, ಅದರ ಭವಿಷ್ಯ ಬಹು ರಾಜ್ಯಗಳಲ್ಲಿನ ಚುನಾವಣೆಗಳಲ್ಲಿ ಅದರ ಕಾರ್ಯಕ್ಷಮತೆಯನ್ನು ಅವಲಂಬಿಸಿರುತ್ತದೆ.

Tags:    

Writer - ವಾರ್ತಾಭಾರತಿ

contributor

Editor - Thouheed

contributor

Byline - ಆರ್.ಜೀವಿ

contributor

Similar News