ಪಹಲ್ಗಾಮ್ ದಾಳಿ ಮತ್ತು ಆನಂತರದ ಪರಿಣಾಮಗಳು

ಕಾಶ್ಮೀರದ ಪಹಲ್ಗಾಮ್‌ನಲ್ಲಿ ಭೀಕರ ಭಯೋತ್ಪಾದಕ ದಾಳಿ ನಡೆದುಹೋಗಿದೆ. 26 ಮಂದಿ ಬಲಿಯಾಗಿದ್ದು, ಹೆಚ್ಚಿನವರು ಪ್ರವಾಸಿಗರೇ ಆಗಿದ್ದಾರೆ. ಇತ್ತೀಚೆಗೆ ನಾಗರಿಕರ ಮೇಲೆ ನಡೆದ ಭಯೋತ್ಪಾದಕ ದಾಳಿಗಳಲ್ಲೇ ಬಲು ಘೋರವಾದ ದಾಳಿ ಇದೆನ್ನಲಾಗುತ್ತಿದೆ ಮತ್ತು ಈ ದಾಳಿಯ ಹಿಂದೆ ಪಾಕಿಸ್ತಾನ ಇದೆಯೆಂಬುದು ಆತಂಕವನ್ನು ಹೆಚ್ಚಿಸಿದೆ. ದಾಳಿ ನಂತರದ ಪರಿಣಾಮಗಳು ಎರಡು ರೀತಿಯಲ್ಲಿ ಕಾಣಿಸತೊಡಗಿವೆ. ಒಂದೆಡೆ, ಜಮ್ಮು-ಕಾಶ್ಮೀರದ ಜನರ ಜೀವನ ಮತ್ತು ಜೀವನೋಪಾಯಕ್ಕೆ ಈ ದಾಳಿ ದೊಡ್ಡ ಹೊಡೆತ ಕೊಟ್ಟಿರುವಾಗಲೇ, ಇನ್ನೊಂದೆಡೆ ದಾಳಿ ನೆಪದಲ್ಲಿ ವಿಭಜನೆ ರಾಜಕೀಯ ಮತ್ತೊಮ್ಮೆ ವಿಜೃಂಭಿಸತೊಡಗಿದೆ.;

Update: 2025-04-29 12:41 IST
Editor : Thouheed | Byline : ಆರ್.ಜೀವಿ
ಪಹಲ್ಗಾಮ್ ದಾಳಿ ಮತ್ತು ಆನಂತರದ ಪರಿಣಾಮಗಳು
  • whatsapp icon

ಭಾಗ- 1

ಜಮ್ಮು-ಕಾಶ್ಮೀರದ ಬೆನ್ನಿಗೆ ಅಂಟಿಕೊಂಡಂತೆಯೇ ಇರುವುದು ಭಯೋತ್ಪಾದನೆ. ಅಲ್ಲಿನ ಭಯೋತ್ಪಾದಕ ಚಟುವಟಿಕೆಗಳಿಗೆ ದಶಕಗಳ ಇತಿಹಾಸವಿದೆ. ಈಗ ಮತ್ತೊಂದು ಘೋರ ದಾಳಿ ನಡೆದಿದೆ.

ಕಾಶ್ಮೀರದ ಸುಂದರ ತಾಣ ಪಹಲ್ಗಾಮ್‌ನಲ್ಲಿ ಪ್ರವಾಸಿಗರು ಆನಂದದ ಕ್ಷಣಗಳನ್ನು ಸವಿಯುತ್ತಿದ್ದಾಗಲೇ ಇದ್ದಕ್ಕಿದ್ದಂತೆ ಭಯೋತ್ಪಾದಕರು ಸುತ್ತುವರಿದಿದ್ದರು. ಕೆಲವೇ ನಿಮಿಷಗಳಲ್ಲಿ ಇಡೀ ವಾತಾವರಣ ನರಕಮಯವಾಗಿ ಹೋಯಿತು.

ಹಸಿರೆಲ್ಲ ನೆತ್ತರುಮಯವಾಯಿತು. ಖುಷಿಯನ್ನಳಿಸಿ ಅಸಹಾಯಕ ರೋದನ, ಆಕ್ರಂದನ ಮುಗಿಲು ಮುಟ್ಟಿತ್ತು. 26 ಮಂದಿ ಪಹಲ್ಗಾಮ್ ಭಯೋತ್ಪಾದಕ ದಾಳಿಗೆ ಬಲಿಯಾಗಿದ್ದಾರೆ.

ಇತ್ತೀಚಿನ ವರ್ಷಗಳಲ್ಲಿ ನಾಗರಿಕರ ಮೇಲೆ ನಡೆದ ಅತ್ಯಂತ ಭೀಕರ ಭಯೋತ್ಪಾದಕ ದಾಳಿ ಇದು ಎಂದು ಹೇಳಲಾಗುತ್ತಿದೆ. ಕಳೆದ 25 ವರ್ಷಗಳಲ್ಲಿ ಜಮ್ಮು-ಕಾಶ್ಮೀರದಲ್ಲಿ ನಾಗರಿಕರನ್ನೇ ಗುರಿಯಾಗಿಸಿ ಹಲವು ದಾಳಿಗಳು ನಡೆದಿವೆ. ಈ ಘಟನೆಗೂ ಮುನ್ನ ನಾಗರಿಕರ ಮೇಲೆ ಅತ್ಯಂತ ಭೀಕರ ದಾಳಿ 25 ವರ್ಷಗಳ ಹಿಂದೆ 2000 ಮಾರ್ಚ್‌ನಲ್ಲಿ ನಡೆದಿತ್ತು, ಆಗ 36 ನಾಗರಿಕರು ಸಾವನ್ನಪ್ಪಿದ್ದರು.

ಕಳೆದ 25 ವರ್ಷಗಳಲ್ಲಿ ಜಮ್ಮು ಮತ್ತು ಕಾಶ್ಮೀರದಲ್ಲಿ ನಾಗರಿಕರ ಮೇಲೆ ನಡೆದ ಪ್ರಮುಖ ದಾಳಿ ಘಟನೆಗಳು ಹೀಗಿವೆ:

2000 ಮಾರ್ಚ್ 21: ಅನಂತ್‌ನಾಗ್ ಜಿಲ್ಲೆಯ ಛತ್ತಿಸಿಂಗ್ಪೋರಾ ಜೆಲ್ಲೆಯಲ್ಲಿ ಸಿಖ್ ಸಮುದಾಯದವರನ್ನು ಗುರಿ ಮಾಡಿ ಭಯೋತ್ಪಾದಕರು ನಡೆಸಿದ ದಾಳಿಯಲ್ಲಿ 36 ಜನರು ಸಾವನ್ನಪ್ಪಿದ್ದರು.

2000 ಆಗಸ್ಟ್: ನುನ್ವಾನ್ ಬೇಸ್ ಕ್ಯಾಂಪ್‌ನಲ್ಲಿ ನಡೆದ ದಾಳಿಯಲ್ಲಿ 12 ಮಂದಿ ಅಮರನಾಥ ಯಾತ್ರಿಕರೂ ಸೇರಿ 32 ಮಂದಿ ಸಾವನ್ನಪ್ಪಿದ್ದರು.

2001 ಜುಲೈ: ಅನಂತ್‌ನಾಗ್ ಜಿಲ್ಲೆಯ ಶೇಷನಾಗ್ ಬೇಸ್ ಕ್ಯಾಂಪ್‌ನಲ್ಲಿ ಮತ್ತೆ ಅಮರನಾಥ ಯಾತ್ರಿಕರನ್ನು ಗುರಿ ಮಾಡಲಾದ ದಾಳಿಯಲ್ಲಿ 13 ಜನರು ಬಲಿಯಾಗಿದ್ದರು.

2001 ಅಕ್ಟೋಬರ್ 1: ಜಮ್ಮು-ಕಾಶ್ಮೀರ ಶಾಸಕಾಂಗ ಸಂಕೀರ್ಣದಲ್ಲಿ ನಡೆದ ಆತ್ಮಾಹುತಿ ಬಾಂಬ್ ದಾಳಿಯಲ್ಲಿ 36 ನಾಗರಿಕರು ಬಲಿಯಾಗಿದ್ದರು.

2002: ಚಂದನ್ವಾರಿ ಬೇಸ್ ಕ್ಯಾಂಪ್‌ನಲ್ಲಿ ನಡೆದ ದಾಳಿಯಲ್ಲಿ 11 ಅಮರನಾಥ ಯಾತ್ರಿಗಳು ಸಾವನ್ನಪ್ಪಿದ್ದರು.

2002 ನವೆಂಬರ್ 23: ದಕ್ಷಿಣ ಕಾಶ್ಮೀರದ ಜಮ್ಮು-ಶ್ರೀನಗರ ರಾಷ್ಟ್ರೀಯ ಹೆದ್ದಾರಿಯಲ್ಲಿ ನಡೆದ ಐಇಡಿ ಸ್ಫೋಟದಲ್ಲಿ ಮೂವರು ಮಹಿಳೆಯರು, ಇಬ್ಬರು ಮಕ್ಕಳು, 9 ಭದ್ರತಾ ಸಿಬ್ಬಂದಿ ಸೇರಿ 19 ಮಂದಿ ಸಾವನ್ನಪ್ಪಿದ್ದರು.

2005 ಜೂನ್ 13: ಪುಲ್ವಾಮಾದ ಸರಕಾರಿ ಶಾಲೆಯೆದುರಿನ ಜನದಟ್ಟಣೆಯ ಮಾರುಕಟ್ಟೆ ಸ್ಥಳದಲ್ಲಿ ನಡೆದ ಸ್ಫೋಟದಲ್ಲಿ ಇಬ್ಬರು ಶಾಲಾ ಮಕ್ಕಳು, ಮೂವರು ಸಿಆರ್‌ಪಿಎಫ್ ಅಧಿಕಾರಿಗಳು ಸೇರಿ 13 ನಾಗರಿಕರು ಸಾವನ್ನಪ್ಪಿದ್ದರು ಮತ್ತು 100ಕ್ಕೂ ಹೆಚ್ಚು ಜನ ಗಾಯಗೊಂಡಿದ್ದರು.

2006 ಜೂನ್ 12: ಕುಲ್ಗಾಮ್‌ನಲ್ಲಿ ನಡೆದ ದಾಳಿಯಲ್ಲಿ 9 ಮಂದಿ ನೇಪಾಳಿ ಮತ್ತು ಬಿಹಾರಿ ಕಾರ್ಮಿಕರು ಸಾವನ್ನಪ್ಪಿದ್ದರು.

2017 ಜುಲೈ 10: ಕುಲ್ಗಾಮ್‌ನಲ್ಲಿ ಅಮರನಾಥ ಯಾತ್ರಿಕರಿದ್ದ ಬಸ್ ಮೇಲೆ ನಡೆದ ದಾಳಿಯಲ್ಲಿ 8 ಮಂದಿ ಸಾವನ್ನಪ್ಪಿದ್ದರು.

ಈಗ, 2025 ಎಪ್ರಿಲ್ 22 ರಂದು ಪಹಲ್ಗಾಮ್‌ನಲ್ಲಿ ನಡೆದಿರುವ ದಾಳಿಯಲ್ಲಿ 26 ಜನ ಸಾವನ್ನಪ್ಪಿರುವುದಾಗಿ ವರದಿಗಳು ಹೇಳುತ್ತಿವೆ.

ಈ ಸಲ ಭಯೋತ್ಪಾದಕರು ಆರಿಸಿಕೊಂಡಿರುವ ಜಾಗ ಎಂತಹ ಇಕ್ಕಟ್ಟಿನದ್ದೆಂದರೆ, ಅಲ್ಲಿ ಕುದುರೆಗಳ ಮೇಲೆ ಇಲ್ಲವೇ ಕಾಲ್ನಡಿಗೆ ಮೂಲಕ ಮಾತ್ರವೇ ಹೋಗಲು ಸಾಧ್ಯ. ಪಹಲ್ಗಾಮ್‌ನಲ್ಲಿ ಭಯೋತ್ಪಾದಕರು ಇದ್ದಕ್ಕಿದ್ದಂತೆ ಪ್ರವಾಸಿಗರನ್ನು ಸುತ್ತುವರಿದು ಗುಂಡು ಹಾರಿಸಲು ಪ್ರಾರಂಭಿಸಿದ್ದರು. ಸಹಾಯ ಮತ್ತು ರಕ್ಷಣೆ ಪಡೆಯುವುದು ಸುಲಭವಲ್ಲದ ಸ್ಥಳದಲ್ಲಿ ಈ ದಾಳಿ ನಡೆಸಲಾಯಿತು. ಅಲ್ಲಿ ಭದ್ರತೆ ಏಕೆ ಇರಲಿಲ್ಲ ಎಂಬುದು ಬಹಳ ದೊಡ್ಡ ಪ್ರಶ್ನೆ.

ದಶಕಗಳಿಂದಲೂ ಜಮ್ಮು-ಕಾಶ್ಮೀರವನ್ನು ಭಯೋತ್ಪಾದನೆ ಕಾಡುತ್ತಲೇ ಇದೆ. 1989 ರಿಂದ ಕಾಶ್ಮೀರದಲ್ಲಿ ಪಾಕಿಸ್ತಾನದ ನೇತೃತ್ವದಲ್ಲಿ ನಡೆಯುತ್ತಿರುವ ಪ್ರತ್ಯೇಕತಾವಾದಿ ಉಗ್ರಗಾಮಿ ಚಟುವಟಿಕೆ ಹಲವಾರು ಭಯೋತ್ಪಾದಕ ದಾಳಿಗಳಿಗೆ ಕಾರಣವಾಗಿದೆ. ಒಂದು ಲೆಕ್ಕದ ಪ್ರಕಾರ, ಭಯೋತ್ಪಾದಕ ದಾಳಿಗಳಿಂದಾಗಿ ಬಲಿಯಾದ ಭದ್ರತಾ ಸಿಬ್ಬಂದಿ 6,413, ಪ್ರಾಣ ತೆತ್ತ ನಾಗರಿಕರ ಸಂಖ್ಯೆ 14,930.

ಪುಲ್ವಾಮಾ ದಾಳಿಯಂತೂ ದೊಡ್ಡ ದುರಂತವಾಗಿ, ಕಪ್ಪು ಚುಕ್ಕಿಯಾಗಿ ಉಳಿದುಕೊಂಡಿದೆ. 44 ಸಿಆರ್‌ಪಿಎಫ್ ಯೋಧರನ್ನು ಬಲಿ ತೆಗೆದುಕೊಂಡ ಪುಲ್ವಾಮಾ ದಾಳಿ 2019ರ ಫೆಬ್ರವರಿ 14 ರಂದು ನಡೆಯಿತು. ಜಮ್ಮು-ಕಾಶ್ಮೀರದ ಪುಲ್ವಾಮಾದ ಅವಂತಿಪುರ ಬಳಿ 78 ವಾಹನಗಳಲ್ಲಿ 2,547 ಸಿಆರ್‌ಪಿಎಫ್ ಯೋಧರು ಜಮ್ಮುವಿನಿಂದ ಶ್ರೀನಗರಕ್ಕೆ ಹೊರಟಿದ್ದಾಗ ಆ ದಾಳಿ ನಡೆಯಿತು. 350 ಕಿಲೋಗ್ರಾಂನಷ್ಟು ಸ್ಫೋಟಕಗಳಿದ್ದ ಸ್ಕಾರ್ಪಿಯೋವನ್ನು ಆ ದಾರಿಯಲ್ಲಿ ನುಗ್ಗಿಸಿದ ಜೆಇಎಂ ದಾಳಿಕೋರ ಈ ದುರಂತಕ್ಕೆ ಕಾರಣನಾಗಿದ್ದ.

ಕಾಶ್ಮೀರ ಕಣಿವೆಯಲ್ಲಿ ಅತ್ಯಂತ ಜಟಿಲವಾದ ಕಣ್ಗಾವಲು ಹಂತಗಳನ್ನು ದಾಟಿ ಇಂಥದೊಂದು ಭಯೋತ್ಪಾದಕ ದಾಳಿ ಹೇಗೆ ಸಾಧ್ಯವಾಯಿತು? ಮತ್ತು ಭದ್ರತಾ ಪಡೆಗಳಿಗೆ ಯಾವುದೇ ಸುಳಿವು ಸಿಗದಿದ್ದುದು ಹೇಗೆ? ಸುಳಿವು ಸಿಕ್ಕಿರದೇ ಇರಲು ಸಾಧ್ಯವೇ ಇಲ್ಲ ಎಂಬುದೇ ಅಂದಿನಿಂದ ನಿರಂತರವಾಗಿ ಪ್ರಶ್ನೆಗಳು ಕಾಡಲು ಕಾರಣ. ಆದರೆ ದಾಳಿಗೆ ಮೊದಲೇ ವಿಶ್ವಾಸಾರ್ಹ ಗುಪ್ತಚರ ಮಾಹಿತಿ ಲಭಿಸಿತ್ತು ಎಂಬುದು ‘ದಿ ಫ್ರಂಟ್‌ಲೈನ್’ ತನಿಖಾ ವರದಿ ಹೇಳಿತ್ತು. ಅಂಥ ಮಾಹಿತಿಯ ಹೊರತಾಗಿಯೂ ಈ ಭೀಕರ ದಾಳಿ ಹೇಗೆ ನಡೆಯಿತು ಎಂಬುದು ಬಗೆಹರಿಯದ ಪ್ರಶ್ನೆಯಾಗಿಯೇ ಉಳಿದಿದೆ.

ಈಗ ನಡೆದಿರುವ ದಾಳಿಯ ಹಿಂದೆ ದಿ ರೆಸಿಸ್ಟನ್ಸ್ ಫ್ರಂಟ್ (ಟಿಆರ್‌ಎಫ್) ಇದೆಯೆನ್ನಲಾಗಿದೆ. ದಾಳಿ ಹೊಣೆಯನ್ನು ಅದು ಹೊತ್ತುಕೊಂಡಿದೆ. ಲಷ್ಕರೆ ತಯ್ಯಿಬಾ ಅಡಿಯಲ್ಲಿಯೇ ಇದು ಬರುತ್ತದೆ.

ಜಮ್ಮು-ಕಾಶ್ಮೀರಕ್ಕೆ ನೀಡಲಾಗಿದ್ದ ವಿಶೇಷ ಸ್ಥಾನಮಾನವನ್ನು ಕೇಂದ್ರ ಸರಕಾರ ರದ್ದುಗೊಳಿಸಿದ ಕೆಲವೇ ತಿಂಗಳುಗಳಲ್ಲಿ, ಅಂದರೆ 2019ರ ಅಕ್ಟೋಬರ್‌ನಲ್ಲಿ ಹುಟ್ಟಿಕೊಂಡ ಸಂಘಟನೆ ಇದು. ಭಯೋತ್ಪಾದಕ ಚಟುವಟಿಕೆಗಳ ಜೊತೆಗೇ ಶಸ್ತ್ರಾಸ್ತ್ರ ಮತ್ತು ಮಾದಕ ದ್ರವ್ಯ ಸಾಗಣೆಯಲ್ಲೂ ತೊಡಗಿದೆ. ಉಗ್ರ ಸಂಘಟನೆಗೆ ಯುವಕರನ್ನು ಸೆಳೆಯುತ್ತಿರುವ ಬಗ್ಗೆಯೂ ಹೇಳಲಾಗಿದೆ. ಭಾರತ ಟಿಆರ್‌ಎಫ್ ಅನ್ನು 2023ರಲ್ಲಿಯೇ ನಿಷೇಧಿಸಿದೆ. 2021ರ ದಾಳಿ, 2023ರ ಅನಂತ್‌ನಾಗ್ ಎನ್‌ಕೌಂಟರ್, 2024ರಲ್ಲಿ ನಡೆದಿದ್ದ ಕಟ್ಟಡ ಕಾರ್ಮಿಕರ ಹತ್ಯೆಯಲ್ಲೆಲ್ಲ ಈ ಸಂಘಟನೆಯೇ ಇತ್ತು.

ಈ ಬಾರಿ ಪ್ರವಾಸಿಗರನ್ನೇ ಗುರಿಯಾಗಿಸಿ ದಾಳಿ ನಡೆಸಿದೆ.

ಎಪ್ರಿಲ್ 17ರಂದು ಪಾಕಿಸ್ತಾನದ ಸೇನಾ ಮುಖ್ಯಸ್ಥ ಅಸೀಮ್ ಮುನೀರ್, ಕಾಶ್ಮೀರ ಯಾವತ್ತಿದ್ದರೂ ಪಾಕಿಸ್ತಾನದ್ದು ಎಂದಿದ್ದರು. ಅದು ಈ ದಾಳಿಯ ಸೂಚನೆಯಾಗಿತ್ತೇ ಗೊತ್ತಿಲ್ಲ. ಆದರೆ, ಅದಾದ ವಾರದಲ್ಲೇ ಈ ಭಯಾನಕ ದಾಳಿ ನಡೆದುಹೋಗಿದೆ.

ಕಾಶ್ಮೀರದಲ್ಲಿ ಭಯೋತ್ಪಾದಕ ಚಟುವಟಿಕೆಗಳನ್ನು ಬೆಂಬಲಿಸುವುದನ್ನು ಪಾಕಿಸ್ತಾನ ತನ್ನ ರಾಜಕೀಯದ ಒಂದು ಭಾಗವಾಗಿಯೇ ಮಾಡಿಕೊಂಡು ಬಂದಿದೆ ಎಂಬುದು ಗೊತ್ತಿರುವ ವಿಷಯವೇ ಆಗಿದೆ. ಈ ಮೂಲಕ ಅದು ತನ್ನ ಆಂತರಿಕ ಸಂಘರ್ಷ ಮತ್ತು ಆರ್ಥಿಕ ಕುಸಿತದಂತಹ ಹಲವು ವೈಫಲ್ಯಗಳನ್ನು ಮರೆಮಾಚಲು ನೋಡುತ್ತದೆ ಮತ್ತು ಜನರ ವಿಶ್ವಾಸ ಗಳಿಸಲು ಕಾಶ್ಮೀರ ವಿವಾದವನ್ನು ಜೀವಂತವಾಗಿರಿಸುವ ಯತ್ನಗಳನ್ನು ಮಾಡುತ್ತಿದೆ.

ಪಹಲ್ಗಾಮ್ ದಾಳಿಯ ಹಿಂದೆ ಪಾಕಿಸ್ತಾನದ ಕೈವಾಡ ಇರುವುದು ಖಚಿತವಾಗುತ್ತಿದ್ದಂತೆ ಭಾರತ ಸರಕಾರ ಕಠಿಣ ನಿಲುವುಗಳನ್ನು ತೆಗೆದುಕೊಂಡಿದೆ. ಪಹಲ್ಗಾಮ್ ಭಯೋತ್ಪಾದಕ ದಾಳಿಯಲ್ಲಿ ಪಾಕಿಸ್ತಾನದ ಕೈವಾಡ ಇರುವುದು ಸಾಬೀತಾಗುತ್ತಿದ್ದಂತೆ ಭಾರತ ಸರಕಾರ ಪಾಕಿಸ್ತಾನದ ವಿರುದ್ಧ ರಾಜತಾಂತ್ರಿಕ ಯುದ್ಧ ಆರಂಭಿಸಿದೆ. ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ನಡೆದ ಭದ್ರತೆ ಕುರಿತ ಸಂಪುಟ ಸಮಿತಿ (ಸಿಸಿಎಸ್) ಸಭೆಯಲ್ಲಿ 5 ಮಹತ್ವದ ನಿರ್ಧಾರಗಳನ್ನು ತೆಗೆದುಕೊಳ್ಳಲಾಗಿದೆ.

1. ಪಾಕ್ ಜೊತೆಗಿನ ಸಿಂಧೂ ಜಲ ಒಪ್ಪಂದ ಅಮಾನತುಗೊಳಿಸಲಾಗಿದೆ.

2. ಅಟ್ಟಾರಿ ಗಡಿ ಚೆಕ್‌ಪೋಸ್ಟ್ ಮುಚ್ಚುವ ನಿರ್ಧಾರ ತೆಗೆದುಕೊಳ್ಳಲಾಗಿದೆ. ಈ ಮಾರ್ಗದ ಮೂಲಕ ಗಡಿ ದಾಟಿದವರು ಮೇ 1ರೊಳಗೆ ವಾಪಸಾಗುವಂತೆ ಸೂಚಿಸಲಾಗಿದೆ.

3. ಪಾಕಿಸ್ತಾನಿ ಪ್ರಜೆಗಳ ವೀಸಾ ರದ್ದಿಗೆ ನಿರ್ಧರಿಸಲಾಗಿದೆ. ಪಾಕ್ ಪ್ರಜೆಗಳಿಗೆ ವೀಸಾ ಕೊಡದಿರಲು ನಿರ್ಧಾರ ಮಾಡಲಾಗಿದೆ. ಪಾಕಿಸ್ತಾನಿ ಪ್ರಜೆಗಳಿಗೆ ಸಾರ್ಕ್ ವೀಸಾ ವಿನಾಯಿತಿ ಯೋಜನೆ (ಎಸ್‌ವಿಇಎಸ್) ವೀಸಾಗಳ ಅಡಿಯಲ್ಲಿ ಭಾರತಕ್ಕೆ ಪ್ರಯಾಣಿಸಲು ಅನುಮತಿ ಇರುವುದಿಲ್ಲ. ಪಾಕಿಸ್ತಾನಿ ಪ್ರಜೆಗಳಿಗೆ ಹಿಂದೆ ನೀಡಲಾದ ಎಸ್‌ವಿಇಎಸ್ ವೀಸಾಗಳನ್ನು ರದ್ದುಗೊಳಿಸಲಾಗುತ್ತದೆ. ಎಸ್‌ವಿಇಎಸ್‌ವೀಸಾದಡಿಯಲ್ಲಿ ಪ್ರಸ್ತುತ ಭಾರತದಲ್ಲಿರುವ ಯಾವುದೇ ಪಾಕಿಸ್ತಾನಿ ಪ್ರಜೆ ಭಾರತವನ್ನು ತೊರೆಯಬೇಕಿದೆ.

4. ಪಾಕಿಸ್ತಾನದೊಂದಿಗಿನ ರಾಜತಾಂತ್ರಿಕ ಸಂಬಂಧ ತೀವ್ರ ಕಡಿತಗೊಳಿಸಲು ಮುಂದಾಗಿದ್ದು, ಭಾರತದಲ್ಲಿರುವ ಪಾಕಿಸ್ತಾನಿ ರಾಯಭಾರ ಕಚೇರಿಯ ಸೇನಾ, ನೌಕಾದಳ ಹಾಗೂ ವಾಯುಸೇನಾ ಸಲಹೆಗಾರರನ್ನು ಭಾರತ ತೊರೆಯುವಂತೆ ಸೂಚಿಸಲಾಗಿದೆ. ಇಸ್ಲಾಮಾಬಾದಿನಲ್ಲಿರುವ ಭಾರತದ ರಾಯಭಾರ ಕಚೇರಿಯಿಂದಲೂ ಭಾರತ ತನ್ನ ಮಿಲಿಟರಿ ಸಲಹೆಗಾರರನ್ನು ವಾಪಸ್ ಕರೆಸಿಕೊಳ್ಳಲಿದೆ.

5. ರಾಯಭಾರ ಕಚೇರಿಗಳ ಸಿಬ್ಬಂದಿ ಸಂಖ್ಯೆಯನ್ನು 55ರಿಂದ 30ಕ್ಕೆ ಇಳಿಸಲಾಗುತ್ತಿದ್ದು, ಇದು ಮೇ 1ರೊಳಗೆ ಜಾರಿಗೆ ಬರಲಿದೆ ಎಂದು ಹೇಳಲಾಗಿದೆ.

Tags:    

Writer - ವಾರ್ತಾಭಾರತಿ

contributor

Editor - Thouheed

contributor

Byline - ಆರ್.ಜೀವಿ

contributor

Similar News