ಮೆಟ್ರೊ ಪ್ರಯಾಣ ದರ ಏರಿಕೆಗೆ ಹೊಣೆಗಾರರು ಯಾರು?

ಬೆಂಗಳೂರು ಜನರ ಪ್ರೀತಿಯ ಸಾರಿಗೆಯಾಗಿರುವ ನಮ್ಮ ಮೆಟ್ರೊ ಪ್ರಯಾಣ ದರ ಹೆಚ್ಚಳಕ್ಕೆ ಪ್ರಯಾಣಿಕರ ತೀವ್ರ ಆಕ್ರೋಶ ವ್ಯಕ್ತವಾಗಿದೆ. ಶೇ.50ರಷ್ಟು ದರ ಏರಿಕೆ ಎಂದು ಬೆಂಗಳೂರು ಮೆಟ್ರೊ ರೈಲು ನಿಗಮ ಲಿಮಿಟೆಡ್ (ಬಿಎಂಆರ್‌ಸಿಎಲ್) ಹೇಳುತ್ತಿದ್ದರೂ, ಅದು ಅರ್ಧದಷ್ಟಲ್ಲ, ಎರಡು ಪಟ್ಟು ಎಂಬುದು ಪ್ರಯಾಣಿಕರ ಆರೋಪ. ಇಷ್ಟೆಲ್ಲ ಆದ ಮೇಲೆ ಈಗ ಶೇ.70ರಿಂದ ಶೇ.100ರಷ್ಟು ಹೆಚ್ಚಳವಾದ ಕಡೆ ಮಾತ್ರ ಶೇ.30ರಷ್ಟು ದರ ಕಡಿತ ಮಾಡಿದ್ದು, ಶುಕ್ರವಾರದಿಂದಲೇ ಜಾರಿಯಾಗಿದೆ. ಆದರೆ ಗರಿಷ್ಠ 90ರೂ. ದರದಲ್ಲಿ ಯಾವ ಬದಲಾವಣೆಯೂ ಇಲ್ಲ. ದರ ಏರಿಕೆಯಿಂದಾಗಿ ವೀಕೆಂಡ್‌ನಲ್ಲಿಯೂ ‘ನಮ್ಮ ಮೆಟ್ರೊ’ ಖಾಲಿ ಖಾಲಿ. ಈ ನಡುವೆ, ದರ ಏರಿಸಲು ಕರ್ನಾಟಕ ಸರಕಾರವೇ ಪ್ರಸ್ತಾವನೆ ಸಲ್ಲಿಸಿದ್ದೆಂದು ಕೇಂದ್ರ ಸರಕಾರ ಹೊಸ ಕಥೆ ಶುರು ಮಾಡಿದೆ.;

Update: 2025-02-18 15:06 IST
Editor : Thouheed | Byline : ಆರ್.ಜೀವಿ
ಮೆಟ್ರೊ ಪ್ರಯಾಣ ದರ ಏರಿಕೆಗೆ ಹೊಣೆಗಾರರು ಯಾರು?
  • whatsapp icon

ನಮ್ಮ ಮೆಟ್ರೊ ಪ್ರಯಾಣ ದರ ಫೆಬ್ರವರಿ 9ರಿಂದ ಏರಿದೆ. ಮೆಟ್ರೊ ಪರಿಷ್ಕೃತ ದರವನ್ನು ಬಿಎಂಆರ್‌ಸಿಎಲ್ ಜಾರಿ ಮಾಡುತ್ತಿದ್ದಂತೆ ಪ್ರಯಾಣಿಕರು ಆಕ್ರೋಶಗೊಂಡಿದ್ದಾರೆ.

ನಮ್ಮ ಮೆಟ್ರೊ ಪರಿಷ್ಕೃತ ದರ ಹೀಗಿತ್ತು:

0-2 ಕಿ.ಮೀ. - 10 ರೂ.

2-4 ಕಿ.ಮೀ. - 20 ರೂ.

4-6 ಕಿ.ಮೀ. - 30 ರೂ.

6-8 ಕಿ.ಮೀ. - 40 ರೂ.

8-10 ಕಿ.ಮೀ. - 50 ರೂ.

10-15 ಕಿ.ಮೀ. - 60 ರೂ.

15-20 ಕಿ.ಮೀ. - 70 ರೂ.

20-25 ಕಿ.ಮೀ. - 80 ರೂ.

25 ಕಿ.ಮೀ. ಗಿಂತ ಅಧಿಕ - 90 ರೂ.

ಹಳೆಯ ದರ ಹೇಗಿತ್ತು?

0-2 ಕಿ.ಮೀ. - 10 ರೂ.

2-4 ಕಿ.ಮೀ. - 15ರೂ.

4-6 ಕಿ.ಮೀ. - 20 ರೂ.

6-8 ಕಿ.ಮೀ. - 28ರೂ.

8-10 ಕಿ.ಮೀ. - 35ರೂ.

10-15 ಕಿ.ಮೀ. - 40 ರೂ.

15-20 ಕಿ.ಮೀ. - 50 ರೂ.

20 ಕಿ.ಮೀ. ಗಿಂತ ಮೇಲ್ಪಟ್ಟು - 60 ರೂ.

ಅಂದರೆ ಮೊದಲು ನಮ್ಮ ಮೆಟ್ರೊ ಗರಿಷ್ಠ ದರ 60 ರೂ. ಇದ್ದದ್ದು ಈಗ ಇದ್ದಕ್ಕಿದ್ದಂತೆ 90ರೂ. ಆಗಿದೆ. ಚೆನ್ನೈ, ಮುಂಬೈ, ದಿಲ್ಲಿ, ಹೈದರಾಬಾದ್, ಕೋಲ್ಕತಾ ಮುಂತಾದ ಮಹಾನಗರಗಳಿಗಿಂತಲೂ ಶೇ.40ರಿಂದ ಶೇ.60ಷ್ಟು ಹೆಚ್ಚು ದರವನ್ನು ಬೆಂಗಳೂರು ಮೆಟ್ರೊ ಪ್ರಯಾಣಿಕರು ಪಾವತಿಸಬೇಕಾಗಿದೆ.

ಇತರ ಮಹಾನಗರಗಳಲ್ಲಿನ ಮೆಟ್ರೊ ದರ ಗಮನಿಸಿದರೆ, ಅರ್ಧ ಶತಮಾನದಷ್ಟು ಇತಿಹಾಸ ಹೊಂದಿರುವ ಕೋಲ್ಕತಾ ಮೆಟ್ರೊ ದರ ದೇಶದಲ್ಲಿಯೇ ಅತಿ ಕಡಿಮೆ ಇದೆ. ನೀಲಿ, ಹಸಿರು, ನೇರಳೆ, ಕಿತ್ತಳೆ, ಹಳದಿ, ಗುಲಾಬಿ ಮಾರ್ಗಗಳನ್ನು ಹೊಂದಿರುವ ಅಲ್ಲಿನ ಕನಿಷ್ಠ ದರ 2 ಕಿ.ಮೀ.ವರೆಗೆ 5 ರೂ. ಮಾತ್ರ. ಅಲ್ಲಿ 25 ಕಿ.ಮೀ.ಗೆ 25 ರೂ. ಇದ್ದರೆ, ಮುಂಬೈಯಲ್ಲಿ 50 ರೂ. ಇದೆ. ಆದರೆ ನಮ್ಮ ಮೆಟ್ರೊದಲ್ಲಿ 90 ರೂ. ತೆರಬೇಕಾಗುತ್ತದೆ. ಮುಂಬೈಯಲ್ಲಿ ಗರಿಷ್ಠ ದರ 80 ರೂ. ಇದೆ. ಚೆನ್ನೈಯಲ್ಲಿ ಗರಿಷ್ಠ 50 ರೂ. ಇದೆ. ಹೈದರಾಬಾದ್ ಮತ್ತು ದಿಲ್ಲಿಯಲ್ಲಿ ಗರಿಷ್ಠ ದರ 60 ರೂ. ಇದೆ.

ನಮ್ಮ ಮೆಟ್ರೊ ಯಾರ ನಿಯಂತ್ರಣದಲ್ಲಿದೆ? ಮತ್ತು ಯಾರು ದರ ಏರಿಕೆ ಮಾಡುತ್ತಾರೆ?

ಬೆಂಗಳೂರು ಮೆಟ್ರೊ ರೈಲು ನಿಗಮ ಲಿಮಿಟೆಡ್ ಬೆಂಗಳೂರಿನ ನಮ್ಮ ಮೆಟ್ರೊವನ್ನು ನಿಯಂತ್ರಿಸುತ್ತದೆ. ಬಿಎಂಆರ್‌ಸಿಎಲ್ ಕೇಂದ್ರ ಮತ್ತು ಕರ್ನಾಟಕ ಸರಕಾರಗಳ ಜಂಟಿ ಉದ್ಯಮವಾಗಿದೆ. ಮೆಟ್ರೊ ಸಂಚಾರ ಆರಂಭವಾಗಿದ್ದು 2011ರಲ್ಲಿ. ಬಳಿಕ 2017ರಲ್ಲಿ ದರ ಪರಿಷ್ಕರಣೆ ಮಾಡಲಾಗಿತ್ತು. ಆಗ ರಾಜ್ಯ ಮತ್ತು ಕೇಂದ್ರ ಸರಕಾರಗಳಿಂದ ಒಪ್ಪಿಗೆ ಪಡೆದು ಪ್ರಯಾಣದರವನ್ನು ಶೇ.15ರಷ್ಟು ಹೆಚ್ಚಿಸಲಾಗಿತ್ತು. 2017ರಿಂದ ಮೆಟ್ರೊ ದರಗಳನ್ನು ಪರಿಷ್ಕರಿಸಿರಲಿಲ್ಲ. ಕೇಂದ್ರ ಸರಕಾರಕ್ಕೆ ಪತ್ರ ಬರೆಯುವ ಮೂಲಕ ಬಿಎಂಆರ್‌ಸಿಎಲ್ ದರಗಳನ್ನು ಪರಿಷ್ಕರಿಸುವಂತೆ ಮನವಿ ಮಾಡಿತು.

ಬಿಎಂಆರ್‌ಸಿಎಲ್ ಪತ್ರಕ್ಕೆ ಪ್ರತಿಕ್ರಿಯೆಯಾಗಿ, ಮದ್ರಾಸ್ ಹೈಕೋರ್ಟ್‌ನ ನಿವೃತ್ತ ನ್ಯಾಯಾಧೀಶ ನ್ಯಾ.ಆರ್. ತರಣಿ ಅವರ ನೇತೃತ್ವದಲ್ಲಿ ಕೇಂದ್ರ ಸರಕಾರ ಶುಲ್ಕ ನಿಗದಿ ಸಮಿತಿಯನ್ನು ರಚಿಸಿತು. ಸಮಿತಿ ರಾಜ್ಯ ಮತ್ತು ಕೇಂದ್ರ ಸರಕಾರಗಳ ಪ್ರತಿನಿಧಿಗಳನ್ನು ಹೊಂದಿತ್ತು. ದರ ಪರಿಷ್ಕರಣೆ ಸಂಬಂಧ ಸಮಿತಿ ನಾಗರಿಕರ ಸಲಹೆ ಕೋರಿತ್ತು. 2,000ಕ್ಕೂ ಹೆಚ್ಚು ಸಲಹೆಗಳು ಬಂದಿದ್ದವು. ಬಳಿಕ ಸಮಿತಿ ಡಿಸೆಂಬರ್ 16ರಂದು ಬಿಎಂಆರ್‌ಸಿಎಲ್‌ಗೆ ವರದಿ ಸಲ್ಲಿಸಿತ್ತು. ಜನವರಿ 17ರಂದು ನಡೆದ ಸಭೆಯಲ್ಲಿ ಸಮಿತಿ ಶಿಫಾರಸುಗಳಿಗೆ ಒಪ್ಪಿಗೆ ನೀಡಲಾಗಿತ್ತು. ಕನಿಷ್ಠ ದರ 10 ರೂ. ಇದ್ದದ್ದನ್ನು ಹಾಗೇ ಉಳಿಸಿರುವ ಬಿಎಂಆರ್‌ಸಿಎಲ್, ಗರಿಷ್ಠ ದರ 60 ರೂ. ಇದ್ದದ್ದನ್ನು 90 ರೂ.ಗೆ ಏರಿಸಿದೆ. ಆ ಪರಿಷ್ಕೃತ ದರ ಫೆಬ್ರವರಿ 9ರಿಂದ ಜಾರಿಯಾಗಿದೆ. ಇದರೊಂದಿಗೆ, ದೇಶದ ಎಲ್ಲ ಮಹಾನಗರಗಳಲ್ಲಿನ ಮೆಟ್ರೊ ದರಗಳಿಗಿಂತಲೂ ನಮ್ಮ ಮೆಟ್ರೊ ದರ ದುಬಾರಿಯಾದಂತಾಗಿದೆ. ಮೆಟ್ರೊ ಟಿಕೆಟ್ ದರ ಏರಿಕೆ ಮಾಡಿದ್ದಲ್ಲದೆ, ಪಾಸ್ ವ್ಯವಸ್ಥೆಯಲ್ಲೂ ಏರಿಕೆ ಮಾಡಿದೆ. ಈ ಪ್ರಕಾರ ಡೈಲಿ ಪಾಸ್‌ಗೆ 300 ರೂ. ಮತ್ತು ಮೂರು ದಿನದ ಪಾಸ್‌ಗೆ 600 ರೂ. ದರ ಏರಿಕೆಯಾಗಿದೆ. ಅಷ್ಟೇ ಅಲ್ಲದೆ ಸ್ಮಾರ್ಟ್ ಕಾರ್ಡ್ ಬಳಕೆದಾರರಿಗೂ ಹೊಸ ನಿಯಮ ಜಾರಿಗೊಳಿಸಲಾಗಿದೆ.

ಇನ್ನು ಮುಂದೆ ಸ್ಮಾರ್ಟ್‌ಕಾರ್ಡ್‌ನಲ್ಲಿ 90 ರೂ. ಬ್ಯಾಲೆನ್ಸ್ ಇರಲೇಬೇಕು ಎಂದು ಹೇಳಿದೆ. ಮೊದಲು ಕನಿಷ್ಠ ಮೊತ್ತ 50 ರೂ. ಇತ್ತು.

ದೊಡ್ಡ ತಕರಾರು ಎದ್ದಿರುವುದು ಪರಿಷ್ಕೃತ ದರದಲ್ಲಿನ ಗೊಂದಲದ ಬಗ್ಗೆ. ಶೇ.47ರಷ್ಟು ದರ ಹೆಚ್ಚಳ ಮಾಡಲಾಗಿದೆ ಎಂದು ಹೇಳಲಾಗುತ್ತಿದೆ. ಅದರಲ್ಲಿ ಸ್ಮಾರ್ಟ್ ಕಾರ್ಡ್ ಹೊಂದಿರುವವರಿಗೆ ಶೇ.5 ರಿಯಾಯಿತಿ ನೀಡಲಾಗಿದೆ. ಜನದಟ್ಟಣೆ ಕಡಿಮೆ ಇರುವ ಅವಧಿಯಲ್ಲಿ ಅಂದರೆ ನಾನ್ ಪೀಕ್ ಅವರ್‌ನಲ್ಲಿ ಪ್ರಯಾಣಿಸಿದರೆ ಹೆಚ್ಚುವರಿಯಾಗಿ ಶೇ.5 ರಿಯಾಯಿತಿ ದೊರೆಯಲಿದೆ. ರಾಷ್ಟ್ರೀಯ ಹಬ್ಬಗಳ ಸಂದರ್ಭ ಮತ್ತು ಎಲ್ಲ ರವಿವಾರ ಶೇ.10 ರಿಯಾಯಿತಿ ಇರುತ್ತದೆ. ಈಗ ಪ್ರಯಾಣಿಕರಿಗೆ ಗೊಂದಲವಾಗಿರುವುದು, ಕಿ.ಮೀ. ಆಧಾರದಲ್ಲಿ ಪ್ರಯಾಣ ದರವನ್ನು ಹೆಚ್ಚಿಸಿ, ಅದನ್ನು ಸ್ಟೇಷನ್‌ಗಳಿಗೆ ಅನ್ವಯ ಮಾಡುತ್ತಿರುವುದರಿಂದ. ಶೇ.47ರಷ್ಟು ಹೆಚ್ಚಳ ಎಂದು ಹೇಳಲಾಗಿದ್ದರೂ, ಹಲವು ಕಡೆಗಳಲ್ಲಿ ಹಿಂದಿನ ದರಕ್ಕಿಂತಲೂ ಡಬಲ್ ಅಂದರೆ ಶೇ.100ರಷ್ಟು ಹೆಚ್ಚು ದರ ನೀಡಬೇಕಾಗಿದೆ.

ನಮ್ಮ ಮೆಟ್ರೊ ದರಗಳಲ್ಲಿ, ವಿಶೇಷವಾಗಿ 6ರಿಂದ 25 ಕಿ.ಮೀ. ನಡುವಿನ ಅಂತರದ ದರದಲ್ಲಿನ ಅಸಹಜ ಏರಿಕೆ ತಾಂತ್ರಿಕ ದೋಷಗಳಿಂದ ಉಂಟಾಗಿರಬಹುದು ಎನ್ನಲಾಗುತ್ತಿದೆ. ಹಲವಾರು ಮಾರ್ಗಗಳಲ್ಲಿ ದರಗಳು ಶೇ.100ರಷ್ಟು ಹೆಚ್ಚಾಗಿದೆ ಎಂದು ಅನೇಕ ಪ್ರಯಾಣಿಕರು ದೂರಿದ್ದಾರೆ. ಇದರಿಂದಾಗಿ ನಿಯಮಿತವಾಗಿ ಪ್ರಯಾಣಿಸುವವರು, ವಿಶೇಷವಾಗಿ ವಿದ್ಯಾರ್ಥಿಗಳು ತೀವ್ರ ತೊಂದರೆ ಅನುಭವಿಸುವಂತಾಗಿದೆ. ಉದಾಹರಣೆಗೆ, 6.7 ಕಿ.ಮೀ. ಎಂ.ಜಿ. ರಸ್ತೆ-ಬೈಯಪ್ಪನಹಳ್ಳಿ ಪ್ರಯಾಣದ ದರ ಈಗ 40 ರೂ. ಆಗಿದೆ. 20ರಿಂದ 40 ರೂ.ಗೆ ಏರಿದೆ. ತಾತ್ವಿಕವಾಗಿ ಈ ದರ 30 ರೂ.ಗಿಂತ ಹೆಚ್ಚಿರಬಾರದು. ಟಿನ್ ಫ್ಯಾಕ್ಟರಿಯಿಂದ ಅಂಬೇಡ್ಕರ್ ನಿಲ್ದಾಣಕ್ಕೆ ಪ್ರತಿ ದಿನ 30 ರೂ. ಕೊಟ್ಟು ಓಡಾಡುತ್ತಿದ್ದ ಪ್ರಯಾಣಿಕರು ಇಂದು ಏಕಾಏಕಿ 60 ರೂ.ಗಳನ್ನು ಕೊಡಬೇಕಾಗಿದೆ. ಅದೇ ರೀತಿ, ಬೆನ್ನಿಗಾನಹಳ್ಳಿಯಿಂದ ಡಾ. ಬಿ.ಆರ್. ಅಂಬೇಡ್ಕರ್ ನಿಲ್ದಾಣ ಅಂದರೆ ವಿಧಾನಸೌಧಕ್ಕೆ ಮೊದಲು 26.6 ರೂ. ಇತ್ತು. ಈಗ 60 ರೂ. ಆಗಿದೆ ಎಂದು ದಾಖಲೆ ಸಮೇತ ಪ್ರಯಾಣಿಕರೊಬ್ಬರು ಮೆಟ್ರೊ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ. ಇತರ ಹಲವು ಮಾರ್ಗಗಳಲ್ಲಿ ಕೂಡ ಇದೇ ರೀತಿಯಾಗಿದೆ. ಶೇ.5ರಷ್ಟು ಪ್ರಯಾಣ ದರ ಏರಿಸಿದರೆ ಪರವಾಗಿಲ್ಲ. ಆದರೆ ಶೇ.45, 50ರಷ್ಟು ಪ್ರಯಾಣ ದರ ಏರಿಸಿದರೆ ಹೇಗೆ ನಾವು ಪ್ರಯಾಣಿಸುವುದು ಎಂದು ಹಲವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ದರ ಏರಿಕೆಯ ಜೊತೆಗೆ, ಸ್ಮಾರ್ಟ್ ಕಾರ್ಡ್‌ಗಳಿಗೆ ಕನಿಷ್ಠ ಮೊತ್ತ ಹೆಚ್ಚಳದ ಬಗ್ಗೆ ಕೂಡ ಅನೇಕ ಪ್ರಯಾಣಿಕರು ದೂರು ನೀಡುತ್ತಲೇ ಇದ್ದಾರೆ. ಕ್ಯೂಆರ್ ಕೋಡ್ ಟಿಕೆಟ್‌ಗಳ ಮೇಲಿನ ಶೇ.5ರಷ್ಟು ರಿಯಾಯಿತಿಯನ್ನು ಸಹ ತೆಗೆದುಹಾಕಲಾಗಿದ್ದು, ಇದರ ಬಗ್ಗೆಯೂ ಪ್ರಯಾಣಿಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ದರ ಏರಿಕೆ ಜಾರಿಯಾದ ಬಳಿಕ ಮೊದಲ ವಾರದ ದಿನವಾದ ಸೋಮವಾರ ಅಂದರೆ ಫೆಬ್ರವರಿ 10ರಂದು ಒಟ್ಟಾರೆ ಪ್ರಯಾಣಿಕರ ಸಂಖ್ಯೆ 8,28,149 ರಷ್ಟಿತ್ತು. ಈ ವರ್ಷ ನಾಲ್ಕು ಸೋಮವಾರಗಳಲ್ಲಿ ದಾಖಲಾದ 8.8 ಲಕ್ಷ ಪ್ರಯಾಣಿಕರ ಸಂಖ್ಯೆಗಿಂತ ಇದು ಶೇ. 6ರಷ್ಟು ಕಡಿಮೆಯಾಗಿದೆ. ಶುಲ್ಕ ಏರಿಕೆಯ ನಂತರ ದಿನಕ್ಕೆ ಹೆಚ್ಚುವರಿಯಾಗಿ 55-60 ಲಕ್ಷ ರೂ. ಗಳಿಸುವ ಅಂದಾಜು ಮಾಡಿರುವ ಬಿಎಂಆರ್‌ಸಿಎಲ್, ಪ್ರಯಾಣಿಕರ ಸಂಖ್ಯೆಯಲ್ಲಿ ಶೇ. 1-2ರಷ್ಟು ಇಳಿಕೆಯಾಗುವುದನ್ನೂ ಎದುರಿಸಬೇಕಾಗಬಹುದು.

ಈ ವರ್ಷ ಪ್ರತಿ ಸೋಮವಾರದ ಪ್ರಯಾಣಿಕರ ಸಂಖ್ಯೆ ಗಮನಿಸುವುದಾದರೆ,

ಜನವರಿ 6 - 8,61,593

ಜನವರಿ 13 - 7,84,539

ಜನವರಿ 20 - 8,79,537

ಜನವರಿ 27 - 9,09,756

ಫೆಬ್ರವರಿ 3 - 8,70,147

ಫೆಬ್ರವರಿ 10 - 8,28,149

ಮೆಟ್ರೊ ಟಿಕೆಟ್ ದರ ಏರಿಕೆಗೆ ಸಾರ್ವಜನಿಕರು ತೀವ್ರ ವಿರೋಧ ವ್ಯಕ್ತಪಡಿಸಿದ್ದರು. ಬೋಗಿಗಳನ್ನು ವಿಸ್ತರಣೆ ಮಾಡಿಲ್ಲ, ಜನದಟ್ಟಣೆ ಜಾಸ್ತಿ ಇದ್ದರೂ ಆ ಬಗ್ಗೆ ಯೋಚಿಸಿಲ್ಲ, ಹಳದಿ ಮಾರ್ಗವನ್ನು ಇನ್ನೂ ಆರಂಭಿಸಿಲ್ಲ, ಎಷ್ಟೋ ಮೆಟ್ರೊ ಸ್ಟೇಷನ್‌ಗಳು ಸಮಯಕ್ಕೆ ಸರಿಯಾಗಿ ಶುರುವಾಗುತ್ತಿಲ್ಲ, ಕೆಲವು ಕಡೆ ನಿರ್ವಹಣೆ ಸರಿಯಿಲ್ಲ, ಇಷ್ಟೆಲ್ಲಾ ಇದ್ದರೂ ಇದ್ದಕ್ಕಿದ್ದಂತೆ ದರ ಏರಿಕೆ ಮಾಡಲಾಗಿದೆ ಎಂದು ಬಿಎಂಆರ್‌ಸಿಎಲ್ ವಿರುದ್ಧ ಜನಸಾಮಾನ್ಯರು ಆಕ್ರೋಶ ವ್ಯಕ್ತಪಡಿಸಿದ್ದರು. ಇಷ್ಟು ಪ್ರಮಾಣದ ದರ ಏರಿಕೆ ಅಗತ್ಯವಿತ್ತೇ? ಎಂಬುದು ಸಾರ್ವಜನಿಕರ ಪ್ರಶ್ನೆಯಾಗಿತ್ತು.

ಮೆಟ್ರೊ ರೈಲುಗಳು ಪ್ರಯಾಣಿಕರಿಂದ ತುಂಬಿ ತುಳುಕುತ್ತಿರುತ್ತವೆ. ಯಾವುದೇ ನಷ್ಟ ಉಂಟಾಗಿಲ್ಲ. ಲಾಭದ ಹಾದಿಯಲ್ಲಿ ಮೆಟ್ರೊ ಓಡುತ್ತಿದೆ. ಹಾಗಿದ್ದರೂ ದರ ಏರಿಕೆಯನ್ನು ಏಕೆ ಮಾಡಬೇಕಾಗಿತ್ತು ಎಂದು ಹಲವು ಪ್ರಯಾಣಿಕರು ಪ್ರಶ್ನಿಸಿದ್ದರು. ಪ್ರತಿದಿನ ಮೆಟ್ರೊದಲ್ಲಿ ಸಂಚರಿಸುವ ಮಹಿಳೆಯರು, ಮಕ್ಕಳು ಸೇರಿದಂತೆ ಹಲವರು ದರ ಏರಿಕೆಯಿಂದ ಬೇಸರಗೊಂಡು ಸರಕಾರಕ್ಕೆ ಹಿಡಿಶಾಪ ಹಾಕಿದ್ದರು.

ನಮ್ಮ ಮೆಟ್ರೊ ಟಿಕೆಟ್ ದರ ಏರಿಕೆಯಿಂದ ಪ್ರಯಾಣಿಕರಿಗೆ ಭಾರೀ ಹೊರೆಯಾಗಿರುವುದರ ಬಗ್ಗೆ ಖುದ್ದಾಗಿ ಸಿಎಂ ಸಿದ್ದರಾಮಯ್ಯ ಪ್ರತಿಕ್ರಿಯಿಸಿದ್ದರು. ಕೆಲವು ಸ್ಟೇಜ್‌ಗೆ ದುಪ್ಪಟ್ಟು ದರ ಹೆಚ್ಚಳ ಮಾಡಲಾಗಿದೆ, ಪ್ರಯಾಣಿಕರ ಹಿತ ದೃಷ್ಟಿಯಿಂದ ಅದನ್ನು ಕಡಿತ ಮಾಡುವಂತೆ ಬಿಎಂಆರ್‌ಸಿಎಲ್‌ಗೆ ಅವರು ಸೂಚನೆ ನೀಡಿದ್ದರು. ಕೆಲವು ಸ್ಟೇಜ್‌ಗಳಿಗೆ ಯಥೇಚ್ಛ ದರ ಏರಿಕೆಯಾಗಿದೆ. ಆ ದರ ಇಳಿಕೆ ಮಾಡುವಂತೆ ಬಿಎಂಆರ್‌ಸಿಎಲ್ ವ್ಯವಸ್ಥಾಪಕ ನಿರ್ದೇಶಕರಿಗೆ ಸೂಚನೆ ನೀಡಿರುವುದಾಗಿ ಸಿಎಂ ಸಿದ್ದರಾಮಯ್ಯ ಎಕ್ಸ್‌ನಲ್ಲಿ ಹೇಳಿಕೊಂಡಿದ್ದರು. ‘‘ಬಿಎಂಆರ್‌ಸಿಎಲ್ ಪರಿಷ್ಕರಿಸಿರುವ ಪ್ರಯಾಣ ದರ ಏರಿಕೆ ಹಲವು ರೀತಿಯ ವೈಪರೀತ್ಯಗಳಿಂದ ಕೂಡಿದ್ದು, ಕೆಲವು ಕಡೆಗಳಲ್ಲಿ ಪ್ರಯಾಣ ದರ ದುಪ್ಪಟ್ಟಾಗಿರುವುದನ್ನು ಗಮನಿಸಿದ್ದೇನೆ. ಇದರ ವಿರುದ್ಧ ವ್ಯಕ್ತವಾದ ಸಾರ್ವಜನಿಕರ ವಿರೋಧವನ್ನು ಪರಿಗಣಿಸಿ, ಎಲ್ಲೆಲ್ಲಿ ಅಸಹಜ ರೀತಿಯಲ್ಲಿ ದರ ಏರಿಕೆಯಾಗಿದೆಯೋ ಅಂಥ ಕಡೆಗಳಲ್ಲಿ ಪ್ರಯಾಣ ದರ ಇಳಿಸುವಂತೆ ಬಿಎಂಆರ್‌ಸಿಎಲ್ ವ್ಯವಸ್ಥಾಪಕ ನಿರ್ದೇಶಕರಿಗೆ ತಿಳಿಸಿದ್ದೇನೆ’’ ಎಂದಿದ್ದರು. ‘‘ಮೆಟ್ರೊ ರೈಲು ವ್ಯವಸ್ಥೆ ದೊಡ್ಡ ಪ್ರಮಾಣದಲ್ಲಿ ಬಂಡವಾಳ ಹೂಡಿಕೆ ಮಾಡಬೇಕಾಗಿರುವ ಸಾರ್ವಜನಿಕ ಸಾರಿಗೆ ವ್ಯವಸ್ಥೆಯಾಗಿರುವ ಕಾರಣ ಪ್ರಯಾಣ ದರ ಪರಿಷ್ಕರಣೆ ಅನಿವಾರ್ಯವಾಗಿತ್ತು ಎನ್ನುವುದು ನಿಜವಾದರೂ, ಅಂತಿಮವಾಗಿ ಪ್ರಯಾಣಿಕರ ಹಿತರಕ್ಷಣೆ ಮಾಡಬೇಕಾಗಿರುವುದು ನಮ್ಮ ಕರ್ತವ್ಯ ಎನ್ನುವುದನ್ನು ಬಿಎಂಆರ್‌ಸಿಎಲ್ ಗಮನಕ್ಕೆ ತಂದಿದ್ದೇನೆ’’ ಎಂದು ಟ್ವೀಟ್ ಮಾಡಿದ್ದರು.

ದರ ಏರಿಕೆಗೆ ಸಾರ್ವಜನಿಕರಿಂದ ತೀವ್ರ ವಿರೋಧ ವ್ಯಕ್ತವಾಗಿರುವ ಹಿನ್ನೆಲೆಯಲ್ಲಿ, ಬಿಎಂಆರ್‌ಸಿಎಲ್ ಪರಿಷ್ಕೃತ ದರ ಪರಿಶೀಲನೆ ಮಾಡುವುದಾಗಿ ಹೇಳಿತ್ತು. ಅದರಂತೆ, ಶುಕ್ರವಾರ ಬಿಎಂಆರ್‌ಸಿಎಲ್ ಎಂಡಿ ಮಹೇಶ್ವರ್ ರಾವ್ ಸುದ್ದಿಗೋಷ್ಠಿ ನಡೆಸಿದರು. ನಮ್ಮ ಮೆಟ್ರೊ ನಿರ್ವಹಣೆಯ ವೆಚ್ಚ, ಸಾಲ, ಅದರ ಬಡ್ಡಿ ಮುಂತಾದ ಅಂಶಗಳನ್ನು ಗಮನದಲ್ಲಿಟ್ಟು ದರ ಏರಿಕೆ ಮಾಡಲಾಗಿದೆ ಎಂದರು. ಆದರೆ ಕೆಲವು ಕಡೆ ದರವನ್ನು ಇಳಿಕೆ ಮಾಡಿ ಶುಕ್ರವಾರವೇ ಪರಿಷ್ಕೃತ ದರ ಜಾರಿ ಮಾಡುವುದಾಗಿ ತಿಳಿಸಿದರು.

ದರ ಇಳಿಕೆ ಹೇಗೆ?

ನಮ್ಮ ಮೆಟ್ರೊ ಪ್ರಯಾಣ ದರ ಸ್ಟೇಜ್ ಆಧಾರದಲ್ಲಿ ಇಳಿಕೆ ಮಾಡಲಾಗುತ್ತದೆ. ದರ ಶೇ.70ರಿಂದ ಶೇ.100 ರವರೆಗೆ ಹೆಚ್ಚಳವಾಗಿರುವ ನಿಲ್ದಾಣಗಳ ಮಧ್ಯೆ ಇಳಿಕೆ ಮಾಡಲಾಗುತ್ತದೆ. ಶೇ.100 ದರ ಏರಿಕೆಯಾಗಿದ್ದರೆ ಅಲ್ಲಿ ಶೇ.30 ಮಾತ್ರ ಕಡಿತ ಮಾಡಲಾಗುತ್ತದೆ. ಕನಿಷ್ಠ 10 ರೂ. ಗರಿಷ್ಠ 90 ರೂ. ದರದಲ್ಲಿ ಯಾವ ಬದಲಾವಣೆಯೂ ಇಲ್ಲ. ದುಪ್ಪಟ್ಟು ದರ ಏರಿಕೆಯಾಗಿರುವ ನಿಲ್ದಾಣಗಳಲ್ಲಿನ ದರವನ್ನು ಪರಿಷ್ಕರಿಸಲಾಗುವುದು. ದರ ಡಬಲ್ ಆಗಿರುವ ಕಡೆ ಯಾವ ಸ್ಟೇಜ್‌ಗಳ ನಡುವೆ ದರ ತುಂಬಾ ಹೆಚ್ಚಾಗಿದೆಯೋ ಆ ಸ್ಟೇಜ್‌ಗಳ ದರಗಳನ್ನು ಮರ್ಜ್ ಮಾಡಲಾಗುತ್ತದೆ. ಇದರಿಂದ ಕಡಿಮೆ ದೂರದಲ್ಲಿ ಪ್ರಯಾಣಿಸುವವರಿಗೆ ಕೊಂಚ ರಿಲೀಫ್ ಸಿಗಲಿದೆ.

ದರ ಇಳಿಕೆಯಾಗುವುದೇ ಎಂಬ ಪ್ರಶ್ನೆಗೆ ಉತ್ತರವಂತೂ ಸಿಕ್ಕಂತಾಗಿದೆ. ಆದರೆ, ಅದು ಜನರ ಆಗ್ರಹಕ್ಕೆ ಮಣಿದಿದ್ದೇವೆ ಎಂದು ತೋರಿಸಿಕೊಳ್ಳುವಷ್ಟಕ್ಕೇ ಮುಗಿದಿದೆ. ಮೂಗಿಗೆ ತುಪ್ಪ ಸವರಿದ ಹಾಗೆ ಮಾಡಿ ಬಿಎಂಆರ್‌ಸಿಎಲ್ ಕೈತೊಳೆದುಕೊಂಡಿದೆ. ದರ ಏರಿಕೆ ಕಾರಣದಿಂದಾಗಿ ಈಗ ವೀಕೆಂಡ್‌ನಲ್ಲಿಯೂ ಮೆಟ್ರೊದಲ್ಲಿ ಹೋಗಲು ಜನರು ಆಸಕ್ತಿ ತೋರಿಸುತ್ತಿಲ್ಲ ಎಂದು ವರದಿಗಳು ಹೇಳುತ್ತಿವೆ.

ಇದೆಲ್ಲದರ ನಡುವೆ, ಮೆಟ್ರೊ ದರ ಏರಿಕೆ ಬಗ್ಗೆ ಕಾಂಗ್ರೆಸ್ ಸರಕಾರದ ವಿರುದ್ಧ ಬಿಜೆಪಿಯವರು ಹರಿಹಾಯ್ದದ್ದು, ದರ ಏರಿಸಿರುವುದು ನಾವಲ್ಲ ಎಂದು ಸರಕಾರ ಹೇಳುತ್ತಿರುವುದು ಈ ಜಟಾಪಟಿ ನಡೆಯಿತು. ದರ ಏರಿಕೆ ಹೊಣೆ ರಾಜ್ಯ ಸರಕಾರದ್ದೋ, ಕೇಂದ್ರ ಸರಕಾರದ್ದೋ ಎಂಬ ಚರ್ಚೆಗಳೂ ಜೋರಾಗಿದ್ದವು. ಮೆಟ್ರೊ ರೈಲು ದರ ಏರಿಕೆಗೆ ರಾಜ್ಯ ಸರಕಾರದ ಮೇಲೆ ಹೊಣೆಗಾರಿಕೆ ಹೊರಿಸುತ್ತಿರುವ ಬಿಜೆಪಿ ನಾಯಕರ ವಿರುದ್ಧ ಮುಖ್ಯಮಂತ್ರಿ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದ್ಧರು. ಮೆಟ್ರೊ ದರ ಏರಿಕೆ ಕುರಿತು ಬಿಜೆಪಿ ನಾಯಕರು ಸುಳ್ಳು ಸುದ್ದಿಗಳನ್ನು ಹರಡಲು ಪ್ರಯತ್ನಿಸುತ್ತಿದ್ದಾರೆ ಮತ್ತು ಸಾರ್ವಜನಿಕರನ್ನು ದಾರಿ ತಪ್ಪಿಸುತ್ತಿದ್ದಾರೆ ಎಂದು ಸಿದ್ದರಾಮಯ್ಯ ಹೇಳಿದ್ದರು. ಬಿಎಂಆರ್‌ಸಿಎಲ್ ಸ್ವತಂತ್ರ ಸಂಸ್ಥೆ. ರಾಜ್ಯ ಸರಕಾರಕ್ಕೆ ಸಂಪೂರ್ಣ ನಿಯಂತ್ರಣವಿಲ್ಲ. ಭಾರತದ ಯಾವುದೇ ಇತರ ಮೆಟ್ರೊ ನಿಗಮದಂತೆ, ಬಿಎಂಆರ್‌ಸಿಎಲ್ ಕೂಡ 2002ರ ಮೆಟ್ರೊ ರೈಲು (ಕಾರ್ಯಾಚರಣೆ ಮತ್ತು ನಿರ್ವಹಣೆ) ಕಾಯ್ದೆಯಡಿಯಲ್ಲಿ ಕಾರ್ಯನಿರ್ವಹಿಸುತ್ತದೆ ಎಂದು ಸಿದ್ದರಾಮಯ್ಯ ಸ್ಪಷ್ಟಪಡಿಸಿದ್ದರು.

ಆದರೆ, ರೈಲ್ವೆ ಸಚಿವ ಅಶ್ವಿನಿ ವೈಷ್ಣವ್, ಮೆಟ್ರೊ ದರ ಹೆಚ್ಚಳ ಕುರಿತು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಜನರು ಪ್ರಶ್ನಿಸಬೇಕು. ಕೇಂದ್ರ ಸರಕಾರವನ್ನಲ್ಲ ಎಂದಿದ್ದಾರೆ. ನಗರದ ನೈಜ ಪರಿಸ್ಥಿತಿ ರಾಜ್ಯ ಸರಕಾರಕ್ಕೆ ಗೊತ್ತಿರುತ್ತದೆ. ಮೆಟ್ರೊದ ಮೇಲೆ ಹೆಚ್ಚಿನ ಹಕ್ಕು ಮತ್ತು ಅಧಿಕಾರಗಳು ರಾಜ್ಯ ಸರಕಾರಗಳಿಗೆ ಇರುತ್ತದೆ. ದರ ಏರಿಕೆ ಸಮಿತಿ ದಿಲ್ಲಿಯಲ್ಲಿ ಇಲ್ಲ. ದರ ಏರಿಕೆ ಪ್ರಸ್ತಾವನೆಯನ್ನು ರಾಜ್ಯ ಸರಕಾರಗಳು ಸಿದ್ಧಪಡಿಸುತ್ತವೆ. ಮೆಟ್ರೊ ಪ್ರಯಾಣ ದರ ಏರಿಕೆಗೆ ಪ್ರಸ್ತಾವನೆ ಸಲ್ಲಿಸಿದ್ದು ರಾಜ್ಯ ಸರಕಾರ ಎಂದಿದ್ದಾರೆ.

ಅಂತೂ, ಮೆಟ್ರೊ ಪ್ರಯಾಣ ದರ ಏರಿಕೆ ವಿಚಾರದಲ್ಲಿ ಕೇಂದ್ರ ಹಾಗೂ ರಾಜ್ಯ ಸರಕಾರದ ನಡುವೆ ಇನ್ನೂ ಎಷ್ಟು ದಿನ ಜಟಾಪಟಿ ಮುಂದುವರಿಯಲಿದೆಯೋ ಗೊತ್ತಿಲ್ಲ.

ಆದರೆ ಈ ಏರಿಕೆಯಿಂದಾಗಿ ಜನಸಾಮಾನ್ಯರು ಮಾತ್ರ ಅನಿವಾರ್ಯವಾಗಿ ಇತರ ಸಾರಿಗೆ ವ್ಯವಸ್ಥೆಗಳತ್ತ ಮುಖ ಮಾಡುವಂತಾಗಿದೆ.

Tags:    

Writer - ವಾರ್ತಾಭಾರತಿ

contributor

Editor - Thouheed

contributor

Byline - ಆರ್.ಜೀವಿ

contributor

Similar News