ಬೇಸಿಗೆಯಲ್ಲಿ ಮೂಗಿನಲ್ಲಿ ರಕ್ತಸ್ರಾವವಾಗುವುದನ್ನು ತಡೆಯಲು ಹೀಗೆ ಮಾಡಿ....
ಬೇಸಿಗೆ ಕಾಲ ಬಂದಿದೆ. ಶಾಲೆಗಳಿಗೆ ರಜೆಯೂ ಸಿಕ್ಕಿದೆ. ಹೊರಗೆ ಸುಡುಬಿಸಿಲು ಕಾಯುತ್ತಿದೆ. ಪರೀಕ್ಷೆಗಳನ್ನುಮುಗಿಸಿದ ಖುಷಿಯಲ್ಲಿರುವ ಮಕ್ಕಳು ಇಡೀ ದಿನ ಬಿಸಿಲಿನಲ್ಲಿ ಆಟವಾಡುವುದನ್ನೇ ಇಷ್ಟಪಡುತ್ತಾರೆ. ಇದು ಸಹಜವೂ ಹೌದು. ಬೇಸಿಗೆ ಮಕ್ಕಳಿಗೆ ಸಂತಸ ತರುತ್ತದೆ. ಹಾಗೆಯೇ ತಾಯಂದಿರ ಪಾಲಿಗೆ ಆತಂಕವನ್ನೂ ತರುತ್ತದೆ. ಉರಿಯುವ ಬಿಸಿಲು ಮಕ್ಕಳಲ್ಲಿ ಉಂಟು ಮಾಡುವ ಸಮಸ್ಯೆಗಳನ್ನು ತಾಯಿಯೇ ನಿರ್ವಹಿಸಬೇಕಾಗುತ್ತದೆ. ಅಂತಹ ಸಮಸ್ಯೆಗಳಲ್ಲಿ ಮೂಗಿನಲ್ಲಿ ರಕ್ತಸ್ರಾವ ಒಂದಾಗಿದೆ.
ಮೂಗಿನಲ್ಲಿ ರಕ್ತಸ್ರಾವ ಮಕ್ಕಳಲ್ಲಿ ಮತ್ತು ವಯಸ್ಕರಲ್ಲಿ ಸಾಮಾನ್ಯವಾಗಿದೆ. ಅದು ತುಂಬ ತಲೆ ಬಿಸಿ ಮಾಡಿಕೊಳ್ಳಬೇಕಾದ ವಿಷಯವೇನಲ್ಲ, ಆದರೂ ಅದು ಹೆಚ್ಚಿನವರಲ್ಲಿ ಆತಂಕಕ್ಕೆ ಕಾರಣವಾಗುವುದಂತೂ ಹೌದು. ಮೂಗಿನಲ್ಲಿ ರಕ್ತಸ್ರಾವವಾಗುವುದಕ್ಕೆ ವೈಜ್ಞಾನಿಕವಾಗಿ ಱ ಎಪಿಸ್ಟೆಕ್ಸಿಸ್ ೞಎಂದು ಕರೆಯುತ್ತಾರೆ. ಮೂಗಿನ ಹೊಳ್ಳೆಗಳ ಒಳಭಿತ್ತಿಗಳಲ್ಲಿರುವ ರಕ್ತನಾಳಗಳಲ್ಲಿ ಉಂಟಾಗುವ ಸಣ್ಣರಂಧ್ರ ರಕ್ತಸ್ರಾವಕ್ಕೆ ಕಾರಣವಾಗುತ್ತದೆ.
ಬೇಸಿಗೆ ಮತ್ತು ಮೂಗಿನಲ್ಲಿ ರಕ್ತಸ್ರಾವ ಜೊತೆಜೊತೆಯಾಗಿಯೇ ಸಾಗುತ್ತವೆ, ಇದರ ಹಿಂದೆ ಹಲವಾರು ಕಾರಣಗಳಿವೆ. ನಮ್ಮ ದೇಶದ ಕೆಲವೆಡೆಗಳಲ್ಲಿ ಬೇಸಿಗೆ ಒಣಗಾಳಿಯಿಂದ ಕೂಡಿದ್ದು ಬಿಸಿಲೂ ಹೆಚ್ಚಾಗಿರುತ್ತದೆ, ಇದರಿಂದಾಗಿ ಮೂಗಿನಲ್ಲಿಯ ಮೃದುವಾದ ಒಳಭಿತ್ತಿಗಳು ಸಡಿಲಗೊಳ್ಳುತ್ತವೆ ಮತ್ತು ಲೋಳೆಯ ರಕ್ಷಣಾತ್ಮಕ ಪದರವು ಒಣಗುತ್ತದೆ.
ಬೇಸಿಗೆಯಲ್ಲಿ ಅಲರ್ಜಿಗಳೂ ತೀವ್ರಗೊಳ್ಳುತ್ತವೆ. ಮೂಗಿನಲ್ಲಿ ಬೆರಳು ಹಾಕುವುದರಿಂದ ಮತ್ತು ಮೂಗನ್ನು ತೀವ್ರವಾಗಿ ಉಜ್ಜಿಕೊಂಡಾಗ ಒಳಭಿತ್ತಿಗಳಿಗೆ ಹಾನಿಯುಂಟಾಗುತ್ತದೆ ಮತ್ತು ರಕ್ತನಾಳದಲ್ಲಿ ರಂಧ್ರವುಂಟಾಗುತ್ತದೆ. ಇದು ರಕ್ತಸ್ರಾವಕ್ಕೆ ಮುಖ್ಯಕಾರಣವಾಗಿದೆ.
ಒಣಗಾಳಿಯ ಉಸಿರಾಟದಿಂದ ಲೋಳೆಯ ರಕ್ಷಣಾತ್ಮಕ ಪದರವು ಒಣಗುತ್ತದೆ. ಇದು ನಮ್ಮ ಮೂಗಿನಲ್ಲಿ ಏನೋ ಅಸಹನೆಯನ್ನು ಉಂಟು ಮಾಡುತ್ತದೆ. ಇಂತಹ ಸಂದರ್ಭದಲ್ಲಿ ಮೂಗಿನಲ್ಲಿ ಬೆರಳು ಹಾಕುವುದೋ ಮೂಗನ್ನು ಬಲವಾಗಿ ಉಜ್ಜಿಕೊಳ್ಳುವದೋ ಮಾಡುತ್ತೇವೆ.
ಕೆಲವೊಮ್ಮೆ ಮೂಗಿನಲ್ಲಿ ಏನೋ ಸಿಕ್ಕಿಹಾಕಿಕೊಂಡಂತೆ ಅನಿಸುತ್ತದೆ ಮತ್ತು ಅದನ್ನು ಹೊರಗೆ ಹಾಕಲು ಬಲವಂತದಿಂದ ಮೂಗಿನ ಮೂಲಕ ಗಾಳಿಯನ್ನು ಹೊರದಬ್ಬಲು ಪ್ರಯತ್ನಿಸು ತ್ತೇವೆ. ನಿರಂತರವಾಗಿ ಹೀಗೆ ಮಾಡುತ್ತಿದ್ದರೆ ಅದು ಮೂಗಿನಿಂದ ರಕ್ತಸ್ರಾವಕ್ಕೆ ಕಾರಣವಾಗುತ್ತದೆ.
ಮೂಗಿನಿಂದ ರಕ್ತಸ್ರಾವವಾಗುವುದರಲ್ಲಿ ಅಲರ್ಜಿಗಳೂ ಮುಖ್ಯಪಾತ್ರ ವಹಿಸುತ್ತವೆ. ಋತುಮಾನದಲ್ಲಿ ಬದಲಾವಣೆಗಳು ಜನರಲ್ಲಿ ಆರೋಗ್ಯ ಸಮಸ್ಯೆಗಳನ್ನುಂಟು ಮಾಡುತ್ತವೆ. ಅಲರ್ಜಿಯ ನೇರ ಪರಿಣಾಮ ಮೂಗಿನಲ್ಲಿ ಕಂಡು ಬರುತ್ತದೆ. ಅದು ಒಣಗುವುದರೊಂದಿಗೆ ತುರಿಸತೊಡಗುತ್ತದೆ ಮತ್ತು ಇದು ರಕ್ತಸ್ರಾವವಾಗುವಂತೆ ಮಾಡುತ್ತದೆ.
ಶರೀರದ ಉಷ್ಣತೆಯಲ್ಲಿ ಹೆಚ್ಚಳ ಮತ್ತು ಸಾಕಷ್ಟು ಪ್ರಮಾಣದಲ್ಲಿ ದ್ರವಗಳನ್ನು ಸೇವಿಸದಿರುವುದು ಕೂಡ ಮೂಗಿನಲ್ಲಿ ರಕ್ತಸ್ರಾವವಾಗುವಂತೆ ಮಾಡುತ್ತದೆ. ಮೂಗಿನಲ್ಲಿ ರಕ್ತಸ್ರಾವವಾಗುತ್ತಿದ್ದರೆ ಅದನ್ನು ತಡೆಯಲು ಸೂಕ್ತ ಕಾಳಜಿ ವಹಿಸುವುದು ಮುಖ್ಯವಾಗುತ್ತದೆ.
ನಿಮಗೆ ಆಗಾಗ್ಗೆ ಮೂಗಿನಲ್ಲಿ ರಕ್ತಸ್ರಾವವಾಗುತ್ತಿದ್ದರೆ ಅದನ್ನು ತಡೆಯಲು ಕೆಲವು ಪರಿಹಾರಗಳು ಇಲ್ಲಿವೆ....
► ಪ್ರಥಮ ಚಿಕಿತ್ಸೆ
ಮೂಗಿನಿಂದ ರಕ್ತ ಸುರಿಯುತ್ತಿದ್ದರೆ ಅದನ್ನು ತಡೆಯಲು ಮೊದಲು ಮಾಡಬೇಕಾದ ಕೆಲಸವೆಂದರೆ ಹೊಳ್ಳೆಯನ್ನು ಅದುಮಿ ಹಿಡಿಯುವುದು. ಮೂಗಿನ ಮೃದುವಾದ ಭಾಗವನ್ನು ಐದು ನಿಮಿಷಗಳ ಕಾಲ ಅದುಮಿ ತಲೆಯನ್ನು ಹಿಂದಕ್ಕೆ ವಾಲಿಸಿ. ಬಳಿಕ ಮೂಗಿನ ಮೇಲಿನ ಒತ್ತಡವನ್ನು ತೆಗೆದು ಕೆಲವು ಸಮಯ ನೇರವಾಗಿ ಕುಳಿತುಕೊಳ್ಳಿ. ಇದರಿಂದ ರಕ್ತಸ್ರಾವ ತಕ್ಷಣವೇ ನಿಲ್ಲುತ್ತದೆ.
► ಈರುಳ್ಳಿ ರಸ
ಈರುಳ್ಳಿಯು ರಕ್ತವನ್ನು ಶೀಘ್ರವಾಗಿ ಹೆಪ್ಪುಗಟ್ಟಿಸಲು ಪರಿಣಾಮಕಾರಿ ಮದ್ದಾಗಿದೆ. ತಾಜಾ ಈರುಳ್ಳಿಯ ರಸವನ್ನು ತೆಗೆದು 2-3 ಹನಿ ರಸವನ್ನು ಎರಡೂ ಹೊಳ್ಳೆಗಳಲ್ಲಿ ಬಿಟ್ಟುಕೊಳ್ಳಿ. ತಲೆಯನ್ನು ಐದು ನಿಮಿಷಗಳ ಕಾಲ ಸ್ವಲ್ಪ ಹಿಂದಕ್ಕೆ ಬಗ್ಗಿಸಿದ ಸ್ಥಿತಿಯಲ್ಲಿಟ್ಟುಕೊಳ್ಳಿ.
► ತಂಪು ಒತ್ತಡ
ಮೂಗಿನಿಂದ ರಕ್ತಸ್ರಾವವನ್ನು ತಕ್ಷಣ ನಿಲ್ಲಿಸಲು ಇದು ಇನ್ನೊಂದು ಪರಿಣಾಮಕಾರಿ ವಿಧಾನವಾಗಿದೆ. ಇದು ರಕ್ತನಾಳಗಳನ್ನು ಸಂಕುಚಿತಗೊಳಿಸುತ್ತದೆ ಮತ್ತು ರಕ್ತಸ್ರಾವವನ್ನು ನಿಲ್ಲಿಸುತ್ತದೆ. ಒಂದು ಟವೆಲ್‌ನಲ್ಲಿ ಕೆಲವು ಮಂಜುಗಡ್ಡೆ ತುಂಡುಗಳನ್ನು ಸುತ್ತಿ ಅದರಿಂದ ಮೂಗಿನ ಸೇತುವೆಯ ಮೇಲೆ ಮೃದುವಾಗಿ ಒತ್ತಡವನ್ನು ಹೇರಿ. 2-3 ನಿಮಿಷಗಳ ಕಾಲ ಅಥವಾ ನಿಮಗೆ ಆರಾಮ ಅನಿಸುವವರೆಗೆ ಹಾಗೆಯೇ ಉಜ್ಜುತ್ತಿರಿ.
► ಕೊತ್ತಂಬರಿ
ಸ್ವಲ್ಪ ಕೊತ್ತಂಬರಿ ಸೊಪ್ಪನ್ನು ಸ್ವಲ್ಪ ನೀರಿನೊಂದಿಗೆ ಸೇರಿಸಿ ಬ್ಲೆಂಡರ್‌ನಲ್ಲಿ ರಸವನ್ನು ಸಿದ್ಧಗೊಳಿಸಿ. ಇದನ್ನು ಸೋಸಿ 2-3 ಹನಿಗಳಷ್ಟು ರಸವನ್ನು ಎರಡೂ ಹೊಳ್ಳೆಗಳಲ್ಲಿ ಬಿಟ್ಟುಕೊಳ್ಳಿ.
► ಪೆಟ್ರೋಲಿಯಂ ಜೆಲ್ಲಿ
ಮೂಗು ಒಣಗುವುದು ಹೆಚ್ಚಿನ ಬಾರಿ ರಕ್ತಸ್ರಾವಕ್ಕೆ ಕಾರಣವಾಗಿರುತ್ತದೆ ಮತ್ತು ಪೆಟ್ರೋಲಿಯಂ ಜೆಲ್ಲಿ ಈ ಸಮಸ್ಯೆಯನ್ನು ನಿವಾರಿಸುತ್ತದೆ. ಸ್ವಲ್ಪ ಪೆಟ್ರೋಲಿಯಂ ಜೆಲ್ಲಿಯನ್ನು ಎರಡೂ ಹೊಳ್ಳೆಗಳ ಒಳಭಾಗಕ್ಕೆ ಹಚ್ಚಿಕೊಳ್ಳಿ. ಹೀಗೆ ಬಳಸುವ ಜೆಲ್ಲಿಯ ಪ್ರಮಾಣದ ಬಗ್ಗೆ ಗಮನವಿರಲಿ. ಅತಿಯಾಗಿ ಜೆಲ್ಲಿಯನ್ನು ಹಚ್ಚಿಕೊಂಡರೆ ಅದೂ ಸಮಸ್ಯೆಗೆ ಕಾರಣವಾಗಬಹುದು.