ದಮನಿತರ ರಕ್ಷಣಾಸ್ತ್ರ ಅಪಹರಣದ ಹುನ್ನಾರ

Update: 2018-04-08 18:31 GMT

2006ರಲ್ಲಿ ದಲಿತರ ಮೇಲೆ ದೌರ್ಜನ್ಯದ 27,070 ಪ್ರಕರಣಗಳು ನಡೆದಿವೆ. 2014ರಲ್ಲಿ ಇದು ದ್ವಿಗುಣಗೊಂಡಿದೆ. ಆ ವರ್ಷ 47,064 ಪ್ರಕರಣಗಳು ನಡೆದಿವೆ. ವರ್ಷದಿಂದ ವರ್ಷಕ್ಕೆ ದೌರ್ಜನ್ಯ ಪ್ರಕರಣಗಳು ಹೆಚ್ಚುತ್ತಲೇ ಇವೆ. ದೌರ್ಜನ್ಯ ಪ್ರಕರಣಗಳಲ್ಲಿ ಹೆಣ್ಣುಮಕ್ಕಳ ಮೇಲಿನ ಅತ್ಯಾಚಾರ ಹಾಗೂ ಕೊಲೆಗಳು ಸಿಂಹಪಾಲು ಪಡೆದಿವೆ. ಈ ಅಂಕಿ ಸಂಖ್ಯೆಗಳು ದೂರು ದಾಖಲಾದ ಪ್ರಕರಣಗಳು ಮಾತ್ರ. ವಾಸ್ತವವಾಗಿ, ಪೊಲೀಸ್ ಠಾಣೆಗೆ ಹೋಗದೆ ಮತ್ತು ದೂರು ದಾಖಲಾಗದೆ ಎಷ್ಟೋ ಪ್ರಕರಣಗಳು ಮುಚ್ಚಿ ಹೋಗುತ್ತವೆ.


ಭಾರತ ಭಾಗ್ಯವಿದಾತ ಅಂಬೇಡ್ಕರ್ ಜಯಂತಿ ಆಚರಣೆಗೆ ದೇಶ ಸಜ್ಜಾಗುತ್ತಿದೆ. ಪ್ರತೀ ವರ್ಷದಂತೆ ಈ ವರ್ಷವೂ ಅವರ ಪ್ರತಿಮೆಗಳಿಗೆ ಹಾರ ಹಾಕಿ, ಮೆರವಣಿಗೆ ಮಾಡಿ ಸಂಭ್ರಮಿಸುತ್ತೇವೆ. ಶತಮಾನಗಳಿಂದ ಕತ್ತಲ ಲೋಕದಲ್ಲಿದ್ದ ಸಮುದಾಯಕ್ಕೆ ಬೆಳಕಿನ ದಾರಿ ತೋರಿದ ಮಹಾ ಚೇತನಕ್ಕೆ ದಮನಿತ ಸಮುದಾಯ ಕೃತಜ್ಞತಾ ಪೂರ್ವಕವಾಗಿ ಗೌರವ ಸಲ್ಲಿಸುವುದು ಸಹಜವಾಗಿದೆ. ಇದರೊಂದಿಗೆ ಸಮಾನತೆಯಲ್ಲಿ ನಂಬಿಕೆ ಹೊಂದಿರುವ ಎಲ್ಲಾ ಸಮಾಜದ ಜನರು ಬಾಬಾ ಸಾಹೇಬರನ್ನು ಗೌರವಿಸುತ್ತಾರೆ. ವರ್ಷದಿಂದ ವರ್ಷಕ್ಕೆ ಈ ಜಯಂತಿ ಆಚರಣೆ ವ್ಯಾಪಕ ಸ್ವರೂಪ ಪಡೆಯುತ್ತಿದೆ.

ಒಂದೆಡೆ ಅಂಬೇಡ್ಕರ್ ಜಯಂತಿ ಆಚರಿಸುವ ತಯಾರಿ ನಡೆದಿದ್ದರೆ, ಇನ್ನೊಂದೆಡೆ ಅವರ ಪ್ರತಿಮೆಗಳನ್ನು ಭಗ್ನಗೊಳಿಸುವ, ಅವರ ಆಶಯಗಳನ್ನು ನುಚ್ಚುನೂರು ಮಾಡುವ ವಿಧ್ವಂಸಕ ಚಟುವಟಿಕೆಗಳು ನಡೆಯುತ್ತಿವೆ. ಜಯಂತಿ ಆಚರಣೆ ಮತ್ತು ಪ್ರತಿಮೆ ಭಗ್ನದ ಜೊತೆಗೆ ತುಳಿತಕ್ಕೊಳಗಾದ ಸಮುದಾಯಕ್ಕೆ ಬಾಬಾ ಸಾಹೇಬರು ನೀಡಿದ ಸಂವಿಧಾನದ ರಕ್ಷಾಕವಚವನ್ನು ನುಚ್ಚುನೂರು ಮಾಡುವ ಹುನ್ನಾರವೂ ನಡೆಯುತ್ತಿದೆ. ನಿರಂತರ ದೌರ್ಜನ್ಯಕ್ಕೆ ಒಳಗಾಗುತ್ತಲೇ ಬಂದ ಈ ಸಮುದಾಯದ ರಕ್ಷಣೆಗೆ ಅಂಬೇಡ್ಕರ್ ಸಂವಿಧಾನದ ಮೂಲಕ ಒಂದು ರಕ್ಷಣಾಸ್ತ್ರವನ್ನು ನೀಡಿದ್ದರು. ಸಂವಿಧಾನಾತ್ಮಕವಾದ ಈ ರಕ್ಷಣಾಸ್ತ್ರವನ್ನೇ ಅಪಹರಿಸುವ ಯತ್ನ ನಡೆದಿದೆ. ಪರಿಶಿಷ್ಟ ಜಾತಿ ಮತ್ತು ಪಂಗಡಗಳ ಮೇಲೆ ನಡೆಯುತ್ತಿರುವ ದೌರ್ಜನ್ಯಗಳನ್ನು ತಡೆಯಲು ರೂಪಿಸಲಾಗಿರುವ ಕಾಯ್ದೆ ದುರುಪಯೋಗ ಆಗುತ್ತಿದೆಯೆಂದು ನೆಪ ನೀಡಿ, ಈ ದುರ್ಬಳಕೆಯನ್ನು ತಡೆಯಲು ಸುಪ್ರೀಂಕೋರ್ಟ್ ಮುಂದಾಗಿದೆ.

ಸುಪ್ರೀಂ ಕೋರ್ಟ್‌ನಲ್ಲಿ ನ್ಯಾಯಮೂರ್ತಿಗಳಾದ ಎ.ಕೆ.ಗೋಯಲ್, ಯು.ಯು.ಲಲಿತ್ ಅವರಿದ್ದ ದ್ವಿಸದಸ್ಯ ಪೀಠ ಕೆಲ ದಿನಗಳ ಹಿಂದೆ ನಿರ್ದೇಶನವನ್ನು ನೀಡಿ, ದೌರ್ಜನ್ಯ ಕಾಯ್ದೆ ಅನ್ವಯ ದೂರು ಸಲ್ಲಿಸಿದ ತಕ್ಷಣ ಆರೋಪಿಗಳನ್ನು ಬಂಧಿಸುವಂತಿಲ್ಲ. ಎಫ್‌ಐಆರ್ ದಾಖಲಿಸುವಂತಿಲ್ಲ ಎಂದು ತಿಳಿಸಿದೆ. ಶ್ರೇಣೀಕೃತ ಜಾತಿ ವ್ಯವಸ್ಥೆಯಲ್ಲಿ ತಮ್ಮ ರಕ್ಷಣೆಗೆ ಇರುವ ಏಕೈಕ ಸಂವಿಧಾನಾತ್ಮಕ ಅಸ್ತ್ರವನ್ನು ಕಿತ್ತುಕೊಳ್ಳಲು ನಡೆದ ಮಸಲತ್ತಿನ ವಿರುದ್ಧ ದೇಶದ ವಿವಿಧ ಕಡೆ ದಲಿತ ಮತ್ತು ಆದಿವಾಸಿ ಸಮುದಾಯಗಳ ಜನ ಆಕ್ರೋಶದಿಂದ ಬೀದಿಗೆ ಬಂದಿದ್ದಾರೆ. ಪರಿಶಿಷ್ಟ ಜಾತಿ ಮತ್ತು ಪಂಗಡಗಳ ಮೇಲಿನ ದೌರ್ಜನ್ಯ ತಡೆ ಕಾಯ್ದೆಯನ್ನು ದುರ್ಬಲಗೊಳಿಸಲು ಬಿಡುವುದಿಲ್ಲ ಎಂದು ಅವರು ಪ್ರತಿಭಟನೆಗೆ ಇಳಿದಿದ್ದಾರೆ. ಅಟ್ರಾಸಿಟಿ ಕಾಯ್ದೆ ದುರ್ಬಲಗೊಳಿಸಲು ಆದೇಶ ನೀಡಿದ ನ್ಯಾಯಾಧೀಶರಲ್ಲಿ ಒಬ್ಬರೂ ಕೂಡ ದಲಿತ ಸಮುದಾಯಕ್ಕೆ ಸೇರಿದ ನ್ಯಾಯಾಧೀಶರಿಲ್ಲ. ನ್ಯಾಯಮೂರ್ತಿ ಬಾಲಕೃಷ್ಣ ನಿವೃತ್ತರಾದ ನಂತರ ಸರ್ವೋಚ್ಚ ನ್ಯಾಯಾಲಯಕ್ಕೆ ದಲಿತ ನ್ಯಾಯಾಧೀಶರನ್ನು ನೇಮಕ ಮಾಡಿಕೊಳ್ಳಲಿಲ್ಲ. ದೇಶದ ಯಾವ ಹೈಕೋರ್ಟ್ ಗಳಲ್ಲೂ ಕೂಡ ಈ ಸಮುದಾಯಕ್ಕೆ ಸೇರಿದ ನ್ಯಾಯಾಧೀಶರಿಲ್ಲ. ಆದ್ದರಿಂದ ತಮಗೆ ಸಹಜ ನ್ಯಾಯ ದೊರಕಿಲ್ಲ ಎಂದು ಆಕ್ರೋಶ ವ್ಯಕ್ತವಾಗುವುದರಲ್ಲಿ ಅಚ್ಚರಿ ಪಡಬೇಕಿಲ್ಲ.

ನಮ್ಮ ನ್ಯಾಯಾಲಯಗಳ ನ್ಯಾಯಾಧೀಶರೇನು ಆಕಾಶದಿಂದ ಉದುರಿ ಬಿದ್ದವರಲ್ಲ. ಅವರು ಇದೇ ಜಾತಿಗ್ರಸ್ತ ಶ್ರೇಣೀಕೃತ ಸಮಾಜದಿಂದಲೇ ಬಂದವರು. ಈ ಸಮುದಾಯದಿಂದ ಬಂದವರಲ್ಲಿ ಸಾಮಾಜಿಕ ಕಾಳಜಿ ಇರುವುದಿಲ್ಲ ಎಂದಲ್ಲ. ನ್ಯಾಯಮೂರ್ತಿ ವಿ.ಆರ್.ಕೃಷ್ಣ ಅಯ್ಯರ್ ಅವರಂತಹ ಸಾಮಾಜಿಕ ಕಾಳಜಿಯ ಅಪರೂಪದ ಮೇಧಾವಿಯನ್ನು ಈ ದೇಶ ನೋಡಿದೆ. ಆದರೆ ಈಗ ಅಂತಹ ಸಾಮಾಜಿಕ ಕಾಳಜಿ ಹಿನ್ನೆಲೆಯುಳ್ಳ ನ್ಯಾಯಾಧೀಶರು ಇಲ್ಲ. ಅಂತಲೇ ದೌರ್ಜನ್ಯ ತಡೆ ಕಾಯ್ದೆ ದುರ್ಬಳಕೆ ಬಗ್ಗೆ ನೀಡಿದ ತೀರ್ಪು ಅನೇಕರ ಸಂದೇಹಕ್ಕೆ ಕಾರಣವಾಗಿದೆ.

ವಾಸ್ತವವಾಗಿ ಈ ದೇಶದಲ್ಲಿ ದೌರ್ಜನ್ಯ ತಡೆ ಕಾಯ್ದೆ ಇನ್ನೂ ಸರಿಯಾಗಿ ಜಾರಿಗೆ ಬಂದಿಲ್ಲ. ಮೀಸಲಾತಿಯಂತೆ ಇದು ಕೂಡ ಹೆಸರಿಗೆ ಮಾತ್ರ ಅಸ್ತಿತ್ವದಲ್ಲಿದೆ. ಈ ಕಾಯ್ದೆ ಅಸ್ತಿತ್ವದಲ್ಲಿ ಇರುವಾಗಲೇ, 1985ರಲ್ಲಿ ಕರಮಚೇಡು, 1991ರಲ್ಲಿ ಸುಂಡೂರು, 2006ರಲ್ಲಿ ಜುಜಾರ್, 2007ರಲ್ಲಿ ಖೈರ್ಲಾಂಜಿ ಮತ್ತು 90ರ ದಶಕದಲ್ಲಿ ಕಂಬಾಲಪಲ್ಲಿಯಲ್ಲಿ ನಡೆದ ದಲಿತರ ನರಮೇಧವನ್ನು ಮರೆಯಲು ಸಾಧ್ಯವಿಲ್ಲ. ದೌರ್ಜನ್ಯಕ್ಕೆ ಒಳಗಾದವರ ನೆರವಿಗೆ ಈ ಕಾಯ್ದೆ ಬರಲಿಲ್ಲ. ವಾಸ್ತವ ಸ್ಥಿತಿ ಹೀಗಿರುವಾಗ, ಈಗಿರುವ ಕಾಯ್ದೆಯನ್ನೇ ದುರ್ಬಲಗೊಳಿಸಲು ಹೊರಟರೆ, ಈ ದಮನಿತ ಸಮುದಾಯದ ಜನ ಬದುಕುವುದಾದರೂ ಹೇಗೆ? 2006ರಲ್ಲಿ ದಲಿತರ ಮೇಲೆ ದೌರ್ಜನ್ಯದ 27,070 ಪ್ರಕರಣಗಳು ನಡೆದಿವೆ. 2014ರಲ್ಲಿ ಇದು ದ್ವಿಗುಣಗೊಂಡಿದೆ. ಆ ವರ್ಷ 47,064 ಪ್ರಕರಣಗಳು ನಡೆದಿವೆ. ವರ್ಷದಿಂದ ವರ್ಷಕ್ಕೆ ದೌರ್ಜನ್ಯ ಪ್ರಕರಣಗಳು ಹೆಚ್ಚುತ್ತಲೇ ಇವೆ. ದೌರ್ಜನ್ಯ ಪ್ರಕರಣಗಳಲ್ಲಿ ಹೆಣ್ಣುಮಕ್ಕಳ ಮೇಲಿನ ಅತ್ಯಾಚಾರ ಹಾಗೂ ಕೊಲೆಗಳು ಸಿಂಹಪಾಲು ಪಡೆದಿವೆ. ಈ ಅಂಕಿ ಸಂಖ್ಯೆಗಳು ದೂರು ದಾಖಲಾದ ಪ್ರಕರಣಗಳು ಮಾತ್ರ. ವಾಸ್ತವವಾಗಿ, ಪೊಲೀಸ್ ಠಾಣೆಗೆ ಹೋಗದೆ ಮತ್ತು ದೂರು ದಾಖಲಾಗದೆ ಎಷ್ಟೋ ಪ್ರಕರಣಗಳು ಮುಚ್ಚಿ ಹೋಗುತ್ತವೆ.

ದಲಿತರ ಮೇಲಿನ ದೌರ್ಜನ್ಯ ಪ್ರಕರಣದಲ್ಲಿ ದೂರು ದಾಖಲಾದರೂ ಕೂಡ ಆರೋಪಿಗಳ ಬಂಧನ ಸುಲಭವಲ್ಲ. ಆರೋಪಿಗಳನ್ನು ಬಂಧಿಸಿದರೂ ಕೂಡ ನ್ಯಾಯಾಲಯಗಳಲ್ಲಿ ವಿಚಾರಣೆ ನಡೆದು, ದೋಷಮುಕ್ತರಾಗಿ ಬಂದ ನೂರಾರು ಉದಾಹರಣೆಗಳನ್ನು ಕೊಡಬಹುದು. ಬಿಹಾರದಲ್ಲಿ ನೂರಾರು ದಲಿತರನ್ನು ಕೊಂದ, ಅತ್ಯಾಚಾರ ಮಾಡಿದ ಭೂಮಾಲಕರ ರಣವೀರಸೇನೆಯ ಆರೋಪಿಗಳು ದೋಷಮುಕ್ತರಾಗಿ ಹೊರಗೆ ಬಂದರು. ಅದೇ ರೀತಿ 1977ರಲ್ಲಿ ಆಂಧ್ರದ ಕರಮಚೇಡುವಿನಲ್ಲಿ ನಡೆದ 6 ಮಂದಿ ದಲಿತರ ಹತ್ಯೆಯ 159 ಆರೋಪಿಗಳಿಗೆ ವಿಚಾರಣಾ ನ್ಯಾಯಾಲಯ ವಿಧಿಸಿದ ಶಿಕ್ಷೆಯನ್ನು ಆಂಧ್ರ ಹೈಕೋರ್ಟ್ ಕಡಿಮೆ ಮಾಡಿತು. ಕರ್ನಾಟಕದ ಕಂಬಾಲಪಲ್ಲಿ ಪ್ರಕರಣದ ಆರೋಪಿಗಳು ಕೂಡ ಬಿಡುಗಡೆಯಾಗಿ ಬಂದರು. ವಾಸ್ತವಾಂಶ ಹೀಗಿರುವಾಗ, ಈಗಿರುವ ಕಾಯ್ದೆಯನ್ನು ಸಡಿಲುಗೊಳಿಸಿಬಿಟ್ಟರೆ, ಊಹಿಸಲಾಗದಷ್ಟು ಭೀಕರ ಕೃತ್ಯಗಳು ನಡೆಯುತ್ತವೆ.

ದಲಿತರ ಮೇಲಿನ ದೌರ್ಜನ್ಯ ಪ್ರಕರಣಗಳು ಮಾಧ್ಯಮಗಳಲ್ಲೂ ಸರಿಯಾಗಿ ವರದಿ ಆಗುವುದಿಲ್ಲ. 2014ರಲ್ಲಿ ನಡೆದ 47,064 ಪ್ರಕರಣಗಳಲ್ಲಿ 794 ಕೊಲೆಗಳು, 2,338 ಅತ್ಯಾಚಾರ ಪ್ರಕರಣಗಳಾಗಿವೆ. ಈ ಬಗ್ಗೆ ಯಾವ ಮಾಧ್ಯಮಗಳಲ್ಲೂ ವರದಿಯಾಗಲಿಲ್ಲ. ಸುದ್ದಿ ಚಾನೆಲ್‌ಗಳಲ್ಲಿ ಪ್ಯಾನೆಲ್ ಚರ್ಚೆ ನಡೆಯಲಿಲ್ಲ. ದಿಲ್ಲಿ, ಮುಂಬೈನ ಸಿರಿವಂತರ ಮನೆಯಲ್ಲಿ ನಡೆಯುವ ಒಂದೆರಡು ಕೊಲೆ ಪ್ರಕರಣಗಳ ಬಗ್ಗೆ ತಿಂಗಳುಗಟ್ಟಲೆ ಚರ್ಚೆ ಮಾಡುವ ಮಾಧ್ಯಮಗಳು ದಲಿತರ ಮೇಲಿನ ದೌರ್ಜನ್ಯ ಪ್ರಕರಣಗಳ ಬಗ್ಗೆ ಬೆಳಕು ಚೆಲ್ಲಲು ಹೋಗುವುದಿಲ್ಲ.

ಮೋದಿಯವರು ಅಧಿಕಾರಕ್ಕೆ ಬಂದ ನಂತರ ನಡೆದ ಗುಜರಾತಿನ ಉನಾ ಘಟನೆ, ದನ ರಕ್ಷಣೆ ಹೆಸರಿನಲ್ಲಿ ನಡೆದ ದಲಿತರ ಕಗ್ಗೊಲೆ ದೊಡ್ಡ ಸುದ್ದಿಯಾಗಲಿಲ್ಲ. ಈ ದೇಶದ ಎಲ್ಲರೂ ಹಿಂದೂಗಳೇ ಎಂದು ಬೊಬ್ಬೆ ಹಾಕುವ ಕೋಮುವಾದಿ ಸಂಘಟನೆಗಳು ಕೂಡ ಇದನ್ನು ಖಂಡಿಸಲಿಲ್ಲ. ಇದಕ್ಕೆ ಪ್ರತಿಯಾಗಿ ಖೈರ್ಲಾಂಜಿಯಲ್ಲಿ ಬಿಜೆಪಿ ನಾಯಕರು ಆರೋಪಿ ಸ್ಥಾನದಲ್ಲಿದ್ದರು.

ಇದು ದೇಶದ ದಲಿತರ ಇಂದಿನ ಪರಿಸ್ಥಿತಿ. ಈವರೆಗೆ ತಮ್ಮನ್ನು ರಕ್ಷಿಸುತ್ತ ಬಂದ ಕಾನೂನನ್ನು ಕಿತ್ತುಕೊಳ್ಳುವ ಹುನ್ನಾರದ ವಿರುದ್ಧ ಅವರು ಬೀದಿಗಿಳಿದು ಪ್ರತಿಭಟಿಸುತ್ತಿದ್ದಾರೆ. ಈ ಪ್ರತಿಭಟನಾಕಾರರ ಮೇಲೆ ಪೊಲೀಸರು ಗುಂಡು ಹಾರಿಸಿ, 10 ಜನರನ್ನು ಕೊಂದಿದ್ದಾರೆ. ಈ ಘಟನೆ ನಂತರ ಕೇಂದ್ರ ಸರಕಾರ ಆದೇಶ ಮರುಪರಿಶೀಲನೆಗೆ ಸುಪ್ರೀಂ ಕೋರ್ಟ್‌ಗೆ ಮನವಿ ಸಲ್ಲಿಸಿದೆ. ಆದರೆ ಅದಕ್ಕಿಂತ ಮುಂಚೆ ಇದೇ ಸರಕಾರ ಅಟ್ರಾಸಿಟಿ ಕಾಯ್ದೆ ದುರುಪಯೋಗವಾಗುತ್ತಿದೆ ಎಂದು ಸುಪ್ರೀಂ ಕೋರ್ಟ್‌ಗೆ ರಹಸ್ಯ ವರದಿ ಸಲ್ಲಿಸಿತ್ತು.

ಅಟ್ರಾಸಿಟಿ ಕಾಯ್ದೆ ದುರುಪಯೋಗ ಆಗುತ್ತಿದೆಯೆಂದು ಸುಪ್ರೀಂ ಕೋರ್ಟ್ ಹೇಗೆ ತೀರ್ಮಾನಿಸಿತೋ ಗೊತ್ತಿಲ್ಲ. ನನ್ನ ಅನುಭವಕ್ಕೆ ಬಂದಂತೆ, ಯಾರೋ ಕೆಲವರು ಇದನ್ನು ದುರ್ಬಳಕೆ ಮಾಡಿಕೊಳ್ಳಲು ಹೊರಟರೂ ಕೂಡ ದಲಿತ ಸಂಘಟನೆಗಳ ನಾಯಕರು, ಮಧ್ಯಪ್ರವೇಶ ಮಾಡಿ ದುರ್ಬಳಕೆಯಾಗದಂತೆ ತಡೆದ ನೂರಾರು ಉದಾಹರಣೆಗಳಿವೆ. ಆ ಎಚ್ಚರ ದಲಿತ ಸಮುದಾಯದಲ್ಲಿದೆ. ವಾಸ್ತವವಾಗಿ ಪೊಲೀಸ್ ಇಲಾಖೆಯಲ್ಲಿ ಮೇಲ್ಜಾತಿಯವರೇ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ದಲಿತರ ಮೇಲೆ ಹಲ್ಲೆಯ ದೂರುಗಳು ಬಂದರೆ, ಅದನ್ನು ದಾಖಲಿಸಿಕೊಳ್ಳಲು ಅವರು ಹಿಂಜರಿಯುತ್ತಾರೆ. ಅವು ಸುಳ್ಳು ಪ್ರಕರಣಗಳೆಂದು ತಾವೇ ತೀರ್ಮಾನಿಸುತ್ತಾರೆ. ಹೀಗಾಗಿ ಈ ಕಾನೂನಿನ ದುರ್ಬಳಕೆ ಪ್ರಶ್ನೆಯೇ ಉದ್ಭವವಾಗುವುದಿಲ್ಲ. ಭಾರತ ಸರಕಾರದ ಅಪರಾಧ ಬ್ಯೂರೋದ ಇತ್ತೀಚಿನ ಅಂಕಿ ಅಂಶಗಳ ಪ್ರಕಾರ, 2007ರಿಂದ 2017ರವರೆಗಿನ 10 ವರ್ಷಗಳ ಕಾಲಾವಧಿಯಲ್ಲಿ ದಲಿತರ ಮೇಲೆ ದೌರ್ಜನ್ಯ ಪ್ರಕರಣಗಳು ಶೇ.66ರಷ್ಟು ಹೆಚ್ಚಾಗಿವೆ.

ಭಾರತೀಯ ಸಮಾಜ ಎಷ್ಟೇ ಉದಾರವಾಗಿದೆಯೆಂದು ಹೇಳಿಕೊಂಡರೂ ಕೂಡ ದಮನಿತ ದಲಿತ ಸಮುದಾಯಕ್ಕೆ ಇರುವ ಸಂವಿಧಾನ ರಕ್ಷಣೆ ಬಗ್ಗೆ ಈ ಸಮುದಾಯದ ಅನೇಕರಲ್ಲಿ ಒಳಗೊಳಗೆ ಅಸಹನೆ ಇದೆ. ಅತ್ಯಂತ ಲಿಬರಲ್ ಎಂದು ಹೇಳಿಕೊಳ್ಳುವ ಮೇಲ್ಜಾತಿ ಜನರಲ್ಲೂ ಮೀಸಲಾತಿ ಬಗ್ಗೆ ತಿರಸ್ಕಾರ ಭಾವನೆ ಇದೆ. ಸಂಘ ಪರಿವಾರದಂತಹ ಹಿಂದುತ್ವವಾದಿ ಸಂಘಟನೆಗಳು, ದಲಿತರು ಮೇಲ್ಜಾತಿಗಳ ಕೃಪಾಶ್ರಯದಲ್ಲಿ ಬದುಕಬೇಕು, ಕಾನೂನಿನ ರಕ್ಷಣೆಯಿಂದಲ್ಲ ಎಂದು ಪ್ರತಿಪಾದಿಸುತ್ತದೆ. ಜಾತ್ಯತೀತ ಭಾರತವನ್ನು ಮನುವಾದಿ ಹಿಂದೂ ರಾಷ್ಟ್ರವನ್ನಾಗಿ ಮಾಡಲು ಪಣ ತೊಟ್ಟಿರುವ ಈ ಸಂಘಟನೆಗಳು ಮೀಸಲಾತಿ ರದ್ದುಗೊಳಿಸುವ ಕಾರ್ಯಸೂಚಿಯನ್ನು ಇಟ್ಟುಕೊಂಡಿವೆ. ಅದರ ಮೊದಲ ಹೆಜ್ಜೆಯಾಗಿ, ಅಟ್ರಾಸಿಟಿ ಕಾಯ್ದೆ ದುರ್ಬಲಗೊಳಿಸುವ ಯತ್ನ ನಡೆದಿದೆ.

ಮುಸ್ಲಿಮರು ಮತ್ತು ಕ್ರೈಸ್ತರು ಒಳಗೊಂಡ ಅಲ್ಪಸಂಖ್ಯಾತ ಸಮುದಾಯವನ್ನು ದೂರವಿಟ್ಟು ದಲಿತರನ್ನು ಒಳಗೊಂಡ ಶೇ.85ರಷ್ಟು ಹಿಂದೂಗಳನ್ನು ಒಟ್ಟುಗೂಡಿಸಿ, ದೇಶವನ್ನು ಆಳುವ ತಂತ್ರ ರೂಪಿಸಿದ ಸಂಘ ಪರಿವಾರ ಮತ್ತು ಪ್ರಧಾನಿ ನರೇಂದ್ರ ಮೋದಿಯವರಿಗೆ ದಲಿತರು ತಿರುಗಿ ಬಿದ್ದಿರುವುದರಿಂದ ಆತಂಕ ಉಂಟಾಗಿದೆ. ಅದಕ್ಕಾಗಿ ಹೇಗಾದರೂ ಅವರ ಮನವೊಲಿಸಲು ಬಿಜೆಪಿ ಸಂಸದರು, ದಲಿತರ ಮನೆಗೆ ಹೋಗಿ ವಾಸ್ತವ್ಯ ಮಾಡಬೇಕು ಮತ್ತು ಊಟ ಮಾಡಬೇಕು ಎಂದು ಕರೆ ನೀಡಿದ್ದಾರೆ. ಬಿಜೆಪಿ ಅಧ್ಯಕ್ಷ ಅಮಿತ್ ಶಾ ಕೂಡ ದಲಿತರ ಮನೆಗೆ ಹೋಗಿ ಊಟ ಮಾಡುವ ನಾಟಕ ನಡೆಸಿದ್ದಾರೆ. ಒಂದೆಡೆ ಈ ನಾಟಕ ಮಾಡುತ್ತಲೇ, ಇನ್ನೊಂದೆಡೆ ದಲಿತ ಸಮುದಾಯದ ರಕ್ಷಣೆಗೆ ಏಕೈಕ ಅಸ್ತ್ರವಾದ ಅಟ್ರಾಸಿಟಿ ಕಾನೂನನ್ನು ದುರ್ಬಲಗೊಳಿಸುವ ಹುನ್ನಾರ ನಡೆದಿದೆ. ಈ ಕಾನೂನು ದುರ್ಬಲಗೊಳಿಸಿದ ನಂತರ, ಮೀಸಲಾತಿಯನ್ನು ರದ್ದುಗೊಳಿಸುವ ಮಸಲತ್ತು ನಡೆಯುತ್ತದೆ. ದಮನಿತ ಸಮುದಾಯ ಈಗ ಎಚ್ಚರಗೊಳ್ಳದಿದ್ದರೆ, ಬರಲಿರುವ ದಿನಗಳು ಆತಂಕಕಾರಿಯಾಗಿವೆ.

Writer - ಸನತ್ ಕುಮಾರ್ ಬೆಳಗಲಿ

contributor

Editor - ಸನತ್ ಕುಮಾರ್ ಬೆಳಗಲಿ

contributor

Similar News