ಪ್ಯಾಕೇಜ್ಡ್ ಫುಡ್ ಆರೋಗ್ಯಕ್ಕೆ ಹಾನಿಕರ ಎನ್ನುವುದು ನಿಮಗೆ ಗೊತ್ತೇ?
ನೀವು ಸೂಪರ್ ಮಾರ್ಕೆಟ್‌ಗಳಿಂದ ಅಥವಾ ಇತರ ಮಳಿಗೆಗಳಿಂದ ಖರೀದಿಸುವ ಪ್ಯಾಕೇಜ್ ಮಾಡಲಾದ ಆಹಾರ ಗಂಭೀರ ಆರೋಗ್ಯ ಸಮಸ್ಯೆಗಳನ್ನುಂಟು ಮಾಡಬಹುದು ಎನ್ನುವುದು ನಿಮಗೆ ಗೊತ್ತೇ?
ಕೆಲವೊಮ್ಮೆ ಆಹಾರವನು ಪ್ಯಾಕ್ ಮಾಡಲು ಬಳಸುವ ಪುನರ್ಬಳಕೆ ಮಾಡಲಾದ ಕಾರ್ಡ್‌ಬೋರ್ಡ್‌ಗಳಿಂದ ವಿಷಕಾರಿ ರಾಸಾಯನಿಕಗಳು ನಮ್ಮ ಶರೀರವನ್ನು ಸೇರಿಕೊಳ್ಳುತ್ತವೆ. ಪ್ಯಾಕೇಜ್‌ಗಳ ಮೇಲಿರುವ ಎಕ್ಸ್‌ಪೈರಿ ದಿನಾಂಕವನ್ನು ನಂಬಬೇಡಿ, ಏಕೆಂದರೆ ಕೆಲವು ಪ್ಯಾಕೇಜಿಂಗ್‌ಗಳಲ್ಲಿ ಆಹಾರ ವಸ್ತುಗಳು ಆ ದಿನಾಂಕದ ಮೊದಲೇ ಬಳಕೆಗೆ ಅನರ್ಹಗೊಂಡಿರುತ್ತವೆ.
ರಾಸಾಯನಿಕ,ಭೌತಿಕ,ಕಿಣ್ವಗಳು ಮತ್ತು ಮೈಕ್ರೋಬಯಾಲಜಿಕಲ್ ಕಾರಣಗಳು ಪ್ಯಾಕ್ ಮಾಡಲಾದ ಆಹಾರಗಳ ಗುಣಮಟ್ಟದಲ್ಲಿ ಬದಲಾವಣೆಗಳನ್ನು ಉಂಟು ಮಾಡುತ್ತವೆ. ದಾಸ್ತಾನು ಸ್ಥಿತಿಯೂ ಅವುಗಳ ಸ್ವರೂಪ,ರಚನೆ ಮತ್ತು ರುಚಿಗಳ ಮೇಲೆ ಪರಿಣಾಮವನ್ನು ಬೀರುತ್ತದೆ. ಇಂತಹ ಆಹಾರಗಳ ಗುಣಮಟ್ಟವನ್ನು ಕಾಯ್ದುಕೊಳ್ಳಲು ಮತ್ತು ಅವುಗಳ ಶೆಲ್ಫ್ ಲೈಫ್ ಹೆಚ್ಚಿಸುವಲ್ಲಿ ದಾಸ್ತಾನು ತಾಪಮಾನವು ಮುಖ್ಯ ಪಾತ್ರ ವಹಿಸುತ್ತದೆ. ವಾತಾವರಣದ ಉಷ್ಣತೆಯಲ್ಲಿ ಯಾವುದೇ ಬದಲಾವಣೆಯು ಕೆಲವು ಸಮಸ್ಯೆಗಳಿಗೆ ಕಾರಣವಾಗುತ್ತದೆ.
ಪ್ಯಾಕೇಜ್ಡ್ ಆಹಾರಗಳಲ್ಲಿ ಬಳಕೆಯಾಗುವ ಸಂಯೋಜಿತ ರಾಸಾಯನಿಕಗಳು ಆರೋಗ್ಯಕ್ಕೆ ಹಾನಿಕರವಾಗಿವೆ. ಇವು ಆರೋಗ್ಯದ ಮೇಲೆ ದೀರ್ಘಕಾಲೀನ ದುಷ್ಪರಿಣಾಮಗಳನ್ನು ಉಂಟು ಮಾಡುತ್ತವೆ. ಪ್ಯಾಕೇಜ್ಡ್ ಆಹಾರಗಳು ಕೊಲೆಸ್ಟ್ರಾಲ್ ಮಟ್ಟವನ್ನು ಹೆಚ್ಚಿಸುತ್ತವೆ ಮತ್ತು ಶರೀರದಲ್ಲಿ ನಿರ್ಜಲೀಕರಣವನ್ನುಂಟು ಮಾಡುತ್ತವೆ. ಈ ಆಹಾರಗಳು ಆರೋಗ್ಯದ ಮೇಲೆ ಬೀರುವ ಕೆಲವು ದುಷ್ಪರಿಣಾಮಗಳ ಕುರಿತು ಮಾಹಿತಿಯಿಲ್ಲಿದೆ...
ಗಾಜಿನ ಬಾಟ್ಲಿಯಲ್ಲಿ ಶೇಖರಣೆ ಆಹಾರ ಪ್ಯಾಕೇಜಿಂಗ್‌ನ ಸುರಕ್ಷಿತ ವಿಧಾನ ಎನ್ನುವ ಭಾವನೆಯಿದೆ. ಅದು ರಾಸಾಯನಿಕ ಅಂತರ್ ಕ್ರಿಯೆಗಳಿಗೆ ಅವಕಾಶ ನೀಡುವುದಿಲ್ಲ ಮತ್ತು ಪರಿಮಳ ಹಾಗೂ ಸ್ವಾದವನ್ನು ಕೆಡದಂತೆ ಕಾಪಾಡುತ್ತದೆ ಎಂದು ಹೆಚ್ಚಿನವರು ಸಾಮಾನ್ಯವಾಗಿ ಪರಿಗಣಿಸುತ್ತಾರೆ. ಆದರೆ ಸೀಸವನ್ನು ಒಳಗೊಂಡಿರುವ ಗಾಜಿನ ಬಾಟ್ಲಿಗಳೂ ಇರುತ್ತವೆ ಎನ್ನುವುದು ಗೊತ್ತೇ?
ಸೀಸದಲ್ಲಿರುವ ನ್ಯೂರೊಟಾಕ್ಸಿನ್ ಆರೋಗ್ಯದಲ್ಲಿ ಏರುಪೇರುಗಳಿಗೆ ಕಾರಣ ವಾಗುತ್ತದೆ. ಗಾಜಿನ ಬಾಟ್ಲಿಗಳು ಥಾಲೇಟ್ ಎಂಬ ರಾಸಾಯನಿಕ ಮಾಲಿನ್ಯವನ್ನು ಬಿಡುಗಡೆಗೊಳಿಸುತ್ತವೆ. ಥಾಲೇಟ್‌ಗಳು ಏಕಾಗ್ರತೆಯನ್ನು ಕುಂದಿಸುತ್ತವೆ ಮತ್ತು ಪುರುಷರಲ್ಲಿ ಫಲವತ್ತತೆಯ ಸಮಸ್ಯೆಗಳನ್ನುಂಟು ಮಾಡುತ್ತವೆ ಎನ್ನುವುದು ಸಂಶೋಧನೆಗಳಿಂದ ಸಾಬೀತಾಗಿದೆ. ಥಾಲೇಟ್ ವರ್ಗದ ಯಾವುದೇ ರಾಸಾಯನಿಕಗಳನ್ನು ಬಳಸುವಾಗ,ನಿರ್ದಿಷ್ಟವಾಗಿ ಗರ್ಭಿಣಿಯರು ಮತ್ತು ಚಿಕ್ಕಮಕ್ಕಳಿಗಾಗಿ ಆಹಾರಗಳನ್ನು ಪ್ಯಾಕ್ ಮಾಡಿರುವ ಉತ್ಪನ್ನಗಳ ಬಗ್ಗೆ ಎಚ್ಚರಿಕೆಯಿಂದಿರಬೇಕು.
ಸಾಮಾನ್ಯವಾಗಿ ಆಹಾರ ಪದಾರ್ಥಗಳನ್ನು ಸ್ಪರ್ಶಿಸುವ ವಸ್ತುಗಳು ಸಿಂಥೆಟಿಕ್ ಅಥವಾ ಪ್ಲಾಸ್ಟಿಕ್‌ನಿಂದ ತಯಾರಾಗಿರುತ್ತವೆ.ಪಾನೀಯಗಳ ಕಾರ್ಟ್‌ನ್‌ಗಳ ಕೋಟಿಂಗ್ ಗಳಲ್ಲಿ,ಗಾಜಿನ ಬಾಟ್ಲಿಗಳ ಮುಚ್ಚಳದಲ್ಲಿ ಇವುಗಳನ್ನು ಕಾಣಬಹುದಾಗಿದೆ. ಇವುಗಳಲ್ಲಿರುವ ಫಾರ್ಮಾಲ್ಡ್‌ಹೈಡ್ ಎಂಬ ವಿಷಕಾರಿ ರಾಸಾಯುನಿಕವು ಪ್ರಾಸ್ಟೇಟ್ ಅಥವಾ ಸ್ತನ ಕ್ಯಾನ್ಸರ್‌ಗೆ ಕಾರಣವಾಗಬಹುದು. ಇಂಗಾಲೀಕೃತ ಪಾನೀಯಗಳಿರುವ ಪ್ಲಾಸ್ಟಿಕ್ ಬಾಟ್ಲಿಗಳೂ ಕೆಲವು ಪ್ರಮಾಣದಲ್ಲಿ ಫಾರ್ಮಾಲ್ಡ್‌ಹೈಡ್‌ನ್ನು ಒಳಗೊಂಡಿ ರುತ್ತವೆ.
ಆಹಾರವನ್ನು ಪ್ಯಾಕ್ ಮಾಡಲು ಬಳಸಲಾಗುವ ವಸ್ತುಗಳಲ್ಲಿಯ ಕೆಲವು ರಾಸಾಯನಿಕಗಳ ಸೂಕ್ಷ್ಮ ಪ್ರಮಾಣವೂ ನರಸಂಬಂಧಿತ ಸಮಸ್ಯೆಗಳಿಗೆ ಮತ್ತು ಉರಿಯೂತಕ್ಕೆ ಕಾರಣವಾಗುತ್ತದೆ. ಇವುಗಳಿಂದ ತಲೆನೋವು ಕೂಡ ಕಾಣಿಸಿಕೊಳ್ಳುತ್ತದೆ.
ಪ್ಲಾಸ್ಟಿಕ್ ರ್ಯಾಪ್ ಅಥವಾ ಬಾಟ್ಲಿಗಳಂತಹ ಮನೆಗಳಲ್ಲಿಯ ಕೆಲವು ಪ್ಲಾಸ್ಟಿಕ್ ವಸ್ತುಗಳಲ್ಲಿರುವ ಕೆಲವು ರಾಸಾಯನಿಕಗಳು ಬಾಹ್ಯ ಈಸ್ಟ್ರೊಜನ್‌ನಂತೆ ವರ್ತಿಸುತ್ತವೆ ಮತ್ತು ಶರೀರದ ಸಹಜ ಹಾರ್ಮೋನ್ ವ್ಯವಸ್ಥೆಗೆ ವ್ಯತ್ಯಯವನ್ನುಂಟು ಮಾಡಿ ಹಾರ್ಮೋನ್ ಅಸಮತೋಲನಕ್ಕೆ ಕಾರಣವಾಗುತ್ತವೆ.
ಪ್ಲಾಸ್ಟಿಕ್ ಪಾಲಿಕಾರ್ಬೊನೇಟ್ ಕಂಟೇನರ್‌ಗಳು,ಬೇಬಿ ಬಾಟಲ್‌ಗಳು ಮತ್ತು ಕ್ಯಾನ್‌ಗಳಲ್ಲಿರುವ ಬೈಸ್ಫೆನಾಲ್ ಎ ಎಂಬ ರಾಸಾಯನಿಕವು ಹೃದ್ರೋಗಗಳೊಂದಿಗೆ ಸಂಬಂಧವನ್ನು ಹೊಂದಿದೆ.
ಫುಡ್ ಪ್ಯಾಕೇಜಿಂಗ್‌ನೊಂದಿಗೆ ಬರುವ ಮಾಲಿನ್ಯಕಾರಿ ರಾಸಾಯನಿಕಗಳು ಅಜೀರ್ಣದ ಸಮಸ್ಯೆಯನ್ನುಂಟು ಮಾಡುತ್ತವೆ ಮತ್ತು ಇದು ಇತರ ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗುತ್ತದೆ.
ಥಾಲೇಟ್‌ಗಳು ಶರೀರದಲ್ಲಿ ಹಾರ್ಮೋನ್‌ಗಳನ್ನು ಏರುಪೇರುಗೊಳಿಸುತ್ತವೆ ಮತ್ತು ಟೈಪ್-2 ಮಧುಮೇಹ ಹಾಗೂ ಹೃದ್ರೋಗಗಳಿಗೆ ಕಾರಣವಾಗುತ್ತವೆ. ಹೀಗಾಗಿ ಥಾಲೇಟ್‌ಗಳಿಂದ ನಿಮ್ಮ ಶರೀರವನ್ನು ರಕ್ಷಿಸಿಕೊಳ್ಳಬೇಕೆಂದಿದ್ದರೆ ಪ್ಯಾಕೇಜ್ಡ್ ಆಹಾರದ ಗೋಜಿಗೆ ಹೋಗಲೇಬೇಡಿ.
ಪ್ಯಾಕೇಜಿಂಗ್‌ನಿಂದ ಆಹಾರದಲ್ಲಿ ಸೇರಿಕೊಳ್ಳುವ ಕೆಲವು ರಾಸಾಯನಿಕಗಳು ಅಸ್ತಮಾಕ್ಕೆ ಉತ್ತೇಜನ ನೀಡುತ್ತವೆ. ಬೈಸ್ಫೆನಾಲ್‌ಎ ಅಥವಾ ಬಿಪಿಎ ಇಂತಹ ವಿಷಕಾರಿ ರಾಸಾಯನಿಕಗಳಲ್ಲೊಂದಾಗಿದ್ದು,ಇಲೆಕ್ಟ್ರಿಕ್ ಕೆಟ್ಲ್ ಅಥವಾ ಕಂಟೇನರ್‌ಗಳಂತಹ ಪ್ಲಾಸ್ಟಿಕ್‌ನಿಂದ ನಿರ್ಮಿತ ಉತ್ಪನ್ನಗಳಲ್ಲಿ ಸಾಮಾನ್ಯವಾಗಿರುತ್ತದೆ. ಬಿಪಿಎ 5ರಿಂದ 12 ವರ್ಷ ಪ್ರಾಯದೊಳಗಿನ ಮಕ್ಕಳಲ್ಲಿ ಅಸ್ತಮಾ ಅಪಾಯವನ್ನು ಹೆಚ್ಚಿಸುತ್ತದೆ.
ಬಿಪಿಎ ಶರೀರದಲ್ಲಿಯ ಹಾರ್ಮೋನ್ ವ್ಯವಸ್ಥೆಯಲ್ಲಿ ಗೊಂದಲವನ್ನುಂಟು ಮಾಡುತ್ತದೆ ಮತ್ತು ನಿಜವಾದ ಹಾರ್ಮೋನ್‌ನ್ನು ಅನುಸರಿಸಲು ಪ್ರಯತ್ನಿಸುತ್ತದೆ. ಈ ವಿಷಕಾರಿ ರಾಸಾಯನಿಕಕ್ಕೆ ಅತಿಯಾಗಿ ತೆರೆದುಕೊಂಡರೆ ಅದು ಬಂಜೆತನ ಮತ್ತು ಸ್ತನ ಕ್ಯಾನ್ಸರ್‌ನಂತಹ ಹಲವಾರು ಹಾರ್ಮೋನ್ ಅವಲಂಬಿತ ಸಮಸ್ಯೆಗಳನ್ನುಂಟು ಮಾಡುತ್ತದೆ.
ಆಹಾರಗಳ ಪ್ಯಾಕೇಜಿಂಗ್‌ನಲ್ಲಿ ಹಾರ್ಡ್ ಪ್ಲಾಸ್ಟಿಕ್ ಬಳಕೆಯಾಗುವುದರಿಂದ ನಿಯಮಿತವಾಗಿ ಅವುಗಳ ಸೇವನೆ ಅಧಿಕ ರಕ್ತದೊತ್ತಡ ಸಮಸ್ಯೆಗೆ ಕಾರಣವಾಗುತ್ತದೆ.