ಕೃತಕ ಸಿಹಿಕಾರಕಗಳುಂಟು ಮಾಡುವ ಅಪಾಯಗಳು ನಿಮಗೆ ಗೊತ್ತೇ....?

Update: 2018-05-07 11:41 GMT

ಹೆಚ್ಚಿನವರು ಗೊತ್ತಿದ್ದೋ ಗೊತ್ತಿಲ್ಲದೆಯೋ ಆರ್ಟಿಫಿಷಿಯಲ್ ಸ್ವೀಟ್ನರ್ಸ್‌ ಅಥವಾ ಕೃತಕ ಸಿಹಿಕಾರಕಗಳನ್ನು ದಿನನಿತ್ಯ ಸೇವಿಸುತ್ತಲೇ ಇರುತ್ತಾರೆ. ನಾವು ಬೆಳಿಗ್ಗೆ ದಿನಚರಿಯನ್ನು ಆರಂಭಿಸುವ ಟೂಥ್‌ಪೇಸ್ಟ್‌ನಿಂದ ಹಿಡಿದು ತಂಪು ಪಾನೀಯಗಳು,ಕ್ಯಾಂಡಿ,ಕೆಲವು ಬೇಕರಿ ತಿಂಡಿಗಳವರೆಗೂ ಹಲವಾರು ವಸ್ತುಗಳ ತಯಾರಿಕೆಯಲ್ಲಿ ಕೃತಕ ಸಿಹಿಕಾರಕಗಳನ್ನು ಬಳಸಲಾಗುತ್ತದೆ. ಇವು ಮಧುಮೇಹ ಮತ್ತು ಬೊಜ್ಜಿನ ಅಪಾಯವನ್ನುಂಟು ಮಾಡುತ್ತವೆ ಎನ್ನುವುದನ್ನು ಇತ್ತೀಚಿನ ಅಧ್ಯಯನವೊಂದು ದೃಢಪಡಿಸಿದೆ. ಹೃದ್ರೋಗದಂತಹ ಇತರ ಕಾಯಿಲೆಗಳಿಗೂ ಇವು ಕಾರಣವಾಗುತ್ತವೆ.

ಅಸ್ಪರ್‌ಟೇಮ್,ಸೈಕ್ಲಾಮೇಟ್,ಸ್ಯಾಕ್ರಿನ್ ಮತ್ತು ಸ್ಟೀವಿಯಾ ಕೃತಕ ಸಿಹಿಕಾರಕಗಳ ವಿವಿಧ ರೂಪಗಳಾಗಿದ್ದು,ಸಕ್ಕರೆಗಿಂತ ನೂರಾರು ಪಟ್ಟು ಹೆಚ್ಚು ಸಿಹಿಯಾಗಿವೆ.

ಕೃತಕ ಸಿಹಿಕಾರಕಗಳ ನಿಯಮಿತ ಬಳಕೆ ರಕ್ತದ ಕ್ಯಾನ್ಸರ್ ಅಥವಾ ಮಿದುಳಿನ ಕ್ಯಾನ್ಸರ್‌ನ್ನುಂಟು ಮಾಡುತ್ತವೆ. ಅಲ್ಲದೆ ಮೂತ್ರಪಿಂಡಗಳ ಕಾಯಿಲೆ,ಟೈಪ್ 2 ಮಧುಮೇಹ,ನರಸಂಬಂಧಿ ರೋಗಗಳು, ಚಯಾಪಚಯ ವ್ಯವಸ್ಥೆಯಲ್ಲಿ ಏರುಪೇರು ಇತ್ಯಾದಿ ಸಮಸ್ಯೆಗಳಿಗೂ ಅವು ಕಾರಣವಾಗುತ್ತವೆ ಎನ್ನುವುದು ಸಂಶೋಧನೆಗಳಿಂದ ಸಿದ್ಧವಾಗಿದೆ. ಹೀಗಾಗಿ ಕೃತಕ ಸಿಹಿಕಾರಕಗಳ ಸೇವನೆ ಸಾಧ್ಯವಾದಷ್ಟು ಮಿತಿಯಲ್ಲಿಯೇ ಇರಬೇಕು.

ಮಾನಸಿಕ ಖಿನ್ನತೆ,ಬೈಪೋಲಾರ್ ಡಿಸಾರ್ಡರ್ ಅಥವಾ ದ್ವಿಧ್ರುವ ವಿಕಾರ ಮತ್ತು ಉದ್ವೇಗಕ್ಕೂ ಕೃತಕ ಸಿಹಿಕಾರಕಗಳು ಕಾರಣವಾಗುತ್ತವೆ. ಬೈಪೋಲಾರ್ ಡಿಸಾರ್ಡರ್ ಹೋಂದಿರುವ ವ್ಯಕ್ತಿಯ ಮನೋಸ್ಥಿತಿ ಬದಲಾಗುತ್ತಲೇ ಇರುತ್ತದೆ.

ಕೃತಕ ಸಿಹಿಕಾರಕಗಳಲ್ಲಿ ಕ್ಯಾಲೊರಿಗಳಿರುವುದಿಲ್ಲ. ಅವುಗಳನ್ನು ಸಿಂಥೆಟಿಕ್ ಪದಾರ್ಥಗಳಿಂದ ತಯಾರಿಸಲಾಗುತ್ತದೆ. ಹೀಗಾಗಿ ಅವುಗಳ ಸೇವನೆಯೊಂದಿಗೆ ರಾಸಾಯನಿಕಗಳೂ ನಮ್ಮ ಶರೀರವನ್ನು ಸೇರಿಕೊಳ್ಳುತ್ತವೆ ಮತ್ತು ಇವು ಆರೋಗ್ಯದ ಮೇಲೆ ದುಷ್ಪರಿಣಾಮವನ್ನುಂಟು ಮಾಡುತ್ತವೆ.

ಕೃತಕ ಸಿಹಿಕಾರಕಗಳು ನಾವು ಸೇವಿಸುವ ತಂಪು ಪಾನೀಯಗಳಿಗೆ ಸಿಹಿರುಚಿಯನ್ನು ನೀಡುತ್ತವೆಯಾದರೂ ಅವು ಮತ್ತಷ್ಟು ಸಿಹಿಯನ್ನು ಸೇವಿಸಬೇಕೆಂಬ ತುಡಿತವನ್ನೂ ಉಂಟುಮಾಡುತ್ತವೆ ಎನ್ನುವುದು ಸುಳ್ಳಲ್ಲ.

ಅವು ಶರೀರದ ತೂಕವನ್ನು ಹೆಚ್ಚಿಸುತ್ತವೆ. ಪ್ರತಿನಿತ್ಯ ಹಲವಾರು ಬಾರಿ ತಂಪುಪಾನೀಯಗಳನ್ನು ಸೇವಿಸುವ ಅಭ್ಯಾಸವುಳ್ಳವರು ಶರೀರದ ತೂಕ ಹೆಚ್ಚುವ ಮತ್ತು ಬೊಜ್ಜು ಉಂಟಾಗುವ ಹೆಚ್ಚಿನ ಅಪಾಯವನ್ನು ಎದುರಿಸುತ್ತಿರುತ್ತಾರೆ.

ಗರ್ಭಿಣಿಯರು ಕೃತಕ ಸಿಹಿಕಾರಕಗಳಿಂದ ದೂರವೇ ಇರಬೇಕು. ಅವು ಭ್ರೂಣದ ಬೆಳವಣಿಗೆಯ ಮೇಲೆ ದುಷ್ಪರಿಣಾಮವನ್ನು ಬೀರುವ ಸಾಧ್ಯತೆಯ ಜೊತೆಗೆ ಕ್ಯಾನ್ಸರ್ ಅಪಾಯವನ್ನೂ ಹೆಚ್ಚಿಸುತ್ತವೆ. ಅಲ್ಲದೆ ಗರ್ಭಿಣಿಯರು ನಿಯಮಿತವಾಗಿ ಕೃತಕ ಸಿಹಿಕಾರಕಗಳಿರುವ ಮೃದುಪಾನೀಯಗಳನ್ನು ಸೇವಿಸುತ್ತಿದ್ದರೆ ಅವಧಿಗೆ ಮುನ್ನವೇ ಹೆರಿಗೆಯಾಗುವ ಸಾಧ್ಯತೆಯೂ ಇದೆ ಎನ್ನುತ್ತಿವೆ ಅಧ್ಯಯನಗಳು.

ಕೃತಕ ಸಿಹಿಕಾರಕಗಳನ್ನು,ವಿಶೇಷವಾಗಿ ಪಾನೀಯಗಳ ರೂಪದಲ್ಲಿ ಆಗಾಗ್ಗೆ ಸೇವಿಸುತ್ತಿದ್ದರೆ ಅದು ಹೆಚ್ಚುವರಿ ಆಹಾರ ಸೇವನೆಗೆ ಮತ್ತು ತನ್ಮೂಲಕ ಚಯಾಪಚಯದಲ್ಲಿ ವ್ಯತ್ಯಯಕ್ಕೆ ಕಾರಣವಾಗುತ್ತದೆ.

ಮಕ್ಕಳು ಕೃತಕ ಸಿಹಿಕಾರಕಗಳಿಂದ ತುಂಬಿರುವ ಮೃದು ಪಾನೀಯಗಳು,ಸಿಹಿತಿಂಡಿ,ಕ್ಯಾಂಡಿ ಇತ್ಯಾದಿಗಳನ್ನು ಆಗಾಗ್ಗೆ ತಿನ್ನುತ್ತಲೇ ಇರುತ್ತಾರೆ. ಇದು ಅವರಲ್ಲಿ ಬೊಜ್ಜು ಮತ್ತು ಮಧುಮೇಹದ ಅಪಾಯವನ್ನುಂಟು ಮಾಡಬಹುದು. ಹೀಗಾಗಿ ಮಕ್ಕಳು ಇವುಗಳನ್ನು ಒಂದು ಮಿತಿಯಲ್ಲಿ ಸೇವಿಸುವಂತೆ ಕಡಿವಾಣ ಹಾಕಬೇಕು.

ಕೃತಕ ಸಿಹಿಕಾರಕಗಳ ನಿಯಮಿತ ಸೇವನೆಯು ನೆನಪಿನ ಶಕ್ತಿಯನ್ನು ಕುಂದಿಸುತ್ತದೆ ಎನ್ನುವುದನ್ನು ಅಧ್ಯಯನಗಳು ತೋರಿಸಿವೆ. ಅವು ಮಿದುಳಿನಲ್ಲಿಯ ನ್ಯೂರಾನ್‌ಗಳ ಮೇಲೆ ದಾಳಿ ನಡೆಸುತ್ತವೆ. ಅಲ್ಝೀಮರ್ ಕಾಯಿಲೆಯನ್ನೂ ಅವು ಬಳುವಳಿಯಾಗಿ ನೀಡಬಹುದು. ಅವು ಇನ್ಸುಲಿನ್ ಹಾರ್ಮೋನ್ ಸ್ರವಿಸುವಿಕೆಯಲ್ಲಿಯೂ ಏರುಪೇರುಗಳನ್ನುಂಟು ಮಾಡುತ್ತವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News