ಹೈಪೊಥೈರಾಯ್ಡಿಸಂ ಔಷಧಿಗಳ ಸೇವನೆಯಲ್ಲಿ ಈ ಸಾಮಾನ್ಯ ತಪ್ಪುಗಳನ್ನು ನೀವೂ ಮಾಡುತ್ತಿದ್ದೀರಾ?

Update: 2018-05-16 12:49 GMT

ನಮ್ಮ ಶರೀರದ ಪ್ರಮುಖ ಅಂಗವಾಗಿರುವ ಥೈರಾಯ್ಡ ಗ್ರಂಥಿಯ ಕ್ರಿಯಾಶೀಲತೆಯು ಕ್ಷೀಣಿಸಿದಾಗ ಅಂತಹ ಸ್ಥಿತಿಯನ್ನು ಹೈಪೊಥೈರಾಯ್ಡಿಸಂ ಎಂದು ಕರೆಯಲಾಗುತ್ತದೆ. ಈ ಸ್ಥಿತಿಯಲ್ಲಿ ನಮ್ಮ ಶರೀರಕ್ಕೆ ಅಗತ್ಯವಾಗಿರುವ ಥೈರಾಯ್ಡೆ ಹಾರ್ಮೋನ್‌ನ್ನು ಸಾಕಷ್ಟು ಪ್ರಮಾಣದಲ್ಲಿ ಉತ್ಪಾದಿಸಲು ಅಥವಾ ಸ್ರವಿಸಲು ಈ ಗ್ರಂಥಿಗೆ ಸಾಧ್ಯವಾಗುವುದಿಲ್ಲ.

ವೈದ್ಯರು ರೋಗಿಯಲ್ಲಿ ಹೈಪೊಥೈರಾಯ್ಡಿಸಂ ಅನ್ನು ಪತ್ತೆ ಹಚ್ಚಿದ ಬಳಿಕ ಥೈರಾಯ್ಡಿ ಹಾರ್ಮೋನ್ ಮಟ್ಟಗಳ ಸಮತೋಲನಕ್ಕಾಗಿ ಔಷಧಿಗಳನ್ನು ಸೂಚಿಸುತ್ತಾರೆ. ಆದರೆ ನಾವು ಮಾಡುವ ಕೆಲವು ಸಾಮಾನ್ಯ ತಪ್ಪುಗಳು ಈ ಔಷಧಿಗಳ ಪರಿಣಾಮದ ಮೇಲೆ ವ್ಯತಿರಿಕ್ತ ಪರಿಣಾಮಗಳನ್ನು ಬೀರುತ್ತವೆ ಎನ್ನುವುದು ನಿಮಗೆ ಗೊತ್ತೇ? ಥೈರಾಯ್ಡು ಔಷಧಿಗಳನ್ನು ಸೇವಿಸಬೇಕಾದರೆ ಗಮನಿಸಬೇಕಾದ ಕೆಲವು ಅಂಶಗಳಿಲ್ಲಿವೆ.....

► ಔಷಧಿ ಸೇವನೆಯ ಸಮಯ

ಹೈಪೊಥೈರಾಯ್ಡಿಸಂ ಔಷಧಿಗಳನ್ನು ನಸುಕಿನ ಸಮಯದಲ್ಲಿ ಸೇವಿಸಬೇಕಾಗುತ್ತದೆ. ಆದರೆ ಆಹಾರ ಸೇವನೆ ಮತ್ತು ಔಷಧಿ ಸೇವನೆ ನಡುವೆ ಇರಬೇಕಾದ ಸಮಯದ ಅಂಂತರವನ್ನು ನಾವು ಸಾಮಾನ್ಯವಾಗಿ ಕಡೆಗಣಿಸುತ್ತೇವೆ. ಈ ಔಷಧಿಯನ್ನು ಸೇವಿಸುವ ಮುನ್ನ ನಾಲ್ಕು ಗಂಟೆಗಳಲ್ಲಿ ರೋಗಿಯು ಯಾವುದೇ ಆಹಾರವನ್ನು ಸೇವಿಸಿರಬಾರದು. ಅಲ್ಲದೆ ಔಷಧಿ ಸೇವನೆಯ ಬಳಿಕ ಕನಿಷ್ಠ ಅರ್ಧ ಗಂಟೆಯಿಂದ ಒಂದು ಗಂಟೆಯವರೆಗೆ ಆಹಾರವನ್ನು ಸೇವಿಸಬಾರದು. ಚಹಾ ಅಥವಾ ಕಾಫಿಯಂತಹ ಪಾನೀಯಗಳ ಸೇವನೆಯೂ ಹಾರ್ಮೋನ್ ಹೀರುವಿಕೆಗೆ ಅಡ್ಡಿಯನ್ನುಂಟು ಮಾಡುತ್ತದೆ ಎನ್ನುವುದು ಖಂಡಿತವಾಗಿ ನೆನಪಿನಲ್ಲಿರಬೇಕು.

► ಇತರ ಔಷಧಿಗಳೊಂದಿಗೆ ಥೈರಾಯ್ಡ ಔಷಧಿಗಳ ಸೇವನೆ

ಹಲವಾರು ಇತರ ಔಷಧಿಗಳು ನಮ್ಮ ಶರೀರವು ಥೈರಾಯ್ಡ ಔಷಧಿಯನ್ನು ಹೀರಿಕೊಳ್ಳುವಿಕೆಯಲ್ಲಿ ವ್ಯತ್ಯಯಗಳನ್ನುಂಟು ಮಾಡುತ್ತವೆ. ಹೀಗಾಗಿ ಥೈರಾಯ್ಡ ಔಷಧಿಗಳೊಂದಿಗೆ ಇತರ ಔಷಧಿಗಳನ್ನು ಸೇವಿಸಬಾರದು. ಕೊಲೆಸ್ಟ್ರಾಲ್ ಮತ್ತು ಆಮ್ಲೀಯತೆ ಔಷಧಿಗಳು,ಕ್ಯಾಲ್ಸಿಯಂ ಮತ್ತು ಕಬ್ಬಿಣ ಪೂರಕಗಳು ಥೈರಾಯ್ಡಿ ಔಷಧಿಗಳ ಪರಿಣಾಮವನ್ನು ಕುಗ್ಗಿಸುತ್ತವೆ. ಥೈರಾಯ್ಡಿ ಮತ್ತು ಇತರ ಔಷಧಿಗಳ ಸೇವನೆಯ ನಡುವೆ ಕನಿಷ್ಠ ನಾಲ್ಕು ಗಂಟೆಗಳ ಅಂತರ ಅಗತ್ಯವಾಗಿದೆ.

► ಯಾವುದೇ ಔಷಧಿಯ ಆರಂಭ/ಸ್ಥಗಿತ

ಸಂತಾನ ನಿಯಂತ್ರಣ ಮಾತ್ರೆಗಳು ಮತ್ತು ಇತರ ಯಾವುದೇ ಹಾರ್ಮೋನ್ ಔಷಧಿಗಳು ಥೈರಾಯ್ಡೆ ಔಷಧಿಗಳ ಪರಿಣಾಮವನ್ನು ತಗ್ಗಿಸುತ್ತವೆ. ಹೀಗಾಗಿ ಇಂತಹ ಯಾವುದೇ ಔಷಧಿಗಳ ಸೇವನೆಯ್ನು ಆರಂಭಿಸುವ ಮೊದಲು ನೀವು ವೈದ್ಯರಿಗೆ ಥೈರಾಯ್ಡಿ ಔಷಧಿಗಳನ್ನು ಸೇವಿಸುತ್ತಿರುವ ಮಾಹಿತಿಯನ್ನು ನೀಡಿದರೆ ಡೋಸೇಜ್‌ನಲ್ಲಿ ಹೊಂದಾಣಿಕೆ ಮಾಡಲು ಸಾಧ್ಯವಾಗುತ್ತದೆ. ಇಂತಹ ಔಷಧಿಗಳ ಸೇವನೆಯನ್ನು ನಿಲ್ಲಿಸುವುದಿದ್ದರೆ ಅದನ್ನೂ ವೈದ್ಯರಿಗೆ ತಿಳಿಸಬೇಕಾಗುತ್ತದೆ.

► ಆಗಾಗ್ಗೆ ಔಷಧಿ ಬ್ರಾಂಡ್‌ಗಳ ಬದಲಾವಣೆ

 ನಮ್ಮಲ್ಲಿ ಹೆಚ್ಚಿನವರು ಅಗ್ಗದ ದರಗಳಲ್ಲಿ ಸಿಗುತ್ತದೆ ಎಂದು ಅಥವಾ ನಾವು ಸೇವಿಸುತ್ತಿರುವ ಬ್ರಾಂಡಿನ ಔಷಧಿ ಸಿಗದಿದ್ದರೆ ಬೇರೆ ಬ್ರಾಂಡಿನ ಅದೇ ಔಷಧಿಯನ್ನು ಖರೀದಿಸುತ್ತೇವೆ. ಆದರೆ ಬ್ರಾಂಡ್‌ಗಳನ್ನು ಬದಲಿಸುವುದು ಥೈರಾಯ್ಡಾ ಹಾರ್ಮೋನಿನ ಹೀರುವಿಕೆಯ ಮೇಲೆ ಪ್ರತಿಕೂಲ ಪರಿಣಾಮವನ್ನುಂಟು ಮಾಡಬಹುದು ಮತ್ತು ಇದು ನಮ್ಮ ಶರೀರದಲ್ಲಿ ಥೈರಾಯ್ಡಾ ಹಾರ್ಮೋನ್ ಮಟ್ಟದ ಏರಿಳಿತಗಳಿಗೆ ಕಾರಣವಾಗಬಹುದು. ಹೀಗಾಗಿ ಒಂದೇ ಔಷಧಿ ಬ್ರಾಂಡಿಗೆ ಅಂಟಿಕೊಳ್ಳಬೇಕು ಅಥವಾ ಬ್ರಾಂಡ್ ಬದಲಿಸುವ ಮುನ್ನ ವೈದ್ಯರ ಸಲಹೆ ಪಡೆದುಕೊಳ್ಳಬೇಕು.

► ಓವರ್‌ಡೋಸ್‌ನಿಂದ ದೂರವಿರಿ ಮತ್ತು ಸೇವನೆಯನ್ನು ತಪ್ಪಿಸಬೇಡಿ

ಕೆಲವೊಮ್ಮೆ ನಿಗದಿತ ಸಮಯಕ್ಕೆ ಔಷಧಿ ಸೇವನೆಯನ್ನು ನಾವು ಮರೆಯಬಹುದು. ಇಂತಹ ಪ್ರಕರಣದಲ್ಲಿ ದಿನದ ಬೇರೆ ಯಾವುದೇ ಸಮಯದಲ್ಲಿ ಅದನ್ನು ಸೇವಿಸಬಾರದು. ಹೆಚ್ಚಿನ ಥೈರಾಯ್ಡಿ ಔಷಧಿಗಳನ್ನು ಪೂರ್ಣವಾಗಿ ಹೀರಿಕೊಳ್ಳಲು ಶರೀರಕ್ಕೆ ಹೆಚ್ಚು ಕಾಲಾವಕಾಶ ಬೇಕಾಗುವುದರಿಂದ ಮರು ದಿನ ಬೆೆಳಿಗ್ಗೆ ಎರಡು ಡೋಸ್ ಸೇವಿಸುವಂತೆ ಕೆಲವು ಎಂಡೋಕ್ರೈನಾಲಜಿಸ್ಟ್‌ಗಳು ಸೂಚಿಸುತ್ತಾರೆ. ಆದರೆ ಇದು ಒಳ್ಳೆಯದು ಎನ್ನುವುದಕ್ಕೆ ಯಾವುದೇ ಆಧಾರವಿಲ್ಲ ಮತ್ತು ಕೆಲವು ವೈದ್ಯರು ಡಬಲ್ ಡೋಸ್ ಸೇವನೆಯನ್ನು ವಿರೋಧಿಸುತ್ತಾರೆ. ಹೀಗಾಗಿ ಇದನ್ನು ತಪ್ಪಿಸಲು ಸಮಯಕ್ಕೆ ಸರಿಯಾಗಿ ಔಷಧಿ ಸೇವನೆಯನ್ನು ಪಾಲಿಸುವುದು ಒಳ್ಳೆಯದು.

► ಆಹಾರ ಮತ್ತು ಔಷಧಿ

ಹಾಲು,ಚೀಸ್,ಪಾಲಕ್,ಬ್ರೊಕೋಲಿ,ಕಾಲಿಫ್ಲವರ್ ಮತ್ತು ಸೋಯಾ ಉತ್ಪನ್ನಗಳಂತಹ ಕೆಲವು ಆಹಾರಗಳು ಹಾರ್ಮೋನ್ ಹೀರುವಿಕೆಗೆ ಅಡ್ಡಿಯನ್ನುಂಟು ಮಾಡುತ್ತವೆ. ಹೀಗಾಗಿ ಥೈರಾಯ್ಡಿ ಔಷಧಿಗಳನ್ನು ಸೇವಿಸುತ್ತಿರುವಾಗ ಇಂತಹ ಆಹಾರಗಳ ಸೇವನೆಯ ಮೇಲೆ ಮಿತಿಯಿರಲಿ.

► ತೂಕದಲ್ಲಿ ಬದಲಾವಣೆ

ನಾವು ಥೈರಾಯ್ಡ ಔಷಧಿಗಳನ್ನು ಸೇವಿಸುತ್ತಿರುವಾಗ ನಮ್ಮ ಶರೀರದ ತೂಕದಲ್ಲಿ ಬದಲಾವಣೆಯೊಂದಿಗೆ ಹಾರ್ಮೋನ್‌ನ ಅಗತ್ಯ ಪ್ರಮಾಣವೂ ಬದಲಾಗುತ್ತದೆ. ಹೀಗಾಗಿ ತೂಕದಲ್ಲಿ ಹೆಚ್ಚುಕಡಿಮೆಯಾಗುತ್ತಿದೆಯೇ ಎನ್ನುವುದರ ಮೇಲೆ ನಿಗಾಯಿರಿಸಬೇಕು ಮತ್ತು ಅಂತಹ ಸಂದರ್ಭದಲ್ಲಿ ವೈದ್ಯರಿಗೆ ಮಾಹಿತಿ ನೀಡಿದರೆ ಅವರು ಔಷಧಿಯ ಡೋಸ್ ಅನ್ನು ಮರುಹೊಂದಿಸಲು ಸಾಧ್ಯವಾಗುತ್ತದೆ.

► ಔಷಧಿಯ ದಾಸ್ತಾನು

 ಹಲವರು ಇದು ಮುಖ್ಯ ಎಂದು ಭಾವಿಸುವುದೇ ಇಲ್ಲ, ಆದರೆ ಔಷಧಿಗಳನ್ನು ಯಾವಾಗಲೂ ಸೂಕ್ತ ಸ್ಥಳದಲ್ಲಿರಿಸಬೇಕು. ವಿಶೇಷವಾಗಿ ಥೈರಾಯ್ಡ ಔಷಧಿಗಳನ್ನು ತಂಪಾದ,ಒಣ ಮತ್ತು ಹೆಚ್ಚು ಬೆಳಕಿರದ ಸ್ಥಳದಲ್ಲಿರಿಸಬೇಕು. ಅತಿಯಾದ ಬೆಳಕು,ಉಷ್ಣತೆ ಮತ್ತು ತೇವಾಂಶಗಳಿಗೆ ಔಷಧಿಗಳು ತೆರೆದುಕೊಂಡರೆ ಅವುಗಳ ಪರಿಣಾಮ ಕುಂದುತ್ತದೆ.

► ನೈಸರ್ಗಿಕ ಪೂರಕಗಳು

ಹೆಚ್ಚಿನವರು ಹಾರ್ಮೋನ್‌ಗಳ ಸಮತೋಲನಕ್ಕಾಗಿ ಹಾಲಿ ತೆಗೆದುಕೊಳ್ಳುತ್ತಿರುವ ಔಷಧಿಗಳ ಜತೆಗೆ ನೈಸರ್ಗಿಕ ಪೂರಕಗಳನ್ನು ಸೇವಿಸುತ್ತಾರೆ. ನೆನಪಿರಲಿ,ಹಲವಾರು ನೈಸರ್ಗಿಕ ಪೂರಕಗಳು ಹೆಚ್ಚಿನ ಪ್ರಮಾಣದಲ್ಲಿ ಥೈರಾಯ್ಡಿ ಹಾರ್ಮೋನ್‌ಗಳನ್ನು ಒಳಗೊಂಡಿರುತ್ತವೆ ಮತ್ತು ಅವುಗಳ ಲೇಬಲ್‌ನಲ್ಲಿ ಈ ಅಂಶ ನಮೂದಾಗಿರುವುದಿಲ್ಲ. ಇದರ ಪರಿಣಾಮವಾಗಿ ನಾವು ನಮಗೆ ಗೊತ್ತಿಲ್ಲದೆ ಕೆಲವು ಹಾರ್ಮೋನ್‌ಗಳ್ನು ಸೇವಿಸುತ್ತಿರುತ್ತೇವೆ ಮತ್ತು ಇದು ಹೆಚ್ಚುವರಿ ಡೋಸೇಜ್‌ಗೆ ಕಾರಣವಾಗುತ್ತದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News