ಸಿಸೇರಿಯನ್‌ ಮೂಲಕ ಜನಿಸಿದ ಮಕ್ಕಳಿಗೆ ಅಸ್ತಮಾ ಮತ್ತು ಅಲರ್ಜಿ ಅಪಾಯ ಹೆಚ್ಚು....ಏಕೆ ಗೊತ್ತೇ?

Update: 2018-05-22 10:47 GMT

ಸಿಸೇರಿಯನ್ ಮೂಲಕ ಜನಿಸಿದ ಮಕ್ಕಳು ಅಲರ್ಜಿಗಳು ಮತ್ತು ಮುಖ್ಯವಾಗಿ ಅಸ್ತಮಾಕ್ಕೆ ಗುರಿಯಾಗಬಹುದಾದ ಸಾಧ್ಯತೆಗಳು ಹೆಚ್ಚು. ಇದನ್ನು ಈ ಹಿಂದೆಯೇ ಹಲವಾರು ಅಧ್ಯಯನಗಳು ಸೂಚಿಸಿದ್ದವಾದರೂ,ಸಿಸೇರಿಯನ್ ಶಸ್ತ್ರಚಿಕಿತ್ಸೆಯು ಮಗುವಿನಲ್ಲಿ ರೋಗ ನಿರೋಧಕ ಶಕ್ತಿಯ ಬೆಳವಣಿಗೆಗೆ ವ್ಯತ್ಯಯವುನ್ನುಂಟು ಮಾಡುವದು ಇದಕ್ಕೆ ಮುಖ್ಯ ಕಾರಣವಾಗಿದೆ ಎನ್ನುವುದನ್ನು ಇತ್ತೀಚಿನ ಅಧ್ಯಯನಗಳು ತೋರಿಸಿವೆ.

ಸಿಸೇರಿಯನ್ ಶಸ್ತ್ರಚಿಕಿತ್ಸೆ ಸಂದರ್ಭದಲ್ಲಿ ಮಗುವಿನ ಶರೀರದ ರೋಗ ನಿರೋಧಕ ವ್ಯವಸ್ಥೆಯ ಬೆಳವಣಿಗೆಯನ್ನು ಮತ್ತು ಕಾರ್ಯ ನಿರ್ವಹಣೆಯನ್ನು ಕ್ರಮಬದ್ಧಗೊಳಿಸುವ ಟಿ-ಜೀವಕೋಶಗಳು ಅಥವಾ ಟಿ-ಲಿಂಫೋಸೈಟ್‌ಗಳು ಒತ್ತಡಕ್ಕೊಳಗಾಗುವುದರಿಂದ ರೋಗ ನಿರೋಧಕ ಜೀವಕೋಶಗಳಿಗೆ ಕೆಲಮಟ್ಟಿಗೆ ಹಾನಿಯುಂಟಾಗುತ್ತದೆ ಎಂದು ಅಧ್ಯಯನವು ಹೇಳಿದೆ.

ಸಿಸೇರಿಯನ್ ಮೂಲಕ ಜನಿಸಿದ ಮಗುವಿನ ಕುಟುಂಬದಲ್ಲಿ ಅಸ್ತಮಾದ ಇತಿಹಾಸವಿದ್ದರೆ ಅದು ಬಾಲ್ಯದಿಂದಲೇ ಅಸ್ತಮಾದಿಂದ ಪೀಡಿತವಾಗುವ ಅಪಾಯ ಹೆಚ್ಚು ಎನ್ನುವುದು ಸಂಶೋಧಕರ ಅಭಿಪ್ರಾಯವಾಗಿದೆ. ಮಕ್ಕಳಲ್ಲಿ ಟಿ-ಜೀವಕೋಶಗಳ ಮೇಲಿನ ಒತ್ತಡದ ಪ್ರಮಾಣವನ್ನು ಹೊಕ್ಕಳು ಬಳ್ಳಿಯ ರಕ್ತದ ವಿಶ್ಲೇಷಣೆಯಿಂದ ಲೆಕ್ಕ ಹಾಕಲಾಗಿದೆ.

ಇತ್ತೀಚಿನ ದಿನಗಳಲ್ಲಿ ಸಿಸೇರಿಯನ್ ಹೆರಿಗೆಗಳು ಹೆಚ್ಚುತ್ತಿರುವುದರಿಂದ ಮಕ್ಕಳಲ್ಲಿ ಅಸ್ತಮಾ ಪ್ರಕರಣಗಳ ಅಪಾಯವೂ ಹೆಚ್ಚುತ್ತಿದೆ ಎಂದು ತಜ್ಞರು ಆತಂಕ ವ್ಯಕ್ತಪಡಿಸಿದ್ದಾರೆ. ಕೆಲವೊಮ್ಮೆ ಅವಧಿಗೆ ಮುನ್ನವೇ ತಾಯಿ-ಮಗುವಿನ ಜೀವಗಳಿಗೆ ಅಪಾಯವಾದರೆ ಸಿಸೇರಿಯನ್ ನಡೆಸಲಾಗುತ್ತದೆ ಮತ್ತು ಕೆಲವು ಮಕ್ಕಳಲ್ಲಿ ಅವಧಿಗೆ ಮುನ್ನವೇ ಹೆರಿಗೆಯಾಗುತ್ತದೆ. ಇಂತಹ ಮಕ್ಕಳಲ್ಲಿ ಶ್ವಾಸಕೋಶಗಳು ಪೂರ್ಣವಾಗಿ ಬೆಳೆದಿರುವುದಿಲ್ಲ ಮತ್ತು ಇದು ಅವರು ಎಳೆವಯಸ್ಸಿನಲ್ಲಿ ಉರಿಯೂತ ಕಾಯಿಲೆಗಳಿಗೆ ಗುರಿಯಾಗುವ ಅಪಾಯವನ್ನು ಹೆಚ್ಚಿಸುತ್ತದೆ. ಆದರೆ ಅಸ್ತಮಾಕ್ಕೆ ಇದೊಂದೇ ಕಾರಣವಾಗುವುದಿಲ್ಲ.

ಮಹಿಳೆಯರು ಗರ್ಭಿಣಿಯರಾಗಿದ್ದಾಗ ಅವರ ವಂಶವಾಹಿಯಲ್ಲಿ ಬದಲಾವಣೆಗಳನ್ನು ಮಾಡುವ ಹಲವಾರು ವಾತಾವರಣ ಸಂಬಂಧಿ ಕಾರಣಗಳಿದ್ದು,ಇವು ಮಕ್ಕಳು ಜನಿಸಿದ ಬಳಿಕ ಅವರಲ್ಲಿ ಅಸ್ತಮಾ ಉಂಟು ಮಾಡಬಹುದು. ನೇರ ಅಥವಾ ಪರೋಕ್ಷ ಧೂಮ್ರಪಾನ ಅಥವಾ ತಂಬಾಕು ಉತ್ಪನ್ನಗಳ ಸೇವನೆಯು ಇದಕ್ಕೆ ಕಾರಣವಾಗಬಹುದು.

ಕೆಲವೊಮ್ಮೆ ನೋವುರಹಿತವಾಗಿ ಆದ ಹೆರಿಗೆಯು ಸಾಮಾನ್ಯವಾಗಿ ಸಹಜ ಹೆರಿಗೆಗೆ ಪಕ್ವವಾದ ಸಮಯವನ್ನು ತಲುಪಲು ಅವಕಾಶ ನೀಡುವುದಿಲ್ಲ ಮತ್ತು ಇದರಿಂದ ಶಿಶುಗಳು ಅಸ್ತಮಾದಂತಹ ಕಾಯಿಲೆಗಳೊಂದಿಗೇ ಜನಿಸುತ್ತವೆ.

ತಾಯಂದಿರು ಮಕ್ಕಳಿಗೆ ಉಣಿಸುವ ಎದೆಹಾಲು ಸೋಂಕುಪೀಡಿತವಾಗಿದ್ದರೆ ಅದು ಅವರಲ್ಲಿ ಅಸ್ತಮಾವನ್ನುಂಟು ಮಾಡುವ ಪರೋಕ್ಷ ಕಾರಣವಾಗುತ್ತದೆ. ಅಲ್ಲದೆ ಮಕ್ಕಳಿಗೆ ಎದೆ ಹಾಲನ್ನು ಉಣಿಸುವುದನ್ನೇ ನಿಲ್ಲಿಸಿದರೆ ಅದು ಅವರಲ್ಲಿ ರೋಗ ನಿರೋಧಕ ಶಕ್ತಿಯ ಬೆಳವಣಿಗೆಯನ್ನು ಕುಂದಿಸುತ್ತದೆ ಮತ್ತು ಅವುಗಳ ಶ್ವಾಸಕೋಶಗಳ ಮೇಲೆ ಪ್ರತಿಕೂಲ ಪರಿಣಾಮಗಳನ್ನುಂಟು ಮಾಡುತ್ತದೆ.

ಆ್ಯಂಟಿ ಬಯಾಟಿಕ್‌ಗಳು ಮತ್ತು ಸ್ಟಿರಾಯ್ಡಿಗಳ ಅತಿಯಾದ ಬಳಕೆಯು ಮಕ್ಕಳಲ್ಲಿ ಕಾಯಿಲೆಗಳು ತೀವ್ರಗೊಳ್ಳುವುದಕ್ಕೆ ಮತ್ತು ರೋಗ ನಿರೋಧಕ ಶಕ್ತಿಯು ಕಡಿಮೆಯಾಗಲು ಕಾರಣವಾಗುತ್ತದೆ. ಸಿರಪ್ ರೂಪದಲ್ಲಿ ಮಕ್ಕಳಿಗೆ ನೀಡಲಾಗುವ ಸ್ಟಿರಾಯ್ಡಿಗಳು ಅವರ ರೋಗ ನಿರೋಧಕ ಶಕ್ತಿಯ ಮೇಲೆ ಅಡ್ಡಪರಿಣಾಮಗಳನ್ನುಂಟು ಮಾಡುತ್ತವೆ.

ಅಲ್ಲದೆ ಆ್ಯಂಟಿ ಬಯಾಟಿಕ್‌ಗಳ ಅತಿಯಾದ ಬಳಕೆಯು ಸಹ ಸಿಸೇರಿಯನ್ ಮೂಲಕ ಜನಿಸಿದ ಮಕ್ಕಳಲ್ಲಿ ಪ್ರತಿಕೂಲ ಪರಿಣಾಮಗಳನ್ನುಂಟು ಮಾಡುತ್ತವೆ ಮತ್ತು ಎಳವೆಯಲ್ಲಿಯೇ ಅಸ್ತಮಾ ಮತ್ತು ಇತರ ಅಲರ್ಜಿಗಳಿಗೆ ಕಾರಣವಾಗುತ್ತವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News