ಸಮ್ಮಿಶ್ರ ಸರಕಾರದಿಂದ ತೃತೀಯ ರಂಗಕ್ಕೆ ಮರುಜೀವ

Update: 2018-05-27 18:32 GMT

ಸಮ್ಮಿಶ್ರ ಸರಕಾರವನ್ನು ಸಾಧ್ಯವಾದಷ್ಟು ಬೇಗ ಕೆಡವಬೇಕು ಮತ್ತು ತಾನು ಪುನಃ ಅಧಿಕಾರಕ್ಕೆ ಬರಬೇಕು ಎಂದು ಬಿಜೆಪಿ ಹೊಂಚು ಹಾಕುತ್ತಿದೆ. ಶೀಘ್ರವೇ ಮರು ಚುನಾವಣೆ ನಡೆಸಿ, ಬಹುಮತ ಗಳಿಸುವ ಇರಾದೆ ಹೊಂದಿದೆ. ಅದಕ್ಕಾಗಿಯೇ ಜೆಡಿಎಸ್ ಮತ್ತು ಕಾಂಗ್ರೆಸ್ ನಾಯಕರ ನಡುವೆ ವೈಮನಸ್ಸು ಉಂಟು ಮಾಡಲು ಪ್ರಯತ್ನಗಳು ನಡೆದಿವೆ. ಕಾಂಗ್ರೆಸ್ ಮುಕ್ತ ಕರ್ನಾಟಕ ಎಂದು ಜಪಿಸುತ್ತಿದ್ದ ಬಿಜೆಪಿಯವರು ಈಗ ದಿಢೀರ್‌ನೆ ಕಾಂಗ್ರೆಸ್ ಪರ ಮೃದು ಧೋರಣೆ ವಹಿಸತೊಡಗಿದ್ದಾರೆ.


ದೇಶ ಮತ್ತು ರಾಜ್ಯದ ಹಿತದೃಷ್ಟಿಯಿಂದ ಅತ್ಯಂತ ಮಹತ್ವ ಪಡೆದಿದ್ದ 2018ರ ವಿಧಾನಸಭಾ ಚುನಾವಣೆಯಲ್ಲಿ ರಾಜ್ಯದ ಮತದಾರರು ಸ್ಪಷ್ಟವಾದ ತೀರ್ಪು ಕೊಟ್ಟಿದ್ದಾರೆ. ಯಾವುದೇ ಪಕ್ಷಕ್ಕೂ ಪೂರ್ಣಪ್ರಮಾಣದ ಬಹುಮತ ನೀಡದಿದ್ದರೂ ಈ ನಾಡು ಸೌಹಾರ್ದ ಮತ್ತು ಬಹುಸಂಸ್ಕೃತಿ ಪರಂಪರೆಗೆ ಸೇರಿದ್ದು ಎಂಬುದನ್ನು ಚುನಾವಣೆ ಮುಖಾಂತರ ನಿಸ್ಸಂಶಯ ಸಂದೇಶ ನೀಡಿದ್ದಾರೆ. ಈ ಕಾರಣಕ್ಕೆ ಬಿಜೆಪಿಯನ್ನು 104 ಸ್ಥಾನಗಳಿಗೆ ಸೀಮಿತಗೊಳಿಸಿದರೆ, ಕಾಂಗ್ರೆಸ್‌ನ್ನು 78ಕ್ಕೆ ಮತ್ತು ಜೆಡಿಎಸ್‌ಗೆ 38 ಸ್ಥಾನಗಳು ದೊರೆಯುವಂತೆ ಮಾಡಿದರು. ಜಾತ್ಯತೀತ, ಸೌಹಾರ್ದ ತತ್ವಗಳ ಮೇಲೆ ನಂಬಿಕೆ ಹೊಂದಿರುವ ಮತ್ತು ರೈತಪರ ಕಾಳಜಿ ತೋರುವ ಪಕ್ಷಗಳಿಗೆ ಹೆಚ್ಚಿನ ಆದ್ಯತೆ ನೀಡಿದರು.

ಬಿಜೆಪಿಗೆ ಹೋಲಿಸಿದರೆ ಕಾಂಗ್ರೆಸ್‌ಗೆ ಕಡಿಮೆ ಸ್ಥಾನಗಳು ಬಂದಿರಬಹುದು. ಆದರೆ ರಾಜ್ಯದ ಒಟ್ಟಾರೆ ಮತಗಳ ಆಧಾರದಲ್ಲಿ ಬಿಜೆಪಿಗಿಂತ ಕಾಂಗ್ರೆಸ್ ಮುಂದಿದೆ. ಕಾಂಗ್ರೆಸ್ ಶೇ.38 ಮತ್ತು ಬಿಜೆಪಿ ಶೇ. 36ರಷ್ಟು ಮತಗಳನ್ನು ಗಳಿಸಿದೆ. ಸರಕಾರ ರಚಿಸುವಷ್ಟು ಸ್ಥಾನ ಗಳಿಸದಂತೆ ಬಿಜೆಪಿಯನ್ನು ತಡೆಯುವಲ್ಲಿ ಜೆಡಿಎಸ್ ಪರ ಒಲವು ತೋರಿದ ಮತದಾರರು ಸಹ ಪ್ರಮುಖ ಪಾತ್ರ ವಹಿಸಿದ್ದಾರೆ. ಇದಕ್ಕೆ ಪೂರಕ ಎಂಬಂತೆ ರಾಜ್ಯದಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ನೇತೃತ್ವದ ಸಮ್ಮಿಶ್ರ ಸರಕಾರ ಅಸ್ತಿತ್ವಕ್ಕೆ ಬಂದಿದ್ದು, ಸದನದಲ್ಲಿ ವಿಶ್ವಾಸಮತ ಕೂಡ ಸಾಬೀತುಪಡಿಸಿದೆ. ಕಾಂಗ್ರೆಸ್ ಮತ್ತು ಜೆಡಿಎಸ್‌ನ ಪ್ರಣಾಳಿಕೆ ಆಧಾರದ ಮೇಲೆಯೇ ಸರಕಾರ ನಡೆಸಲಾಗುವುದು ಎಂದು ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಘೋಷಿಸಿದ್ದಾರೆ.

ಸಮ್ಮಿಶ್ರ ಸರಕಾರವು ರಾಜ್ಯದ ದೃಷ್ಟಿಕೋನದಿಂದ ಅಷ್ಟೇ ಅಲ್ಲ, ದೇಶದ ಭವಿಷ್ಯದ ದೃಷ್ಟಿಯಿಂದಲೂ ಪ್ರಮುಖ ಪಾತ್ರ ವಹಿಸಲಿದೆ. ಅದರ ಮುನ್ಸೂಚನೆಯು ಎಚ್.ಡಿ. ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿ ಮತ್ತು ಡಾ. ಜಿ.ಪರಮೇಶ್ವರ್ ಉಪಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ ದಿನವೇ ಕಂಡು ಬಂತು. ಅಂದು ವಿವಿಧ ರಾಜ್ಯಗಳ ಮುಖ್ಯಮಂತ್ರಿಗಳು, ಜಾತ್ಯತೀತ ತತ್ವಗಳ ತಳಹದಿ ಹೊಂದಿರುವ ರಾಷ್ಟ್ರೀಯ ಮತ್ತು ಪ್ರಾದೇಶಿಕ ಪಕ್ಷಗಳ ನಾಯಕರು ಪಾಲ್ಗೊಂಡರು. ಅಷ್ಟಕ್ಕೆ ಸೀಮಿತಗೊಳ್ಳದೆ ಕಾಂಗ್ರೆಸ್ ಸಹಯೋಗದಲ್ಲಿ ವಿವಿಧ ಪಕ್ಷಗಳ ತೃತೀಯ ರಂಗ ಅಸ್ತಿತ್ವದಲ್ಲಿದೆ ಎಂಬುದನ್ನು ತೋರಿಸಿಕೊಟ್ಟರು. ನಾವೆಲ್ಲರೂ ಒಗ್ಗಟ್ಟಿನಿಂದ ಇದ್ದೇವೆ ಎಂದು ಪರಸ್ಪರ ಕೈಗಳನ್ನು ಎತ್ತಿ ಹಿಡಿದ ಎಲ್ಲರೂ 2019ರ ಲೋಕಸಭಾ ಚುನಾವಣೆಗೆ ಈಗಾಗಲೇ ತಯಾರಿ ನಡೆದಿದೆ ಎಂದು ಪುಟ್ಟ ಸುಳಿವು ನೀಡಿದರು.

ಎಡಪಕ್ಷಗಳ ಸಹಯೋಗದಲ್ಲಿ ಸಾಮಾನ್ಯ ಕನಿಷ್ಠ ಕಾರ್ಯಕ್ರಮ ಆಧರಿಸಿ ಈ ಹಿಂದೆ ಆಡಳಿತ ನಡೆಸಿದ ಕಾಂಗ್ರೆಸ್ ನೇತೃತ್ವದ ಯುಪಿಎ ಸರಕಾರವು 10 ವರ್ಷಗಳ ಅವಧಿಯಲ್ಲಿ ಹಲವು ಸವಾಲು ಎದುರಿಸಿತು. ಮತ್ತೊಂದೆಡೆ ತಾತ್ವಿಕ ಮತ್ತು ಆಂತರಿಕ ಭಿನ್ನಮತದಿಂದ ತೃತೀಯ ರಂಗವು ಕ್ರಮೇಣ ದುರ್ಬಲಗೊಂಡಿತು. ಕೇಂದ್ರದಲ್ಲಿ ತೃತೀಯ ರಂಗ ನೇತೃತ್ವದ ಸರಕಾರ ರಚನೆ ಕುರಿತು ಇದ್ದ ಆಶಾಭಾವವು ಕಾಣೆಯಾಯಿತು. ಆದರೆ ಕರ್ನಾಟಕದಲ್ಲಿ ಜೆಡಿಎಸ್-ಕಾಂಗ್ರೆಸ್ ಸಮ್ಮಿಶ್ರ ಸರಕಾರದ ರಚನೆಯಿಂದ ತೃತೀಯ ರಂಗವು ಮರುಜೀವ ಪಡೆಯುವ ಲಕ್ಷಣ ಸ್ಪಷ್ಟವಾಗಿ ಗೋಚರಿಸತೊಡಗಿದೆ.

ಕಾಂಗ್ರೆಸ್-ಜೆಡಿಎಸ್ ಸಮ್ಮಿಶ್ರ ಸರಕಾರ ರಚನೆಯಾಗಿರುವುದು ಬಿಜೆಪಿಗೆ ಸಹಿಸಲಾಗುತ್ತಿಲ್ಲ. ಈ ಕಾರಣಕ್ಕೆ ಸರಕಾರವು ಅಸ್ತಿತ್ವಕ್ಕೆ ಬಂದ ದಿನದಂದು ಬಿಜೆಪಿಯವರು ಕರಾಳ ದಿನ ಆಚರಿಸಿದರು. ನಂತರ, ವಿಶ್ವಾಸ ಮತ ಗಳಿಸುವ ದಿನದಂದು ಯಡಿಯೂರಪ್ಪ ನೇತೃತ್ವದಲ್ಲಿ ಬಿಜೆಪಿ ಶಾಸಕರು ಸಭಾತ್ಯಾಗ ಮಾಡಿ ವಿಧಾನಸೌಧದಿಂದ ಹೊರ ನಡೆದರು. ಅವರ ಸಿಟ್ಟು ಸೆಡವಿಗೆ ಇರುವ ಏಕೈಕ ಕಾರಣ: ಸರಕಾರ ರಚನೆಗೆ ಜೆಡಿಎಸ್‌ನವರು ಬಿಜೆಪಿ ಜೊತೆ ಕೈಜೋಡಿಸಲಿಲ್ಲ. ಚುನಾವಣೆ ಪೂರ್ವ ಮತ್ತು ನಂತರದ ಅವಧಿಯಲ್ಲಿ ಜೆಡಿಎಸ್‌ನವರನ್ನು ಒಲಿಸಿಕೊಳ್ಳಲು ಶತಪ್ರಯತ್ನ ಪಟ್ಟರೂ ಸಾಧ್ಯವಾಗಲಿಲ್ಲ ಎಂಬ ಬೇಸರ ಬಿಜೆಪಿಯವರಿಗೆ ಇದೆ. ಈ ಕಾರಣದಿಂದಲೇ ಅವರು ಕಾಂಗ್ರೆಸ್ ಬಗ್ಗೆ ಮೃದು ಧೋರಣೆ ತೋರಿ, ಜೆಡಿಎಸ್ ವಿರುದ್ಧ ಕೆಂಡಾಮಂಡಲರಾಗಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ರಾಜ್ಯಪೂರ್ತಿ ಸುತ್ತಾಡಿ ಗಂಟೆಗಟ್ಟಲೆ ಭಾಷಣ ಮಾಡಿದರು. ಸರಕಾರ ಬದಲಿಸಿ-ಬಿಜೆಪಿ ಗೆಲ್ಲಿಸಿ ಎಂದು ಘೋಷಣೆ ಹಾಕಿದರು. ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ರಾಜ್ಯದಲ್ಲೇ ಟಿಕಾಣಿ ಹೂಡಿ ಕೋಮುವಾದ-ಜಾತಿವಾದದ ರಾಜಕಾರಣ ಮಾಡಲು ಯತ್ನಿಸಿದರು. ಕೋಮು ಗಲಭೆ-ಪ್ರಚೋದನೆ ಮೂಲಕ ಮತದಾರರನ್ನು ಸೆಳೆಯಲು ಪ್ರಯತ್ನಿಸಿದರು. ಮಠಾಧೀಶರನ್ನು ಭೇಟಿಯಾದರು. ದಲಿತರ ಮನೆಗಳಲ್ಲಿ ಊಟ ಮಾಡಿದರು. ಆದರೆ, ನಂತರವೂ ಜನರಿಂದ ಬಿಜೆಪಿ ಪರ ಸಕಾರಾತ್ಮಕ ಪ್ರತಿಕ್ರಿಯೆ ಬಾರದಿರುವುದು ಕಂಡ ಪಕ್ಷದ ನಾಯಕರು ಬಗೆಬಗೆಯ ಕಸರತ್ತು ನಡೆಸಲು ಮುಂದಾದರು. ಜಾತಿ-ಮತಗಳ ಲೆಕ್ಕಾಚಾರ ಹಾಕತೊಡಗಿದರು.

ಅದರ ಮೊದಲ ಭಾಗವಾಗಿಯೇ ಬಿಜೆಪಿಯವರು ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರನ್ನು ಕರ್ನಾಟಕಕ್ಕೆ ಭೇಟಿ ನೀಡುವಂತೆ ಮಾಡಿದರು. ಇಲ್ಲಿನ ಆದಿಚುಂಚನಗಿರಿ ಮಠದ ನಿರ್ಮಲಾನಂದನಾಥ ಸ್ವಾಮೀಜಿ ಅವರೊಂದಿಗೆ ಸಂವಾದ ಏರ್ಪಡಿಸಿದರು. ಎಚ್.ಡಿ. ಕುಮಾರಸ್ವಾಮಿಯವರು ಮಠದ ಭಕ್ತರಾಗಿರುವ ಕಾರಣ ಅವರ ಮೇಲೆ ನಿರ್ಮಲಾನಂದನಾಥ ಸ್ವಾಮೀಜಿ ಪ್ರಭಾವ ಬೀರಬೇಕೆಂದು ಮನವಿಯನ್ನೂ ಮಾಡಿಕೊಂಡರು. ಜೆಡಿಎಸ್-ಬಿಜೆಪಿ ಸಮ್ಮಿಶ್ರ ಸರಕಾರ ರಚನೆಗೆ ಪೂರಕವಾಗುವಂತೆ ಕುಮಾರಸ್ವಾಮಿಯವರ ಜೊತೆ ಮಾತುಕತೆ ನಡೆಸುವಂತೆ ಸ್ವಾಮೀಜಿಯವರಿಗೆ ಕೋರಿದರು. ಆದರೆ ಇದನ್ನು ನಿರಾಕರಿಸಿದ ಸ್ವಾಮೀಜಿ, ‘ನಾನು ಯಾವುದೇ ಕಾರಣಕ್ಕೂ ರಾಜಕೀಯ ಹಸ್ತಕ್ಷೇಪ ಮಾಡುವುದಿಲ್ಲ. ನನ್ನಿಂದ ಅದೆಲ್ಲವನ್ನು ನಿರೀಕ್ಷಿಸಬೇಡಿ’ ಎಂದು ಸ್ಪಷ್ಟವಾಗಿ ತಿಳಿಸಿದರು.

ಚುನಾವಣೆ ಬಳಿಕ ಬಿಜೆಪಿಯವರು ಬೇರೆ ಬೇರೆ ರೀತಿಯಲ್ಲಿ ಜೆಡಿಎಸ್ ಮತ್ತು ಕಾಂಗ್ರೆಸ್ ಶಾಸಕರನ್ನು ಸೆಳೆಯಲು ಯತ್ನಿಸಿದರಾದರೂ ಸಫಲವಾಗಲಿಲ್ಲ. ಸಮ್ಮಿಶ್ರ ಸರಕಾರವನ್ನು ಸಾಧ್ಯವಾದಷ್ಟು ಬೇಗ ಕೆಡವಬೇಕು ಮತ್ತು ತಾನು ಪುನಃ ಅಧಿಕಾರಕ್ಕೆ ಬರಬೇಕು ಎಂದು ಬಿಜೆಪಿ ಹೊಂಚು ಹಾಕುತ್ತಿದೆ. ಶೀಘ್ರವೇ ಮರು ಚುನಾವಣೆ ನಡೆಸಿ, ಬಹುಮತ ಗಳಿಸುವ ಇರಾದೆ ಹೊಂದಿದೆ. ಅದಕ್ಕಾಗಿಯೇ ಜೆಡಿಎಸ್ ಮತ್ತು ಕಾಂಗ್ರೆಸ್ ನಾಯಕರ ನಡುವೆ ವೈಮನಸ್ಸು ಉಂಟು ಮಾಡಲು ಪ್ರಯತ್ನಗಳು ನಡೆದಿವೆ. ಕಾಂಗ್ರೆಸ್ ಮುಕ್ತ ಕರ್ನಾಟಕ ಎಂದು ಜಪಿಸುತ್ತಿದ್ದ ಬಿಜೆಪಿಯವರು ಈಗ ದಿಢೀರ್‌ನೆ ಕಾಂಗ್ರೆಸ್ ಪರ ಮೃದು ಧೋರಣೆ ವಹಿಸತೊಡಗಿದ್ದಾರೆ. ಜೆಡಿಎಸ್ ಜೊತೆ ಕೈಜೋಡಿಸಿ, ಕಾಂಗ್ರೆಸ್ ತಪ್ಪು ಮಾಡಿತು. ಭವಿಷ್ಯದಲ್ಲಿ ಪಶ್ಚಾತ್ತಾಪ ಪಡಲಿದೆ. ಕಾಂಗ್ರೆಸ್‌ಗೆ ಜೆಡಿಎಸ್ ಮುಳುವಾಗಲಿದೆ ಎಂಬರ್ಥದಲ್ಲಿ ಬಿಜೆಪಿ ನಾಯಕರು ಮಾತನಾಡುತ್ತಿದ್ದಾರೆ. ಎರಡೂ ಪಕ್ಷಗಳ ಬಗ್ಗೆ ಇಲ್ಲಸಲ್ಲದ್ದನ್ನು ಹೇಳಿ, ಜೆಡಿಎಸ್-ಕಾಂಗ್ರೆಸ್ ನೇತೃತ್ವದ ಸಮ್ಮಿಶ್ರ ಸರಕಾರವನ್ನು ಬೀಳಿಸುವ ತರಾತುರಿ ಯತ್ನ ಬಿಜೆಪಿಯವರು ನಡೆಸಿದ್ದಾರೆ. ಇದೆಲ್ಲದ್ದಕ್ಕೂ ಜೆಡಿಎಸ್-ಕಾಂಗ್ರೆಸ್ ಸಮ್ಮಿಶ್ರ ಸರಕಾರವು ವಿಶ್ವಾಸಮತ ಸಾಬೀತುಪಡಿಸುವ ದಿನದಂದು ಬಿ.ಎಸ್.ಯಡಿಯೂರಪ್ಪನವರು ಆಡಿದ ಹತಾಶೆಯ ಮಾತುಗಳೇ ಸಾಕ್ಷಿ.

ಸುಮಾರು ಅರ್ಧ ಗಂಟೆಗೂ ಹೆಚ್ಚು ಕಾಲ ಮಾತನಾಡಿದ ಯಡಿಯೂರಪ್ಪ ಭಾಷಣದುದ್ದಕ್ಕೂ ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ ಮತ್ತು ಇತರ ಕಾಂಗ್ರೆಸ್ ನಾಯಕರ ಬಗ್ಗೆ ಕಾಳಜಿ ವ್ಯಕ್ತಪಡಿಸಿದರೇ ಹೊರತು ಮುಖ್ಯಮಂತ್ರಿಯಾಗಿ ಎಚ್.ಡಿ. ಕುಮಾರಸ್ವಾಮಿ ಎತ್ತಿದ ಪ್ರಶ್ನೆಗಳಿಗೆ ಮತ್ತು ಕೋರಿದ ಸಹಕಾರಕ್ಕೆ ಯಾವುದೇ ರೀತಿಯ ನೇರ ಉತ್ತರವನ್ನು ನೀಡಲಿಲ್ಲ. ಯಡಿಯೂರಪ್ಪ ಅವರ ಮಾತುಗಳನ್ನು ಗಂಭೀರವಾಗಿ ಪರಿಗಣಿಸದ ಜೆಡಿಎಸ್ ಮತ್ತು ಕಾಂಗ್ರೆಸ್ ನಾಯಕರು ನಕ್ಕರು. ಪ್ರತ್ಯುತ್ತರ ನೀಡಲು ಸಿದ್ಧತೆ ನಡೆಸಿದ್ದರು. ಆದರೆ ಅವರ ಮಾತುಗಳನ್ನು ಆಲಿಸಲು ಯಡಿಯೂರಪ್ಪ ಮತ್ತು ಅವರ ಪಕ್ಷದ ನಾಯಕರೇ ನಿಲ್ಲಲಿಲ್ಲ. ಎಲ್ಲರೂ ಸಭಾತ್ಯಾಗ ಮಾಡಿ, ಸದನದಿಂದ ಹೊರನಡೆದರು.

ವಿಶ್ವಾಸ ಮತ ಗಳಿಸುವ ಸಂದಭರ್ದಲ್ಲಿ ಎಚ್.ಡಿ.ಕುಮಾರಸ್ವಾಮಿಯವರು ಪ್ರಧಾನಿ ಮೋದಿ ಮತ್ತು ರಾಜ್ಯದಲ್ಲಿನ ಹಿಂದಿನ ಬಿಜೆಪಿ ಸರಕಾರದ ಕಾರ್ಯವೈಖರಿಯನ್ನು ಕಟುವಾಗಿ ಟೀಕಿಸಿದರು. ಎಲ್ಲಿಯೂ ಸಹನೆ ಕಳೆದುಕೊಳ್ಳಲಿಲ್ಲ. ಜೊತೆಗೆ ಸಮ್ಮಿಶ್ರ ಸರಕಾರವು 5 ವರ್ಷ ಅಧಿಕಾರಾವಧಿ ಪೂರೈಸಲಿದೆ ಎಂಬ ವಿಶ್ವಾಸವೂ ವ್ಯಕ್ತಪಡಿಸಿದರು. ಯಾರು ಎಷ್ಟೇ ಅಡ್ಡಿ ಆತಂಕ ಉಂಟು ಮಾಡಿದರೂ ಮತ್ತು ವೈಮನಸ್ಸು ಸೃಷ್ಟಿಸಲು ಪ್ರಯತ್ನಿಸಿದರೂ ಸರಕಾರವು 5 ವರ್ಷಗಳ ಕಾಲ ಜನಪರ ಆಡಳಿತ ನೀಡಲಿದೆ ಎಂದು ದೃಢವಾಗಿ ಹೇಳಿದರು. ಈ ಹಿಂದೆ ಬಿಜೆಪಿಯೊಂದಿಗೆ ಕೈ ಜೋಡಿಸಿ ಸಮ್ಮಿಶ್ರ ಸರಕಾರ ಅಸ್ತಿತ್ವಕ್ಕೆ ತಂದ ಪಶ್ಚಾತ್ತಾಪದ ಫಲವಾಗಿ ಕಾಂಗ್ರೆಸ್ ಜೊತೆ ಮೈತ್ರಿ ಮಾಡಿಕೊಂಡಿದ್ದೇನೆ. ತಂದೆ ಎಚ್.ಡಿ.ದೇವೇಗೌಡ ಮತ್ತು ಕಾಂಗ್ರೆಸ್‌ನ ನಾಯಕರ ಸಲಹೆ-ಸೂಚನೆ ಮತ್ತು ಹಿರಿಯರ ಮಾರ್ಗದರ್ಶನದಲ್ಲಿ ಉತ್ತಮ ಆಡಳಿತ ನೀಡುವುದಾಗಿ ಹೇಳಿದರು. ಈ ಮಾತನ್ನು ಅವರು ಉಳಿಸಿಕೊಳ್ಳಬೇಕಾದದ್ದು ದೊಡ್ಡ ಸವಾಲು.

ಕೋಮುವಾದೀಕರಣ ನಿಯಂತ್ರಿಸುವ ಮತ್ತು ಕೇಂದ್ರದಲ್ಲಿ ಬಿಜೆಪಿ ಪುನಃ ಅಧಿಕಾರಕ್ಕೆ ಬಾರದಂತೆ ತಡೆಯುವ ನಿಟ್ಟಿನಲ್ಲಿ ಜೆಡಿಎಸ್-ಕಾಂಗ್ರೆಸ್ ಸಮ್ಮಿಶ್ರ ಸರಕಾರ ಮಹತ್ವದ ಪಾತ್ರ ನಿರ್ವಹಿಸಬೇಕಿದೆ. ಎಲ್ಲಾ ತೆರನಾದ ರಾಜಕೀಯ ವೈಷಮ್ಯ, ಕೀಳರಿಮೆ, ಪ್ರತಿಷ್ಠೆ ಮುಂತಾದವುಗಳನ್ನು ಬದಿಗಿರಿಸಿ ಎರಡೂ ಪಕ್ಷಗಳು ಜೊತೆಗೂಡಿ ಉತ್ತಮ ಆಡಳಿತ ನೀಡಬೇಕು. ಸಮ್ಮಿಶ್ರ ಸರಕಾರದ ಬಗ್ಗೆ ಜನರು ಹೊಂದಿರುವ ನಿರೀಕ್ಷೆಗಳನ್ನು ಈಡೇರಿಸಬೇಕು ಮತ್ತು ಕೋಮುವಾದ ಮುಕ್ತ ರಾಜ್ಯ ನಿರ್ಮಿಸಬೇಕು.

Writer - ಸನತ್ ಕುಮಾರ್ ಬೆಳಗಲಿ

contributor

Editor - ಸನತ್ ಕುಮಾರ್ ಬೆಳಗಲಿ

contributor

Similar News