ಮೊಡವೆಯಿಂದ ಹಿಡಿದು ಕ್ಯಾನ್ಸರ್‌ವರೆಗೆ ಸರ್ವರೋಗಗಳಿಗೆ ಮದ್ದು ಯಾವುದು ಗೊತ್ತೇ?

Update: 2018-05-31 11:53 GMT

ಹಲವಾರು ಆರೋಗ್ಯ ಸಮಸ್ಯೆಗಳಿಗೆ ಒಂದೇ ನೈಸರ್ಗಿಕ ಪರಿಹಾರವಿದ್ದರೆ ಹೇಗೆ? ಅಚ್ಚರಿಯಾಗುತ್ತಿದೆಯೇ? ಅದು ಬೇರೇನೂ ಅಲ್ಲ, ಎಲ್ಲರಿಗೂ ಗೊತ್ತಿರುವ ಕಹಿಬೇವು ಅಥವಾ ಬೇವು! ಅದು ಸರ್ವ ರೋಗ ನಿವಾರಿಣಿಯಾಗಿದೆ. ಚರ್ಮದ ಸಮಸ್ಯೆಯಿರಲಿ,ಅಜೀರ್ಣ ಅಥವಾ ಮಧುಮೇಹ ಸಮಸ್ಯೆಯಿರಲಿ....ಅದನ್ನು ಪರಿಹರಿಸಿಕೊಳ್ಳಲು ಬೇವು ಸದಾಕಾಲ ನೆರವಾಗುತ್ತದೆ. ಪಿತ್ಥ ಮತ್ತು ಕಫ ದೋಷಗಳನ್ನು ನಿವಾರಿಸುವ ಬೇವಿನ ಕಹಿರುಚಿಯು ಯಕೃತ್ತಿನ ಕ್ಷಮತೆಯನ್ನು ಹೆಚ್ಚಿಸುತ್ತದೆ ಮತ್ತು ಅದರಲ್ಲಿಯ ನಂಜುಗಳನ್ನು ನಿವಾರಿಸುತ್ತದೆ. ಬೇವಿನ ಆರೋಗ್ಯಲಾಭಗಳು ಹೀಗಿವೆ...

►ಅದು ಹಲ್ಲು ಮತ್ತು ವಸಡುಗಳನ್ನು ರಕ್ಷಿಸುತ್ತದೆ

ಬೇವಿನ ಕಡ್ಡಿಯನ್ನು ಜಗಿಯುವುದು ಬಾಯಿಯ ಎಲ್ಲ ಸಮಸ್ಯೆಗಳಿಗೆ ಅತ್ಯುತ್ತಮ ಪರಿಹಾರವಾಗಿದೆ. ಅದರಲ್ಲಿರುವ ಸೂಕ್ಷ್ಮಜೀವಿ ನಿರೋಧಕ ಗುಣಗಳು ಬಾಯಿಯಲ್ಲಿಯ ಬ್ಯಾಕ್ಟೀರಿಯಾಗಳನ್ನು ನಿವಾರಿಸುವ ಮೂಲಕ ದುರ್ವಾಸನೆ,ದಂತಪಾಚಿ,ಹಲ್ಲುನೋವು,ಬಾಯಿಹುಣ್ಣು ಮತ್ತು ವಸಡಿನ ಕಾಯಿಲೆಗಳನ್ನು ತಡೆಯುತ್ತವೆ.

ಬಳಸುವುದು ಹೇಗೆ?

ಸಾಧಾರಣ ಉದ್ದದ ಬೇವಿನ ಕಡ್ಡಿಯೊಂದನ್ನು ತೆಗೆದುಕೊಂಡು ಅದರ ಒಂದು ಬದಿಯನ್ನು ಜಗಿದು ಟೂಥ್‌ಬ್ರಷ್‌ನಂತೆ ಮಾಡಿ. ಈಗ ಇದರಿಂದ ನಿಮ್ಮ ಹಲ್ಲುಗಳನ್ನುಉಜ್ಜಿ ಬಾಯಿಯನ್ನು ನೀರಿನಿಂದ ಮುಕ್ಕಳಿಸಿ. ನಿಮಗೆ ಬೇವಿನ ಕಡ್ಡಿಯ ರುಚಿ ಇಷ್ಟವಿಲ್ಲದಿದ್ದರೆ ಅಥವಾ ಅಲಭ್ಯವಾಗಿದ್ದರೆ ಬೇವಿನ ಟೂಥ್‌ಪೇಸ್ಟ್ ಅಥವಾ ಮೌತ್‌ವಾಷ್ ಬಳಸಬಹುದು. ಇದು ಪ್ರತಿ ಬೆಳಿಗ್ಗೆ ನಿಮ್ಮ ದಿನಚರಿಯಾಗಿರಲಿ.

► ಮೊಡವೆಗಳನ್ನು ನಿವಾರಿಸುತ್ತದೆ

ನೀವು ಮೊಡವೆಗಳ ಕಾಟದಿಂದ ಬೇಸತ್ತಿದ್ದರೆ ಬೇವು ನಿಮಗೆ ಹೇಳಿ ಮಾಡಿಸಿದ ಮದ್ದಾಗಿದೆ. ಅದರ ಬ್ಯಾಕ್ಟೀರಿಯಾ ನಿರೋಧಕ ಗುಣಗಳು ಇನ್ನಷ್ಟು ಮೊಡವೆಗಳು ಏಳುವುದನ್ನು ತಡೆಯುತ್ತದೆ. ಅದರ ಉತ್ಕರ್ಷಣ ನಿರೋಧಕ ಗುಣವು ಕಲೆಗಳನ್ನು ನಿವಾರಿಸುತ್ತದೆ ಮತ್ತು ಚರ್ಮವನ್ನು ಸ್ವಚ್ಛಗೊಳಿಸಿ ತಾಜಾ ಆಗಿ ಕಾಣುವಂತೆ ಮಾಡುತ್ತದೆ.

ಬಳಸುವುದು ಹೇಗೆ?

ಕೈತುಂಬ ಬೇವಿನೆಲೆಗಳನ್ನು ಕಿತ್ತು ಅವುಗಳನ್ನು ನೀರಿನಿಂದ ಸ್ವಚ್ಛವಾಗಿ ತೊಳೆಯಿರಿ. ಬೇವಿನೆಲೆಗಳ ಒಂದು ಭಾಗಕ್ಕೆ ನಾಲ್ಕು ಭಾಗ ನೀರು ಸೇರಿಸಿ. ಈಗ ನೀರು ಹಸಿರು ಬಣ್ಣಕ್ಕೆ ತಿರುಗುವವರೆಗೆ ಕುದಿಸಿ. ನೀರು ತಣ್ಣಗಾದ ಮೇಲೆ ಅದರಿಂದ ಮುಖವನ್ನು ತೊಳೆದುಕೊಳ್ಳಿ. ಪ್ರತಿದಿನ ಎರಡು ಬಾರಿ ಈ ಕೆಲಸವನ್ನು ಮಾಡಿ.

ಪರ್ಯಾಯವಾಗಿ ಕೆಲವು ಬೇವಿನೆಲೆಗಳನ್ನು ಚೆನ್ನಾಗಿ ಜಜ್ಜಿ ಪೇಸ್ಟ್ ತಯಾರಿಸಿಕೊಂಡು ಅದನ್ನು ಮುಖಕ್ಕೆ ಲೇಪಿಸಿಕೊಳ್ಳಿ. ಚೆನ್ನಾಗಿ ಒಣಗಿದ ಬಳಿಕ ತಣ್ಣನೆಯ ನೀರಿನಿಂದ ತೊಳೆದುಕೊಳ್ಳಿ. ದಿನಕ್ಕೆರಡು ಬಾರಿ ಈ ಪೇಸ್ಟ್‌ನ್ನು ಲೇಪಿಸಿಕೊಳ್ಳಿ.

► ಹೇನುಗಳ ಕಾಟದಿಂದ ಪಾರಾಗಲು ರಾಮಬಾಣ

ಇದು ಹೆಚ್ಚಿನವರಿಗೆ ತಿಳಿದಿಲ್ಲ, ಆದರೆ ಬೇವು ತನ್ನ ಸೂಕ್ಷ್ಮಜೀವಿ ನಿರೋಧಕ ಗುಣಗಳಿಂದಾಗಿ ಹೇನುಗಳ ವಿರುದ್ಧ ಪರಿಣಾಮಕಾರಿ ನೈಸರ್ಗಿಕ ಮದ್ದಾಗಿದೆ. ನಿಮ್ಮ ಮಕ್ಕಳ ತಲೆಗಳಲ್ಲಿ ಹೇನುಗಳಾಗಿದ್ದರೆ ಒರಟು ಶಾಂಪೂಗಳ ಬದಲಾಗಿ ನೈಸರ್ಗಿಕವಾದ ಮತ್ತು ಸುಲಭವಾಗಿ ಸಿಗುವ ಈ ಬೇವನ್ನು ಬಳಸಿ.

ಬಳಸುವುದು ಹೇಗೆ?

 ಬೇವಿನೆಲೆಗಳನ್ನು ಸ್ವಚ್ಛವಾಗಿ ತೊಳೆದುಕೊಂಡು ಅದಕ್ಕೆ ನಾಲ್ಕು ಪಟ್ಟು ನೀರು ಸೇರಿಸಿ,ಅದು ಹಸಿರು ಬಣ್ಣಕ್ಕೆ ತಿರುಗುವವರೆಗೆ ಚೆನ್ನಾಗಿ ಕುದಿಸಿ. ತಣ್ಣಗಾದ ಬಳಿಕ ಕೂದಲನ್ನು ಶಾಂಪೂವಿನಿಂದ ತೊಳೆದುಕೊಂಡು ನಂತರ ಈ ನೀರಿನಿಂದ ತೊಳೆದುಕೊಳ್ಳಿ. ಪರ್ಯಾಯವಾಗಿ ಕೆಲವು ಹನಿ ಬೇವಿನೆಣ್ಣೆಯನ್ನು ತೆಂಗಿನ ಎಣ್ಣೆಯೊಂದಿಗೆ ಬೆರೆಸಿಕೊಂಡು ತಲೆ ಬುರುಡೆಗೆ ಚೆನ್ನಾಗಿ ತಿಕ್ಕಿ. ಎರಡು ಗಂಟೆಗಳ ಬಳಿಕ ನೀರಿನಿಂದ ತೊಳೆದುಕೊಳ್ಳಿ. ವಾರಕ್ಕೆರಡು ಬಾರಿ ಇದನ್ನು ಮಾಡಿದರೆ ಹೇನುಗಳು ಹೇಳಹೆಸರಿಲ್ಲದಂತಾಗುತ್ತವೆ.

► ಮಧುಮೇಹವನ್ನು ನಿಯಂತ್ರಿಸುತ್ತದೆ

ಬೇವು ರಕ್ತದಲ್ಲಿನ ಸಕ್ಕರೆಯ ಮಟ್ಟವನ್ನು ನಿಯಂತ್ರಿಸಲೂ ನೆರವಾಗುತ್ತದೆ. ಅದು ಮಧುಮೇಹ ನಿರೋಧಕ ಗುಣಗಳನ್ನು ಹೊಂದಿದೆ ಎನ್ನುವುದನ್ನು ಕೆಲವು ಅಧ್ಯಯನಗಳು ಸಾಬೀತುಗೊಳಿಸಿವೆ. ಅದು ಆಹಾರ ಸೇವನೆಯ ಬಳಿಕ ರಕ್ತದಲ್ಲಿ ಸಕ್ಕರೆಯ ಮಟ್ಟವನ್ನು ಹೆಚ್ಚಿಸುವ ಆಲ್ಫಾ-ಅಮಿಲೇಸ್ ಮತ್ತು ಆಲ್ಫಾ-ಗ್ಲುಕೋಸಿಡೇಸ್ ಕಿಣ್ವಗಳನ್ನು ನಿಗ್ರಹಿಸುತ್ತದೆ.

ಬಳಸುವುದು ಹೇಗೆ?

ಪ್ರತಿದಿನ ಬೆಳಿಗ್ಗೆ ಖಾಲಿಹೊಟ್ಟೆಯಲ್ಲಿ 4-5 ಎಳೆಯ ಬೇವಿನ ಎಲೆಗಳನ್ನು ಜಗಿಯಿರಿ ಅಥವಾ ಕೆಲವು ಬೇವಿನೆಲೆಗಳನ್ನು ನೀರಿನಲ್ಲಿ ಕುದಿಸಿ,ತಣ್ಣಗಾದ ಬಳಿಕ ಸೋಸಿ ಕುಡಿಯಿರಿ.

► ಶರೀರದಲ್ಲಿಯ ನಂಜುಗಳನ್ನು ನಿವಾರಿಸುತ್ತದೆ

ಬೇವು ಶರೀರದಲ್ಲಿರುವ ವಿಷಾಂಶಗಳನ್ನು ನಿವಾರಿಸಲು ಯಕೃತ್ತನ್ನು ಪ್ರಚೋದಿಸುತ್ತದೆ. ಅದರಲ್ಲಿರುವ ಪ್ರಬಲ ಉತ್ಕರ್ಷಣ ನಿರೋಧಕಗಳು ಫ್ರೀ ರ್ಯಾಡಿಕಲ್ಸ್‌ಗಳ ವಿರುದ್ಧ ಹೋರಾಡುತ್ತವೆ ಮತ್ತು ಯಕೃತ್ತಿನ ಹಾನಿಯ ವಿರುದ್ಧ ರಕ್ಷಣೆ ನೀಡುತ್ತವೆ. ಬೇವಿನೆಲೆಗಳ ನಿಯಮಿತ ಸೇವನೆಯು ಯಕೃತ್ತನ್ನು ಪುನಃಶ್ಚೇತನಗೊಳಿಸುತ್ತದೆ ಮತ್ತು ಅದರ ಕಾರ್ಯ ನಿರ್ವಹಣೆಯನ್ನು ಉತ್ತಮಗೊಳಿಸುತ್ತದೆ.

ಬಳಸುವುದು ಹೇಗೆ?

ಪ್ರತಿದಿನ ಬೆಳಿಗ್ಗೆ ಖಾಲಿಹೊಟ್ಟೆಯಲ್ಲಿ 3-4 ಎಳೆಯ ಬೇವಿನ ಎಲೆಗಳನ್ನು ಜಗಿಯುವ ಮೂಲಕ ಈ ಆರೋಗ್ಯಲಾಭವನ್ನು ಪಡೆಯಬಹುದು.

► ಆಮ್ಲೀಯತೆಯನ್ನು ತಗ್ಗಿಸುತ್ತದೆ

ಬೇವಿನ ಕಡ್ಡಿ ಮತ್ತು ಎಲೆಗಳು ಉತ್ಕರ್ಷಣ ನಿರೋಧಕ ಗುಣವನ್ನು ಹೊಂದಿದ್ದು,ಇದು ಬಾಯಿಹುಣ್ಣುಗಳು ಮತ್ತು ಕರುಳಿಗೆ ಸಂಬಂಧಿಸಿದ ಹೊಟ್ಟೆಯುಬ್ಬರ,ಮಲಬದ್ಧತೆಯಂತಹ ಸಮಸ್ಯೆಗಳನ್ನು ತಡೆಯಲು ನೆರವಾಗುತ್ತದೆ.

ಬಳಸುವುದು ಹೇಗೆ?

1-2 ಗ್ರಾಮ್‌ಗಳಷ್ಟು ಬೇವಿನ ಕಡ್ಡಿ ಅಥವಾ ಎಲೆಗಳ ಹುಡಿಯನ್ನು ಒಂದು ಚಮಚ ಜೇನಿನೊಂದಿಗೆ ಸೇರಿಸಿ ದಿನಕ್ಕೆರಡು ಬಾರಿ ಊಟವಾದ ಬಳಿಕ ಸೇವಿಸಿ.

► ಕ್ಯಾನ್ಸರ್ ಅಪಾಯವನ್ನು ತಗ್ಗಿಸುತ್ತದೆ

ಬೇವಿನಲ್ಲಿಯ ಕೆಲವು ಸಂಯುಕ್ತಗಳು ಶರೀರದ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುವ,ಫ್ರೀ ರ್ಯಾಡಿಕಲ್‌ಗಳನ್ನು ನಿವಾರಿಸುವ ಮತ್ತು ಜೀವಕೋಶಗಳ ವಿಭಜನೆಯನ್ನು ತಡೆದು ಉರಿಯೂತವನ್ನು ತಗ್ಗಿಸುವ ಮೂಲಕ ಕ್ಯಾನ್ಸರ್‌ನ ಚಿಕಿತ್ಸೆಯಲ್ಲಿ ನೆರವಾಗುತ್ತವೆ. ಇವು ಕಿಮೊಥೆರಪಿ ಚಿಕಿತ್ಸೆಯು ಹೆಚ್ಚು ಪರಿಣಾಮಕಾರಿಯಾಗುವಂತೆ ಮಾಡುತ್ತವೆ.

ಬಳಸುವುದು ಹೇಗೆ?

ಪೂರಕ ಚಿಕಿತ್ಸೆಯಾಗಿ ಪ್ರತಿದಿನ ಬೆಳಿಗ್ಗೆ ಖಾಲಿಹೊಟ್ಟೆಯಲ್ಲಿ 4-5 ಎಳೆಯ ಬೇವಿನೆಲೆಗಳನ್ನು ಜಗಿದು ತಿನ್ನಿರಿ.

► ► ಕೆಲವು ಮಹತ್ವದ ಅಂಶಗಳು

ನಿಮ್ಮ ಚರ್ಮವು ಅತಿ ಪ್ರತಿಕ್ರಿಯಾತ್ಮಕವಾಗಿದ್ದರೆ ಬೇವಿನ ಎಲೆಯ ಪೇಸ್ಟ್‌ನ್ನು ಪನ್ನೀರಿನೊಂದಿಗೆ ಬೆರೆಸಿಕೊಂಡು ಮುಖಕ್ಕೆ ಲೇಪಿಸಿಕೊಳ್ಳಿ.

ಬೇವಿನೆಣ್ಣೆಯು ಪ್ರಖರವಾಗಿರುವದರಿಂದ ತಲೆಬುರುಡೆಗೆ ಹಚ್ಚಿಕೊಳ್ಳುವ ಮುನ್ನ ಅದನ್ನು ತೆಂಗಿನೆಣ್ಣೆ ಅಥವಾ ಆಲಿವ್ ಎಣ್ಣೆಯೊಂದಿಗೆ ಮಿಶ್ರ ಮಾಡಲು ಮರೆಯಬೇಡಿ.

ಮಹಿಳೆಯರು ಗರ್ಭಾವಸ್ಥೆಯಲ್ಲಿ ಬೇವಿನ ಎಲೆಗಳನ್ನು ಬಳಸಬಾರದು, ಅದು ಗರ್ಭಪಾತವನ್ನುಂಟು ಮಾಡಬಹುದು.

ನೀವೀಗಾಗಲೇ ತೆಗೆದುಕೊಳ್ಳುತ್ತಿರುವ ಮಧುಮೇಹ ಔಷಧಿಗಳ ಜೊತೆಗೆ ಬೇವಿನ ಎಲೆಗಳನ್ನು ತಿನ್ನುತ್ತಿದ್ದರೆ ರಕ್ತದಲ್ಲಿಯ ಸಕ್ಕರೆ ಮಟ್ಟದ ಮೇಲೆ ನಿಗಾಯಿರಿಸಿ.

ಬೇವು ನೈಸರ್ಗಿಕ ಸಂತಾನ ನಿಯಂತ್ರಕವಾಗಿಯೂ ವರ್ತಿಸುತ್ತದೆ ಎನ್ನುವುದನ್ನು ಕೆಲವು ಸಂಶೋಧನೆಗಳು ತೋರಿಸಿವೆ. ಹೀಗಾಗಿ ಮಕ್ಕಳನ್ನು ಪಡೆಯುವ ಯೋಜನೆಯಿದ್ದರೆ ಅದನ್ನು ಬಳಸಬೇಡಿ.

ನಿರ್ದಿಷ್ಟ ಅವಧಿಗೆ ಸೀಮಿತ ಪ್ರಮಾಣದಲ್ಲಿ ಬಳಸಿದರೆ ಬೇವು ಸುರಕ್ಷಿತವಾಗಿದೆ,ಹೆಚ್ಚಿನ ಪ್ರಮಾಣದಲ್ಲಿ ಬಳಕೆಯು ಅತಿಸಾರ ಮತ್ತು ವಾಂತಿಗೆ ಕಾರಣವಾಗಬಹುದು ಎನ್ನುವುದನ್ನು ನೆನಪಿನಲ್ಲಿಡಿ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News