ಒಳ್ಳೆಯ ನಿದ್ರೆ ನಮ್ಮ ಆರೋಗ್ಯಕ್ಕೆ ಅತ್ಯಂತ ಅಗತ್ಯ
ನಾವು ಪ್ರತಿದಿನ ನಿದ್ರಿಸುತ್ತೇವೆ,ಆದರೆ ಅದರ ಲಾಭಗಳನ್ನು ಸಂಪೂರ್ಣವಾಗಿ ಅನುಭವಿಸುವುದಿಲ್ಲ. ಪ್ರತಿದಿನ ಕನಿಷ್ಠ 6-7 ಗಂಟೆಗಳ ನಿದ್ರೆ ಅಗತ್ಯ ಎನ್ನುವುದನ್ನು ನಾವು ಓದುತ್ತಿರುತ್ತೇವೆ,ಕೇಳುತ್ತಿರುತ್ತೇವೆ. ಆದರೆ ವಾರವಿಡೀ ಸಾಕಷ್ಟು ನಿದ್ರೆಯಲ್ಲದ ರಾತ್ರಿಗಳನ್ನು ಕಳೆಯುವುದೇ ಹೆಚ್ಚು.
ವಾರವಿಡೀ ನೀವು ಎಷ್ಟೇ ಕ್ರಿಯಾಶೀಲರಾಗಿರಿ,ಆದರೆ ವಾರಾಂತ್ಯಗಳಲ್ಲಿ ದಿಢೀರ್‌ಆಗಿ ನಿಮ್ಮ ಶಕ್ತಿ ಮತ್ತು ಏಕಾಗ್ರತೆ ಬರಿದಾದಂತೆ ಅನ್ನಿಸುವುದಿಲ್ಲವೇ? ದಿನದ ಎಲ್ಲ ಶ್ರಮಗಳಿಂದ ಚೇತರಿಸಿಕೊಳ್ಳಲು ನಿಮ್ಮ ಶರೀರಕ್ಕೆ ಅಗತ್ಯವಾದ ನಿದ್ರೆ ನಿಮಗೆ ವಾರವಿಡೀ ಸಾಕಷ್ಟು ಪ್ರಮಾಣದಲ್ಲಿ ದೊರೆಯುವುದಿಲ್ಲ ಎನ್ನುವುದು ಇದಕ್ಕೆ ಕಾರಣವಾಗಿದೆ. ಕಳವಳದ ವಿಷಯವೆಂದರೆ ಇಂದು ದುಡಿಯುವ ವರ್ಗವು ವಾರವಿಡೀ ದೈಹಿಕ ಮತ್ತು ಮಾನಸಿಕ ಒತ್ತಡಗಳಲ್ಲಿ ಇರುವುದರಿಂದ ಈ ಸಮಸ್ಯೆಯು ಸಾಮಾನ್ಯವಾಗಿಬಿಟ್ಟಿದೆ.
ನಿದ್ರೆ ಎಂದರೇನು?
ನಾವು ಪ್ರತಿದಿನ ನಿದ್ರಿಸುತ್ತೇವಾದರೂ ನಿದ್ರೆ ಎಂದರೇನು ಎನ್ನುವುದನ್ನು ವ್ಯಾಖ್ಯಾನಿಸಲು ಹೆಚ್ಚಿನವರಿಗೆ ಸಾಧ್ಯವಾಗುವುದಿಲ್ಲ. ಅದು ನಮ್ಮ ಶರೀರವು ತನ್ನನ್ನು ಪುನಃಶ್ಚೇತನಗೊಳಿಸಿಕೊಳ್ಳುವ ಪ್ರಕ್ರಿಯೆ ಎಂಬ ವಿವರಣೆಯನ್ನು ಬಿಟ್ಟರೆ ವಿಜ್ಞಾನಿಗಳೂ ನಿದ್ರೆಯನ್ನು ಸರಿಯಾಗಿ ವ್ಯಾಖ್ಯಾನಿಸಿಲ್ಲ. ಅದು ನಮ್ಮ ಅನುಭವಗಳನ್ನು ಮೆಲುಕು ಹಾಕಲು ಮತ್ತು ಜ್ಞಾಪಕ ಶಕ್ತಿಯನ್ನು ಕಾಯ್ದುಕೊಳ್ಳಲೂ ನೆರವಾಗುತ್ತದೆ.
ನಿದ್ರೆಯು ನಮ್ಮ ಗ್ರಹಣ ಶಕ್ತಿಯನ್ನು ಮತ್ತು ನೆನಪಿನ ಶಕ್ತಿಯನ್ನು ಉತ್ತಮಗೊಳಿಸುತ್ತದೆ ಮತ್ತು ಅಗತ್ಯವಾದಾಗ ನಮ್ಮ ಮಿದುಳಿನಲ್ಲಿ ಶೇಖರವಾಗಿರುವ ಮಾಹಿತಿಗಳನ್ನು ಬಳಸಿಕೊಳ್ಳಲು ಸಾಧ್ಯವಾಗಿಸುತ್ತದೆ ಎನ್ನುವುದನ್ನು ಪ್ರಯೋಗಗಳು ಸಾಕ್ಷೀಕರಿಸಿವೆ. ನಿದ್ರೆಯು ಮಾನವರಿಗೆ ಮಾತ್ರವಲ್ಲ,ಪ್ರಾಣಿಗಳ ಬದುಕಿನಲ್ಲಿಯೂ ಮಹತ್ವದ ಭಾಗವಾಗಿದೆ.
ನಿದ್ರೆಯ ಹಂತಗಳು
ನಿದ್ರೆಯು ನಾವು ಸುಮ್ಮನೆ ಕಣ್ಣುಗಳನ್ನು ಮುಚ್ಚಿಕೊಂಡುಇಹಲೋಕದ ಅರಿವನ್ನು ಮರೆತುಬಿಡುವಂತಹ ಸ್ವಯಂಪ್ರೇರಿತ ಪ್ರಕ್ರಿಯೆಯಲ್ಲ. ಅದೊಂದು ನೈಸರ್ಗಿಕ ಪ್ರಕ್ರಿಯೆಯಾಗಿದ್ದು,ತನ್ನಿಂತಾನೇ ಸಂಭವಿಸುತ್ತದೆ. ನಿದ್ರೆಯಲ್ಲಿ ಆರ್‌ಇಎಂ ಮತ್ತು ಎನ್‌ಆರ್‌ಇಎಂ ಎಂಬ ಎರಡು ಹಂತಗಳಿವೆ.
ಆರ್‌ಇಎಂ: ರ್ಯಾಪಿಡ್ ಐ ಮೂವ್‌ಮೆಂಟ್ ಅಥವಾ ಕಣ್ಣುಗುಡ್ಡೆಗಳ ಕ್ಷಿಪ್ರ ಚಲನೆ ಹಂತದಲ್ಲಿ ನಾವು ಕನಸುಗಳನ್ನು ಕಾಣುತ್ತಿರುತ್ತೇವೆ ಎನ್ನಲಾಗಿದೆ. ನಿದ್ರೆಯಲ್ಲಿರುವಾಗ ಕಣ್ಣುಗುಡ್ಡೆಗಳ ಚಲನವಲನ ಈ ಹಂತದ ಲಕ್ಷಣವಾಗಿದೆ. ನಾವು ನಿದ್ರಿಸುವಾಗ ಕಣ್ಣುಗಳ ಸ್ನಾಯುಗಳು ಹೊರತುಪಡಿಸಿ ಶರೀರದ ಇತರ ಎಲ್ಲ ಸ್ವತಂತ್ರ ಸ್ನಾಯುಗಳು ನಿಷ್ಕ್ರಿಯಗೊಂಡಿರುತ್ತವೆ ಮತ್ತು ಕಣ್ಣುಗಳ ಸ್ನಾಯುಗಳು ಆರ್‌ಇಎಂ ಅನ್ನು ಉಂಟುಮಾಡುತ್ತವೆ. ಈ ಹಂತವು ವಯಸ್ಕರಲ್ಲಿ ಒಟ್ಟು ನಿದ್ರೆಯ ಶೇ.20ರಿಂದ ಶೇ.25ರಷ್ಟು ಮತ್ತು ಮಕ್ಕಳಲ್ಲಿ ಶೇ.40ರಷ್ಟು ಭಾಗವನ್ನು ಆವರಿಸಿರುತ್ತದೆ.
ಎನ್‌ಆರ್‌ಇಎಂ: ನಾನ್ ರ್ಯಾಪಿಡ್ ಐ ಮೂವ್‌ಮೆಂಟ್ ಅಥವಾ ಕ್ಷಿಪ್ರವಲ್ಲದ ಕಣ್ಣುಗುಡ್ಡೆಗಳ ಚಲನೆ ಹಂತವು ಎನ್1,ಎನ್2 ಮತ್ತು ಎನ್3 ಹೀಗೆ ನೂರು ವಿಭಿನ್ನ ಹಂತಗಳಲ್ಲಿ ನಡೆಯುತ್ತದೆ. ಎನ್1 ಜಾಗ್ರತ ಸ್ಥಿತಿಯಿಂದ ನಿದ್ರೆಗೆ ಜಾರುವಿಕೆಯಾಗಿದೆ. ಈ ಹಂತದಲ್ಲಿ ಹೆಚ್ಚಿನ ಸಲ ನಮಗೆ ಗಾಢನಿದ್ರೆ ಬಂದಿರುವುದಲ್ಲ. ಇದಾದ ನಂತರದ ಎನ್2 ಹಂತವನ್ನು ಪೂರ್ಣನಿದ್ರೆಯ ಅವಧಿ ಎಂದು ಪರಿಗಣಿಸಲಾಗಿದ್ದು,ಇದು ನಮ್ಮ ಒಟ್ಟು ನಿದ್ರೆಯ ಶೇ.40ರಷ್ಟು ಭಾಗವನ್ನು ಒಳಗೊಂಡಿರುತ್ತದೆ. ಎನ್3 ಕೊನೆಯ ಹಂತವಾಗಿದ್ದು,ಇದನ್ನು ಡೆಲ್ಟಾ ಸ್ಲೀಪ್ ಅಥವಾ ಡೀಪ್ ಸ್ಲೀಪ್ ಅಥವಾ ಸ್ಲೋ ವೇವ್ ಸ್ಲೀಪ್ ಎನ್ನಲಾಗುತ್ತದೆ. ಇದು ನಮ್ಮ ಒಟ್ಟು ನಿದ್ರೆ ಅವಧಿಯ ಶೇ.20ರಷ್ಟಿರುತ್ತದೆ.
ಎಷ್ಟು ನಿದ್ರೆ ಆರೋಗ್ಯಕರ?
ಸೃಷ್ಟಿಯು ನಮ್ಮ ನಿದ್ರೆಯ ಸಮಯ ಮತ್ತು ಎಚ್ಚರಾಗುವ ಸಮಯವನ್ನು ಮೊದಲೇ ನಿಗದಿಗೊಳಿಸಿರುವ ನಮ್ಮ ಶರೀರದಲ್ಲಿಯ ಜೈವಿಕ ಗಡಿಯಾರವು ನಿದ್ರೆಯನ್ನು ಪ್ರೇರೇಪಿಸುತ್ತದೆ. ಪ್ರತಿ 24 ಗಂಟೆಗಳಿಗೆ ಆರರಿಂದ ಎಂಟು ಗಂಟೆಗಳ ನಿದ್ರೆಯು ಅಗತ್ಯವಾಗಿದೆ. ನಿದ್ರೆಯ ಅವಧಿಯೊಂದಿಗೆ ಪ್ರತಿದಿನ ಒಂದೇ ಹೊತ್ತಿಗೆ ನಿದ್ರಿಸುವುದು ಮತ್ತು ಏಳುವುದು ನಿದ್ರೆಯ ಗುಣಮಟ್ಟವನ್ನು ಉತ್ತಮಗೊಳಿಸುತ್ತದೆ.
ನಿದ್ರಾ ಆವರ್ತನವು ಹೃದಯ ಬಡಿತಗಳಿಂದ ಪ್ರಭಾವಿತವಾಗಿದ್ದು, ಅದನ್ನು ಮಿದುಳಿನ ನರಕೋಶಗಳು ನಿಯಂತ್ರಿಸುತ್ತವೆ. ಹೃದಯ ಬಡಿತದ ಆವರ್ತನ ಮತ್ತು ಮಿದುಳಿನ ನರಕೋಶಗಳು ದೈಹಿಕ ಮತ್ತು ಮಾನಸಿಕ ಚಟುವಟಿಕೆಗಳ ಹಾಗೂ ಬೆಳಕು,ಬಿಸಿ ಮತ್ತು ತಾಪಮಾನದಂತಹ ವಿವಿಧ ಬಾಹ್ಯ ಅಂಶಗಳ ಪ್ರಭಾವಕ್ಕೊಳ ಗಾಗಿರುತ್ತವೆ. ನಮ್ಮ ಜೀವನಶೈಲಿಯೇಕೆ ನಮ್ಮ ನಿದ್ರೆಯ ಮೆಲೆ ಪರಿಣಾಮ ಬೀರುತ್ತದೆ ಎನ್ನುವುದನ್ನು ಇದು ವಿವರಿಸುತ್ತದೆ. ನಮ್ಮ ಶರೀರದಲ್ಲಿಯ ಹಾರ್ಮೋನ್‌ಗಳಲ್ಲಿನ ಬದಲಾವಣೆಯು ಕೂಡ ನಿದ್ರೆಯ ಮೇಲೆ ಪರಿಣಾಮವನ್ನುಂಟು ಮಾಡುತ್ತದೆ.
ಕನಿಷ್ಠ ನಿದ್ರೆಯು ಅಗತ್ಯವಾಗಿದೆ,ಆದರೆ ಅತಿಯಾದ ನಿದ್ರೆಯು ಹಾನಿಕರವಾಗಬಹುದು ಮತ್ತು ಆಲಸ್ಯ ಹಾಗೂ ಜಾಗ್ರತ ಸ್ಥಿತಿ ಯಲ್ಲಿಯೂ ಮಂಪರಿಗೆ ಕಾರಣವಾಗುತ್ತದೆ. ಆದ್ದರಿಂದ ಅತಿನಿದ್ರೆ ಯಿಂದ ದೂರವಿರುವುದು ಒಳ್ಳೆಯದು.
ನಿದ್ರಾ ರೋಗಗಳು
ನಿದ್ರೆಯ ಕೊರತೆಯು ರಕ್ತದಲ್ಲಿನ ಕಣಗಳ ಮಟ್ಟದಲ್ಲಿ ಅಸಮತೋಲನಕ್ಕೆ ಕಾರಣವಾಗುತ್ತದೆ ಮತ್ತು ತನ್ಮೂಲಕ ದಿನವಿಡೀ ಅತಿಯಾದ ದಣಿವು,ತೂಕಡಿಕೆ,ಏಕಾಗ್ರತೆಗೆ ಭಂಗವನ್ನುಂಟು ಮಾಡುತ್ತದೆ. ಸಾಮಾನ್ಯವೆಂಬಂತೆ ಕಂಡುಬರುವ ಈ ಲಕ್ಷಣಗಳು ಮತ್ತು ನಿದ್ರೆಯ ಕೊರತೆ ಇತರ ರೋಗಗಳಿಗೆ ಕಾರಣವಾಗಬಲ್ಲವು.
ನಿದ್ರಾಹೀನತೆ: ಇದು ಅತ್ಯಂತ ಸಾಮಾನ್ಯ ನಿದ್ರಾರೋಗವಾಗಿದ್ದು, ಸರಿಸುಮಾರು ಶೇ.50ರಷ್ಟು ಜನರು ಇದರಿಂದ ಬಳಲುತ್ತಿದ್ದಾರೆ ಮತ್ತು ಶೇ.10ರಷ್ಟು ಜನರು ತೀವ್ರ ನಿದ್ರಾಹೀನತೆಯಿಂದ ಬಳಲುತ್ತಾರೆ.
ಸ್ಲೀಪ್ ಅಪ್ನಿಯಾ: ಈ ವೈಕಲ್ಯದಿಂದ ಬಳಲುತ್ತಿರುವವರಲ್ಲಿ ನಿದ್ರೆಯಲ್ಲಿ ಕೆಲವು ಸಮಯ ಉಸಿರಾಟ ನಿಲ್ಲುತ್ತದೆ ಅಥವಾ ನಿಧಾನಗೊಳ್ಳುತ್ತದೆ. ಈ ಸ್ಥಿತಿಯಲ್ಲಿ ಮಿದುಳು ಉಸಿರಾಡಿಸುವಂತೆ ಸ್ನಾಯುಗಳಿಗೆ ಸಂಕೇತವನ್ನು ರವಾನಿಸುವುದಿಲ್ಲ.
ಕಾಲುಗಳ ನಿರಂತರ ಚಲನೆ
ರೆಸ್ಟ್‌ಲೆಸ್ ಲೆಗ್ ಸಿಂಡ್ರೋಮ್ ಎಂದು ಕರೆಯಲಾಗುವ ಈ ಸ್ಥಿತಿಯಲ್ಲಿ ವ್ಯಕ್ತಿಯಲ್ಲಿ ಸದಾ ಕಾಲುಗಳನ್ನು ಅಲ್ಲಾಡಿಸುತ್ತಲೇ ಇರಬೇಕೆಂಬ ತುಡಿತವುಂಟಾಗುತ್ತದೆ,ಅಂದರೆ ಆತ ವಿಶ್ರಾಂತಿರಹಿತ ಸಂವೇದನೆಯನ್ನು ಅನುಭವಿಸುತ್ತಿರುತ್ತಾನೆ. ವಾರಾಂತ್ಯಗಳಲ್ಲಿ ಕೆಲವು ಗಂಟೆಗಳ ಕಾಲ ಹೆಚ್ಚು ನಿದ್ರಿಸುವುದರಿಂದ ವಾರದಲ್ಲಿಯ ನಿದ್ರೆಯ ಕೊರತೆಯನ್ನು ತುಂಬಿಕೊಳ್ಳಲು ನೆರವಾಗಬಹುದಾದರೂ ಅದರ ಪರಿಣಾಮಗಳನ್ನು ಸಂಪೂರ್ಣವಾಗಿ ನಿವಾರಿಸುವುದಿಲ್ಲ. ಹಗಲು ವೇಳೆಯಲ್ಲಿ ಅವಕಾಶ ಸಿಕ್ಕಿದರೆ ಕೆಲವು ಸಮಯ ನಿದ್ರಿಸುವುದು ಒಳ್ಳೆಯದು. ಇದರಿಂದ ರಾತ್ರಿ ನಿದ್ರೆ ಕಡಿಮೆಯಾದರೂ ಒಟ್ಟಾರೆ 6-8 ಗಂಟೆಗಳ ನಿದ್ರಾ ಅವಧಿಯನ್ನು ಸರಿದೂಗಿಸಲು ನೆರವಾಗುತ್ತದೆ.