ಈಜುಕೊಳಗಳೂ ಅನಾರೋಗ್ಯಕ್ಕೆ ಕಾರಣವಾಗುತ್ತವೆ ಎನ್ನುವುದು ನಿಮಗೆ ಗೊತ್ತೇ.....?

Update: 2018-06-03 11:45 GMT

ಈಜು ನಮ್ಮ ಶರೀರಕ್ಕೆ ಅತ್ಯುತ್ತಮ ವ್ಯಾಯಾಮವನ್ನು ಒದಗಿಸುತ್ತದೆ. ಗ್ರಾಮೀಣ ಪ್ರದೇಶಗಳಲ್ಲಿ ಕೆರೆ,ವಿಶಾಲವಾದ ಬಾವಿಗಳಿರುವುದರಿಂದ ಈಜಿನಲ್ಲಿ ಆಸಕ್ತಿಯುಳ್ಳವರಿಗೆ ತೊಂದರೆಯಿಲ್ಲ. ಆದರೆ ನಗರವಾಸಿಗಳಿಗೆ ಇಂತಹ ಸೌಲಭ್ಯ ಅಪರೂಪ, ಈಜಬೇಕೆಂದರೆ ಸಾರ್ವಜನಿಕ ಅಥವಾ ಶುಲ್ಕಸಹಿತ ಖಾಸಗಿ ಈಜುಕೊಳಗಳನ್ನು ಅವರು ಆಶ್ರಯಿಸಬೇಕಾಗುತ್ತದೆ. ಆದರೆ ಈಜುಕೊಳಗಳು ನಮ್ಮ ಆರೋಗ್ಯಕ್ಕೆ ಹಾನಿಯನ್ನುಂಟು ಮಾಡುತ್ತವೆ ಎನ್ನುವುದು ಬಹುಶಃ ಹೆಚ್ಚಿನವರಿಗೆ ತಿಳಿದಿಲ್ಲ.

ಜಿಮ್‌ಗಳಲ್ಲಿ ಬೆವರಿಳಿಸುವುದು ಶರೀರಕ್ಕೆ ಉತ್ತಮ ವ್ಯಾಯಾಮವನ್ನೊದಗಿಸುತ್ತದೆ, ಆದರೆ ಅಲ್ಲಿಯೂ ಮಾನವನಿಗೆ ಅಪಾಯಕಾರಿಯಾದ ಬ್ಯಾಕ್ಟೀರಿಯಾಗಳಿರುತ್ತವೆ. ಅದೇ ರೀತಿ ಈಜುಕೊಳಗಳೂ ತಮ್ಮದೇ ಆದ ಅಪಾಯದ ಅಂಶಗಳನ್ನು ಹೊಂದಿವೆ. ಇವುಗಳನ್ನು ಸಾರ್ವಜನಿಕ ಈಜುಕೊಳಗಳಿಗೆ ಹೋಗುವವರು ಅಗತ್ಯವಾಗಿ ತಿಳಿದುಕೊಂಡಿರಬೇಕು. ಇಂತಹ ಅಪಾಯಗಳ ಬಗ್ಗೆ ಮಾಹಿತಿಯಿಲ್ಲಿದೆ.....

► ಅತಿಸಾರ ಅಥವಾ ಭೇದಿ

ಇದೊಂದು ಸಾಮಾನ್ಯ ಸಮಸ್ಯೆಯಾಗಿದ್ದು, ಕಲಬೆರಕೆ ಆಹಾರ ಸೇವನೆ,ಫ್ಲೂ ಇತ್ಯಾದಿಗಳು ಇದಕ್ಕೆ ಕಾರಣವಾಗುತ್ತವೆ. ಇದೊಂದು ಸಾಧಾರಣ ಸಮಸ್ಯೆಯಾಗಿ ಕಂಡುಬಂದರೂ ತೀವ್ರ ನಿರ್ಜಲೀಕರಣಕ್ಕೆ ಕಾರಣವಾಗುತ್ತದೆ ಮತ್ತು ಸೂಕ್ತ ಚಿಕಿತ್ಸೆ ಪಡೆಕೊಳ್ಳದಿದ್ದರೆ ಕೆಲವೊಂದು ಪ್ರಕರಣಗಳಲ್ಲಿ ಮಾರಣಾಂತಿಕವೂ ಆಗಬಹುದು. ಸಾರ್ವಜನಿಕ ಈಜುಕೊಳಗಳಲ್ಲಿ ಹಲವಾರು ಜನರು ಈಜುತ್ತಿರುತ್ತಾರೆ. ಹಾಗೆ ಈಜುತ್ತಿರುವಾಗ ಅವರಿಗೆ ಗೊತ್ತಿಲ್ಲದೆ ಮೂತ್ರ ಮತ್ತು ಮಲದ ಅವಶೇಷಗಳೂ ನೀರಿನಲ್ಲಿ ಸೇರಿಕೊಳ್ಳುತ್ತವೆ. ಇಂತಹ ಕಲುಷಿತ ಈಜುಕೊಳಗಳಲ್ಲಿ ‘ಕ್ರಿಪ್ಟೋಸ್ಪೋರ್ಡಿಯಂ’ ಎಂಬ ನಿರ್ದಿಷ್ಟ ಕ್ರಿಮಿಗಳಿರುತ್ತವೆ ಮತ್ತು ಇವು ಭೇದಿಯನ್ನುಂಟು ಮಾಡುತ್ತವೆ.

► ಕಣ್ಣುಗಳಲ್ಲಿ ಉರಿ

 ನೀವು ನಿಯಮಿತವಾಗಿ ಸಾರ್ವಜನಿಕ ಈಜುಕೊಳಕ್ಕೆ ಹೋಗುತ್ತಿದ್ದರೆ ನಿಮಗೆ ಕಣ್ಣುಗಳಲ್ಲಿ ಉರಿ ಮತ್ತು ಕಣ್ಣುಗಳು ಕೆಂಪಗಾಗುವುದು ಅನುಭವಕ್ಕೆ ಬಂದಿರಬಹುದು. ಇದಕ್ಕೆ ಈಜುಕೊಳಗಳಲ್ಲಿ ಬಳಸಲಾಗುವ ಕ್ಲೋರಿನ್ ಮತ್ತು ಇತರ ಸೋಂಕು ನಿವಾರಕ ರಾಸಾಯನಿಕಗಳು ಕಾರಣವಾಗಿರುತ್ತವೆ. ಈ ರಾಸಾಯನಿಕಗಳು ಕಣ್ಣುಗಳ ಮೃದು ಅಂಗಾಂಶಗಳನ್ನು ಕೆರಳಿಸುತ್ತವೆ. ಜೊತೆಗೆ ಇತರರ ಮೂಲಕ ನೀರಿನಲ್ಲಿ ಸೇರಿಕೊಂಡಿರುವ ಕೊಳೆ ಮತ್ತು ಬೆವರು ಕೂಡ ನಿಮಗೆ ಅಲರ್ಜಿಯನ್ನುಂಟು ಮಾಡಬಹುದು.

► ಕಿವಿ ಸೋಂಕು

ಹಲವಾರು ಜನರು ಬಳಸುವ ಈಜುಕೊಳಗಳಲ್ಲಿಯ ನೀರು ಮತ್ತು ಅವುಗಳ ಗೋಡೆಗಳು ಅಸಂಖ್ಯಾತ ಬ್ಯಾಕ್ಟೀರಿಯಾಗಳಿಗೆ ಆವಾಸಸ್ಥಾನಗಳಾಗಿವೆ. ಇಂತಹ ಬ್ಯಾಕ್ಟೀರಿಯಾಗಳು ಈಜುತ್ತಿರುವಾಗ ನಿಮ್ಮ ಕಿವಿಗಳನ್ನು ಪ್ರವೇಶಿಸಿ ಸೋಂಕು,ಉರಿಯೂತ ಮತ್ತು ತುರಿಕೆಯನ್ನುಂಟು ಮಾಡಬಲ್ಲವು. ಹೀಗಾಗಿ ಸಾರ್ವಜನಿಕ ಈಜುಕೊಳಗಳಲ್ಲಿ ಈಜುವಾಗ ಇಯರ್ ಪ್ಲಗ್‌ಗಳನ್ನು ಧರಿಸುವುದು ಒಳ್ಳೆಯದು.

► ಚರ್ಮದ ಸೋಂಕು

ಈಜುಕೊಳಗಳಲ್ಲಿರುವ ‘ಸುಡೊಮೊನಸ್‌ಎರುಜಿನೋಸಾ’ ಎಂಬ ಬ್ಯಾಕ್ಟೀರಿಯಾಗಳು ಚರ್ಮದ ಸೋಂಕಿಗೆ ಕಾರಣವಗುತ್ತವೆ. ನೀವು ನಿಯಮಿತವಾಗಿಸಾರ್ವಜನಿಕ ಈಜುಕೊಳಗಳನ್ನು ಬಳಸುತ್ತಿದ್ದರೆ ಮತ್ತು ನಿಮ್ಮ ಶರೀರದಲ್ಲಿ ದದ್ದುಗಳು ಕಾಣಿಸಿಕೊಂಡಿದ್ದರೆ ನಿಮ್ಮ ಚರ್ಮವು ಈ ಬ್ಯಾಕ್ಟೀರಿಯಾಗಳ ಸೋಂಕಿಗೊಳಗಾಗಿದೆ ಎಂದೇ ಅರ್ಥ. ಹೀಗಾಗಿ ಪ್ರತಿ ಬಾರಿ ಈಜು ಮುಗಿಸಿದಾಗಲೂ ಸೋಂಕು ನಿವಾರಕ ಸಾಬೂನು ಬಳಸಿ ಸ್ನಾನ ಮಾಡುವುದರಿಂದ ಮತ್ತು ಈಜುಡುಗೆಯನ್ನು ಒಗೆಯುವುದರಿಂದ ಈ ಸೋಂಕಿನಿಂದ ರಕ್ಷಣೆ ಪಡೆಯಬಹುದಾಗಿದೆ.

► ಹೊಟ್ಟೆನೋವು

ಶಾಲೆಗಳು,ಅಪಾರ್ಟ್‌ಮೆಂಟ್‌ಗಳು,ಕ್ರೀಡಾಕೇಂದ್ರಗಳಂತಹ ಸ್ಥಳಗಳ ಲ್ಲಿರುವ ಕನಿಷ್ಠ ಶೇ.60ರಷ್ಟು ಈಜುಕೊಳಗಳಲ್ಲಿ ಅಪಾಯಕಾರಿಯಾದ ಇ.ಕೋಲಿ ಬ್ಯಾಕ್ಟೀರಿಯಾಗಳು ಇರುತ್ತವೆ. ಈಜುತ್ತಿರುವಾಗ ಬಾಯಿ ಅಥವಾ ಚರ್ಮದ ಮೂಲಕ ಶರೀರವನ್ನು ಪ್ರವೇಶಿಸುವ ಇವು ಫುಡ್ ಪಾಯಿಸನಿಂಗ್ ಉಂಟು ಮಾಡುತ್ತವೆ ಮತ್ತು ತೀವ್ರ ಹೊಟ್ಟೆನೋವಿಗೆ ಕಾರಣವಾಗುತ್ತವೆ. ಹೀಗಾಗಿ ಇಂತಹ ಈಜುಕೊಳಗಳಲ್ಲಿ ಇಳಿಯುವ ಮುನ್ನ ನೀರು ಸ್ವಚ್ಛ ಮತ್ತು ನಿರ್ಮಲವಾಗಿದೆ ಎನ್ನುವುದನ್ನು ಖಚಿತ ಪಡಿಸಿಕೊಳ್ಳುವುದು ಅಗತ್ಯವಾಗಿದೆ.

► ಲೆಜನೈರಸ್ ರೋಗ

ಇದು ಲೆಜನೆಲ್ಲಾ ಎಂಬ ಬ್ಯಾಕ್ಟೀರಿಯಾದಿಂದ ಉಂಟಾಗುವ ಅಪರೂಪದ ರೋಗವಾಗಿದ್ದು,ತೀವ್ರ ಸ್ವರೂಪದ ನ್ಯುಮೋನಿಯಾ ಮತ್ತು ಉಸಿರಾಟದ ಸೋಂಕುಗಳನ್ನುಂಟು ಮಾಡುತ್ತದೆ. ತಲೆನೋವು, ತೀವ್ರಜ್ವರ,ಮಾಂಸಖಂಡಗಳಲ್ಲಿ ನೋವು,ಚಳಿ ಇತ್ಯಾದಿಗಳು ಲೆಜನೈರಸ್ ರೋಗದ ಲಕ್ಷಣಗಳಾಗಿವೆ. ಈ ಲೆಜನೆಲ್ಲಾ ಬ್ಯಾಕ್ಟೀರಿಯಾಗಳು ಸಾರ್ವಜನಿಕ ಈಜುಗೊಳಗಳಲ್ಲಿಯೂ ಇರುತ್ತವೆ. ಹೀಗಾಗಿ ಎಚ್ಚರಿಕೆ ಅಗತ್ಯ.

► ಹೆಪಟಿಟಿಸ್ ಎ

ಇದು ಹೆಪಟಿಟಿಸ್ ಎ ವೈರಸ್‌ನಿಂದುಂಟಾಗುವ ತೀವ್ರ ಯಕೃತ್ತಿನ ಕಾಯಿಲೆಯಾಗಿದ್ದು,ಕಲುಷಿತ ಆಹಾರ ಮತ್ತು ನೀರಿನಿಂದ ಹರಡುತ್ತದೆ. ಇದು ಯಕೃತ್ತಿಗೆ ಹಾನಿಯನ್ನುಂಟು ಮಾಡುತ್ತದೆ. ಹೊಟ್ಟೆನೋವು, ವಾಕರಿಕೆ,ತೀವ್ರಜ್ವರ ಇತ್ಯಾದಿಗಳು ಈ ರೋಗದ ಲಕ್ಷಣಗಳಾಗಿವೆ. ಈ ಮೊದಲು ಈ ರೋಗದಿಂದ ಪೀಡಿತನಾಗಿದ್ದ ವ್ಯಕ್ತಿಯು ಈಜುಕೊಳವನ್ನು ಬಳಸಿದ್ದರೆ ಅಲ್ಲಿಯ ನೀರಿನಲ್ಲಿ ಈ ವೈರಸ್‌ಗಳು ಸೇರಿಕೊಂಡಿರುತ್ತವೆ ಮತ್ತು ಅಲ್ಲಿ ಈಜುವ ಆರೋಗ್ಯವಂತ ವ್ಯಕ್ತಿಗಳಿಗೂ ಸೋಂಕು ಹರಡುವ ಸಾಧ್ಯತೆಯಿರುತ್ತದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News