ಬಟಾಟೆ ರಸವನ್ನು ಸೇವಿಸಿದರೆ ಏನಾಗುತ್ತದೆ.....?

Update: 2018-06-09 10:28 GMT

ಬಟಾಟೆ ಎಂದರೆ ನಿಮಗೆ ಇಷ್ಟವಿರಬಹುದು. ಆದರೆ ಬಟಾಟೆ ರಸದ ಬಗ್ಗೆ ಎಂದಾದರೂ ಯೋಚಿಸಿದ್ದೀರಾ? ನಿಮಗೆ ಅಂತಹ ಕಲ್ಪನೆಯೂ ಬಂದಿರಲಿಕ್ಕಿಲ್ಲ. ಬಟಾಟೆ ರಸ ಹಲವಾರು ಆರೋಗ್ಯಲಾಭಗಳನ್ನು ನೀಡುತ್ತದೆ. ಅದರ ಬಗ್ಗೆ ನಿಮಗೆ ಅಗತ್ಯವಾಗಿ ಗೊತ್ತಿರಲೇಬೇಕಾದ ಕೆಲವು ಮಾಹಿತಿಗಳಿಲ್ಲಿವೆ.

ಕಚ್ಚಾ ಬಟಾಟೆಯಿಂದ ರಸವನ್ನು ತೆಗೆಯಲಾಗುತ್ತದೆ. ಇದು ವಿಟಾಮಿನ್ ಬಿ ಮತ್ತು ಸಿ, ಕಬ್ಬಿಣ, ಪೊಟ್ಯಾಷಿಯಂ, ಕ್ಯಾಲ್ಸಿಯಂ, ತಾಮ್ರ ಮತ್ತು ರಂಜಕದಂತಹ ಹಲವಾರು ಪೋಷಕಾಂಶಗಳನ್ನು ಒಳಗೊಂಡಿರುತ್ತದೆ.

ಬಟಾಟೆ ರಸ ಇತರ ಹಣ್ಣುಗಳು ಮತ್ತು ತರಕಾರಿ ರಸಗಳಂತೆ ಆಕರ್ಷಕವಲ್ಲದಿರಬಹುದು. ಆದರೆ ಅದು ಪ್ರಮುಖ ವಿಟಾಮಿನ್‌ಗಳು, ಪೋಷಕಾಂಶಗಳು ಮತ್ತು ಫೈಟೊಕೆಮಿಕಲ್‌ಗಳನ್ನು ಒಳಗೊಂಡಿದೆ. ಹೆಚ್ಚಿನ ಕ್ಷಾರೀಯ ಗುಣವನ್ನು ಹೊಂದಿರುವ ಅದು ಆಮ್ಲೀಯತೆ ಮತ್ತು ಹೊಟ್ಟೆಗೆ ಸಂಬಂಧಿಸಿದ ಇತರ ತೊಂದರೆಗಳನ್ನು ನಿವಾರಿಸುತ್ತದೆ.

► ಸಮೃದ್ಧ ವಿಟಾಮಿನ್ ಸಿ

ಬಟಾಟೆಯಲ್ಲಿ ನಮ್ಮ ದೈನಂದಿನ ಅಗತ್ಯದ ಶೇ.100ರಷ್ಟು ವಿಟಾಮಿನ್ ಸಿ ಇರುತ್ತದೆ. ನಮ್ಮ ಶರೀರವು ಕ್ಯಾಲ್ಸಿಯಂ ಅನ್ನು ಹೀರಿಕೊಳ್ಳಲು ಮತ್ತು ರಕ್ತನಾಳಗಳು, ಮೃದ್ವಸ್ಥಿ,ಸ್ನಾಯು ಮತ್ತು ಮೂಳೆಗಳಲ್ಲಿ ಕೊಲಾಜಿನ್ ಎಂಬ ಪ್ರೋಟಿನ್ ಅನ್ನು ಸೃಷ್ಟಿಸುವಲ್ಲಿ ವಿಟಾಮಿನ್ ಸಿ ನೆರವಾಗುತ್ತದೆ. ಅದರಲ್ಲಿರುವ ಉತ್ಕರ್ಷಣ ನಿರೋಧಕ ಗುಣಗಳು ಚರ್ಮದ ಒಟ್ಟಾರೆ ಆರೋಗ್ಯವನ್ನು ಉತ್ತಮವಾಗಿಸುತ್ತವೆ.

►ವಿಟಾಮಿನ್ ಬಿ

ಒಂದು ಕಪ್ ಬಟಾಟೆ ರಸವು ನಮ್ಮ ಶರೀರಕ್ಕೆ ದೈನಂದಿನ ಅಗತ್ಯದ ಶೇ.40ರಷ್ಟು ಥಿಯಾಮೈನ್ ಮತ್ತು ನಿಯಾಸಿನ್‌ಗಳನ್ನು ಒಳಗೊಂಡಿರುತ್ತದೆ. ಈ ರಸವನ್ನು ಸೇವಿಸುವುದರಿಂದ ರಿಬೊಫ್ಲಾವಿನ್ ಮತ್ತು ಬಿ6 ವಿಟಾಮಿನ್‌ನಂತಹ ಇತರ ಬಿ ವಿಟಾಮಿನ್‌ಗಳೂ ನಮ್ಮ ಶರೀರಕ್ಕೆ ದೊರೆಯುತ್ತವೆ. ಕಾರ್ಬೊಹೈಡ್ರೇಟ್‌ಗಳನ್ನು ನಮ್ಮ ಶರೀರಕ್ಕೆ ಶಕ್ತಿಯನ್ನೊದಗೊದಗಿಸುವ ಗ್ಲುಕೋಸ್ ಆಗಿ ಪರಿವರ್ತಿಸಲು ಬಿ ವಿಟಾಮಿನ್‌ಗಳು ಅಗತ್ಯವಾಗಿವೆ. ಮಿದುಳು ಮತ್ತು ನರಮಂಡಲದ ಕಾರ್ಯ ನಿರ್ವಹಣೆಗೆ ಪೂರಕವಾಗಿರುವ ಇವು ಯಕೃತ್ತಿನ ಆರೋಗ್ಯವನ್ನು ಕಾಯ್ದುಕೊಳ್ಳುವ ಜೊತೆಗೆ ತಲೆಗೂದಲಿನ ಆರೋಗ್ಯವನ್ನೂ ಹೆಚ್ಚಿಸುತ್ತವೆ.

► ಹೇರಳ ಉತ್ಕರ್ಷಣ ನಿರೋಧಕಗಳು

ಬಟಾಟೆ ರಸವು ಉತ್ಕರ್ಷಣ ನಿರೋಧಕಗಳು ಮತ್ತು ಫೈಟೊಕೆಮಿಕಲ್‌ಗಳನ್ನು ಹೇರಳವಾಗಿ ಒಳಗೊಂಡಿದ್ದು,ಇದು ಅದರ ಇನ್ನೊಂದು ಆರೋಗ್ಯಲಾಭವಾಗಿದೆ. ಕಾಯಿಲೆಗಳನ್ನು ತಡೆಯವಲ್ಲಿ,ವಯಸ್ಸಾದ ಲಕ್ಷಣಗಳನ್ನು ಕಡಿಮೆ ಮಾಡುವಲ್ಲಿ ಮತ್ತು ಉರಿಯೂತವನ್ನು ನಿಯಂತ್ರಿಸುವಲ್ಲಿ ಇವು ಪ್ರಮುಖ ಪಾತ್ರವನ್ನು ವಹಿಸುತ್ತವೆ.

► ಹೆಚ್ಚಿನ ಪೊಟ್ಯಾಷಿಯಂ

 ಕಿತ್ತಳೆಯಲ್ಲಿರುವುದಕ್ಕಿಂತ ಮೂರು ಪಟ್ಟು ಹೆಚ್ಚಿನ ಪೊಟ್ಯಾಷಿಯಂ ಬಟಾಟೆಯಲ್ಲಿದೆ. ಒಂದು ಕಪ್ ಬಟಾಟೆ ರಸದಲ್ಲಿ ನಮ್ಮ ದೈನಂದಿನ ಅಗತ್ಯದ ಶೇ.31ರಷ್ಟು ಅಂದರೆ 1467 ಮಿಲಿಗ್ರಾಂ ಪೊಟ್ಯಾಷಿಯಂ ಇರುತ್ತದೆ. ಇಲೆಕ್ಟ್ರೋಲೈಟ್ ಆಗಿ ಕಾರ್ಯಾಚರಿಸುವ ಅದು ರಕ್ತದಲ್ಲಿಯ ದ್ರವಗಳನ್ನು ನಿಯಂತ್ರಿಸುತ್ತದೆ ಮತ್ತು ಸ್ನಾಯುಗಳ ಕಾರ್ಯನಿರ್ವಹಣೆಗೆ ಪೂರಕವಾಗಿದೆ.

► ಸಂಧಿವಾತದಿಂದ ಶಮನ ನೀಡುತ್ತದೆ

ಬಟಾಟೆ ರಸವು ಅಪ್ರತಿಮ ಉರಿಯೂತ ನಿವಾರಕ ಪರಿಣಾಮಗಳನ್ನು ಹೊಂದಿದ್ದು,ಸಂಧಿವಾತ ನೋವಿನಿಂದ ಶಮನ ನೀಡುತ್ತದೆ.

► ಮೈಗ್ರೇನ್‌ಗೆ ಚಿಕಿತ್ಸೆ ನೀಡುತ್ತದೆ

ಬಟಾಟೆ ರಸದ ಸೇವನೆಯಿಂದ ಅಥವಾ ಬಟಾಟೆಯ ಬಿಲ್ಲೆಯಿಂದ ಹಣೆ ಮತ್ತು ಕಣ್ತಲೆಗಳಿಗೆ ತಿಕ್ಕಿದರೆ ಮೈಗ್ರೇನ್ ಅಥವಾ ಅರೆ ತಲೆನೋವು ಶಮನವಾಗುತ್ತದೆ. ಈ ರಸವನ್ನು ಸಾಂಪ್ರದಾಯಿಕ ಔಷಧಿಯಾಗಿಯೂ ಬಳಸಲಾಗುತ್ತದೆ.

►ರಕ್ತ ಪರಿಚಲನೆಯನ್ನು ಉತ್ತಮಗೊಳಿಸುತ್ತದೆ

 ಬಟಾಟೆ ರಸದಲ್ಲಿರುವ ನಿಯಾಸಿನ್ ವಿಟಾಮಿನ್ ಶರೀರದ ಎಲ್ಲ ಅಂಗಗಳಿಗೆ ರಕ್ತಪರಿಚಲನೆಗೆ ನೆರವಾಗುತ್ತದೆ ಮತ್ತು ತನ್ಮೂಲಕ ಶರೀರವು ಸಹಜವಾಗಿ ಕಾರ್ಯ ನಿರ್ವಹಿಸುವಂತೆ ಮಾಡುತ್ತದೆ.

► ದೇಹತೂಕ ಇಳಿಕೆಗೆ ಸಹಕಾರಿ

 ಬಟಾಟೆಯನ್ನು ತಿಂದರೆ ಶರೀರದ ತೂಕ ಹೆಚ್ಚಾಗುತ್ತದೆ ಎಂದು ಹೆಚ್ಚಿನವರು ನಂಬಿದ್ದಾರೆ. ಆದರೆ ಇದು ನಿಜವಲ್ಲ. ಬಟಾಟೆ ರಸದ ಸೇವನೆಯು ಶರೀರದ ತೂಕವನ್ನು ಇಳಿಸಿಕೊಳ್ಳಲು ನೆೆರವಾಗುತ್ತದೆ ಎಂದು ಸಂಶೋಧನೆಗಳು ತಿಳಿಸಿವೆ. ಅದರಲ್ಲಿರುವ ವಿಟಾಮಿನ್ ಸಿ ಚಯಾಪಚಯವನ್ನು ಹೆಚ್ಚಿಸುತ್ತದೆ ಮತ್ತು ಊಟದ ಬಳಿಕ ಬಟಾಟೆ ರಸದ ಸೇವನೆಯು ಹಸಿವಿನ ಹಾರ್ಮೋನ್‌ಗಳ ಉತ್ಪತ್ತಿಯನ್ನು ತಡೆಯುತ್ತದೆ. ಇದರಿಂದಾಗಿ ಆಗಾಗ್ಗೆ ಏನಾದರೂ ತಿನ್ನುತ್ತಿರಬೇಕೆಂದು ಅನ್ನಿಸುವುದಿಲ್ಲ ಮತ್ತು ಇದು ಶರೀರದ ತೂಕವನ್ನು ಕಡಿಮೆ ಮಾಡುವಲ್ಲಿ ನೆರವಾಗುತ್ತದೆ.

► ಕ್ಯಾನ್ಸರ್ ಅಪಾಯವನ್ನು ತಗ್ಗಿಸುತ್ತದೆ

ಬಟಾಟೆ ರಸದ ಸೇವನೆಯಿಂದ ಕ್ಯಾನ್ಸರ್ ಕೋಶಗಳು ತ್ವರಿತವಾಗಿ ವಿಭಜನೆಗೊಳ್ಳುವುದನ್ನು ಕಡಿಮೆ ಮಾಡಬಹುದು ಎನ್ನುವುದು ಸಂಶೋಧನೆಗಳಿಂದ ಸಾಬೀತಾಗಿದೆ. ಬಟಾಟೆಯಲ್ಲಿರುವ ಗ್ಲೈಕೊಅಲ್ಕನಾಯ್ಡಾ ಎಂಬ ರಾಸಾಯನಿಕಗಳು ಗಡ್ಡೆಗಳುಂಟಾಗುವುದನ್ನು ತಡೆಯುತ್ತವೆ. ಹಿಗಾಗಿ ಬಟಾಟೆ ರಸದ ನಿಯಮಿತ ಸೇವನೆಯು ಕ್ಯಾನ್ಸರ್‌ನ ಅಪಾಯವನ್ನು ತಗ್ಗಿಸುತ್ತದೆ.

► ಹುಣ್ಣುಗಳನ್ನು ಗುಣಪಡಿಸುತ್ತದೆ

ಬಟಾಟೆಯಲ್ಲಿರುವ ವಿಶಿಷ್ಟ ಬ್ಯಾಕ್ಟೀರಿಯಾ ನಿರೋಧಕ ಕಣಗಳು ಎದೆಯುರಿ ಮತ್ತು ಹುಣ್ಣುಗಳನ್ನು ಗುಣಪಡಿಸುವಲ್ಲಿ ನೆರವಾಗುತ್ತವೆ. ಬಟಾಟೆ ರಸದ ಸೇವನೆಯು ಹೊಟ್ಟೆಹುಣ್ಣುಗಳು ಆಗುವುದನ್ನೂ ತಡೆಯುತ್ತದೆ.

► ಕೊಲೆಸ್ಟ್ರಾಲ್ ಅನ್ನು ತಗ್ಗಿಸುತ್ತದೆ

ಬಟಾಟೆಯಲ್ಲಿರುವ ನಾರು,ವಿಟಾಮಿನ್ ಎ,ವಿಟಾಮಿನ್ ಬಿ ಕಾಂಪ್ಲೆಕ್ಸ್ ಮತ್ತು ವಿಟಾಮಿನ್ ಸಿ ಇವು ಶರೀರದಲ್ಲಿಯ ಕೊಲೆಸ್ಟ್ರಾಲ್ ಮಟ್ಟವನ್ನು ಕಡಿಮೆ ಮಾಡುವಲ್ಲಿ ನೆರವಾಗುತ್ತವೆ.

► ಮಲಬದ್ಧತೆಯನ್ನು ನಿವಾರಿಸುತ್ತದೆ

ಬಟಾಟೆಯಲ್ಲಿ ಹೆಚ್ಚಿನ ಪ್ರಮಾಣದಲ್ಲಿರುವ ನಾರು ಮಲಬದ್ಧತೆಯನ್ನು ನಿವಾರಿಸುವಲ್ಲಿ ಪ್ರಮುಖ ಪಾತ್ರವನ್ನು ವಹಿಸುತ್ತದೆ ಮತ್ತು ಜೀರ್ಣಾಂಗ ವ್ಯವಸ್ಥೆಯನ್ನು ಸ್ವಚ್ಛಗೊಳಿಸುತ್ತದೆ. ಬಟಾಟೆ ರಸದ ಸೇವನೆಯು ಜಠರಗರುಳು ನಾಳವನ್ನು ಸ್ವಚ್ಛಗೊಳಿಸುವಲ್ಲಿಯೂ ನೆರವಾಗುತ್ತದೆ.

► ಸಯಾಟಿಕಾಗೆ ಪರಿಣಾಮಕಾರಿ ಮದ್ದು

ಕೆಳಬೆನ್ನಿನಿಂದ ಆರಂಭಗೊಳ್ಳುವ ತೀವ್ರ ನೋವು ಕಾಲುಗಳಿಗೆ ಹರಡುವುದು ಸಯಾಟಿಕಾದ ಲಕ್ಷಣವಾಗಿದೆ. ಬಟಾಟೆ ರಸವು ನರಗಳ ಕೆರಳುವಿಕೆಯನ್ನು ಕಡಿಮೆ ಮಾಡಿ ಕಾಲುಗಳ ಚಲನವಲನಕ್ಕೆ ನೆರವಾಗುವ ಮೂಲಕ ಸಯಾಟಿಕಾಗೆ ಪರಿಣಾಮಕಾರಿ ಮದ್ದಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News