ಕಡಿಮೆ ರಕ್ತದೊತ್ತಡವನ್ನೆಂದೂ ಕಡೆಗಣಿಸಬೇಡಿ

Update: 2018-06-12 10:32 GMT

ಹಾಸಿಗೆಯಲ್ಲಿ ಬಿದ್ದುಕೊಂಡಿದ್ದಾಗ ಅಥವಾ ಕೆಲಸ ಮಾಡಲು ನಿಂತುಕೊಂಡಿದ್ದಾಗ ವಾಕರಿಕೆ ಅಥವಾ ತಲೆ ಸುತ್ತುವಿಕೆ ನಿಮ್ಮನ್ನು ಕಾಡುತ್ತಿದೆಯೇ? ನಿಮ್ಮ ಶರೀರದಲ್ಲಿಯ ಎಲ್ಲ ರಕ್ತವೂ ಮಿದುಳಿನತ್ತ ನುಗ್ಗುತ್ತಿದೆ ಮತ್ತು ನೀವು ಖಾಲಿಖಾಲಿಯಾಗಿದ್ದೀರಿ ಎಂಬ ಅನುಭವ ನಿಮಗೆ ಎಂದಾದರೂ ಆಗಿದೆಯೇ? ಈ ಎಲ್ಲ ಪ್ರಶ್ನೆಗಳಿಗೆ ನಿಮ್ಮ ಉತ್ತರ ಹೌದು ಎಂದಾಗಿದ್ದರೆ ನೀವು ಕಡಿಮೆ ರಕ್ತದೊತ್ತಡದಿಂದ ಬಳಲುತ್ತಿರುವ ಹೆಚ್ಚಿನ ಸಾಧ್ಯತೆಗಳಿವೆ. ಇದನ್ನು ಕಡೆಗಣಿಸಿದರೆ ಗಂಭೀರ ಪರಿಣಾಮಗಳನ್ನು ಅನುಭವಿಸಬೇಕಾಗುತ್ತದೆ.

ಹೈಪೊಟೆನ್ಶನ್ ಅಥವಾ ಕಡಿಮೆ ರಕ್ತದೊತ್ತಡವು ಶರೀರದ ವಿವಿಧ ಅಂಗಾಂಗಗಳಿಗೆ ರಕ್ತದ ಹರಿವು ದಿಢೀರ್ ಕಡಿಮೆಯಾಗಿರುವುದನ್ನು ಸೂಚಿಸುತ್ತದೆ. ಅಂಗವೊಂದರಲ್ಲಿ ಉರಿಯೂತ,ಆಂತರಿಕ ಅಥವಾ ಬಾಹ್ಯ ಕಾರಣಗಳಿಂದಾಗಿ ರಕ್ತಸ್ರಾವ,ವಿಟಾಮಿನ್ ಡಿ ಅಥವಾ ಫಾಲೇಟ್ ಕೊರತೆ ಅಥವಾ ನಿರ್ಜಲೀಕರಣ ಇವು ಕಡಿಮೆ ರಕ್ತದೊತ್ತಡಕ್ಕೆ ಕೆಲವು ಸಾಮಾನ್ಯ ಕಾರಣಗಳಾಗಿವೆ. ಹೃದಯ ಕಾಯಿಲೆ,ಖಿನ್ನತೆ ಅಥವಾ ಅಧಿಕ ರಕ್ತದೊತ್ತಡದ ಚಿಕಿತ್ಸೆಗೆ ಸೇವಿಸುವ ಔಷಧಿಗಳು,ಆಡ್ರೆನಾಲ್ ಕೊರತೆ ಅಥವಾ ಮದ್ಯಪಾನದಂತಹ ಅಂಶಗಳು ಕಡಿಮೆ ರಕ್ತದೊತ್ತಡ ವನ್ನುಂಟು ಮಾಡುತ್ತವೆ. ವಿಪರೀತ ದಣಿವು,ಬವಳಿ ಬಂದು ಬೀಳುವುದು,ತಲೆ ಸುತ್ತುವಿಕೆ ಇತ್ಯಾದಿಗಳು ಕಡಿಮೆ ರಕ್ತದೊತ್ತಡದ ಲಕ್ಷಣಗಳಾಗಿವೆ. ಕೆಲವೊಮ್ಮೆ ಯಾವುದಾದರೂ ಕಾಯಿಲೆಯು ಇದಕ್ಕೆ ಕಾರಣವಾಗ ಬಹುದು.

ಕಡಿಮೆ ರಕ್ತದೊತ್ತಡದ ಚಿಕಿತ್ಸೆಗೆ ಪರಿಣಾಮಕಾರಿ ಮನೆಮದ್ದುಗಳು

► ವಿಟಾಮಿನ್‌ಗಳು

ವಿಟಾಮಿನ್‌ಗಳ ಕೊರತೆಯು ಕಡಿಮೆ ರಕ್ತದೊತ್ತಡಕ್ಕೆ ಪ್ರಮುಖ ಕಾರಣಗಳಲ್ಲೊಂದಾಗಿದೆ. ವಿಟಾಮಿನ್ ಇ ಮತ್ತು ಬಿ12 ಸೇವನೆಯು ರಕ್ತದೊತ್ತಡ ಮಟ್ಟವನ್ನು ಹೆಚ್ಚಿಸಲು ನೆರವಾಗುತ್ತದೆ ಎನ್ನುವುದನ್ನು ಅಧ್ಯಯನಗಳು ತೋರಿಸಿವೆ. ಆದರೆ ಅಧಿಕ ರಕ್ತದೊತ್ತಡದಿಂದ ಬಳಲುತ್ತಿರುವವರು ಇವುಗಳಿಂದ ದೂರವಿರಬೇಕು. ರಕ್ತಹೀನತೆಯಿಂದ ಬಳಲುತ್ತಿರುವವರಿಗೆ ಕಡಿಮೆ ರಕ್ತದೊತ್ತಡವನ್ನು ಹೆಚ್ಚಿಸಲು ವಿಟಾಮಿನ್ ಬಿ12 ಸೇವಿಸುವಂತೆ ಸೂಚಿಸಲಾಗುತ್ತದೆ. ಇದಕ್ಕಾಗಿ ಸಿಹಿಗೆಣಸು,ಮೀನು,ಬಾದಾಮ,ಮೊಟ್ಟೆ,ಚೀಸ್,ಬಸಳೆ ಮತ್ತು ಹಾಲು ಸೂಕ್ತ ಆಹಾರಗಳಾಗಿವೆ.

► ಕಾಫಿ

ಕಾಫಿ ಸೇವನೆಯು ರಕ್ತದೊತ್ತಡವನ್ನು ಹೆಚ್ಚಿಸಲು ನೈಸರ್ಗಿಕ ಮದ್ದಾಗಿದೆ.ಎರಡು ಕಪ್ ಕಾಫಿ ಸೇವನೆಯು ರಕ್ತದೊತ್ತಡ ಮಟ್ಟವನ್ನು ಹೆಚ್ಚಿಸಲು ಪರಿಣಾಮಕಾರಿ ತಾತ್ಕಾಲಿಕ ಮಾರ್ಗವಾಗಿದೆ.

► ಗ್ರೀನ್ ಟೀ

ಸಮೃದ್ಧ ಕೆಫೀನ್ ಅನ್ನು ಒಳಗೊಂಡಿರುವ ಗ್ರೀನ್ ಟೀ ರಕ್ತದೊತ್ತಡ ಮಟ್ಟವನ್ನು ಸಹಜ ಸ್ಥಿತಿಗೆ ಮರಳಿಸಲು ನೆರವಾಗುತ್ತದೆ. ಇದಕ್ಕಾಗಿ ದಿನಕ್ಕೆ 2-3 ಬಾರಿ ಒಂದು ಕಪ್ ಗ್ರೀನ್ ಟೀ ಅನ್ನು ಸೇವಿಸಬೇಕು. ಇದು ಶರೀರಕ್ಕೆ ಹಲವಾರು ಆರೋಗ್ಯಲಾಭಗಳನ್ನು ನೀಡುವ ಜೊತೆಗೆ ಶರೀರದ ತೂಕ ಕಡಿಮೆಯಾಗಲೂ ನೆರವಾಗುತ್ತದೆ.

► ರೋಸ್‌ಮೇರಿ ತೈಲ

 ಒಂದು ಚಮಚ ತೆಂಗಿನೆಣ್ಣೆ ಅಥವಾ ಆಲಿವ್ ಎಣ್ಣೆಗೆ ಆರು ಹನಿ ರೋಸ್‌ಮೇರಿ ತೈಲವನ್ನು ಬೆರೆಸಿ ಅದನ್ನು ಇಡೀ ಶರೀರಕ್ಕೆ ಪೂಸಿಕೊಳ್ಳಬೇಕು ಇಲ್ಲವೇ ಸ್ನಾನದ ನೀರಿಗೆ ಈ ತೈಲದ ಕೆಲವು ಹನಿಗಳನ್ನು ಸೇರಿಸಿಕೊಳ್ಳಬಹುದಾಗಿದೆ. ರೋಸ್‌ಮೇರಿ ತೈಲದಲ್ಲಿರುವ ಕರ್ಪೂರವು ನಮ್ಮ ಉಸಿರಾಟ ವ್ಯವಸ್ಥೆಯನ್ನು ಮತ್ತು ರಕ್ತಪರಿಚಲನೆಯನ್ನು ಉತ್ತೇಜಿಸುತ್ತದೆ ಮತ್ತು ರಕ್ತದೊತ್ತಡ ಮಟ್ಟವನ್ನು ಹೆಚ್ಚಿಸುತ್ತದೆ.

► ಉಪ್ಪುನೀರು

ಉಪ್ಪಿನಲ್ಲಿರುವ ಸೋಡಿಯಂ ಕಡಿಮೆ ರಕ್ತದೊತ್ತಡವನ್ನು ಸಹಜ ಸ್ಥಿತಿಗೆ ತರುತ್ತದೆ. ಆದರೆ ಉಪ್ಪಿನ ಅತಿಯಾದ ಸೇವನೆ ಆರೋಗ್ಯಕ್ಕೆ ಹಾನಿಕರವಾಗಿರುವುದರಿಂದ ಈ ಬಗ್ಗೆ ಎಚ್ಚರಿಕೆ ಇರಲಿ. ನಿಮಗೆ ದಣಿವು ಅಥವಾ ತಲೆ ಸುತ್ತುವಿಕೆಯ ಅನುಭವವಾದರೆ ಒಂದು ಗ್ಲಾಸ್ ನೀರಿಗೆ ಅರ್ಧ ಚಮಚ ಉಪ್ಪನ್ನು ಬೆರೆಸಿ, ರಕ್ತದೊತ್ತಡ ಮಟ್ಟದಲ್ಲಿ ದಿಢೀರ್ ಕುಸಿತವುಂಟಾದರೆ ಮಾತ್ರ ಅದನ್ನು ಸೇವಿಸಿ.

► ಜಿನ್ಸೆಂಗ್

ಜಿನ್ಸೆಂಗ್ ಟೀ ಕಡಿಮೆ ರಕ್ತದೊತ್ತಡಕ್ಕೆ ಪರಿಣಾಮಕಾರಿ ಮನೆಮದ್ದುಗಳಲ್ಲೊಂದಾಗಿದೆ. ಒಂದು ಕಪ್‌ನಷ್ಟು ಜಿನ್ಸೆಂಗ್ ಟೀ ಅನ್ನು ದಿನಕ್ಕೆ 2 ಅಥವಾ 3 ಬಾರಿ ಸೇವಿಸಿದರೆ ಉತ್ತಮ ಪರಿಣಾಮವನ್ನು ನೀಡುತ್ತದೆ.

► ತುಳಸಿ ಮತ್ತು ಜೇನು

ತುಳಸಿಯು ಹಲವಾರು ಔಷಧೀಯ ಗುಣಗಳನ್ನು ಹೊಂದಿದೆ. ಅದರಲ್ಲಿ ಸಮೃದ್ಧವಾಗಿರುವ ಪೊಟ್ಯಾಷಿಯಂ,ವಿಟಾಮಿನ್ ಸಿ ಮತ್ತು ಮ್ಯಾಗ್ನೀಷಿಯಂ ರಕ್ತದೊತ್ತಡ ಮಟ್ಟವನ್ನು ಸಹಜ ಸ್ಥಿತಿಯಲ್ಲಿರಿಸಲು ನೆರವಾಗುತ್ತವೆ. ಇದಕ್ಕಾಗಿ 15-20 ತುಳಸಿ ಎಲೆಗಳನ್ನು ಚೆನ್ನಾಗಿ ಜಜ್ಜಿ ಒಂದು ಚಮಚ ಜೇನು ಸೇರಿಸಿ ಪ್ರತಿದಿನ ಬೆಳಿಗ್ಗೆ ಸೇವಿಸಬಹುದಾಗಿದೆ.

► ಜ್ಯೇಷ್ಠ ಮಧು

ಕಡಿಮೆ ರಕ್ತದೊತ್ತಡದ ಚಿಕಿತ್ಸೆಯಲ್ಲಿ ಜ್ಯೇಷ್ಠ ಮಧು ಬೇರು ಅತ್ಯಂತ ಪರಿಣಾಮಕಾರಿಯಾಗಿದೆ. ಒಂದು ಕಪ್‌ಗೆ ಒಂದು ಚಮಚ ಜ್ಯೇಷ್ಠ ಮಧು ಹುಡಿಯನ್ನು ಸೇರಿಸಿ ಕೆಲವು ನಿಮಿಷಗಳ ಕಾಲ ಕುದಿಸಿ. ಕೆಲ ಸಮಯದ ಬಳಿಕ ಅದನ್ನು ಸೋಸಿ,ಒಂದು ಚಮಚ ಜೇನನ್ನು ಸೇರಿಸಿ ಕುಡಿಯಿರಿ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News