ಮುಳ್ಳುಸೌತೆಯನ್ನು ಪ್ರತಿದಿನ ತಿಂದರೆ ಏನಾಗುತ್ತದೆ....?

Update: 2018-06-19 12:04 GMT

ಮುಳ್ಳುಸೌತೆಯನ್ನು ಇಷ್ಟಪಡದವರಿಲ್ಲ. ಹಲವಾರು ಆರೋಗ್ಯಲಾಭ ಗಳನ್ನು ನೀಡುವ ಅದು ಹೇರಳವಾಗಿ ನೀರನ್ನೊಳಗೊಂಡಿದ್ದು,ಶರೀರದ ತೂಕವನ್ನು ಇಳಿಸುವಲ್ಲಿಯೂ ನೆರವಾಗುತ್ತದೆ. ಪ್ರತಿನಿತ್ಯ ಮುಳ್ಳುಸೌತೆಯನ್ನೇಕೆ ತಿನ್ನಬೇಕು ಎನ್ನುವುದಕ್ಕೆ ಹಲವಾರು ಕಾರಣಗಳಿವೆ. ಪ್ರತಿ ಮುಳ್ಳುಸೌತೆಯು 45 ಕ್ಯಾಲರಿಗಳು,11 ಗ್ರಾಂ ಕಾರ್ಬೊಹೈಡ್ರೇಟ್‌ಗಳು,2ಗ್ರಾಂ ಪ್ರೋಟಿನ್,2 ಗ್ರಾಂ ನಾರು, ವಿಟಾಮಿನ್ ಸಿ ಮತ್ತು ಕೆ,ಮ್ಯಾಗ್ನೀಷಿಯಂ,ಪೊಟ್ಯಾಷಿಯಂ ಮತ್ತು ಮ್ಯಾಂಗನೀಸ್‌ಗಳನ್ನು ಒಳಗೊಂಡಿದೆ.

ಅದು ನೀಡುವ ಆರೋಗ್ಯಲಾಭಗಳಿಲ್ಲಿವೆ......

► ಅದು ಮಿದುಳಿಗೆ ಒಳ್ಳೆಯದು

ಮಿದುಳಿನ ಆರೋಗ್ಯವನ್ನು ಹೆಚ್ಚಿಸುವಲ್ಲಿ ಪ್ರಮುಖ ಪಾತ್ರ ವಹಿಸುವ ಉರಿಯೂತ ನಿರೋಧಕ ಫ್ಲಾವನಾಲ್ ಮುಳ್ಳುಸೌತೆಯಲ್ಲಿದೆ. ನರಕೋಶಗಳನ್ನು ಪರಸ್ಪರ ಸಂಪರ್ಕಿಸುವುದು ಅದರ ಮುಖ್ಯ ಕಾರ್ಯವಾಗಿದೆ. ಅದು ಜ್ಞಾಪಕ ಶಕ್ತಿಯ ಕಾಳಜಿ ವಹಿಸುವ ಜೊತೆಗೆ ನರಕೋಶಗಳನ್ನು ವಯೋ ಸಂಬಂಧಿತ ಹಾನಿಯಿಂದ ರಕ್ಷಿಸುತ್ತದೆ.

► ಮಾನಸಿಕ ಒತ್ತಡವನ್ನು ತಗ್ಗಿಸಲು ನೆರವಾಗುತ್ತದೆ

ಮುಳ್ಳುಸೌತೆಯಲ್ಲಿ ವಿಟಾಮಿನ್‌ಗಳು,ವಿಶೇಷವಾಗಿ ವಿಟಾಮಿನ್ ಬಿ1,ವಿಟಾಮಿನ್ ಬಿ5 ಮತ್ತು ವಿಟಾಮಿನ್ ಬಿ7ಗಳನ್ನೊಳಗೊಂಡ ವಿಟಾಮಿನ್ ಬಿ ಕಾಂಪ್ಲೆಕ್ಸ್ ಸಮೃದ್ಧವಾಗಿದೆ. ವಿಟಾಮಿನ್ ಬಿ7 ಅನ್ನು ಬಯಾಟಿನ್ ಎಂದೂ ಕರೆಯಲಾಗುತ್ತದೆ. ಈ ವಿಟಾಮಿನ್‌ಗಳು ನರಮಂಡಲಕ್ಕೆ ವಿಶ್ರಾಂತಿಯೊದಗಿಸುವಲ್ಲಿ ಅತ್ಯಂತ ಪರಿಣಾಮ ಕಾರಿಯಾಗಿವೆ ಮತ್ತು ಒತ್ತಡ ಹಾಗೂ ಉದ್ವೇಗಗಳನ್ನು ತಗ್ಗಿಸುತ್ತವೆ.

► ತೂಕ ಇಳಿಕೆಗೆ ನೆರವಾಗುತ್ತದೆ

ಶರೀರದ ತೂಕ ಇಳಿಸಲು ಆಹಾರಕ್ರಮದಲ್ಲಿ ಮುಳ್ಳುಸೌತೆ ಅತ್ಯಗತ್ಯವಾಗಿ ಇರಲೇಬೇಕು. ಕೇವಲ ಮುಳ್ಳುಸೌತೆಗಳನ್ನು ತಿನ್ನುವುದರಿಂದ ಶರೀರದ ತೂಕ ಕಡಿಮೆಯಾಗುವುದಿಲ್ಲ. ಅದರೊಂದಿಗೆ ಕಾರ್ಬೊಹೈಡ್ರೇಟ್‌ಗಳು,ಕೊಬ್ಬು,ಪ್ರೋಟಿನ್ ಇತ್ಯಾದಿ ಪೋಷಕಾಂಶ ಗಳನ್ನು ಹೊಂದಿರುವ ಸಂತುಲಿತ ಆಹಾರ ಸೇವನೆಯೂ ಅಗತ್ಯವಾಗಿದೆ.

► ಅದರಲ್ಲಿ ನೈಸರ್ಗಿಕ ಉರಿಯೂತ ನಿರೋಧಕಗಳಿವೆ

ಮುಳ್ಳುಸೌತೆಯಲ್ಲಿ ನೀರು ಶೇ.96ರಷ್ಟಿದ್ದು,ಅದು ಶರೀರವನ್ನು ನಿರ್ಜಲೀಕರಣದಿಂದ ರಕ್ಷಿಸುತ್ತದೆ. ಜೀವಕೋಶಗಳನ್ನು ಪೋಷಿಸುವ ಜೊತೆಗೆ ಶರೀರದಲ್ಲಿನ ಹಲವಾರು ಪ್ರಕ್ರಿಯೆಗಳನ್ನು ಉತ್ತೇಜಿಸುತ್ತದೆ. ಮುಳ್ಳುಸೌತೆಯ ರಸವು ನೋವು ಮತ್ತು ಸೋಂಕುಗಳನ್ನು ಕಡಿಮೆ ಮಾಡುವಲ್ಲಿ ಅತ್ಯಂತ ಪರಿಣಾಮಕಾರಿಯಾಗಿದೆ. ಅದರಲ್ಲಿಯ ಉರಿಯೂತ ನಿರೋಧಕ ಗುಣಗಳು ನೀವು ಸೋಂಕಿನಿಂದ ಬಳಲುತ್ತಿರುವಾಗ ಉತ್ಪತ್ತಿಯಾಗುವ ಕಿಣ್ವಗಳನ್ನು ಪ್ರತಿಬಂಧಿಸುತ್ತದೆ.

► ಜೀರ್ಣಾಂಗದ ಆರೋಗ್ಯವನ್ನು ಹೆಚ್ಚಿಸುತ್ತದೆ

ಮುಳ್ಳುಸೌತೆಯಲ್ಲಿ ನಾರು ಮತ್ತು ನೀರು ಹೇರಳವಾಗಿವೆ. ಎಳ್ಳು ಮತ್ತು ಆ್ಯಪಲ್ ಸಿಡರ್ ವಿನೆಗರ್‌ನೊಂದಿಗೆ ಮುಳ್ಳುಸೌತೆಯ ಸಲಾಡ್ ಸೇವನೆಯು ಜೀರ್ಣಾಂಗ ವ್ಯವಸ್ಥೆಯನ್ನು ಉತ್ತಮಗೊಳಿಸುತ್ತದೆ ಮತ್ತು ಆಮ್ಲತೆಯಿಂದ ರಕ್ಷಣೆ ನೀಡುತ್ತದೆ. ಮುಳ್ಳುಸೌತೆಯು ಜಠರದ ಪಿಎಚ್ ಮಟ್ಟವನ್ನು ತಗ್ಗಿಸಿ ಮಲಬದ್ಧತೆ ಸಮಸ್ಯೆಯನ್ನು ನಿವಾರಿಸಲು ನೆರವಾಗುತ್ತದೆ.

► ಹೃದಯಕ್ಕೆ ಒಳ್ಳೆಯದು

ಮುಳ್ಳುಸೌತೆಯಲ್ಲಿ ಸಮೃದ್ಧವಾಗಿರುವ ಪೊಟ್ಯಾಷಿಯಂ ರಕ್ತದೊತ್ತಡವನ್ನು ಪರಿಣಾಮಕಾರಿಯಾಗಿ ನಿಯಂತ್ರಿಸುತ್ತದೆ. ಇಲೆಕ್ಟ್ರೋಲೈಟ್‌ನಂತೆಯೂ ಕಾರ್ಯಾಚರಿಸುವ ಅದು ಜೀವಕೋಶಗಳ ಕಾರ್ಯವನ್ನು ಕ್ರಮಬದ್ಧಗೊಳಿಸುತ್ತದೆ. ಅದು ನರಮಂಡಲ, ಸ್ನಾಯುಗಳ ಸಂಕುಚನ ಮತ್ತು ಹೃದಯದ ಕಾರ್ಯಗಳಿಗೂ ಪೂರಕವಾಗಿದೆ. ಮುಳ್ಳುಸೌತೆಯಲ್ಲಿರುವ ನಾರು ಅಪಧಮನಿಗಳಲ್ಲಿ ಕೊಲೆಸ್ಟ್ರಾಲ್ ಸಂಗ್ರಹಗೊಳ್ಳುವುದನ್ನು ತಡೆಯುತ್ತದೆ ಮತ್ತು ಹೃದಯದಲ್ಲಿ ತಡೆಗಳು ಉಂಟಾಗದಂತೆ ರಕ್ಷಣೆ ನೀಡುತ್ತದೆ.

► ಬಳಲಿಕೆಯನ್ನು ನಿವಾರಿಸುತ್ತದೆ

ಮುಳ್ಳುಸೌತೆಯು ಪಾಲಿಫಿನಾಲ್‌ಗಳು ಮತ್ತು ಫೈಟೊನ್ಯೂಟ್ರಿಯಂಟ್ ಗಳನ್ನು ಒಳಗೊಂಡಿರುವುದರಿಂದ ಅದನ್ನು ಸಲಾಡ್,ರಸದ ರೂಪದಲ್ಲಿ ಸೇವಿಸಿದರೆ ಅಥವಾ ಹಾಗೆಯೇ ತಿಂದರೂ ಬಳಲಿಕೆಯು ನಿವಾರಣೆಗೊಳ್ಳುತ್ತದೆ.

► ಅದು ಉತ್ಕರ್ಷಣ ನಿರೋಧಕಗಳನ್ನು ಒಳಗೊಂಡಿದೆ

ಕ್ಯಾನ್ಸರ್,ಹೃದ್ರೋಗದಂತಹ ಹಲವಾರು ತೀವ್ರ ಕಾಯಿಲೆಗಳಿಗೆ ಕಾರಣವಾಗಬಲ್ಲ ಶರೀರದಲ್ಲಿಯ ಫ್ರೀ ರ್ಯಾಡಿಕಲ್‌ಗಳನ್ನು ಉತ್ಕರ್ಷಣ ನಿರೋಧಕಗಳು ನಿವಾರಿಸುತ್ತವೆ. ಉತ್ಕರ್ಷಣ ನಿರೋಧಕಗಳು ಮುಳ್ಳುಸೌತೆಯಲ್ಲಿ ಹೇರಳವಾಗಿವೆ.

► ಕರುಳಿನ ಚಲನವಲನವನ್ನು ಕ್ರಮಬದ್ಧಗೊಳಿಸುತ್ತದೆ

ಮುಳ್ಳುಸೌತೆಯಲ್ಲಿ ಸಮೃದ್ಧವಾಗಿರುವ ನಾರು ಮತ್ತು ನೀರು ಕರುಳಿನ ಚಲನವಲನವನ್ನು ಕ್ರಮಬದ್ಧಗೊಳಿಸುವ ಮೂಲಕ ಸುಸೂತ್ರ ಮಲವಿಸರ್ಜನೆಗೆ ನೆರವಾಗುತ್ತವೆ ಮತ್ತು ಮಲಬದ್ಧತೆಯನ್ನು ತಡೆಯುತ್ತವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News