ಈ ಸಂಚುಕೋರ ಜಾಲ ಬಯಲಾಗಲಿ

Update: 2018-06-24 18:39 GMT

ದೇಶದ ಪ್ರಜಾಪ್ರಭುತ್ವವನ್ನು ಬುಡಮೇಲು ಮಾಡಲು ಹೊರಟಿರುವ ಮನುವಾದಿ ಫ್ಯಾಶಿಸ್ಟ್ ಶಕ್ತಿಗಳಿಂದ ನಮ್ಮ ಸಂವಿಧಾನವೇ ಅಪಾಯದ ಅಂಚಿಗೆ ಸಿಲುಕಿದೆ. ಈ ಸಂವಿಧಾನವನ್ನು ಕಾಪಾಡಬೇಕಾದರೆ ತುರ್ತಾಗಿ ಈಗಿನ ಕೇಂದ್ರ ಸರಕಾರ ಬದಲಾಗಬೇಕು. ಎಲ್ಲ ಪ್ರತಿಪಕ್ಷಗಳು ಒಂದಾಗಿ ಮೋದಿ ಬಿಜೆಪಿಯನ್ನು ಪ್ರಭುತ್ವದಿಂದ ದೂರವಿಡಬೇಕು. ಹಿಂದುತ್ವವಾದಿ ಭಯೋತ್ಪಾದಕ ಸಂಘಟನೆಗಳ ಬಗ್ಗೆ ನಿಗಾವಹಿಸಲು ಕೇಂದ್ರ ಮತ್ತು ರಾಜ್ಯಗಳ ಗುಪ್ತಚರ ಇಲಾಖೆಯಲ್ಲಿ ವಿಶೇಷ ವಿಭಾಗಗಳನ್ನು ಆರಂಭಿಸಬೇಕು.


ಕಳೆದ ವಾರ ಬೆಂಗಳೂರಿನಲ್ಲಿ ಎರಡು ಪುಸ್ತಕಗಳು ಬಿಡುಗಡೆಯಾದವು. ಒಂದು ಡಾ.ಜಿ. ರಾಮಕೃಷ್ಣ ಅವರ ‘‘ಭಗವದ್ಗೀತೆ - ಒಂದು ಅವಲೋಕನ’’ ಈ ಪುಸ್ತಕದ ಬಿಡುಗಡೆ ಕಾರ್ಯಕ್ರಮ ಬಸವನಗುಡಿಯ ಜ್ಯೋತಿ ಬಸು ಭವನದಲ್ಲಿ ನಡೆಯಿತು. ಇದೇ ದಿನ ವಿನಾಯಕ ದಾಮೋದರ ಸಾವರ್ಕರ್ ಅವರ ‘ಹಿಂದುತ್ವ’ ಪುಸ್ತಕದ ಕನ್ನಡ ಅನುವಾದ ಬಿಡುಗಡೆಯಾಯಿತು. ಈ ಎರಡು ಕಾರ್ಯಕ್ರಮಗಳು ಭಾರತೀಯ ಸಮಾಜದಲ್ಲಿ ಇಂದು ನಡೆಯುತ್ತಿರುವ ವೈಚಾರಿಕ ಸಂಘರ್ಷವನ್ನು ಬಿಂಬಿಸುತ್ತಿದ್ದವು. ‘‘ಭಗವದ್ಗೀತೆ ಒಂದು ಅವಲೋಕನ’’ ಬಿಡುಗಡೆ ಕಾರ್ಯಕ್ರಮದಲ್ಲಿ ನಾನೂ ಪಾಲ್ಗೊಂಡಿದ್ದೆ. ಜೂನ್ 17 ಜಿ.ರಾಮಕೃಷ್ಣರ ಜನ್ಮದಿನ. ನಮ್ಮ ನಡುವೆ ನಿತ್ಯವೂ ಬೆಳಕಿನ ಕಿರಣಗಳನ್ನು ಚೆಲ್ಲುತ್ತಿರುವ ಈ ಮಹಾನ್ ಚೇತನಕ್ಕೆ ಈಗ 80ರ ಪ್ರಾಯ. ಈ ಸಮಾರಂಭದಲ್ಲಿ ಸೇರಿದವರೆಲ್ಲ ಸಮಾನ ಮನಸ್ಕ ಆರೋಗ್ಯವಂತ ಮನಸ್ಸಿನವರು. ಪುಸ್ತಕ ಬಿಡುಗಡೆ ಮಾಡಿದ ಹಿರಿಯ ಪತ್ರಕರ್ತ ಸಿ.ಆರ್. ಕೃಷ್ಣರಾವ್ ಅವರಾಗಲಿ ಪುಸ್ತಕದ ಬಗ್ಗೆ ಮಾತನಾಡಿದ ವೇಣುಗೋಪಾಲ, ಸುಭಾಷ್ ರಾಜಮಾನೆಯವರಾಗಲಿ, ಜಿ.ಆರ್. ಅವರಾಗಲಿ ಎಲ್ಲೂ ಕೆರಳಿಸುವ ಮಾತುಗಳನ್ನಾಡಲಿಲ್ಲ.

ಆದರೆ, ಹಿಂದುತ್ವ ಪುಸ್ತಕದ ಬಿಡುಗಡೆ ಕಾರ್ಯಕ್ರಮ ಅದಕ್ಕೆ ತಕ್ಕಂತೆ ಇತ್ತು. ಈ ಪುಸ್ತಕ ಬಿಡುಗಡೆ ಮಾಡಿದ ಕೇಂದ್ರ ಸಚಿವ ಅನಂತಕುಮಾರ ಹೆಗಡೆ ಎಂದಿನಂತೆ ಬುದ್ಧಿಜೀವಿಗಳ ಮೇಲೆ ವಿಷ ಕಕ್ಕಿದರು. ಜಾತ್ಯತೀತರ ಜಾತಿಯಾವುದು ಎಂದು ಮತ್ತೆ ಹೇಳಿದರು. ‘‘ನಿಮ್ಮ ರಕ್ತದ ಗುಣ ಯಾವುದು’’ ಎಂದು ಛೇಡಿಸಿದರು. ಅವರ ಟೀಕೆ ವಿಶ್ವ ಮಾನವತ್ವದ ಸಂದೇಶ ನೀಡಿದ ರಾಷ್ಟ್ರಕವಿ ಕುವೆಂಪು ಅವರನ್ನು ಹೀಯಾಳಿಸುವಂತಿತ್ತು. ಅನಂತ ಕುಮಾರ್ ಮಾತು ಇಲ್ಲಿಗೇ ನಿಲ್ಲಲಿಲ್ಲ. ‘‘ಭಾರತದ ಮೊದಲ ಸಂವಿಧಾನ ಮನುಸ್ಮತಿ’’ ಎಂದು ಹೇಳಿದರು. ಬಾಬಾ ಸಾಹೇಬರು ಬೆಂಕಿ ಹಚ್ಚಿ ಸುಟ್ಟು ಮನುಷ್ಯರ ನಡುವೆ ಮೇಲು ಕೀಳುಗಳನ್ನು ಸೃಷ್ಟಿಸುವ ಮನುಸ್ಮತಿ ಈ ಹೆಗಡೆಗೆ ಮೊದಲ ಸಂವಿಧಾನವಾಗಿರುವುದರಲ್ಲಿ ಅಚ್ಚರಿಯಿಲ್ಲ. ಈಗಿರುವ ಸಂವಿಧಾನವನ್ನು ಬದಲಿಸಿ ಈ ಮೊದಲ ಸಂವಿಧಾನವನ್ನು ದೇಶದ ಮೇಲೆ ಹೇರಲು ಅಧಿಕಾರಕ್ಕೆ ಬಂದಿರುವುದಾಗಿ ಈತ ಹಿಂದೊಮ್ಮೆ ಹೇಳಿದ್ದರು.

ಈ ಹಿಂದುತ್ವ ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ಮಾತನಾಡಿದ ಇನ್ನೊಬ್ಬ ಅಂಕಣಕಾರ ‘‘ನಮ್ಮ ಧರ್ಮದ ರಕ್ಷಣೆಗಾಗಿ ಹಿಂಸೆಗಿಳಿಯಬೇಕು ಎಂದು ಸಾವರ್ಕರ್ ಹಿಂಸೆಗೆ ಕರೆ ನೀಡಿದ್ದಾರೆ’’ ಎಂದು ಹೇಳಿದ. ಈತ ಹಿಂಸೆಗೆ ಕರೆ ನೀಡಿದ್ದು ಯಾರ ವಿರುದ್ಧ ಎಂಬುದು ಈತನ ಸಹವರ್ತಿಗಳು ಖೈರ್ಲಾಂಜಿ, ಭೀಮಾ ಕೋರೆಗಾಂವ್‌ನಲ್ಲಿ ಈಗಾಗಲೇ ತೋರಿಸಿದ್ದಾರೆ. ಸಾವರ್ಕರ್‌ರ ಈ ಪುಸ್ತಕವನ್ನು ಆಸಕ್ತಿಯಿಂದ ಕನ್ನಡಕ್ಕೆ ತಂದಿರುವ ಜಿ.ಬಿ. ಹರೀಶ್ ಇತ್ತೀಚೆಗೆ ಕೇಳಿ ಬರುತ್ತಿರುವ ಹೆಸರು. ಅನಂತ ಕುಮಾರ್ ಒರಟೊರಟಾಗಿ ಹೇಳುತ್ತ ಬಂದ ಹಿಂದುತ್ವವನ್ನು ಸಿಹಿ ಲೇಪನದೊಂದಿಗೆ ಹರೀಶ್ ತಮ್ಮ ಕೆಲ ಅಂಕಣಗಳೊಂದಿಗೆ ಭಕ್ತರಿಗೆ ಉಣ ಬಡಿಸುತ್ತ ಬಂದಿದ್ದಾರೆ. ಈಗ ಸಾವರ್ಕರ್ ಅವರ ‘ಹಿಂದುತ್ವ’ ಪುಸ್ತಕ ಕನ್ನಡಕ್ಕೆ ತಂದಿದ್ದಾರೆ. ಹಿಂದುತ್ವದ ಬಗ್ಗೆ ಆವೇಶಪೂರ್ಣವಾಗಿ ಮಾತನಾಡಿ, ಬರೆದು ಅನೇಕರು ಉದ್ದಾರವಾಗಿದ್ದಾರೆ. ತಮ್ಮ ಅಂಕಣಗಳ ಮೂಲಕ ಒಂದು ತಲೆಮಾರಿಗೆ ಮತಾಂಧತೆಯ ಮತ್ತೇರಿಸಿದ ಪತ್ರಕರ್ತರೊಬ್ಬರು ಮೋದಿ ಕೃಪೆಯಿಂದ ಲೋಕಸಭಾ ಸದಸ್ಯರಾದರು, ಈ ಅನಂತ ಕುಮಾರ ಹೆಗಡೆ ಅನಾಯಾಸವಾಗಿ ಕೇಂದ್ರ ಮಂತ್ರಿಯಾದರು.

ಹಿಂದುತ್ವ (ಬ್ರಾಹ್ಮಣತ್ವ)ವನ್ನೇ ಬಂಡವಾಳ ಮಾಡಿಕೊಂಡು ಉತ್ತರಕನ್ನಡ ಜಿಲ್ಲೆಯಲ್ಲಿ ನಾಲ್ಕು ಬಾರಿ ಲೋಕಸಭೆಗೆ ಆರಿಸಿ ಬಂದರು. ಎಂಥ ದುರಂತವೆಂದರೆ ಭೂರಹಿತ ರೈತರ, ಗೇಣಿದಾರರ ಹೋರಾಟದ ಮೂಲಕ ಬೆಳೆದು ಲೋಕಸಭೆಗೆ ಚುನಾಯಿತರಾಗುತ್ತಿದ್ದ ದಿನಕರ ದೇಸಾಯಿ ಅವರು ಪ್ರತಿನಿಧಿಸುತ್ತಿದ್ದ ಕಾರವಾರ ಲೋಕಸಭಾ ಕ್ಷೇತ್ರವನ್ನು ಈಗ ಮನುಸ್ಮತಿಯನ್ನು ಸಂವಿಧಾನ ಮಾಡಲು ಹೊರಟ ಹೆಗಡೆ ಪ್ರತಿನಿಧಿಸುತ್ತಿದ್ದಾರೆ. ದಕ್ಷಿಣ ಕನ್ನಡದಲ್ಲೂ ಅದೇ ಕತೆ. ಜನಾರ್ದನ ಪೂಜಾರಿಯವರಂಥ ರಾಜಕಾರಣಿ ಪ್ರತಿನಿಧಿಸುತ್ತಿದ್ದ ಕ್ಷೇತ್ರ ಈಗ ನಾಡಿಗೆ ಬೆಂಕಿ ಹಚ್ಚಲು ಕರೆಕೊಟ್ಟ ಬೆಂಕಿ ಬಹಾದ್ದೂರ ಪ್ರತಿನಿಧಿಸುತ್ತಿದ್ದಾರೆ. ಆದರೆ ಈ ಹಿಂದುತ್ವ ಎಂಬುದು ಎಲ್ಲರಿಗೂ ಒಂದೇ ದಾರಿಯನ್ನು ತೋರಿಸುವುದಿಲ್ಲ. ಅನಂತಕುಮಾರ್ ಹೆಗಡೆ ಅವರಿಗೆ ಇದು ಲೋಕಸಭೆಯ ದಾರಿ ತೋರಿಸಿದರೆ, ಬಿಜಾಪುರ ಜಿಲ್ಲೆಯ ಸಿಂದಗಿಯ ಪರಶುರಾಮ್ ವಾಗ್ಮೋರೆಗೆ ಜೈಲಿನ ದಾರಿಯನ್ನು ತೋರಿಸಿತು. ಹೆಗಡೆಯವರು ಯಾವ ಅರ್ಹತೆ ಇಲ್ಲದೆ ಕೇಂದ್ರ ಮಂತ್ರಿಯಾದರು. ಪರಶುರಾಮ್ ನಂತಹವರಿಗೆ ಜೈಲಿಗೆ ಹೋಗುವುದೇ ಅರ್ಹತೆ ಎಂದು ಹಿಂದುತ್ವ ತೀರ್ಮಾನಿಸಿತು‘‘ಕರ್ಮಣ್ಯೇ ವಾಧಿಕಾರಸ್ಥೆ’’.

ಗೌರಿ ಲಂಕೇಶ್ ಹತ್ಯೆ ಪ್ರಕರಣದಲ್ಲಿ ಎಸ್‌ಐಟಿಯಿಂದ ಬಂಧನಕ್ಕೊಳಗಾಗಿರುವ ಪರಶುರಾಮ್ ವಾಗ್ಮೋರೆ ತನಿಖೆಯ ವೇಳೆ ಎಲ್ಲವನ್ನೂ ಬಾಯಿಬಿಟ್ಟಿದ್ದಾನೆ ಎಂದು ಮಾಧ್ಯಮಗಳ ವರದಿಗಳಲ್ಲಿ ಗೊತ್ತಾಗುತ್ತದೆ. ಈ ತನಿಖೆ ಈಗ ಅಂತಿಮ ಹಂತಕ್ಕೆ ಬಂದಾಗ ಗಾಬರಿಯಾಗಿರುವ ಧಾರವಾಡದ ಬಿಜೆಪಿ ಸಂಸದ ಪ್ರಹ್ಲಾದ್ ಜೋಶಿ ‘‘ಹಿಂದುತ್ವವಾದಿಗಳನ್ನು ಗುರಿ ಮಾಡಲಾಗುತ್ತಿದೆ, ನಕ್ಸಲ್ ಹಿನ್ನೆಲೆಯಲ್ಲಿಯೂ ತನಿಖೆ ನಡೆಸಿ’’ ಎಂದಿದ್ದಾರೆ. ಪರಶುರಾಮ್ ವಾಗ್ಮೋರೆಯ ತನಿಖೆ ವೇಳೆ ಶ್ರೀರಾಮ ಸೇನೆಯ ಪ್ರಮೋದ್ ಮುತಾಲಿಕ್, ಮಹಾರಾಷ್ಟ್ರದ ಸನಾತನ ಸಂಸ್ಥೆಯವರು ಸಹಜವಾಗಿ ದಿಗಿಲುಗೊಂಡಿದ್ದಾರೆ. ತಮಗೂ ಪರಶುರಾಮ್‌ಗೂ ಸಂಬಂಧವಿಲ್ಲ ಎಂದು ಹೇಳುತ್ತಲೇ ಬೆಂಗಳೂರಿಗೆ ಧಾವಿಸಿ ಬಂದು ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿ, ತಮ್ಮ ಹೆಗಲೆ ಮೇಲೆ ಕುಂಬಳಕಾಯಿ ಎಲ್ಲಿದೆ ನೋಡಿ ಎಂದು ಹೆಗಲು ಮುಟ್ಟಿ ತೋರಿಸುತ್ತಿದ್ದಾರೆ. ದಾಭೋಳ್ಕ್ಕರ್, ಪನ್ಸಾರೆ ಮತ್ತು ಕಲಬುರ್ಗಿ ಅವರ ಹತ್ಯೆಯ ಪ್ರಕರಣದಲ್ಲಿ ಎಸ್‌ಐಟಿಯಿಂದ ಗಂಭೀರ ತನಿಖೆ ನಡೆದಿದ್ದರೆ ಅನೇಕ ನಿಗೂಢ ಸಂಗತಿಗಳು ಬಯಲಾಗುತ್ತಿದ್ದವು. ಆದರೆ ಮಹಾರಾಷ್ಟ್ರದ ಫಡ್ನವೀಸ್ ನೇತೃತ್ವದ ಬಿಜೆಪಿ ಸರಕಾರ ದಾಭೋಳ್ಕರ್, ಪನ್ಸಾರೆ ಹತ್ಯೆ ಪ್ರಕರಣಗಳನ್ನು ಗಂಭೀರವಾಗಿ ಪರಿಗಣಿಸಲಿಲ್ಲ. ಯಾರೋ ಕೆಲವರನ್ನು ಬಂಧಿಸಿದಂತೆ ಮಾಡಿದರೂ ಅದರ ಹಿಂದಿನ ಜಾಲ ಬಯಲಾಗಲಿಲ್ಲ.

ಈಗ ಪರಶುರಾಮ್ ಬಂಧನದ ನಂತರ ಮಹಾರಾಷ್ಟ್ರ ಪೊಲೀಸರ ತಂಡ ಬೆಂಗಳೂರಿಗೆ ಬಂದಿದೆ. ಆದರೆ ಇಲ್ಲಿನ ವಿಚಾರಣೆ ಮುಗಿಯುವವರೆಗೆ ಪರಶುರಾಮ್‌ನನ್ನು ನಿಮ್ಮ ವಶಕ್ಕೆ ಕೊಡುವುದಿಲ್ಲ ಎಂದು ಕರ್ನಾಟಕದ ಎಸ್‌ಐಟಿ ಸ್ಪಷ್ಟವಾಗಿ ಹೇಳಿದೆ.

ಈ ನಡುವೆ ಎಸ್‌ಐಟಿ ಮೇಲೆ ಒತ್ತಡ ಹೇರಿ ತನಿಖೆಯ ದಾರಿ ತಪ್ಪಿಸಲು ಪ್ರಹ್ಲಾದ್‌ಜೋಶಿ -ಮುತಾಲಿಕ್‌ರ ನಂತಹವರು ಯತ್ನಿಸುತ್ತಿದ್ದಾರೆ. ತಮಗೆ ಮಾಹಿತಿ ಗೊತ್ತಿದ್ದರೆ ಎಸ್‌ಐಟಿಗೆ ತಿಳಿಸಲಿ. ಈ ಬಗ್ಗೆ ಮಾಧ್ಯಮದ ಮೂಲಕ ತನಿಖಾ ತಂಡದ ಮೇಲೆ ಪ್ರಭಾವ ಬೀರುತ್ತಿರುವುದು ಸರಿಯಲ್ಲ.

ಗೌರಿ ಲಂಕೇಶ್ ಹತ್ಯೆ ಪ್ರಕರಣದಲ್ಲಿ ಪರಶುರಾಮ್ ಬಂಧನದಿಂದ ಎಲ್ಲ ಬಯಲಾಯಿತೆಂದಲ್ಲ. ಈ ನಾಲ್ವರು ವಿಚಾರವಾದಿಗಳ ಹತ್ಯೆಯ ಹಿಂದೆ ಅತ್ಯಂತ ದೊಡ್ಡ ಜಾಲವೇ ಇದ್ದಂತೆ ಕಾಣುತ್ತಿದೆ. ಈ ಎಲ್ಲ ಹತ್ಯೆಗಳ ಮಾಸ್ಟರ್ ಮೈಂಡ್ ಒಂದೇ ಎಂಬ ಸಂದೇಹ ಬರುತ್ತದೆ. ಈ ಹತ್ಯೆಗಳಿಗಾಗಿ ಭಾರೀ ಮೊತ್ತದ ಹಣಕಾಸಿನ ಪೂರೈಕೆಯಾಗಿದೆಯೋ ಎಂದು ಸಂಶಯ ಬರುತ್ತದೆ. ದಾಭೋಳ್ಕರ್, ಪನ್ಸಾರೆ, ಕಲಬುರ್ಗಿ ಹತ್ಯೆ ನಡೆದಾಗ ತನಿಖೆಯ ದಿಕ್ಕು ತಪ್ಪಿಸುವ ಹುನ್ನಾರಗಳು ನಡೆದವು. ಪನ್ಸಾರೆ ಹತ್ಯೆಗೆ ಟೋಲ್ ಮಾಫಿಯಾ ಕೈವಾಡವಿದೆ ಎಂದು ಹತ್ಯೆ ನಡೆದ ದಿನವೇ ವ್ಯವಸ್ಥಿತ ಪ್ರಚಾರ ನೀಡಿ ನಿಜವಾದ ಹಂತಕರನ್ನು ರಕ್ಷಿಸುವ ಯತ್ನ ನಡೆಯಿತು. ಕಲಬುರ್ಗಿ ಅವರ ಹತ್ಯೆ ನಡೆದಾಗಲೂ ಅವರ ಹತ್ಯೆಗೆ ಕೌಟುಂಬಿಕ ಜಗಳ ಕಾರಣ ಎಂದು ವದಂತಿ ಹಬ್ಬಿಸಲಾಯಿತು.

ಮೂಢನಂಬಿಕೆ, ಕಂದಾಚಾರಗಳನ್ನು ವಿರೋಧಿಸುವ, ಚರಿತ್ರೆಯ ಸತ್ಯ ಸಂಗತಿಗಳ ಮೇಲೆ ತಮ್ಮ ಸಂಶೋಧನೆಗಳ ಮೂಲಕ ಬೆಳಕು ಚೆಲ್ಲುವ ಸಂಶೋಧಕರನ್ನು ಚಿಂತಕರನ್ನು ಗುರಿಯಾಗಿಸಿಕೊಂಡು ಯಾಕೆ ಹತ್ಯೆ ಮಾಡಲಾಗುತ್ತಿದೆ? ಅವರ ಹತ್ಯೆಯಿಂದ ಯಾರಿಗೆ ಲಾಭವಾಗುತ್ತದೆ?. ಸೈದ್ಧಾಂತಿಕ ಅಸಹನೆ ಇದಕ್ಕೆ ಕಾರಣವೇ ಎಂಬ ಬಗ್ಗೆ ತನಿಖೆ ನಡೆಯಬೇಕಾಗಿದೆ.

ಇಂದಿನ ಕೇಂದ್ರ ಸರಕಾರದಿಂದ ಈ ನಿಗೂಢ ಸಂಗತಿ ಬಯಲಿಗೆ ಬರುತ್ತದೆ ಎಂದು ನಿರೀಕ್ಷಿಸುವುದು ಮೂರ್ಖತನವಾಗುತ್ತದೆ. ದಲಿತ ಹೋರಾಟಗಾರರನ್ನೆಲ್ಲ ಮಾವೋವಾದಿಗಳೆಂದು ಕರೆದು ಜೈಲಿಗೆ ತಳ್ಳುತ್ತಿರುವ ನರೇಂದ್ರ ಮೋದಿ ಸರಕಾರದಿಂದ ನ್ಯಾಯದ ನಿರೀಕ್ಷೆಗೆ ಅರ್ಥವಿಲ್ಲ. ಭೀಮಾಕೋರೆಗಾಂವ್ ದಲಿತರ ಮೇಲೆ ಹಲ್ಲೆ ಮಾಡಿದವರನ್ನು ಬಿಟ್ಟು ಪ್ರಗತಿಪರ ಚಿಂತಕರನ್ನು ಮಾವೋವಾದಿಗಳೆಂದು ಜೈಲಿಗೆ ತಳ್ಳಲಾಗಿದೆ. ಈಗ ತೂತುಕುಡಿ ಪ್ರತಿಭಟನೆಗೆ ಮಾವೋವಾದದ ಬಣ್ಣ ಬಳಿಯಲಾಗುತ್ತಿದೆ.

ದೇಶದ ಪ್ರಜಾಪ್ರಭುತ್ವವನ್ನು ಬುಡಮೇಲು ಮಾಡಲು ಹೊರಟಿರುವ ಮನುವಾದಿ ಫ್ಯಾಶಿಸ್ಟ್ ಶಕ್ತಿಗಳಿಂದ ನಮ್ಮ ಸಂವಿಧಾನವೇ ಅಪಾಯದ ಅಂಚಿಗೆ ಸಿಲುಕಿದೆ. ಈ ಸಂವಿಧಾನವನ್ನು ಕಾಪಾಡಬೇಕಾದರೆ ತುರ್ತಾಗಿ ಈಗಿನ ಕೇಂದ್ರ ಸರಕಾರ ಬದಲಾಗಬೇಕು. ಎಲ್ಲ ಪ್ರತಿಪಕ್ಷಗಳು ಒಂದಾಗಿ ಮೋದಿ ಬಿಜೆಪಿಯನ್ನು ಪ್ರಭುತ್ವದಿಂದ ದೂರವಿಡಬೇಕು.

ಹಿಂದುತ್ವವಾದಿ ಭಯೋತ್ಪಾದಕ ಸಂಘಟನೆಗಳ ಬಗ್ಗೆ ನಿಗಾವಹಿಸಲು ಕೇಂದ್ರ ಮತ್ತು ರಾಜ್ಯಗಳ ಗುಪ್ತಚರ ಇಲಾಖೆಯಲ್ಲಿ ವಿಶೇಷ ವಿಭಾಗಗಳನ್ನು ಆರಂಭಿಸಬೇಕು. ಈಗಾಗಲೇ ಎಡಪಂಥೀಯರ ಮೇಲೆ ನಿಗಾವಹಿಸಲು ಗುಪ್ತಚರ ಇಲಾಖೆಯಲ್ಲಿ ಬ್ರಿಟಿಷ್ ಕಾಲದಿಂದ ಇಂಥಹ ವಿಶೇಷ ವಿಭಾಗಗಳಿವೆ.

ಎಲ್ಲಕ್ಕಿಂತ ಮುಖ್ಯವಾಗಿ ಪರಶುರಾಮ್‌ನಂತಹ ತರುಣರು ಕೋಮುವಾದಿ ಭಯೋತ್ಪಾದಕ ಸಂಘಟನೆಗಳ ಬಲೆಗೆ ಬೀಳದಂತೆ ಎಚ್ಚರವಹಿಸಬೆಕಾಗಿದೆ. ಇದೊಂದೇ ಈಗ ಉಳಿದಿರುವ ದಾರಿ.

Writer - ಸನತ್ ಕುಮಾರ್ ಬೆಳಗಲಿ

contributor

Editor - ಸನತ್ ಕುಮಾರ್ ಬೆಳಗಲಿ

contributor

Similar News