ಹೃದಯಾಘಾತದ ಅಪಾಯವನ್ನು ತಗ್ಗಿಸಲು ಈ ಆಹಾರವನ್ನು ಸೇವಿಸಿ

Update: 2018-06-25 10:57 GMT

ಹೃದಯಾಘಾತವು ಭಾರತದಲ್ಲಿ ಸಂಭವಿಸುವ ಸಾವುಗಳಿಗೆ ಪ್ರಮುಖ ಕಾರಣವಾಗಿದ್ದು, ಕನಿಷ್ಠ 17 ಲಕ್ಷ ಜನರು ಇದಕ್ಕೆ ಬಲಿಯಾಗುತ್ತಿದ್ದಾರೆ. ವಿಶ್ವದಲ್ಲಿ ಶೇ.23ರಷ್ಟು ಹೃದಯಾಘಾತದ ಸಾವುಗಳು ಭಾರತದಲ್ಲಿಯೇ ಸಂಭವಿಸುತ್ತವೆ.

ಹೃದಯಕ್ಕೆ ರಕ್ತದ ಪೂರೈಕೆ ಸ್ಥಗಿತಗೊಂಡಾಗ ಹೃದಯಾಘಾತ ಸಂಭವಿಸುತ್ತದೆ. ಹೃದಯಕ್ಕೆ ಸಾಕಷ್ಟು ರಕ್ತ ಪೂರೈಕೆಯಾಗದಿದ್ದರೆ ಅದು ಸರಿಯಾಗಿ ಕೆಲಸ ಮಾಡುವುದಿಲ್ಲ ಮತ್ತು ಗಂಭೀರ ಹಾನಿಗೊಳಗಾಗುತ್ತದೆ.

ಹೃದಯಾಘಾತವನ್ನು ಸೂಚಿಸುವ ಅಪಾಯದ ಸಂಕೇತಗಳು

ಎದೆನೋವು

ಇದು ಹೃದಯಾಘಾತದ ಸಾಮಾನ್ಯ ಎಚ್ಚರಿಕೆಯಾಗಿದೆ. ಎದೆಯ ಮಧ್ಯಭಾಗದಲ್ಲಿ ಒತ್ತಡ ಹೇರಿದ ಅನುಭವದೊಂದಿಗೆ ಈ ನೋವು ಆರಂಭಗೊಂಡು ಕ್ರಮೇಣ ತೋಳುಗಳಿಗೂ ಹರಡುತ್ತದೆ.

ಉಸಿರಾಟದ ತೊಂದರೆ: ಹೃದಯವು ಶರೀರದಲ್ಲಿ ಸಾಕಷ್ಟು ರಕ್ತವನ್ನು ಪಂಪ್ ಮಾಡದಿದ್ದರೆ ಉಸಿರಾಟದ ತೊಂದರೆ ಕಾಣಿಸಿಕೊಳ್ಳುತ್ತದೆ. ಅಂಗಾಂಶಗಳು ಶ್ವಾಸಕೋಶಗಳಿಂದ ಆಮ್ಲಜನಕವನ್ನು ಪಡೆಯುವಂತಾಗಲು ಹೃದಯವು ಶರೀರದ ಇತರ ಅಂಗಾಂಗಗಳಿಗೆ ಶುದ್ಧರಕ್ತವನ್ನು ಪೂರೈಸುತ್ತದೆ.

ಎಡತೋಳಿನಲ್ಲಿ ನೋವು

ಹೃದಯಾಘಾತದ ಸಂದರ್ಭದಲ್ಲಿ ಬಲತೋಳಿಗಿಂತ ಎಡತೋಳಿನಲ್ಲಿ ಹೆಚ್ಚಿನ ನೋವು ಕಾಣಿಸಿಕೊಳ್ಳುತ್ತದೆ. ಹೃದಯದ ಸ್ನಾಯುಗಳಿಗೆ ಆಮ್ಲಜನಕದ ಕೊರತೆಯುಂಟಾಗುವುದು ಈ ನೋವಿಗೆ ಕಾರಣವಾಗಿದೆ. ಇದು ನರಮಂಡಲದ ಮೂಲಕ ನೋವಿನ ಸಂಕೇತಗಳನ್ನು ರವಾನಿಸುವ ಎಚ್ಚರಿಕೆಯ ಕರೆಯಾಗಿದೆ.

ಅತಿಯಾಗಿ ಬೆವರುವಿಕೆ

ಆಗಾಗ್ಗೆ ಅತಿಯಾಗಿ ಬೆವರುವುದು ಹೃದಯಾಘಾತದ ಎಚ್ಚರಿಕೆಯಾಗಬಹುದು.ತಡೆಗಳು ನಿರ್ಮಾಣ ಗೊಂಡ ಪರಿಧಮನಿಗಳ ಮೂಲಕ ರಕ್ತದ ಪೂರೈಕೆ ಆರಂಭಗೊಂಡಾಗ ಹೃದಯವು ಹೆಚ್ಚು ಶ್ರಮಿಸಬೇಕಾಗುತ್ತದೆ ಮತ್ತು ಇದು ಶರೀರವು ಅತಿಯಾಗಿ ಬೆವರಲು ಕಾರಣವಾಗುತ್ತದೆ.

ಬಳಲಿಕೆ

ಇದು ಹೆಚ್ಚಾಗಿ ಗಮನಕ್ಕೆ ಬಾರದ ಎಚ್ಚರಿಕೆಯ ಸಂಕೇತವಾಗಿದೆ.ವ್ಯಕ್ತಿಯು ತೀರ ಆಯಾಸಗೊಂಡು ಸೋತೆ ಎಂದೆನಿಸಿದಾಗ ಇದು ಸಾಮಾನ್ಯ ದಣಿವು ಎಂದೇ ಭಾವಿಸುತ್ತಾನೆ. ಆದರೆ ಯಾವುದೇ ಕಾರಣವಿಲ್ಲದೆ ಪದೇಪದೇ ದಣಿವಾಗುತ್ತಿದ್ದರೆ ಏನೋ ತೊಂದರೆಯಿದೆ ಎಂದೇ ಅದರ ಅರ್ಥ.

ನಮ್ಮ ಆಹಾರಕ್ರಮದಲ್ಲಿ ಕೆಲವು ಬದಲಾವಣೆಗಳನ್ನು ಮಾಡಿಕೊಳ್ಳುವ ಮತ್ತು ನಿಯಮಿತ ವ್ಯಾಯಾಮದ ಮೂಲಕ ಹೃದಯಾಘಾತದ ಅಪಾಯವನ್ನು ತಗ್ಗಿಸಬಹುದಾಗಿದೆ.

ಮೀನಿನ ಸೇವನೆ ಹೃದಯಾಘಾತವನ್ನು ತಡೆಯುತ್ತದೆ

ವಿಜ್ಞಾನಿಗಳು ಹೇಳುವಂತೆ ಮೀನು ಹೆಚ್ಚಾಗಿ ಒಳಗೊಂಡಿರುವ ಆಹಾರ ಸೇವನೆಯಿಂದ ಹೃದಯಾಘಾತದ ಅಪಾಯವನ್ನು ತಗ್ಗಿಸಬಹುದು. ಹೃದಯಸ್ನೇಹಿ ಆಹಾರಗಳಲ್ಲಿ ಮೀನು ಅಗ್ರಸ್ಥಾನ ಪಡೆದಿದೆ.

ವಾರಕ್ಕೆ ಕೇವಲ ಎರಡು ಬಾರಿ ಮೀನು ತಿನ್ನುವುದರಿಂದ ಹೃದಯಾಘಾತ ಮತ್ತು ಹೃದಯರೋಗಳ ಅಪಾಯವನ್ನು ಗಣನೀಯವಾಗಿ ತಗ್ಗಿಸಬಹುದು ಎಂದು ಹಾರ್ವರ್ಡ್ ಮೆಡಿಕಲ್ ಸ್ಕೂಲ್ ನಡೆಸಿದ ಅಧ್ಯಯನವೊಂದು ತಿಳಿಸಿದೆ. ಮೀನಿನಲ್ಲಿ ಒಮೆಗಾ 3 ಫ್ಯಾಟಿ ಆ್ಯಸಿಡ್‌ಗಳು ಸಮೃದ್ಧವಾಗಿರುವುದು ಇದಕ್ಕೆ ಕಾರಣ. ಈ ಆ್ಯಸಿಡ್‌ಗಳು ರಕ್ತನಾಳಗಳಲ್ಲಿ ರಕ್ತ ಹೆಪ್ಪುಗಟ್ಟುವುದನ್ನು ತಡೆಯುತ್ತವೆ ಮತ್ತು ರಕ್ತದೊತ್ತಡವನ್ನು ಉತ್ತಮಗೊಳಿಸುತ್ತವೆ. ವಾರಕ್ಕೆ ಎರಡು ಬಾರಿ ಮೀನು ಸೇವಿಸುವುದರಿಂದ ಸರಿಸುಮಾರು ನಮ್ಮ ಶರೀರಕ್ಕೆ ಪ್ರತಿದಿನ ಅಗತ್ಯವಾಗಿರುವ ಸುಮಾರು 250 ಮಿ.ಗ್ರಾಂ ಒಮೆಗಾ 3 ಫ್ಯಾಟಿ ಆ್ಯಸಿಡ್‌ಗಳು ದೊರೆಯುತ್ತವೆ. ಅಲ್ಲದೆ ಮೀನನ್ನು ಹೆಚ್ಚಾಗಿ ಸೇವಿಸುವವರು ಕೆಂಪು ಅಥವಾ ಸಂಸ್ಕರಿತ ಮಾಂಸವನ್ನು ಸೇವಿಸುವ ಸಂದರ್ಭಗಳೂ ಕಡಿಮೆ ಎನ್ನುತ್ತಾರೆ ವಿಜ್ಞಾನಿಗಳು.

ಒಮೆಗಾ 3 ಫ್ಯಾಟಿ ಆ್ಯಸಿಡ್‌ಗಳ ಆಗರವಾಗಿರುವ ಕೊಡ್ಡಾಯಿ ಜಾತಿಗೆ ಸೇರಿದ ಸಾಲ್ಮನ್, ಬಂಗಡೆ, ಭೂತಾಯಿ ಮತ್ತು ಟುನಾಗಳಂತಹ ಮೀನುಗಳು ‘ಲೀನ್ ಪ್ರೋಟಿನ್’ನ ಅತ್ಯುತ್ತಮ ಮೂಲಗಳಾಗಿವೆ. ‘ಲೀನ್ ಪ್ರೋಟಿನ್’ನಲ್ಲಿ ಪ್ರೋಟಿನ್ ಅಧಿಕವಾಗಿದ್ದು, ಆರೋಗ್ಯಕರವಲ್ಲದ ಸ್ಯಾಚುರೇಟೆಡ್ ಫ್ಯಾಟ್ ಮತ್ತು ಕೊಲೆಸ್ಟ್ರಾಲ್ ಸೀಮಿತ ಪ್ರಮಾಣದಲ್ಲಿರುತ್ತವೆ. ಒಮೆಗಾ 3 ಫ್ಯಾಟಿ ಆ್ಯಸಿಡ್‌ಗಳು ರಕ್ತನಾಳಗಳಲ್ಲಿ ರಕ್ತ ಹೆಪ್ಪುಗಟ್ಟುವುದನ್ನು ತಡೆಯುವ ಜೊತೆಗೆ ಹೃದಯ ಬಡಿತವನ್ನು ಕ್ರಮಬದ್ಧಗೊಳಿಸುತ್ತವೆ.

ಒಮೆಗಾ 3 ಫ್ಯಾಟಿ ಆ್ಯಸಿಡ್‌ಗಳು ಒಂದು ವಿಧದ ಅಪರ್ಯಾಪ್ತ ಫ್ಯಾಟಿ ಆ್ಯಸಿಡ್‌ಗಳಾಗಿದ್ದು,ಶರೀರದಾದ್ಯಂತ ಉರಿಯೂತವನ್ನು ತಗ್ಗಿಸಬಲ್ಲವು. ಉರಿಯೂತವು ರಕ್ತನಾಳಗಳಿಗೆ ಹಾನಿಯನ್ನುಂಟು ಮಾಡುತ್ತದೆ ಮತ್ತು ಇದು ಮಿದುಳಿನ ಆಘಾತ ಹಾಗೂ ಹೃದ್ರೋಗಗಳಿಗೆ ಕಾರಣವಾಗುತ್ತದೆ.

ಮೀನು ಸೇವಿಸದವರಿಗೆ ಹೋಲಿಸಿದರೆ ಪ್ರತಿವಾರ ಸಾಕಷ್ಟು ಮೀನು ತಿನ್ನುವವರಲ್ಲಿ ಹೃದಯ ಕಾಯಿಲೆಗಳ ಅಪಾಯ ಕಡಿಮೆಯಿರುವ ಹೆಚ್ಚಿನ ಸಾಧ್ಯತೆಯಿರುತ್ತದೆ. ಮೀನನ್ನು ತಿನ್ನುವ ಜನರು ಕೆಂಪು ಮಾಂಸ ಮತ್ತು ಇತರ ಸಂಸ್ಕರಿತ ಮಾಂಸದ ಉತ್ಪನ್ನಗಳ ಬಗ್ಗೆ ಹೆಚ್ಚಿನ ಆಸಕ್ತಿ ತೋರಿಸುವುದಿಲ್ಲ ಎನ್ನುವುದು ಇದಕ್ಕೆ ಕಾರಣವಾಗಿರಬಹುದು ಎನ್ನುತ್ತಾರೆ ವಿಜ್ಞಾನಿಗಳು.

ಆದರೆ ಕ್ಯಾಟ್‌ಫಿಷ್ ಅಥವಾ ತೇಡೆಯಂತಹ ಕೆಲವು ಮೀನುಗಳು ಅನಾರೋಗ್ಯಕರ ಫ್ಯಾಟಿ ಆ್ಯಸಿಡ್‌ಗಳನ್ನು ಹೆಚ್ಚಿನ ಪ್ರಮಾಣದಲ್ಲಿ ಒಳಗೊಂಡಿರುವುದರಿಂದ ಅಂತಹ ಮೀನುಗಳ ಸೇವನೆಯಿಂದ ದೂರವಿರುವುದು ಒಳ್ಳೆಯದು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News