ಮಧುಮೇಹದ ನಿಯಂತ್ರಣಕ್ಕೆ ಇನ್ಸುಲಿನ್ ಚುಚ್ಚುಮದ್ದನ್ನು ಬಳಸುವುದು ಹೇಗೆ...?
ಮಧುಮೇಹಿಗಳು ಇನ್ಸುಲಿನ್ ಚುಚ್ಚುಮದ್ದನ್ನು ತೆಗೆದುಕೊಳ್ಳುತ್ತಿದ್ದರೆ ಅದನ್ನು ಬಳಸುವ ಸರಿಯಾದ ವಿಧಾನವನ್ನು ತಿಳಿದುಕೊಂಡಿರುವುದು ಮುಖ್ಯವಾಗಿದೆ.
ನೋವು ಮತ್ತು ಉರಿಯೂತಕ್ಕೊಳಗಾಗದೆ ಇನ್ಸುಲಿನ್ ಚುಚ್ಚುಮದ್ದನ್ನು ಬಳಸಲು ಮಧುಮೇಹ ತಜ್ಞರು ನೀಡಿರುವ ಕೆಲವು ಟಿಪ್ಸ್ ಇಲ್ಲಿವೆ, ಓದಿಕೊಳ್ಳಿ....
ಇನ್ಸುಲಿನ್ ಚುಚ್ಚುಮದ್ದನ್ನು ಫ್ರಿಝ್‌ನೊಳಗೆ ಇರಿಸಲಾಗುತ್ತದೆ ಮತ್ತು ಉಪಯೋಗಿಸುವ ಮುನ್ನ ಅದನ್ನು ಹೊರಗೆ ತೆಗೆಯಲಾಗುತ್ತದೆ. ಆದರೆ ಹೆಚ್ಚಿನ ಜನರು ಅದನ್ನು ಫ್ರಿಝ್‌ನಿಂದ ಹೊರಗೆ ತೆಗೆದ ತಕ್ಷಣ ಶರೀರಕ್ಕೆ ಚುಚ್ಚಿಕೊಳ್ಳುತ್ತಾರೆ. ಇದು ತಪ್ಪು. ಇನ್ಸುಲಿನ್ ಅನ್ನು ಫ್ರಿಝ್‌ನಿಂದ ಹೊರಗೆ ತೆಗೆದ ಬಳಿಕ ಉಪಯೋಗಿಸುವ ಮುನ್ನ ಕನಿಷ್ಠ 30 ನಿಮಿಷಗಳ ಕಾಲ ಕೋಣೆಯ ತಾಪಮಾನದಲ್ಲಿರಿಸಬೇಕು. ಹಾಗೆ ಮಾಡದೆ ತಕ್ಷಣವೇ ತೆಗೆದುಕೊಂಡರೆ ಅದು ಉರಿಯನ್ನುಂಟು ಮಾಡುತ್ತದೆ. ಇನ್ಸುಲಿನ್ ಪೆನ್‌ಗಳನ್ನು ನಿಮ್ಮ ಕಾರು ಅಥವಾ ಜೇಬಿನಂತಹ ಬೆಚ್ಚನೆಯ ಸ್ಥಳಗಳಲ್ಲಿ ಇರಿಸಬೇಡಿ. ಇನ್ಸುಲಿನ್ ಪೆನ್‌ಗಳನ್ನು ತೆರೆದ ಸ್ಥಿತಿಯಲ್ಲಿ ಫ್ರಿಝ್‌ನಲ್ಲಿರಿಸಬೇಡಿ.
ಹೆಚ್ಚಿನ ಮಧುಮೇಹ ರೋಗಿಗಳು ದಿನವೂ ಒಂದೇ ಜಾಗದಲ್ಲಿ ಇನ್ಸುಲಿನ್ ಚುಚ್ಚುಮದ್ದನ್ನು ತೆಗೆದುಕೊಳ್ಳುತ್ತಾರೆ. ಇದರಿಂದಾಗಿ ಆ ಜಾಗದಲ್ಲಿ ನಿರಂತರ ಒತ್ತಡದಿಂದಾಗಿ ನೋವು ಮತ್ತು ಕೀವು ಉಂಟಾಗಬಹುದು. ಕಾಲಕ್ರಮೇಣ ಅದು ಉರಿಯೂತದ ಅಪಾಯವನ್ನು ಹೆಚ್ಚಿಸುವ ಜೊತೆಗೆ ಆ ಜಾಗದಲ್ಲಿ ಕೊಬ್ಬನ್ನು ಗಟ್ಟಿಯಾಗಿಸುತ್ತದೆ. ಪದೇಪದೇ ಒಂದೇ ಜಾಗದಲ್ಲಿ ಚುಚ್ಚುಮದ್ದನ್ನು ತೆಗೆದುಕೊಳ್ಳುವುದರಿಂದ ಆ ಜಾಗದಲ್ಲಿ ಕುಳಿ ಅಥವಾ ಗಂಟು ಸೃಷ್ಟಿಯಾಗಿ ಇನ್ಸುಲಿನ್ ಚುಚ್ಚುವುದೂ ಕಷ್ಟವಾಗುತ್ತದೆ. ಹೀಗಾಗಿ ದಿನವೂ ಒಂದೇ ಜಾಗದಲ್ಲಿ ಚುಚ್ಚುಮದ್ದನ್ನು ತೆಗೆದುಕೊಳ್ಳಬಾರದು.
ಹೊಟ್ಟೆ, ತೋಳುಗಳ ಮೇಲ್ಭಾಗ, ತೊಡೆ ಮತ್ತು ಪ್ರಷ್ಠ ಇವು ಚುಚ್ಚುಮದ್ದನ್ನು ನೀಡಲು ಸಾಮಾನ್ಯವಾಗಿ ಬಳಕೆಯಾಗುವ ಜಾಗಗಳಾಗಿವೆ. ಹೊಕ್ಕಳು ಅಥವಾ ನಾಭಿಯ ಸುತ್ತ ಇನ್ಸುಲಿನ್ ಚುಚ್ಚುಮದ್ದನ್ನು ತೆಗೆದುಕೊಳ್ಳುವುದು ಅತ್ಯುತ್ತಮ ವಿಧಾನವಾಗಿದೆ. ಮೊದಲ ದಿನ ಹೊಕ್ಕಳಿನಿಂದ ನಾಲ್ಕು ಬೆರಳುಗಳ ಅಂತರದಲ್ಲಿ ಜಾಗವೊಂದನ್ನು ಆಯ್ಕೆ ಮಾಡಿಕೊಂಡು ಅಲ್ಲಿ ಇನ್ಸುಲಿನ್ ಅನ್ನು ಚುಚ್ಚಿಕೊಳ್ಳಬೇಕು. ಮರುದಿನ ಆ ಜಾಗದಿಂದ ಸ್ವಲ್ಪ ದೂರದಲ್ಲಿ ಚುಚ್ಚುಮದ್ದನ್ನು ತೆಗೆದುಕೊಳ್ಳಬೇಕು. ಹೀಗೆ ನಾಭಿಯ ಸುತ್ತ ವೃತ್ತಾಕಾರದಲ್ಲಿ ಚುಚ್ಚಿಕೊಳ್ಳುತ್ತ ಹೋಗಬೇಕು. ತಿಂಗಳ ಕೊನೆಗೆ ಹೀಗೆ ಚುಚ್ಚುಮದ್ದನ್ನು ತೆಗೆದುಕೊಂಡ ಬಿಂದುಗಳನ್ನು ಸೇರಿಸಿದರೆ ಅದು ವೃತ್ತಾಕಾರದಲ್ಲಿಬೇಕು. ಹೀಗೆ ಪ್ರತಿದಿನವೂ ಬೇರೆ ಬೇರೆ ಜಾಗದಲ್ಲಿ ಚುಚ್ಚುಮದ್ದನ್ನು ತೆಗೆದುಕೊಂಡರೆ 28-30 ದಿನಗಳ ನಂತರ ಮೊದಲ ಚುಚ್ಚುಮದ್ದನ್ನು ತೆಗೆದುಕೊಂಡ ಜಾಗವನ್ನು ತಲುಪುತ್ತೀರಿ. ಇದೇ ಕ್ರಮವನ್ನು ಮುಂದುವರಿಸಿ. ಅತ್ಯುತ್ತಮ ಪರಿಣಾಮಕ್ಕಾಗಿ ಪ್ರತಿ ಊಟದ ಸಮಯದಲ್ಲಿ ತೆಗೆದುಕೊಳ್ಳುವ ಇನ್ಸುಲಿನ್ ಅನ್ನು ಒಂದೇ ಜಾಗದಲ್ಲಿ ಚುಚ್ಚಿಕೊಳ್ಳಬೇಕು. ಉದಾಹರಣೆಗೆ ಬ್ರೇಕ್‌ಫಾಸ್ಟ್‌ಗಿಂತ ಮೊದಲಿನ ಚುಚ್ಚುಮದ್ದನ್ನು ಪ್ರತಿದಿನ ಹೊಟ್ಟೆಗೆ ಅಥವಾ ರಾತ್ರಿಯೂಟದ ಮೊದಲಿನ ಚುಚ್ಚುಮದ್ದನ್ನು ತೊಡೆಗೆ ತೆಗೆದುಕೊಳ್ಳಬೇಕು. ಹೀಗೆ ಮಾಡುವುದರಿಂದ ರಕ್ತದಲ್ಲಿನ ಗ್ಲುಕೋಸ್ ಮಟ್ಟ ಪರಿಣಾಮಕಾರಿ ಯಾಗಿ ನಿಯಂತ್ರಿಸಲ್ಪಡುತ್ತದೆ.
ಕೆಲವು ಸಿರಿಂಜ್‌ಗಳು 29 ಗೇಜ್‌ನಂತಹ ದೊಡ್ಡ,ದಪ್ಪ ಸೂಜಿಗಳನ್ನು ಹೊಂದಿರುತ್ತವೆ. ನೀವು 32 ಗೇಜ್‌ನಂತಹ ಕಡಿಮೆ ನೋವುಂಟಾಗುವ ಸಪೂರ ಸೂಜಿಯನ್ನು ಬಳಸಬಹುದು. ಈ ಸೂಜಿಗಳು ಸುಲಭದಲ್ಲಿ ಲಭ್ಯವಿವೆ. ಚುಚ್ಚುಮದ್ದನ್ನು ತೆಗೆದುಕೊಳ್ಳುವ ಮುನ್ನ ಆ ಜಾಗದಲ್ಲಿಯ ಮಾಂಸಖಂಡ ವಿಶ್ರಾಂತ ಸ್ಥಿತಿಯಲ್ಲಿದೆ ಎನ್ನುವುದನ್ನು ಖಚಿತ ಪಡಿಸಿಕೊಳ್ಳಿ.
ಹೆಚ್ಚಿನವರು ಚುಚ್ಚುಮದ್ದು ಎಂದ ಕೂಡಲೇ ಹೆದರಿಕೊಳ್ಳುತ್ತಾರೆ. ಅದರಲ್ಲಿಯೂ ಪ್ರತಿದಿನ ಇನ್ಸುಲಿನ್ ಚುಚ್ಚುಮದ್ದು ಎಂದರೆ ಸರ್ವಥಾ ಒಪ್ಪಿಕೊಳ್ಳುವ ಸ್ಥಿತಿಯಲ್ಲಿರುವುದಿಲ್ಲ. ಅಂತಹವರು ಸಿರಿಂಜ್‌ನ ಬದಲು ಇನ್ಸುಲಿನ್ ಪೆನ್‌ಗಳನ್ನು ಬಳಸಬಹುದು. ಇನ್ಸುಲಿನ್ ಪೆನ್ ಸರಳ ಸಾಧನ ಮಾತ್ರವಲ್ಲ,ಜೊತೆಯಲ್ಲಿಯೇ ಒಯ್ಯಲು ಕೂಡ ಸುಲಭವಾಗಿದೆ.