ಆ್ಯಸಿಡಿಟಿ ಬೆನ್ನುನೋವಿಗೆ ಕಾರಣವಾಗುತ್ತದೆಯೇ.....?

Update: 2018-07-01 11:19 GMT

ನಮ್ಮ ಶರೀರದಲ್ಲಿಯ ಗ್ಯಾಸ್ಟ್ರಿಕ್ ಗ್ರಂಥಿಗಳು ಅಥವಾ ಜಠರದ ಗ್ರಂಥಿಗಳು ಹೆಚ್ಚುವರಿ ಆಮ್ಲವನ್ನು ಉತ್ಪಾದಿಸಿದಾಗ ಕಂಡು ಬರುವ ಲಕ್ಷಣಗಳನ್ನು ಆ್ಯಸಿಡಿಟಿ ಅಥವಾ ಆಮ್ಲೀಯತೆ ಅಥವಾ ಆಮ್ಲ ಹಿಮ್ಮುಖ ಹರಿವು ಎಂದು ಕರೆಯಲಾಗುತ್ತದೆ. ಆಮ್ಲವು ಅನ್ನನಾಳದಲ್ಲಿ ಹರಿಯುವುದು ಎದೆಯುರಿಗೆ ಕಾರಣವಾಗುತ್ತದೆ ಮತ್ತು ಬಳಿಕ ಮಲಬದ್ಧತೆ ಮತ್ತು ಅಜೀರ್ಣ ಕಾಣಿಸಿಕೊಳ್ಳುತ್ತದೆ.

ನಾವು ಸೇವಿಸುವ ಆಹಾರವು ಅನ್ನನಾಳದ ಮೂಲಕ ಜಠರವನ್ನು ಸೇರುತ್ತದೆ. ಗ್ಯಾಸ್ಟ್ರಿಕ್ ಗ್ರಂಥಿಗಳು ಈ ಆಹಾರವನ್ನು ಜೀರ್ಣಿಸಲು ಅಗತ್ಯವಾದ ಆಮ್ಲವನ್ನು ಉತ್ಪಾದಿಸುತ್ತವೆ. ಜೀರ್ಣಕಾರ್ಯಕ್ಕೆ ಅಗತ್ಯವಿರುವುದಕ್ಕಿಂತ ಹೆಚ್ಚಿನ ಆಮ್ಲವು ಉತ್ಪತ್ತಿಯಾದಾಗ ಆಮ್ಲೀಯತೆ ಉಂಟಾಗುತ್ತದೆ. ಆಮ್ಲೀಯತೆಗೆ ಹಲವಾರು ಕಾರಣಗಳಿದ್ದು,ಅತಿಯಾದ ಮಸಾಲೆಭರಿತ ಆಹಾರದ ಸೇವನೆ ಪ್ರಮುಖ ಕಾರಣಗಳಲ್ಲೊಂದಾಗಿದೆ.

 ಆಹಾರವನ್ನು ಜೀರ್ಣಿಸಲು ಗ್ಯಾಸ್ಟ್ರಿಕ್ ಗ್ರಂಥಿಗಳು ಆಮ್ಲವನ್ನು ಉತ್ಪಾದಿಸುತ್ತವೆ. ಇದೇ ವೇಳೆ ಆಮ್ಲದ ಹಾನಿಕರ ಪರಿಣಾಮಗಳನ್ನು ತಟಸ್ಥಗೊಳಿಸಲು ನಮ್ಮ ಶರೀರವು ಕೆಲವು ನೈಸರ್ಗಿಕ ಬೈ-ಕಾರ್ಬೊನೇಟ್‌ಗಳನ್ನು ಉತ್ಪಾದಿಸುತ್ತದೆ ಮತ್ತು ಇವು ಲೋಳೆಯಿಂದ ಕೂಡಿದ ಒಳಪದರದಲ್ಲಿ ಸ್ರವಿಸಲ್ಪಡುತ್ತವೆ. ಹೆಚ್ಚು ಆಮ್ಲ ಉತ್ಪತ್ತಿಯಾದಾಗ ಮತ್ತು ಬೈ-ಕಾರ್ಬೊನೇಟ್‌ಗಳ ಉತ್ಪಾದನೆಗೆ ವ್ಯತ್ಯಯವುಂಟಾದಾಗ ಇದು ಲೋಳೆಯ ಒಳಪದರದ ಉರಿಯೂತಕ್ಕೆ ಕಾರಣವಾಗುತ್ತದೆ ಮತ್ತು ಆಮ್ಲೀಯತೆಯನ್ನುಂಟು ಮಾಡುತ್ತದೆ.

ಆಮ್ಲೀಯತೆಗೆ ಕಾರಣಗಳು

ಊಟವನ್ನು ಮಾಡದಿರುವುದು ಅಥವಾ ಅತಿಯಾದ ಊಟ ಅಥವಾ ಹೊತ್ತಲ್ಲದ ಹೊತ್ತಲ್ಲಿ ಊಟ ಮಾಡುವುದು,ಅಧಿಕ ಮಸಾಲೆಭರಿತ ಆಹಾರ ಸೇವನೆ,ಹೊಟ್ಟೆಹುಣ್ಣು,ಅಸ್ತಮಾ,ಮಧುಮೇಹ ಮತ್ತು ಜಠರದ ಹುಣ್ಣುಗಳಂತಹ ಈಗಾಗಲೇ ಇರುವ ಅನಾರೋಗ್ಯ,ಕೆಲವು ಔಷಧಿಗಳ ಅಡ್ಡಪರಿಣಾಮಗಳು,ಒತ್ತಡ ಮತ್ತು ನಿದ್ರಾಹೀನತೆ,ಮದ್ಯಪಾನ ಇವೂ ಆಮ್ಲೀಯತೆಯನ್ನುಂಟು ಮಾಡುವ ಕಾರಣಗಳಲ್ಲಿ ಸೇರಿವೆ.

ಆಮ್ಲೀಯತೆಯ ಅತ್ಯಂತ ಸಾಮಾನ್ಯ ಲಕ್ಷಣಗಳು

ಗಂಟಲು,ಹೊಟ್ಟೆ ಮತ್ತು ಎದೆಯಲ್ಲಿ ಉರಿಯ ಅನುಭವ, ಆಹಾರ ನುಂಗಲು ಕಷ್ಟ,ವಾಕರಿಕೆ,ಅಜೀರ್ಣ.ಮಲಬದ್ಧತೆ, ಬಾಯಿಯ ದುರ್ವಾಸನೆ ಮತ್ತು ದಂತ ಸಮಸ್ಯೆಗಳು,ಪ್ರಕ್ಷುಬ್ಧತೆ,ಬಾಯಿಯಲ್ಲಿ ಕಹಿರುಚಿ,ತೇಗು ಮತ್ತು ದೀರ್ಘಕಾಲೀನ ನ್ಯುಮೋನಿಯಾ ಇವು ಆಮ್ಲೀಯತೆಯ ಅತ್ಯಂತ ಸಾಮಾನ್ಯ ಲಕ್ಷಣಗಳಾಗಿವೆ.

ಆ್ಯಸಿಡಿಟಿಯಿಂದ ಬೆನ್ನುನೋವು ಉಂಟಾಗುತ್ತದೆಯೇ?

ಈ ಪ್ರಶ್ನೆಗೆ ಹೌದು ಎಂದೇ ಉತ್ತರಿಸಬೇಕಾಗುತ್ತದೆ. ಬೆನ್ನಿನ ಮೇಲ್ಭಾಗ,ಮಧ್ಯಭಾಗ ಮತ್ತು ಕೆಳಭಾಗದಲ್ಲಿ ನೋವು,ಎದೆಯಲ್ಲಿ ನೋವು ಇವೆಲ್ಲ ಆಮ್ಲೀಯತೆಯೊಂದಿಗೆ ಗುರುತಿಸಿಕೊಂಡಿವೆ.

ಆಹಾರವು ಜೀರ್ಣಗೊಳ್ಳಲು ನಮ್ಮ ಶರೀರದಲ್ಲಿ ಹೈಡ್ರೋಕ್ಲೋರಿಕ್ ಆಮ್ಲದ ಉತ್ಪಾದನೆಯಾಗುತ್ತದೆ. ಇದು ಉಂಟು ಮಾಡುವ ಹಾನಿಕಾರಕ ಪರಿಣಾಮಗಳಲ್ಲಿ ಶರೀರದಾದ್ಯಂತ ನರತಂತುಗಳಿಗೆ ಹಾನಿಯೂ ಸೇರಿದೆ. ಬೆನ್ನು ಮತ್ತು ಭುಜಗಳಲ್ಲಿ ನೋವು ಕಾಣಿಸಿಕೊಳ್ಳುತ್ತದೆ. ತೀವ್ರ ಆಮ್ಲೀಯತೆಯಿಂದ ಬಳಲುತ್ತಿರುವವರು ಹೈಡ್ರೋಕ್ಲೋರಿಕ್ ಆಮ್ಲ ಅನ್ನನಾಳವನ್ನು ಸೇರುವುದನ್ನು ತಪ್ಪಿಸಲು ಎತ್ತರಿಸಿದ ಭಂಗಿಯಲ್ಲಿ ಮಲಗುತ್ತಾರೆ. ಇದು ಆಮ್ಲದ ಹರಿವು ಮತ್ತು ಅದಕ್ಕೆ ಸಂಬಂಧಿಸಿದ ಲಕ್ಷಣಗಳನ್ನು ನಿವಾರಿಸಲು ಒಳ್ಳೆಯದಿರಬಹುದು,ಆದರೆ ಇದು ಬೆನ್ನುಮೂಳೆಯ ಆರೋಗ್ಯಕ್ಕೆ ಒಳ್ಳೆಯದಲ್ಲ. ಈ ಭಂಗಿಯಲ್ಲಿ ತುಂಬ ಹೊತ್ತು ಮಲಗುವುದರಿಂದ ಮತ್ತು ದಿನಗಟ್ಟಲೆ ಇದನ್ನು ಮುಂದುವರಿಸುವುದರಿಂದ ಮೃದು ಅಂಗಾಂಶಗಳಿಗೆ ಶಾಶ್ವತ ಹಾನಿಯಾಗುತ್ತದೆ ಮತ್ತು ತೀವ್ರ ಬೆನ್ನುನೋವಿಗೆ ಕಾರಣವಾಗುತ್ತದೆ. ನೋವಿನ ತೀವ್ರತೆ ವ್ಯಕ್ತಿಯಿಂದ ವ್ಯಕ್ತಿಗೆ ಭಿನ್ನವಾಗಿರುತ್ತದೆ. ಇದಕ್ಕೆ ತಕ್ಷಣ ಚಿಕಿತ್ಸೆ ಪಡೆದುಕೊಳ್ಳದಿದ್ದರೆ ಸ್ಥಿತಿ ಇನ್ನಷ್ಟು ಹದಗೆಡುತ್ತದೆ.

ಇಂತಹ ಬೆನ್ನುನೋವಿಗೆ ಚಿಕಿತ್ಸೆ ಹೇಗೆ?

ಆಮ್ಲೀಯತೆಯಿಂದ ಉಂಟಾಗುವ ಬೆನ್ನುನೋವಿನಲ್ಲಿ ಸ್ನಾಯು ಸೆಳೆತ ಅಥವಾ ಗಾಯದ ಪಾತ್ರವಿಲ್ಲ,ಅದಕ್ಕೆ ಜೀರ್ಣ ವ್ಯವಸ್ಥೆಯಲ್ಲಿ ಹೆಚ್ಚುವರಿ ಆಮ್ಲದಿಂದಾಗಿ ಉಂಟಾಗುವ ಉರಿಯೂತ ಕಾರಣ. ಹೀಗಾಗಿ ಆಮ್ಲೀಯತೆಯಿಂದ ಉಂಟಾಗುವ ಬೆನ್ನುನೋವಿನ ಶಮನಕ್ಕಾಗಿ ನೋವು ನಿವಾರಕ ಮಾತ್ರೆಗಳ ಸೇವನೆಯಿಂದ ಯಾವುದೇ ಪ್ರಯೋಜನವಾಗುವುದಿಲ್ಲ.

ನೋವನ್ನು ನಿವಾರಿಸಲು ಅದರ ಮೂಲ ಕಾರಣವೇನು ಎನ್ನುವುದನ್ನು ಕಂಡುಕೊಳ್ಳಬೇಕಾಗುತ್ತದೆ. ಈ ಪ್ರಕರಣದಲ್ಲಿ ಆಮ್ಲೀಯತೆ ಕಾರಣವಾಗಿದೆ. ಕ್ರಮ ತಪ್ಪಿದ ಆಹಾರ ಸೇವನೆ ಮತ್ತು ಕೆಲವು ಜೀವನಶೈಲಿಗಳು ಆಮ್ಲೀಯತೆಗೆ ಸಾಮಾನ್ಯ ಕಾರಣಗಳಾಗಿವೆ.

ಸೌಮ್ಯ ಸ್ವರೂಪದ ಆಮ್ಲೀಯತೆಗೆ ಔಷಧಿ ಅಂಗಡಿಗಳಲ್ಲಿ ಔಷಧಿಗಳು ದೊರೆಯುತ್ತವೆ. ಆದರೆ ವ್ಯಕ್ತಿ ಸುದೀರ್ಘ ಸಮಯದಿಂದ ಆಮ್ಲೀಯತೆಯಿಂದ ನರಳುತ್ತಿದ್ದರೆ ವೈದ್ಯಕೀಯ ತಪಾಸಣೆ ಅಗತ್ಯವಾಗುತ್ತದೆ. ಆದರೆ ಆಮ್ಲೀಯತೆಯ ಹಲವಾರು ಔಷಧಿಗಳು ಕೂಡ ಕೆಲವು ಅಡ್ಡ ಪರಿಣಾಮಗಳನ್ನುಂಟು ಮಾಡುತ್ತವೆ ಎನ್ನುವುದು ನಿಮಗೆ ನೆನಪಿರಲಿ.

ಮೂಲಿಕೆ ಔಷಧಿಗಳ ಬಳಕೆ ಆಮ್ಲೀಯತೆಯ ನಿವಾರಣೆಗೆ ಇನ್ನೊಂದು ಮಾರ್ಗವಾಗಿದೆ. ಇಂತಹ ಹಲವಾರು ಔಷಧಿಗಳಿದ್ದು,ಪರಿಣಾಮಕಾರಿಯಾಗಿವೆ. ಹೆಚ್ಚಿನ ಮೂಲಿಕೆ ಔಷಧಿಗಳು ಚಮೋಲಿ ಮತ್ತು ಲಿಂಬೆರಸದಿಂದ ಕೂಡಿರುತ್ತವೆ.

ಆಹಾರಕ್ಕೆ ಸಂಬಂಧಿಸಿದಂತೆ ಹೇಳುವುದಾದರೆ ಪ್ರೋಟಿನ್ ಅಧಿಕವಾಗಿರುವ ,ಕಡಿಮೆ ಕೊಬ್ಬಿನಿಂದ ಕೂಡಿದ ಆಹಾರವು ಮುಖ್ಯವಾಗುತ್ತದೆ. ಅತಿಯಾದ ಭೋಜನವೂ ಒಳ್ಳೆಯದಲ್ಲ.

ರಾತ್ರಿ ಮಲಗುವಾಗಿ ಸಡಿಲವಾದ ಬಟ್ಟೆಗಳನ್ನು ಧರಿಸಿ ಕಾಲುಗಳನ್ನು ಎತ್ತರಿಸುವುದರಿಂದ ಆಮ್ಲೀಯತೆಯು ಕಡಿಮೆಯಾಗುತ್ತದೆ. ಸಿಟ್ರಸ್ ಹಣ್ಣುಗಳು,ಮದ್ಯ,ಕಾಫಿ,ಈರುಳ್ಳ್ಳಿ,ಇಂಗಾಲೀಕೃತ ಪಾನೀಯ ಇತ್ಯಾದಿಗಳು ಆಮ್ಲೀಯತೆಯನ್ನುಂಟು ಮಾಡುತ್ತವೆ. ಇವು ಬೇರೆ ಬೇರೆ ವ್ಯಕ್ತಿಗಳಿಗೆ ಬೇರೆ ಬೇರೆಯಾಗಿರಬಹುದು. ಹೀಗಾಗಿ ಯಾವುದು ನಿಮಗೆ ಆಮ್ಲೀಯತೆಯನ್ನುಂಟು ಮಾಡುತ್ತದೆ ಎನ್ನುವುದನ್ನು ತಿಳಿದುಕೊಳ್ಳಿ ಮತ್ತು ಅದರಿಂದ ದೂರವಿರಿ.

ಆಮ್ಲೀಯತೆ ಕಡೆಗಣಿಸಬಹುದಾದ ಸಮಸ್ಯೆಯಲ್ಲ,ಅದು ಮಾರಣಾಂತಿಕವೂ ಆಗಬಹುದು. ಆಮ್ಲೀಯತೆಯಿಂದ ಉಂಟಾಗುವ ಬೆನ್ನುನೋವು ನಿಮ್ಮ ಬೆನ್ನುಮೂಳೆಗೆ ಶಾಶ್ವತ ಹಾನಿಯನ್ನು ಮಾಡಬಹುದು. ಎಲ್ಲ ಮನೆಮದ್ದುಗಳ ಪ್ರಯೋಗದ ಬಳಿಕವೂ ಆಮ್ಲೀಯತೆ ತೀವ್ರವಾಗಿಯೇ ಉಳಿದುಕೊಂಡಿದ್ದರೆ ವೈದ್ಯರನ್ನು ಸಂಪರ್ಕಿಸಿ ಸೂಕ್ತ ಪರಿಹಾರವನ್ನು ಕಂಡುಕೊಳ್ಳುವುದು ಬುದ್ಧಿವಂತಿಕೆಯಾಗುತ್ತದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News