ಅಘೋಷಿತ ತುರ್ತು ಪರಿಸ್ಥಿತಿಯ ಅತಿರೇಕಗಳು

Update: 2018-07-02 06:22 GMT

ಭೀಮಾ ಕೋರೆಗಾಂವ್‌ನಲ್ಲಿ ಶಾಂತಿಯುತವಾಗಿ ಹುತಾತ್ಮರ ದಿನಾಚರಣೆಯಲ್ಲಿ ಭಾಗವಹಿಸಿದ್ದ ಅಮಾಯಕ ದಲಿತರ ಮೇಲೆ ಹಲ್ಲೆ, ಗೂಂಡಾಗಿರಿ ಮಾಡಿದವರು ಹಿಂದುತ್ವವಾದಿ ಗೂಂಡಾಗಳು. ಈ ಗುಂಪು ಹಿಂಸಾಚಾರ ಆರೋಪಕ್ಕೊಳಗಾಗಿರುವ ಸಂಭಾಜಿ ಭೀಡೆ ಮತ್ತು ಮಿಲಿಂದ ಏಕ್‌ಬೋತೆ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕಾದ ಮಹಾರಾಷ್ಟ್ರದ ಬಿಜೆಪಿ ಸರಕಾರ ಅವರನ್ನು ರಕ್ಷಿಸಲು ಮಾವೋವಾದಿಗಳ ಸಂಚಿನ ಕತೆ ಹೆಣೆದಿದೆ.


ಮುಂಬರುವ ಲೋಕಸಭಾ ಚುನಾವಣೆಯ ಸವಾಲನ್ನು ಎದುರಿಸಲು ಸಂಘಪರಿವಾರ ಈಗಲೇ ಸಿದ್ಧತೆ ಆರಂಭಿಸಿದೆ. ಕರ್ನಾಟಕ ವಿಧಾನಸಭಾ ಚುನಾವಣೆಯ ಬಳಿಕ ರಾಷ್ಟ್ರಮಟ್ಟದಲ್ಲಿ ಪ್ರತಿಪಕ್ಷಗಳಲ್ಲಿ ಒಡಮೂಡುತ್ತಿರುವ ಒಗ್ಗಟ್ಟು ಮತ್ತು ದೇಶದ ಬಹುತೇಕ ಕಡೆ ಕೇಂದ್ರದ ಮೋದಿ ಸರಕಾರದ ವಿರುದ್ಧ ಸಿಡಿದೇಳುತ್ತಿರುವ ದಲಿತ ಆದಿವಾಸಿ ಸಮುದಾಯಗಳ ಆಕ್ರೋಶ ಕಂಡು ದಿಗಿಲುಗೊಂಡಿರುವ ಬಿಜೆಪಿ ಮತ್ತು ಸಂಘದ ನಾಯಕರು ಪ್ರತಿ ಕಾರ್ಯತಂತ್ರ ರೂಪಿಸಲು ಈಗ ಮುಂದಾಗಿದ್ದಾರೆ.

 
 ರಾಜಕಾರಣಕ್ಕೂ ತನಗೂ ಸಂಬಂಧವಿಲ್ಲ ಎಂದು ಹೇಳುತ್ತಲೇ ನಿತ್ಯದ ರಾಜಕಾರಣದಲ್ಲಿ ಕೈಯಾಡಿಸುತ್ತ ಬಂದಿರುವ ಆರೆಸ್ಸೆಸ್ ತನ್ನ ರಾಜಕೀಯ ವೇದಿಕೆಯಾದ ಬಿಜೆಪಿಯನ್ನು ಮತ್ತೆ ಅಧಿಕಾರಕ್ಕೆ ತರಲು ಕಾರ್ಯಾಚರಣೆಗೆ ಇಳಿದಿದೆ. ಈ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಜೂನ್ 14ರಂದು ತಮ್ಮ ಅಧಿಕೃತ ನಿವಾಸದಲ್ಲಿ ಆರೆಸ್ಸೆಸ್‌ನ ಉನ್ನತ ನಾಯಕರೊಂದಿಗೆ ಭೋಜನ ಕೂಟದ ಸಭೆ ನಡೆಸಿದರು. ಈ ಸಭೆಯಲ್ಲಿ ಸಂಘದ ಮತ್ತು ಬಿಜೆಪಿಯ ಹಿರಿಯ ನಾಯಕರು ಭಾಗವಹಿಸಿದ್ದರು. ಕಳೆದ ಜನವರಿ 1ರಂದು ಪುಣೆಯ ಭೀಮಾ ಕೋರೆಗಾಂವ್‌ನಲ್ಲಿ ನಡೆದ ದಲಿತರ ಪ್ರತಿಭಟನೆಗೆ ದೇಶದ ಎಲ್ಲೆಡೆ ವ್ಯಕ್ತವಾದ ವ್ಯಾಪಕ ಜನಬೆಂಬಲ, ಉತ್ತರ ಪ್ರದೇಶ, ಹರ್ಯಾಣ ಮತ್ತು ಗುಜರಾತ್‌ನಲ್ಲಿ ನಡೆಯುತ್ತಿರುವ ದಲಿತರ ಪ್ರತಿಭಟನೆಗಳು, ಛತ್ತೀಸ್‌ಗಡ ಮತ್ತು ಜಾರ್ಖಂಡ್‌ಗಳಲ್ಲಿ ಸಿಡಿದೆದ್ದ ಆದಿವಾಸಿಗಳು - ಇವೆಲ್ಲ ಸಾಮಾಜಿಕ ಪ್ರಕ್ಷೋಭೆಗಳಿಂದ ಮುಂದಿನ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಗೆ ತೊಂದರೆಯಾಗಲಿದೆ ಎಂದು ಪ್ರಧಾನಿ ಹೇಳಿದರು. ದಲಿತರ ಈ ಪ್ರತಿಭಟನೆಗಳನ್ನೆಲ್ಲ ಮಾವೋವಾದಿಗಳ ಕೈವಾಡ ಎಂದು ಹೆಸರಿಸಿ ಅವುಗಳಿಗೆ ರಾಷ್ಟ್ರದ್ರೋಹದ ಬಣ್ಣ ಹಚ್ಚಿ ಹತ್ತಿಕ್ಕುವ ಬಗ್ಗೆ ಈ ರಹಸ್ಯ ಸಭೆಯಲ್ಲಿ ಚರ್ಚಿಸಲಾಯಿತೆಂದು ಹೇಳಲಾಗಿದೆ. ಅದೇ ರೀತಿ ಮುಸ್ಲಿಂ ಅಲ್ಪಸಂಖ್ಯಾತರ ಧ್ವನಿಯನ್ನು ಜಿಹಾದಿ ಕೈವಾಡ ಎಂದು, ಕ್ರೈಸ್ತರ ಗೊಣಗಾಟವನ್ನು ಮತಾಂತರಿಗಳ ಹುನ್ನಾರವೆಂದು ಬ್ರಾಂಡ್ ಮಾಡಿ ಪ್ರಚಾರ ಮಾಡಲು ಸಂಫಪರಿವಾರ ಕಾರ್ಯ ತಂತ್ರ ರೂಪಿಸಿದೆ. ಈ ದೇಶದ ದಲಿತರು, ಆದಿವಾಸಿಗಳು, ಅಲ್ಪಸಂಖ್ಯಾತರು, ಬಡವರ ನ್ಯಾಯ ಸಮ್ಮತ ಚಳವಳಿಗಳನ್ನು ಹತ್ತಿಕ್ಕಲು ನಮ್ಮ ಪ್ರಭುತ್ವ ಎರಡು ಶಬ್ದಗಳನ್ನು ಪದೇ ಪದೇ ಬಳಸುತ್ತಿದೆ. ಆದಿವಾಸಿಗಳು ದಲಿತರು ಬಂಡೆದ್ದರೆ, ಅವರನ್ನು ನಕ್ಸಲೀಯರು ಎಂದು ಕರೆದು ಒಳಗೆ ದಬ್ಬುತ್ತದೆ. ಮುಸಲ್ಮಾನರು ಉಸಿರು ಬಿಟ್ಟರೆ ಜಿಹಾದಿಗಳು ಎಂದು ಕರೆದು ರಾಷ್ಟ್ರದ್ರೋಹಿಗಳ ಹಣೆಪಟ್ಟಿ ಅಂಟಿಸುತ್ತದೆ. ಕ್ರೈಸ್ತರಿಗೆ ಮತಾಂತರಿಗಳು ಎಂಬ ಹಣ್ಣೆಪಟ್ಟಿ ಶಾಶ್ವತವಾಗಿದೆ. ಭೀಮಾ ಕೋರೆಗಾಂವ್‌ನಲ್ಲಿ ಶಾಂತಿಯುತವಾಗಿ ಹುತಾತ್ಮರ ದಿನಾಚರಣೆಯಲ್ಲಿ ಭಾಗವಹಿಸಿದ್ದ ಅಮಾಯಕ ದಲಿತರ ಮೇಲೆ ಹಲ್ಲೆ, ಗೂಂಡಾಗಿರಿ ಮಾಡಿದವರು ಹಿಂದುತ್ವವಾದಿ ಗೂಂಡಾಗಳು. ಈ ಗುಂಪು ಹಿಂಸಾಚಾರ ಆರೋಪಕ್ಕೊಳಗಾಗಿರುವ ಸಂಭಾಜಿ ಭೀಡೆ ಮತ್ತು ಮಿಲಿಂದ ಏಕ್‌ಬೋತೆ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕಾದ ಮಹಾರಾಷ್ಟ್ರದ ಬಿಜೆಪಿ ಸರಕಾರ ಅವರನ್ನು ರಕ್ಷಿಸಲು ಮಾವೋವಾದಿಗಳ ಸಂಚಿನ ಕತೆ ಹೆಣೆದಿದೆ. ಈ ಹಿಂದೆ 2006ರಲ್ಲಿ ಮಹಾರಾಷ್ಟ್ರದ ಖೈರ್ಲಾಂಜಿಯಲ್ಲಿ ದಲಿತ ತಾಯಿ ಮಗಳ ಮೇಲಿನ ಅತ್ಯಾಚಾರ ಹಾಗೂ ಕಗ್ಗೊಲೆಗಳ ವಿರುದ್ಧ ರಾಜ್ಯದ ದಲಿತ ಸಮುದಾಯ ಸಿಡಿದೆದ್ದಾಗ, ನ್ಯಾಯಕ್ಕಾಗಿ ಆಗ್ರಹಿಸಿದಾಗ ಇದನ್ನು ಮಾವೋವಾದಿಗಳ ಒಳ ಸಂಚೆಂದು ಬಣ್ಣಿಸಿ ಹತ್ತಿಕ್ಕಲು ಯತ್ನಿಸಲಾಯಿತು. ಈ ಭೀಮಾ ಕೊರೇಗಾಂವ್‌ನಲ್ಲಿ ಅದು ಪುನರಾವರ್ತನೆಯಾಗಿದೆ. ಭೀಮಾ ಕೋರೆಗಾಂವ್ ಪ್ರಕರಣದಲ್ಲಿ ಬಂಧಿಸಲ್ಪಟ್ಟವರಲ್ಲಿ ನಾಗಪುರದ ವಕೀಲರಾದ ಸುರೇಂದ್ರ ಗಾಡ್ಲಿಂಗ್, ನಾಗಪುರ ವಿಶ್ವವಿದ್ಯಾನಿಲಯದ ಇಂಗ್ಲಿಷ್ ವಿಭಾಗದ ಮುಖ್ಯಸ್ಥ ಶೋಮಾ ಸೇನ್, ಮರಾಠಿ ಭಾಷೆಯ ‘ವಿದ್ರೋಹಿ’ ಪತ್ರಿಕೆಯ ಸಂಪಾದಕ ಸುಧೀರ್ ಡವಳೆ, ಮಾನವಹಕ್ಕು ಹೋರಾಟಗಾರರಾದ ರೋನಾ ವಿಲ್ಸನ್ ಹಾಗೂ ಹಿಂದೆ ಪ್ರಧಾನ ಮಂತ್ರಿಗಳ ಗ್ರಾಮೀಣಾಭಿವೃದ್ಧಿ ಫೆಲೋ ಆಗಿದ್ದ ಮಹೇಶ್ ರಾವುತ್ ಸೇರಿದ್ದಾರೆ. ಭೀಮಾ ಕೋರೆಗಾಂವ್ ಹಿಂಸಾಚಾರದ ನೆಪದಲ್ಲಿ ಹೀಗೆ ಬಂಧಿಸಲ್ಪಟ್ಟ ಇವರ ಮೇಲೆ ಈಗ ಪ್ರಧಾನಿ ನರೇಂದ್ರ ಮೋದಿ ಅವರ ಹತ್ಯೆಯ ಸಂಚಿನ ಆರೋಪವನ್ನು ಹೊರಿಸಲಾಗಿದೆ. ಇದಕ್ಕಾಗಿ ಮಾವೋವಾದಿ ನಾಯಕನೊಬ್ಬ ಬರೆದನೆನ್ನಲಾದ ನಕಲಿ ಪತ್ರವೊಂದನ್ನು ಸೃಷ್ಟಿ ಮಾಡಿ ಇವರ ತಲೆಗೆ ಕಟ್ಟಲಾಗಿದೆ. ಪ್ರತಿರೋಧದ ಧ್ವನಿ ಎಲ್ಲಿಯೂ ಬರಬಾರದೆಂಬ ಹುನ್ನಾರವಿದು.
ಮೂಢನಂಬಿಕೆ ವಿರೋಧಿ ಹೋರಾಟಗಾರ ನರೇಂದ್ರ ದಾಭೋಲ್ಕರ್ ಮತ್ತು ಕೊಲ್ಲಾಪುರದ ವಿಚಾರವಾದಿ ಮತ್ತು ಕಮ್ಯುನಿಸ್ಟ್ ನಾಯಕನಾಗಿದ್ದ ಗೋವಿಂದ ಪನ್ಸಾರೆ ಅವರ ಹತ್ಯೆಯ ಆರೋಪಿಗಳನ್ನು ಬಂಧಿಸುವಲ್ಲಿ ವಿಫಲಗೊಂಡು ಮುಂಬೈ ಹೈಕೋರ್ಟ್‌ನಿಂದ ಉಗಿಸಿಕೊಂಡ ಮಹಾರಾಷ್ಟ್ರದ ಬಿಜೆಪಿ ಸರಕಾರ ಮತ್ತು ಅಲ್ಲಿನ ಪೊಲೀಸರು ದಲಿತ ಹೋರಾಟಗಾರರನ್ನು ಮಾವೋವಾದಿಗಳನ್ನಾಗಿ ಮಾಡುವಲ್ಲಿ ಪ್ರಾವೀಣ್ಯ ಪಡೆದಿದ್ದಾರೆೆ.
ದಾಭೋಲ್ಕರ್ ಮತ್ತು ಪನ್ಸಾರೆ ಅವರ ಹಂತಕರನ್ನು ಮತ್ತು ಹತ್ಯೆಯ ಸಂಚಿನ ಬಾಲವನ್ನು ಭೇದಿಸಲು ಸಿಬಿಐನಿಂದ ಮತ್ತು ಮಹಾರಾಷ್ಟ್ರ ಸರಕಾರ ರಚಿಸಿದ ಎಸ್‌ಐಟಿಯಿಂದ ಸಾಧ್ಯವಾಗಲಿಲ್ಲ. ಬಹುಶಃ ತನಿಖಾ ಕಾರ್ಯದ ಮೇಲೆ ಬಿಜೆಪಿ ಸರಕಾರ ಪ್ರಭಾವ ಬೀರಿರಬಹುದು. ಆದರೆ ಕರ್ನಾಟಕ ಎಸ್‌ಐಟಿ ಗೌರಿ ಲಂಕೇಶ್ ಹತ್ಯೆಯ ಸಂಚಿನ ಜಾಲವನ್ನು ಭೇದಿಸಿದೆ.
ಕರ್ನಾಟಕ ಎಸ್‌ಐಟಿಯ ತನಿಖಾ ಕಾರ್ಯ ಈಗ ಮುಗಿಯುತ್ತ ಬಂದಿದ್ದು, ಪ್ರಗತಿಪರ ವಿಚಾರವಾದಿಗಳನ್ನು, ಎಡ ಪಂಥೀಯರನ್ನು ಹತ್ಯೆ ಮಾಡಲೆಂದೇ ಸಂಘಟನೆಯಿಂದ ಬೆಳಗಾವಿ ಮತ್ತು ಧಾರವಾಡ ಜಿಲ್ಲೆಯ ಅರಣ್ಯ ಪ್ರದೇಶಗಳಲ್ಲಿ 60 ಜನರಿಗೆ ಶಸ್ತ್ರಾಸ್ತ್ರ ತರಬೇತಿ ನೀಡಿದ ಸಂಗತಿ ಬಯಲಾಗಿದೆ. ಈ ಸಂಬಂಧ ಬಂಧಿಸಲ್ಪಟ್ಟಿರುವ ಪುಣೆಯ ಅಮೋಲ್ ಕಾಳೆಯ ಡೈರಿಯಲ್ಲಿ ದಾಭೋಲ್ಕರ್, ಪನ್ಸಾರೆ ಅವರ ಹೆಸರನ್ನು ಬರೆಯಲಾಗಿತ್ತೆಂಬ ಸಂಗತಿ ಬಯಲಾಗಿದೆ. ಕಲಬುರ್ಗಿ ಹತ್ಯೆಯಲ್ಲಿ ಈ ತಂಡದ ಕೈವಾಡವಿರುವ ಸಂದೇಹ ದಟ್ಟವಾಗಿದೆ. ಈ ಸಂಚಿನ ಜಾಲವನ್ನು ಭೇದಿಸಿರುವ ಕರ್ನಾಟಕದ ಎಸ್‌ಐಟಿಗೆ ಎಷ್ಟು ಅಭಿನಂದಿಸಿದರೂ ಸಾಲದು.

ಭೀಮಾ ಕೋರೆಗಾಂವ್ ಹಿಂಸಾಚಾರ ಪ್ರಕರಣದಲ್ಲಿ ಮಾಡಿದಂತೆ ತಮಿಳುನಾಡಿನ ತೂತುಕುಡಿಯಲ್ಲಿ ಪರಿಸರ ಮಾಲಿನ್ಯಕ್ಕೆ ಕಾರಣವಾದ ಕಾರ್ಖಾನೆಯನ್ನು ಮುಚ್ಚಲು ಜನತೆ ಹೋರಾಟಕ್ಕೆ ಇಳಿದಾಗ, ಸರಕಾರ ಗೋಲಿಬಾರ್ ಮಾಡಿ 19 ಮಂದಿಯನ್ನು ಕೊಂದು ಹಾಕಿತು. ನೂರಾರು ಜನರು ಪೊಲೀಸ್ ಕಾರ್ಯಾಚರಣೆಯಲ್ಲಿ ಗಾಯಗೊಂಡರು. ಅನೇಕರನ್ನು ಜೈಲಿಗೆ ತಳ್ಳಿತು. ಇಷ್ಟು ಜನರನ್ನು ಕೊಂದಿದ್ದು ಸಾಲದೆಂಬಂತೆ ಈ ಹೋರಾಟದ ನಾಯಕತ್ವ ವಹಿಸಿದವರನ್ನು ಮಾವೋವಾದಿಗಳೆಂದು ಜೈಲಿಗೆ ತಳ್ಳಲಾಗಿದೆ. ಮಾಲಿನ್ಯಕ್ಕೆ ಕಾರಣವಾದ ಈ ಕಾರ್ಖಾನೆಯ ಮೇಲೆ ಪ್ರಭುತ್ವಕ್ಕೆ ಕೋಪವಿಲ್ಲ. ಯಾಕೆಂದರೆ ಇದರ ಮಾಲಕ ವೇದಾಂತ ಕಂಪೆನಿಯ ಅಗರವಾಲಾ ಎಂಬಾತ ಪ್ರಧಾನಿ ಮೋದಿ ಅವರ ಖಾಸಾ ದೋಸ್ತ್.

ವೇದಾಂತ ಕಂಪೆನಿಯ ಈ ಸ್ಟರ್ಲೈಟ್ ಕಾರ್ಖಾನೆಯ ಚರಿತ್ರೆ ಎಷ್ಟು ಕರಾಳವಾಗಿದೆ ಎಂಬುದನ್ನು ನಾಗೇಶ್ ಹೆಗಡೆ ಅವರು, ಈಗಾಗಲೇ ವಿವರವಾಗಿ ಬರೆದಿದ್ದಾರೆ. ಇದು ಒಂದು ವೇದಾಂತದ ಕತೆಯಲ್ಲ ಈ ದೇಶದ ತುಂಬೆಲ್ಲ ನಮ್ಮ ಸಂಪತ್ತನ್ನು ಲೂಟಿ ಮಾಡಲು ಇಂಥ ನೂರಾರು ವೇದಾಂತಗಳು ಬಾಯಿ ತೆರೆದು ನಿಂತಿವೆ. ಬಿಜೆಪಿ ಸರಕಾರಕ್ಕೆ ಕಾರ್ಮಿಕ ವರ್ಗದ ಹೆದರಿಕೆ ಇಲ್ಲ. ಅದು ಹೆದರುತ್ತಿರುವುದು ದಲಿತರು ಮತ್ತು ಆದಿವಾಸಿಗಳಿಗೆ. ಇವರನ್ನು ಬಿಟ್ಟರೆ ವಿಚಾರವಾದಿ ಚಿಂತಕರನ್ನು ಕಂಡರೆ ಅದು ಗಡಗಡ ನಡುಗುತ್ತಿದೆ. ಅಂತಲೆ ಅರುಂಧತಿ ರಾಯ್, ರವೀಶ್ ಕುಮಾರ್, ರಾಜ್‌ದೀಪ್ ಸರ್ದೇಸಾಯಿ, ತೀಸ್ತಾ ಸೆಟಲ್ವಾಡ್, ಬರ್ಖಾ ದತ್, ಅಮರ್ತ್ಯ ಸೇನ್ ಅಂಥವರನ್ನು ಕಂಡು ಅದು ದಿಗಿಲುಗೊಂಡಿದೆ. ಅವರನ್ನು ‘‘ ಅರ್ಬನ್ ನಕ್ಸಲೈಟ್’’ ಎಂದು ಕರೆದು ಹತ್ತಿಕ್ಕಿಲು ಯತ್ನಿಸುತ್ತಿದೆ.
ಅಂತಲೇ ಮೋದಿ ಸರಕಾರದ ಈ ದಮನ ಕಾರ್ಯವನ್ನು ಅಘೋಷಿತ ತುರ್ತು ಪರಿಸ್ಥಿತಿ ಎಂದು ಮಾಜಿ ಹಣಕಾಸು ಸಚಿವ ಹಾಗೂ ಹಿರಿಯ ಬಿಜೆಪಿ ನಾಯಕ ಯಶವಂತ್ ಸಿನ್ಹಾ ಕರೆದರು. -ಹಿಂದೆ ಇಂದಿರಾ ಗಾಂಧಿ ತುರ್ತು ಪರಿಸ್ಥಿತಿ ಹೇರಿದಾಗ ಅದಕ್ಕೆ ದೇಶದಲ್ಲಿ ಪ್ರತಿರೋಧ ವ್ಯಕ್ತವಾಗಿತ್ತು. ಆದರೆ ಈಗ ಪ್ರತಿರೋಧ ಮಾಡಬೇಕಾದ ಯುವಕರ ಒಂದು ವಿಭಾಗ ಮೋದಿ ಭಜನೆಯಲ್ಲಿ ತೊಡಗಿದೆ. ದೇಶವನ್ನು ಲೂಟಿ ಮಾಡುವ ಇಂಥ ದರೋಡೆಕೋರ ಕಂಪೆನಿಗಳ ವಿರುದ್ಧ ಹೋರಾಟಕ್ಕೆ ಇಳಿಯಬೇಕಾದ ಯುವಕರು ವಿಭಿನ್ನ ಧರ್ಮಗಳ ಪ್ರೇಮಿಗಳ ವಿರುದ್ಧ ಗೂಂಡಾಗಿರಿಗೆ ಇಳಿದಿದ್ದಾರೆ. ಪಿಸ್ತೂಲು ಹಿಡಿದು ದಾಭೋಲ್ಕರ್, ಪನ್ಸಾರೆ, ಕಲಬುರ್ಗಿ, ಗೌರಿ ಲಂಕೇಶರಂಥವರನ್ನು ಕೊಲ್ಲುತ್ತಿದ್ದಾರೆ. ಹತ್ಯೆಗಳನ್ನು ಸಂಭ್ರಮಿಸಿ ಸಂತಸಪಡುತ್ತಿದ್ದಾರೆ.
ಇವೆಲ್ಲದರೊಂದಿಗೆ ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಮತ್ತೆ ಅಧಿಕಾರಕ್ಕೆ ಬರಲು ಪ್ರತಿಪಕ್ಷಗಳ ನಡತೆ ಹಾಗೂ ದೇಶದ ಎಲ್ಲೆಡೆ ಸ್ಫೋಟಗೊಳ್ಳುತ್ತಿರುವ ದಲಿತರ-ಆದಿವಾಸಿಗಳ ಆಕ್ರೋಶ ಕೇಂದ್ರದ ಬಿಜೆಪಿ ಸರಕಾರಕ್ಕೆ ನುಂಗಲಾರದ ತುತ್ತಾಗಿದೆ. ಈ ಬಿಕ್ಕಟ್ಟಿನಿಂದ ಹೊರಬರಲು ಅದು ಮಾವೋವಾದಿಗಳ, ಜಿಹಾದಿಗಳ ಕಥೆ ಕಟ್ಟುತ್ತಿದೆ. 2014ರಲ್ಲಿ ನರೇಂದ್ರ ಮೋದಿಯವು ಅಧಿಕಾರ ವಹಿಸಿಕೊಂಡಾಗ ಜನತೆಗೆ ನೀಡಿದ ಯಾವ ಭರವಸೆಯನ್ನೂ ಈಡೇರಿಸಿಲ್ಲ. ವಿದೇಶದಿಂದ ಕಪ್ಪುಹಣ ಬರಲಿಲ್ಲ. ಬೆಲೆ ಏರಿಕೆ ನಿಯಂತ್ರಣಕ್ಕೆ ಬರಲಿಲ್ಲ. ಇದಕ್ಕೆ ಬದಲಾಗಿ ನೋಟು ಅಮಾನ್ಯೀಕರಣದಂಥ ಕ್ರಮಗಳಿಂದಲೇ ಜನಸಾಮಾನ್ಯರು ಇನ್ನಷ್ಟು ತೊಂದರೆಗೆ ಒಳಗಾದರು. ಜಿಎಸ್‌ಟಿಯಿಂದ ಸಣ್ಣಪುಟ್ಟ ವ್ಯಾಪಾರಸ್ಥರು ದಿವಾಳಿ ಅಂಚಿಗೆ ಬಂದು ನಿಂತರು.
ಇಷ್ಟೆಲ್ಲ ಪ್ರತಿರೋಧ ವ್ಯಕ್ತವಾಗುತ್ತಿದ್ದರೂ 2019ರ ಚುನಾವಣೆಯನ್ನು ಗೆಲ್ಲಲು ಸಂಘಪರಿವಾರ ಈಗಾಗಲೇ ತಯಾರಿ ನಡೆಸಿದೆ. ಬೂತ್ ಮಟ್ಟದ ಕಾರ್ಯಾ ಚರಣೆಗಾಗಿ ಸುಮಾರು ಎರಡು ಲಕ್ಷ ಯುವಕರಿಗೆ ವಿಶೇಷ ತರಬೇತಿ ನೀಡಲಾಗುತ್ತಿದೆ. ಧಾರ್ಮಿಕ ಗುರುಗಳನ್ನು ಸಂಘ ಪರಿವಾರ ಬಳಸಿಕೊಳ್ಳಲು ಸಿದ್ಧತೆ ನಡೆಸಿದೆ. ದಲಿತರು ತಿರುಗಿ ಬಿದ್ದರೂ ಅದಕ್ಕೆ ಪ್ರತಿಯಾಗಿ ಸೋಶಿಯಲ್ ಇಂಜಿನಿಯರಿಂಗ್ ಅಸ್ತ್ರ ಬಳಸಿ ಇತರ ಹಿಂದುಳಿದ ಸಮುದಾಯಗಳ ಮತಬುಟ್ಟಿಗೆ ಕೈ ಹಾಕಲು ಬಿಜೆಪಿ ತಂತ್ರ ರೂಪಿಸಿದೆ. ಇತರ ರಾಜಕೀಯ ಪಕ್ಷಗಳು ಕಡೆಗಣಿಸಿದ ಸಣ್ಣಪುಟ್ಟ ಜಾತಿ ಗುಂಪುಗಳನ್ನು ಒಲಿಸಿಕೊಳ್ಳಲು ಪಟ್ಟಿಯನ್ನು ಅದು ಸಿದ್ಧ ಮಾಡಿದೆ. ಕರ್ನಾಟಕದಲ್ಲಿ ಎಡಗೈ ದಲಿತರ ಮತ ಪಡೆದಂತೆ ಇತರ ಕಡೆಯೂ ಇದೇ ಅಸ್ತ್ರ ಪ್ರಯೋಗಿಸಲಿದೆ.
 ದಲಿತ ಅಲ್ಪಸಂಖ್ಯಾತ ಸಮುದಾಯಗಳ ಜೊತೆ ಎಡಪಂಥೀಯ ಉದಾರವಾದಿ ಚಿಂತಕರ ವಲಯದ ಬಗ್ಗೆ ಸಂಘಪರಿವಾರಕ್ಕೆ ಹೆದರಿಕೆ ಇದೆ. ಅಂತಲೇ ಇತ್ತೀಚೆಗೆ ಅಮಿತ್ ಶಾ ಅವರು ಸಂಪರ್ಕ ಅಭಿಯಾನದ ಮೂಲಕ ಬುದ್ಧಿಜೀವಿಗಳ ಮನಸ್ಸನ್ನು ಒಲಿಸಿಕೊಳ್ಳಲು ಯತ್ನಿಸಿದ್ದರೂ ಅವರು ಬಂಗಾಳ ಮುಂತಾದ ಕಡೆ ಬರಿ ಕೈಯಲ್ಲಿ ವಾಪಸಾದರು. ಇದು ಇಂದಿನ ದೇಶದ ಪರಿಸ್ಥಿತಿ. ಅಘೋಷಿತ ತುರ್ತುಪರಿಸ್ಥಿತಿಯ ಕರಿನೆರಳಲ್ಲಿ ದೇಶದ ಸಂಸದೀಯ ಜನತಂತ್ರ ಅಪಾಯದಲ್ಲಿದೆ. ಸಂವಿಧಾನವನ್ನು ನಾಶ ಮಾಡುವ ಹುನ್ನಾರ ನಡೆದಿದೆ. ಅದನ್ನು ತಡೆಯುವ ಶಕ್ತಿ ದಲಿತ ದಮನಿತ ಸಮುದಾಯಗಳಿಗೆ ಮಾತ್ರ ಇದೆ.

Writer - ಸನತ್ ಕುಮಾರ್ ಬೆಳಗಲಿ

contributor

Editor - ಸನತ್ ಕುಮಾರ್ ಬೆಳಗಲಿ

contributor

Similar News