ಹೊಟ್ಟೆನೋವು ಉಂಟಾದಾಗ ವೈದ್ಯರನ್ನು ಯಾವಾಗ ಕಾಣಬೇಕು ?

Update: 2018-07-03 10:43 GMT

ಹೊಟ್ಟೆನೋವನ್ನು ಸಾಮಾನ್ಯವಾಗಿ ಹೆಚ್ಚಿನವರು ಅನುಭವಿಸುತ್ತಿರುತ್ತಾರೆ. ಆದರೆ ಆಗಾಗ್ಗೆ ಅದು ಕಾಣಿಸಿಕೊಳ್ಳುತ್ತಿದ್ದರೆ ಅದನ್ನು ಕಡೆಗಣಿಸಬಾರದು. ಹೆಚ್ಚಿನ ಸಲ ಆರಾಮವಾಗುವವರೆಗೆ ಮಲಗುವಂತೆ ಅಥವಾ ಏನಾದರೂ ಲಘು ಆಹಾರವನ್ನು ಸೇವಿಸುವಂತೆ ಸಲಹೆಗಳು ದೊರೆಯುತ್ತವೆ. ಆದರೆ ಹೊಟ್ಟೆನೋವು ಬೇರೆ ಯಾವುದೇ ರೋಗದ ಲಕ್ಷಣವಾಗಿರುವ ಸಾಧ್ಯತೆಯಿರುವುದರಿಂದ ಇಂತಹ ಸಲಹೆಗಳು ಸೂಕ್ತವಲ್ಲ.

ಅತಿಯಾದ ಭೋಜನವನ್ನು ಸೇವಿಸಿದ ಬಳಿಕ ಉಂಟಾಗುವ ಹೊಟ್ಟೆನೋವು ಸಾಮಾನ್ಯವಾಗಿದ್ದು,ಕೆಲವು ಸಮಯದ ಬಳಿಕ ಶಮನಗೊಳ್ಳುತ್ತದೆ. ಆದರೆ ಒಂದು ದಿನವಾದರೂ ಅದು ಕಡಿಮೆಯಾಗದಿದ್ದರೆ ವೈದ್ಯರನ್ನು ಸಂಪರ್ಕಿಸುವುದು ಅಗತ್ಯವಾಗುತ್ತದೆ.

ಹೊಟ್ಟೆನೋವು ವಾಸ್ತವದಲ್ಲಿ ರೋಗವಲ್ಲ,ಅದೊಂದು ಲಕ್ಷಣ ಮಾತ್ರವಾಗಿದೆ. ಆದರೆ ಕೆಲವು ಪ್ರಕರಣಗಳಲ್ಲಿ ಅದರೊಂದಿಗೆ ಗುರುತಿಸಿಕೊಂಡಿರುವ ಇತರ ಲಕ್ಷಣಗಳಾದ ತೇಗು,ಉಬ್ಬರಿಕೆ,ಎದೆಯುರಿ,ಬೇಗನೆ ಹೊಟ್ಟೆ ತುಂಬಿಂದಂತೆನಿಸುವುದು,ವಾಕರಿಕೆ ಮತ್ತು/ಅಥವಾ ವಾಂತಿ,ಅತಿಸಾರ ಕೂಡ ಕಾಣಿಸಿಕೊಳ್ಳುತ್ತವೆ.

ಹೊಟ್ಟೆನೋವು ಮಾತ್ರ ಅಥವಾ ಇತರ ಲಕ್ಷಣಗಳು ಕಾಣಿಸಿಕೊಂಡಿರಲಿ,ನೀವು ಅವನ್ನು ಖಂಡಿತ ಕಡೆಗಣಿಸಬಾರದು.

ಹೊಟ್ಟೆನೋವು ದಿಢೀರ್ ಆಗಿ ಅಥವಾ ಕ್ರಮೇಣವಾಗಿ ಕಾಣಿಸಿಕೊಳ್ಳಬಹುದು. ಕೆಳಹೊಟ್ಟೆಯ ಪ್ರದೇಶದಲ್ಲಿ ನೋವು ಕಾಣಿಸಿಕೊಂಡರೆ ಅದು ಮೂತ್ರಪಿಂಡಗಳ ಕಾಯಿಲೆಯನ್ನು ಸೂಚಿಸಬಹುದು. ಪೆಲ್ವಿಕ್ ಅಥವಾ ಶ್ರೋಣಿಯ ಭಾಗದಲ್ಲಿ ನೋವಾಗುತ್ತಿದ್ದರೆ ಅದು ಮೂತ್ರಕೋಶ ಅಥವಾ ಮೂತ್ರನಾಳದ ಸೋಕಿನ ಲಕ್ಷಣವಾಗಿರಬಹುದು.

ಹಲವಾರು ಆರೋಗ್ಯ ಸಮಸ್ಯೆಗಳಲ್ಲಿ ಹೊಟ್ಟೆನೋವು ಸಾಮಾನ್ಯಲಕ್ಷಣವಾಗಿರಬಹುದು.

ಗ್ಯಾಸ್ಟ್ರೋಎಂಟರಿಟಿಸ್: ಗ್ಯಾಸ್ಟ್ರೋಎಂಟರಿಟಿಸ್ ಅಥವಾ ಜಠರಗರುಳಿನ ಊತವು ಜಠರ ಮತ್ತು ಕರುಳಿನ ಒಳಪದರಗಳ ಉರಿಯೂತವಾಗಿದೆ. ಅದು ಕಲುಷಿತ ಆಹಾರಗಳಿಂದ ಹರಡುತ್ತದೆ ಮತ್ತು ತೀವ್ರ ಹೊಟ್ಟೆನೋವು,ವಾಕರಿಕೆ,ವಾಂತಿ ಮತ್ತು ಬೇಧಿಯನ್ನುಂಟು ಮಾಡುತ್ತದೆ.

ಗ್ಯಾಸ್ಟ್ರಿಟಿಸ್: ಗ್ಯಾಸ್ಟ್ರಿಟಿಸ್ ಅಥವಾ ಜಠರದುರಿತ ಮತ್ತು ಜಠರಗರುಳಿನ ಊತಕ್ಕೆ ಹೆಚ್ಚಿನ ವ್ಯತ್ಯಾಸವಿಲ್ಲ. ಇಲ್ಲಿ ಜಠರದ ಒಳಪದರಗಳು ಮಾತ್ರ ಊರಿಯೂತಕ್ಕೊಳಗಾಗಿರುತ್ತವೆ ಮತ್ತು ಕರುಳಿಗೆ ಯಾವುದೇ ಬಾಧೆಯಿರುವುದಿಲ್ಲ.ಅಲ್ಲದೆ ಹೊಟ್ಟೆನೋವು, ವಾಕರಿಕೆ,ವಾಂತಿಯಂತಹ ಲಕ್ಷಣಗಳು ಹೆಚ್ಚು ಸ್ಪಷ್ಟವಾಗಿರುತ್ತವೆ.

ಅನಿಯಮಿತ ಮಲವಿಸರ್ಜನೆ: ಈ ಸ್ಥಿತಿಯು ಹೊಟ್ಟೆನೋವನ್ನುಂಟು ಮಾಡುತ್ತದೆ ಮತ್ತು ಸಾಮಾನ್ಯವಾಗಿ ಮಲವಿಸರ್ಜನೆಯ ಬಳಿಕ ಮಾಯವಾಗುತ್ತದೆ. ಇದು ಆಗಾಗ್ಗೆ ಮಲಬದ್ಧತೆ ಮತ್ತು ಅತಿಸಾರಕ್ಕೂ ಕಾರಣವಾಗಬಲ್ಲದು.

ಆಮ್ಲೀಯತೆ: ಸಾಮಾನ್ಯವಾಗಿ ಆ್ಯಸಿಡಿಟಿ ಎಂದು ಕರೆಯಲಾಗುವ ಈ ಸ್ಥಿತಿಯಲ್ಲಿ ಜಠರಾಮ್ಲವು ಹಿಮ್ಮುಖವಾಗಿ ಅನ್ನನಾಳದಲ್ಲಿ ಹರಿಯುತ್ತದೆ ಮತ್ತು ಹೊಟ್ಟೆನೋವನ್ನುಂಟು ಮಾಡುತ್ತದೆ. ಎದೆಯುರಿ ಮತ್ತು ಉಬ್ಬರಿಕೆ ಇತರ ಲಕ್ಷಣಗಳಾಗಿವೆ.

ಲ್ಯಾಕ್ಟೋಸ್ ಅಸಹಿಷ್ಣುತೆ: ಇಲ್ಲಿ ವ್ಯಕ್ತಿಗೆ ಹಾಲಿನಲ್ಲಿರುವ ಲ್ಯಾಕ್ಟೋಸ್ ಎಂಬ ಸಂಯುಕ್ತವನ್ನು ಜೀರ್ಣಿಸಿಕೊಳ್ಳಲು ಸಾಧ್ಯವಾಗುವುದಿಲ್ಲ. ಇದು ಅತಿಸಾರ ಮತ್ತು ಹೊಟ್ಟೆನೋವಿಗೆ ಕಾರಣವಾಗುತ್ತದೆ.

ಸಿಲಿಯಾಕ್ ರೋಗ: ಇದು ಗೋದಿ ಮತ್ತು ಗೋದಿ ಉತ್ಪನ್ನಗಳಲ್ಲಿ ಕಂಡುಬರುವ ಗ್ಲುಟೆನ್ ಎಂಬ ಪ್ರೋಟಿನ್ ಅನ್ನು ಒಳಗೊಂಡಿರುವ ಆಹಾರ ಸೇವನೆಯಿಂದ ಕರುಳಿಗೆ ತೀವ್ರ ಹಾನಿಯನ್ನುಂಟು ಮಾಡುವ ರೋಗವಾಗಿದೆ. ನಮ್ಮ ಶರೀರದ ನಿರೋಧಕ ಶಕ್ತಿಯು ಗೊಂದಲಕ್ಕೀಡಾಗಿ ಅಂಗಾಂಶಗಳ ಮೇಲೆ ದಾಳಿ ಮಾಡಿದಾಗ ಈ ರೋಗವು ಕಾಣಿಸಿಕೊಳ್ಳುತ್ತದೆ. ಅತಿಸಾರ,ಹೊಟ್ಟೆನೋವು ಮತ್ತು ಉಬ್ಬರಿಕೆ ಇದರ ಲಕ್ಷಣಗಳಾಗಿವೆ.

ವಿಷಾಹಾರ: ನಾವು ಬ್ಯಾಕ್ಟೀರಿಯಾ,ವೈರಸ್ ಅಥವಾ ಪರಾವಲಂಬಿ ಸೂಕ್ಷ್ಮಜೀವಿಗಳಿಂದ ಕಲುಷಿತ ಆಹಾರವನ್ನು ಸೇವಿಸಿದಾಗ ಅದು ವಿಷಯುಕ್ತಗೊಳ್ಳುತ್ತದೆ. ಹೊಟ್ಟೆನೋವು,ವಾಂತಿ ಮತ್ತು ತೆಳ್ಳಗಿನ ಮಲವಿಸರ್ಜನೆ ಇದರ ಲಕ್ಷಣಗಳಾಗಿವೆ.

ಹೊಟ್ಟೆಯ ಕ್ಯಾನ್ಸರ್: ಗಂಭೀರ ಪ್ರಕರಣಗಳಲ್ಲಿ ತೀವ್ರ ಹೊಟ್ಟೆನೋವಿನೊಂದಿಗೆ ಅನಿಯಮಿತ ಮಲವಿಸರ್ಜನೆ ಮತ್ತು ಮಲದಲ್ಲಿ ರಕ್ತ ಹೋಗುತ್ತಿದ್ದರೆ ಅದು ಹೊಟ್ಟೆ ಕ್ಯಾನ್ಸರ್‌ನ್ನು ಸೂಚಿಸಬಹುದು.

ಹೀಗಾಗಿ ಹೊಟ್ಟೆನೋವಿಗೆ ನಿಖರ ಕಾರಣವನ್ನು ತಿಳಿದುಕೊಳ್ಳಲು ಮತ್ತು ಸೂಕ್ತ ಚಿಕಿತ್ಸೆ ಪಡೆದುಕೊಳ್ಳಲು ವೈದ್ಯರನ್ನು ಸಂಪರ್ಕಿಸುವುದು ಯಾವಾಗಲೂ ಒಳ್ಳೆಯದು.

ಹೊಟ್ಟೆನೋವಿನೊಂದಿಗೆ ಅತಿಸಾರ ಮತ್ತು/ಅಥವಾ ವಾಂತಿ, ಮಲದಲ್ಲಿ ರಕ್ತ, ಒಂದು ಗಂಟೆಗೂ ಹೆಚ್ಚು ಕಾಲ ನಿರಂತರವಾಗಿ ತೀವ್ರ ಹೊಟ್ಟೆನೋವು, 24 ಗಂಟೆಗಳ ಕಾಲ ನಿರಂತರ ಹೊಟ್ಟೆನೋವು, ಗಂಟೆಗಟ್ಟಲೆ ಕಾಲ ಆಹಾರ ಅಥವಾ ಪಾನೀಯವನ್ನು ಸೇವಿಸಲು ಸಾಧ್ಯವಾಗದಿರುವುದು, ತೀವ್ರ ಜ್ವರ ಮತ್ತು ಕಾರಣವಿಲ್ಲದೆ ದೇಹತೂಕ ಇಳಿಕೆಯಂತಹ ತೊಂದರೆಗಳಿದ್ದರೆ ವೈದ್ಯರನ್ನು ಸಂಪರ್ಕಿಸುವುದು ಅಗತ್ಯವಾಗಿದೆ.

ನಾವು ಸೇವಿಸುವ ಆಹಾರವು ಕೂಡ ಹೊಟ್ಟೆನೋವಿಗೆ ಕಾರಣವಾಗಬಹುದು. ಹೀಗಾಗಿ ನಮ್ಮ ಆಹಾರದ ಬಗ್ಗೆಯೂ ಗಮನವಿರಬೇಕು. ಬೆಣ್ಣೆ,ಚೀಸ್ ಮತ್ತು ಕರಿದ ವಸ್ತುಗಳಂತಹ ಅತಿಯಾದ ಕೊಬ್ಬಿನಿಂದ ಕೂಡಿದ ಆಹಾರಗಳಿಂದ ದೂರವಿದ್ದಷ್ಟೂ ಒಳ್ಳೆಯದು. ನಿಮ್ಮಲ್ಲಿ ಕಾಣಿಸಿಕೊಂಡಿರುವ ಲಕ್ಷಣಗಳನ್ನು ಇನ್ನಷ್ಟು ಹದಗೆಡಿಸುವ ಆಹಾರ ಬೇಡವೇ ಬೇಡ. ಹೊಟ್ಟೆನೋವು ಕಾಣಿಸಿಕೊಂಡಾಗ ವೈದ್ಯರ ಸಲಹೆ ಪಡೆಯದೇ ನೀವಾಗಿಯೇ ಔಷಧಿ ಅಂಗಡಿಗಳಿಂದ ನೋವು ನಿವಾರಕಗಳನ್ನು ಖರೀದಿಸಿ ಸೇವಿಸಬೇಡಿ. ನಾರು ಮಲಬದ್ಧತೆಯಂತಹ ಹೊಟ್ಟೆನೋವಿಗೆ ಸಂಬಂಧಿಸಿದ ಸಮಸ್ಯೆಗಳಿಂದ ಪರಿಹಾರ ನೀಡುವುದರಿಂದ ನಾರಿನಂಶ ಸಮೃದ್ಧವಾಗಿರುವ ಆಹಾರಗಳನ್ನೇ ಸೇವಿಸಿ. ಇದರ ಜೊತೆಗೆ ದೈನಂದಿನ ವ್ಯಾಯಾಮವೂ ಇರಲಿ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News