ನೀವು ಮಧುಮೇಹಿಯೇ? ಹಾಗಿದ್ದರೆ ಸುರಕ್ಷಿತರಾಗಿರಲು ಈ ಹೃದಯ ಪರೀಕ್ಷೆಗಳು ಮುಖ್ಯ

Update: 2018-07-11 10:51 GMT

ಮಧುಮೇಹ ಒಮ್ಮೆ ಅಂಟಿಕೊಂಡರೆ ಜೀವನ ಪರ್ಯಂತ ಅದು ನಮ್ಮ ಸಂಗಾತಿಯಾಗುತ್ತದೆ. ಅದನ್ನು ಶಾಶ್ವತವಾಗಿ ಗುಣಪಡಿಸಲು ಸಾಧ್ಯವಿಲ್ಲ. ಆದರೆ ಸೂಕ್ತ ಔಷಧಿಗಳ ಸೇವನೆಯಿಂದ ಅದನ್ನು ನಿಯಂತ್ರಣದಲ್ಲಿರಿಸಬಹುದು ಮತ್ತು ಇತರರಂತೆ ಸಾಮಾನ್ಯ ಜೀವನವನ್ನು ನಡೆಸಬಹುದು.

ಮಧುಮೇಹವು ರಕ್ತದೊತ್ತಡದ ಮೇಲೂ ಪರಿಣಾಮವನ್ನುಂಟು ಮಾಡುವುದರಿಂದ ಹೃದ್ರೋಗಗಳಂತಹ ಇತರ ಗಂಭೀರ ಕಾಯಿಲೆಗಳಿಗೆ ಮೂಲಕಾರಣವಾಗುತ್ತದೆ. ಹೀಗಾಗಿ ಮಧುಮೇಹಿಗಳು ತಮ್ಮ ಹೃದಯದ ಆರೋಗ್ಯವನ್ನು ಕಾಪಾಡಿಕೊಳ್ಳಲು ಕೆಲವು ಮಹತ್ವದ ಹೃದಯ ಪರೀಕ್ಷೆಗಳನ್ನು ಮಾಡಿಸಿಕೊಳ್ಳುವುದು ಅತ್ಯಗತ್ಯವಾಗಿದೆ. ಅಂತಹ ಕೆಲವು ಪರೀಕ್ಷೆಗಳ ಕುರಿತು ಮಾಹಿತಿಗಳಿಲ್ಲಿವೆ.....

►ರಕ್ತದೊತ್ತಡ ಪರೀಕ್ಷೆ

ಇದು ರಕ್ತದೊತ್ತಡವನ್ನು ತಿಳಿದುಕೊಳ್ಳಲು ನಡೆಸುವ ಸರಳ,ಸಾಮಾನ್ಯ ಪರೀಕ್ಷೆಯಾಗಿದೆ. ಮಧುಮೇಹದಿಂದ ಬಳಲುತ್ತಿರುವವರು ಅಧಿಕ ರಕ್ತದೊತ್ತಡಕ್ಕೆ ಗುರಿಯಾಗುವ ಅಪಾಯವು ಹೆಚ್ಚಾಗಿದೆ. ಅಧಿಕ ರಕ್ತದೊತ್ತಡವು ಹೃದಯಾಘಾತ, ಪಾರ್ಶ್ವವಾಯು,ಮೂತ್ರಪಿಂಡ ವೈಫಲ್ಯ ಇತ್ಯಾದಿಗಳಿಗೆ ಕಾರಣವಾಗುತ್ತದೆ. ಹೀಗಾಗಿ ಮಧುಮೇಹಿಗಳು ತಮ್ಮ ರಕ್ತದೊತ್ತಡ ನಿಯಂತ್ರಣದಲ್ಲಿದೆ ಎನ್ನುವುದನ್ನು ಖಚಿತ ಪಡಿಸಿಕೊಳ್ಳಲು ನಿಯಮಿತವಾಗಿ ರಕ್ತದೊತ್ತಡ ಪರೀಕ್ಷೆಯನ್ನು ಮಾಡಿಸಿಕೊಳ್ಳುವುದು ಮುಖ್ಯವಾಗಿದೆ.

►ಕ್ಯಾರೊಟಿಡ್ ಅಲ್ಟ್ರಾಸೌಂಡ್

ನಮ್ಮ ಶರೀರದಲ್ಲಿನ ಅಂಗಾಂಗಗಳ ಆರೋಗ್ಯ ಸ್ಥಿತಿಯನ್ನು ಅರಿತುಕೊಳ್ಳಲು ಹೆಚ್ಚಿನ ಫ್ರೀಕ್ವೆನ್ಸಿಯ ತರಂಗಗಳನ್ನು ಬಳಸಿ ಅಲ್ಟ್ರಾಸೌಂಡ್ ಪರೀಕ್ಷೆಗಳನ್ನು ನಡೆಸಲಾಗುತ್ತದೆ. ವ್ಯಕ್ತಿಯು ಹೃದ್ರೋಗಗಳಿಗೆ ಗುರಿಯಾಗುವ ಅಪಾಯವನ್ನು ಎದುರಿಸುತ್ತಿದ್ದರೆ ಕ್ಯಾರೊಟಿಡ್ ಅಲ್ಟ್ರಾಸೌಂಡ್ ಪರೀಕ್ಷೆಯನ್ನು ನಡೆಸಲಾಗುತ್ತದೆ. ಇದರಲ್ಲಿ ಹೆಚ್ಚಿನ ಫ್ರೀಕ್ವೆನ್ಸಿಯ ರೇಡಿಯೊ ತರಂಗಗಳನ್ನು ಬಳಸಿ ಕ್ಯಾರೊಟಿಡ್ ಎಂದು ಕರೆಯಲಾಗುವ ಕುತ್ತಿಗೆಯಲ್ಲಿನ ಅಪಧಮನಿಗಳ ತಪಾಸಣೆಯನ್ನು ಮಾಡಲಾಗುತ್ತದೆ. ಹೃದಯಕ್ಕೆ ಹಾನಿಯನ್ನುಂಟು ಮಾಡುವ ಫ್ಯಾಟಿ ಆ್ಯಸಿಡ್‌ಗಳು ಈ ಅಪಧಮನಿಗಳಲ್ಲಿ ಸಂಗ್ರಹಗೊಂಡಿವೆಯೇ ಎನ್ನುವುದನ್ನು ವೈದ್ಯರು ಪರೀಕ್ಷಿಸುತ್ತಾರೆ. ಹೀಗಾಗಿ ಮಧುಮೇಹ ರೋಗಿಗಳು ಕೂಡ ಈ ಪರೀಕ್ಷೆಯನ್ನು ಮಾಡಿಸಿಕೊಳ್ಳುವುದು ಅನಿವಾರ್ಯವಾಗಿದೆ.

►ಸಿಟಿ ಸ್ಕಾನ್

ಕಂಪ್ಯೂಟರೈಸ್ಡ್ ಟೋಮೊಗ್ರಫಿ ಅಥವಾ ಸಿಟಿ ಸ್ಕಾನ್ ತಮ್ಮ ಹೃದಯವು ಸುಸ್ಥಿತಿಯಲ್ಲಿದೆಯೇ ಎನ್ನುವುದನ್ನು ತಿಳಿದುಕೊಳ್ಳಲು ಮಧುಮೇಹಿಗಳು ಅಗತ್ಯವಾಗಿ ಮಾಡಿಸಿಕೊಳ್ಳಲೇಬೇಕಾದ ಇನ್ನೊಂದು ಪರೀಕ್ಷೆಯಾಗಿದೆ. ಹೃದಯದ ರಕ್ತನಾಳಗಳಲ್ಲಿ ಕ್ಯಾಲ್ಸಿಯಂ ಸಂಗ್ರಹಗೊಂಡಿದೆಯೇ ಎನ್ನುವುದನ್ನು ಪರೀಕ್ಷಿಸಲು ಸಿಟಿ ಸ್ಕಾನ್ ನಡೆಸಲಾಗುತ್ತದೆ. ರಕ್ತನಾಳಗಳಲ್ಲಿ ಕ್ಯಾಲ್ಸಿಯಂ ಸಂಗ್ರಹಗೊಂಡಿದ್ದರೆ ಅದು ರಕ್ತದ ಸುಗಮ ಹರಿವಿಗೆ ಅಡ್ಡಿಯನ್ನುಂಟು ಮಾಡುತ್ತದೆ ಮತ್ತು ಹೃದಯಕ್ಕೆ ಹಾನಿಯುಂಟಾಗಲು ಕಾರಣವಾಗುತ್ತದೆ. ಮಧುಮೇಹಿಗಳಲ್ಲಿ ಅಪಧಮನಿಗಳಲ್ಲಿ ಕ್ಯಾಲ್ಸಿಯಂ ಸಂಗ್ರಹಗೊಂಡು ಅವು ಪೆಡಸಾಗುವುದು ಸಾಮಾನ್ಯವಾಗಿದ್ದು,ಇದು ಬಳಿಕ ಹ್ರದ್ರೋಗಗಳಿಗೆ ನಾಂದಿ ಹಾಡುತ್ತದೆ. ಹೀಗಾಗಿ ಈ ಪರೀಕ್ಷೆಯು ಮಧುಮೇಹಿಗಳಿಗೆ ಮುಖ್ಯವಾಗಿದೆ.

►ಎಲೆಕ್ಟ್ರೋಕಾರ್ಡಿಯಾಗ್ರಾಮ್(ಇಸಿಜಿ)

ಹೃದಯದಲ್ಲಿನ ಯಾವುದೇ ಏರುಪೇರುಗಳನ್ನು ತಿಳಿದುಕೊಳ್ಳಲು ಮಧುಮೇಹಿಗಳು ಮತ್ತು ಹೃದ್ರೋಗಿಗಳಿಗೆ ಈ ಪರೀಕ್ಷೆಯನ್ನು ಮಾಡಿಸಿಕೊಳ್ಳುವಂತೆ ಹೆಚ್ಚಿನ ವೈದ್ಯರು ಶಿಫಾರಸು ಮಾಡುತ್ತಾರೆ. ಹೃದಯ ಬಡಿತದಲ್ಲಿ ಏರುಪೇರುಗಳು,ಹೃದಯದ ಕವಾಟಗಳು ಹಿಗ್ಗಿವೆಯೇ,ಹೃದಯಕ್ಕೆ ಮಾಮೂಲಿಗಿಂತ ಭಿನ್ನವಾಗಿ ರಕ್ತ ಹರಿಯುತ್ತಿದೆಯೇ ಇತ್ಯಾದಿಗಳನ್ನು ತಿಳಿದುಕೊಳ್ಳಲು ವೈದ್ಯರಿಗೆ ಈ ಪರೀಕ್ಷೆಯು ನೆರವಾಗುತ್ತದೆ. ಭವಿಷ್ಯದಲ್ಲಿ ಹೃದಯಾಘಾತದ ಅಪಾಯದ ಬಗ್ಗೆಯೂ ಈ ಪರೀಕ್ಷೆಯು ಮುನ್ಸೂಚನೆ ನೀಡುತ್ತದೆ.

►ಆ್ಯಂಬುಲೇಟರಿ ಇಸಿಜಿ

‘ಹೋಲ್ಟರ್ ಮಾನಿಟರ್’ಎಂದೂ ಕರೆಯಲಾಗುವ ಈ ಪರೀಕ್ಷೆಯಲ್ಲಿ ಹೃದಯದಲ್ಲಿನ ಅಸಹಜತೆಗಳನ್ನು ತಿಳಿದುಕೊಳ್ಳಲು ವಿದ್ಯುತ್‌ಕಾಂತೀಯ ತರಂಗಗಳನ್ನು ಬಳಸಲಾಗುತ್ತದೆ. ಈ ಸಾಧನವನ್ನು ಹೊರಗಿನಿಂದ ಎದೆಗೆ ಅಳವಡಿಸಿದಾಗ ಅದು ನಿರಂತರ 48 ಗಂಟೆಗಳ ಕಾಲ ಹೃದಯದ ಚಟುವಟಿಕೆಗಳನ್ನು ದಾಖಲಿಸುತ್ತದೆ. ಇದರಿಂದಾಗಿ 48 ಗಂಟೆಗಳಲ್ಲಿ ಹೃದಯದಲ್ಲಿ ಉಂಟಾಗುವ ಯಾವುದೇ ಅಸಹಜತೆಯನ್ನು ಪತ್ತೆ ಹಚ್ಚಲು ನೆರವಾಗುತ್ತದೆ.

►ಎಕೊಕಾರ್ಡಿಯೊಗ್ರಾಫ್(ಇಸಿಎಚ್‌ಒ ಪರೀಕ್ಷೆ)

ಇದು ಮಧೆಮೇಹಿಗಳು ಮತ್ತು ಹ್ರದ್ರೋಗಿಗಳು ಅಗತ್ಯವಾಗಿ ಮಾಡಿಸಿಕೊಳ್ಳಲೇಬೇಕಾದ ಇನ್ನೊಂದು ಮಹತ್ವದ ಪರೀಕ್ಷೆಯಾಗಿದೆ. ಯಾವುದೇ ಅಸಹಜತೆಗಾಗಿ ಹೃದಯದ ಕವಾಟಗಳು ಮತ್ತು ಸ್ವರೂಪವನ್ನು ಪರಿಶೀಲಿಸಲು ವೈದ್ಯರಿಗೆ ಈ ಪರೀಕ್ಷೆಯು ನೆರವಾಗುತ್ತದೆ. ಜೊತೆಗೆ ಹೃದಯದ ಸ್ನಾಯುಗಳು ರಕ್ತವನ್ನು ಸರಿಯಾಗಿ ಪಂಪ್ ಮಾಡುತ್ತಿವೆಯೇ ಎನ್ನುವುದನ್ನೂ ತಿಳಿದುಕೊಳ್ಳಲು ಈ ಪರೀಕ್ಷೆಯಿಂದ ಸಾಧ್ಯವಾಗುತ್ತದೆ.

►ವ್ಯಾಯಾಮ ಒತ್ತಡ ಪರೀಕ್ಷೆ

ವೈದ್ಯರು ಮಧುಮೇಹಿಗಳು ಮತ್ತು ಹೃದ್ರೋಗಿಗಳಿಗೆ ‘ಟ್ರೆಡ್‌ಮಿಲ್ ಟೆಸ್ಟ್’ ಹೆಸರಿನಿಂದ ಜನಪ್ರಿಯವಾಗಿರುವ ಈ ಪರೀಕ್ಷೆಯನ್ನು ಶಿಫಾರಸು ಮಾಡುತ್ತಾರೆ. ರೋಗಿಯು ವ್ಯಾಯಾಮದಲ್ಲಿ ತೊಡಗಿದ್ದಾಗ ಅಥವಾ ಕಠಿಣ ಶ್ರಮದ ಕೆಲಸದಲ್ಲಿ ನಿರತನಾಗಿದ್ದಾಗ ಹೃದಯ ಎಷ್ಟು ಸರಿಯಾಗಿ ಕಾರ್ಯ ನಿರ್ವಹಿಸುತ್ತಿದೆ ಎನ್ನುವುದನ್ನು ತಿಳಿದುಕೊಳ್ಳಲು ಈ ಪರೀಕ್ಷೆಯು ನೆರವಾಗುತ್ತದೆ. ಯಾವ ಮಟ್ಟದ ಶ್ರಮ ರೋಗಿಗೆ ಸುರಕ್ಷಿತ ಎನ್ನುವುದು ಇದರಿಂದ ಗೊತ್ತಾಗುತ್ತದೆ.

►ಕೊರೊನರಿ ಆ್ಯಂಜಿಯೊಗ್ರಫಿ

 ಕಾರ್ಡಿಯಾಕ್ ಕ್ಯಾಥೆರೈಜೇಷನ್ ಎಂದೂ ಕರೆಯಲಾಗುವ ಈ ಪರೀಕ್ಷೆಯಿಂದ ವ್ಯಕ್ಯಿಯ ಅಪಧಮನಿಗಳಲ್ಲಿ ಎಷ್ಟು ತಡೆಗಳುಂಟಾಗಿವೆ ಎನ್ನುವುದನ್ನು ಮತ್ತು ಅವುಗಳ ತೀವ್ರತೆಯ ಮಟ್ಟಗಳನ್ನು ತಿಳಿದುಕೊಳ್ಳಲು ಸಾಧ್ಯವಾಗುತ್ತದೆ. ತಕ್ಷಣವೇ ಅಗತ್ಯ ಚಿಕಿತ್ಸೆಯನ್ನು ನೀಡಿ ಹೃದಯಾಘಾತಗಳನ್ನು ತಡೆಯಲು ಇದು ನೆರವಾಗುತ್ತದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News